ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಸುಮಸುಮ್ಮನೇ ಗರ್ಭಾಶಯವನ್ನು ಛೇದಿಸುತ್ತಾರಂತೆ !...ಹೌದಾ ?

ಗರ್ಭಾಶಯದಲ್ಲಿ ಭ್ರೂಣವು ನಾಟಿ, ಪರಿಪೂರ್ಣ ಬೆಳೆದು, ಸುರಕ್ಷಿತವಾಗಿ ಹೊರಬರುವವರೆಗೂ ಗರ್ಭವೇ ಮಗುವಿನ ಮನೆ. ಈ ಜೀವಜಗತ್ತಿನಲ್ಲಿ ಸಂತಾನವರ್ಧನೆಗೆ ಗರ್ಭಾಶಯ ಅತ್ಯಗತ್ಯವಾದ ಅಂಗ. ಇಂಥ ಅಂಗವನ್ನು ಕೆಲವು ಸಂದರ್ಭಗಳಲ್ಲಿ ಛೇದಿಸಬೇಕಾಗುತ್ತದೆ. ಗರ್ಭಾಶಯದಲ್ಲಿ ಗಡ್ಡೆಗಳು ಬೆಳೆದಾಗ, ಅನಿಯಂತ್ರಿತ ಹಾಗೂ ಅಸಹಜ ರಕ್ತಸ್ರಾವವಾದಾಗ, ಕಿಬ್ಬೊಟ್ಟೆಯಲ್ಲಿ ಸಹಿಸಲಸಾಧ್ಯವಾದ ಸೋಂಕು-ನೋವು ಉಂಟಾದಾಗ, ಗರ್ಭಕೋಶವು ಜಾರಿದಾಗ ಹಾಗೂ ಗರ್ಭಾಶಯದ ಒಳಪೊರೆಯು ಎಡೆತಪ್ಪಿ ಬೆಳೆದಾಗ (ಎಂಡೋಮೆಟ್ರಿಯೋಸಿಸ್) ಗರ್ಭಾಶಯ ಛೇದನವನ್ನು ಮಾಡಬೇಕಾಗಿ ಬರಬಹುದು.

ಸುಮಸುಮ್ಮನೇ ಗರ್ಭಾಶಯವನ್ನು ಛೇದಿಸುತ್ತಾರಂತೆ !...ಹೌದಾ ?

ಹಿಂದಿರುಗಿ ನೋಡಿದಾಗ

naasomeswara@gmail.com

ಋತುಸ್ರಾವ ಎಂಬುದು ಓರ್ವ ಹೆಣ್ಣನ್ನು ‘ನೀನು ಹೆಣ್ಣು’ ಎಂದು ಪ್ರತಿ ತಿಂಗಳೂ ನೆನಪಿಸುವ ಘಟನೆ. ಆ ಋತುಸ್ರಾವವು ಗರ್ಭಾಶಯದಲ್ಲಿ ರೂಪುಗೊಂಡು ಯೋನಿ ದ್ವಾರದ ಮೂಲಕ ಹೊರ ಹರಿಯುತ್ತದೆ. ಯಾರೋ ಕವಿಹೃದಯದ ವೈದ್ಯ ‘ಇದನ್ನು ಗರ್ಭಾಶಯದ ಕಣ್ಣೀರು’ ಎಂದು ವರ್ಣಿಸಿದ್ದುಂಟು. ‘ಮಗುವನ್ನು ಹೊರುವ ಭಾಗ್ಯದಿಂದ ನಾನು ವಂಚಿತನಾದೆನಲ್ಲ’ ಎಂದು ಗರ್ಭಾಶಯವು ದುಃಖಿಸುವುದಂತೆ!

ಗರ್ಭಾಶಯದಲ್ಲಿ ಭ್ರೂಣವು ನಾಟಿ, ಪರಿಪೂರ್ಣ ಬೆಳೆದು, ಸುರಕ್ಷಿತವಾಗಿ ಹೊರಬರುವವರೆಗೂ ಗರ್ಭವೇ ಮಗುವಿನ ಮನೆ. ಈ ಜೀವಜಗತ್ತಿನಲ್ಲಿ ಸಂತಾನವರ್ಧನೆಗೆ ಗರ್ಭಾಶಯ ಅತ್ಯಗತ್ಯವಾದ ಅಂಗ. ಇಂಥ ಅಂಗವನ್ನು ಕೆಲವು ಸಂದರ್ಭಗಳಲ್ಲಿ ಛೇದಿಸಬೇಕಾಗುತ್ತದೆ. ಗರ್ಭಾಶಯದಲ್ಲಿ ಗಡ್ಡೆಗಳು ಬೆಳೆದಾಗ, ಅನಿಯಂತ್ರಿತ ಹಾಗೂ ಅಸಹಜ ರಕ್ತಸ್ರಾವವಾದಾಗ, ಕಿಬ್ಬೊಟ್ಟೆಯಲ್ಲಿ ಸಹಿಸಲಸಾಧ್ಯವಾದ ಸೋಂಕು-ನೋವು ಉಂಟಾದಾಗ, ಗರ್ಭಕೋಶವು ಜಾರಿದಾಗ ಹಾಗೂ ಗರ್ಭಾಶಯದ ಒಳಪೊರೆಯು ಎಡೆ ತಪ್ಪಿ ಬೆಳೆದಾಗ (ಎಂಡೋಮೆಟ್ರಿಯೋಸಿಸ್) ಗರ್ಭಾಶಯ ಛೇದನವನ್ನು ಮಾಡಬೇಕಾಗಿ ಬರಬಹುದು.

ಹಾಗೆಯೇ ಗರ್ಭಾಶಯ ಅರ್ಬುದ, ಗರ್ಭಕೊರಳ ಅರ್ಬುದ, ಅಂಡಾಶಯ ಅರ್ಬುದ ಹಾಗೂ ಕೋರಿಯೋಕಾರ್ಸಿನೋಮ ಆದಾಗ ಗರ್ಭಾಶಯ ಛೇದನವು ಅನಿವಾರ್ಯವಾಗಬಹುದು. ಇಂದಿನ ದಿನಗಳಲ್ಲಿ ಗರ್ಭಾಶಯ ಛೇದನವು ಒಂದು ಸುರಕ್ಷಿತ ಶಸ್ತ್ರಚಿಕಿತ್ಸೆಯಾಗಿದೆ. ಸಾಮಾನ್ಯವಾಗಿ ಯೋಜಿತ ಗರ್ಭಾಶಯ ಛೇದನವನ್ನು (ಪ್ಲಾನ್ಡ್ ಹಿಸ್ಟೆರೆಕ್ಟಮಿ) ಮಾಡುವುದುಂಟು.

ಇದನ್ನೂ ಓದಿ:Dr N Someshwara Column: ಮಮ್ಮಿಗಳಿಂದ ಅಸ್ಥಿಭಂಗವನ್ನು ಗುಣಪಡಿಸುವವರೆಗೆ...

ಕೆಲವು ಸಂದರ್ಭಗಳಲ್ಲಿ ತುರ್ತು ಗರ್ಭಾಶಯ ಛೇದನವನ್ನೂ ಸುರಕ್ಷಿತವಾಗಿ ಮಾಡಬಹುದು, ಜೀವವನ್ನು ಉಳಿಸಬಹುದು. ಆದರೆ ಈ ಹಿಂದೆ ಗರ್ಭಾಶಯ ಛೇದನವೆಂದರೆ ಸಾವಿಗೆ ಆಹ್ವಾನ ವಿತ್ತಂತೆ ಎನ್ನುವ ದಿನಗಳೂ ಇದ್ದವು. ಗರ್ಭಾಶಯ ಛೇದನವು ಬೆಳೆದು ಬಂದ ಹಾದಿಯು ರೋಚಕವಾಗಿರುವಂತೆ ಭೀಕರವೂ ಆಗಿದೆ.

ಈಜಿಪ್ಷಿಯನ್ ಮತ್ತು ಮೆಸೊಪೊಟೋಮಿಯನ್ ಸಂಸ್ಕೃತಿಗೆ ಸಂಬಂಧಿಸಿದ ಹಾಗೆ ಗರ್ಭಾಶಯ ಛೇದನದ ಬಗ್ಗೆ ಯಾವುದೇ ಮಾಹಿತಿಯು ತಿಳಿದುಬಂದಿಲ್ಲ. ಆದರೆ ಗ್ರೀಕೋ-ರೋಮನ್ ವೈದ್ಯರು ಗರ್ಭಾಶಯ ಛೇದನವೆನ್ನುವ ಸಾಹಸಕ್ಕೆ ಪ್ರಯತ್ನಿಸಿದ್ದರು ಎನ್ನುವುದಕ್ಕೆ ದಾಖಲೆಯು ದೊರೆತಿದೆ. ಈಫಿಸಸ್ ಎಂಬಲ್ಲಿ ವಾಸವಾಗಿದ್ದ ಸೋರನಸ್ (ಕ್ರಿ.ಶ. ೨ನೆಯ ಶತಮಾನ) ಸ್ತ್ರೀರೋಗದ ಬಗ್ಗೆ ನಾಲ್ಕು ಸಂಪುಟಗಳನ್ನು (ಆನ್ ಅಕ್ಯೂಟ್ ಅಂಡ್ ಕ್ರಾನಿಕ್ ಡಿಸೀಸಸ್) ಬರೆದಿದ್ದಾನೆ.

ಅದರಲ್ಲಿ ಆತ ವಿವರಿಸುವ ಪ್ರಕರಣವೊಂದು ಹೀಗಿದೆ. ಓರ್ವ ಮಹಿಳೆಗೆ ಪ್ರಸವವು ಆಗಿದೆ. ಮಗುವಿನ ಜತೆಯಲ್ಲಿಯೇ ಗರ್ಭಕೋಶವೂ ಮಗುಚಿಕೊಂಡು ಹೊರಬಂದುಬಿಟ್ಟಿದೆ. ಅದನ್ನು ಸ್ವಸ್ಥಾನಕ್ಕೆ ಸೇರಿಸಲಿಲ್ಲ. ಹಾಗಾಗಿ ಅದು ಕೊಳೆತು ಗ್ಯಾಂಗ್ರೀನ್ ಆಗಿದೆ. ಆಕೆ ಈ ಸ್ಥಿತಿಯಲ್ಲಿ ಬಂದಾಗ, ಆಕೆಯ ಜೀವವನ್ನು ಉಳಿಸಲು ಗರ್ಭಾಶಯ ಛೇದನವನ್ನು ಮಾಡಲೇಬೇಕಾದ ಅನಿವಾರ್ಯತೆಯು ತಲೆದೋರಿತು. ಹಾಗಾಗಿ ಸೋರನಸ್ ಗರ್ಭಾಶಯ ಛೇದನವನ್ನು ಮಾಡಿದ.

kid ok

ಆದರೆ ಆಕೆ ಆ ಶಸ್ತ್ರಚಿಕಿತ್ಸೆಯನ್ನು ತಡೆದುಕೊಂಡುಕೊಂಡು ಬದುಕಿದಳೇ ಎನ್ನುವ ಬಗ್ಗೆ ಆತ ಏನನ್ನೂ ಬರೆದಿಲ್ಲ. ಆದರೆ ಗರ್ಭಾಶಯ ಎನ್ನುವ ಅಂಗವನ್ನು ‘ಛೇದಿಸಲು ಸಾಧ್ಯ’ ಎನ್ನುವ ತಿಳಿವಳಿಕೆ ಯಂತೂ ದೊರೆಯಿತು. ರೋಮನ್ ವಿಶ್ವಕೋಶವನ್ನು ಬರೆದ ಔಲಸ್ ಕಾರ್ನೀಲಿಯಸ್ ಸೆಲ್ಸಸ್ (ಕ್ರಿ.ಪೂ.25ಕ್ರಿ.ಶ.50) ‘ಗರ್ಭಾಶಯದಲ್ಲಿ ಬೆಳೆಯುತ್ತಿರುವ ಗಡ್ಡೆಗಳನ್ನು ಇರುವಂತೆಯೇ ಬಿಟ್ಟುಬಿಡಿ’ ಎಂದು ಎಚ್ಚರಿಸಿದ. ಅಂದರೆ ‘ಗರ್ಭಾಶಯ ಗಡ್ಡೆಗಳನ್ನು ಛೇದಿಸುವ ಪ್ರಯತ್ನವನ್ನು ನಡೆಸಿದರೆ, ತಾಯಿಯನ್ನು ಉಳಿಸುವ ಸಾಧ್ಯತೆ ಇಲ್ಲ; ಹಾಗಾಗಿ ಗರ್ಭಾಶಯ ಛೇದನ ಪ್ರಯತ್ನವನ್ನು ನಡೆಸಬೇಡಿ’ ಎಂಬ ಧ್ವನಿಯನ್ನು ಆತ ವ್ಯಕ್ತಪಡಿಸಿದ್ದಾನೆ.

ಅಂದಿನ ದಿನಗಳಲ್ಲಿ ಒಂದು ದಂತಕಥೆಯು ಪ್ರಚಲಿತದಲ್ಲಿತ್ತು. ಥ್ರಾಸಿಯ ದೇಶದ ರಾಣಿ. ಒಂದು ಅಪಘಾತದಲ್ಲಿ ಆಕೆಯ ಗರ್ಭಾಶಯವು ಜಾರಿ ಹೊರಬಂತು. ಆಗ ಆಕೆಯ ದಾದಿ ರೇಷ್ಮೆ ನೂಲನ್ನು ತೆಗೆದುಕೊಂಡು, ಕೊಳೆಯುತ್ತಿದ್ದ ಗರ್ಭಾಶಯದ ಸುತ್ತಲೂ ಬಿಗಿಯಾಗಿ ಕಟ್ಟಿದಳಂತೆ. ನಂತರ ಅದನ್ನು ಛೇದಿಸಿದಳಂತೆ. ಲಿನನ್ ಬಟ್ಟೆಯನ್ನು ದ್ರಾಕ್ಷಾರಸದಲ್ಲಿ ಮುಳುಗಿಸಿ, ಅದನ್ನು ಯೋನಿಯ ಒಳತೂರಿಸಿ ರಕ್ತಸ್ರಾವವನ್ನು ನಿಲ್ಲಿಸಿದಳಂತೆ. ಆದರೆ ಆ ರಾಣಿ ಬದುಕಲಿಲ್ಲ. ಶಿಕ್ಷೆಗೆ ಹೆದರಿ ಆಕೆ ಪಲಾಯನ ಮಾಡಿದಳಂತೆ. ಇಂಥ ಕಥೆಗಳೆಲ್ಲ ‘ಗರ್ಭಾಶಯ ಛೇದನವು ಅಪಾಯಕಾರಿ; ಯಾರೂ ಮಾಡಲು ಹೋಗಬೇಡಿ’ ಎನ್ನುವ ಎಚ್ಚರಿಕೆಯನ್ನು ನೀಡಲು ಹುಟ್ಟಿಕೊಂಡಿದ್ದವು ಎಂದು ಕಾಣುತ್ತದೆ.

ಎಜೀನ ದೇಶದ ಪಾಲ್ ಅಥವಾ ಪೌಲಸ್ ಎಜಿನೇಟ (ಕ್ರಿ. ಶ.೬೨೫-೬೯೦) ಸುಮಾರು ೭ನೆಯ ಶತಮಾನದಲ್ಲಿ ವಾಸವಾಗಿದ್ದ ಬೈಜಂಟೈನ್ ಗ್ರೀಕ್ ವೈದ್ಯ. ಅಲ್-ಜ಼ಹ್ರಾವಿ (ಕ್ರಿ.ಶ.೯೩೬-೧೦೧೩) ಅರಬ್ ದೇಶದ ಶಸ್ತ್ರವೈದ್ಯ. ಇವರಿಬ್ಬರೂ, ಅಪರೂಪದ ಸಂದರ್ಭದಲ್ಲಿ ಗರ್ಭಾಶಯ ಛೇದನ ವನ್ನು ಮಾಡಿದರೆ, ತಾಯಂದಿರ ಜೀವವನ್ನು ಉಳಿಸಬಹುದು ಎನ್ನುವುದನ್ನು ಮನಗಂಡಿದ್ದರು.

ಆದರೆ ಗರ್ಭಾಶಯ ಛೇದನವನ್ನು ಸುರಕ್ಷಿತವಾಗಿ ಮಾಡುವುದು ಹೇಗೆ ಎನ್ನುವುದು ತಿಳಿದಿರಲಿಲ್ಲ. ಹಾಗಾಗಿ ಮಹಿಳೆಯ ಶವಗಳ ಉದರದ ಮೇಲೆ ಶಸ್ತ್ರಚಿಕಿತ್ಸೆಯನ್ನು ನಡೆಸಿ, ಗರ್ಭಾಶಯವನ್ನು ಸುರಕ್ಷಿತವಾಗಿ ಹೊರತೆಗೆಯುವ ವಿಧಾನವನ್ನು ಕರಗತಗೊಳಿಸಿಕೊಂಡರಂತೆ. ಆದರೆ ಯಾವೊಬ್ಬ ಜೀವಂತ ಮಹಿಳೆಯ ಉದರನ್ನು ಸೀಳಿ, ಗರ್ಭಾಶಯವನ್ನು ಛೇದಿಸುವ ಅವಕಾಶವು ಅವರಿಗೆ ದೊರೆಯಲಿಲ್ಲ.

ಮಧ್ಯಯುಗದ ಯುರೋಪ್ ಹಾಗೂ ಅರಬ್ ದೇಶಗಳಲ್ಲಿ ಗರ್ಭಾಶಯದ ಬಗ್ಗೆ ಪವಿತ್ರ ಭಾವನೆ ಗಳಿದ್ದವು. ಗರ್ಭಾಶಯವನ್ನು ‘ತಲೆಮಾರುಗಳ ಮಹಾದ್ವಾರ’ ಎಂದು ಭಾವಿಸಿದ್ದರು. ಒಂದು ಗರ್ಭಾಶಯವನ್ನು ಛೇದಿಸುವುದು ಎಂದರೆ, ಒಂದು ಮಗುವನ್ನು ಕೊಂದಂತೆ ಎಂದು ಭಾವಿಸಿ ದ್ದರು. ಆದರೆ ಅಂದಿನ ದಿನಗಳಲ್ಲಿಯೂ ಪ್ರಸವದ ವೇಳೆ ಗರ್ಭಾಶಯವು ಮಗುಚಿ ಹೊರಬೀಳು ತ್ತಿತ್ತು.

ಗರ್ಭಾಶಯ ಕ್ಯಾನ್ಸರ್ ಬೆಳೆಯುತ್ತಿತ್ತು. ಅಂಥ ಸಂದರ್ಭಗಳಲ್ಲಿ ಮಿರ್ರ ಪೌಲ್ಟೀಸ್, ವಿನಿಗರ್, ಮರಕತವನ್ನು ಪುಡಿಮಾಡಿ ಲೇಪಿಸುತ್ತಿದ್ದರು. ಚರ್ಚುಗಳಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು. ಈ ನಡುವೆ ರೋಗಿಯು ಸದ್ದಿಲ್ಲದೆ ಇಹವನ್ನು ತ್ಯಜಿಸುತ್ತಿದ್ದಳು. ೯-೧೩ನೆಯ ಶತಮಾನಗಳ ನಡುವೆ ಇಟಲಿಯಲ್ಲಿ ‘ಸ್ಕೂಲ್ ಮೆಡಿಕಲ್ ಸಲೇರ್ನಿಟಾನ’ ಎನ್ನುವ ವೈದ್ಯಕೀಯ ವಿದ್ಯಾಲಯವು ‘ಸಲೇರ್ನೊ’ ಎಂಬಲ್ಲಿ ಇತ್ತು. ಇಲ್ಲಿ ಮಹಿಳೆಯರೇ‌ ವೈದ್ಯರಾಗಿದ್ದರು.

ಇವರಿಗೆ ಅಂದಿನ ಗ್ರೀಕೋ-ರೋಮನ್, ಬೈಜಂಟೈನ್, ಅರಬ್-ಇಸ್ಲಾಮಿಕ್ ಹಾಗೂ ಸ್ಥಳೀಯ ನಾಟಿ ವೈದ್ಯಕೀಯದ ಬಗ್ಗೆ ಅರಿವಿತ್ತು. ಇವರು ಯೋನಿದ್ವಾರದ ಮೂಲಕ ಹೊರಜಾರಿದ್ದ ಹಾಗೂ ಗ್ಯಾಂಗ್ರೀನ್ ಆಗಿದ್ದ ಗರ್ಭಾಶಯವನ್ನು ಸುರಕ್ಷಿತವಾಗಿ ಛೇದಿಸಬಲ್ಲವರಾಗಿದ್ದರಂತೆ. ‘ಬೆಲ್ಲ ಜುಡಿತ್’ ಎಂಬ ಓರ್ವ ವ್ಯಾಪಾರಿಯೊಬ್ಬನ ಮಡದಿಯ ಗರ್ಭಾಶಯವು ಜಾರಿ ಹೊರಬಂದು ಗ್ಯಾಂಗ್ರಿನ್ ಆಗಿ ಪರಿವರ್ತಿತವಾಗಿತ್ತಂತೆ. ಅದನ್ನು ಸನ್ಯಾಸಿನಿ-ಶಸ್ತ್ರವೈದ್ಯೆ (ಸರ್ಜನ್-ನನ್) ಯಶಸ್ವಿಯಾಗಿ ಛೇದಿಸಿದಳಂತೆ.

ಹಲವು ವರ್ಷಗಳ ಕಾಲ ಬದುಕಿದ ಬೆಲ್ಲ ಜುಡಿತ್, ಒಂದು ಬೆಳ್ಳಿ ಪಾನಪಾತ್ರೆಯನ್ನು ಉಡುಗೊರೆ ಯಾಗಿ ನೀಡಿದಳಂತೆ. ಅದು ಇಂದಿಗೂ ಅಲ್ಲಿನ ವಸ್ತು ಸಂಗ್ರಹಾಲಯದಲ್ಲಿ ಇದೆಯಂತೆ. ನವೋದಯ ಕಾಲದಲ್ಲಿ ಅಂಗರಚನಾ ವಿಜ್ಞಾನವು ಶರವೇ ಗದಲ್ಲಿ ಬೆಳೆದರೂ ಗರ್ಭಾಶಯ ಛೇದನಕ್ಕೆ ಶಸ್ತ್ರವೈದ್ಯರು ಮುಂದಾಗಲಿಲ್ಲ. ಜಿಯೋವನ್ನಿ ಬ್ಯಾಟಿಸ್ಟ ಕಾರ್ಟೆಸಿ (೧೫೫೦) ಹಾಗೂ ಮಾರ್ಕೊ ಅರಿಲಿಯೋ ಸೆವೆರಿನೊ (೧೬೪೦) ಶವಗಳ ಮೇಲೆ ಗರ್ಭಾಶಯ ಛೇದನವನ್ನು ನಡೆಸಿ ಯಶಸ್ವಿಯಾದರೂ, ಜೀವಂತ ಮಹಿಳೆಯರ ಮೇಲೆ ಶಸ್ತ್ರಚಿಕಿತ್ಸೆಯನ್ನು ನಡೆಸಲು ಧೈರ್ಯ ಮಾಡಲಿಲ್ಲ.

೧೬೭೫ರಲ್ಲಿ ‘ಮಾರ್ಗರೀಟ ಲ ಪಿವಟ್’ ಎಂಬ ಹಳ್ಳಿ ಹೆಂಗಸನ್ನು ದನವು ತನ್ನ ಕೊಂಬಿನಿಂದ ತಿವಿಯಿತು. ಉದರಕ್ಕೆ ದೊಡ್ಡ ಗಾಯವಾಗಿ ಕರುಳೆಲ್ಲ ಹೊರಬಂದಿತು. ಆ ಊರಿನ ಕ್ಷೌರಿಕ-ಶಸ್ತ್ರ ವೈದ್ಯನು ಆಕೆಯ ಗರ್ಭಾಶಯವನ್ನೂ ಒಳಗೊಂಡಂತೆ ಒಂದಷ್ಟು ಭಾಗಗಳನ್ನು ಛೇದಿಸಿ ತೆಗೆದು, ಗಾಯಕ್ಕೆ ಮಂಡರಗಪ್ಪೆಯ ಒಣಪುಡಿಯನ್ನು ಮೆತ್ತಿ, ಲಿನನ್ ದಾರದಿಂದ ಉದರವನ್ನು ಹೊಲಿದ. ಆಕೆಯು ಹತ್ತು ವರ್ಷಗಳ ಕಾಲ ಬದುಕಿದ್ದಳು.

ಕಾನ್ರಾಡ್ ಜೊಹಾನ್ ಮಾರ್ಟಿನ್ ಲಾಂಗೆನ್ಬೆಕ್ (೧೭೭೬-೧೮೫೧) ಜರ್ಮನಿಯ ಅಂಗರಚನಾ ವಿಜ್ಞಾನಿ ಹಾಗೂ ಶಸ್ತ್ರವೈದ್ಯನಾಗಿದ್ದ. ಓರ್ವ ಮಹಿಳೆಗೆ ಗರ್ಭಕೊರಳ ಕ್ಯಾನ್ಸರ್ ಆಗಿತ್ತು. ಲಾಂಗೆನ್ಬೆಕ್ ಆಕೆಯ ಯೋನಿದ್ವಾರದ ಮೂಲಕ ಇಡೀ ಗರ್ಭಾಶಯವನ್ನು ಹೊರತೆಗೆದ. ಶಸ್ತ್ರಚಿಕಿತ್ಸೆಯನ್ನು ತಡೆದುಕೊಂಡು ಆಕೆ ಕೆಲವು ದಿನಗಳ ಕಾಲ ಮಾತ್ರ ಬದುಕಿದ್ದಳು. ನಂತರ, ಬಹುಶಃ ವಿಪರೀತ ರಕ್ತಸ್ರಾವ ಅಥವಾ ಸೋಂಕಿನಿಂದ ಆಕೆ ಮರಣಿಸಿದಳು.

ಅಮೆರಿಕದ ಕೆಂಟುಕಿಯಲ್ಲಿದ್ದ ವಾಲ್ಟರ್ ಬರ್ನ್‌ಹ್ಯಾಮ್ (೧೮೦೮-೧೮೮೩) ಎಂಬ ಶಸ್ತ್ರವೈದ್ಯನು, ಬಹುಶಃ ಜಗತ್ತಿನ ಮೊದಲ ‘ಉದರ ದ್ವಾರ ಗರ್ಭಾಶಯ ಛೇದನ’ವನ್ನು ೧೮೫೩ ರಲ್ಲಿ ಯಶಸ್ವಿಯಾಗಿ ಮಾಡಿದ. ಈತ ಮಸಾಚುಸೆಟ್ಸ್ ಪ್ರಾಂತದ ಲೋವೆಲ್‌ನಲ್ಲಿ ಶಸವೈದ್ಯನಾಗಿದ್ದ. ಓರ್ವ ಮಹಿಳೆ ಬಂದಳು. ಆಕೆಗೆ ಗರ್ಭಾಶಯ ಕ್ಯಾನ್ಸರ್ ಅಥವಾ ಗರ್ಭಾಶಯ ಗಡ್ಡೆಗಳು ಇರಬೇಕೆಂದು ಬರ್ನ್‌ಹ್ಯಾಮ್‌ನ ತರ್ಕ.

ಆಕೆಯ ಉದರವನ್ನು ಛೇದಿಸಿ, ಗರ್ಭಾಶಯವನ್ನು ಹೊರ ತೆಗೆಯಲು ನಿರ್ಧರಿಸಿದ. ಅಂದಿನ ದಿನಗಳಲ್ಲಿ ಅರಿವಳಿಕೆ ಇರಲಿಲ್ಲ. ಆದರೆ ಅಫೀಮು ಔಷಧಿಗಳಿದ್ದವು. ಅವನ್ನೇ ನೀಡಿದ. ಉದರದ ಮೂಲಕ ಇಡೀ ಗರ್ಭಾಶಯವನ್ನು ಹೊರತೆಗೆದ. ಶಸ್ತ್ರಚಿಕಿತ್ಸೆಯ ನಂತರ ಆಕೆಯು ಬದುಕುಳಿದಳು. ಇದು ‘ಜಗತ್ತಿನ ಮೊತ್ತ ಮೊದಲ ಉದರದ್ವಾರ ಗರ್ಭಾಶಯ ಛೇದನ’ ಎಂದು ದಾಖಲಾಗಿದೆ.

ಡಾ.ವಿಲ್ಹೆಲ್ಮ್ ಅಲೆಕ್ಸಾಂಡರ್ ಫ್ರೆಂಡ್ (೧೮೩೩-೧೯೧೭) ಜರ್ಮನ್ ದೇಶದ ಸ್ತ್ರೀರೋಗ ಹಾಗೂ ಪ್ರಸೂತಿತಂತ್ರ ನಿಪುಣನಾಗಿದ್ದ. ಇವನು ೧೮೭೮ರಲ್ಲಿ ಒಂದು ದಿಟ್ಟ ಶಸ್ತ್ರಪ್ರಯೋಗವನ್ನು ಮಾಡಿದ. ಓರ್ವ ಮಹಿಳೆಗೆ ಗರ್ಭಾಶಯ ಕ್ಯಾನ್ಸರ್ ಆಗಿತ್ತು. ಆಕೆಯ ಜೀವವನ್ನು ಉಳಿಸಲು ಉದರವನ್ನು ಸೀಳಿ, ಇಡೀ ಗರ್ಭಾಶಯವನ್ನು ಛೇದಿಸಿ ಹೊರತೆಗೆಯಬೇಕಾಗಿತ್ತು.

ಪುಣ್ಯವಶಾತ್, ಆ ವೇಳೆಗೆ ಕ್ಲೋರೋಫಾರಂ ಅರಿವಳಿಕೆಯು ಯುರೋಪಿನಲ್ಲಿ ದೊರೆಯುತ್ತಿತ್ತು. ಜೋಸೆಫ್ ಲಿಸ್ಟರ್ ಪೂತಿನಾಶಕ (ಆಂಟಿ-ಸೆಪ್ಟಿಕ್) ದ್ರಾವಣಗಳ ಬಗ್ಗೆ ಹಾಗೂ‌ ಶಸ್ತ್ರಚಿಕಿತ್ಸಾ ವೇಳೆಯಲ್ಲಿ ಕ್ರಿಮಿರಾಹಿತ್ಯ ಪರಿಸರವನ್ನು ಕಾದಿಟ್ಟುಕೊಳ್ಳಬೇಕಾದ ಮಹತ್ವವನ್ನು ಸಾರಿದ್ದ. ಹಾಗಾಗಿ ಫ್ರೆಂಡ್ ಈ ದಿಟ್ಟ ಶಸ್ತ್ರಚಿಕಿತ್ಸೆಯನ್ನು ಮಾಡಲು ನಿರ್ಧಾರವನ್ನು ಕೈಗೊಂಡಿದ್ದ. ಯಶಸ್ವಿಯಾಗಿ ಮಾಡಿ ಮುಗಿಸಿದ.

‘ಇದು ಉದರದ್ವಾರ ಕ್ಯಾನ್ಸರ್ ಗರ್ಭಾಶಯ ಛೇದನದ ಮೊದಲ ಪ್ರಕರಣ’ ಎಂದು ವೈದ್ಯಕೀಯ ಇತಿಹಾಸದಲ್ಲಿ ದಾಖಲಾಯಿತು. ಅರ್ನ್ಸ್ಟ್ ವರ್ದೀಮ್ (೧೮೬೪-೧೯೨೦) ಎಂಬ ವಿಯನ್ನಾ ಸ್ತ್ರೀರೋಗತಜ್ಞನಿಗೆ, ಫ್ರೆಂಡ್ ಹೇಗೆ ಉದರದ್ವಾರ ಗರ್ಭಾಶಯ ಛೇದನವನ್ನು ಮಾಡುತ್ತಾನೆ ಎಂಬ ಕುತೂಹಲವಿತ್ತು. ಹಾಗಾಗಿ ಅದನ್ನು ನೋಡಲೆಂದು ಬಂದವನು, ಗರ್ಭಾಶಯ ಛೇದನವನ್ನು ನೋಡುತ್ತಿರುವಂತೆಯೇ ಬವಳಿ ಬಂದು ಬಿದ್ದುಬಿಟ್ಟನು.

ಇದೇ ವರ್ದೀಮ್, ೨೦ ವರ್ಷಗಳ ನಂತರ ‘ವರ್ದೀಮ್ ರ‍್ಯಾಡಿಕಲ್ ಹಿಸ್ಟೆರೆಕ್ಟಮಿ’ ಎಂಬ ಪ್ರಮಾಣ ಬದ್ಧ ಪೂರ್ಣ ಗರ್ಭಾಶಯ ಛೇದನದ ತಂತ್ರವನ್ನು ರೂಪಿಸಿದ. ೧೮೨೦-೧೯೨೦ರ ನಡುವೆ ಶಸ್ತ್ರ ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಬಹು ದೊಡ್ಡ ಸಂಶೋಧನೆಗಳಾದವು. ಜೋಸೆಫ್‌ ಲಿಸ್ಟರ್ ಪೂತಿನಾಶಕ ದ್ರಾವಣಗಳನ್ನು ರೂಪಿಸಿದ್ದ. ಡಾ.ವಿಲಿಯಂ ಸ್ಟೀವರ್ಟ್ ಹಾಲ್‌ಸ್ಟೆಡ್ (೧೮೫೨-೧೯೨೨) ತನ್ನ ಪ್ರೇಯಸಿಗಾಗಿ ರೂಪಿಸಿದ್ದ ರಬ್ಬರ್ ಗವಸುಗಳು ಸೋಂಕನ್ನು ತಡೆಗಟ್ಟಿದವು.

ಹೀನಿ ಕ್ಲಾಂಪ್, ಜಾರ್ಕೊ ಕೆಥೀಟರ್, ಬಾಬ್ ಕಾಕ್ ಫಾರ್ಸೆಪ್ಸ್ ಮುಂತಾದ ಉಪಕರಣಗಳು ದೊರೆಯುತ್ತಿದ್ದವು. ಹಾಗಾಗಿ ಗರ್ಭಾಶಯ ಛೇದನವು ದೈನಂದಿನ ಸರ್ವೇಸಾಮಾನ್ಯ ಶಸ್ತ್ರ ಚಿಕಿತ್ಸೆ ಯಾಯಿತು. ಬ್ರೂಕ್ಲಿನ್ ಸರ್ಜನ್ ಮೇರಿ ಅಮಂಡ ಡಿಕ್ಸನ್ ಜೋನ್ಸ್ (೧೮೨೮-೧೯೦೮) ಅಮೆರಿಕ ದೇಶದಲ್ಲಿ ಉದರದ್ವಾರ ಗರ್ಭಾಶಯ ಛೇದನವನ್ನು ಯಶಸ್ವಿಯಾಗಿ ನಡೆಸಿದ ಮೊದಲ ಶಸ್ತ್ರವೈದ್ಯೆ ಯಾಗಿ ಪ್ರಸಿದ್ಧಳಾದಳು. ಪತ್ರಿಕೆಗಳು ಈಕೆಗೆ ‘ಮೇಡಮ್ ಓವರಿ’ ಎಂದು ಅಡ್ಡ ಹೆಸರನ್ನೇ ಇಟ್ಟವು.

ಅಮಂಡಳ ಯಶಸ್ಸಿನ ಜತೆಯಲ್ಲಿ ‘ಗರ್ಭಾಶಯ ಛೇದನ ಮಹಾ ಆರೋಪ’ವು ಆರಂಭವಾಯಿತು. ‘ಮಹಿಳೆಯರು ಹೊಟ್ಟೆನೋವು ಅಂತ ವೈದ್ಯರ ಬಳಿ ಹೋದರೂ ಸಾಕು, ಅವರು ಗರ್ಭಾಶಯವನ್ನು ಛೇದಿಸಿ ಎಸೆಯುತ್ತಾರಪ್ಪ’ ಎಂದು ಪತ್ರಿಕೆಗಳು ಕುಹುಕದ ಲೇಖನಗಳನ್ನು ಬರೆದವು.

ಪತ್ರಿಕೆಗಳ ಆರೋಪವು ನೂರಕ್ಕೆ ನೂರರಷ್ಟು ಸುಳ್ಳಾಗಿರಲಿಲ್ಲ ಎನ್ನುವುದು ಸತ್ಯದ ಮಾತಾಗಿತ್ತು. ಆನಂತರವೇ ಗರ್ಭಾಶಯ ಛೇದನಕ್ಕೆ ಕಟ್ಟುನಿಟ್ಟಿನ ವಿಧಿ-ವಿಧಾನಗಳು ಜಾರಿಗೆ ಬಂದವು. ಆದರೂ ಇಂದಿಗೂ ‘ಆರೋಪ ಜೀವಂತವಾಗಿದೆ’ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ೧೯೩೦-೧೯೬೦ರ ನಡುವೆ ಹಲವು ವೈದ್ಯಕೀಯ ಆವಿಷ್ಕಾರಗಳಾದವು.

ಪೆನಿಸಿಲಿನ್ ಮತ್ತು ಸಲೋನಮೈಡ್ ಪ್ರತಿ ಜೈವಿಕ ಔಷಧಿಗಳು ದೊರೆಯುತ್ತಿದ್ದವು. ರಕ್ತಪೂರಣವು (ಬ್ಲಡ್ ಟ್ರಾನ್ಸ್ ಫ್ಯಾಶನ್) ತಂತ್ರಜ್ಞಾನವು ತಾಯಂದಿರ ಮರಣವನ್ನು ಶೇ.೯೦ರಷ್ಟು ತಪ್ಪಿಸಿತು. ವಿಕ್ಟರ್ ಬಾನಿ (೧೮೭೨-೧೯೫೩) ಎಂಬ ಲಂಡನ್ ವೈದ್ಯನು ರೂಪಿಸಿದ್ದ, ದಾರವನ್ನು ಬಿಗಿ ಯುವ ನವೀನ ತಂತ್ರವು ಗರ್ಭಾಶಯ ಛೇದನವನ್ನು ಮಾಡುವಾಗ, ಮೂತ್ರವಾಹಕನಾಳಗಳಿಗೆ, ಮೂತ್ರಾಶಯಕ್ಕೆ ಹಾಗೂ ನೆಟ್ಟಗರುಳಿಗೆ ಆಗುತ್ತಿದ್ದ ಆಘಾತಗಳನ್ನು ತಡೆಗಟ್ಟಿದವು.

೧೯೮೯ರಲ್ಲಿ ಉದರದರ್ಶಕ ಶಸಚಿಕಿತ್ಸೆಯು ಅಭಿವೃದ್ಧಿಗೊಂಡಿತು. ಹ್ಯಾರಿ ರೀಚ್ ಎಂಬಾತ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಿದ. ೨೦೧೦ರ ವೇಳೆಗೆ ಅಮೆರಿಕದಲ್ಲಿ ಡಾ ವಿಂಚಿ ಸರ್ಜಿಕಲ್ ರೋಬೋಟ್ ಅಭಿವೃದ್ಧಿಗೊಂಡಿತು. ಹಾಗಾಗಿ ಅಮೆರಿಕದಲ್ಲಿ ರೋಬೋಟಿಕ್ ತಂತ್ರಜ್ಞಾನದಿಂದ ಗರ್ಭಾಶಯ ಛೇದನವು ನಡೆಯುತ್ತಿದೆ. ಭಾರತದಂಥ ದೇಶದಲ್ಲಿ ಇಂಥ ಶಸ್ತ್ರಚಿಕಿತ್ಸೆಗಳು ಜನಪ್ರಿಯ ವಾಗುತ್ತಿವೆ. ಆರೋಗ್ಯ ವಿಮಾ ಸೌಲಭ್ಯ ಇರುವವರು ರೋಬೋಟಿಕ್ ಸರ್ಜರಿಯನ್ನು ಮಾಡಿಸಿಕೊಳ್ಳಬಹುದು.