ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir Hegde Column: ರೆಸ್ಟೋರೆಂಟ್‌ʼಗಳಿಗೆ ಸ್ಟಾರ್‌ ಪಟ್ಟ ಕೊಡುವ ಟೈರ್‌ ಕಂಪೆನಿ

ನಾವು ರೆಸ್ಟೋರೆಂಟ್ ಮತ್ತು ಹೋಟೆಲ್ ಎಂಬೆರಡು ಇಂಗ್ಲಿಷ್ ಶಬ್ದವನ್ನು ಬೇಕಾಬಿಟ್ಟಿ ಬಳಸುತ್ತೇವೆ. ಇವೆರಡೂ ಬೇರೆ ಬೇರೆ. ರೆಸ್ಟೋರೆಂಟ್ ಎಂದರೆ ಹೋಟೆಲ್ ಅಲ್ಲ, ಹೋಟೆಲ್ ಎಂದರೆ ರೆಸ್ಟೋರೆಂಟ್ ಅಲ್ಲ. ರೆಸ್ಟೋರೆಂಟ್- ಆಹಾರ ಮತ್ತು ಪಾನೀಯ ಒದಗಿಸುವ ಜಾಗ, ಖಾನಾವಳಿ. ಹೋಟೆಲ್ ಎಂದರೆ ಅದು ಮುಖ್ಯವಾಗಿ ತಂಗುವ ಪೂರ್ಣ ವ್ಯವಸ್ಥೆ.

ರೆಸ್ಟೋರೆಂಟ್‌ʼಗಳಿಗೆ ಸ್ಟಾರ್‌ ಪಟ್ಟ ಕೊಡುವ ಟೈರ್‌ ಕಂಪೆನಿ

-

ಶಿಶಿರಕಾಲ

‘ಮಿಷಲಿನ್ ಸ್ಟಾರ್ ರೇಟಿಂಗ್’ ಇಂದಿಗೂ ಆಹಾರವನ್ನಷ್ಟೇ ಗಮನದಲ್ಲಿರಿಸಿ ರೆಸ್ಟೋರೆಂಟ್‌ ಗಳನ್ನು ಶ್ರೇಣೀಕರಿಸುತ್ತದೆ. ಆದರೆ ಈಗ ಅದು ಬಹು ಪ್ರತಿಷ್ಠೆಯ ವಿಷಯ. ಮಿಷಲಿನ್ ಇವತ್ತಿಗೂ ಒಂದು, ಎರಡು, ಮೂರು ಇಷ್ಟೇ ಸ್ಟಾರ್ ನೀಡುತ್ತದೆ. ಆದರೆ ಮಿಷಲಿನ್ ಎಲ್ಲ ರೆಸ್ಟೋರೆಂಟ್‌ಗಳನ್ನೂ ಶ್ರೇಣೀಕರಿಸುವುದಿಲ್ಲ. ಖಾನಾವಳಿಯ ಯಜಮಾನರು ಬೇಕಾದರೆ ನಮ್ಮನ್ನು ಗಮನಿಸಿ ಎಂದಷ್ಟೇ ಮಿಷಲಿನ್‌ಗೆ ಪತ್ರ ಬರೆಯಬಹುದು.

ಫೈವ್ ಸ್ಟಾರ್ ಹೋಟೆಲ್‌ನ ಸಾವಿರ ರುಪಾಯಿಯ ಚಹಾಕ್ಕಿಂತ ಗೂಡಂಗಡಿಯ ಕಟಿಂಗ್ ಚಹಾ ಬಹಳ ಖಡಕ್ ರುಚಿ. ಮಿರ್ಚಿ, ಮಂಡಕ್ಕಿ ಇವೆಲ್ಲ ರಸ್ತೆ ಬದಿಯಲ್ಲಿಯೇ ನಿಂತು ತಿನ್ನಬೇಕು. ದೋಸೆ ಎಂದರೆ ‘ನಮ್ಮೂರ ತಿಂಡಿ’ ಹೋಟೆಲ್‌ನಲ್ಲಿಯೇ ತಿನ್ನಬೇಕು. ಇಡ್ಲಿ ವಡೆ ಎಂದರೆ ಬ್ರಾಹ್ಮಣರ ಕಾಫೀ ಬಾರ್, ಗಿರ್ಮಿಟ್ ಎಂದರೆ ಹುಬ್ಬಳ್ಳಿಯ ದುರ್ಗದ ಬೈಲು, ಬೆಣ್ಣೆ ದೋಸೆ ಎಂದರೆ ದಾವಣಗೆರೆಯ ಶ್ರೀ ಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್. ಹೀಗೆ ಪಟ್ಟಿ ದೊಡ್ಡದು. ಈ ಯಾವ ಹೋಟೆ ಲ್ಲಿಗೂ ಯಾವುದೇ ‘ಸ್ಟಾರ್’ ನ ಹಮ್ಮು-ಗಿಮ್ಮು ಇಲ್ಲ. ಅವು ಬಹುಜನಪ್ರಿಯ. ‌

ವಿಷಯ ಹೀಗಿರುವಾಗ ಯಾವ ‘ಕರ್ಮಕ್ಕೆ’ ಈ ಸ್ಟಾರ್ ಹೋಟೆಲ್‌ಗಳಿಗೆ ಐದು, ಏಳು, ಮೂರು ಇತ್ಯಾದಿ ಸ್ಟಾರ್ ಕೊಡುವುದು? ಅಲ್ಲಿನ ತಿಂಡಿಯೋ, ದೋಸೆಯೋ? ಟಿ.ಪಿ.ಕೈಲಾಸಂ ಅವರು ನೀರು ಹಾಲು ಬೆರೆಸಿ ಮಾಡುವ ಚಹಾವನ್ನು ವ್ಯಾಖ್ಯಾನಿಸುತ್ತ “ಆಕಾಶಾತ್ ಪತಿತಂ ತೋಯಂ, ಯಥಾ ಗಚ್ಛತಿ ‘ಚಾ’ ಗರಂ" ಎಂದಿದ್ದರು. ಅಂತಿರ್ಪ ಆಕಾಶದಿಂದ ಬಿದ್ದ ನೀರಿನಂಥ ಚಹಾ ಕೊಡುವ ಹೋಟೆಲ್ಲುಗಳಿಗೆ ಕೊಡುವ ಐದು ನಕ್ಷತ್ರಗಳಿಗೆ ಅರ್ಥವಿದೆಯೇ?

ಇಂದು ಸಾಮಾನ್ಯ ಗೊಂದಲವಿದೆ. ನಾವು ರೆಸ್ಟೋರೆಂಟ್ ಮತ್ತು ಹೋಟೆಲ್ ಎಂಬೆರಡು ಇಂಗ್ಲಿಷ್ ಶಬ್ದವನ್ನು ಬೇಕಾಬಿಟ್ಟಿ ಬಳಸುತ್ತೇವೆ. ಇವೆರಡೂ ಬೇರೆ ಬೇರೆ. ರೆಸ್ಟೋರೆಂಟ್ ಎಂದರೆ ಹೋಟೆಲ್ ಅಲ್ಲ, ಹೋಟೆಲ್ ಎಂದರೆ ರೆಸ್ಟೋರೆಂಟ್ ಅಲ್ಲ. ರೆಸ್ಟೋರೆಂಟ್- ಆಹಾರ ಮತ್ತು ಪಾನೀಯ ಒದಗಿಸುವ ಜಾಗ, ಖಾನಾವಳಿ. ಹೋಟೆಲ್ ಎಂದರೆ ಅದು ಮುಖ್ಯವಾಗಿ ತಂಗುವ ಪೂರ್ಣ ವ್ಯವಸ್ಥೆ.

ಇದನ್ನೂ ಓದಿ: Shishir Hegde Column: ನಾವೇಕೆ ಭಯಾನಕ ಕ್ರೈಂ ಸ್ಟೋರಿಗಳನ್ನು ನೋಡಲು ಬಯಸುತ್ತೇವೆ ?

ನಮ್ಮ ಕಡೆಯಂತೂ ರೆಸ್ಟೋರೆಂಟ್ ಎಂಬ ಶಬ್ದದ ಬಳಕೆಯೇ ಮೊದಲು ಇರಲಿಲ್ಲ. ಆಹಾರ ಕೊಡುವ ಎಲ್ಲದಕ್ಕೂ ‘ಹೋಟೆಲ’ ಎಂದೇ ಕರೆದು ಅಭ್ಯಾಸ. ಉಳಿದುಕೊಳ್ಳುವುದು ‘ಲಾಡ್ಜ್’. ಅಮೆರಿಕ ಮತ್ತು ಬಹುತೇಕ ದೇಶಗಳಲ್ಲಿ ರೆಸ್ಟೋರೆಂಟ್ ಮತ್ತು ಹೋಟೆಲ್ ಇವೆರಡನ್ನೂ ಸ್ಪಷ್ಟ ವಾಗಿ ಪ್ರತ್ಯೇಕಿಸಿ ಬಳಸುತ್ತಾರೆ. ಅವೆಂದೂ ಬೇರೆ ಬೇರೆ.

ಅಮೆರಿಕಕ್ಕೆ ಬಂದ ಹೊಸತರಲ್ಲಿ ನಾನು ಒಂದು ಎಡವಟ್ಟು ಮಾಡಿಕೊಂಡಿದ್ದೆ. “ನನಗೆ ಹಸಿವಾ ಗಿದೆ, ಹೋಟೆಲ್ಲಿಗೆ ಹೋಗೋಣ" ಎಂದು ಆಫೀಸಿನಲ್ಲಿ ಸಹವರ್ತಿಯೊಬ್ಬಳ ಬಳಿ ಹೇಳಿ ಬಿಟ್ಟಿದ್ದೆ! ಕ್ಷಣಾರ್ಧದಲ್ಲಿ ಅಪಾರ್ಥ ಗ್ರಹಿಕೆಗೆ ಬಂತು, ವಿವರಿಸಬೇಕಾಯ್ತು. ವಿವರಣೆಯ ಮೂಲಕ ಅಪಾರ್ಥ ವನ್ನೂ ಸ್ಪಷ್ಟಪಡಿಸಿದಂತಾಯಿತು ಅನ್ನಿ. ಇವತ್ತಿಗೂ ಎಲ್ಲಿಯೋ ಹೊರಗಿದ್ದಾಗ ಹಸಿವಾದರೆ “ಹೋಟೆಲ್ಲಿಗೆ ಹೋಗೋಣ" ಎಂದೇ ಮಾತು ಹೊರಡುತ್ತದೆ. ಆಮೇಲೆ ‘ರೆಸ್ಟೋರೆಂಟ್’ ಎಂದು ಸರಿಮಾಡಿಕೊಳ್ಳುತ್ತೇನೆ.

ಹೋಟೆಲ್ಲಿನಲ್ಲಿ ಉಳಿಯಲು ಬೇಕಾದ ಎಲ್ಲ ವ್ಯವಸ್ಥೆಯ ಜತೆ ಆಹಾರವೂ ಸಿಗುತ್ತದೆ, ಆದರೆ ಹೋಟೆಲ್ಲಿನ ಉದ್ದೇಶ ಆಹಾರ ಮಾತ್ರವಲ್ಲ. ಆ ಕಾರಣಕ್ಕೆ ಐದು, ಏಳು ಸ್ಟಾರ್ ಹೋಟೆಲ್ಲಿನ ಆಹಾರವೂ ಅತ್ಯಂತ ರುಚಿಯಾದದ್ದಿರ ಬೇಕೆಂದಿಲ್ಲ. ಹೋಟೆಲ್‌ಗಳಿಗೆ ‘ಸ್ಟಾರ್’ ಕೊಡುವುದು ಅಲ್ಲಿ ತಂಗಲು ಬೇಕಾದ ಸವಲತ್ತು, ಸೌಲಭ್ಯಗಳ ಆಧಾರದ ಮೇಲೆ.

ಆಹಾರವೂ ರುಚಿಯಾಗಿದ್ದರೆ ನಸೀಬು. ಭಾರತದಲ್ಲಿ ಆಹಾರಕ್ಕೆ-ಖಾನಾವಳಿಗಳಿಗೆ ‘ಸ್ಟಾರ್’ಗಿರಿ ಕೊಡುವ ಪ್ರತ್ಯೇಕ ವ್ಯವಸ್ಥೆ ಇದ್ದಂತಿಲ್ಲ. ಇದ್ದರೂ ಅದಕ್ಕೆ ಮಹತ್ವ ಅಷ್ಟಿಲ್ಲ.

Screenshot_6 ಋ

ಮಿಷಲಿನ್ (Michelin) ಟೈರ್ ಕಂಪನಿಯ ಹೆಸರು ಕೇಳಿರುತ್ತೀರಿ. ಆಂಡ್ರೆ ಮತ್ತು ಎಡ್ವರ್ಡ್ 1889 ರಲ್ಲಿ ಫ್ರಾನಲ್ಲಿ ಇದನ್ನು ಸ್ಥಾಪಿಸಿದ್ದು. ಆಗ ಕಾರುಗಳು ಈಗಿನಷ್ಟು ಓಡಾಡದ ಸಮಯ. ಇಡೀ ಫ್ರಾನ್ಸಿನಲ್ಲಿ ಇದ್ದದ್ದೇ 3000 ಕಾರುಗಳು. ದಶಕ ಕಳೆದರೂ ಮಿಷಲಿನ್ ಕಂಪನಿ ಅಂದುಕೊಂಡಷ್ಟು ಉದ್ಧಾರವಾಗಲಿಲ್ಲ, ಟೈರ್ ಮಾರಾಟವಾಗುತ್ತಿರಲಿಲ್ಲ. ಆಂಡ್ರೆ ಮತ್ತು ಎಡ್ವರ್ಡ್ ತಮ್ಮ ಕಾರ್ಖಾನೆ ಯಲ್ಲಿ ತಯಾರಾಗುವ ಟೈರ್ ಹೆಚ್ಚಿಗೆ ಮಾರಾಟವಾಗಬೇಕೆಂದರೆ ಏನು ಮಾಡಬೇಕೆಂದು ಯೋಚನೆಗೆ ಬಿದ್ದರು. ಕಾರುಗಳ ಟೈರ್ ಸವೆಯಬೇಕು.

ಸವೆಯಬೇಕೆಂದರೆ ಜನರು ಹೆಚ್ಚು ಓಡಾಡಬೇಕು ಎಂಬುದನ್ನು ಮನಗಂಡರು. ಆ ಪ್ರಯತ್ನವಾಗಿ 1900ರಲ್ಲಿ ಮಿಷಲಿನ್ ಒಂದು ಚಿಕ್ಕ ಪುಸ್ತಕವನ್ನು ಅಚ್ಚು ಹಾಕಿಸಿತು. ಅದರಲ್ಲಿ ನಕಾಶೆ, ಟೈರ್ ಬದಲಿಸುವುದು ಹೇಗೆ, ಸುತ್ತ ಮುತ್ತಲಿನ ಊರಿನ ಮೆಕ್ಯಾನಿಕ್‌ಗಳ ವಿವರ, ಪೆಟ್ರೋಲ್ ಬಂಕ್, ಉಳಿಯಲು ಬೇಕಾಗುವ ಜಾಗ ಇವೆಲ್ಲ ಪಟ್ಟಿಮಾಡಲಾಗುತ್ತಿತ್ತು. ಒಟ್ಟಾರೆ ತಿರುಗಾಡುವವರಿಗೆ ಬೇಕಾದ ಮಹತ್ವದ ವಿಷಯ ಅದರಲ್ಲಿರುತ್ತಿತ್ತು. ಜನರು ಇದನ್ನು ಹಿಡಿದು ಪ್ರವಾಸಕ್ಕೆ ಹೊರಡು ತ್ತಿದ್ದರು.

ಆ ಪುಸ್ತಕದಲ್ಲಿ ರೆಸ್ಟೋರೆಂಟ್- ಉಪಾಹಾರ, ಖಾನಾವಳಿಗಳಿಗೆ ‘ಸ್ಟಾರ್’ ಕೊಡಲಾಗುತ್ತಿತ್ತು. ಸ್ಟಾರ್ ಕೊಡುವುದು ಎಂದರೆ ಖಾನಾವಳಿ ಹೆಸರಿನ ಎದುರು *, **, *** ಎಂದು ಅಚ್ಚುಹಾಕಲಾಗುತ್ತಿತ್ತು. ಆ ಸ್ಟಾರ್‌ಗಳಿಗೆ ವಿಶೇಷ ಅರ್ಥವಿತ್ತು, ಅದನ್ನು ಪುಟದ ಕೊನೆಯಲ್ಲಿ ಚಿಕ್ಕದಾಗಿ ಪ್ರಿಂಟ್ ಮಾಡಲಾಗು ತ್ತಿತ್ತು. ಒಂದು ಸ್ಟಾರ್ ಎಂದರೆ ಆ ‘ನಿಗದಿತ ವರ್ಗದ ಖಾನಾವಳಿಗಳಲ್ಲಿಯೇ ಉತ್ತಮ.

ಪ್ರಯಾಣಿಸುವಾಗ ನಿಲ್ಲಿಸಿ ತಿಂದು ಹೋಗಬಹುದು’. ಎರಡು ಸ್ಟಾರ್ ಇದ್ದರೆ- ‘ಅತಿ ರುಚಿಯ ಆಹಾರ, ಮಾರ್ಗ ಮಧ್ಯೆ- ಸುತ್ತು ಮಾರ್ಗ (detour) ಬಳಸಿ, ಹೋಗಿ ತಿನ್ನಬಹುದಾದ ಖಾನಾವಳಿ’. ಇನ್ನು ಮೂರು ಸ್ಟಾರ್ ಎಂದರೆ ‘ಅಸಾಧಾರಣ ಆಹಾರ, ತಿನ್ನಲಿಕ್ಕೆಂದೇ ಹೋಗಿ ಬರಬಹುದಾದಷ್ಟು ಒಳ್ಳೆಯ ಖಾನಾವಳಿ’. ಈ ರೀತಿ ಸ್ಟಾರ್ ಕೊಡುವ ಮೂಲ ಉದ್ದೇಶ ಪ್ರತಿ ಖಾನಾವಳಿಯ ಎದುರು ಅದೇ ವಿಷಯ ಪುನರಾವರ್ತಿಸುವುದಕ್ಕಿಂತ, ಕೊನೆಯಲ್ಲಿ ಒಂದು, ಎರಡು, ಮೂರು ಸ್ಟಾರ್ ಎಂದರೆ ಏನೆಂದು ವಿವರಣೆ ಕೊಟ್ಟರೆ ಅಷ್ಟು ಪ್ರಿಂಟ್ ಮಾಡುವ ವೆಚ್ಚದಲ್ಲಿ ಉಳಿತಾಯ. ಹಾಗಾಗಿ, ಈ ರೀತಿ, ಆಹಾರಕ್ಕೆ ಮಾತ್ರ ಸೀಮಿತವಾದ ಸ್ಟಾರ್ ಕೊಡುವ ಪದ್ಧತಿ ಶುರುವಾದದ್ದು.

ಹಾಗೆ ಶುರುವಾದ, ನೂರು ವರ್ಷದ ಹಿಂದೆ ಆರಂಭವಾದ ‘ಮಿಷಲಿನ್ ಸ್ಟಾರ್ ರೇಟಿಂಗ್’ ಇಂದಿಗೂ ಆಹಾರವನ್ನಷ್ಟೇ ಗಮನದಲ್ಲಿರಿಸಿ ರೆಸ್ಟೋರೆಂಟ್‌ಗಳನ್ನು ಶ್ರೇಣೀಕರಿಸುತ್ತದೆ. ಆದರೆ ಈಗ ‘ಮಿಷಲಿನ್ ಸ್ಟಾರ್ ರೆಸ್ಟೋರೆಂಟ್’ ಎಂದರೆ ಅದು ಬಹು ಪ್ರತಿಷ್ಠೆಯ ವಿಷಯ, ಗರಿ. ಮಿಷಲಿನ್ ಇವತ್ತಿಗೂ ಒಂದು, ಎರಡು, ಮೂರು ಇಷ್ಟೇ ಸ್ಟಾರ್ ನೀಡುತ್ತದೆ. ಆದರೆ ಮಿಷಲಿನ್ ಎಲ್ಲ ರೆಸ್ಟೋ ರೆಂಟ್‌ಗಳನ್ನೂ ಶ್ರೇಣೀಕರಿಸುವುದಿಲ್ಲ.

ಖಾನಾವಳಿಯ ಯಜಮಾನರು ಬೇಕಾದರೆ ನಮ್ಮನ್ನು ಗಮನಿಸಿ ಎಂದಷ್ಟೇ ಮಿಷಲಿನ್‌ಗೆ ಪತ್ರ ಬರೆಯಬಹುದು. ಯಾವುದನ್ನು ಶ್ರೇಣೀಕರಿಸಬೇಕು ಎಂಬುದರ ಆಯ್ಕೆ ಮಿಷಲಿನ್‌ಗೆ ಬಿಟ್ಟದ್ದು. ಈ ಶ್ರೇಣೀಕರಿಸುವ ಕೆಲಸವನ್ನು ಒಂದು ವಿಶೇಷ ಗೌಪ್ಯ ತಂಡ ಮಾಡುತ್ತದೆ. ಆ ತಂಡದ ಹೆಸರು, ವಿವರಣೆ ಎಲ್ಲವೂ ಪರಮ ಗೌಪ್ಯದ ವಿಚಾರ.

ಹೀಗೆ ಆಯ್ಕೆಯಾದ ರೆಸ್ಟೋರೆಂಟ್‌ಗಳಿಗೆ ಮಿಷಲಿನ್ ತನ್ನ ಈ ವಿಶೇಷ ‘ಇನ್ಸ್‌ಪೆಕ್ಟರ್’ಗಳನ್ನು ಕಳುಹಿಸಿಕೊಡುತ್ತದೆ. ಆ ಪರೀಕ್ಷಕರು ಸಹಜ ಗ್ರಾಹಕರಂತೆ ಹತ್ತಾರು ಬಾರಿ, ತಿಂಗಳುಗಳ ಅಂತರ ದಲ್ಲಿ, ದಿನದ ಬೇರೆ ಬೇರೆ ಸಮಯದಲ್ಲಿ ಅಲ್ಲಿ ಬಂದು ಆಹಾರದ ರುಚಿ, ಗುಣಮಟ್ಟವನ್ನು ತಿಂದು ಪರೀಕ್ಷಿಸುತ್ತಾರೆ.

ಅಷ್ಟೇ ಅಲ್ಲ, ಪ್ರತಿ ಬಾರಿಯೂ ಆಹಾರದ ರುಚಿ, ಶುಚಿ ಇತ್ಯಾದಿ ಅದೇ ಗುಣಮಟ್ಟದ್ದಿದೆಯೇ ಎಂಬ ಪರೀಕ್ಷೆಯನ್ನೂ ಮಾಡುತ್ತಾರೆ. ಒಂದು ದಿನ ಒಂದೊಂದು ರುಚಿ ಇದ್ದರೆ ಪರೀಕ್ಷೆಯಲ್ಲಿ ನಪಾಸ್. ಎಲ್ಲವೂ ಪರಮ ಗೌಪ್ಯವಾಗಿ, ಸದ್ದು ಗದ್ದಲವಿಲ್ಲದೆ ನಡೆಯುವ ಕೆಲಸ. ಖುದ್ದು ರೆಸ್ಟೋರೆಂಟ್ ನವರಿಗೆ, ಮಾಲೀಕರಿಗೆ ಮಿಷಲಿನ್ ತಮ್ಮನ್ನು ಪರೀಕ್ಷೆ ಮಾಡುತ್ತಿದೆ ಎಂಬ ಸುಳಿವು ಕೂಡ ಇರುವು ದಿಲ್ಲ.

ಈ ರೀತಿ ಅಳೆದು ತೂಗಿ ಅಪರೂಪಕ್ಕೆ ಒಂದು ರೆಸ್ಟೋರೆಂಟ್ ಗುರುತಿಸಿ ಅದಕ್ಕೆ ಮಿಷಲಿನ್ ಸ್ಟಾರ್ ನೀಡುತ್ತದೆ. ಆಯ್ಕೆಯಾಗದಿದ್ದರೆ ಹೀಗೆಂದು ಪರೀಕ್ಷೆ ಅಲ್ಲಿ ನಡೆದಿತ್ತು ಎಂದೇ ಯಾರಿಗೂ ತಿಳಿಯು ವುದಿಲ್ಲ. ಮಿಷಲಿನ್‌ನ ಇನ್ಸ್‌ಪೆಕ್ಟರ್‌ಗಳಾಗಬೇಕೆಂದರೆ ಪಾಕಶಾಸ್ತ್ರದಲ್ಲಿ ಡಿಗ್ರಿ ಪಡೆದಿರಬೇಕು. ಕೇವಲ ನಿಷ್ಪಕ್ಷಪಾತಿ ಆಗಿದ್ದರಷ್ಟೇ ಮುಗಿಯಲಿಲ್ಲ. ಅವರಿಗೆ ತಮ್ಮ ವೈಯಕ್ತಿಕ ಆಹಾರದ ಆದ್ಯತೆ ಗಳನ್ನು ಬದಿಗಿಟ್ಟು ರುಚಿ ನೋಡುವುದು ಗೊತ್ತಿರಬೇಕು.

ಕೆಲವರಿಗೆ ಸಿಹಿ ಇಷ್ಟ, ಇನ್ನು ಕೆಲವರಿಗೆ ಖಾರ, ಕಹಿ, ಹುಳಿ. ಆದರೆ ಅದೆಲ್ಲವನ್ನೂ ಮೀರಿ ವಸ್ತುನಿಷ್ಠ ವಾಗಿ ನಿರ್ಣಯಿಸುವ ಸಾಮರ್ಥ್ಯ, ಸೂಕ್ಷ್ಮತೆ ಇರಬೇಕು. ಅಲ್ಲಿನ ಸೇವೆ, ಎ.ಸಿ. ವ್ಯವಸ್ಥೆ, ಉಷ್ಣತೆ ಹೀಗೆ ಎಲ್ಲವನ್ನೂ ಗಮನಿಸಬೇಕು. ಆಹಾರದ ರುಚಿ, ಶುಚಿ ಮತ್ತು ಪ್ರಸ್ತುತಿಯೇ ಮಾನದಂಡವಾದರೂ ವಾತಾವರಣ ಸರಿಯಿರಬೇಕು. ಅವರು ಆಹಾರ ಸೇವಿಸುವಾಗ, ಆ ರೆಸ್ಟೋರೆಂಟಿನ ಒಳಗಡೆ ಯಾವುದೇ ಟಿಪ್ಪಣಿ ಮಾಡಿಕೊಳ್ಳುವಂತಿಲ್ಲ.

ಹೊರ ಬಂದು- ಅದೆಲ್ಲವನ್ನೂ ನೆನಪಿಟ್ಟು ಮಿಷಲಿನ್‌ಗೆ ತಮ್ಮ ವರದಿಯನ್ನು ಸಲ್ಲಿಸಬೇಕು. ಅವರಿಗೆ ಸ್ಥಳೀಯ ಹೊಸ ರೆಸ್ಟೋರೆಂಟುಗಳ ಅರಿವಿರಬೇಕು. ಅಲ್ಲದೆ ಸಾಮಾಜಿಕ ಜಾಲತಾಣ, ಪತ್ರಿಕೆ, ಟಿವಿ, ಜನರ ಪ್ರತಿಕ್ರಿಯೆ ಎಲ್ಲವನ್ನೂ ಅವರು ಗಮನಿಸುತ್ತಿರಬೇಕು.

ಪಕ್ಷಪಾತ, ಭ್ರಷ್ಟಾಚಾರ, ವಶೀಲೀತನ ಇವನ್ನೆಲ್ಲ ಹೊರಗಿಟ್ಟು ಪ್ರಶಸ್ತಿ ಕೊಡುವ ವ್ಯವಸ್ಥೆ ಮಾಡಿ ಕೊಳ್ಳುವುದು ಸುಲಭ ವಲ್ಲ. ಅದೆಷ್ಟೋ ಸರಕಾರಗಳಿಗೆ ಇದು ಸಾಧ್ಯವಾಗುವುದಿಲ್ಲ. ಅಪಾತ್ರರಿಗೆ ಪ್ರಶಸ್ತಿ ಕೊಟ್ಟರೆ ಪ್ರಶಸ್ತಿಯೇ ಸೋಲುತ್ತದೆ. ಇದನ್ನು ಮಿಷಲಿನ್ ಟೈರ್ ಕಂಪನಿ ಚೆನ್ನಾಗಿ ಅರಿತು- ನಿಷ್ಪಕ್ಷಪಾತ ವ್ಯವಸ್ಥೆಯನ್ನು ನಿರ್ಮಿಸಿಕೊಂಡಿದೆ.

ಹಾಗಾಗಿಯೇ ಯಾರಿಗೆಂದರೆ ಅವರಿಗೆ ಸಿಗುವ ರಾಜ್ಯ ಪ್ರಶಸ್ತಿಯಂತಾಗಿಲ್ಲ ‘ಮಿಷಲಿನ್ ಸ್ಟಾರ್’. ಶತಮಾನ ಕಳೆದರೂ ಅದೇ ಪವಿತ್ರತೆಯನ್ನು, ಕಳಂಕರಾಹಿತ್ಯವನ್ನು ಕಾಪಾಡಿಕೊಂಡು ಬಂದಿದೆ. ಹೇಳಿ ಕೇಳಿ- ಮಿಷಲಿನ್ ಒಂದು ಟೈರ್ ಕಂಪನಿ. ಆದರೂ ಇದೊಂದು ವ್ಯವಸ್ಥೆಯನ್ನು ಅಷ್ಟೇ ಜತನವಾಗಿ, ಕಂಪನಿಯ ಪ್ರತಿಷ್ಠೆಯಾಗಿ ನಡೆಸಿಕೊಂಡು ಬಂದಿರುವುದು ವಿಶೇಷ.

ಮಿಷಲಿನ್ ಸ್ಟಾರ್ (ಒಂದು, ಎರಡು, ಮೂರು) ಅನ್ನು ಯಾವುದೇ ಒಂದು ಖಾನಾವಳಿ ಪಡೆಯಿತು ಎಂದರೆ ಅದರ ಅದೃಷ್ಟ ಖುಲಾಯಿಸಿದಂತೆ. ಸದ್ಯ ಇಡೀ ಪ್ರಪಂಚದಲ್ಲಿ ಮಿಷಲಿನ್ ಸ್ಟಾರ್ (ಒಂದು, ಎರಡು, ಮೂರು) ಪಡೆದಿರುವ ಸುಮಾರು ನಾಲ್ಕು ಸಾವಿರ ರೆಸ್ಟೋರೆಂಟ್‌ಗಳಿವೆ ಅಷ್ಟೆ. ಹೆಚ್ಚಿನವೆಲ್ಲ ಇರುವುದು ಫ್ರಾನ್ಸ್, ಜಪಾನ್, ಸ್ಪೇನ್, ಅಮೆರಿಕ ದೇಶಗಳಲ್ಲಿ. ಅಮೆರಿಕದಲ್ಲಿ ಸುಮಾರು 250.

ಅವುಗಳಲ್ಲಿ ಅದೆಷ್ಟೋ ಭಾರತೀಯ ಆಹಾರದ ರೆಸ್ಟೋರೆಂಟ್‌ಗಳು ಕೂಡ ಇವೆ. ನ್ಯೂಯಾರ್ಕ್‌ನಲ್ಲಿ ಸೆಮ್ಮಾ (Semma) ಎಂಬ ಹೆಸರಿನ ದಕ್ಷಿಣ ಭಾರತ ರುಚಿಯ ಮಿಷಲಿನ್ ಸ್ಟಾರ್ ರೆಸ್ಟೋರೆಂಟ್ ಬಹಳ ಜನಪ್ರಿಯ. ಅಲ್ಲಿ ಊಟ ಮಾಡಬೇಕೆಂದರೆ ಮುಂಗಡ ಕಾಯ್ದಿರಿಸಬೇಕು. ಅದು ಮಿಷಲಿನ್ ‘ಸಿಂಗಲ್ ಸ್ಟಾರ್’. ಅಲ್ಲಿ ಊಟಕ್ಕೆ ಜಾಗ ಸಿಗಲು ಸುಮಾರು ಹದಿನೈದರಿಂದ ಇಪ್ಪತ್ತು ದಿನ ಕಾಯ ಬೇಕು. ಇದು ಮಿಷಲಿನ್ ಸ್ಟಾರ್ ಬಿರುದಿನ ಮಹತ್ವಕ್ಕೆ ಸಾಕ್ಷಿ.

ಮಿಷಲಿನ್ ಸ್ಟಾರ್ ಎಂದರೆ ಅದು ಕೇವಲ ಹೊಟ್ಟೆ ತುಂಬಿಸಿಕೊಳ್ಳುವ ಆಹಾರದ ಜಾಗವಲ್ಲ. ಅಲ್ಲಿ ಆಹಾರವನ್ನು ಸವಿಯುವ ಅನುಭವಕ್ಕೆ ಎಲ್ಲಿಲ್ಲದ ಮಹತ್ವ. ಅಲ್ಲಿ ಆಹಾರವೆಂದರೆ ಅದೊಂದು ಕಲೆ, ಖಾದ್ಯವೇ ಕಲಾಕೃತಿ. ಎಲ್ಲ ಆಹಾರದ ಪ್ರಸ್ತುತಿ ಹೇಗಿರುತ್ತದೆಯೆಂದರೆ ಆಹಾರದೊಳಕ್ಕೆ ಚಮಚ ತೂರಿಸಿದರೆ ಯಾವುದೋ ಒಳ್ಳೆಯ ಪೇಂಟಿಂಗ್‌ಗೆ ಚೂರಿ ತಿವಿದ ಭಾವ.

ಇಲ್ಲಿ ಬಾಣಸಿಗ ರುಚಿಯಾದ ಅಡುಗೆ ಮಾಡಿದರಷ್ಟೇ ಮುಗಿಯಲಿಲ್ಲ, ಅಷ್ಟೇ ಸೃಜನಶೀಲನಾಗಿರ ಬೇಕು. ಎಲ್ಲವೂ ಆಯಾ ಋತುಮಾನದಲ್ಲಿ ಲಭ್ಯವಿರುವ ವಸ್ತುಗಳಿಂದಲೇ ತಯಾರಿಸಿದ್ದಾ ಗಿರಬೇಕು. ಮಿಷಲಿನ್ ಸ್ಟಾರ್-ಒಮ್ಮೆ ಕೊಟ್ಟು ಸುಮ್ಮನಾಗುವ ಬಿರುದಲ್ಲ. ಮಿಷಲಿನ್ ಪ್ರತಿ ವರ್ಷ ಈ ಪಟ್ಟಿಯನ್ನು ಪರಿಷ್ಕರಿಸುತ್ತದೆ.

ಮಿಷಲಿನ್ ಆಹಾರ ಪರೀಕ್ಷಕರು ಸಾಧ್ಯವಾದಾಗೆಲ್ಲ ಭೇಟಿ ನೀಡಿ ಪರೀಕ್ಷೆ ಮಾಡುತ್ತಲೇ ಇರುತ್ತಾರೆ. ಹೀಗೆ ಪರೀಕ್ಷಿಸುವಾಗ ಆ ಖಾನಾವಳಿಯ ಆಹಾರದ ಗುಣಮಟ್ಟ ತಗ್ಗಿದರೆ, ಕಳಪೆಗೊಂಡರೆ ಮುಖ-ಮೂತಿ ನೋಡದೆ ಪಟ್ಟಿಯಿಂದ ಕೈಬಿಡಲಾಗುತ್ತದೆ. ಮೊದಲು ಮಿಷಲಿನ್ ಸ್ಟಾರ್ ಇತ್ತು, ಈಗಿಲ್ಲ ಎಂದರೆ ಆ ಖಾನಾವಳಿ ಮಾರನೆಯ ದಿನವೇ ಖಾಲಿ ಹೊಡೆಯಲು ಶುರುವಾಗುತ್ತದೆ, ವ್ಯಾಪಾರ ತಗ್ಗುತ್ತದೆ ಇತ್ಯಾದಿ.

ಹಾಗಾಗಿ ಒಮ್ಮೆ ಸಿಕ್ಕ ಪಟ್ಟವನ್ನು ಖಾನಾವಳಿಗಳು ಶತಗತಾಯ ಕಳೆದುಕೊಳ್ಳಬಾರದೆಂದು ಹೆಣಗು ತ್ತವೆ. ಈ ಪ್ರಶಸ್ತಿ ಖಾನಾವಳಿಗೆ ನೀಡುವುದಾದರೂ ಅದೆಷ್ಟೋ ಬಾರಿ ಅಲ್ಲಿನ ಮುಖ್ಯ ಬಾಣಸಿಗ ಕೆಲಸ ಬಿಟ್ಟು ಹೋಗುತ್ತಿದ್ದಂತೆ ರುಚಿ ಬದಲಾಗಿ ಆ ರೆಸ್ಟೋರೆಂಟ್‌ಗಳು ಮಿಷಲಿನ್ ಸ್ಟಾರ್ ಬಿರುದನ್ನು ಕಳೆದುಕೊಂಡು ಬಿಡುತ್ತವೆ.

ಹಾಗಾಗಿ ಮುಖ್ಯ ಬಾಣಸಿಗನಿಗೆ ಎಲ್ಲಿಲ್ಲದ ಮರ್ಯಾದೆ. ಒಟ್ಟಾರೆ ಮಿಷಲಿನ್ ಸ್ಟಾರ್ ಖಾನಾವಳಿ ಗಳಿಗೆ ಹೋಗಿ ಯಾವುದೇ ದಿನ, ಸಮಯ, ಯಾವ ಆಹಾರ ಸೇವಿಸಿದರೂ ಅದೇ ಗುಣಮಟ್ಟ ಗ್ರಾಹಕನಿಗೆ ಲಭ್ಯವಾಗುತ್ತದೆ ಎಂಬುದು ಪಕ್ಕಾ.

ಮಿಷಲಿನ್ ಕಂಪನಿ ಭಾರತದಲ್ಲಿ ಯಥೇಚ್ಛ ಟೈರ್‌ಗಳನ್ನು ಮಾರಾಟ ಮಾಡುತ್ತದೆ. ಆದರೆ ಮಿಷಲಿನ್ ಸ್ಟಾರ್ ವ್ಯವಸ್ಥೆ ಭಾರತದಲ್ಲಿ ಇನ್ನೂ ತಂದಿಲ್ಲ. ಇಂಥ ಪ್ರಾಮಾಣಿಕ ವ್ಯವಸ್ಥೆಗಳು ವಿದೇಶದ್ದೋ ಸ್ವದೇಶದ್ದೋ ಎನ್ನುವುದು ಮುಖ್ಯವಾಗುವುದಿಲ್ಲ.

ಸಿಂಗಾಪುರದ ಎಂಟಿಆರ್ ಸೇರಿದಂತೆ ಅದೆಷ್ಟೋ ಭಾರತೀಯ ರೆಸ್ಟೋರೆಂಟ್‌ಗಳು ವಿದೇಶದಲ್ಲಿ ಮಿಷಲಿನ್ ಸ್ಟಾರ್ ಮಾನ್ಯತೆಗಳನ್ನು ಪಡೆದಿವೆ. ಹಾಗಿದ್ದೂ ಭಾರತದಲ್ಲಿನ ರೆಸ್ಟೋರೆಂಟ್‌ಗಳಿಗೆ ಈ ಭಾಗ್ಯ ಬಂದಿಲ್ಲ. ಮಿಷಲಿನ್ ಕಂಪನಿಯವರಿಗೆ ಭಾರತದಲ್ಲಿ ‘ಪ್ರಾಮಾಣಿಕ ಇನ್ಸ್‌ಪೆಕ್ಟರ್’ ಸಿಗುವು ದಿಲ್ಲ ಎಂದು ಯಾರೋ ಕಿವಿ ಊದಿರಬೇಕು, ಕಾರಣ ಗೊತ್ತಿಲ್ಲ...!!