Nithyanand Hegde Muroor Column: ಹಿಂದಿ ಭಾಷೆಯ ಅವಜ್ಞೆ ಸರಿಯೇ?
ನಮ್ಮ ಕನ್ನಡ ಭಾಷೆ ಜತೆ, ಹಿಂದಿ ಭಾಷೆ ತಕರಾರಿಲ್ಲದೆ ಬಾಳ್ವೆ ಮಾಡುತ್ತಾ ಶತಮಾನಗಳೇ ಕಳೆದಿವೆ. ಇಷ್ಟೆ ಇರುವಾಗ ನಮ್ಮ ಕರ್ನಾಟಕದ ಇಂದಿನ ಸರಕಾರಿ ಧೋರಣೆಯಲ್ಲಿ ಹಿಂದಿಯನ್ನು ದೂರೀಕರಿ ಸುವ ಹುನ್ನಾರ ನಡೆಯುತ್ತಿರುವಂತಿದೆ. ಏಕೆಂದರೆ ಒಂದು ಭಾಷೆ ಅದು ಪಠ್ಯವಾದಾಗ ಬೇಕೋ ಬೇಡವೋ ಸ್ವಲ್ಪವಾದರೂ ಪರಿಚಯ ಆಗಿಯೇ ಆಗುತ್ತದೆ.
-
ಅಭಿಮತ
ನಿತ್ಯಾನಂದ ಹೆಗಡೆ, ಮುರೂರು
ನಮ್ಮ ಇಡೀ ಭಾರತವನ್ನು ದೃಷ್ಟಿಯಲ್ಲಿಟ್ಟು ಗಮನಿಸಬೇಕು. ದಕ್ಷಿಣದಲ್ಲಿ ತಮಿಳು, ತೆಲಗು, ಮಲೆಯಾಳಂ, ತುಳು ಹೀಗೆ ಅರ್ಧ ಭಾರತವನ್ನು ಹಲವು ಭಾಷೆಗಳು ಆಕ್ರಮಿಸಿವೆ. ಅದೇ ಉತ್ತರ ಭಾರತದ ಅರ್ಧದಷ್ಟು ದೇಶವನ್ನು ಗುಜರಾತಿ, ಮರಾಠಿಯನ್ನು ಕಿರುಭಾಗದಲ್ಲಿ ಬಿಟ್ಟರೆ ವಿಸ್ತಾರ ವಾದ ಆಡುಭಾಷೆ ಹಿಂದಿ.
ನಮ್ಮ ಕೇಂದ್ರ ಸರಕಾರದ ಆಡಳಿತ ಭಾಷೆ ಹಿಂದಿ. ನಮ್ಮ ದೇಶದ ರಾಜಧಾನಿ ದೆಹಲಿ ಹಿಂದಿ ಭಾಷೆಯನ್ನು ಆಡುಭಾಷೆಯಾಗಿ ಬಳಸುತ್ತಿದೆ. ಹಿಂದೆ ಗಾಂಧೀಜಿಯವರು ಹಿಂದಿ ರಾಷ್ಟ್ರ ಭಾಷೆ ಯಾಗಿ ಮಾಡಬೇಕೆಂದು ಹೇಳಿದ್ದು ಅದು ಹಾಗೆಯೇ ನಡೆದುಬಂದಿತ್ತು. ಇಂದಿರಾ ಗಾಂಧಿಯವರು ಇದನ್ನು ಜಾರಿಯಲ್ಲಿಟ್ಟಿದ್ದರು.
ನಮ್ಮ ದೇಶಾದ್ಯಂತ ರಾಷ್ಟ್ರಭಾಷಾ ಅಂತ ಹಿಂದಿ ಪರೀಕ್ಷೆ ನಡೆಸಲ್ಪಡುತ್ತಿದ್ದು, ನಮ್ಮ ಕರ್ನಾಟಕದ ಅದನ್ನು ಹಲವರು ಪರೀಕ್ಷೆ ಪಾಸು ಮಾಡಿದ ಪ್ರಮಾಣ ಪತ್ರಗಳಿವೆ. ಇಂತಿಪ್ಪ ಹಿಂದಿಯಲ್ಲಿ ಮಹಾ ದೇವಿ ವರ್ಮಾ, ಸುಮಿತ್ರಾ ನಂದನ್ ಪಂತ್‌ರಂತಹ ಮಹಾ ಸಾಹಿತಿಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: Hindi Imposition: ಕೇಂದ್ರ ವರ್ಸಸ್ ತಮಿಳುನಾಡು ಸರ್ಕಾರ- ಹಿಂದಿ ಹೇರಿಕೆ ಎಂದ ಸ್ಟ್ಯಾಲಿನ್‌ಗೆ ಪ್ರಧಾನ್ ಟಾಂಗ್
ಹಿಂದಿ ಭಾಷೆ 12 ಸಲ ಜ್ಞಾನಪೀಠ ಪ್ರಶಸ್ತಿ ಗಳಿಸಿದ ಬೃಹತ್ ಹಾಗೂ ಸಂಪನ್ನ ಭಾಷೆ. ಆಮೇಲೆ ಹಿಂದಿ ಭಾಷೆಯ ಅಸ್ಮಿತೆ ಏನೆಂದರೆ ಹಿಂದಿ ಭಾಷೆಯ ಗಾಂಭೀರ್ಯದ ಉಚ್ಚಾರಣೆ. ಮಹಾಭಾರತ, ರಾಮಾಯಣಗಳನ್ನು 80ರ ದಶಕದಲ್ಲಿ ದೂರದರ್ಶನಗಳ ಮೂಲಕ ಮನೆ ಮನೆಗೆ ತಲುಪಿಸಿದ ಭಾಷೆ. ಮೊಹಮ್ಮದ್ ರಫಿ, ಮನ್ನಾಡೆ, ಕಿಶೋರ್ ಕುಮಾರ್, ಲತಾ ಮಂಗೇಶ್ಕರ್, ಆಶಾ ಬೋಸ್ಲೆ ಇವರೆಲ್ಲರ ರಿಧಮಿಕ್ ಹಾಡುಗಳು ಎಂದೆಂದೂ ಮರೆಯಲಾರದ ಗುಂಗುಗಳು.
ನಮ್ಮ ಕನ್ನಡ ಭಾಷೆ ಜತೆ, ಹಿಂದಿ ಭಾಷೆ ತಕರಾರಿಲ್ಲದೆ ಬಾಳ್ವೆ ಮಾಡುತ್ತಾ ಶತಮಾನಗಳೇ ಕಳೆದಿವೆ. ಇಷ್ಟೆ ಇರುವಾಗ ನಮ್ಮ ಕರ್ನಾಟಕದ ಇಂದಿನ ಸರಕಾರಿ ಧೋರಣೆಯಲ್ಲಿ ಹಿಂದಿಯನ್ನು ದೂರೀಕರಿಸುವ ಹುನ್ನಾರ ನಡೆಯುತ್ತಿರುವಂತಿದೆ. ಏಕೆಂದರೆ ಒಂದು ಭಾಷೆ ಅದು ಪಠ್ಯವಾದಾಗ ಬೇಕೋ ಬೇಡವೋ ಸ್ವಲ್ಪವಾದರೂ ಪರಿಚಯ ಆಗಿಯೇ ಆಗುತ್ತದೆ.
ಪಠ್ಯದಲ್ಲಿ ಅದು ಪರೀಕ್ಷೆಗೇ ಗಮನಿಸದಂತಿರುವುದಾದರೆ ಯಾವನು ಓದುತ್ತಾನೆ, ಕಲಿಯುತ್ತಾನೆ. ನಮಗೆ ಹತ್ತನೆಯ ತರಗತಿಗೆ ಬರುವಾಗ ಇಂಗ್ಲೀಷ್‌ಗಿಂತಾ ಹೆಚ್ಚು ಚೆನ್ನಾಗಿ ಅರ್ಥವಾಗುತ್ತಾ ವಾಕ್ಯರಚನೆ ಕೂಡ ಸಾಧ್ಯವಾಗುತ್ತಿತ್ತು.
ಯಾಕೋ ರಾಜ್ಯದ ಶಿಕ್ಷಣದ ಮಟ್ಟ ಕುಸಿಯುತ್ತಿರುವಂತೆ ಕಾಣಿಸುತ್ತದೆ. ಹೆಚ್ಚು ಫಲಿತಾಂಶ ತರಿಸಲು ಹೆಚ್ಚು ಗುಣಾತ್ಮಕ ಪಾಠ ಮಾಡಿಸುವುದು ಬಿಟ್ಟು ಉತ್ತೀರ್ಣ ಆಗಲು 35ಅಂಕದ ಬದಲಿಗೆ 33 ಅಂಕಕ್ಕೆ ಇಳಿಸಿದ್ದು, ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯನ್ನು ನಾಮ್‌ಕೇವಾಸ್ತೆ ಮಾಡಿದ್ದೂ ಹಿಂದಿ ವಿಷಯಕ್ಕೆ ಉತ್ತೀರ್ಣ ಆಗಲು ಶೂನ್ಯ ಅಂಕ ಸಾಕೆನ್ನುವುದು ಎಸ್‌ಎಸ್‌ಎಲ್‌ಸಿ ಪರೀಕ್ಷೆ 625ರ ಬದಲು 525 ಅಂಕಕ್ಕೆ ಇಳಿಸಲ್ಪಡುವುದು ಇವೆ ಗುಣಮಟ್ಟದ ಇಳಿಕೆಯೆಂದೇ ಅನ್ನಿಸುವುದು.
ಒಮ್ಮೆ ಆಮೂಲಾಗ್ರ ಚಿಂತನೆ ನಡೆಯಬೇಕು. ಯಾವ ಸೂಚನೆ ಯಾವುದೊಂದು ವೈಜ್ಞಾನಿಕ ಚಿಂತನೆ, ಕಮೀಟಿ ತಜ್ಞರ ಸಲಹೆ ಏನೂ ಇಲ್ಲದೆ ಮನಬಂದಂತೆ ಮಾಡಿದ್ದಾರೆ. ಒಂದು ಕಾಲಕ್ಕೆ ಕರ್ನಾಟಕದ ಶಿಕ್ಷಣ ದೇಶಕ್ಕೇ ಮಾದರಿಯಾದದ್ದು, ಹೇಳ ಹೆಸರಿಲ್ಲದಂತಾಗದೇ. ಒಂದು ಆರೋಗ್ಯ ಪೂರ್ಣ ಚರ್ಚೆ ಅಗತ್ಯವೆನಿಸುತ್ತದೆ.