Mohan Vishwa Column: ಯುದ್ಧಭೂಮಿಯಲ್ಲಿ ಮೋದಿಯವರ ತಾಕತ್ !
ರಷ್ಯಾ ನಿರ್ಮಿತ ‘ಎಸ್-400’ ಸಾಧನವು ಸುದರ್ಶನ ಚಕ್ರದಂತೆ ನಿಂತು ಪಾಕಿಸ್ತಾನದ ಡ್ರೋನ್ ಗಳನ್ನು ಹೊಡೆದುರುಳಿಸಿತು. ರಷ್ಯಾ ನೇರವಾಗಿ ಭಾರತದ ಪರವಾಗಿ ನಿಂತಿತ್ತು. ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ‘ಭಾರತವು ಸೇಡು ತೀರಿಸಿಕೊಳ್ಳುವ ಹಕ್ಕನ್ನು ಹೊಂದಿದೆ’ ಎಂದು ಹೇಳಿದ್ದರು. ಇಸ್ರೇಲ್ ಪ್ರಧಾನಮಂತ್ರಿ ನೆತನ್ಯಾಹು, ಪಾಕಿಸ್ತಾನದ ದಾಳಿಯನ್ನು ಖಂಡಿಸಿ ಭಾರತದ ಪರ ನಿಂತರು.


ವೀಕೆಂಡ್ ವಿತ್ ಮೋಹನ್
camohanbn@gmail.com
ಪ್ರಧಾನಿ ನರೇಂದ್ರ ಮೋದಿಯವರು ಆಫ್ರಿಕಾದ ಪುಟ್ಟ ದೇಶ ಘಾನಾಕ್ಕೆ ಭೇಟಿ ನೀಡಿದಾಗ ಅಲ್ಲಿನ ಸಂಸತ್ತಿನ ಕೆಲ ಸದಸ್ಯರು ಭಾರತೀಯ ಸಂಸ್ಕೃತಿಯನ್ನು ಪ್ರದರ್ಶಿಸುವ ಉಡುಪುಗಳನ್ನು ಧರಿಸಿ ಸ್ವಾಗತ ಕೋರಿದರು. 30 ವರ್ಷಗಳ ಬಳಿಕ ಘಾನಾ ದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾದರು.
ಪಾಕಿಸ್ತಾನ ಬೆಂಬಲಿತ ಉಗ್ರರು ಪಹಲ್ಗಾಮ್‌ನಲ್ಲಿ ನಡೆಸಿದ ಭಯೋತ್ಪಾದಕ ದಾಳಿಯನ್ನು ಘಾನಾ ತೀವ್ರವಾಗಿ ಖಂಡಿಸಿತ್ತು. ನಂತರ ಭಾರತವು ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ನಡೆಸಿದ ಮಿಸೈಲ್ ದಾಳಿಯನ್ನು ಘಾನಾ ಸಮರ್ಥಿಸಿಕೊಂಡಿತ್ತು. ಆಫ್ರಿಕಾದ ಪುಟ್ಟ ದೇಶಕ್ಕೆ ಇರುವ ಬದ್ಧತೆಯು ಭಾರತದೊಳಗೆ ಹುಟ್ಟಿ ಸ್ವಂತದೇಶಕ್ಕೆ ಕೇಡು ಬಯಸುವ ಕೆಲವು ನಗರ ನಕ್ಸಲರಿಗೆ ಇರಲಿಲ್ಲ.
ಕಾಂಗ್ರೆಸ್ಸಿನ ನಾಯಕನೊಬ್ಬ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯನ್ನು ಅಣಕಿಸಿ ಸೈನ್ಯದ ಮನೋಬಲ ಕುಗ್ಗಿಸುವ ಕೆಲಸ ಮಾಡಿದ್ದ. ಘಾನಾ ಸಣ್ಣ ದೇಶವಾದರೂ, ಸುಮಾರು 15000 ಭಾರತೀಯರು ಅಲ್ಲಿ ವಾಸಿಸುತ್ತಿದ್ದಾರೆ.
ಬಟ್ಟೆ ತಯಾರಿಕಾ ಕಾರ್ಖಾನೆಗಳು ಮತ್ತು ಗಣಿಗಾರಿಕೆಯಲ್ಲಿ ಭಾರತೀಯರು ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯ ನಂತರ, ಮೋದಿಯವರ ವಿದೇಶಿ ಪ್ರವಾಸದ ಬಗ್ಗೆ ಕೊಂಕು ಮಾತನಾಡಿದ ಕಾಂಗ್ರೆಸ್‌ನ ನಾಯಕ ರೊಬ್ಬರು ಕಾಂಗ್ರೆಸ್ಸಿನ ಮತ್ತದೇ ಹಳೆ ಚಾಳಿಯನ್ನು ಮುಂದುವರಿಸಿದರು.
ಭಾರತದ ರಾಜತಾಂತ್ರಿಕತೆಯ ಬಗ್ಗೆ ನಾಲಿಗೆ ಹರಿಬಿಟ್ಟ ಇವರು ಪಾಕಿಸ್ತಾನದ ಮೇಲಿನ ದಾಳಿಯ ಸಂದರ್ಭದಲ್ಲಿ ಭಾರತದ ಜತೆಗೆ ಇತರೆ ದೇಶಗಳು ನಿಲ್ಲಲಿಲ್ಲವೆಂಬ ಹಸಿಸುಳ್ಳನ್ನು ಹೇಳಿದರು. ಪಾಕಿಸ್ತಾನದ ಮೇಲೆ ದಾಳಿ ನಡೆಸಿದ ‘ರಫೆಲ್’ ಯುದ್ಧ ವಿಮಾನ - ದೇಶದ್ದು. ಭಯೋತ್ಪಾದಕ ನೆಲೆಗಳನ್ನು ಉಡೀಸ್ ಮಾಡಿದ ಬ್ರಹ್ಮೋಸ್ ಕ್ಷಿಪಣಿ ಭಾರತ ಮತ್ತು ರಷ್ಯಾ ಜಂಟಿಯಾಗಿ ತಯಾರಿಸಿದ್ದು. ಇಸ್ರೇಲ್ ನಿರ್ಮಿತ ಲೇಸರ್ ಗೈಡೆಡ್ ಬಾಂಬುಗಳು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ನಾಶಗೊಳಿಸಿದವು.
ರಷ್ಯಾ ನಿರ್ಮಿತ ‘ಎಸ್-400’ ಸಾಧನವು ಸುದರ್ಶನ ಚಕ್ರದಂತೆ ನಿಂತು ಪಾಕಿಸ್ತಾನದ ಡ್ರೋನ್ ಗಳನ್ನು ಹೊಡೆದುರುಳಿಸಿತು. ರಷ್ಯಾ ನೇರವಾಗಿ ಭಾರತದ ಪರವಾಗಿ ನಿಂತಿತ್ತು. ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ‘ಭಾರತವು ಸೇಡು ತೀರಿಸಿಕೊಳ್ಳುವ ಹಕ್ಕನ್ನು ಹೊಂದಿದೆ’ ಎಂದು ಹೇಳಿದ್ದರು. ಇಸ್ರೇಲ್ ಪ್ರಧಾನಮಂತ್ರಿ ನೆತನ್ಯಾಹು, ಪಾಕಿಸ್ತಾನದ ದಾಳಿಯನ್ನು ಖಂಡಿಸಿ ಭಾರತದ ಪರ ನಿಂತರು.
ಒಂದು ಸುಳ್ಳನ್ನು ಹತ್ತು ಬಾರಿ ಹೇಳಿ ಜನರನ್ನು ನಂಬಿಸಿಬಿಡಬಹುದೆಂಬ ಎಡಚರರ ಸತ್ತು ಹೋದ ಸಿದ್ಧಾಂತವನ್ನು ಇಂದಿಗೂ ನಂಬಿರುವ ಮೇಲೆ ಉಲ್ಲೇಖಿಸಿದ ಕಾಂಗ್ರೆಸ್ ನಾಯಕರಿಗೆ ಸಾಮಾಜಿಕ ಜಾಲತಾಣದ ಯುಗದಲ್ಲಿ ಸುಳ್ಳುಗಳು ವೇಗವಾಗಿ ಜನರ ಮುಂದೆ ಬೆತ್ತಲಾಗುತ್ತವೆ ಎಂಬ ಸತ್ಯ ತಿಳಿದಿಲ್ಲ.
ಪುಲ್ವಾಮದಲ್ಲಿ ಸೈನಿಕರ ಮೇಲೆ ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತವು ಬಾಲಕೋಟ್ ಮೇಲೆ ನಡೆಸಿದ ವೈಮಾನಿಕ ದಾಳಿಯ ಸಂದರ್ಭದಲ್ಲಿ ಯೋಧ ಅಭಿನಂದನ್ ರನ್ನು ಪಾಕಿಸ್ತಾನ ಸೆರೆ ಹಿಡಿದಿತ್ತು. ನಂತರ ಮೋದಿಯವರ ಭಯದಿಂದ ಕೇವಲ 72 ಗಂಟೆಗಳಲ್ಲಿ ವಾಘಾ ಗಡಿಯ ಮೂಲಕ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಿತ್ತು.
ಮೋದಿಯವರ ವಿದೇಶಿ ಪ್ರವಾಸ ಮತ್ತು ರಾಜತಾಂತ್ರಿಕತೆಯ ಬಗ್ಗೆ ಹಸಿಸುಳ್ಳು ಹೇಳುವವರು ಈ ಘಟನೆಯ ಬಗ್ಗೆ ಏನು ಹೇಳುತ್ತಾರೆ? ರಷ್ಯಾ ಮತ್ತು ಉಕ್ರೇನ್ ನಡುವೆ ಕಳೆದ ಮೂರು ವರ್ಷಗಳಿಂದ ಯುದ್ಧ ನಡೆಯುತ್ತಿದೆ. ಅಮೆರಿಕವನ್ನೂ ಒಳಗೊಂಡಂತೆ ನ್ಯಾಟೋ ದೇಶಗಳು, ‘ರಷ್ಯಾದೊಂದಿಗೆ ಭಾರತ ನಿಂತರೆ ಭಾರತದ ಮೇಲೆ ನಿರ್ಬಂಧ ಹೇರಲಾಗುವುದು’ ಎಂಬ ಬೆದರಿಕೆಯನ್ನು ಹಾಕಿದ್ದವು. ಆದರೆ ಭಾರತ ಕ್ಯಾರೆ ಎನ್ನದೆ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿತು.
ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂದರ್ಭ ದಲ್ಲಿ ಉಕ್ರೇನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವುದಕ್ಕೆ ಅನುವು ಮಾಡಿಕೊಡಲು ಮತ್ತು ಭಾರತದ ಮನವಿಯ ಮೇರೆಗೆ ರಷ್ಯಾ 48 ಗಂಟೆಗಳ ಕಾಲ ಯುದ್ಧವನ್ನು ನಿಲ್ಲಿಸಿ ‘ಸೇಫ್ ಪ್ಯಾಸೇಜ್’ ನೀಡಿತ್ತು. ಪರಿಣಾಮ ಉಕ್ರೇನ್ ನಲ್ಲಿ ಸಿಲುಕಿದ್ದ ಸಾವಿರಾರು ಭಾರತೀಯರು ಭಾರತಕ್ಕೆ ಮರಳಿದರು.
ರಷ್ಯಾದಂಥ ದೈತ್ಯದೇಶ ಭಾರತೀಯರಿಗಾಗಿ ಯುದ್ಧವನ್ನು 48 ಗಂಟೆಗಳ ಕಾಲ ನಿಲ್ಲಿಸಿದ್ದು ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ತಾಕತ್ತಲ್ಲದೆ ಮತ್ತೇನು? ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ನಡೆಯುತ್ತಿದ್ದ ಯುದ್ಧದ ಸಂದರ್ಭದಲ್ಲಿ ಇಸ್ರೇಲಿನಲ್ಲಿ ಸಿಲುಕಿದ್ದ ಭಾರತೀಯರನ್ನು ‘ಆಪರೇಷನ್ ಅಜಯ’ ಮೂಲಕ ರಕ್ಷಿಸಲಾಯಿತು.
ಇಸ್ರೇಲ್ ಮತ್ತು ಇರಾನ್ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿ ಇರಾನ್ ದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರಲು ಇರಾನ್ 34 ಗಂಟೆಗಳ ಕಾಲ ದಾಳಿಯನ್ನು ನಿಲ್ಲಿಸಿ ಭಾರತಕ್ಕೆ ‘ಸೇಫ್ ಪ್ಯಾಸೇಜ್’ ನೀಡಿತ್ತು. ಕಾಂಗ್ರೆಸ್ಸಿನ ಕಾರ್ಯಕರ್ತರನ್ನೂ ಒಳಗೊಂಡಂತೆ ಅನೇಕ ಭಾರತೀಯರನ್ನು ಸುರಕ್ಷಿತವಾಗಿ ಇರಾನ್ ದೇಶದಿಂದ ಭಾರತಕ್ಕೆ ಕರೆತರಲಾಯಿತು. ಸಾವಿರಾರು ವರ್ಷಗಳ ಯುದ್ಧದ ಇತಿಹಾಸವಿರುವ ಎರಡು ದೇಶಗಳ ನಡುವಿನ ಯುದ್ಧವನ್ನು 24 ಗಂಟೆ ನಿಲ್ಲಿಸಿ ಭಾರತೀಯರನ್ನು ವಾಪಸ್ ಕರೆ ತರುವುದು ಮೋದಿಯವರ ರಾಜತಾಂತ್ರಿಕತೆಯ ತಾಕತ್ತಲ್ಲದೆ ಮತ್ತೇನು? ವಿದೇಶದಲ್ಲಿ ಸಂಕಷ್ಟದಲ್ಲಿ ಸಿಲುಕಿರುವವರು ಒಂದು ಟ್ವೀಟ್ ಮಾಡಿ ಸರಕಾರವನ್ನು ಸಂಪರ್ಕಿಸಿದರೆ, ತಕ್ಷಣ ಸ್ಪಂದಿಸಿ ಅವರ ಸಮಸ್ಯೆಯನ್ನು ರಾಜತಾಂತ್ರಿಕ ಕಚೇರಿಗಳ ಮೂಲಕ ಬಗೆಹರಿಸಿರುವ ಅನೇಕ ಉದಾಹರಣೆಗಳಿವೆ.
ಯುದ್ಧಪೀಡಿತ ಯೆಮನ್ ದೇಶದಿಂದ ಸಾವಿರಾರು ಜನರನ್ನು ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ಕರೆತರಲಾಗಿತ್ತು. 2008ರಲ್ಲಿ ಮುಂಬೈ ನಗರದ ಮೇಲೆ ಪಾಕಿಸ್ತಾನಿ ಪ್ರಾಯೋಜಿತ ಭಯೋ ತ್ಪಾದಕರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಕಾಂಗ್ರೆಸ್ ಸರಕಾರ ಪ್ರತಿದಾಳಿ ನಡೆಸಿರಲಿಲ್ಲ. ಮೌನಿ ಪ್ರಧಾನಮಂತ್ರಿ ಮನ್‌ಮೋಹನ್ ಸಿಂಗ್, ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ಅಮೆರಿಕ ಅಡ್ಡ ಬರುವುದೆಂಬ ಭಯದಿಂದಿದ್ದರು.
ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದ ಕಾಂಗ್ರೆಸ್ಸಿನ ಆಡಳಿತದಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಭಯೋತ್ಪಾದಕ ದಾಳಿಗಳಾಗಿದ್ದವು. ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದಕರಿಗೆ ಕಾಂಗ್ರೆಸ್ಸಿಗರನ್ನು ಕಂಡರೆ ಭಯವೇ ಇರಲಿಲ್ಲ. ಕತಾರ್ ದೇಶದಲ್ಲಿ ಅಲ್ಲಿನ ಸೈನ್ಯದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಮಂದಿ ಭಾರತೀಯರಿಗೆ ಅಲ್ಲಿನ ನ್ಯಾಯಾಲಯ ಮಾಹಿತಿ ಸೋರಿಕೆ ವಿಷಯದಲ್ಲಿ ಗಲ್ಲಿಗೇರಿಸುವ ಶಿಕ್ಷೆಯನ್ನು ನೀಡಿತ್ತು.
ತಕ್ಷಣ ಮಧ್ಯ ಪ್ರವೇಶಿಸಿದ ಭಾರತ ಅವರ ಗಲ್ಲುಶಿಕ್ಷೆಯನ್ನು ತಡೆಹಿಡಿಸಿ ನಿಯಮಿತ ಸೆರೆವಾಸ ಶಿಕ್ಷೆಗೆ ಪರಿವರ್ತಿಸುವಲ್ಲಿ ಯಶಸ್ವಿಯಾಗಿತ್ತು. 2023ರಲ್ಲಿ ದಕ್ಷಿಣ ಟರ್ಕಿ ಮತ್ತು ಸಿರಿಯಾ ದೇಶದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಿಲುಕಿದವರನ್ನು‘ಆಪರೇಷನ್ ದೋಸ್ತ್’ ಮೂಲಕ ರಕ್ಷಣೆ ಮಾಡಲಾಯಿತು. ಯುದ್ಧಪೀಡಿತ ಸೂಡಾನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ‘ಆಪರೇಷನ್ ಕಾವೇರಿ’ ಮೂಲಕ ರಕ್ಷಿಸಲಾಯಿತು.
ಮೋದಿಯವರ ಬದಲಾದ ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಮೂಲಕ ಭಾರತೀಯರನ್ನು ರಕ್ಷಿಸಿರುವ ನೂರಾರು ಉದಾಹರಣೆಗಳನ್ನು ಹೇಳಬಹುದು. ಮೋದಿಯವರ ವಿದೇಶಿ ಪ್ರವಾಸದ ಪರಿಣಾಮ ಇಂದು ಭಾರತದಲ್ಲಿ ‘ಆಪಲ್’ ಕಂಪನಿಯು ತನ್ನ ಮೊಬೈಲ್ ಉತ್ಪಾದನಾ ಘಟಕವನ್ನು ಸ್ಥಾಪಿಸಿ ಜಗತ್ತಿಗೆ ಪೂರೈಸುತ್ತಿದೆ.
ಡೊನಾಲ್ಡ್ ಟ್ರಂಪ್ ನೀಡಿದ ಎಚ್ಚರಿಕೆಯನ್ನು ಆಪಲ್ ಕಂಪನಿ ಗಂಭೀರವಾಗಿ ತೆಗೆದುಕೊಂಡಿಲ್ಲ. ಸ್ಯಾಮ್‌ಸಂಗ್ ಜಗತ್ತಿನ ಎರಡನೇ ಅತಿದೊಡ್ಡ ಮೊಬೈಲ್ ಉತ್ಪಾದನಾ ಘಟಕವನ್ನು ನೋಯಿಡಾ ದಲ್ಲಿ ನಿರ್ಮಿಸಿದೆ. ಮೋದಿಯವರ ರಾಜತಾಂತ್ರಿಕತೆಯ ಫಲವಾಗಿ ಭಾರತಕ್ಕೆ ಬಿಲಿಯನ್‌ಗಟ್ಟಲೆ ಹಣ ವಿದೇಶಿ ಬಂಡವಾಳದ ರೂಪದಲ್ಲಿ ಹರಿದುಬರುತ್ತಿದೆ.
ಈ ಕಂಪನಿಗಳಿಂದ ಕೋಟ್ಯಂತರ ಉದ್ಯೋಗಗಳು ಭಾರತದಲ್ಲಿ ಸೃಷ್ಟಿಯಾಗಿವೆ. ‘ವಸುಧೈವ ಕುಟುಂಬಕಂ’ ಶೀರ್ಷಿಕೆಯಡಿಯಲ್ಲಿ ದೆಹಲಿಯಲ್ಲಿ 2023ರ ಸೆಪ್ಟೆಂಬರ್‌ನಲ್ಲಿ ಜಿ-20 ಶೃಂಗಸಭೆ ನಡೆಸುವ ಮೂಲಕ ಭಾರತವು ಜಾಗತಿಕ ಮಟ್ಟದಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ದೇಶವಾಗಿ ಹೊರಹೊಮ್ಮಿದೆ.
ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವಧಿಯ ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಪರಿಣಾಮವನ್ನೀಗ ನೋಡೋಣ. 1947ರಿಂದ 1991ರವರೆಗೆ ಭಾರತವನ್ನಾಳಿದ ಕಾಂಗ್ರೆಸ್ ಪಕ್ಷವು 21000 ಕೆ.ಜಿ. ಚಿನ್ನವನ್ನು 1991ರಲ್ಲಿ ಲಂಡನ್ನಿನ ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ತಂದು ದೇಶವನ್ನು ನಡೆಸುವ ಪರಿಸ್ಥಿತಿಗೆ ತಳ್ಳಿತ್ತು.
1991ರಲ್ಲಿ ಕೇವಲ ಎರಡು ವಾರಕ್ಕೆ ಆಗುವಷ್ಟು ವಿದೇಶಿ ವಿನಿಮಯ ಮಾತ್ರ ಭಾರತದ ಬಳಿಯಿತ್ತು. ದೇಶವನ್ನು ದಿವಾಳಿ ಅಂಚಿಗೆ ತಲುಪಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. 1980ರ ದಶಕದ ರಷ್ಯಾ ಮತ್ತು ಅಮೆರಿಕ ನಡುವಿನ ಶೀತಲ ಸಮರದಿಂದ ಭಾರತದ ಮೇಲಾದ ಪರಿಣಾಮವನ್ನು ಎದುರಿಸು ವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು. ಇಂದಿರಾ ಗಾಂಧಿ ಅವಧಿಯ ‘ಲೈಸೆನ್ಸ್ ರಾಜ್’ ವ್ಯವಸ್ಥೆಯಿಂದ ಭಾರತಕ್ಕೆ ವಿದೇಶಿ ಬಂಡವಾಳ ಹರಿದುಬಂದಿರಲಿಲ್ಲ.
ಪರಿಣಾಮ, ಭಾರತವು ಆರ್ಥಿಕ ಅಭಿವೃದ್ಧಿಯಲ್ಲಿ ಹಿಂದುಳಿದಿತ್ತು. 2004 ಮತ್ತು 2014ರ ನಡುವೆ ಆಡಳಿತ ನಡೆಸಿದ, 54 ಪುಟಗಳ ಬಯೋಡೇಟಾ ಹೊಂದಿದ್ದ ಮನಮೋಹನ್ ಸಿಂಗ್ ಅವಧಿಯಲ್ಲಿ ಭಾರತದ ಆರ್ಥಿಕತೆ ಸಂಕಷ್ಟದಲ್ಲಿರುವ ಆರ್ಥಿಕ ದೇಶಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿತ್ತು.
‘ಆಪರೇಷನ್ ಸಿಂದೂರ್’ ನಂತರ ಭಾರತದ ಪರವಾಗಿ ಯಾರೂ ನಿಲ್ಲಲಿಲ್ಲವೆಂದು ಸುಳ್ಳು ಹೇಳುವ ಕಾಂಗ್ರೆಸ್ ನಾಯಕರು, ಇಸ್ಲಾಮಿಕ್ ರಾಷ್ಟ್ರ ಪಾಕಿಸ್ತಾನದ ಪರವಾಗಿ ಸ್ವತಃ ಮುಸ್ಲಿಂ ರಾಷ್ಟ್ರಗಳೇ ನಿಲ್ಲಲ್ಲಿಲ್ಲವೆಂಬುದನ್ನು ತಿಳಿಯಬೇಕು. ಟರ್ಕಿ ಮತ್ತು ಅಜರ್‌ಬೈಜಾನ್ ದೇಶಗಳು ಮಾತ್ರ ಪಾಕಿಸ್ತಾನ ದ ಪರವಾಗಿ ನಿಂತವು. ಅಫ್ಘಾನಿಸ್ತಾನ, ಇರಾನ್, ಮಾಲ್ಡೀವ್ಸ್, ಕಝಕಿಸ್ತಾನ, ಕತಾರ್, ಬಹ್ರೈನ್, ಮಸ್ಕತ್, ಕೊಲ್ಲಿ ರಾಷ್ಟ್ರಗಳು ಪಾಕಿಸ್ತಾನದ ಪರ ನಿಲ್ಲಲಿಲ್ಲ.
ಭಾರತದ ಪರವಾಗಿ ದೂರದ ಆಸ್ಟ್ರೇಲಿಯಾ, ಆಫ್ರಿಕಾದ ಘಾನಾ ನಿಂತಿದ್ದವು. ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದ ನಂತರ ಭಾರತ ಜಗತ್ತಿನ ಅನೇಕ ದೇಶಗಳಿಗೆ ಕರೆ ಮಾಡಿ ಕಾರ್ಯಾ ಚರಣೆಯ ವಿವರವನ್ನು ನೀಡಿತ್ತು. ಕೋವಿಡ್ ಸಮಯದಲ್ಲಿ ಭಾರತಕ್ಕೆ ಬೇಕಿದ್ದಂಥ ರೆಮಿಡಿವೈಸರ್, ಆಕ್ಸಿಜನ್ ಸಿಲಿಂಡರ್, ಪಿಪಿಇ ಕಿಟ್‌ಗಳನ್ನು ಇಸ್ರೇಲ್, ಫ್ರಾನ್ಸ್, ಆಸ್ಟ್ರೇಲಿಯಾ ದೇಶಗಳು ಪೂರೈಸಿ ದ್ದವು.
ನರೇಂದ್ರ ಮೋದಿಯವರ ಬದಲಾದ ರಾಜತಾಂತ್ರಿಕ ನೀತಿಯಿಂದ ಜಗತ್ತಿನ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಬಿಲಿಯನ್‌ಗಟ್ಟಲೆ ಬಂಡವಾಳ ಹೂಡಿಕೆ ಮಾಡುತ್ತಿವೆ. ಮೈಕ್ರೋಸಾಫ್ಟ್, ಗೂಗಲ,ಬೋಯಿಂಗ್, ಏರ್‌ಬಸ್, ಕ್ಸಿಯೋಮಿ, ಆಪಲ, ಸ್ಯಾಮ್‌ಸಂಗ್, ಹುಂಡೈ, ಹೋಂಡಾ, ಟೊಯೋಟಾ, ಟೆಸ್ಲಾದಂಥ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುತ್ತಿವೆ. ಮೋದಿಯವರ ವಿದೇಶಿ ಪ್ರವಾಸದ ಬಗ್ಗೆ ಕೆಟ್ಟದಾಗಿ ಮಾತನಾಡುವ ಕಾಂಗ್ರೆಸ್ಸಿನ ಕೆಲ ಬಾಯಿಬಡುಕರು ಅವರ ವಿದೇಶಾಂಗ ನೀತಿಯಿಂದ ಲಾಭ ಪಡೆಯುತ್ತಿzರೆಂಬುದು ಅಪ್ಪಟ ಚಿನ್ನದಷ್ಟು ಸತ್ಯ.