ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prakash Shesharagavachar Column: ಕುಲದೀಪ್‌ ಸಿಂಗ್‌ ಸೆಂಗಾರ್‌ ಬಿಜೆಪಿಯ ಪಾಪದ ಕೂಸಲ್ಲ

ಉತ್ತರ ಪ್ರದೇಶದ ಉನ್ನಾವ್ ಕ್ಷೇತ್ರದ ಮಾಜಿ ಶಾಸಕ, ಅತ್ಯಾಚಾರಿ ಕುಲದೀಪ್ ಸಿಂಗ್ ಸೆಂಗಾರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಇವನನ್ನು ಮುಂದಿಟ್ಟುಕೊಂಡು ಬಿಜೆಪಿಯ ಮೇಲೆ ಹರಿಹಾಯುತ್ತಿರು ವವರ ಸಂಖ್ಯೆಯು ಕಡಿಮೆಯೇನಿಲ್ಲ. ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ನಡೆಸಿದ ಅತ್ಯಾಚಾರ ಮತ್ತು ಸಾಕ್ಷಿಗಳನ್ನು ಕೊಂದ ಆಪಾದನೆಯ ಮೇಲೆ ಜೀವಾವಧಿ ಶಿಕ್ಷೆ ಹಾಗೂ ಹತ್ತು ವರ್ಷದ ಶಿಕ್ಷೆ ಯನ್ನು ಈತ ಒಟ್ಟೊಟ್ಟಿಗೆ ಅನುಭವಿಸುತ್ತಿದ್ದಾನೆ.

ಕುಲದೀಪ್‌ ಸಿಂಗ್‌ ಸೆಂಗಾರ್‌ ಬಿಜೆಪಿಯ ಪಾಪದ ಕೂಸಲ್ಲ

-

Ashok Nayak
Ashok Nayak Jan 3, 2026 8:38 AM

ಪ್ರಕಾಶಪಥ

ಪ್ರಕಾಶ್‌ ಶೇಷರಾಘವಾಚಾರ್

ರಾಜಕೀಯದಲ್ಲಿ ಗೆಲುವಿನ ಸರದಾರರಿಗೆ ಎಲ್ಲಿಲ್ಲದ ಮಣೆ ಹಾಕುವುದು ಸಾಮಾನ್ಯ. ಯುಪಿ ಯಂಥ ರಾಜ್ಯದಲ್ಲಿ ಜಾತಿಬಲ, ಬಾಹುಬಲ ಇರುವವರು ರಾಜಕೀಯದಲ್ಲಿ ತಮ್ಮ ಪ್ರಾಬಲ್ಯ ಸಾಧಿಸುವುದು ಅನೇಕ ದಶಕಗಳಿಂದ ನಡೆಯುತ್ತಿದೆ. ದೌರ್ಭಾಗ್ಯವೆಂದರೆ ಇಂಥ ಸಮಾಜ ಘಾತುಕರನ್ನು ಮತದಾರರು ಮತ್ತೆಮತ್ತೆ ಗೆಲ್ಲಿಸುವ ಕಾರಣದಿಂದ ಇವರ ಅಟ್ಟಹಾಸಕ್ಕೆ ಅಂಕೆ ಇಲ್ಲದಂತಾಗಿದೆ.

ಬಿಜೆಪಿಯು ಪ್ರವರ್ಧಮಾನಕ್ಕೆ ಬರುತ್ತಿದ್ದ ದಿನದಲ್ಲಿ, ಮಾಧ್ಯಮಗಳು ಬಿಜೆಪಿಯ ಸಣ್ಣ ಪುಟ್ಟ ತಪ್ಪುಗಳನ್ನು ವೈಭವೀಕರಿಸಿ ಬರೆಯುತ್ತಿದ್ದವು. ಇದರ ಕುರಿತು ಆಡ್ವಾಣಿಯವರು, “ಶ್ವೇತವಸ್ತ್ರದ ಮೇಲೆ ಸಣ್ಣ ಕರೆಯಾದರೂ ಅದು ಎದ್ದು ಕಾಣುತ್ತದೆ; ಹಾಗೆಯೇ ಬಿಜೆಪಿಯವರು ಮಾಡುವ ಸಣ್ಣ ತಪ್ಪಿಗೂ ದೊಡ್ಡದಾಗಿ ಪ್ರಚಾರವಾಗುತ್ತದೆ" ಎಂದು ಹೇಳುತ್ತಿದ್ದರು. ಅವರ ಮಾತು ಇಂದಿಗೂ ಪ್ರಸ್ತುತವಾಗಿದೆ.

ಬಿಜೆಪಿಯ ಆಳ-ಅಗಲ ಹೆಚ್ಚಾದಂತೆ ಹೊರಗಿನಿಂದ ಒಳಬರುವ ನೀರಿನ ಹರಿವು ಮಿತಿಮೀರಿ ಹೋಗಿದೆ. ಚುನಾವಣೆಯ ಗೆಲುವಿಗಾಗಿ ಹೊಸ ಮುಖಗಳನ್ನು ಸೇರ್ಪಡೆ ಮಾಡಿಕೊಂಡಾಗ ಸೈದ್ಧಾಂತಿಕ ಬದ್ಧತೆಯುಳ್ಳವರ ಸಂಖ್ಯೆಯು ಕುಗ್ಗುವುದು ಸಹಜ. ರಾಜಕೀಯದಲ್ಲಿ ವಾಸ್ತವಿಕತೆಗೆ ಅನುಗುಣವಾಗಿ ಇಂಥ ಬೆಳವಣಿಗೆಯು ಅನಿವಾರ್ಯವೂ ಹೌದು.‌

ಉತ್ತರ ಪ್ರದೇಶದ ಉನ್ನಾವ್ ಕ್ಷೇತ್ರದ ಮಾಜಿ ಶಾಸಕ, ಅತ್ಯಾಚಾರಿ ಕುಲದೀಪ್ ಸಿಂಗ್ ಸೆಂಗಾರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಇವನನ್ನು ಮುಂದಿಟ್ಟು ಕೊಂಡು ಬಿಜೆಪಿಯ ಮೇಲೆ ಹರಿಹಾಯು ತ್ತಿರುವವರ ಸಂಖ್ಯೆಯು ಕಡಿಮೆಯೇನಿಲ್ಲ. ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ನಡೆಸಿದ ಅತ್ಯಾಚಾರ ಮತ್ತು ಸಾಕ್ಷಿಗಳನ್ನು ಕೊಂದ ಆಪಾದನೆಯ ಮೇಲೆ ಜೀವಾವಧಿ ಶಿಕ್ಷೆ ಹಾಗೂ ಹತ್ತು ವರ್ಷದ ಶಿಕ್ಷೆಯನ್ನು ಈತ ಒಟ್ಟೊಟ್ಟಿಗೆ ಅನುಭವಿಸುತ್ತಿದ್ದಾನೆ. ಆಶ್ಚರ್ಯಕರ ಬೆಳವಣಿಗೆಯಲ್ಲಿ ದೆಹಲಿ ಹೈಕೋರ್ಟ್ ಇವನಿಗೆ ಷರತ್ತುಬದ್ಧ ಜಾಮೀನು ನೀಡಿದ್ದು ಇವನ ಅಪರಾಧ ಕೃತ್ಯ ಮತ್ತೆ ಮುನ್ನೆಲೆಗೆ ಬಂದಿತು. ವಿಪರ್ಯಾಸವೆಂದರೆ, ಜಾಮೀನು ನೀಡಿದ್ದು ನ್ಯಾಯಾಲಯವಾದರೂ, ಟೀಕಾಪ್ರಹಾರಕ್ಕೆ ಒಳಗಾಗಿದ್ದು ಬಿಜೆಪಿ.

ಕುಲದೀಪ್ ಸಿಂಗ್ ಸೆಂಗಾರ್ ಉತ್ತರ ಪ್ರದೇಶದ ಪ್ರಬಲ ಠಾಕೂರ್ ಸಮುದಾಯಕ್ಕೆ ಸೇರಿದವನು. ಉನ್ನಾವ್ ಜಿಲ್ಲೆಯ ಬಲಾಢ್ಯ ಹಾಗೂ ಪ್ರಭಾವಿ ರಾಜಕಾರಣಿ. 1990ರಲ್ಲಿ, ಸೆಂಗಾರ್ ರಾಜಕೀಯ ಮೊಳಕೆಯೊಡೆದಿದ್ದು ಕಾಂಗ್ರೆಸ್ಸಿನಲ್ಲಿ. ಯುಪಿಯಲ್ಲಿ ಕಾಂಗ್ರೆಸ್ ಅಪ್ರಸ್ತುತವಾದ ನಂತರ ಬಿಎಸ್‌ಪಿಗೆ ತನ್ನ ಕ್ಯಾಂಪ್ ಬದಲಾಯಿಸಿದ.

ಇದನ್ನೂ ಓದಿ: Prakash Shesharagavachar Column: ಮುಂದುವರಿದಿರುವ ಸರಣಿ ಅಚ್ಚರಿಯ ಆಯ್ಕೆಗಳು

2002ರಲ್ಲಿ ಬಿಎಸ್‌ಪಿಯಿಂದ ಶಾಸಕ, 2007ರಲ್ಲಿ ಸಮಾಜವಾದಿ ಪಾರ್ಟಿಯಿಂದ ಎರಡು ಬಾರಿ ಶಾಸಕನಾದ. ಉನ್ನಾವ್ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತನ್ನ ಪತ್ನಿಗೆ ಟಿಕೆಟ್ ನೀಡಲಿಲ್ಲ ಎಂದು ಆಕೆಯನ್ನು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಿಸಿ ಜಯ ಸಾಧಿಸಿದ.

ತತ್ಪರಿಣಾಮವಾಗಿ, ಸಮಾಜವಾದಿ ಪಕ್ಷದಿಂದ ಅವನಿಗೆ ಗೇಟ್‌ಪಾಸ್ ನೀಡಲಾಯಿತು. ಉನ್ನಾವ್ ಜಿಲ್ಲೆಯಲ್ಲಿನ ಇವನ ಹಿಡಿತ ಹಾಗೂ ಜನಬೆಂಬಲವನ್ನು ನೋಡಿ 2017ರಲ್ಲಿ ಬಿಜೆಪಿಯ ಬಾಗಿಲು ತೆರೆಯಲಾಯಿತು. 2017ರ ವಿಧಾನಸಭಾ ಚುನಾವಣೆಯಲ್ಲಿ ಈತನಿಗೆ ಬಂಗಾರ್ ಮಾವ್ ಕ್ಷೇತ್ರದಿಂದ ಟಿಕೆಟ್ ನೀಡಲಾಯಿತು. ಅಲ್ಪಸಂಖ್ಯಾತರ ಬಾಹುಳ್ಯದ ಈ ಕ್ಷೇತ್ರವನ್ನು ಮೊದಲಬಾರಿಗೆ ಬಿಜೆಪಿ ಗೆದ್ದಿತು.

ಸೆಂಗಾರ್ ಬಿಜೆಪಿಯ ಪಾಪದ ಕೂಸಲ್ಲ; ಈತ ಸರ್ವ ಪಕ್ಷದಲ್ಲೂ ಅನುಭವ ಪಡೆದು ಅಂತಿಮವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದು. ಎರಡೇ ವರ್ಷದಲ್ಲಿ ಇವನನ್ನು ಪಾರ್ಟಿಯಿಂದ ಉಚ್ಚಾಟನೆ ಮಾಡಲಾಯಿತು. ಆದರೆ, ಒಮ್ಮೆ ಸೆಂಗಾರ್‌ನನ್ನು ಶಾಸಕನಾಗಿ ಮಾಡಿದ್ದ ತಪ್ಪಿಗೆ ಬಿಜೆಪಿಯು ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವುದು ಸಹಜ.

ಉತ್ತರ ಪ್ರದೇಶ ರಾಜಕಾರಣದ ಪ್ರಮುಖ ಅಸ್ತ್ರವೆಂದರೆ ಜಾತಿ ಮತ್ತು ತೋಳ್ಬಲ. ಇಲ್ಲಿ ಸೋಲು-ಗೆಲುವು ನಿರ್ಧಾರವಾಗುವುದು ಇದರ ಆಧಾರದ ಮೇಲೆಯೇ. ತನ್ನ ಜಾತಿಯ ಮತ್ತು ತೋಳ್ಬಲದ ಪ್ರಭಾವದಿಂದ ಕುಲದೀಪ್ ಸೆಂಗಾರ್ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾದ. ಈ ನಾಲ್ಕು ಬಾರಿಯಲ್ಲಿ ಮೂರು ಬಾರಿ ಬೇರೆ ಬೇರೆ ಕ್ಷೇತ್ರಗಳಿಂದ ಗೆದ್ದವನು ಎಂದರೆ ಇವನ ಪ್ರಭಾವದ ಆಳ ಊಹಿಸಿ.

2017ರಲ್ಲಿ ವಿಧಾನಸಭೆಗೆ ಗೆದ್ದ ಹೊಸದರಲ್ಲಿ ತನ್ನ ಬಳಿ ಕೆಲಸ ಕೇಳಿಕೊಂಡು ಬಂದಿದ್ದ ಹದಿನಾರು ವರ್ಷದ ಹುಡುಗಿಯ ಮೇಲೆ ಈತ ಅತ್ಯಾಚಾರವೆಸಗಿದ. ಆ ಸಂತ್ರಸ್ತೆಯು ಇವನ ಗೂಂಡಾಗಿರಿಗೆ ಬೆದರದೆ ದೂರು ದಾಖಲಿಸಿದಳು. ಈ ದೂರಿನ ಆಧಾರದ ಮೇಲೆ ಇವನ ಬಂಧನವಾಯಿತು.

ತನಿಖೆಯು ಹಾದಿ ತಪ್ಪಿದಾಗ ಸಂತ್ರಸ್ತೆಯ ತಾಯಿ ಸುಪ್ರೀಂ ಕೋರ್ಟ್‌ನ ಬಾಗಿಲು ಬಡಿದರು. ಪ್ರಕರಣದ ಗಂಭೀರತೆಯನ್ನು ಹಾಗೂ ಆರೋಪಿಯ ಪ್ರಭಾವವನ್ನು ಗಮನದಲ್ಲಿರಿಸಿ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಯಿತು.

Screenshot_5 R

ಇವನು ಎಂಥ ಕ್ರೂರಿಯೆಂದರೆ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ತನ್ನ ವಿರುದ್ದದ ಸಾಕ್ಷ್ಯವನ್ನು ಅಳಿಸಲು ಸಂತ್ರಸ್ತೆ, ಆಕೆಯ ವಕೀಲ ಮತ್ತು ಇಬ್ಬರು ಸಂಬಂಧಿಕರು ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್‌ನಿಂದ ಡಿಕ್ಕಿ ಹೊಡೆಯುವಂತೆ ನೋಡಿಕೊಂಡ. ಪರಿಣಾಮ ಆಕೆಯ ಇಬ್ಬರು ಸಂಬಂಧಿ ಕರು ಸಾವನ್ನಪ್ಪಿದರು.

ಸಿನಿಮಾದಲ್ಲಿ ಇಂಥ ಘಟನೆಯನ್ನು ನೋಡಿದ್ದೆವು, ಅದು ನಿಜಜೀವನದಲ್ಲಿಯೂ ನಡೆಯುತ್ತದೆ ಎಂದು ಕುಲದೀಪ್ ಸೆಂಗಾರ್ ಮಾಡಿ ತೋರಿಸಿದ. ಜಿಲ್ಲಾ ಆಡಳಿತವು ಕುಲದೀಪ್ ಸೆಂಗಾರ್‌ನ ದೌರ್ಜನ್ಯಕ್ಕೆ ತಲೆಬಾಗಿ ನಿಂತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಮೊಕದ್ದಮೆಯನ್ನು ದೆಹಲಿಗೆ ವರ್ಗಾಯಿಸಿತು. ತನಿಖೆಯನ್ನು ಕಾಲಮಿತಿಯಲ್ಲಿ ಕೈಗೊಳ್ಳುವಂತೆ ಸಿಬಿಐಗೆ ಆದೇಶಿಸಿತು.

ಕುಲದೀಪ್ ಸೆಂಗಾರ್‌ಗೆ, ಸಾಕ್ಷಿಗಳ ಕೊಲೆಯ ಪ್ರಕರಣದಲ್ಲಿ ಹತ್ತು ವರ್ಷ ಮತ್ತು ಅಪ್ರಾಪ್ತ ವಯಸ್ಸಿ ನವಳ ಮೇಲೆ ನಡೆಸಿದ ಅತ್ಯಾಚಾರ ಸಾಬೀತಾಗಿದ್ದರಿಂದ ಜೀವಾವಧಿ ಶಿಕ್ಷೆಯ ಘೋಷಣೆ ಯಾಯಿತು. ಇವನ ಸಹೋದರ ಮನೋಜ್ ಸಿಂಗ್ ಸೆಂಗಾರ್, ಶಶಿ ಸಿಂಗ್ ಅವರಿಗೆ ಹತ್ತು ವರ್ಷ ಶಿಕ್ಷೆಯಾಯಿತು.

ರಾಜಕೀಯದಲ್ಲಿ ಗೆಲುವಿನ ಸರದಾರರಿಗೆ ಎಲ್ಲಿಲ್ಲದ ಮಣೆ ಹಾಕುವುದು ಸಾಮಾನ್ಯ. ಯುಪಿಯಂಥ ರಾಜ್ಯದಲ್ಲಿ ಜಾತಿಬಲ, ಬಾಹುಬಲ ಇರುವವರು ರಾಜಕೀಯದಲ್ಲಿ ತಮ್ಮ ಪ್ರಾಬಲ್ಯ ಸಾಧಿಸುವುದು ಅನೇಕ ದಶಕಗಳಿಂದ ನಡೆಯುತ್ತಿದೆ. ದೌರ್ಭಾಗ್ಯವೆಂದರೆ ಇಂಥ ಸಮಾಜಘಾತುಕರನ್ನು ಮತದಾ ರರು ಮತ್ತೆಮತ್ತೆ ಗೆಲ್ಲಿಸುವ ಕಾರಣದಿಂದ ಇವರ ಅಟ್ಟಹಾಸಕ್ಕೆ ಅಂಕೆ ಇಲ್ಲದಂತಾಗಿದೆ.

ಅಕ್ರಮ ಗಣಿಗಾರಿಕೆ, ಹಣ ಸುಲಿಗೆ ಮತ್ತು ಸರಕಾರಿ ಗುತ್ತಿಗೆಯಲ್ಲಿ ಸಿಂಹಪಾಲು ಪಡೆದುಕೊಂಡು ಉನ್ನಾವ್ ಜಿಲ್ಲೆಯನ್ನು ತನ್ನ ಕೈವಶ ಮಾಡಿಕೊಂಡಿದ್ದ ಸೆಂಗಾರ್ ಅದೆಷ್ಟು ಜನರ ಬಾಳು ಹಾಳು ಮಾಡಿದ್ದನೊ ಊಹೆಗೂ ನಿಲುಕದ್ದು. ಇವನ ದೌರ್ಜನ್ಯದ ವಿರುದ್ದ ಸೊತ್ತಲು ಧೈರ್ಯವಿಲ್ಲದೆ ಜನರು ಇವನ ಉಪಟಳವನ್ನು ಸಹಿಸಿಕೊಂಡಿದ್ದರು.

ಇವನೊಬ್ಬ ಕುಖ್ಯಾತ ಅಪರಾಧಿಯೆಂದು ತಿಳಿದಿದ್ದರೂ ಠಾಕೂರ್ ಸಮುದಾಯ ಇವನನ್ನು ಕಿಂದರಿಜೋಗಿಯ ಹಾಗೆ ಬೆಂಬಲಿಸುತ್ತಿದ್ದುದು ಪ್ರಜಾಪ್ರಭುತ್ವದ ಅಣಕವಾಗಿದೆ. 2002ರಿಂದ ಇವನ ದುರ್ವರ್ತನೆಗೆ ಯಾವುದೇ ಅಂಕುಶವಿರಲಿಲ್ಲ. ಎಸ್‌ಪಿ ಮತ್ತು ಬಿಎಸ್‌ಪಿ ಪಕ್ಷಗಳು ಇವನನ್ನು ಓಲೈಕೆ ಮಾಡಲು ಇವನ ಗೂಂಡಾಗಿರಿಗೆ ಬೆಂಬಲವಾಗಿ ನಿಂತಿದ್ದವು.

2017ರಲ್ಲಿ ಒಬ್ಬ ಯುವತಿಯು ಇವನ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಎದೆಗಾರಿಕೆ ತೋರಿದಳು. ಅವರ ಕುಟುಂಬ ಇದಕ್ಕಾಗಿ ಬಹುದೊಡ್ಡ ಬೆಲೆಯನ್ನು ತೆತ್ತಿದೆ. ಕಳೆದ ಆರು ವರ್ಷದಿಂದ ಜೈಲಿನಲ್ಲಿ ಕೊಳೆಯುತ್ತಿರುವ ಇವನ ಪ್ರಕರಣಕ್ಕೆ ದೆಹಲಿ ಹೈಕೋರ್ಟ್ ಆಶ್ಚರ್ಯಕರ ತಿರುವು ನೀಡಿ ಜಾಮೀನು ಮಂಜೂರು ಮಾಡಿತು. ಇದರ ವಿರುದ್ದ ಬಹುದೊಡ್ಡ ಆಕ್ರೋಶ ವ್ಯಕ್ತವಾಯಿತು.

ಇವನಿಗೆ ಜಾಮೀನು ದೊರೆತಿದ್ದರೂ ಮತ್ತೊಂದು ಪ್ರಕರಣದಲ್ಲಿ ಹತ್ತು ವರ್ಷ ಶಿಕ್ಷೆ ಅನುಭವಿಸು ತ್ತಿರುವ ಕಾರಣ ಹೊರಬರಲು ಸಾಧ್ಯವಿರಲಿಲ್ಲ. ಆದಾಗ್ಯೂ ಈ ಕುಖ್ಯಾತ ಅಪರಾಧಿಯ ಹಿನ್ನೆಲೆ ಯನ್ನು ಪರಿಗಣಿಸಿ ಇವನಿಗೆ ಜಾಮೀನು ನೀಡಬಾ ರದಿತ್ತು. ಮಹಿಳೆಯರ ಸುರಕ್ಷತೆಯು ಇತ್ತೀಚಿನ ದಿನಗಳಲ್ಲಿಅತ್ಯಂತ ಸೂಕ್ಷ್ಮ ವಿಚಾರವಾಗಿದೆ.

ಅಪರಾಧಿಗಳಿಗೆ, ಕುಲದೀಪ್ ಸೆಂಗಾರ್‌ಗೆ ದೊರೆತ ಹಾಗೆ ಶಿಕ್ಷೆಯು ತ್ವರಿತ ಗತಿಯಲ್ಲಿ ಸಿಗುವಂತಾಗ ಬೇಕು. ಅಪರಾಧ ಮಾಡುವವರಿಗೆ ಭಯವುಂಟಾಗುವ ಹಾಗೆ ನ್ಯಾಯಾಲಯ ಮತ್ತು ಪೊಲೀಸರ ನಡೆ ಇದ್ದಾಗ ಮಾತ್ರ ಮಹಿಳೆಯರಿಗೆ ನ್ಯಾಯ ದೊರೆಯುತ್ತದೆ. ಇವನ ಜಾಮೀನು ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಎತ್ತಿ ಹಿಡಿದು ಹೈಕೋರ್ಟ್ ನೀಡಿದ್ದ ಜಾಮೀನು ರದ್ದಾಗಿರುವುದು ಸಮಾಧಾನಕರ ಸಂಗತಿ.

ಕುಲದೀಪ್ ಸಿಂಗ್ ಬಿಜೆಪಿಯಲ್ಲಿ ಎರಡು ವರ್ಷವಿದ್ದ, ಆದರೂ ಯಾವ ಮುಲಾಜು ಇಲ್ಲದೆ ಇವನ ವಿರುದ್ದ ತನಿಖೆ ಕೈಗೊಂಡು ಅಪರಾಧವನ್ನು ಸಾಬೀತುಪಡಿಸಿದ್ದು ಸಿಬಿಐ. ದೆಹಲಿ ಕೋರ್ಟ್ ಜಾಮೀನು ನೀಡಿದ ತರುವಾಯ ಅದನ್ನು ವಿರೋಧಿಸಿ ಜಾಮೀನು ರದ್ದು ಮಾಡುವಂತೆ ಕ್ರಮ ಕೈಗೊಂಡಿದ್ದೂ ಸಿಬಿಐ ಎಂಬುದನ್ನು ಮರೆಯಬಾರದು.

ದೆಹಲಿ ಹೈಕೋರ್ಟ್ ಜಾಮೀನು ನೀಡಿದರೆ ಅದಕ್ಕೆ ಬಿಜೆಪಿಯನ್ನು ದೂಷಿಸಿ ಜನರ ದಾರಿ ತಪ್ಪಿಸುವ ರಾಜಕೀಯವು ನಡೆಯಿತು. ಕೃತಕ ಬುದ್ಧಿಮತ್ತೆ (ಎಐ) ಬಳಸಿ ರಚಿಸಿದ್ದ ಗ್ರಾಫಿಕ್ ಚಿತ್ರವನ್ನು ಸಚಿವ ಪ್ರಿಯಾಂಕ್ ಖರ್ಗೆಯವರು ಹಂಚಿಕೊಂಡು ಬಿಜೆಪಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಹೋಗಿ ಮುಖಭಂಗಕ್ಕೆ ಒಳಗಾಗಿ, ತಮ್ಮ ಟ್ವೀಟ್ ಅನ್ನು ಅಳಿಸಬೇಕಾಯಿತು.

ಮಹಿಳೆಗಾದ ಅನ್ಯಾಯವನ್ನು ಕಾಂಗ್ರೆಸ್ ಪಕ್ಷವು ರಾಜಕೀಯ ಲಾಭಕ್ಕೆ ದುರ್ಬಳಕೆ ಮಾಡುವ ಸಣ್ಣತನವನ್ನು ತೋರಬಾರದಿತ್ತು. ಕರ್ನಾಟಕದ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ವಿನಯ್ ಕುಲಕರ್ಣಿ, 2016ರಲ್ಲಿ ಬಿಜೆಪಿ ಕಾರ್ಯಕರ್ತ ಯೋಗೇಶ್ ಗೌಡ ಅವರ ಕೊಲೆ ಪ್ರಕರಣ ಮತ್ತು ಇತ್ತೀಚೆಗೆ ಅತ್ಯಾಚಾರ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಗಮನಾರ್ಹ ಆರೋಪ ಗಳನ್ನು ಎದುರಿಸುತ್ತಿದ್ದಾರೆ.

ಗುರುತರ ಆರೋಪ ಹೊತ್ತಿದ್ದರೂ ಇವರಿಗೆ ಕಾಂಗ್ರೆಸ್ ಸರಕಾರವು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷಗಿರಿ ಮತ್ತು ರಾಜ್ಯ ಕಾಂಗ್ರೆಸ್ ಕಾರ್ಯಾ ಧ್ಯಕ್ಷರ ಸ್ಥಾನಮಾನವನ್ನು ನೀಡಿತು. ನ್ಯಾಯಾಲಯವು ಇವರಿಗೆ ನೀಡಿದ್ದ ಜಾಮೀನನ್ನು ರದ್ದು ಮಾಡಿ ಸೆರೆಮನೆಗೆ ಕಳುಹಿಸಿದ ಮೇಲೆ ಇವರ ಪತ್ನಿಯನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

ಆಶ್ಚರ್ಯವೆಂದರೆ ಈತನನ್ನು ಇಂದಿಗೂ ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗಿ ಮುಂದು ವರಿಸಿ ಅಪರಾಧೀಕರಣ ರಾಜಕಾರಣಕ್ಕೆ ಉತ್ತೇಜನ ನೀಡಲಾಗಿದೆ. ಗುಜರಾತಿನಲ್ಲಿ ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳನ್ನು ಅವಧಿಗೆ ಮುನ್ನವೇ ಬಿಡುಗಡೆ ಮಾಡಿದಾಗ, ಅವರಿಗೆ ಹಾರ ಹಾಕಿ ಸನ್ಮಾನಿಸಿ ಬಹುದೊಡ್ಡ ತಪ್ಪು ಎಸಗಲಾಗಿತ್ತು.

ಅಪರಾಧಿಗಳನ್ನು ಅಪರಾಧಿಗಳಾಗಿ ನೋಡಬೇಕೆ ವಿನಾ, ಅವರ ಅಪರಾಧಿಕ ಹಿನ್ನೆಲೆಯ ಪರಿಗಣನೆ ಯಾಗಬಾರದು. ಹಾಗಾದರೆ, ಭಯೋತ್ಪಾದಕರನ್ನು ವೈಭವೀಕರಿಸುವ ಶಕ್ತಿಗಳನ್ನು ವಿರೋಧಿಸುವ ನೈತಿಕತೆ ಇರುವುದಿಲ್ಲ. ರಾಜಕೀಯ ಪಕ್ಷಗಳು ಮಹಿಳಾ ಸುರಕ್ಷತೆಯ ವಿಷಯದಲ್ಲಿ ಗಟ್ಟಿಯಾದ ಮತ್ತು ರಾಜಿ ಇಲ್ಲದ ನಿಲುವನ್ನು ಕೈಗೊಳ್ಳಬೇಕಾಗಿದೆ.

ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಮಹಿಳಾ ಸುರಕ್ಷತೆ ಸೂಕ್ಷ್ಮವಾಗಿರುವ ಕಾರಣ, ಕಠಿಣವಾದ ನೀತಿಯ ಪರಿಪಾಲನೆಯು ಎಲ್ಲಾ ರಾಜಕೀಯ ಪಕ್ಷಗಳ ಪ್ರಥಮ ಕರ್ತವ್ಯವಾಗಬೇಕು.

(ಲೇಖಕರು ಬಿಜೆಪಿಯ ವಕ್ತಾರರು)