Mohsin Naqvi: ಪಾಕ್ ವಿರುದ್ಧ ಭಾರತ 'ಎ' ತಂಡಕ್ಕೆ ಸೋಲು; ಮತ್ತೆ ಉದ್ಧಟತನ ತೋರಿದ ನಖ್ವಿ
Asia Cup Rising Stars: ಇತ್ತೀಗೆಚೆ ನಡೆದಿದ್ದ ಸೀನಿಯರ್ ತಂಡದ ಏಷ್ಯಾಕಪ್ ಫೈನಲ್‌ನಲ್ಲಿ ನಡೆದ ಟ್ರೋಫಿ ಹಸ್ತಾಂತರ ಹೈಡ್ರಾಮದಿಂದ ನಖ್ವಿ ಜಾಗತಿಕ ಮಟ್ಟದಲ್ಲಿ ಟೀಕೆಗೆ ಒಳಗಾಗಿದ್ದರು. ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿದ ಬಳಿಕ ಭಾರತ ತಂಡ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಆದರೆ ಟ್ರೋಫಿ ತನ್ನಿಂದಲೇ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದ ನಖ್ವಿ ಗಂಟೆಗಳ ಕಾಲ ನಡೆದ ನಾಟಕೀಯ ಬೆಳವಣಿಗೆ ಬಳಿಕ ನಖ್ವಿ ಹೋಟೆಲ್‌ಗೆ ತೆರಳಿದ್ದರು
ಪಾಕ್ ವಿರುದ್ಧ ಭಾರತ 'ಎ' ತಂಡಕ್ಕೆ ಸೋಲು; ನಖ್ವಿ ಅಚ್ಚರಿಯ ಟ್ವೀಟ್ -
ದೋಹಾ: ಭಾನುವಾರ ನಡೆದಿದ್ದ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್(Asia Cup Rising Stars) ಟಿ20 ಟೂರ್ನಿಯಲ್ಲಿ ಭಾರತ ಎ(India A) ತಂಡ ಬದ್ಧ ವೈರಿ ಪಾಕಿಸ್ತಾನ ವಿರುದ್ಧ 8 ವಿಕೆಟ್ ಅಂತರದ ಸೋಲು ಕಂಡಿತ್ತು. ಪಾಕ್ ತಂಡದ ಗೆಲುವಿನ ಬೆನ್ನಲ್ಲೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಮುಖ್ಯಸ್ಥ, ಪಾಕಿಸ್ತಾನದ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ(Mohsin Naqvi) ಭಾರತಕ್ಕೆ ಅವಮಾನ ಮಾಡುವ ಉದ್ಧೇಶದಿಂದಲೇ ಟ್ವೀಟ್ ಮಾಡುವ ಮೂಲಕ ತಮ್ಮ ಉದ್ಧಟನ ಮುಂದುವರಿಸಿದ್ದಾರೆ.
"ಪಾಕಿಸ್ತಾನ ಮತ್ತು ಮಂಡಳಿಗೆ ಎಂತಹ ಹೆಮ್ಮೆಯ ಕ್ಷಣ! ನಮ್ಮ ಪಾಕಿಸ್ತಾನ ಶಾಹೀನ್ಸ್ ತಂಡವು ಭಾರತ ಎ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ, 13.2 ಓವರ್‌ಗಳಲ್ಲಿ ಗುರಿಯನ್ನು ತಲುಪಿತು. ದೋಹಾದಲ್ಲಿ ನಡೆದ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್‌ನಲ್ಲಿ ಪ್ರಬಲ, ನಿರ್ಭೀತ ಮತ್ತು ಮರೆಯಲಾಗದ ಪ್ರದರ್ಶನ. ನಮ್ಮ ಯುವ ಆಟಗಾರರಿಂದ ಅದ್ಭುತ ಕ್ರಿಕೆಟ್ - ಪಾಕಿಸ್ತಾನದ ಭವಿಷ್ಯವು ಉಜ್ವಲವಾಗಿ ಹೊಳೆಯುತ್ತಿದೆ. ರಾಷ್ಟ್ರಕ್ಕೆ ಅಭಿನಂದನೆಗಳು!" ಎಂದು ನಖ್ವಿ X ನಲ್ಲಿ ಬರೆದಿದ್ದಾರೆ.
ಇತ್ತೀಗೆಚೆ ನಡೆದಿದ್ದ ಸೀನಿಯರ್ ತಂಡದ ಏಷ್ಯಾಕಪ್ ಫೈನಲ್‌ನಲ್ಲಿ ನಡೆದ ಟ್ರೋಫಿ ಹಸ್ತಾಂತರ ಹೈಡ್ರಾಮದಿಂದ ನಖ್ವಿ ಜಾಗತಿಕ ಮಟ್ಟದಲ್ಲಿ ಟೀಕೆಗೆ ಒಳಗಾಗಿದ್ದರು. ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿದ ಬಳಿಕ ಭಾರತ ತಂಡ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಆದರೆ ಟ್ರೋಫಿ ತನ್ನಿಂದಲೇ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದ ನಖ್ವಿ ಗಂಟೆಗಳ ಕಾಲ ನಡೆದ ನಾಟಕೀಯ ಬೆಳವಣಿಗೆ ಬಳಿಕ ನಖ್ವಿ ಹೋಟೆಲ್‌ಗೆ ತೆರಳಿದ್ದರು. ಜೊತೆಗೆ ಸಿಬ್ಬಂದಿ ಜತೆ ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದರು. ಇದುವರೆಗೂ ಭಾರತಕ್ಕೆ ಟ್ರೋಫಿ ನೀಡಿಲ್ಲ. ಈ ಬಗ್ಗೆ ಕೆಲ ದಿನಗಳ ಹಿಂದೆ ನಡೆದಿದ್ದ ಐಸಿಸಿ ಸಭೆಯಲ್ಲೂ ನಖ್ವಿ ವಿರುದ್ಧ ಟೀಕೆಗಳು ಕೇಳಿ ಬಂದಿತ್ತು.
ಇದನ್ನೂ ಓದಿ women's World Cup: ಮಹಿಳಾ ವಿಶ್ವಕಪ್‌ನಲ್ಲಿ ಒಂದೂ ಜಯ ಕಾಣದ ಪಾಕ್; ಕೋಚ್ ವಜಾಗೊಳಿಸಲು ನಖ್ವಿ ನಿರ್ಧಾರ
ಭಾನುವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 'ಎ' ತಂಡವು ವೈಭವ್ ಸೂರ್ಯವಂಶಿ ಅವರ ಸ್ಪೋಟಕ ಬ್ಯಾಟಿಂಗ್ ಹೊರತಾಗಿಯೂ ಆ ಬಳಿಕ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಪರಿಣಾಮ ಭಾರತ 'ಎ' ತಂಡವು 19 ಓವರ್‌ಗೆ ಕೇವಲ 136 ರನ್ ಗಳಿಸಿ ಸರ್ವಪತನ ಕಂಡಿತು.
ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ಮಾಝ್ ಸಾಧಖತ್ ಅವರ ಅಜೇಯ ಅರ್ಧಶತಕ(79)ದ ನೆರವಿನಿಂದ ಇನ್ನೂ 8 ವಿಕೆಟ್ ಬಾಕಿ ಇರುವಂತೆಯೇ ಸುಲಭ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು. ಜತೆಗೆ ಸತತ ಎರಡು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.