Kiran Upadhyay Column: ಜೋಕರ್ ಆಗಿ ಜಗವ ಗೆದ್ದ ರಾಜ !
ಆ ಹೋಟೆಲಿನಲ್ಲಿ ಸುಮಾರು 65-70 ವರ್ಷ ಪ್ರಾಯದವನೊಬ್ಬ ಗಿಟಾರ್ ಮತ್ತು ಪಿಯಾನೋ ನುಡಿಸುತ್ತ ಹಾಡು ಹಾಡುತ್ತಿದ್ದ. ನಾವು ಒಳಗೆ ಹೋಗುವಾಗ ಯಾವುದೋ ಭಾಷೆಯ ಹಾಡು ಹಾಡು
Ashok Nayak
December 16, 2024
ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
dhyapaa@gmail.com
ಐದು ವರ್ಷದ ಹಿಂದೆ, ‘ವಿಶ್ವವಾಣಿ’ ದಿನಪತ್ರಿಕೆ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್, ಶಿರಸಿಯ ರಾಜಕೀಯ ಧುರೀಣರಾದ ವೆಂಕಟೇಶ್ ಹೆಗಡೆ ಮತ್ತು ನಾನು ಅಝೆರ್ಬೈಜಾನ್ ದೇಶದ ಪ್ರವಾಸಕ್ಕೆ ಹೋಗಿದ್ದೆವು. ಊರೆಲ್ಲ ಸುತ್ತಿ, ರಾತ್ರಿ ಊಟಕ್ಕಾಗಿ ಒಂದು ಹೋಟೆಲಿಗೆ ಹೋದೆವು.
ಅದೇನೂ ಭಾರತೀಯ ಊಟ ಸಿಗುವ ಹೋಟೆಲ್ ಆಗಿರಲಿಲ್ಲ. ಪಾಶ್ಚಿಮಾತ್ಯ ದೇಶಗಳ ಊಟ ಸಿಗುವ ಹೋಟೆಲ್ಆಗಿತ್ತು. ಆ ಹೋಟೆಲಿನಲ್ಲಿ ಸುಮಾರು 65-70 ವರ್ಷ ಪ್ರಾಯದವನೊಬ್ಬ ಗಿಟಾರ್ ಮತ್ತು ಪಿಯಾನೋ ನುಡಿಸುತ್ತ ಹಾಡು ಹಾಡುತ್ತಿದ್ದ. ನಾವು ಒಳಗೆ ಹೋಗುವಾಗ ಯಾವುದೋ ಭಾಷೆಯ ಹಾಡು ಹಾಡುತ್ತಿದ್ದವ, ನಾವು ಒಳಗೆ ಹೋಗಿ ಕುಳಿತುಕೊಳ್ಳುತ್ತಿದ್ದಂತೆಯೇ ‘ಜೀನಾ ಯಹಾ… ಮರನಾ ಯಹಾ… ಇಸ್ಕೆ ಸಿವಾ ಜಾನಾ ಕಹಾ..’ ಹಿಂದಿ ಹಾಡನ್ನು ಹಾಡಲು ಆರಂಭಿಸಿದ. ಏನೋ, ಗ್ರಾಹಕರನ್ನು ಆಕರ್ಷಿಸಲು ಒಂದೆರಡು ಸಾಲು ಹಾಡುತ್ತಾನೆ ಅಂದು ಕೊಂಡರೆ, ಆತ ಪೂರ್ತಿ ಹಾಡನ್ನು ಹಾಡಿ ಮುಗಿಸಿದ್ದ.
ಅಷ್ಟಕ್ಕೆ ನಿಲ್ಲಿಸುತ್ತಾನೆ ಅಂದುಕೊಳ್ಳುತ್ತಿದ್ದಂತೆ, ‘ಪ್ಯಾರ್ ಹುವಾ, ಇಕರಾರ್ ಹುವಾ…’ ಗೀತೆಯನ್ನು ಹಾಡಿದ. ನಂತರ ‘ಹೋಟೋ ಪೆ ಸಚ್ಚಾಯೀ ರೆಹತೀ ಹೈ…’ ಹಾಡಿದ. ಹೋಟೆಲಿನಲ್ಲಿ ನಾವು ಮೂವರನ್ನು ಬಿಟ್ಟರೆ ಬೇರೆ ಯಾರೂ ಭಾರತೀಯರು ಇರಲಿಲ್ಲ. ಅಲ್ಲಿ ಸ್ಥಳೀಯರೂ, ಬೇರೆ ದೇಶದ ಗ್ರಾಹಕರೂ ಇದ್ದರು. ಅವರೂ ಆ ಹಾಡನ್ನು ಆಸ್ವಾದಿ ಸುತ್ತಿದ್ದರು. ಊಟ ಮುಗಿಸಿ ಹೊರಡುವಾಗ ಆತನ ಬಳಿ ಮಾತಾಡಲು ಹೋದರೆ ಅವನಿಗೆ ಹಿಂದಿ ಬಿಡಿ, ಇಂಗ್ಲಿಷ್ ಭಾಷೆಯೂ ಬರುತ್ತಿರಲಿಲ್ಲ. ಅಲ್ಲಿಯ ಸಪ್ಲೈಯರ್ ಬಳಿ ಕೇಳಿದಾಗ, ‘ಈ ದೇಶವೂ ಮೊದಲು ಸಮಗ್ರ ರಷ್ಯಾದ ಒಳಗಿತ್ತು.
ಈ ಭಾಗದ ಬಹುತೇಕ ಹೋಟೆಲುಗಳಲ್ಲಿ ಇಂದಿಗೂ ಹಿಂದಿ ಹಾಡನ್ನು ಹಾಡುತ್ತಾರೆ’ ಎಂದ. ‘ಹಾಗಾದರೆ ಹೊಸ ಹಾಡುಗಳನ್ನೂ ಹಾಡಬಹುದಿತ್ತಲ್ಲ, ಮೂರೂ ಹಳೆಯ ಹಾಡುಗಳೇ ಯಾಕೆ?’ ಎಂದು ಕೇಳಿದಾಗ, ‘ಇತ್ತೀಚಿನ ದಿನಗಳಲ್ಲಿ ಮಿಥುನ್, ಶಾರುಖ್, ಸಲ್ಮಾನ್, ಹೃತಿಕ್ ಇವರ ಹೆಸರುಗಳು ಗೊತ್ತು, ಆದರೆ ಈ ಭಾಗದಲ್ಲಿ ಇಂದಿಗೂ ಅತ್ಯಂತ ಜನಪ್ರಿಯರಾಗಿ ಉಳಿದವರು ರಾಜ್ ಕಪೂರ್. ನಮ್ಮ ಹೋಟೆಲಿನಲ್ಲಿ ಹಾಡುವವನಿಗೆ ಸುಮಾರು 25 ಹಿಂದಿ ಹಾಡು ಕಂಠಪಾಠವಾಗಿದೆ. ಎಲ್ಲವೂ ರಾಜ್ ಕಪೂರ್ ಹಾಡುಗಳೇ’ ಎಂದ.
ನನಗೆ ಅದು ಆಶ್ಚರ್ಯ ಅನಿಸಲಿಲ್ಲ. ಕಾರಣ, ಅದಕ್ಕೂ ಮೊದಲು ನಾನು ಒಮ್ಮೆ ಜಾರ್ಜಿಯಾಕ್ಕೆ ಹೋದಾಗ (ಒಂದು ಕಾಲದಲ್ಲಿ ಅದೂ ರಷ್ಯಾದ ಭಾಗವೇ ಆಗಿತ್ತು) ಖಾಸಗಿ ಟೂರ್ ಗೈಡ್ ಜತೆಗಿದ್ದರು. ಜಾರ್ಜಿಯಾದ ದೊಡ್ಡ ನದಿ ‘ಕುರಾ’ದ ದಡದಲ್ಲಿ ಹೋಗುತ್ತಿzಗ, ಆ ನದಿಯ ಬಗ್ಗೆ ವಿವರಿಸುತ್ತಿದ್ದರು. ಹಾಗೆಯೇ, ‘ನಿಮ್ಮ ದೇಶದ ದೊಡ್ಡ ನದಿ ಯಾವುದು?’ ಎಂದು ಕೇಳಿದರು. ‘ಗಂಗಾ’ ಎಂದಾಗ, ‘ಈ ಪದವನ್ನು ನಾನು ರಾಜ್ ಕಪೂರ್ ಹಾಡಿನಲ್ಲಿ ಕೇಳಿದ್ದೇನೆ.ಹಾಡಿನಲ್ಲಿರುವ ಗಂಗಾ ಎಂಬ ಪದ ಮತ್ತು ನದಿಯ ಹೆಸರು ಗಂಗಾ ಎರಡೂ ಒಂದೇನಾ?’ ಎಂದರು.
‘ಹೌದು’ ಎಂದೆ. ‘ನಿಮ್ಮ ದೇಶದಲ್ಲಿ ಹತ್ತಕ್ಕೆ ಎಂಟರಷ್ಟು ಜನರ ಹೆಸರು ರಾಜು, ರಾಜ್ ಎಂದೇ ಇರುತ್ತದೆಯೇ? ನಾನು ನೋಡಿದ ಬಹುತೇಕ ಹಿಂದಿ ಸಿನಿಮಾದಲ್ಲಿ ನಾಯಕನ ಹೆಸರುಗಳೆಲ್ಲ ರಾಜ್ ಎಂದೇ ಇದೆ’ ಎಂದರು. ‘ಯಾವ ಸಿನಿಮಾ ನೋಡಿದ್ದೀರಿ?’ ಎಂದು ಕೇಳಿದಾಗ, ‘ನಾನು ನೋಡಿzಲ್ಲ ರಾಜ್ ಕಪೂರ್ ಸಿನಿಮಾ’ ಎಂದರು.
ಆಗಲೂ ನನಗೆ ಇವರೆಲ್ಲ ಭಾರತದ ಸಿನಿಮಾ ನೋಡುತ್ತಾರೆ ಎಂದು ಖುಷಿಯಾಗಿತ್ತೇ ವಿನಾ ಆಶ್ಚರ್ಯವಾಗಿರಲಿಲ್ಲ. ಏಕೆಂದರೆ ಬಹಳ ವರ್ಷಗಳ ಹಿಂದೆ ನನ್ನ ಜತೆ ರಷ್ಯಾದ ಸಹೋದ್ಯೋಗಿಯಿದ್ದ. ಒಮ್ಮೆ ನಾನು ನಮ್ಮ ಡಾ.ರಾಜ್ ಕುಮಾರ್ ಹಾಡಿದ ‘ಗಂಗಾ ಯಮುನಾ ಸಂಗಮ…’ ಹಾಡು ಕೇಳುತ್ತಿದ್ದಾಗ ಆತನೂ ಆ ಹಾಡು ಕೇಳಿಸಿಕೊಂಡ. ‘ಇದು ರಾಜ್ ಕಪೂರ್ ಸಿನಿಮಾದ ಹಾಡೇ?’ ಎಂದು ಕೇಳಿದ. ಅವನಿಗೆ ಕನ್ನಡ ಮತ್ತು ಹಿಂದಿ ಭಾಷೆಯ ನಡುವಿನ ವ್ಯತ್ಯಾಸ ಗೊತ್ತಿರಲಿಲ್ಲ. ‘ಇಲ್ಲ, ಇದು ನಮ್ಮ ನಾಡಿನ ಖ್ಯಾತ ನಟ ರಾಜ್‌ಕುಮಾರ್ ಹಾಡು’ ಎಂದೆ. ಆತನೂ ಆಗ ಅದೇ ಪ್ರಶ್ನೆ ಕೇಳಿದ್ದ. ನಿಮ್ಮಲ್ಲಿ ‘ರಾಜ್’ ಹೆಸರು ಬಹಳ ಜನಪ್ರಿಯ ಅನಿಸುತ್ತದೆ.
ಅದರ ಅರ್ಥ ‘ರಾಜ’ ಎಂದಲ್ಲವೇ? ನಿಮ್ಮ ರಾಜ್ ಕಪೂರ್ ನೋಡಿ, ಜೋಕರ್ ಪಾತ್ರ ಮಾಡಿಯೇ ಚಿತ್ರರಂಗದ ರಾಜ ರಾದರು. ಅವರು ನಿಮ್ಮ ದೇಶದಲ್ಲಷ್ಟೇ ಅಲ್ಲ, ನಮ್ಮ ದೇಶದಲ್ಲೂ ಜನಪ್ರಿಯ. ನಮ್ಮ ದೇಶದಲ್ಲಿ ಇಂದಿಗೂ ರಾಜ್ ಕಪೂರ್ ಹೆಸರು ಜೀವಂತವಾಗಿದೆ. ನಮ್ಮ ತಂದೆ ರಾಜ್ ಕಪೂರ್ ಅವರ ದೊಡ್ಡ ಫ್ಯಾನ್. ಅವರು ‘ಮೇರಾ ನಾಮ್ಜೋಕರ್’ ಚಿತ್ರವನ್ನು ಹತ್ತು ಸಲವಾದರೂ ನೋಡಿರಬಹುದು’ ಎಂದಿದ್ದ.
ನನಗೂ ಚಿಕ್ಕಂದಿನಿಂದ ರಾಜ್ ಕಪೂರ್ ಬಗ್ಗೆ ಒಲವಿತ್ತು. ಕಾರಣ ಇಷ್ಟೇ, ಆಗಷ್ಟೇ ವಿಸಿಆರ್ ಮಾರುಕಟ್ಟೆಗೆ ಬಂದಿತ್ತು. ಊರಿನಲ್ಲಿ ವಿಡಿಯೋ ಲೈಬ್ರರಿಗಳು ತಲೆ ಎತ್ತಿದ್ದವಾದರೂ, ರಜಾ ದಿನಗಳಲ್ಲಿಯೂ ಮನೆಯಲ್ಲಿ ಸಿನಿಮಾ ನೋಡಲು ಹೆಚ್ಚಿನ ಪ್ರೋತ್ಸಾಹ ಇರಲಿಲ್ಲ. ಕನ್ನಡ ಚಿತ್ರದ, ಅದರಲ್ಲೂ ರಾಜ್‌ಕುಮಾರ್ ಅಭಿನಯದ ಅಥವಾಇನ್ಯಾವುದೋ ಒಳ್ಳೆಯ ಸಿನಿಮಾದ ವಿಡಿಯೋ ಮಾರುಕಟ್ಟೆಗೆ ಬಂದಿರಲಿಲ್ಲ. ಹೆಚ್ಚಿನ ಹಿಂದಿ ಚಿತ್ರಗಳಲ್ಲಿಅಶ್ಲೀಲತೆ ಇರುತ್ತದೆ ಎಂಬ ಅಭಿಪ್ರಾಯವಿತ್ತು. ಆದರೆ ಸಿನಿಮಾ ನೋಡಬೇಕೆಂದು ಹೇಳಿದಾಗ ಅಪ್ಪ ರಾಜ್ಕಪೂರ್ ಸಿನಿಮಾ ತರುತ್ತಿದ್ದರು. ಏಕೆಂದರೆ ಅವರು ರಾಜ್ ಕಪೂರ್ ಮತ್ತು ಮುಖೇಶ್ ಅಭಿಮಾನಿಯಾಗಿದ್ದರು.
ಹಾಗಾಗಿ ನಮ್ಮ ಮನೆಯಲ್ಲಿ ವಿಸಿಆರ್ ಬಂದ ನಂತರ ಮೊದಲು ನೋಡಿದ 15-20 ಚಿತ್ರಗಳು ರಾಜ್ ಕಪೂರ್ ಅವರದ್ದೇ ಆಗಿತ್ತು! ಭಾರತೀಯ ಚಿತ್ರರಂಗದ ‘ಶೋಮ್ಯಾನ್’ ಎಂದೇ ಹೆಸರಾಗಿದ್ದ ರಾಜ್ ಕಪೂರ್ ನಿರ್ದೇಶಿಸಿದ ಬಹುತೇಕ ಚಿತ್ರಗಳಲ್ಲಿ ನಾಯಕಿಯರ ಅಂಗಾಂಗ ಪ್ರದರ್ಶನ ಇರುತ್ತಿದ್ದರೂ, ಅಶ್ಲೀಲ ಅನಿಸುತ್ತಿರಲಿಲ್ಲ. ಅವರಸಿನಿಮಾದಲ್ಲಿ ಒಂದು ಸಂದೇಶ ಇರುತ್ತಿತ್ತು, ಜತೆಗೆ ಒಂದಷ್ಟು ಒಳ್ಳೆಯ ಹಾಡುಗಳು ಇರುತ್ತಿದ್ದವು. ಆ ಕಾಲದಲ್ಲಿ ನಟ-ನಿರ್ದೇಶಕ ರಾಜ್ ಕಪೂರ್, ಸಂಗೀತ ನಿರ್ದೇಶಕರಾದ ಶಂಕರ್-ಜೈಕಿಶನ್, ಗಾಯಕ ಮುಖೇಶ್ ಅವರ ಸಂಯೋಗ ಜನಪ್ರಿಯವಾಗಿದ್ದವು.
ಆ ದಿನಗಳಲ್ಲಿ, ‘ಮುಖೇಶ್ ಇಲ್ಲದಿದ್ದರೆ ರಾಜ್ ಕಪೂರ್ ಇಷ್ಟು ಹೆಸರು ಮಾಡುತ್ತಿರಲಿಲ್ಲ’ ಎಂದು ಹೇಳುವವರೂಇದ್ದರು. ಈ ರೀತಿಯ ಮಾತುಗಳು ಹೊಸತೇನೂ ಅಲ್ಲ ಬಿಡಿ. ‘ಕಿಶೋರ್ ಕುಮಾರ್ ಇಲ್ಲದಿದ್ದರೆ ರಾಜೇಶ್ ಖನ್ನಾ, ಅಮಿತಾಭ್ ಬಚ್ಚನ್ ಇಷ್ಟು ಹೆಸರು ಮಾಡುತ್ತಿರಲಿಲ್ಲ’, ‘ಸಲ್ಮಾನ್ ಖಾನ್ ಹೆಸರು ಮಾಡಲು ಎಸ್.ಪಿ. ಬಾಲ ಸುಬ್ರಹ್ಮಣ್ಯಮ್ ಕಾರಣ’, ಕನ್ನಡದ ‘ಡಾ. ರಾಜ್‌ಕುಮಾರ್ ಅವರಿಗೆ ಅವರ ಧ್ವನಿಗಿಂತಲೂ ಡಾ. ಪಿ.ಬಿ.ಶ್ರೀನಿವಾಸ್ ಧ್ವನಿಯೇ ಹೆಚ್ಚು ಸೂಕ್ತವಾಗಿತ್ತು’ ಇತ್ಯಾದಿ ಅಭಿಪ್ರಾಯಗಳನ್ನು ಹೊಂದಿದವರು, ತರ್ಕಿಸುವವರು ಇದ್ದರು. ಅದು ಅವರವರ ವಿವೇಚನೆಗೆ ಬಿಟ್ಟದ್ದು.
ಏಕೆಂದರೆ, ಇಲ್ಲಿ ಹೇಳಿರುವ ನಾಯಕ ನಟರ ಪೈಕಿ ಸಲ್ಮಾನ್ ಖಾನ್ ಹೊರತುಪಡಿಸಿ, ಉಳಿದವರೆಲ್ಲ ಒಂದಲ್ಲ ಒಂದು ಕಾಲಘಟ್ಟದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದವರು. ಆದರೆ ಮುಖೇಶ್ ತೀರಿಕೊಂಡಾಗ, ರಾಜ್ ಕಪೂರ್ ಖುದ್ದು ‘ಇಂದು ನಾನು ನನ್ನ ಧ್ವನಿಯನ್ನು ಕಳೆದುಕೊಂಡೆ’ ಎಂದು ಹೇಳಿದ್ದರು. ರಾಜ್ ಕಪೂರ್ ಕೇವಲ ಭಾರತ, ಸಮಗ್ರ ರಷ್ಯಾ (ಸೋವಿಯತ್ ಯೂನಿಯನ್) ಮಾತ್ರವಲ್ಲ, ಆಫ್ರಿಕಾ, ಚೀನಾ, ಟರ್ಕಿ, ಗ್ರೀಸ್, ಲ್ಯಾಟಿನ್ ಅಮೆರಿಕ,ಮಧ್ಯಪ್ರಾಚ್ಯದಲ್ಲೂ ಜನಪ್ರಿಯರಾಗಿದ್ದರು. ‘ಆರ್‌ಕೆ’ ಎಂದೂ ಹೆಸರಾಗಿದ್ದ ಅವರು ಇಷ್ಟು ಜನಪ್ರಿಯರಾಗಲುಕಾರಣವೇನು ಎಂದು ಹುಡುಕಿದಾಗ ಮೊದಲು ಕಾಣುವುದು ಅವರಲ್ಲಿದ್ದ ಧೈರ್ಯ, ಕ್ರಿಯಾಶೀಲತೆ ಮತ್ತು ಸೃಜನಶೀಲತೆ. ಹಿಂದಿ ಚಿತ್ರರಂಗದಲ್ಲಿ ಅನೇಕ ಪ್ರಯೋಗಗಳನ್ನು ಅವರು ಮಾಡಿ ಹೆಸರಾಗಿದ್ದರು.
ಅವರ ಧೈರ್ಯ ಹೇಗಿತ್ತು ಎಂದರೆ, ಎರಡೂವರೆಯಿಂದ ಮೂರು ತಾಸಿನ ಸಿನಿಮಾ ಮಾಡುತ್ತಿದ್ದ ಕಾಲದಲ್ಲಿ,ರಾಜ್ ಕಪೂರ್, ನಾಲ್ಕು ಗಂಟೆ ಸಮಯದ ‘ಸಂಗಮ’ ಸಿನಿಮಾ ಮಾಡಿದರು. ಅವರ ‘ಮೇರಾ ನಾಮ್ ಜೋಕರ್’ ಸಿನಿಮಾ ನಾಲ್ಕೂವರೆ ಗಂಟೆಯದಾಗಿತ್ತು. ಈ ಎರಡೂ ಸಿನಿಮಾದಲ್ಲಿ ಎರಡು ಮಧ್ಯಂತರಗಳಿದ್ದವು. ‘ಮೇರಾ ನಾಮ್ ಜೋಕರ್’ ಚಿತ್ರ ನಿರ್ಮಿಸಲು ಅವರು ತೆಗೆದುಕೊಂಡ ಸಮಯ, ಬರೊಬ್ಬರಿ ಆರು ವರ್ಷ.
ಬೇರೆ ಯಾರಾದರೂ ಆಗಿದ್ದರೆ, ಹೈರಾಣಾಗಿ ಸಿನಿಮಾದ ಸಹವಾಸವೇ ಬೇಡ ಎಂದು ಬಿಟ್ಟು ಹೋಗುತ್ತಿದ್ದರೋಏನೋ, ಆರ್‌ಕೆ ಮಾತ್ರ ಪಟ್ಟು ಹಿಡಿದು ಸಿನಿಮಾ ಪೂರ್ಣಗೊಳಿಸಿ ಬಿಡುಗಡೆ ಮಾಡಿದರು. ಆ ಸಿನಿಮಾ ಅವರ ಜೀವನದಲ್ಲಿ ನಡೆದ ಘಟನೆಗೆ ಹತ್ತಿರವಾದದ್ದು ಎಂಬ ಸುದ್ದಿಯೂ ಇದೆ. (‘ಬಾಬಿ’ ಚಿತ್ರದಲ್ಲಿ ಡಿಂಪಲ್ ಕಪಾಡಿಯಾ ಮತ್ತು ರಿಶಿ ಕಪೂರ್ ಭೇಟಿಯ ಸನ್ನಿವೇಶ ರಾಜ್ ಕಪೂರ್ ಮತ್ತು ನರ್ಗಿಸ್ ಮೊದಲ ಬಾರಿ ಭೇಟಿಯಾದ ಸನ್ನಿವೇಶ ಎಂಬ ಗಾಸಿಪ್ ಕೂಡ ಇದೆ).
‘ಮೇರಾ ನಾಮ್ ಜೋಕರ್’ ಸಿನಿಮಾದ ಕಥೆಯೋ, ಹಾಡೋ, ಅಭಿನಯವೋ ಅಥವಾ ರಷ್ಯಾದ ಅಭಿನೇತ್ರಿಗೆ ಪಾತ್ರ ನೀಡಿದ ಕಾರಣವೋ, ವಿಶ್ವದಾದ್ಯಂತ, ಅದರಲ್ಲೂ ರಷ್ಯಾದಲ್ಲಿ ಅವರು ಹೆಸರುವಾಸಿಯಾದರು. ರಷ್ಯಾದ ಮಾಸ್ಕೋ ದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವರು ಎರಡು ಬಾರಿ ತೀರ್ಪು ಗಾರರಲ್ಲಿ ಒಬ್ಬರಾಗಿಯೂ ಭಾಗವಹಿಸಿದ್ದರು. ಅತ್ಯುತ್ತಮ ಚಲನಚಿತ್ರಕ್ಕಾಗಿ ಎರಡು ಬಾರಿ ‘ರಾಷ್ಟ್ರ ಪ್ರಶಸ್ತಿ’ ಪಡೆದ ಅವರು, ಹನ್ನೊಂದು ಬಾರಿ ‘ಫಿಲ್ಮ್ ಫೇರ್ ಪ್ರಶಸ್ತಿ’ ಪಡೆದಿದ್ದರು.
ಅವರ ‘ಆವಾರಾ’ ಮತ್ತು ‘ಬೂಟ್ ಪಾಲಿಶ್’ ಚಿತ್ರಗಳು ’ಕ್ಯಾ ಚಿತ್ರೋತ್ಸವ’ಕ್ಕೆ ನಾಮನಿರ್ದೇಶನಗೊಂಡಿದ್ದವು. ಭಾರತ ಸರಕಾರದಿಂದ ‘ಪದ್ಮಭೂಷಣ’ ಪ್ರಶಸ್ತಿಗೆ ಭಾಜನರಾಗಿದ್ದ ಕಪೂರ್, ಸ್ಟಾರ್‌ಡಸ್ಟ್‌ನ ‘ಸಹಸ್ರಮಾನದ ಅತ್ಯುತ್ತಮ ನಿರ್ದೇಶಕ’ ಹಾಗೂ ಸ್ಟಾರ್ ಸ್ಕ್ರೀನ್‌ನ ‘ಶೋಮ್ಯಾನ್ ಆಫ್ ದಿ ಮಿಲೇನಿಯಮ’ ಪ್ರಶಸ್ತಿಗೂ ಭಾಜನರಾಗಿದ್ದರು.
ಮೇರು ಹಾಸ್ಯನಟ ಚಾರ್ಲಿ ಚಾಪ್ಲಿನ್ ಅವರಿಂದ ಪ್ರಭಾವಿತರಾಗಿದ್ದ ಆರ್‌ಕೆ, ಹಾಸ್ಯ ಪಾತ್ರಕ್ಕೆ ಮಾತ್ರ ಸೀಮಿತ ವಾಗದೆ, ನಿರ್ಮಾಪಕನಾಗಿ, ನಿರ್ದೇಶಕನಾಗಿ, ನಟನಾಗಿ, ಖಳನಾಯಕನ ಪಾತ್ರವೊಂದನ್ನು ಬಿಟ್ಟು, ಎಲ್ಲ ಬಗೆಯ ಪಾತ್ರಗಳಲ್ಲಿಯೂ ಸೈ ಎನಿಸಿಕೊಂಡರು. ನಿಜ, ಅವರು ಒಮ್ಮೆಯೂ ಖಳನಾಯಕನ ಪಾತ್ರದಲ್ಲಿ ಅಭಿನಯಿಸಲಿಲ್ಲ.
ಈಗಿನ ಪಾಕಿಸ್ತಾನದಲ್ಲಿರುವ ಪೇಶಾವರದಲ್ಲಿ ಜನಿಸಿದ ರಾಜ್ ಕಪೂರ್ ಅವರ ನಿಜವಾದ ಹೆಸರು ಸೃಷ್ಟಿನಾಥ್ಕಪೂರ್. ಅವರನ್ನು ರಣಬೀರ್ ರಾಜ್ ಕಪೂರ್ ಎಂದೂ ಕರೆಯುತ್ತಿದ್ದರು. ಈಗ ಹಿಂದಿ ಚಿತ್ರರಂಗದಲ್ಲಿ ನಾಯಕನಟನಾಗಿ ನಟಿಸುತ್ತಿರುವ ರಣಬೀರ್ ಕಪೂರ್, ಆ ಹೆಸರು ಪಡೆದುಕೊಂಡದ್ದು, ಅವರ ಅಜ್ಜ ಇದೇ ರಾಜ್ ಕಪೂರ್ ಅವರಿಂದ. ಆದರೆ ರಾಜ್ ಕಪೂರ್, ರಣಬೀರ್ ಹೆಸರನ್ನು ಬಿಟ್ಟು ಸಿನಿಮಾಗೋಸ್ಕರ ‘ರಾಜ್’ ಹೆಸರನ್ನು ಮಾತ್ರ ಬಳಸಿದರು.
ರಾಜ್ ಕಪೂರ್ ಹನ್ನೆರಡನೆಯ ವಯಸ್ಸಿನಲ್ಲಿಯೇ ಬಾಲನಟನಾಗಿ ಹಿಂದಿ ಚಿತ್ರೋದ್ಯಮವನ್ನು ಪ್ರವೇಶಿಸಿದರು. ಮುಂದಿನ ಹನ್ನೆರಡು ವರ್ಷಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ, 1947ರಲ್ಲಿ ಮಧುಬಾಲಾ ಜತೆಗೆ ಅಭಿನಯಿಸಿದ ‘ನೀಲ್‌ಕಮಲ’ ಚಿತ್ರದಿಂದ ದೊಡ್ಡ ಹೆಸರು ಮಾಡಿದರು. ಅದಾಗಿ ಒಂದು ವರ್ಷದಲ್ಲಿ, 24ನೆಯ ವಯಸ್ಸಿನಲ್ಲಿ ಅವರು ತಮ್ಮದೇ ಆದ ‘ಆರ್‌ಕೆ’ ಸ್ಟುಡಿಯೋ ಸ್ಥಾಪಿಸಿ, ಅವರ ಕಾಲದ ಅತ್ಯಂತ ಕಿರಿಯ ನಿರ್ಮಾಪಕ ಮತ್ತು ನಿರ್ದೇಶಕ ಎಂಬ ಕೀರ್ತಿಗೆ ಪಾತ್ರರಾದರು.
‘ಆಗ್’ ಚಿತ್ರದ ಮೂಲಕ ನಿರ್ದೇಶಕರಾದ ಆರ್‌ಕೆ, ‘ಹೀನಾ’ ಚಿತ್ರವನ್ನು ನಿರ್ದೇಶಿಸಬೇಕಾಗಿತ್ತು. ನಂತರ ‘ಮೇಕಪ್ ಉತಾರೋ’ ಎಂಬ ಚಿತ್ರವನ್ನು ಕೂಡ ನಿರ್ಮಿಸುವ ಯೋಜನೆಯನ್ನು ಅವರು ಹೊಂದಿದ್ದರು. ಆದರೆ ಅದಕ್ಕಿಂತ ಮೊದಲೇ ಈ ಲೋಕವನ್ನು ತ್ಯಜಿಸಿದರು. 1988ರಲ್ಲಿ ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ಪಡೆಯಲು ಸಭಾಂಗಣಕ್ಕೆ ಬಂದಿದ್ದ ಅವರಿಗೆ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬರಲಾಗಲಿಲ್ಲ.
ಆಗ ಅವರು ಅಸ್ತಮಾದಿಂದ ಬಳಲುತ್ತಿದ್ದರು. ಆದರೂ ಆಕ್ಸಿಜನ್ ಸಿಲಿಂಡರ್ ಜತೆಗೆ ಸಭಾಂಗಣದವರೆಗೆ ಬಂದರು.ಭದ್ರತೆಯ ಕಾರಣದಿಂದ ಆಕ್ಸಿಜನ್ ಸಿಲಿಂಡರ್ ಅನ್ನು ಒಳಗೆ ಬಿಡಲಾಗದ ಕಾರಣ, ಹೊರಗೇ ಬಿಡಬೇಕಾಯಿತು. ಫಾಲ್ಕೆ ಪ್ರಶಸ್ತಿ ಸ್ವೀಕರಿಸಲು ರಾಜ್ ಕಪೂರ್ ಅವರನ್ನು ವೇದಿಕೆಗೆ ಕರೆಯುವ ಹೊತ್ತಿಗೆ ಅವರು ತೀರಾ ಅಸ್ವಸ್ಥ ರಾಗಿದ್ದರು. ಪ್ರಶಸ್ತಿ ಪಡೆಯಲು ತಮ್ಮ ಪತ್ನಿಯನ್ನು ವೇದಿಕೆಗೆ ಕಳುಹಿಸಿಕೊಟ್ಟರು.
ಅಲ್ಲಿಂದ ಹೊರಟು ಆಸ್ಪತ್ರೆಗೆ ದಾಖಲಾಗಿ, ಒಂದು ತಿಂಗಳು ಮೃತ್ಯುವಿನೊಂದಿಗೆ ಸೆಣಸಿದರು. ಶ್ವಾಸಕೋಶ, ಮೂತ್ರ ಕೋಶ ಇತ್ಯಾದಿ ಒಂದೊಂದೇ ಅಂಗ ಮೃತ್ಯುವಿನ ಪಕ್ಷ ಸೇರಿಕೊಂಡವು. ಭಾರತೀಯ ಚಿತ್ರೋದ್ಯಮದ ಆಗಸದಿಂದ ರಾಜ್ ಕಪೂರ್ ಎಂಬ ನಕ್ಷತ್ರ ಕಳಚಿ ಬಿತ್ತು. ರಾಜ್ ಕಪೂರ್ ಇನ್ನಷ್ಟು ವರ್ಷ ಬದುಕಬೇಕಿತ್ತು. ಈಗಲೂ ಹೇಳುತ್ತೇನೆ, ಇತೀಚೆಗೆ ಬಿಡುಗಡೆ ಯಾಗುವ ಅಬ್ಬರದ ಚಿತ್ರಗಳ ನಡುವೆ ರಾಜ್ ಕಪೂರ್ ಅವರ ‘ಆಗ್’, ‘ಆಹ್’ನಂಥ ಚಿತ್ರಗಳನ್ನುನೋಡಬೇಕು. ಕಪ್ಪು ಬಿಳುಪು ಚಿತ್ರವೇ ಆದರೂ ಅದೊಂದು ಬೇರೆಯದೇ ಲೋಕ.
ಕತೆ, ಸಂಗೀತ ಎಲ್ಲವನ್ನೂ ಒಳಗೊಂಡ ಭರಪೂರ ಭಕ್ಷ್ಯ. ಹಳೆಯ ಸಿನಿಮಾಗಳ ಸೊಗಡೇ ಬೇರೆ. ‘ರಾಜ್ ಕಪೂರ್’ ಎಂಬ ಮಹಾನ್ ಚೇತನ ಬದುಕಿದ್ದಿದ್ದರೆ, ಮೊನ್ನೆ ಡಿಸೆಂಬರ್ 14 ರಂದು ಅವರಿಗೆ ನೂರು ವರ್ಷ ಆಗಿರುತ್ತಿತ್ತು!
ಇದನ್ನೂ ಓದಿ: kiranupadhyay