Dr Jagadeesh Angady Column: ಸುದ್ದಿ-ಸಂವಹನ ಕ್ಷೇತ್ರಗಳಲ್ಲಿ ಕನ್ನಡವು ಕುಣಿದಾಡಲಿ
ಲಂಕೇಶರು ಇಂಗ್ಲಿಷ್ ಪ್ರಾಧ್ಯಾಪಕ, ಕನ್ನಡ ಸಾಹಿತಿ ಮತ್ತು ಪತ್ರಕರ್ತರಾಗಿದ್ದುದರಿಂದ ಆ ಶೈಲಿಗೆ ಒಂದು ರೀತಿಯ ಅಧಿಕೃತತೆ ಒದಗಿಬಂತು. ಲಘು ಬರಹ, ಲಹರಿ ಹಾಗೂ ವಿಶ್ಲೇಷಣಾ ಬರಹಗಳಲ್ಲಿ ಈ ಪದ್ಧತಿ ರೂಢಿಗತವಾಯಿತು ಮತ್ತು ಅದು ಆಯಾ ಸಂದರ್ಭಗಳನ್ನು ಅರ್ಥ ಪೂರ್ಣವಾಗಿಸುತ್ತಿತ್ತು, ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳ ಸೂಕ್ಷ್ಮತೆ-ಶುದ್ಧತೆಯನ್ನು ಗೌರವಿಸು ವಂತಿತ್ತು ಎಂಬುದನ್ನು ಗಮನಿಸಬೇಕು.
-
ಕನ್ನಡ ಕಸ್ತೂರಿ
ಡಾ.ಜಗದೀಶ್ ಅಂಗಡಿ
ಇಂದು ಪ್ರಾಥಮಿಕ ಶಾಲೆಗಳಲ್ಲಿ ಭಾಷೆಯನ್ನು ಶಿಸ್ತುಬದ್ಧವಾಗಿ ಕಲಿಸುವ ಕ್ರಮ ವಿಲ್ಲ. ಭಾಷೆಯನ್ನೇ ಸರಿಯಾಗಿ ಕಲಿಯದ ಮಗು, ತನ್ನ ಚಿಂತನೆಗಳ ಅಭಿವ್ಯಕ್ತಿ ಯಲ್ಲಿ ಅಸಮರ್ಥವಾಗುತ್ತದೆ. ಕಳೆದ ಒಂದು ದಶಕದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳಲ್ಲಿ ಕಾಗುಣಿತ/ವ್ಯಾಕರಣ ದೋಷ, ತಪ್ಪು ಭಾಷಾಂತರದ ವರದಿ ಯಾಗುತ್ತಿರುವುದು, ಭಾಷೆ ಯನ್ನು ಸರಿಯಾಗಿ ಕಲಿಸದಿರುವುದರ ಪರಿಣಾಮವೇ.
ಕನ್ನಡ ರಾಜ್ಯೋತ್ಸವದ ಮಾಸವು ಕನ್ನಡತನದ ಅವಲೋಕನದ ಸಂದರ್ಭವನ್ನು ಮತ್ತೆ ಹೊತ್ತು ತಂದಿದೆ. ಭಾಷೆಯ ಬಳಕೆ, ಉಳಿಕೆ ಮತ್ತು ಬೆಳವಣಿಗೆಯಲ್ಲಿ ಸುದ್ದಿಮನೆ ಮತ್ತು ಸಂವಹನ ಕ್ಷೇತ್ರಗಳ ಪಾತ್ರ ನಿರ್ಣಾಯಕವಾಗಿರುತ್ತದೆ. ಸುದ್ದಿಮನೆಯಲ್ಲಿ ಕಾಣ ಬರುವ ‘ಪದಪ್ರಯೋಗ’ವು, ಅವನ್ನು ಉಪಯೋಗಿಸುವಂತೆ ಶ್ರೀಸಾಮಾನ್ಯರನ್ನು ಪ್ರೇರೇಪಿಸುತ್ತದೆ. ಆದರೆ, ಈ ಹೊಣೆಗಾರಿಕೆಯನ್ನು ಮಾಧ್ಯಮ ಸಂಸ್ಥೆಗಳು ಎಷ್ಟರ ಮಟ್ಟಿಗೆ ನಿಭಾಯಿಸು ತ್ತಿವೆ? ಎಂಬುದು ಯಕ್ಷಪ್ರಶ್ನೆ.
ಈ ಸಾಲುಗಳನ್ನೊಮ್ಮೆ ನೋಡಿ: ‘ಸಿಎಂಗೆ ಬಿಗ್ ರಿಲೀಫ್’, ‘ಅಸೆಂಬ್ಲಿಯಲ್ಲಿ ಹೈಡ್ರಾಮಾ’. ಇಲ್ಲಿ ‘ಗೆ’ ಹಾಗೂ ‘ಯಲ್ಲಿ’ ಮಾತ್ರ ಕನ್ನಡದವಾದರೆ, ಮಿಕ್ಕವು ಕನ್ನಡದ ಮುಖವಾಡವನ್ನು ಧರಿಸಿರುವ ಇಂಗ್ಲಿಷ್ ಅಭಿವ್ಯಕ್ತಿಗಳು! ಇದನ್ನು ‘ಭಾಷಾ ಕಲಬೆರಕೆ ಸಂಸ್ಕೃತಿ’ ಎಂದೇ ಗುರುತಿಸಬೇಕಾಗುತ್ತದೆ.
ಸಂದರ್ಭದ ಅಭಿವ್ಯಕ್ತಿಗೆ ಸೂಕ್ತ/ಸಮರ್ಥ ಕನ್ನಡ ಪದವು ಇಲ್ಲದಿದ್ದಾಗ, ತರ್ಜುಮೆ ಮಾಡಿ ದರೂ ಅದನ್ನು ಬಳಸಲು ಕ್ಲಿಷ್ಟವೆನ್ನಿಸಿದಾಗ ಅಥವಾ ಇಂಗ್ಲಿಷ್‌ನ ನಿರ್ದಿಷ್ಟ ಪದವೇ ಪರಿಣಾಮಕಾರಿ ಎನ್ನಿಸಿದಾಗ, ಅಂಥ ಇಂಗ್ಲಿಷ್ ಪದದ ಉಚ್ಚಾರಣೆಯನ್ನು ಕನ್ನಡದ ಅಕ್ಷರಗಳಲ್ಲಿ ರಚಿಸುವುದು ವಾಡಿಕೆ.
ಇದನ್ನೂ ಓದಿ: Narayana Yaaji Column: ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತುಗಳು
ಕನ್ನಡವು ವ್ಯಾಪಕವಾಗಲು ಈ ಪದ್ಧತಿಯು ಪೂರಕವೂ ಹೌದು. ಉದಾಹರಣೆಗೆ, ಬಸ್, ಪೊಲೀಸ್, ಲ್ಯಾಪ್‌ಟಾಪ್, ಪ್ಯಾನ್ ಇಂಡಿಯಾ ಮುಂತಾದವನ್ನು ತರ್ಜುಮೆ ಮಾಡುವು ದಕ್ಕಿಂತ ಈ ಪದ್ಧತಿಯಲ್ಲಿ ಪದಗಳನ್ನು ರಚಿಸಿ, ಅವನ್ನು ಕನ್ನಡ ಪದಗಳನ್ನಾಗಿ ಪರಿವರ್ತಿ ಸುವುದರಿಂದ ಕನ್ನಡ ಪದಕೋಶ ಹಿರಿದಾಗುತ್ತಾ ಹೋಗುತ್ತದೆ.
ಆದರೆ ಕೋರ್ಟ್, ಕೇಸ್, ರಿಯಾಲಿಟಿ, ಬರ್ತ್‌ಡೇ, ಸೆಂಚುರಿ, ಲಿರಿಕ್ಸ್, ಪ್ರಾಜೆಕ್ಟ್. ಮರ್ಡರ್, ಬ್ಯಾಕ್‌ಗ್ರೌಂಡ್ ಸ್ಕೋರ್ ಮುಂತಾದ ಇಂಗ್ಲಿಷ್ ಪದಗಳಿಗೆ ಕ್ರಮವಾಗಿ ನ್ಯಾಯಾಲಯ, ಪ್ರಕರಣ, ವಾಸ್ತವ/ವಾಸ್ತವಿಕತೆ, ಗೀತಸಾಹಿತ್ಯ, ಯೋಜನೆ, ಕೊಲೆ, ಹಿನ್ನೆಲೆ ಸಂಗೀತ ಮುಂತಾದ ಸಮರ್ಥ ಕನ್ನಡ ಪದಗಳು ಲಭ್ಯವಿರುವಾಗಲೂ ಬರಹದಲ್ಲಾಗಲೀ ಸುದ್ದಿ ವಾಚನದಲ್ಲಾಗಲೀ ಅವನ್ನು ಬಳಸುತ್ತಿಲ್ಲವೇಕೆ? ‘ಭಾಷಾ ಕಲಬೆರಕೆ ಸಂಸ್ಕೃತಿ’ಯ ಪದ ಬಳಕೆ ಎಷ್ಟು ಸರಿ? ಈ ಪದ್ಧತಿಯು ಕನ್ನಡ ಪದಗಳ ಅವಸಾನದ ಪ್ರತೀಕವಲ್ಲವೇ? ಕನ್ನಡ ಅಂಕಿಗಳ ಬಳಕೆಯು ಕ್ರಮೇಣ ಮರೆಯಾಗಿರುವುದನ್ನು ಈ ಹಿನ್ನೆಲೆಯಲ್ಲಿ ನೋಡಬೇಕು.
ಹಾಗೆ ನೋಡಿದರೆ, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮಾತ್ರ ಕನ್ನಡದ ಅಂಕಿಗಳು ಕಾಣು ತ್ತವೆ. ಎರಡು ದಶಕಗಳ ಹಿಂದೆ, ಇಂಗ್ಲಿಷ್ ಶಬ್ದಗಳನ್ನು ಇಂಗ್ಲಿಷ್ ಅಕ್ಷರಗಳಲ್ಲಿಯೇ ಬಳಸು ವ ಪದ್ಧತಿಯು ಹೆಚ್ಚಾಗಿ ಸಾಹಿತ್ಯ ಬರವಣಿಗೆಯಲ್ಲಿ ಇತ್ತು. ಇದು ಪಿ.ಲಂಕೇಶ್ ಅವರ ಕಾಲದಲ್ಲಿ ಜನಪ್ರಿಯವಾಗುತ್ತಾ ಹೋಯಿತು.
ಲಂಕೇಶರು ಇಂಗ್ಲಿಷ್ ಪ್ರಾಧ್ಯಾಪಕ, ಕನ್ನಡ ಸಾಹಿತಿ ಮತ್ತು ಪತ್ರಕರ್ತರಾಗಿದ್ದುದರಿಂದ ಆ ಶೈಲಿಗೆ ಒಂದು ರೀತಿಯ ಅಧಿಕೃತತೆ ಒದಗಿಬಂತು. ಲಘು ಬರಹ, ಲಹರಿ ಹಾಗೂ ವಿಶ್ಲೇಷಣಾ ಬರಹಗಳಲ್ಲಿ ಈ ಪದ್ಧತಿ ರೂಢಿಗತವಾಯಿತು ಮತ್ತು ಅದು ಆಯಾ ಸಂದರ್ಭಗಳನ್ನು ಅರ್ಥಪೂರ್ಣವಾಗಿಸುತ್ತಿತ್ತು, ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳ ಸೂಕ್ಷ್ಮತೆ-ಶುದ್ಧತೆಯನ್ನು ಗೌರವಿಸುವಂತಿತ್ತು ಎಂಬುದನ್ನು ಗಮನಿಸಬೇಕು.
ಆದರೆ, ‘ಭಾಷಾ ಕಲಬೆರಕೆ ಸಂಸ್ಕೃತಿ’ಯಲ್ಲಿ ಇಂಗ್ಲಿಷ್ ಪದಗಳ ವಿಲಕ್ಷಣ ಉಚ್ಚಾರವನ್ನು ಬರೆಯುವ ಮೂಲಕ ಮತ್ತೊಂದು ತಪ್ಪನ್ನು ಎಸಗಲಾಗುತ್ತಿದೆ. ‘ತ್ರಿಬಲ್’ ಎಂಬ ಪದಬಳಕೆ ಇದಕ್ಕೊಂದು ಉದಾಹರಣೆ, ‘ಟ್ರಿಪ್ಲ್’ ಎಂಬುದು ಸರಿಯಾದ ಉಚ್ಚಾರ. ಅಂತೆಯೇ, ಇಂಗ್ಲಿಷ್ ನಲ್ಲಿ ಇಲ್ಲದ ಪದಗಳ ಉಚ್ಚಾರವನ್ನು ಕನ್ನಡದಲ್ಲಿ ಬರೆಯಲಾಗುತ್ತಿದೆ.
ಉದಾಹರಣೆಗೆ- ‘ಡಿಜಿಟಲೀಕರಣ’. ಭಾಷಾ ಶುದ್ಧತೆಯ ಬಗ್ಗೆ ಸಂವೇದನಾರಹಿತರಾದಾಗ ಇಂಥ ತಪ್ಪುಗಳು ಜರುಗುತ್ತವೆ. ‘ರೂಢಿಯಲ್ಲಿರುವ ಪದವನ್ನು ಬಳಸುವುದು ತಪ್ಪಲ್ಲ’ ಎಂಬ ವಾದವನ್ನು ‘ಭಾಷಾ ಕಲಬೆರಕೆ ಸಂಸ್ಕೃತಿ’ಗೆ ಪೂರಕವಾಗಿ ಮಂಡಿಸಲಾಗುತ್ತಿದೆ.
ಸಾಮಾನ್ಯರು ಹೀಗೆ ತಪ್ಪು ಪದಪ್ರಯೋಗ/ತಪ್ಪು ಉಚ್ಚಾರಣೆಗೆ ಮುಂದಾದರೆ ಅದು ಕ್ಷಮೆಗೆ ಅರ್ಹ, ಆದರೆ ಇದೇ ಮಾತನ್ನು ಸುದ್ದಿಮನೆಗಳಿಗೂ ಅನ್ವಯಿಸಲಾಗದು. ಏಕೆಂದರೆ, ಸರಿಯಾದ ಪದಪ್ರಯೋಗವು ಸುದ್ದಿಮನೆಯ ಜವಾಬ್ದಾರಿಗಳಲ್ಲೊಂದು. ಶಸ್ತ್ರಚಿಕಿತ್ಸೆ ಮಾಡುವ ವೈದ್ಯ ತನ್ನ ಕಸುಬಿನಲ್ಲಿ ಸಂವೇದನಾರಹಿತನಾದಾಗ ರೋಗಿಗೆ ತೊಂದರೆ ಯಾಗುವುದು ನಿಶ್ಚಿತ; ಅಂತೆಯೇ ಸರಿಯಾದ ಪದಬಳಕೆಯ ವಿಷಯದಲ್ಲಿ ಪತ್ರಕರ್ತ ಸಂವೇದನಾರಹಿತನಾದಾಗ, ಭಾಷೆಯ ಅವನತಿ ಖಚಿತ.
ತಂತ್ರಜ್ಞಾನ, ಮಾಧ್ಯಮ ಹಾಗೂ ಭಾಷೆಯ ನಡುವೆ ಸೂಕ್ಷ್ಮವಾದ ಸಂಬಂಧವಿದೆ. ಸ್ಥೂಲ ವಾಗಿ ಹೇಳುವುದಾದರೆ, ಕಳೆದ ಎರಡೂವರೆ ದಶಕಗಳಲ್ಲಿ ‘ಭಾಷಾ ಕಲಬೆರಕೆ’ಯು ಮೂರು ಹಂತಗಳಲ್ಲಾಗಿದೆ. ಎ-.ಎಂ. ರೇಡಿಯೋ ಸಂಸ್ಕೃತಿ ಪರಿಚಯವಾದಾಗ ಬಳಕೆಯಲ್ಲಿದ್ದ ಶುದ್ಧ ಕನ್ನಡದ ಬದಲು ಇಂಗ್ಲಿಷ್ ಪದಗಳನ್ನು ಮುನ್ನೆಲೆಗೆ ತರಲಾಯಿತು, ಇದು ಮೊದಲ ಹಂತ.
ಜಾಗತೀಕರಣವು ವ್ಯಾಪಕವಾಗುತ್ತಿದ್ದ ಈ ಅವಧಿಯಲ್ಲಿ ಈ ಸಂಸ್ಕೃತಿಗೆ, ವಾಣಿಜ್ಯಿಕ ಕಾರಣ ಗಳಿಗಾಗಿ ಯುವಜನರನ್ನು ಹೆಚ್ಚು ತಲುಪುವುದು ಅನಿವಾರ್ಯವಾಗಿತ್ತು. ಕನ್ನಡ ಪದ ಗಳನ್ನು ಬಳಸಿಯೂ ಈ ಗುರಿಗಳನ್ನು ತಲುಪಲು ಸಾಧ್ಯವಿತ್ತು; ಆದರೆ, ‘ಬಹುಭಾಷಿಕ ರಿರುವ ಬೆಂಗಳೂರು ನಗರದಲ್ಲಿ ಇದು ಸಾಧ್ಯವಿಲ್ಲ’ ಎಂಬ ಢೋಂಗಿ ಸಮರ್ಥನೆಯನ್ನು ನೀಡಲಾಯಿತು. ತೊಂಬತ್ತರ ದಶಕದಲ್ಲಿ ‘ಆಕಾಶವಾಣಿ’ಗಳಲ್ಲಿ ಬಳಕೆಯಾಗುತ್ತಿದ್ದ ಕನ್ನಡಕ್ಕೂ, ಖಾಸಗಿ ಎಫ್.ಎಂ. ರೇಡಿಯೋತ್ತರ ಅವಧಿಯಲ್ಲಿ ಈ ಕೇಂದ್ರಗಳಲ್ಲಿ ಬಳಕೆ ಯಾಗುತ್ತಿರುವ ಕನ್ನಡಕ್ಕೂ ಭೂಮಿ-ಆಕಾಶದಷ್ಟು ಅಂತರವಿದೆ.
ಇಂದು ದೂರದರ್ಶನದ ಉದ್ಘೋಷದ ಕನ್ನಡವೂ ಇದಕ್ಕಿಂತ ಭಿನ್ನವಾಗಿಲ್ಲ. ಸುದ್ದಿ ವಾಹಿನಿಗಳ ‘ಹಾವಳಿ’ಯ ನಂತರದ ಎರಡನೇ ಹಂತದಲ್ಲಿ, ಒಂದೂವರೆ ದಶಕದಿಂದ ಈಚೆಗೆ ‘ಕಲಬೆರಕೆ ಸಂಸ್ಕೃತಿ’ ವೇಗ ಪಡೆಯಿತು. ಇಂದಿನ ಸುದ್ದಿವಾಹಿನಿಗಳಲ್ಲಿ ಬಳಕೆ ಯಾಗುತ್ತಿರುವ ಕನ್ನಡವು ‘ಅತ್ತ ಅದೂ ಇಲ್ಲ, ಇತ್ತ ಇದೂ ಇಲ್ಲ’ ಎಂಬಂಥ ಸ್ಥಿತಿಯಲ್ಲಿದೆ.
ಕನ್ನಡ ಪದಗಳ ತಪ್ಪು ಉಚ್ಚಾರಣೆ ಹಾಗೂ ಅನಗತ್ಯ ಇಂಗ್ಲಿಷ್ ಪದಗಳ ಬಳಕೆಯಿಂದಾಗಿ ಭಾಷಾ ಶುದ್ಧತೆಗೆ ಧಕ್ಕೆಯಾಗಿದೆ. ಇನ್ನು ಮೂರನೇ ಹಂತದ ಭಾಷಾ ಕಲಬೆರಕೆ ಆಗಿ, ಅಪಹಾಸ್ಯದ ಸ್ವರೂಪವನ್ನು ಪಡೆದಿದ್ದು ಸಾಮಾಜಿಕ ಜಾಲತಾಣೋತ್ತರ ಅವಧಿಯಲ್ಲಿ. ನಿರ್ದಿಷ್ಟ ಪದಗಳ ಬಳಕೆಯು ‘ಟ್ರೆಂಡ್’ ಎಂದು ಪರಿಗಣಿತವಾಗುತ್ತದೆ.
ಇದು ಯುವಸಮೂಹದ ಆಡುಮಾತಿನಲ್ಲಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ಸಹಜ. ಈ ಜಾಲತಾಣಗಳಲ್ಲಿ ಭಾಷಾ ಹೊಣೆಗಾರಿಕೆ ಕಾಣುತ್ತಿಲ್ಲ. ‘ಭಾಷಾ ಕಲಬೆರಕೆ ಸಂಸ್ಕೃತಿ’ಯ ಮೂಲವು ಪ್ರಾಥಮಿಕ ಹಂತದ ಭಾಷಾ ಬೋಧನಾ ವ್ಯವಸ್ಥೆಯಲ್ಲಿದೆ. ಇಂದು ಪ್ರಾಥಮಿಕ ಶಾಲೆಗಳಲ್ಲಿ ಭಾಷೆಯನ್ನು ಶಿಸ್ತುಬದ್ಧವಾಗಿ ಕಲಿಸುವ ಕ್ರಮವಿಲ್ಲ. ಬಾಲ್ಯದಲ್ಲಿ ಸರಿಯಾಗಿ ಭಾಷೆಯನ್ನೇ ಕಲಿಯದ ಮಗು, ತನ್ನ ಚಿಂತನೆಗಳ ಅಭಿವ್ಯಕ್ತಿಯಲ್ಲಿ ಅಸಮರ್ಥವಾಗುತ್ತದೆ.
ಕಳೆದ ಒಂದು ದಶಕದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳಲ್ಲಿ ಕಾಗುಣಿತ ದೋಷ, ವ್ಯಾಕರಣ ದೋಷ ಮತ್ತು ತಪ್ಪು ಭಾಷಾಂತರದ ವರದಿಯಾಗುತ್ತಿರುವುದು, ಭಾಷೆಯನ್ನು ಹೀಗೆ ಸರಿಯಾಗಿ ಕಲಿಸದಿರುವುದರ ಪರಿಣಾಮವೇ. ಇಂಥ ವ್ಯವಸ್ಥೆಯಲ್ಲಿ ಶಿಕ್ಷಣ ಪಡೆದ ವರು ಸುದ್ದಿಮನೆ ಮತ್ತು ಇತರ ಸಂವಹನ ಕ್ಷೇತ್ರಗಳ ಒಳಗೆ ತೂರಿಕೊಂಡು, ‘ಭಾಷಾ ಕಲಬೆರಕೆ ಸಂಸ್ಕೃತಿ’ಯ ರಾಯಭಾರಿಗಳಾಗಿಬಿಡುತ್ತಾರೆ!
ನಿರಂತರತೆಯು ಭಾಷೆಯ ಸ್ವರೂಪ. ಕನ್ನಡವು ಬೇರೊಂದು ಭಾಷೆಯ ಪದಗಳನ್ನು ತನ್ನದಾಗಿಸಿಕೊಳ್ಳಬೇಕು; ಹಾಗೆಂದ ಮಾತ್ರಕ್ಕೆ ಉಪಯೋಗದಲ್ಲಿರುವ ಕನ್ನಡ ಪದಗಳನ್ನು ತ್ಯಜಿಸಬೇಕೆಂದು ಅರ್ಥವಲ್ಲ. ಭಾಷಾ ಶುದ್ಧತೆಯ ಆಚೆಗೆ ಈ ‘ಕಲಬೆರಕೆ ಸಂಸ್ಕೃತಿ’ಯನ್ನು ವಿಶ್ಲೇಷಿಸಿದಾಗ, ಬದಲಾಗುತ್ತಿರುವ ಕನ್ನಡ ಭಾಷೆಯ ಸ್ವರೂಪವನ್ನು ಅದು ಸೂಚಿಸು ವಂತೆ ಭಾಸವಾಗುತ್ತದೆ.
ಮುಂದಿನ ದಶಕಗಳಲ್ಲಿ ಈ ಸ್ವರೂಪವು ಇನ್ನೂ ಬದಲಾಗಬಹುದು. ಈ ‘ಕಲಬೆರಕೆ ಸಂಸ್ಕೃತಿ’ಯು ಕನ್ನಡದ ಚಲನಶೀಲತೆಯ ಪ್ರತೀಕವಾಗುವ ಸಾಧ್ಯತೆಯೂ ಇದೆ. ಹೀಗಾಗಿ, ಈ ಸಂದರ್ಭವು ಭಾಷಾತಜ್ಞರಿಗೆ ಸಂಶೋಧನೆಗೆ ಯೋಗ್ಯವಾಗಿದೆ. ಇಂಥ ಸಂಕೀರ್ಣ ವ್ಯವಸ್ಥೆಯಲ್ಲಿ ಹಾಗೂ ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ, ‘ಭಾಷಾ ಕಲಬೆರಕೆ ಸಂಸ್ಕೃತಿ’ಯ ಸಮಸ್ಯೆಗೆ ಉತ್ತರ ಕಂಡುಕೊಳ್ಳುತ್ತಲೇ, ಕನ್ನಡವನ್ನು ಇನ್ನಷ್ಟು ವಿಸ್ತರಿಸುವ ಹೊಣೆಗಾರಿಕೆಯು ಸುದ್ದಿಮನೆ ಮತ್ತು ಸಂವಹನ ಕ್ಷೇತ್ರಗಳ ಮೇಲಿದೆ.
ಆದರೆ ಇದು ಆರಂಭವಾಗಬೇಕಿರುವುದು ಯಾರಿಂದ? ಎಲ್ಲಿಂದ? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ಇದ್ದಂತಿಲ್ಲ...
(ಲೇಖಕರು ಹಿರಿಯ ಪತ್ರಕರ್ತರು)