Shishidhara Halady Column: ಅಬ್ಲಿ ಹೂ ಮುಡಕಂಡು ಅಬ್ಬಿ ಮನೆಗೆ ಹ್ವಾಪಂಗೆ
ಬೆಂದಕಾಳೂರು, ಬೆಂಗಳೂರು, ಬೇಗೂರು, ಬೆಣಗಲ್ ಊರು ಮೊದಲಾದ ವಿಶ್ಲೇಷಣೆಗಳ ಇತಿಹಾಸ ವನ್ನು ಹೊಂದಿರುವ ನಮ್ಮ ರಾಜ್ಯದ ರಾಜಧಾನಿ, ಈಚಿನ ಕೆಲವು ದಶಕಗಳಲ್ಲಿ, ಅಂದರೆ, ಉದಾಹರಣೆಗೆ, ಸ್ವಾತಂತ್ರ್ಯಾನಂತರ ಎಂದೇ ಇಟ್ಟುಕೊಳ್ಳೋಣ, ‘ಬ್ಯಾಂಗಳೂರ್’ ಆಗಿ ಜನಸಾಮಾನ್ಯರ ಬಾಯಲ್ಲಿ ಪರಿವರ್ತನೆ ಹೊಂದಿರುವುದು ಸಹ ಸ್ವಾರಸ್ಯಕರ ಅಲ್ಲವೇ? ನಮ್ಮ ಜನರ ಪರಭಾಷಾಪ್ರೇಮದ ಸಂಸ್ಕೃತಿಯನ್ನು ಈಚಿನ ಈ ಬದಲಾವಣೆ ತೋರಿಸಿಕೊಟ್ಟಿದೆ ಎಂದೇ ನನ್ನ ಅಭಿಮತ.
-
ಶಶಾಂಕಣ
ನಮ್ಮೂರಿನ ಗೆಳೆಯರೊಬ್ಬರೊಂದಿಗೆ ಮಾತನಾಡುತ್ತಾ ಇದ್ದೆ; ಮಾತು ಎತ್ತೆತ್ತಲೋ ಚಲಿಸಿ, ಸ್ಥಳನಾಮಗಳ ಸುತ್ತ ಸುತ್ತತೊಡಗಿತು. ಯಾವ್ಯಾವುದೋ ಕಾರಣದಿಂದ ಮತ್ತು ಕಾಲನ ಹೊಡೆತದಿಂದ, ಸ್ಥಳನಾಮಗಳು ತಮ್ಮ ಸ್ವರೂಪವನ್ನು ಬದಲಿಸಿಕೊಳ್ಳುವುದರ ಕುರಿತು ನನಗೆ ಅಪಾರ ಆಸಕ್ತಿ. ಬೆಂಗಳೂರು ಎಂಬ ಹೆಸರು ಬಹು ಹಿಂದಿನಿಂದ ತನ್ನ ಸ್ವರೂಪವನ್ನು ಬದಲಿಸಿ ಕೊಳ್ಳುತ್ತಾ ಬಂದಿರುವದನ್ನು ಕಂಡರೆ, ಈ ಆಸಕ್ತಿಗೆ ಕಾರಣ ದೊರಕೀತು; ಸ್ಥಳನಾಮಗಳ ಬೆನ್ನು ಹತ್ತುವುದು ಒಂದು ಸ್ವಾರಸ್ಯಕರ ಪಯಣ ಎಂದೇ ಹೇಳಬಹುದು.
ಬೆಂದಕಾಳೂರು, ಬೆಂಗಳೂರು, ಬೇಗೂರು, ಬೆಣಗಲ್ ಊರು ಮೊದಲಾದ ವಿಶ್ಲೇಷಣೆಗಳ ಇತಿಹಾಸ ವನ್ನು ಹೊಂದಿರುವ ನಮ್ಮ ರಾಜ್ಯದ ರಾಜಧಾನಿ, ಈಚಿನ ಕೆಲವು ದಶಕಗಳಲ್ಲಿ, ಅಂದರೆ, ಉದಾಹರಣೆಗೆ, ಸ್ವಾತಂತ್ರ್ಯಾನಂತರ ಎಂದೇ ಇಟ್ಟುಕೊಳ್ಳೋಣ, ‘ಬ್ಯಾಂಗಳೂರ್’ ಆಗಿ ಜನಸಾಮಾನ್ಯರ ಬಾಯಲ್ಲಿ ಪರಿವರ್ತನೆ ಹೊಂದಿರುವುದು ಸಹ ಸ್ವಾರಸ್ಯಕರ ಅಲ್ಲವೇ? ನಮ್ಮ ಜನರ ಪರಭಾಷಾಪ್ರೇಮದ ಸಂಸ್ಕೃತಿಯನ್ನು ಈಚಿನ ಈ ಬದಲಾವಣೆ ತೋರಿಸಿಕೊಟ್ಟಿದೆ ಎಂದೇ ನನ್ನ ಅಭಿಮತ.
ಬೆಂಗಳೂರಿನ ಸ್ಪೆಲಿಂಗ್ನ್ನು ಬದಲಿಸಿದರೂ, ಜನರ ಮನಸ್ಸಿನಲ್ಲಿ ಅಚ್ಚೊತ್ತಿದ ‘ಬ್ಯಾಂಗಳೂರ್’ನ್ನು ಬದಲಿಸಲು ಅಷ್ಟು ಸುಲಭದಲ್ಲಿ ಸಾಧ್ಯವೇ? ಇರಲಿ; ನಮ್ಮ ಗೆಳೆಯರೊಂದಿಗೆ ಮಾತನಾಡುತ್ತಾ, ನಮ್ಮ ಹಳ್ಳಿಯ ಒಂದು ತಾಣದ ಹೆಸರಿನ ಕುರಿತು ಚರ್ಚಿಸುವಾಗ, ಒಂದು ಕುತೂಹಲಕಾರಿ ಮಾಹಿತಿ ದೊರಕಿತು. ನಮ್ಮ ಹಳ್ಳಿಯ ಒಂದು ನಿರ್ಜನ ಎನ್ನಬಹುದಾದ ಜಾಗದಲ್ಲಿ, ಶಂಕರಭಟ್ಟರ ಕೆರೆ ಎಂಬ ತಾಣವಿದೆ. ಬಸ್ ರಸ್ತೆಯ ಪಕ್ಕದಲ್ಲಿ, ಒಂದಷ್ಟು ಕಾಡುಮರಗಳ ನೆರಳಿನಲ್ಲಿ, ತಗ್ಗಿನಲ್ಲಿ ಒಂದು ಪುಟ್ಟ ಕಲ್ಯಾಣಿಯನ್ನು ಹೋಲುವ ರಚನೆಯಿದೆ; ತಗ್ಗಿನಲ್ಲಿರುವುದರಿಂದಾಗಿ, ಅದರಲ್ಲಿ ಸದಾ ನೀರು. ಅದನ್ನು ಶಂಕರಭಟ್ಟರ ಕೆರೆ ಎಂದು ಕರೆಯುವುದುಂಟು.
ಇದನ್ನೂ ಓದಿ: Shashidhara Halady Column: ಹಳ್ಳಿಯಲ್ಲಿ ಕುಸಿದುಬಿದ್ದ ಟೆಂಟ್ ಸಿನೆಮಾ
‘ಅದು ಬಹುಶಃ ಶಂಕರ ಮಠದ ಕರೆ ಆಗಿದ್ದರೂ ಇರಬಹುದು; ನಮ್ಮ ಹಿರಿಯರು ಆ ರೀತಿ ಹೇಳುವು ದನ್ನು ಕೇಳಿದ್ದೆ’ ಎಂದರು, ನಮ್ಮ ಸ್ನೇಹಿತರು. ಅಲ್ಲೊಂದು ಶಂಕರ ಮಠ ಇದ್ದಿರುವ ಸಾಧ್ಯತೆ ಇದೆ ಎಂದು ಸಕಾರಣವಾಗಿ ಅವರು ಹೇಳಿದಾಗ, ನಿಜಕ್ಕೂ ವಿಸ್ಮಯ ಎನಿಸಿತು. ಈಗ ಆ ಜಾಗದ ಸುತ್ತಮುತ್ತ ಯಾವುದೇ ಕಟ್ಟಡದ ಸುಳಿವಿಲ್ಲ; ಅಲ್ಲಿ ಹುಡುಕಿದರೆ, ಹಳೆಯ ಕಟ್ಟಡದ ಕುರುಹುಗಳು ದೊರಕಿದರೂ ದೊರಕುಬಹುದು; ಅಲ್ಲಿಂದ ತುಸು ದೂರದಲ್ಲಿ ಲಕ್ಷ್ಮೀನರಸಿಂಹ ದೇಗುಲವಿದ್ದು, ಅದು ಸ್ಥಾಪನೆಗೊಂಡ ಹಿನ್ನೆಲೆಯನ್ನು ಗಮನಿಸಿದರೆ, ‘ಶಂಕರ ಮಠ’ ಎಂಬ ಹಿಂದಿನ ಹೆಸರಿನ ಸಾಧ್ಯತೆಯ ಅರಿವಾಗುತ್ತದೆ.
ಇಲ್ಲಿ ಅಂತಹದೊಂದು ಮಠ ಇತ್ತು ಎನ್ನುವುದರ ಜತೆಯಲ್ಲೇ, ಕಾಲಕ್ರಮೇಣ ಆ ಹೆಸರು ಬದಲಾಗಿರುವ ಪ್ರಕ್ರಿಯೆಯು ಬಹಳ ಕುತೂಹಲವನ್ನು ಹುಟ್ಟಿಸುತ್ತದೆ. ಈ ರೀತಿ ಸ್ಥಳನಾಮಗಳು ತಮ್ಮ ಮೂಲ ಸ್ವರೂಪ ವನ್ನು ಕಳೆದುಕೊಂಡು, ಬೇರೆಯದೇ ರೂಪವನ್ನು ಪಡೆದಿರುವುದನ್ನು ಹಲವು ಕಡೆ ಗಮನಿಸಬಹುದು.
ನಮ್ಮೂರಿನ ಹತ್ತಿರ ಜನ್ನಾಡಿ ಎಂಬ ಹಳ್ಳಿಯಿದೆ; ಮೇಲ್ನೋಟಕ್ಕೆ ಅದು ‘ಜೈನರು ಇದ್ದ ಜಾಗ’ ಎಂಬ ಅರ್ಥ ಕೊಡುತ್ತದೆ. ಕುಂದಗನ್ನಡದಲ್ಲಿ ‘ಅಡಿ’ ಎಂದರೆ ಒಂದು ಜಾಗ, ತಾಣ ಎಂಬರ್ಥ; ಆದರೆ ಅಲ್ಲಿ ಈಗ ಜೈನರು ಇಲ್ಲ- ಆ ಸುತ್ತಲೆಲ್ಲೂ ಇಂದು ಜೈನರ ವಸತಿ ಇಲ್ಲ. ಬಹು ಹಿಂದೆ ಅಲ್ಲಿ ಜೈನರು ವಾಸವಿದ್ದರಬೇಕು; ಅವರು ಆ ಪ್ರದೇಶವನ್ನು ತೊರೆದು ಹೋಗಿರಬಹುದು ಅಥವಾ ಸುತ್ತಲೂ ಇದ್ದ ಪ್ರಭಾವಿ ಧರ್ಮಕ್ಕೆ ಮತಾಂತರ ಹೊಂದಿರಬಹುದು- ಹೊಯ್ಸಳ ರಾಜ ಬಿಟ್ಟಿದೇವನು ಜೈನ ಮತ ತೊರೆದು, ರಾಮಾನುಜಾಚಾರ್ಯರ ಪ್ರಭಾವದಿಂದ ವೈಷ್ಣವ ಮತಕ್ಕೆ ಸೇರಿಕೊಂಡ ಪ್ರಖ್ಯಾತ ಉದಾಹರಣೆಯೇ ಇದೆಯಲ್ಲ- ಆ ಮಹಾರಾಜನ ಜತೆಯಲ್ಲೇ, ಸಾಕಷ್ಟು ಸಂಖ್ಯೆ ಅಧಿಕಾರಿಗಳು, ಸೈನಿಕರು, ಜನಸಾಮಾನ್ಯರು ಸಹ ಜೈನ ಮತ ತೊರೆದಿದ್ದರು.
ಯಾರಿಗ್ಗೊತ್ತು, ಆ ಸಮಯದಲ್ಲೇ ಈ ‘ಜೈನಡಿ‘ (ಜನ್ನಾಡಿ) ಯಲ್ಲಿದ್ದ ಜೈನರು ಬದಲಾಗಿರಲೂ ಬಹುದು; ಹಳ್ಳಿಯ ಹೆಸರು ಮಾತ್ರ ಜನ್ನಾಡಿಯಾಗಿ ಈಗಲೂ ಉಳಿದುಕೊಂಡಿದೆ. ಜನ್ನಾಡಿಯ ಈಶಾನ್ಯ ದಿಕ್ಕಿಗೆ ಸಾಗಿದರೆ ‘ಸೌಡ’ ಎಂಬ ಹಳ್ಳಿಯಿದೆ; ಆ ಹೆಸರಿನ ಮೂಲವನ್ನು ತಿಳಿದುಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ; ಅಲ್ಲೇ ಪಕ್ಕದಲ್ಲಿ ಹರಿಯುವ ವಾರಾಹಿ ನದಿಯನ್ನು ದಾಟಿದರೆ ದೊರೆಯುವ ‘ಶಂಕರನಾರಾಯಣ’ ಎಂಬ ಊರಿನ ಹೆಸರು ಮಾತ್ರ ಬಹಳ ಕುತೂಹಲಕಾರಿ.
ಎರಡು ಹೆಸರುಗಳನ್ನು ಸಂಯೋಜಿಸಿದಾಗ ಉಂಟಾದ ಶಬ್ದವೇ ಆ ಊರಿನ ಹೆಸರು ಎಂದು ಹೊಸದಾಗಿ ಕೇಳಿದವರಿಗೂ ಅರ್ಥವಾಗುವಷ್ಟು ಸ್ಪಷ್ಟವಾಗಿದೆ ಆ ಹೆಸರು- ಅದೂ ನಿಜವೇ- ಶಂಕರ ಮತ್ತು ನಾರಾಯಣ (ಹರಿಹರ) ದೇವರುಗಳ ದೇಗುಲ ಅಲ್ಲಿರುವುದರಿಂದಾಗಿ ‘ಶಂಕರನಾರಾಯಣ’ ಎಂಬ ಹೆಸರು ಅಽಕೃತ ದಾಖಲೆಗಳಲ್ಲಿ ನಮೂದಾಗಿ, ಪ್ರಚುರಗೊಂಡಿದೆ. ಆದರೆ ಅಲ್ಲಿಗೆ ಹಿಂದೆ ಬೇರೊಂದೇ ಹೆಸರಿತ್ತು! ಮೂರು ರಸ್ತೆ ಕೂಡುವ ಆ ಜಾಗಕ್ಕೆ ‘ಗೋಳಿ ಕಟ್ಟೆ’ ಎಂಬ ಧ್ವನಿಪೂರ್ಣ ಹೆಸರಿತ್ತು.
ಗೋಳಿ ಮರ (ಗೋಣಿ ಮರ) ವು ಅಲ್ಲಿ ಪ್ರಧಾನವಾಗಿದ್ದು, ಅಲ್ಲಿ ಸಂತೆಯೂ ನಡೆಯುತ್ತಿದ್ದುದರಿಂದ, ಆ ಹೆಸರು ಜನಪದರ ಬಾಯಲ್ಲಿ ರೂಪುಗೊಂಡಿರಬೇಕು. ಆದರೆ, ಹೆಚ್ಚು ಪ್ರಸಿದ್ಧಿ ಪಡೆದ ಶಂಕರ-ನಾರಾಯಣ ದೇವರುಗಳ ಪ್ರಭಾವದಿಂದಾಗಿ, ಗೋಳೀಕಟ್ಟೆ ಎಂಬ ಪುರಾತನ ಹೆಸರು ಕ್ರಮೇಣ ಮರೆಯಾಯಿತು. ಅಲ್ಲಿ ಈಗ ಇರುವ ಶಂಕರನಾರಾಯಣ ದೇಗುಲವೂ ಬಹಳ ಪುರಾತನ ಎಂಬುದರಲ್ಲಿ ಸಂಶಯವಿಲ್ಲ.
ಕೆರೆಯ ಮೇಲೆ ದೇವತೆಗಳಿಂದ ನಿರ್ಮಾಣಗೊಂಡ ದೇಗುಲ ಎಂಬ ವಿಶೇಷಣ ಹೊಂದಿರುವ ಆ ದೇಗುಲ ಪುರಾತನ ಕಾಲದಿಂದಲೂ ಇದೆ; ಪ್ರಾಗೈತಿಹಾಸಿಕ ಕಾಲದ ಕೆಲವು ಕುರುಹುಗಳನ್ನೊಳ ಗೊಂಡ ಕಥೆಯೊಂದು ಸಹ ಆ ದೇಗುಲದ ಮೂಲದೊಂದಿಗೆ ಗುರುತಿಸಿಕೊಂಡಿದೆ. ಬೆಟ್ಟದ ಮೇಲೆ ಇದ್ದ ದೇವರು, ಅಲ್ಲಿಂದ ಕೆಳಗೆ ಹಾರಿದನು, ದೇವರು ಹಾರಿದ ಹೆಜ್ಜೆಗುರುತು ದೇಗುಲದ ಎದುರಿನ ವಿಶಾಲ ಬಂಡೆ ಹಾಸಿನ ಮೇಲೆ ಒಡಮೂಡಿದೆ ಎಂಬ ನಂಬಿಕೆ. ಅಲ್ಲಿಂದ ಹರದಾರಿ ದೂರದ ಸುತ್ತಳತೆಯಲ್ಲಿ, ಒಟ್ಟು ಐದು ಶಂಕರನಾರಾಯಣ (ಹರಿಹರ) ದೇಗುಲಗಳಿದ್ದು, ಬಹು ಹಿಂದೆ ಉದ್ಭವಿಸಿರಬಹುದಾದ ಪಂಥ ಸಂಘರ್ಷ ಮರೆಸಲು ರೂಪುಗೊಂಡ ಸಮನ್ವಯದ ಪ್ರಯತ್ನವನ್ನು ನೆನಪಿಸುತ್ತದೆ.
ಕರಾವಳಿಯ ಸಪ್ತ ಪುರಾತನ ಕ್ಷೇತ್ರಗಳಲ್ಲಿ, ಗೋಕರ್ಣವನ್ನೂ ಒಳಗೊಂಡು ಈ ಕ್ಷೇತ್ರಕ್ಕೆ ಸ್ಥಾನವಿದೆ ಎಂದ ಮೇಲೆ, ಕನಿಷ್ಟ 2000 ವರ್ಷಗಳಿಗೂ ಹಿಂದಿನ ಇತಿಹಾಸ ಈ ಸ್ಥಳಕ್ಕಿದೆ ಎನ್ನಬಹುದು. ಆದರೆ, ಹಲವು ಹಕ್ಕಿಗಳಿಗೆ ಆಶ್ರಯ ನೀಡುವ ಗೋಳಿ ಮರವನ್ನು ನೆನಪಿಸುವ ‘ಗೋಳಿಕಟ್ಟೆ’ ಎಂಬ ಸುಂದರ ಹೆಸರು ಮಾತ್ರ ಇಂದೂ ಮುಂದುವರಿಯಬೇಕಿತ್ತು ಎಂಬ ಭಾವ ನನ್ನ ಮನದಾಳದಲ್ಲಿ ಕುಳಿತುಬಿಟ್ಟಿದೆ.
ನಮ್ಮ ಹಳ್ಳಿಯ ಒಂದು ಮೂಲೆಯಲ್ಲಿ, ತುಸು ಎತ್ತರವಾದ ಒಂದು ಜಾಗವನ್ನು ‘ಕೋಟೆಹಕ್ಲು’ ಎಂದು ಕರೆಯುವುದುಂಟು. ಈ ಜಾಗಕ್ಕೆ ಸಾಕಷ್ಟು ಪುರಾತನವಾದ ಇತಿಹಾಸವಿದೆ. ಹೆಸರು ಸೂಚಿಸುವಂತೆ ಅಲ್ಲೊಂದು ಕೋಟೆ ಇದ್ದಿರಬೇಕು (ಮಣ್ಣಿನ ಕೋಟೆಯಾಗಿದ್ದಿರಬಹುದು.) ಇತಿಹಾಸ ಪ್ರಸಿದ್ಧ ಬಾರಕೂರು ಅರಸರ ಸಾಮಂತನಾಗಿದ್ದ ಮುದ್ದಳರಾಜ ಎಂಬಾತನು ಇಲ್ಲಿ ಆಳ್ವಿಕೆ ನಡೆಸುತ್ತಿದ್ದನಂತೆ. ಆದ್ದರಿಂದ ಈ ಪ್ರದೇಶಕ್ಕೆ ಮುದುವೇರಿ ಅಥವಾ ಮುದೂರಿ ಎಂಬ ಹೆಸರು ಬಂದಿದೆ. ಈ ಮುದ್ದಳ ರಾಜನು, ಅಂದಿನ ಕಾಲದ ಕುಂತಳ ರಾಜನ ಸಹೋದರನಾಗಿದ್ದ ಎಂಬ ನಂಬಿಕೆಯೂ ಇದೆ. ಈ ಕುಂತಳನು ಕುಂದಾಪುರವನ್ನು ಆಳುತ್ತಿದ್ದ ಎಂದು ನಮ್ಮ ಹಳ್ಳಿಯ ಜನಪದರು ಹೇಳುವರು; ಇದಕ್ಕೆ ಶಾಸನಾಧಾರವಿಲ್ಲ; ಈ ಕುಂತಳನಿಂದಲೇ, ಕುಂದಾಪುರ ಹೆಸರು ಬಂತು ಎಂಬ ಜನಪದ ನಂಬಿಕೆ ಮಾತ್ರ ಕುತೂಹಲಕಾರಿ! ಕುಂದಾಪುರಕ್ಕೆ ಬೇರೆಯದೇ ರೀತಿಯ ಪದನಿಷ್ಪನ್ನ ಇಂದು ಅಧಿಕೃತವಾಗಿ ಸ್ವೀಕೃತಗೊಂಡಿದೆ.
ಮುದ್ದಳ ರಾಜ ಆಳಿದನೆನ್ನಲಾದ ಈ ಪ್ರದೇಶದ ದಕ್ಷಿಣ ದಿಕ್ಕಿನಲ್ಲಿರುವ ಚೋರಾಡಿ ಎಂಬ ಹಳ್ಳಿಯ ಹೆಸರಿನ ಪದನಿಷ್ಪತ್ತಿಯು ಸ್ಪಷ್ಟವಿದೆ - ಬಹು ಹಿಂದೆ ಇಲ್ಲಿಗೆ ಬಂದ ಚಾರುರತಿ ಎಂಬ ನಾಗಕನ್ಯೆಯು ನೆಲೆ ನಿಂತ ಜಾಗ (ಅಡಿ) ಇದು ಎಂಬ ನಂಬಿಕೆ. ಇದೇ ರೀತಿ, ಚಾರುರತಿ ಎಂಬಾಕೆಯ ಸಹೋದರಿಯರಾದ ಇನ್ನೂ ನಾಲ್ವರು ನಾಗಕನ್ನಿಕೆಯರು ನೆಲೆ ನಿಂತ ಜಾಗಗಳು ಮಂದರ್ತಿ, ದೇವರತಿ, ನಾಗರತಿ ಮತ್ತು ನೀಲರತಿ; ಅಲ್ಲೆಲ್ಲಾ ಇಂದು ನಾಗದೇವತೆಯ (ಅಮ್ಮನವರು) ದೇಗುಲಗಳಿರುವುದು ವಿಶೇಷ. ಈ ಐವರು ನಾಗಕನ್ನಿಕೆಯರಿಗೆ ಬಹು ಪುರಾತನ ಕಾಲದಲ್ಲೇ ಕಾಡಿನ ನಡುವೆ ಪೂಜಾಸ್ಥಳಗಳನ್ನು ನಿರ್ಮಿಸಲಾಗಿತ್ತು ಮತ್ತು ಸ್ಥಳೀಯರು ಪೂಜಿಸುತ್ತಿದ್ದರು; ಅವೆಲ್ಲವೂ ಈಚಿನ ದಶಕಗಳಲ್ಲಿ ವೈದಿಕ ಪೂಜಾಪದ್ಧತಿಗೆ ಒಳಪಟ್ಟು, ನಾಗಕನ್ನಿಕೆಯರನ್ನು ದುರ್ಗಾಪರಮೇಶ್ವರಿ ಎಂದು ಕರೆದು, ಪೂಜಿಸುವ ಪದ್ಧತಿ ಬೆಳೆದುಬಂದಿದೆ! ಈ ಬೆಳವಣಿಗೆಯೂ ಸಹ, ಆ ಹಳ್ಳಿಗಳ ಹೆಸರಿನಷ್ಟೇ ಕುತೂಹಲಕಾರಿ ಮತ್ತು ಅಧ್ಯಯನಯೋಗ್ಯ ವಿದ್ಯಮಾನ ಎನ್ನಬಹುದು.
ಈ ರೀತಿ ನಾಗದೇವತೆಗಳನ್ನು ಪೂಜಿಸುವ ಪದ್ಧತಿಯಿಂದ ಈ ದೇಗುಲಗಳು ನಿರ್ಮಾಣಗೊಂಡವು ಎಂಬುದು ಸ್ಪಷ್ಟ; ಸಾಕಷ್ಟು ಪ್ರಸಿದ್ಧ ಎನಿಸಿರುವ ಮಂದಾರ್ತಿ ದೇಗುಲದಲ್ಲಿ, ಇಂದಿಗೂ ಗರ್ಭಗುಡಿಯ ಸನಿಹದಲ್ಲಿ ಬೃಹತ್ ಹುತ್ತವಿದ್ದು, ಅದೂ ಸಹ ಪೂಜನೀಯ. ಚಾರುರತಿ ಮತ್ತು ನಾಗರತಿಯರ ದೇಗುಲಗಳಿಂದ ಮುಂದೆ ಸಾಗಿ, ನಾಲ್ಕೈದು ಕಿ.ಮೀ. ಕ್ರಮಿಸಿದರೆ, ‘ತಾರಿಕಟ್ಟೆ’ ಎಂಬ ಪುಟ್ಟ ಹಳ್ಳಿಯಿದೆ. ಅಲ್ಲೊಂದು ದೊಡ್ಡ ಗಾತ್ರದ ‘ತಾರಿ ಮರ’ ಇರುವುದರಿಂದಾಗ, ಆ ಮರದ ಬುಡದಲ್ಲಿ ಕಟ್ಟಿದ ಕಟ್ಟೆಯಿಂದಾಗಿ ಹಳ್ಳಿಗೆ ಹೆಸರು ಬಂದಿರುವುದು ಸ್ಪಷ್ಟ.
ವಿಶೇಷವೆಂದರೆ, ಅಲ್ಲಿ ಒಂದು ವಿಶಾಲವಾದ ತಾರಿಮರ ಇಂದಿಗೂ ಇದೆ - ನಾನು ಬಾಲ್ಯದಲ್ಲಿ ಕಂಡಾಗಲೂ ಆ ಮರ ಇಷ್ಟೇ ದೊಡ್ಡದಾಗಿ, ವಿಶಾಲವಾಗಿ ಬೆಳೆದುಕೊಂಡಿತ್ತು! ಇಂದಿಗೂ ಅಷ್ಟೇ ದೊಡ್ಡದಾಗಿದೆ! ಆ ಮರದ ಪಕ್ಕದಲ್ಲೇ ಒಂದು ಕಚ್ಚಾ ರಸ್ತೆ ಇದೆ; ಕೆಲವು ವರ್ಷಗಳ ಹಿಂದೆ ಆ ರಸ್ತೆಯಲ್ಲಿ ಸಾಗುತ್ತಿದ್ದ, ಶಿಲೆಕಲ್ಲು ತುಂಬಿದ್ದ ಲಾರಿಯೊಂದು ಆ ಮರಕ್ಕೆ ಡಿಕ್ಕಿ ಹೊಡೆದು, ಮರದ ಕಾಲು ಭಾಗ ಕುಸಿದು ಬಿದ್ದರೂ, ಮರ ಪುನಃ ಚಿಗುರಿ ಬೆಳೆದಿದೆ, ಬೆಳೆಯುತ್ತಲೂ ಇದೆ; ಆ ಅಪಘಾತದಲ್ಲಿ ಲಾರಿ ಮಾತ್ರ ಜಖಂ ಆಯ್ತು. ನಾಗರಿಕ ಮಾನವನು ತೊಂದರೆ ಕೊಡದೇ ಇದ್ದರೆ, ಆ ತಾರಿ ಮರ ಇನ್ನೂ ನೂರು ವರ್ಷ ಅಲ್ಲೇ ಇದ್ದು, ತಾರಿಕಟ್ಟೆ ಎಂಬ ಊರಿನ ಹೆಸರಿನ ಆಧಾರ ಸ್ಥಂಬದಂತೆ ನಿಂತಿರುವುದರಲ್ಲಿ ಅನುಮಾನವಿಲ್ಲ.
ಈ ತಾರಿ ಮರದ ಒಟ್ಟು ಆಯಸ್ಸು ಇನ್ನೂರು ವರ್ಷವನ್ನಂತೂ ಮೀರುತ್ತದೆ; ಆದರೆ, ಈಗಿನ ಆಧುನಿಕ ಮಾನವನನ್ನು (ನಾನೂ ಆ ವ್ಯವಸ್ಥೆಯ ಒಂದು ಭಾಗ ಎಂಬ ಅರಿವಿದ್ದುಕೊಂಡೇ ಬರೆಯುತ್ತಿದ್ದೇನೆ) ನಂಬುವಂತಿಲ್ಲ - ಆ ಸುತ್ತಲಿನ ಬಂಡೆಗಳನ್ನು ಒಡೆದು, ಕಲ್ಲುಗಳನ್ನು ಪೇಟೆಗೆ ಸಾಗಿಸುವ ಲಾರಿಗಳು ಸಲೀಸಾಗಿ ಚಲಿಸುವ ಉದ್ದೇಶಕ್ಕಾಗಿ, ಅಲ್ಲಿನ ರಸ್ತೆಯನ್ನು ಇನ್ನಷ್ಟು ಅಗಲ ಮಾಡುವ ನೆಪದಲ್ಲಿ, ಆ ದೊಡ್ಡ, ವಿಶಾಲ, ಪುರಾತನ, ಸುಂದರ, ಐತಿಹಾಸಿಕ ಮರವನ್ನು ಸದ್ಯದಲ್ಲೇ ಕಡಿದುಹಾಕಿದರೂ ಹಾಕಿಯಾನು!
ತಾರಿಕಟ್ಟೆಯ ಹತ್ತಿರವೇ, ಅರ್ಧ ಕಿ.ಮೀ. ದೂರದಲ್ಲಿ ಅಬ್ಲಿಕಟ್ಟೆ ಎಂಬ ಹಳ್ಳಿಯುಂಟು; ಹಿಂದೆಂದೋ ‘ಅಬ್ಲಿ ಹೂ’ (ಕನಕಾಂಬರ) ಗಳನ್ನು ಹೇರಳವಾಗಿ ಬೆಳೆದ ಜಾಗ ಅದಾಗಿರಬೇಕು. ಕನಕಾಂಬರ ಹೂವನ್ನು ‘ಅಬ್ಲಿ ಹೂ’ ಎಂದು ಕರೆಯುವ ಭಾಷೆಗಳು ಮರಾಟಿ, ಕೊಂಕಣಿ! ಆ ಪದವು, ಈ ಹಳ್ಳಿ ಮೂಲೆಯ ಒಂದು ಜಾಗಕ್ಕೆ ಬಂದಿರಬೇಕೆಂದರೆ, ಇಲ್ಲಿ ಹಿಂದೆ ಕನಕಾಂಬರ ಹೂವನ್ನು ಅಧಿಕವಾಗಿ ಬೆಳೆಯುತ್ತಿದ್ದರೇ? ಈ ಸುತ್ತಲೂ ಇರುವ ಕುಡುಬಿ ಜನಾಂಗದವರ ಭಾಷೆಯ ಮೂಲಕ, ಅಬ್ಲಿ ಎಂಬ ಪದ ಇಲ್ಲಿ ಸೇರಿಕೊಂಡಿದೆ! ಈ ‘ಅಬ್ಲಿ ಹೂ’ ಪದವು, ಕೊಂಕಣಿ ಭಾಷೆಯ ಮೂಲದ್ದಾದರೂ, ನಮ್ಮೂರಿನ ಕನ್ನಡದ ಜನಪದಗೀತೆಗಳಲ್ಲಿ ಸೇರಿಹೋಗಿದೆ! ‘ಅಬ್ಲಿ ಹೂ ಮುಡಕಂಡು, ಅಬ್ಬಿ ಮನೆಗೆ ಹ್ವಾಪಂಗೆ, ಅಬ್ಲಿ ಬಾಡಿ, ಮುಖ ಬಾಡಿ’ (ಅಬ್ಬಿ=ತಾಯಿ) ಎಂಬ ಹಾಡನ್ನು ನಮ್ಮೂರ ಮಹಿಳೆಯರು ಬತ್ತ ಕುಟ್ಟುವಾಗ ರಾಗವಾಗಿ ಹಾಡುತ್ತಿದ್ದರು!
ಅಬ್ಲಿಕಟ್ಟೆಯಿಂದ ತುಸು ಮುಂದೆ ಸಾಗಿದರೆ ಸಿಗುವ ತೆಂಕ ಹೊಲ, ಗುಮ್ಮಹೊಲ ಮೊದಲಾದ ಊರುಗಳ ಹೆಸರುಗಳಲ್ಲಿ ಅಡಕಗೊಂಡಿರುವ ‘ಹೊಲ’ ಎಂದರೆ ಭಾರೀ ದಟ್ಟಣೆಯ ಮರಗಳಿರುವ ಕಾಡು. ಅಲ್ಲಿನ್ನೂ ಸ್ವಲ್ಪ ಕಾಡು ಉಳಿದುಕೊಂಡಿದ್ದು, ಊರಿನ ಹೆಸರಿನ ಮರ್ಯಾದೆಯನ್ನು ಕಾಪಾಡಿದೆ. ಇದೇ ಸನಿಹದಲ್ಲಿ ‘ಹೊನ್ನಕಲ್ಲು’ ಎಂಬ ಬಹು ಸುಂದರ ಹೆಸರಿನ ಹಳ್ಳಿ ಇದೆ. ಮೇಲ್ನೋಟಕ್ಕೆ ಇದು ಚಿನ್ನದ ಇರವನ್ನು ಸೂಚಿಸುತ್ತದೆ. ಬಹು ಹಿಂದೆ ಇಲ್ಲಿ ಚಿನ್ನದ ಗಣಿಗಾರಿಕೆ ನಡೆದಿರುವ ಸಾಧ್ಯತೆಯುಂಟು.
ಹೊನ್ ಪದವನ್ನು ತಮ್ಮ ಊರಿನ ಹೆಸರಿನ ಭಾಗವಾಗಿರಿಸಿಕೊಂಡ ಹಲವು ಊರುಗಳು ನಮ್ಮ ರಾಜ್ಯದಲ್ಲಿರುವುದು ವಿಶೇಷ; ಅಂತಹ ಹೆಚ್ಚಿನ ಊರುಗಳ ಬಳಿ ಬಹು ಹಿಂದೆ, ಚಿನ್ನದ ಗಣಿಗಾರಿಕೆ ಸಣ್ಣ ಮಟ್ಟದಲ್ಲಾದರೂ ನಡೆದಿತ್ತು, ನಡೆದಿರಬೇಕು ಎಂದು ತಜ್ಞರು ಗುರುತಿಸಿದ್ದಾರೆ.
ಇನ್ನೂ ವಿಶೇಷವೆಂದರೆ, ಇಂತಹ ಹಲವು ಜಾಗಗಳಲ್ಲಿ, ನಂತರದ ಶತಮಾನಗಳಲ್ಲಿ, ಬ್ರಿಟಿಷರು, ನೆಲದಾಳದಲ್ಲಿ ಸುರಂಗ ತೋಡಿ, ಅಲ್ಲಿ ಚಿನ್ನದ ಅದಿರನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಸಿದ್ದರು! ಭದ್ರಾವತಿ (ಬೆಂಕಿಪುರ, ವಂಕಿಪುರ) ಸನಿಹ ಇರುವ ‘ಹೊನ್ನೇಗುಡ್ಡ’ ಎಂಬ ಪುಟ್ಟ ಬೆಟ್ಟದಲ್ಲಿ ಚಾರಣ ಮಾಡಿದರೆ, ಆ ಬೆಟ್ಟದ ಗರ್ಭದಲ್ಲಿ ಬ್ರಿಟಿಷರು ತೋಡಿಸಿದ ಸುರಂಗ, ಷಾಫ್ಟ್ ಗಳನ್ನು ನೋಡಬಹುದು. ಆ ಸುರಂಗದೊಳಗೆ ನಡೆದು, ಷಾಫ್ಟ್ʼಗಳನ್ನು ಕಂಡದ್ದುಂಟು. ಕೆಲವು ವರ್ಷಗಳ ಹಿಂದೆ, ಕುತೂಹಲದಿಂದ ಅಲ್ಲಿಗೆ ಹೋದ ಯುವ ಜನರು, ಆಕಸ್ಮಿಕವಾಗಿ ಷಾಫ್ಟ್ ಒಳಗೆ ಬಿದ್ದು ಮೃತರಾಗಿದ್ದರಿಂದ ಆ ಸುರಂಗಗಳ ಬಾಯನ್ನು ಮುಚ್ಚಿಸಲಾಗಿದೆ. ಹೊನ್ ಎಂಬ ಹೆಸರು ಹೊತ್ತ ಕೆಲವು ಜಾಗಗಳಲ್ಲಿ ಚಿನ್ನದ ಶೋಧ ನಡೆದಿತ್ತು ಎಂಬುದಕ್ಕೆ ಇದು ಒಂದು ನಿದರ್ಶನ. ನಮ್ಮ ನಾಡಿನ ಪ್ರತಿ ಹಳ್ಳಿಗೂ, ಊರಿಗೂ ಒಂದೊಂದು ಕಥೆ, ಒಂದೊಂದು ಕಥನ, ಜನಪದ ಹಿನ್ನೆಲೆ ಇರುವುದನ್ನು ಗುರುತಿಸಬಹುದು; ಹೆಚ್ಚಿನ ಊರುಗಳ ಹೆಸರುಗಳ ಅರ್ಥವನ್ನು ಹುಡುಕುವುದು ಸಹ ಒಂದು ಒಳ್ಳೆಯ ಹವ್ಯಾಸ. ಏನಂತೀರಾ?