Kiran Upadhyay Column: ಬಹರೇನ್ ದೇಶದಲ್ಲಿ ಬೀದಿ ನಾಟಕ
ಬಸವ ತತ್ತ್ವದ ಪ್ರಮುಖ ಕಂಬಗಳಲ್ಲಿ ಒಂದಾದ ದಾಸೋಹವೂ ನಡೆಯುತ್ತದೆ. ಸಮಿತಿಯ ಮಹಿಳೆ ಯರು ತಮ್ಮ ಮನೆಯಲ್ಲಿಯೇ ಒಂದೊಂದು ಅಡುಗೆಯನ್ನು ಮಾಡಿಕೊಂಡು ಮಹಾಮನೆಗೆ ತರುತ್ತಾರೆ
Source : Vishwavani Daily News Paper
ಭಾರತದ ಬೀದಿ ನಾಟಕಗಳು ಎಂದಾಗ ಸಫ್ದರ್ ಹಶ್ಮಿಯವರು ನೆನಪಾಗುತ್ತಾರೆ. 1954ರಲ್ಲಿ ಜನಿಸಿದ ಸಫ್ದರ್, ಕಮ್ಯುನಿ ವಿಚಾರಧಾರೆಯನ್ನು ಹೊಂದಿದ್ದರ ಜತೆಗೆ ಬರಹಗಾರ, ಗೀತ ರಚನೆಕಾರರೂ ಆಗಿದ್ದರು. ಭಾರತದ ರಂಗಭೂಮಿಯ ಇತಿಹಾಸದಲ್ಲಿ ಇಂದಿಗೂ ಪ್ರಮುಖ ಧ್ವನಿಗಳಲ್ಲಿ ಒಂದಾ ಗಿರುವ ಹೆಸರು ಅವರದ್ದು.
ಬಹರೇನ್‌ನಂಥ ಪುಟ್ಟ ದೇಶದಲ್ಲಿ ಬಸವ ತತ್ತ್ವವನ್ನು ಪಾಲಿಸುವ, ಬೋಧಿಸುವ ಸಲುವಾಗಿ ಹುಟ್ಟಿಕೊಂಡ ‘ಬಸವ ಸಮಿತಿ ಬಹರೇನ್’ ಕುರಿತು ಈ ಮೊದಲೂ ಒಮ್ಮೆ ಬರೆದಿದ್ದೆ. ಪ್ರತಿ ತಿಂಗಳೂ ಒಂದು ಶುಕ್ರವಾರದಂದು (ಬಹರೇನ್ ನಲ್ಲಿ ಶುಕ್ರವಾರ ವಾರಾಂತ್ಯದ ರಜೆ ಇರುವುದರಿಂದ) ಮಹಾ ಮನೆ ಆಚರಿಸುತ್ತಾ ಬಂದಿರುವುದು ಈ ಸಮಿತಿಯ ಹೆಗ್ಗಳಿಕೆ.
ಇದುವರೆಗೆ 19 ಮಹಾಮನೆಯನ್ನು ಆಚರಿಸಿಕೊಂಡು ಸಮಿತಿ ಮುನ್ನಡೆಯುತ್ತಿದೆ. ಅಂದರೆ, ಸುಮಾರು 15ಕ್ಕೂ ಹೆಚ್ಚು ವರ್ಷಗಳ ಕಾಲ ನಿರಂತರವಾಗಿ ಈ ಆಚರಣೆ ಬಹರೇನ್ ದೇಶದಲ್ಲಿ ನಡೆದುಕೊಂಡು ಬಂದಿದೆ. ಪ್ರತಿ ಮಹಾಮನೆಯಲ್ಲಿಯೂ ಭಜನೆ, ಪೂಜೆ, ಮಂಗಳಾರತಿ, ವಚನಗಳು, ಅದರ ಅರ್ಥ, ಮಕ್ಕಳಿಗಾಗಿ ಒಂದಷ್ಟು ಕಲೆ-ಸಂಸ್ಕೃತಿ-ಸಾಮಾನ್ಯ eನದ ಪಾಠಗಳು ನಡೆಯುತ್ತವೆ. ಇವೆಲ್ಲವೂ ಕನ್ನಡದ ನಡೆಯುತ್ತವೆ!
ಇದರ ಜತೆಗೆ, ಬಸವ ತತ್ತ್ವದ ಪ್ರಮುಖ ಕಂಬಗಳಲ್ಲಿ ಒಂದಾದ ದಾಸೋಹವೂ ನಡೆಯುತ್ತದೆ. ಸಮಿತಿಯ ಮಹಿಳೆಯರು ತಮ್ಮ ಮನೆಯಲ್ಲಿಯೇ ಒಂದೊಂದು ಅಡುಗೆಯನ್ನು ಮಾಡಿಕೊಂಡು ಮಹಾಮನೆಗೆ ತರುತ್ತಾರೆ. ಅಷ್ಟೇ ಅಲ್ಲ, ಸ್ವತಃ ಮನೆಯ ಮಾತೆಯರಂತೆ, ಸಹೋದರಿಯರಂತೆ ಊಟ ಬಡಿಸುತ್ತಾರೆ. ಈ ಮಹಾಮನೆಯಲ್ಲಿ ಕೆಲವಷ್ಟು ಮಾಹಿತಿಗಳೊಂದಿಗೆ, ನಮ್ಮ ನೆಲದ ಸಂಸ್ಕೃ ತಿಗೆ ಸಂಬಂಧಪಟ್ಟ ವಿಷಯಗಳ ಸ್ಪರ್ಧೆಗಳನ್ನೂ ಏರ್ಪಡಿಸಲಾಗುತ್ತದೆ.
ಇತ್ತೀಚೆಗೆ ಬಸವಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹೇಮಾ ಪಾಟೀಲ್ ಕರೆ ಮಾಡಿ, ‘ಬೀದಿನಾಟಕದ ಸ್ಪರ್ಧೆಗೆ ನಿರ್ಣಾಯಕರಾಗಿ ಬರಬೇಕು’ ಎಂದು ಆಹ್ವಾನಿಸಿದಾಗ ನಿಜಕ್ಕೂ ಆಶ್ಚರ್ಯವಾಗಿತ್ತು. ಬಹರೇನ್‌ನಲ್ಲಿ ಬೀದಿನಾಟಕವೇ? ನಮ್ಮ ನಾಡಿನ ಇಂದು ಬೀದಿನಾಟಕಗಳು ಮಾಯವಾಗುತ್ತಿವೆ.
ಬೀದಿಯಲ್ಲಿ ಅನೇಕ ಬಗೆಯ ನಾಟಕಗಳು ನಡೆಯುತ್ತವೆ, ಅದು ಬೇರೆ. ಆದರೆ ನಮ್ಮ ದೇಶದಲ್ಲಿ, ಸ್ವಾತಂತ್ರ ಪೂರ್ವದಲ್ಲಿ ಮಂಗನನ್ನು ಆಡಿಸುವವರು, ಕರಡಿಯನ್ನು ಕುಣಿಸುವವರಿಂದ ಪ್ರೇರೇಪಿತ ರಾಗಿ, ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿಕೊಂಡು, ಸ್ವಾತಂತ್ರ ಸಮಯದಲ್ಲಿ ತೀವ್ರಗತಿಯನ್ನು ಪಡೆದ ಬೀದಿನಾಟಕ, ಸ್ವಾತಂತ್ರ ದ ನಂತರವೂ ಪ್ರಚಲಿತವಾಗಿತ್ತು. ಆಯಾ ಕಾಲದಲ್ಲಿ, ಆಯಾ ಸಂದರ್ಭದಲ್ಲಿ, ಜನರ ಮೇಲೆ ಆಗುತ್ತಿರುವ ಶೋಷಣೆ, ಸಮಾಜದ ಮೇಲೆ ಆಗುತ್ತಿರುವ ದುಷ್ಪರಿ ಣಾಮಗಳು, ಯಾವುದೋ ಒಂದು ವರ್ಗದ ಮೇಲೆ ಆಗುತ್ತಿರುವ ಕ್ರೌರ್ಯ ಇವನ್ನೆಲ್ಲ ವಿರೋಧಿ ಸುವುದಕ್ಕಾಗಿ, ರಂಗಸ್ಥಳ, ವೇಷ, ಬಣ್ಣ, ಧ್ವನಿ, ಬೆಳಕಿನ ವ್ಯವಸ್ಥೆ, ಇತ್ಯಾದಿ ಖರ್ಚು-ವೆಚ್ಚ ಇಲ್ಲದೆಯೇ,
ಬೀದಿಗೆ ಇಳಿದು, ಜನರನ್ನು ಬಡಿದೆಬ್ಬಿಸುವ, ಜನರನ್ನು ಉತ್ತೇಜಿಸುವ, ಪ್ರೇರೇಪಿಸುವ ಒಂದು ಕಲೆಯಾಗಿ ಬೀದಿನಾಟಕಗಳು ಸ್ಥಾನ ಪಡೆದುಕೊಂಡಿದ್ದವು. ಭಾರತದಂಥ ಪ್ರಜಾಪ್ರಭುತ್ವವಿರುವ ದೇಶದಲ್ಲಿ ಇದು ಸರಿ, ಆದರೆ ಅರಬ್ಬರ ದೇಶದಲ್ಲಿ ಇದಕ್ಕೆಲ್ಲ ಅವಕಾಶವಿಲ್ಲ. ಅಸಲಿಗೆ ಇಲ್ಲಿ ಯಾವ ಕಲಾಪ್ರಕಾರವೇ ಆದರೂ ಪರವಾನಗಿಯಿಲ್ಲದೆ ಬೀದಿಯಲ್ಲಿ ಮಾಡುವಂತಿಲ್ಲ.
ಹಾಗಿರುವಾಗ, ಬೀದಿನಾಟಕ ಹೇಗೆ? ಎಂಬ ಅನುಮಾನವೂ ಕಾಳಜಿಯೂ ಇತ್ತು. ‘ಎಲ್ಲಿ ಮಾಡು ತ್ತಿದ್ದೀರಿ?’ ಎಂದು ಕೇಳಿದಾಗ, “ಮರಳುಗಾಡಿನಲ್ಲಿರುವ ‘ಡೆಸರ್ಟ್ ಕ್ಯಾಂಪ್’ನಲ್ಲಿ ಈ ತಿಂಗಳ ಮಹಾ ಮನೆ ಮಾಡುತ್ತಿದ್ದೇವೆ" ಎಂದರು. ಸರಿ ಎಂದು ಒಪ್ಪಿಕೊಂಡೆ. ಮರುಭೂಮಿಯ ದೇಶಗಳಲ್ಲಿ ಇದು ಸಾಮಾನ್ಯ ಸಂಗತಿ. ಚಳಿಗಾಲ ಆರಂಭವಾದಾಗ ಇಲ್ಲಿಯ ಜನರು ಮರುಭೂಮಿಯಲ್ಲಿ ನಿರ್ಮಾಣ ಗೊಂಡ ತಾತ್ಕಾಲಿಕ ಟೆಂಟ್‌ಗಳಿಗೆ ಹೋಗಿ ಒಂದೋ-ಎರಡೋ ದಿನ ಇದ್ದು ಬರುತ್ತಾರೆ. ಕೆಲವೊಮ್ಮೆ ತಂಡೋಪತಂಡವಾಗಿ ಹೋಗುವುದೂ ಇದೆ. ಕೆಲವೊಂದು ಸಂಘ ಸಂಸ್ಥೆಗಳು ‘ಡೆಸರ್ಟ್ ಕ್ಯಾಂಪ್’ ಆಯೋಜಿಸುವುದೂ ಇದೆ.
ಅಲ್ಲಿ ಸಾಮಾನ್ಯವಾಗಿ ಊಟ, ತಿಂಡಿ, ಹಾಡು, ನೃತ್ಯ, ಆಟ, ಚಳಿ ಕಾಸಲು ಬೆಂಕಿ ಹಾಕುವುದು (ಕ್ಯಾಂಪ್ ಫೈರ್) ಇತ್ಯಾದಿಗಳು ಸಾಮಾನ್ಯ ಕ್ರಿಯೆಗಳು. ಈ ದೇಶದಲ್ಲಿ ಬೀದಿಯಲ್ಲಿ ನಾಟಕ ಮಾಡು ವುದಕ್ಕೆ ಪರವಾನಗಿ ಇಲ್ಲ. ಆದರೆ ನಾಲ್ಕು ಗೋಡೆಯ ಮಧ್ಯದಲ್ಲಿ ಅಥವಾ ಯಾವುದೇ ಒಂದು ಕಾಂಪೌಂಡ್ ಒಳಗೆ, ಇತರರಿಗೆ ತೊಂದರೆ ಆಗದಂತೆ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಅಭ್ಯಂತರವಿಲ್ಲ.
ಈ ಕಾರ್ಯಕ್ರಮಕ್ಕೆ ಒಪ್ಪಿಕೊಳ್ಳುವುದಕ್ಕೆ ಕಾರಣ ಇತ್ತು. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ತೀರಾ ವಿರಳವಾಗಿರುವಂಥ ಬೀದಿ ನಾಟಕಗಳನ್ನ ನಮ್ಮವರು ಬಹರೇನ್‌ನಲ್ಲಿ ಹೇಗೆ ಮಾಡುತ್ತಾರೆ ಎಂಬ ಕುತೂಹಲವಿತ್ತು. ಏಕೆಂದರೆ, ಈ ನಾಟಕದಲ್ಲಿ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ ಎಂದು ಅಧ್ಯಕ್ಷರು ಹೇಳಿದ್ದರು. ಎಂದಿನಂತೆ ಮಹಾಮನೆಯಲ್ಲಿ ನಡೆಯ ಬೇಕಾದ ಪೂಜೆ, ಭಜನೆ, ಬಸವ ತತ್ತ್ವ, ವಚನಗಳು, ಸಂಸ್ಕೃತಿಯ ಪಾಠಗಳು ಮುಗಿದ ನಂತರ ಬೀದಿನಾಟಕ ಸ್ಪರ್ಧೆ ಆರಂಭವಾಯಿತು.
ಪ್ರತಿ ತಂಡಕ್ಕೆ ಐದರಿಂದ ಹದಿನೈದು ನಿಮಿಷದ ಅವಧಿಯನ್ನು ನಿಗದಿಪಡಿಸಲಾಗಿತ್ತು. ಪ್ರತಿ ತಂಡ ದಲ್ಲೂ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಇರಬೇಕು ಎಂಬ ನಿಯಮವಿತ್ತು. ‘ವಿಚಾರ ಬದಲಾಯಿಸಿಕೊಳ್ಳಿ, ದೇಶ ಬದಲಾಯಿಸಿ’ ಎಂಬ ವಿಷಯವನ್ನು ಇಟ್ಟುಕೊಂಡು ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅಂದರೆ, ಭಾಗವಹಿಸುವ ಯಾವುದೇ ತಂಡವಾದರೂ ಈ ವಿಷಯಕ್ಕೆ ಸಂಬಂಧಿ ಸಿದಂತೆ ನಾಟಕವನ್ನು ಮಾಡಬೇಕಾಗಿತ್ತು. ನಾಟಕ ನೋಡುತ್ತಿದ್ದಂತೆ ಒಂದು ಕ್ಷಣ ನಾವು ಬಹರೇನ್ ನಲ್ಲಿ ಇದ್ದೇವೆಯೇ ಅಥವಾ ನಮ್ಮ ನಾಡಿನಲ್ಲಿ ಇದ್ದೇವೆಯೇ ಎನ್ನುವುದೇ ಗೊಂದಲವಾಗು ವಂತಾಗಿತ್ತು.
ಪ್ರತಿ ತಂಡದವರೂ ಅಷ್ಟು ಅದ್ಭುತವಾಗಿ ನಾಟಕವನ್ನು ಮಾಡಿದರು. ಕೆಲವು ತಂಡದ ಸಂಭಾಷಣೆ, ಅವರೇ ರಚಿಸಿದ ಹಾಡುಗಳು ಯಾವ ಪರಿಣತ ಲೇಖಕರಿಗೂ ಕಡಿಮೆ ಇರಲಿಲ್ಲ. ಹಾಗೆಯೇ ಅಭಿನಯ ಕೂಡ. ದುಡ್ಡು ಹಂಚಿ, ಪೊಳ್ಳು ಆಶ್ವಾಸನೆ ಕೊಟ್ಟು ಚುನಾವಣೆ ಗೆಲ್ಲುವ ರಾಜಕಾರಣಿ ಗಳು-ಪಕ್ಷಗಳು, ಸ್ವಚ್ಛತೆ, ಸಂಚಾರ ವ್ಯವಸ್ಥೆ, ಸಾರ್ವಜನಿಕ ವಾಹನಗಳ ಬಳಕೆ, ಸಂಚಾರ ಸ್ಥಗಿತತೆ, ವಾಯುಮಾಲಿನ್ಯ ಹೀಗೆ ಕೆಲವು ವಿಷಯಗಳ ಮೇಲೆ ಬೆಳಕು ಚೆಲ್ಲುವುದರೊಂದಿಗೆ, ನೆರೆದಿದ್ದ ಸುಮಾರು ನೂರು ಜನರ ಮೇಲೆ ಪ್ರಭಾವ ಬೀರುವಲ್ಲಿ ತಂಡದವರು ಯಶಸ್ವಿಯಾದರು.
ಇದರಲ್ಲಿ ಖುಷಿ ಕೊಟ್ಟ ಇನ್ನೂ ಒಂದು ವಿಷಯವೆಂದರೆ, ಬಹರೇನ್‌ನಲ್ಲಿಯೇ ಬೆಳೆಯುತ್ತಿರುವ ನಮ್ಮ ಕನ್ನಡದ ಕುಡಿಗಳು ಸ್ಪಷ್ಟತೆಯಿಂದ ಕನ್ನಡ ಸಂಭಾಷಣೆ ಹೇಳಿದ್ದು. ನಾಟಕದ ತಂತ್ರ, ಅಭಿನಯ, ಭಾವನೆಗಳನ್ನೆಲ್ಲ ಮಕ್ಕಳಿಗೆ ಕಲಿಸಿಕೊಡಬಹುದು. ಭಾಷೆ ಕಲಿಸುವುದು ಕಷ್ಟ, ಆದರೆ ಅದು ಅಷ್ಟೇ ಮಹತ್ವದ್ದು ಕೂಡ. ಮಾತೃಭಾಷೆ ಕನ್ನಡವೇ ಆದರೂ, ಮನೆಯಲ್ಲಿ ಕನ್ನಡವನ್ನೇ ಮಾತನಾಡಿದರೂ, ನಾಟಕದ ಭಾಷೆ ಸ್ವಲ್ಪ ಬೇರೆಯz ಆಗಿರುತ್ತದೆ.
ಅದನ್ನೂ ಮಕ್ಕಳು ಸುಲಭವಾಗಿ, ಸುಂದರವಾಗಿ ನಿರ್ವಹಿಸಿದ್ದು ನಿಜಕ್ಕೂ ಸಂತಸ ತಂದಿತ್ತು. ಸ್ಪರ್ಧೆ ಎಂದಮೇಲೆ ಯಾರಾದರೂ ಒಬ್ಬರು ಪ್ರಥಮ, ಇನ್ನೊಬ್ಬರು ದ್ವಿತೀಯ ಹೀಗೆ ಬೇರೆ ಸ್ಥಾನದಲ್ಲಿ ನಿಲ್ಲಬೇಕು. ಆದರೆ ಅಂದು ಗೆದ್ದದ್ದು ಬೀದಿನಾಟಕಗಳ ಸಂಸ್ಕೃತಿ ಮತ್ತು ನಮ್ಮ ಕನ್ನಡ ಭಾಷೆ. ಜತೆಗೆ ಬಸವ ಸಮಿತಿಯ ಈ ಪ್ರಯತ್ನ. ಬೀದಿನಾಟಕಗಳು ಎಂದಾಗ, ಅದರಲ್ಲೂ ಭಾರತದ ಬೀದಿ ನಾಟಕ ಗಳು ಎಂದಾಗ ಸಫ್ದರ್ ಹಶ್ಮಿಯ ಹೆಸರು ನೆನಪಿಗೆ ಬರುತ್ತದೆ. 1954ರಲ್ಲಿ ಜನಿಸಿದ ಸಫ್ದರ್, ಭಾರತ ದಲ್ಲಿ ಬೀದಿ ನಾಟಕದ ಕೆಲಸಕ್ಕೆ ಹೆಸರುವಾಸಿಯಾಗಿದ್ದರು. ಕಮ್ಯುನಿ ವಿಚಾರಧಾರೆಯನ್ನು ಹೊಂದಿದ್ದ ಅವರು ಬರಹಗಾರ, ಗೀತರಚನೆಕಾರರೂ ಆಗಿದ್ದರು.
ಭಾರತದ ರಂಗಭೂಮಿಯ ಇತಿಹಾಸದಲ್ಲಿ ಇಂದಿಗೂ ಪ್ರಮುಖ ಧ್ವನಿಗಳಲ್ಲಿ ಒಂದಾಗಿರುವ ಹೆಸರು ಅವರದ್ದು. ಬಾಲ್ಯದಲ್ಲಿ ಭಾರತೀಯ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್ ಐ) ದ ಕಾರ್ಯಕರ್ತ ರಾಗಿದ್ದ ಅವರು ತಮ್ಮ 19ನೇ ವರ್ಷದಲ್ಲಿಯೇ ಜನನಾಟ್ಯ ಮಂಚ್ (ಒಅಘೆಅI) ನ ಸ್ಥಾಪಕ ಸದಸ್ಯ ರಾಗಿದ್ದರು. ದೆಹಲಿ ಮತ್ತು ಉತ್ತರ ಪ್ರದೇಶದ ಅಲಿಗಡದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದು ದೆಹಲಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಮತ್ತು ದೆಹಲಿ ವಿಶ್ವವಿದ್ಯಾಲಯದಲ್ಲಿ ಎಂ.ಎ ಪೂರ್ಣಗೊಳಿಸಿದರು.
ಕಮ್ಯುನಿ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ದ ವಿದ್ಯಾರ್ಥಿ ವಿಭಾಗವಾದ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾದ ಸಾಂಸ್ಕೃತಿಕ ಘಟಕದೊಂದಿಗೆ ಮತ್ತು ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್‌ನೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದರು. ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪ ಎದುರಿಸು ತ್ತಿರುವಾಗ, ಆ ವಿವಾದದ ಕುರಿತಾಗಿ ‘ಕುರ್ಸಿ, ಕುರ್ಸಿ, ಕುರ್ಸಿ’ ಎಂಬ ಬೀದಿನಾಟಕವನ್ನು ಬರೆದು, ದೆಹಲಿಯ ಪ್ರಮುಖ ಸ್ಥಳಗಳಲ್ಲಿ ಸತತ ಒಂದು ವಾರ ಪ್ರದರ್ಶಿಸಿದರು.
ಸ್ವಾಭಾವಿಕವಾಗಿಯೇ ತುರ್ತು ಪರಿಸ್ಥಿತಿಯ ಕಾಲವಾದದ್ದರಿಂದ ಇದಕ್ಕೆಲ್ಲ ಕಡಿವಾಣ ಹಾಕಲಾ ಯಿತು. ಆ ಕಾಲದಲ್ಲಿ ಸಫ್ದರ್ ಹಶ್ಮಿ, ಕಾಶ್ಮೀರ ಮತ್ತು ದೆಹಲಿಯ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಕೆಲಸ ಮಾಡಿದರು. 1977ರಲ್ಲಿ ತುರ್ತು ಪರಿಸ್ಥಿತಿ ಮುಗಿದ ನಂತರ, ಪುನಃ ರಾಜಕೀಯ ಚಟುವಟಿಕೆಯನ್ನು ಆರಂಭಿಸಿದರು. ಕಾರ್ಮಿಕರ ಕಷ್ಟದ ವಿಷಯಗಳು, ಸಣ್ಣ ಹಿಡು ವಳಿ ರೈತರ ಸಂಕಷ್ಟದ ಕುರಿತು ಬೀದಿಗಳಲ್ಲಿ, ಸಭೆ-ಸಮಾರಂಭಗಳಲ್ಲಿ ನಾಟಕವನ್ನು ಮಾಡಿದರು.
ಜತೆಗೆ, ನಿರುದ್ಯೋಗ ಸಮಸ್ಯೆ, ಮಹಿಳೆಯರ ಮೇಲಿನ ಹಿಂಸಾಚಾರ, ಹಣದುಬ್ಬರ ಇತ್ಯಾದಿ ವಿಚಾರ ಗಳ ಕುರಿತು ನಾಟಕಗಳನ್ನು ಪ್ರದರ್ಶಿಸಿದರು. ಅವರು ದೂರದರ್ಶನಕ್ಕಾಗಿ ಕೆಲವು ಸಾಕ್ಷ್ಯಚಿತ್ರಗಳು ಮತ್ತು ಧಾರಾವಾಹಿಗಳನ್ನೂ ನಿರ್ಮಿಸಿದರು. ಮಕ್ಕಳಿಗಾಗಿ ಮತ್ತು ಭಾರತೀಯ ರಂಗಭೂಮಿಯ ವಿಮರ್ಶೆಯ ಪುಸ್ತಕಗಳನ್ನು ಬರೆದರು.
ಅವರು ಬರೆದ 24 ಬೀದಿನಾಟಕಗಳು 4 ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದ್ದವು. ಕೆಲವು ಕಾಲ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಮತ್ತು ಇಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಪತ್ರಕರ್ತ ರಾಗಿಯೂ ಕೆಲಸ ಮಾಡಿದ ಅವರು ಕೆಲವು ದಿನಗಳ ನಂತರ ದೆಹಲಿಯಲ್ಲಿ ಪಶ್ಚಿಮ ಬಂಗಾಳ ಸರಕಾರದ ಪತ್ರಿಕಾ ಮಾಹಿತಿ ಅಧಿಕಾರಿಯಾಗಿದ್ದರು. ನಂತರ ಇದೆಲ್ಲವನ್ನೂ ಬಿಟ್ಟು ರಾಜಕೀಯ ಚಟುವಟಿಕೆಗೆ ತಮ್ಮ ಸಂಪೂರ್ಣ ಸಮಯವನ್ನು ಮೀಸಲಿಟ್ಟಿದ್ದರು.
ನಾಟಕದಲ್ಲಿ ತಮ್ಮ ಜತೆ ಅಭಿನಯಿಸುತ್ತಿದ್ದ ಮೊಲೋಯಶ್ರೀ ಅವರನ್ನು ಮದುವೆಯಾಗಿದ್ದ ಸಫ್ದರ್ ಹಶ್ಮಿ, 1989ನೇ ಇಸವಿಯ ಮೊದಲನೆಯ ದಿನದಂದು ಗಾಜಿಯಾಬಾದ್ ಪುರಸಭೆಯ ಚುನಾವಣೆಯ ಸಂದರ್ಭದಲ್ಲಿ ನಾಟಕ ಪ್ರದರ್ಶನ ಮಾಡುತ್ತಿರುವಾಗಲೇ ಹತ್ಯೆಗೊಳಗಾದರು. ಅಂದು ಅವರು ದೆಹಲಿಯ ಬಳಿ ‘ಹ ಬೋಲ’ ಎಂಬ ಬೀದಿನಾಟಕವನ್ನು ಪ್ರದರ್ಶಿಸುತ್ತಿದ್ದರು. ಆ ಸಂದರ್ಭದಲ್ಲಿ ಅವರ ನಾಟಕ ತಂಡದ ಮೇಲೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದಾಳಿ ಮಾಡಿದರು.
ಮಾರಣಾಂತಿಕವಾಗಿ ಗಾಯಗೊಂಡಿದ್ದ ಹಶ್ಮಿ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಫಲಕಾರಿಯಾಗಿದೆ ಮರುದಿನ ಹಶ್ಮಿ ನಿಧನರಾದರು. ಆದರೆ ಅವರು ಮರಣ ಹೊಂದಿದ ಎರಡೇ ದಿನದ ನಂತರ ಅವರ ಪತ್ನಿ ಮೊಲೊಯಶ್ರೀ ಅವರೇ ಕಟ್ಟಿದ ಜನಮ್ ತಂಡದೊಂದಿಗೆ, ಅದೇ ಸ್ಥಳಕ್ಕೆ ಹೋಗಿ, ಅದೇ ನಾಟಕವನ್ನು ಆಡಿ ಪೂರ್ಣಗೊಳಿಸಿದರು. ಈ ಘಟನೆ ನಡೆದ ಹದಿನಾಲ್ಕು ವರ್ಷದ ನಂತರ ಗಾಜಿಯಾಬಾದ್ ಸ್ಥಳೀಯ ನ್ಯಾಯಾಲಯವು ಕಾಂಗ್ರೆಸ್ ಪಕ್ಷದ ಸದಸ್ಯ ಮುಖೇಶ್ ಶರ್ಮಾ ಸೇರಿದಂತೆ ಹನ್ನೊಂದು ಜನರಿಗೆ ಶಿಕ್ಷೆ ವಿಧಿಸಿತು.
ಆ ವರ್ಷ ಚಿತ್ರಕಾರ ಎಂ.ಎಫ್.ಹುಸೇನ್ ‘ಟ್ರಿಬ್ಯೂಟ್ ಟು ಹಶ್ಮಿ’ ಎಂಬ ವರ್ಣಚಿತ್ರ ನಿರ್ಮಿಸಿದ್ದರು. ಅದು ಹತ್ತು ಲಕ್ಷ ರೂಪಾಯಿಗೆ ಮಾರಾಟವಾಗಿತ್ತು. ರಾಜಕುಮಾರ್ ಸಂತೋಷಿ ನಿರ್ಮಿಸಿದ ಹಿಂದಿ ಚಲನಚಿತ್ರ ‘ಹಲ್ಲಾ ಬೋ್’, ಸಫ್ದರ್ ಹಶ್ಮಿಯವರಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ. ಈಗ ಐದು ವರ್ಷಗಳ ಹಿಂದೆ, ಸುಧನ್ವ ದೇಶಪಾಂಡೆಯವರು ಬರೆದ ‘ಹಲ್ಲಾ ಬೋಲ್: ದಿ ಡೆತ್ ಎಂಡ್ ಲೈಫ್ ಆಫ್ ಸಫ್ದರ್ ಹಶ್ಮಿ’ ಪುಸ್ತಕದಲ್ಲಿ ಈ ಎಲ್ಲಾ ವಿವರಗಳು ದಾಖಲಾಗಿವೆ.
ಮೊನ್ನೆ ಬಹರೇನ್‌ನಲ್ಲಿ ಬೀದಿನಾಟಕ ನೋಡುವಾಗ ಸಫ್ದರ್ ಹಶ್ಮಿಯವರ ನೆನಪಾಗಿ ಮನಸ್ಸು ತೇವಗೊಂಡಿತು. ಹಾಗೆಯೇ ಬೀದಿನಾಟಕ ಸಂಸ್ಕೃತಿಯನ್ನು ನೆನೆದು ಬಹರೇನ್ ದೇಶದಲ್ಲಿ ಅದನ್ನು ಆಯೋಜಿಸಿದವರ ಕಾರ್ಯವನ್ನು ಶ್ಲಾಘಿಸಿತು.
ಇದನ್ನೂ ಓದಿ: Kiran Upadhyay Column: ಜೋಕರ್ ಆಗಿ ಜಗವ ಗೆದ್ದ ರಾಜ !