Dr Sadhanashree Column: ದಶವಿಧ ಪಾಪಗಳು ತರದಿರಲಿ ಸ್ವಾಸ್ಥ್ಯಕ್ಕೆ ಧಕ್ಕೆ !
ಸದಾ ಒಳ್ಳೆಯ ಕರ್ಮಗಳಲ್ಲಿ ತೊಡಗುವುದರಿಂದ ಆರೋಗ್ಯದ ಮೇಲೆ ಆಗುವ ಪ್ರಭಾವಗಳು ಹೀಗಿವೆ: ಒಳ್ಳೆಯ ಕೆಲಸಗಳು ದೇಹದಲ್ಲಿರುವ ಸ್ಟ್ರೆಸ್ ಹಾರ್ಮೋನ್- ಕಾರ್ಟಿಸಾಲ್ ಅನ್ನು ಕಡಿಮೆ ಮಾಡಿ ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತವೆ. ‘ಹ್ಯಾಪಿ ಹಾರ್ಮೋನ್’ ಎಂದೇ ಕರೆಯಲ್ಪಡುವ ಎಂಡಾರ್ಫಿನ್ ಅನ್ನು ದೇಹದಲ್ಲಿ ಸ್ರವಿಸಿ ನಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮ ಗೊಳಿಸುವುದರ ಜತೆಗೆ ಮುದವನ್ನು ನೀಡುತ್ತವೆ.

ಅಂಕಣಗಾರ್ತಿ ಡಾ.ಸಾಧನಶ್ರೀ

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಡಾ.ಸಾಧನಶ್ರೀ
ನಮ್ಮ ಪೂರ್ವಜರು ‘ಅಹಿಂಸಾ ಪರಮೋ ಧರ್ಮಃ’, ‘ಸತ್ಯಂ ವದ ಧರ್ಮಂ ಚರ’, ‘ಪರೋಪ ಕಾರಾ ರ್ಥಮಿದಂ ಶರೀರಮ್’ ಎಂಬ ಮಹಾವಾಕ್ಯಗಳನ್ನು ನುಡಿದು, ಸದಾ ಸತ್ಸಂಗವನ್ನೇ ಸತ್ಕರ್ಮ ವನ್ನೇ ಮಾಡು ಎಂದು ವಿಧವಿಧವಾಗಿ ಸಾರಿ ಹೇಳಿದರು. ಯೋಗ ವಿಜ್ಞಾನವು ಸಹ ‘ಅಹಿಂಸಾ ಸತ್ಯಂ ಅಸ್ತೇಯಂ ಬ್ರಹ್ಮಚರ್ಯಾ ಅಪರಿಗ್ರಹಃ’ ಎಂದು ಬೋಧಿಸಿದೆ! ಪಾಶ್ಚಾತ್ಯ ವಿಶ್ವವಿದ್ಯಾಲಯ ವೊಂದು ಇತ್ತೀಚೆಗೆ ಒಂದು ವಿಶಿಷ್ಟವಾದ ಸಂಶೋಧನೆಯನ್ನು ನಡೆ ಸಿತು. ನಾವು ದಿನನಿತ್ಯವೂ ಒಳ್ಳೆಯ ಚಿಂತನೆಗಳನ್ನು ಮತ್ತು ಸತ್ಕರ್ಮಗಳನ್ನು ಮಾಡುವು ದರಿಂದ ನಮ್ಮ ಶರೀರ-ಮನಸ್ಸುಗಳ ಮೇಲೆ ಆಗುವ ಪರಿಣಾಮಗಳನ್ನು ಅದು ಅಧ್ಯಯನ ಮಾಡಿತು. ಆ ಸಂಶೋಧನೆಯ ಕೆಲವು ವಿಷಯಗಳನ್ನು ನಿಮ್ಮ ಜತೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.
ಅದರ ಪ್ರಕಾರ, ಸದಾ ಒಳ್ಳೆಯ ಕರ್ಮಗಳಲ್ಲಿ ತೊಡಗುವುದರಿಂದ ಆರೋಗ್ಯದ ಮೇಲೆ ಆಗುವ ಪ್ರಭಾವಗಳು ಹೀಗಿವೆ: ಒಳ್ಳೆಯ ಕೆಲಸಗಳು ದೇಹದಲ್ಲಿರುವ ಸ್ಟ್ರೆಸ್ ಹಾರ್ಮೋನ್- ಕಾರ್ಟಿಸಾಲ್ ಅನ್ನು ಕಡಿಮೆ ಮಾಡಿ ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತವೆ. ‘ಹ್ಯಾಪಿ ಹಾರ್ಮೋನ್’ ಎಂದೇ ಕರೆಯಲ್ಪಡುವ ಎಂಡಾರ್ಫಿನ್ ಅನ್ನು ದೇಹದಲ್ಲಿ ಸ್ರವಿಸಿ ನಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮ ಗೊಳಿಸುವುದರ ಜತೆಗೆ ಮುದವನ್ನು ನೀಡುತ್ತವೆ.
ಇದನ್ನೂ ಓದಿ: Dr Sadhanshree Column: ವಸಂತ ಋತುವಿಗೆ ತಕ್ಕಂತೆ ಬಾಳುವ ಪರಿಯನ್ನು ಬಲ್ಲಿರಾ
ಒಳ್ಳೆಯ ಕೆಲಸಗಳು, ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗಿನ ನಮ್ಮ ಬಾಂಧವ್ಯವನ್ನು ಹೆಚ್ಚಿಸಿ ಒಂಟಿತನವನ್ನು ಹೋಗಲಾಡಿಸುತ್ತವೆ. ಜೀವನದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ಯಾವು ದೇ ಪರಿಸ್ಥಿತಿಯನ್ನು ನಿಭಾಯಿಸುವ ಶಕ್ತಿಯನ್ನು ನೀಡುತ್ತವೆ. ಉತ್ತಮ ಚಿಂತನೆಗಳು ರಕ್ತದ ಒತ್ತಡ ವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತವೆ.
ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸಿ ಕಾಯಿಲೆಗಳನ್ನು ಎದುರಿಸುವ ಸಾಮರ್ಥ್ಯವನ್ನು ನೀಡುತ್ತವೆ. ದೇಹದಲ್ಲಿನ ಉರಿಯೂತವನ್ನು (ಅಂದರೆ ಇನ್ ಫಾರ್ಮೇಶನ್ ಅನ್ನು) ತಗ್ಗಿಸಿ ದೀರ್ಘ ಕಾಲೀನ ವ್ಯಾಧಿಗಳನ್ನು ತಡೆಗಟ್ಟುವುದರ ಜತೆಗೆ ಸ್ಥೂಲಕಾಯತೆ (ಒಬೇಸಿಟಿ) ಮತ್ತು ಕ್ಯಾನ್ಸರ್ ಗಳನ್ನು ನಿವಾರಿಸುತ್ತವೆ.
ಸತ್ಕರ್ಮವನ್ನು ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆ ಆಗುವುದರ ಜತೆಗೆ ನಮ್ಮ ಆಯು ಷ್ಯವೂ ವೃದ್ಧಿಸುತ್ತದೆ ಎಂಬುದನ್ನು ಆ ಸಂಶೋಧನೆಯು ಸಾಬೀತುಮಾಡಿದೆ. ಸ್ನೇಹಿತರೆ, ಮತ್ತೊ ಮ್ಮೆ ನಿಮಗೆ ನೆನಪಿಸಲು ಇಷ್ಟಪಡುತ್ತೇನೆ- ಮೇಲೆ ಹೇಳಿದ ಲಾಭಗಳು ಯಾವುದೋ ಔಷಧಿ ಅಥವಾ ಮಾತ್ರೆಯದ್ದಲ್ಲ! ಬದಲಿಗೆ, ಸತ್ ಕರ್ಮಗಳನ್ನು ಮಾಡುವುದರಿಂದ ನಮಗೆ ಸಿಗುವ ‘ಲಾಭ’ಗಳು ಎನ್ನುತ್ತಾರೆ ಪಾಶ್ಚಿಮಾತ್ಯ ವಿಜ್ಞಾನಿಗಳು.
ಆಯುರ್ವೇದವು ಆಯುವಿನ ಜ್ಞಾನ. ‘ಆಯು’ ಎಂದರೆ ಶರೀರ-ಇಂದ್ರಿಯ-ಮನಸ್ಸು-ಆತ್ಮಗಳ ಸಂಯೋಗ. ‘ಆಯು’ವು ಈ ನಾಲ್ಕು ಪಟುಗಳ ಒಂದು ಸಾಮರಸ್ಯಕರ ತಂಡ. ಈ ತಂಡದ ನಾಲ್ಕೂ ಆಟಗಾರರ ನಡುವೆ ಸತತವಾದ ವ್ಯವಹಾರ ನಡೆದೇ ಇರುತ್ತದೆ. ಅಂತೆಯೇ, ಒಂದರ ಪ್ರಭಾವ ಇನ್ನೊಂದರ ಮೇಲೆ ಸದಾ ಆಗುತ್ತಲೇ ಇರುತ್ತದೆ. ಉದಾಹರಣೆಗೆ- ಇಂದ್ರಿಯಗಳ ಅತಿಯೋಗದಿಂದ ಮನಸ್ಸಿನ ಮೇಲೆ ಪರಿಣಾಮವಾಗಬಹುದು.
ಮನಸ್ಸಿನ ಏರಿಳಿತದಿಂದ ಶಾರೀರಿಕ ತೊಂದರೆಗಳು ಕಾಣಿಸಿಕೊಳ್ಳಬಹುದು. ಶಾರೀರಿಕ ದೋಷ ಗಳಿಂದ ಮನಸ್ಸು ಮತ್ತು ಇಂದ್ರಿಯ- ಎರಡರ ಮೇಲೂ ಪ್ರಭಾವ ಆಗಬಹುದು. ಆದ್ದರಿಂದ, ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕಾದರೆ ಈ ನಾಲ್ಕೂ ಪಟುಗಳನ್ನು ಅರ್ಥ ಮಾಡಿಕೊಂಡು, ಅವರ ನಡುವಿನ ಸಾಮರಸ್ಯವನ್ನು ಸದಾ ಸಂತುಲನದಲ್ಲಿ ಕಾಯ್ದಿರಿಸಿಕೊಳ್ಳುವುದು ಅತ್ಯವಶ್ಯಕ ಎಂದು ಆಯುರ್ವೇದವು ಹೇಳಿದೆ.
ಹಾಗಾಗಿ, ಆಯುರ್ವೇದದ ಚಿಕಿತ್ಸೆ ಎಂದಿಗೂ ಕೇವಲ ಶರೀರಕ್ಕಷ್ಟೇ ಅಲ್ಲದೆ ನಮ್ಮ ಜೀವದ ಎಲ್ಲಾ ಆಯಾಮಗಳಿಗೂ ಅನ್ವಯವಾಗುತ್ತದೆ. ಆಯುರ್ವೇದದ ಔಷಧಿಗಳಾಗಿರಬಹುದು, ಚಿಕಿತ್ಸೆಗಳಾಗಿರ ಬಹುದು ಅಥವಾ ಉಪದೇಶಗಳಾಗಿರಬಹುದು- ಈ ನಾಲ್ಕನ್ನೂ ಸಮಾವಸ್ಥೆಗೆ ತರುವ ಉದ್ದೇಶ ದಿಂದಲೇ ಅವನ್ನು ನೀಡಲಾಗುತ್ತದೆಯೇ ಹೊರತು, ಒಂದಕ್ಕೆ ಮಾತ್ರ ಗಮನಕೊಟ್ಟು ಬೇರೆಯೆ ಅಂಶಗಳನ್ನು ಕಡೆಗಣಿಸುವ ಮಾರ್ಗವನ್ನು ಆಯುರ್ವೇದ ಎಂದಿಗೂ ಒಪ್ಪುವುದಿಲ್ಲ.
ಪ್ರತಿದಿನವೂ ಉತ್ತಮ ಆಹಾರವನ್ನು ತೆಗೆದುಕೊಂಡು, ಸಕಾಲದಲ್ಲಿ ನಿದ್ರೆ ಮಾಡುವುದು ಎಷ್ಟು ಅವಶ್ಯಕವೋ ನಮ್ಮ ಮಾನಸಿಕ ಸ್ವಚ್ಛತೆಯೂ ಅಷ್ಟೇ ಅನಿವಾರ್ಯ. ಸದಾ ಧರ್ಮದ ಪಥದಲ್ಲಿ ಮತ್ತು ಸತ್ಕರ್ಮದ ಮಾರ್ಗದಲ್ಲಿ ನಡೆದಾಗ ಮಾತ್ರ ಸ್ವಾಸ್ಥ್ಯದ ಸಂಪಾದನೆ ಸಾಧ್ಯ ಎಂಬುದು ಆಯುರ್ವೇದ ಸಿದ್ಧಾಂತ. ಈ ನಿಟ್ಟಿನಲ್ಲಿ ಆಯುರ್ವೇದವು ದಿನಚರ್ಯೆಯ ಅಧ್ಯಾಯದಲ್ಲಿಯೇ ‘ದಶವಿಧ ಪಾಪಕರ್ಮ’ಗಳ ಬಗ್ಗೆ ಸವಿಸ್ತಾರವಾಗಿ ಹೇಳಿದೆ. ಅಂದರೆ, ನಮ್ಮ ದೈನಂದಿನ ಚಟು ವಟಿಕೆಗಳ ಒಂದು ಭಾಗ ಈ ದಶವಿಧಪಾಪಕರ್ಮಗಳಲ್ಲಿ ತೊಡಗದೆ ಇರುವುದು.
ಪ್ರತಿ ನಿತ್ಯವೂ, ಪ್ರತಿ ನಿಮಿಷವೂ ಈ 10 ರೀತಿಯ ಪಾಪ ಕರ್ಮಗಳನ್ನು ನಾವು ನಿವಾರಿಸಿದಾಗ ಆರೋಗ್ಯದ ಮುಂದುವರಿದ ಸ್ಥಿತಿಯಾದ ‘ಸ್ವಾಸ್ಥ್ಯ’ವನ್ನು ಅನುಭವಿಸಲು ಸಾಧ್ಯ ಎಂದು ಹೇಳಿದೆ. ಹಾಗಾದರೆ, ಈ ದಶವಿಧ ಪಾಪ ಕರ್ಮಗಳು ಯಾವುವು ಅಂತ ನೋಡೋಣ ಬನ್ನಿ. ನಮ್ಮ ಯಾವ ಚಟುವಟಿಕೆಗಳು ದೋಷಗಳ ಸಂಚಯಕ್ಕೆ ಕಾರಣವಾಗುತ್ತವೆಯೋ ಅದನ್ನೇ ‘ಪಾಪ’ವೆಂದು ಕರೆಯ ಬಹುದು. ಈ ದೋಷಗಳ ಸಂಚಯವೇ ಕ್ರಮೇಣ ಬೆಳೆದು ಬೇರೆ ಬೇರೆ ಸ್ತರಗಳಲ್ಲಿ ರೋಗವನ್ನು, ದುಃಖವನ್ನು ಮತ್ತು ಅಹಿತವನ್ನು ಉಂಟುಮಾಡುತ್ತದೆ.
ಅಂಥ ದಶವಿಧ ಪಾಪಕರ್ಮಗಳೆಂದರೆ: ‘ಹಿಂಸಾಸ್ತೆಯಾನ್ಯಥಾಕಾಮಂ ಪೈಶುನ್ಯಂ ಪರುಷಾನೃತೆ || ಸಂಭಿನ್ನಾಲಾಪಂ ವ್ಯಾಪಾದಮಭಿಧ್ಯಾಂ ದೃಗ್ವಿಪರ್ಯಯಮ್ | ಪಾಪಂ ಕರ್ಮೇತಿ ದಶಧಾ ಕಾಯ ವಾiನಸೈಸ್ತ್ಯಜೇತ್ || (ಅಷ್ಟಾಂಗ ಹೃದಯಮ್- ಸೂತ್ರಸ್ಥಾನಮ್ -2/21). ಈ ಪಾಪ ಕರ್ಮಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು.
ಅವೆಂದರೆ, ಶಾರೀರಿಕ ಪಾಪಕರ್ಮಗಳು, ವಾಚಿಕ ಪಾಪಕರ್ಮಗಳು ಮತ್ತು ಮಾನಸಿಕ ಪಾಪಕರ್ಮ ಗಳು. ಶಾರೀರಿಕ ಪಾಪಕರ್ಮಗಳು: ನಮ್ಮ ದೇಹದ ಅಥವಾ ಶರೀರದ ಮೂಲಕ ಮಾಡುವ ಪಾಪ ಗಳು. ಇವು ನಮ್ಮ ಆರೋಗ್ಯವನ್ನು ಕೆಡಿಸುವುದರ ಜತೆಗೆ ಬೇರೆಯವರ ಜೀವನದಲ್ಲಿಯೂ ನೋವು ಮತ್ತು ದುಃಖವನ್ನು ಉಂಟುಮಾಡುತ್ತವೆ.
1. ಹಿಂಸಾ: ಶರೀರದ ಮೂಲಕ ಮಾಡುವ ವಿವಿಧ ರೀತಿಯ ಹಿಂಸೆಗಳು- ಹೊಡೆಯುವುದು, ತಳ್ಳು ವುದು, ಚುಚ್ಚುವುದು, ಪರಚುವುದು, ಬೇರೆ ಬೇರೆ ರೀತಿಯ ಆಯುಧಗಳಿಂದ ನೋವು ಮಾಡುವುದು ಇತ್ಯಾದಿ. ಸ್ವಾಸ್ಥ್ಯಕ್ಕಾಗಲೀ, ಯೋಗ ಮಾರ್ಗದಲ್ಲಿ ಮುಂದುವರಿಯಲಾಗಲೀ ಅಥವಾ ಆತ್ಮ ವಿಕಸನಕ್ಕಾಗಲೀ- ಅಹಿಂಸೆಯನ್ನು ಪಾಲಿಸುವುದೇ ಮೊಟ್ಟ ಮೊದಲ ಮಜಲು. ಮನುಷ್ಯರೊಡನೆ ಅಷ್ಟೇ ಅಲ್ಲದೆ ಸೃಷ್ಟಿಯ ಎಲ್ಲ ಜೀವಿಗಳ ಜತೆಯೂ ಅಹಿಂಸೆಯ ನಡುವಳಿಕೆ ಸದಾ ಶ್ರೇಷ್ಠ.
ಪ್ರಾಣಿಗಳನ್ನು ಪ್ರೀತಿಸುವುದರಿಂದ, ಅವುಗಳಿಗೆ ಆಹಾರವನ್ನಿತ್ತು ಕಾಪಾಡುವುದರಿಂದ ನಮ್ಮ ಆರೋಗ್ಯ ಯಾವ ರೀತಿ ಸುಧಾರಿಸುತ್ತದೆ ಎಂಬ ಸ್ವಾರಸ್ಯಕರವಾದ ವಿಷಯವನ್ನು ಆಯುರ್ವೇದವು ಹಲವು ಉದಾಹರಣೆಗಳೊಂದಿಗೆ ವಿವರಿಸಿದೆ. ನಮ್ಮ ಚಾಪಲ್ಯಕ್ಕೆ/ಸ್ವಾರ್ಥಕ್ಕೆ ಬೇರೆ ಜೀವಿಗಳನ್ನು ಹಿಂಸಿಸುವುದರಿಂದ ನಾವು ಎಂದಿಗೂ ಸುಖವಾಗಿ ಇರಲು ಸಾಧ್ಯವಿಲ್ಲ. ಇಂದೋ ನಾಳೆಯೋ ಆ ಹಿಂಸೆ ನಮ್ಮ ಜೀವನದಲ್ಲಿ ಹಿಂತಿರುಗಿ ಬಂದೇ ಬರುತ್ತದೆ.
2. ಸ್ತೇಯಾ: ಹೀಗೆಂದರೆ ಕಳ್ಳತನವನ್ನು ಮಾಡುವುದು. ಇದು ಯಾವ ಹಂತದದರೂ ಇರಬಹುದು. ನಮ್ಮ ಮನೆಯಲ್ಲಿಯೇ ನಮ್ಮ ತಂದೆ ತಾಯಿಯ ಜೇಬಿನಿಂದ ಕದ್ದ ಹಣವಿರಬಹುದು ಅಥವಾ ಸರಕಾರದ ತೆರಿಗೆಯನ್ನು ಭರಿಸದೆ ಮಾಡುವ ಕಳ್ಳತನವಿರಬಹುದು. ಯಾವುದೋ ಅಂಗಡಿಗೆ ಹೋದಾಗ ಮಾಲೀಕನಿಗೆ ಗೊತ್ತಿಲ್ಲದೆಯೇ ಎರಡು ಸಾಮಾನುಗಳನ್ನು ಹೆಚ್ಚಾಗಿ ತಂದ ಕಳ್ಳತನ ವಿರಬಹುದು ಅಥವಾ ಹೋಟೆಲುಗಳಿಗೆ ಹೋದಾಗ ಅಲ್ಲಿಂದ ಅವರಿಗೆ ಗೊತ್ತಿಲ್ಲದೆ ತಂದ ವಸ್ತು ಗಳಿರಬಹುದು. ಕಳ್ಳತನ ಕಳ್ಳತನವೇ, ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ.
ಸ್ನೇಹಿತರೆ, ನೆನಪಿಡಿ- ಕಳ್ಳತನದಿಂದ ಸಂಚಯವಾದ ಪಾಪವು ಒಂದು ತಲೆಮಾರಿನಿಂದ ಇನ್ನೊಂ ದು ತಲೆಮಾರಿಗೆ ದಾಟುವ ಸಾಧ್ಯತೆ ಇದೆ. ನಾವು ಮಾಡಿದ ತಪ್ಪಿನಿಂದ ನಮ್ಮ ಮಕ್ಕಳು ದುಃಖ ಪಡುವಂತೆ ಆಗದಿರಲಿ.
3. ಅನ್ಯಥಾ ಕಾಮ: ನಿಷಿದ್ಧವಾದ ಕಾಮ ಸೇವನೆ. ಬೇರೆಯವರಿಗೆ ಸೇರಿದ ಪುರುಷನ ಅಥವಾ ಸ್ತ್ರೀಯ ಜತೆಗಿನ ಅನೈತಿಕ ಸಂಬಂಧ. ಧರ್ಮದ ವಿರುದ್ಧವಾದಂಥ ಶಾರೀರಿಕ ಸಂಭೋಗವನ್ನು ಅನ್ಯಥಾ ಕಾಮ ಎಂದು ಕರೆಯಬಹುದು. ಈ ವಿಷಯವನ್ನು ಇಂದಿನ ಎಷ್ಟೋ ಸಂಸಾರಗಳಲ್ಲಿ ಕಾಣಬ ಹುದು. ಮದುವೆಯಂಥ ದೈವೀಕ ಚೌಕಟ್ಟನ್ನು ನಾವು ಕಡೆಗಣಿಸಿ ಪರಸೀ ಅಥವಾ ಪರಪುರುಷನ ಮೇಲಿನ ವ್ಯಾಮೋಹದಲ್ಲಿ ಬೀಳುವುದು ಅತ್ಯಂತ ಅಹಿತಕರ ಎಂಬುದನ್ನು ನಾವೆಲ್ಲರೂ ಮನ ದಟ್ಟು ಮಾಡಿಕೊಳ್ಳಬೇಕಾದ ಪರಿಸ್ಥಿತಿಯಿದೆ.
ಮೇಲೆ ಹೇಳಿದ್ದು ಮೂರು ಶಾರೀರಿಕ ಪಾಪಕರ್ಮಗಳಾದರೆ, ಈಗ ವಾಚಿಕ ಪಾಪಕರ್ಮಗಳ ಬಗ್ಗೆ ಕೊಂಚ ತಿಳಿಯೋಣ. ಇವು ನಮ್ಮ ಮಾತುಗಳ ಮೂಲಕ ಅಥವಾ ಶಬ್ದಗಳ ಮೂಲಕ ಮಾಡುವ ಪಾಪಗಳು.
೪. ಪೈಶುನ್ಯ: ಒಬ್ಬ ವ್ಯಕ್ತಿಯ ಹಿಂದೆ ಅವನ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಅಥವಾ ಅವನ ಬಗ್ಗೆ ಸುಳ್ಳು ವಿಷಯವನ್ನು ಹರಡುವುದು. ವಾಸ್ತವದ ವಿರುದ್ಧವಾಗಿ ಮಾತನಾಡಿ ಮತ್ತೊಬ್ಬರ ಚಾರಿತ್ಯ ಹರಣ ಮಾಡುವುದು ಪೈಶುನ್ಯ. ಈ ಪಾಪವನ್ನು ನಾವು ಈಗಿನ ಬಹುತೇಕ ಧಾರಾವಾಹಿ ಗಳಲ್ಲೂ ಸಿನಿಮಾಗಳಲ್ಲೂ ಯಥೇಚ್ಛವಾಗಿ ಕಾಣುತ್ತಿದ್ದೇವೆ.
ರಾಜಕಾರಣದಲ್ಲಂತೂ ಕೇಳುವುದೇ ಬೇಡ. ಬಹುತೇಕ ರಾಜಕಾರಣಿಗಳು ಈ ಪೈಶುನ್ಯವೆಂಬ ಪಾಪ ವನ್ನು ತಮ್ಮ ಜೀವನದ ಉದ್ದಕ್ಕೂ ಮಾಡಿಕೊಂಡು ಬರುತ್ತಾರೆ. ಯಾವುದಾದರೂ ವ್ಯಕ್ತಿಯ ಮೇಲೆ ನಮಗೆ ಸ್ವಲ್ಪ ಬೇಜಾರು ಅಥವಾ ಸಿಟ್ಟು ಬಂದರೆ ನಾವು ತಕ್ಷಣವೇ ಮಾಡುವುದು ಈ ಪೈಶುನ್ಯದ ಪಾಪಕರ್ಮವನ್ನು. ಆದರೆ, ಜೋಕೆ! ಮುಂದೊಂದು ದಿನ ಇದು ನಮಗೆ ಗಂಡಾಂತರವಾಗಬಹುದು!
೫.ಪರುಷ: ಪರುಷ ಎಂದರೆ ಮೃದುವಲ್ಲದ, ಕಠೋರವಾದ ಮಾತುಗಳು. ಬೇರೆಯವರ ಮನಸ್ಸನ್ನು ಚುಚ್ಚಿ, ನೋವು ಮಾಡುವಂಥ ಮಾತುಗಳನ್ನು ಪರುಷ ವಚನ ಎಂದು ಹೇಳಬಹುದು. ‘ಹಿತಮ್ ಬ್ರೂಯಾತ್’ ಎಂಬುದು ಆಯುರ್ವೇದದ ಮತ್ತೊಂದು ವಾಕ್ಯ- ಎಂದರೆ, ಯಾವಾಗಲೂ ಹಿತವಾದ ಮಾತನ್ನೇ ಆಡತಕ್ಕದ್ದು. ವಿಷಯ ಎಂಥದ್ದೇ ಇರಲಿ, ಅದರಿಂದ ನಮಗೆ ಎಷ್ಟೇ ಅಸಮಾಧಾನ ವಿರಲಿ, ಅದನ್ನು ವ್ಯಕ್ತಪಡಿಸುವಾಗ ಬೇರೆಯವರಿಗೆ ನೋವನ್ನು ತರದ ರೀತಿಯಲ್ಲಿ ಮಾತನಾಡುವ ಪ್ರಯತ್ನವು ಸದಾ ನಮ್ಮದಾಗಿರಲಿ.
೬.ಅನೃತ: ಅಂದರೆ ಸುಳ್ಳು ಮಾತು. ವಾಸ್ತವಕ್ಕೆ ದೂರವಾದ, ನಾವೇ ಸಂಯೋಜಿಸಿರುವ, ವಸ್ತುಸ್ಥಿತಿಗೆ ವಿರುದ್ಧವಾಗಿರುವ ಮಾತುಗಳು ಅಸತ್ಯದ ಮಾತುಗಳು. ಸುಳ್ಳು ಹೇಳುವುದು ಎಷ್ಟು ದೊಡ್ಡ ಪಾಪ ಕರ್ಮವೆಂದು ನಮ್ಮೆಲ್ಲರಿಗೂ ಚೆನ್ನಾಗಿ ಅರಿವಿದೆ ಎಂದು ಭಾವಿಸುತ್ತೇನೆ.
೭.ಸಂಭಿನ್ನಾಲಾಪ: ಅಸಂಬದ್ಧವಾದ/ನಮಗೆ ಸಂಬಂಧಪಡದ ವಿಷಯಗಳನ್ನು, ಅದನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೆ ಮಾತನಾಡುವುದು. ‘ಗಾಸಿಪ್’ಗಳು ಬಹಳ ಜನಕ್ಕೆ ಬಹಳ ಪ್ರಿಯ ವಾದ ಕೆಲಸ. ಫೋನ್/ಮೆಸೇಜ್/ಪಾರ್ಟಿಗಳಲ್ಲಿ ಬಹಳಷ್ಟು ಮಂದಿ ಮಾಡುವ ಪಾಪವೆಂದರೆ ಸಂಭಿನ್ನಾಲಾಪ!
ಇವುಗಳು ವಾಚಿಕ ಪಾಪಕರ್ಮಗಳಾದರೆ, ಕೊನೆಯದಾದ ಮಾನಸಿಕ ಪಾಪ ಕರ್ಮಗಳ ಬಗ್ಗೆ ಕೊಂಚ ಗಮನಹರಿಸೋಣ. ಇವು ನಮ್ಮ ಮಾನಸಿಕ ಯೋಚನೆಗಳ ಮೂಲಕ ಮಾಡುವ ಪಾಪಗಳು.
೮.ವ್ಯಾಪಾದ: ಹೀಗೆಂದರೆ ಕೆಟ್ಟ ಉದ್ದೇಶಗಳಿರುವ ಯೋಚನೆಗಳು. ಬೇರೆಯವರಿಗೆ ಉಪಘಾತವನ್ನು ಉಂಟುಮಾಡುವ ಯೋಚನೆಗಳನ್ನು ವ್ಯಾಪಾದ ಎನ್ನಬಹುದು. ಬೇರೆಯವರನ್ನು ಮನಸ್ಸಿನಲ್ಲಿಯೇ ಶಪಿಸಿ, ಅವರಿಗೆ ಹಾನಿ ಉಂಟಾಗಲಿ ಎಂದು ಬಯಸುವುದು ವ್ಯಾಪಾದ. ಪರೀಕ್ಷೆಗಳಲ್ಲಿ - ರಾಂಕ್ ಬರುವುದಕ್ಕಾಗಲೀ, ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುವುದಕ್ಕಾಗಲೀ, ನಮ್ಮ ಕೆಲಸದಲ್ಲಿ ‘ಶಭಾಷ್’ ಎನಿಸಿಕೊಳ್ಳುವುದಕ್ಕಾಗಲೀ,
ಮನಸ್ಸಿನಲ್ಲಿಯೇ ನಮ್ಮ ಪ್ರತಿಸ್ಪರ್ಧಿಗೆ ತೊಂದರೆ ಉಂಟಾಗಲಿ ಎಂದು ಭಾವಿಸಿಕೊಳ್ಳುವ ಪಾಪ ವನ್ನು ನಾವೆಂದಿಗೂ ಮಾಡುವುದು ಬೇಡ.
೯. ಅಭಿಧ್ಯಾ: ಹೀಗೆಂದರೆ ಪರಗುಣ ಅಸಹಿಷ್ಣುತೆ. ಬೇರೆಯವರ ಒಳ್ಳೆಯತನವನ್ನು, ಉತ್ತಮ ಸ್ಥಿತಿ ಯನ್ನು ಕಂಡು ಅಸೂಯೆ ಪಡುವುದು. ಬೇರೆಯವರ ಏಳಿಗೆಯನ್ನು ಸಹಿಸದೆ ಇರುವುದು ಮತ್ತು ಅದನ್ನು ನೋಡಿ ಸದಾ ಹೊಟ್ಟೆಕಿಚ್ಚು ಪಡುವುದು ಅಭಿಧ್ಯಾ.
೧೦. ದೃಗ್ವಿಪರ್ಯಯ: ಹೀಗೆಂದರೆ, ನಮ್ಮ ಪೂರ್ವಜರು ತಮ್ಮ ಧ್ಯಾನಸ್ಥ ಸ್ಥಿತಿಯಲ್ಲಿ ರಜ-ತಮಸ್ಸು ಗಳಿಂದ ನಿರ್ಮುಕ್ತರಾದ ಸ್ಥಿತಿಯಲ್ಲಿ ಕಂಡ ಸತ್ಯವನ್ನು ಶಾಸಗಳಲ್ಲಿ ತೆರೆದಿಟ್ಟಿzರೆ. ಇಂಥ ಸಾರ್ವ ಕಾಲಿಕ ಸತ್ಯವನ್ನು ಒಪ್ಪಿಕೊಳ್ಳದೆ, ಅದರ ಬಗ್ಗೆ ಸಂಶಯಪಟ್ಟು ಅದನ್ನು ಪಾಲಿಸದೆ ಇರುವುದು ಒಂದು ಪಾಪಕರ್ಮವೇ. ಅನುಭವ ಮತ್ತು ವಿವೇಚನೆಯ ಸಮ್ಮಿಶ್ರಣ ನಮ್ಮ ಶಾಸeನ. ಅದನ್ನು ತಿರಸ್ಕರಿಸಿ ನಾವೆಂದೂ ಸುಖವಾಗಿರಲು ಸಾಧ್ಯವಿಲ್ಲ ಎಂಬುದನ್ನು ನಾವು ಎಷ್ಟು ಬೇಗ ಅರಿತು ಕೊಂಡರೆ ಅಷ್ಟು ಬೇಗ ಸ್ವಾಸ್ಥ್ಯವನ್ನು ಪಡೆಯಬಹುದು.
ಸ್ನೇಹಿತರೇ, ಇದನ್ನೇ ಅಲ್ಲವೇ ನಮ್ಮ ಬಸವಣ್ಣನವರೂ ಹೇಳಿದ್ದು- “ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ, ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ ಇದಿರ ಹಳಿ ಯಲು ಬೇಡ, ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲ ಸಂಗಮದೇವರ ನೊಲಿಸುವ ಪರಿ" ಅಂತ?