Roopa Gururaj Column: ನೆಸ್ಲೆ ಕಂಪನಿಯ ಕೋಟಿ ರೂಪಾಯಿಗಳ ಸೋಲು
ಇಂದಿನ ಅನುಭವ ನಾಳೆಗೆ ಸಿಹಿಯಾದ ನೆನಪಾಗುತ್ತದೆ. ಇಂದು ನೀವೇನೂ ಮಾಡುವುದು ಬೇಡ. ನಾಳೆ ಗಳು ಆಗ ನಿಮ್ಮವಾಗುತ್ತವೆ. ನೆಸ್ಲೆ ಕಂಪನಿ ದೊಡ್ಡ ರಿಸ್ಕ್ ತಗೆದುಕೊಂಡಿತು. ಅವರು ಕಾಫಿ ಪುಡಿ ಮಾರುವುದನ್ನು ನಿಲ್ಲಿಸಿ, ಜಪಾನಿನ ಮಕ್ಕಳಿಗಾಗಿ ಕಾಫಿ ಫ್ಲೆವರ್ ಹೊಂದಿದ್ದ ಚಾಕೊಲೇಟ್, ಕ್ಯಾಂಡಿ ಹಾಗೂ ಜೆಲ್ಲಿಗಳನ್ನು ಮಾರುಕಟ್ಟೆಗೆ ಲಗ್ಗೆ ಇಡಿಸಿದರು.
-
ಒಂದೊಳ್ಳೆ ಮಾತು
ಅದು 1970ರ ಸಮಯ. ಜಪಾನ್ ದೇಶ ಆರ್ಥಿಕವಾಗಿ ಬಲಿಷ್ಠವಾಗುತ್ತಿತ್ತು. ಇದನ್ನು ಕಂಡ ನೆಸ್ಲೆ ಕಂಪನಿ, ತನ್ನ ಹೆಮ್ಮೆಯ ‘ನೆಸ್ಕೆಫೆ’ ಇನ್ಸ್ಟಂಟ್ ಕಾಫಿಯನ್ನು ಜಪಾನ್ ಮಾರುಕಟ್ಟೆಗೆ ಪರಿಚಯಿ ಸಲು ನಿರ್ಧರಿಸಿತು. ಕಂಪನಿಯು ದೊಡ್ಡ ಮಟ್ಟದಲ್ಲಿ ರಿಸರ್ಚ್ ಮಾಡಿತು, ಜನರಿಗೆ ಕಾಫಿ ರುಚಿ ಇಷ್ಟ ಎಂದು ತಿಳಿದುಬಂತು, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾಹೀರಾತುಗಳನ್ನು ನೀಡಲಾಯಿತು. ಆದರೆ ಫಲಿತಾಂಶ? ಸಂಪೂರ್ಣ ಶೂನ್ಯ! ಜಪಾನಿಯರು ಕಾಫಿಯನ್ನು ಖರೀದಿಸಲೇ ಇಲ್ಲ.
ನೆಸ್ಲೆ ಕಂಪನಿಗೆ ಒಂದು ವಿಷಯ ತಡವಾಗಿ ಅರ್ಥವಾಯಿತು. ಅವರು ಸ್ಪರ್ಧಿಸುತ್ತಿರುವುದು ಮತ್ತೊಂದು ಕಾಫಿ ಬ್ರ್ಯಾಂಡ್ ಜೊತೆಯಲ್ಲ, ಬದಲಿಗೆ ಜಪಾನ್ ದೇಶದ ಶತಮಾನಗಳ ಹಳೆಯ ಸಂಸ್ಕೃತಿಯ ಜೊತೆಗೆ!
ಜಪಾನಿಯರಿಗೆ ‘ಗ್ರೀನ್ ಟೀ’ (ಹಸಿರು ಚಹಾ) ಕೇವಲ ಒಂದು ಪೇಯವಾಗಿರಲಿಲ್ಲ. ಅದು ಅವರ ನೆಮ್ಮದಿ, ಸಂಸ್ಕಾರ ಮತ್ತು ಬದುಕಿನ ಭಾಗವಾಗಿತ್ತು. ಅವರಿಗೆ ಕಾಫಿ ಎಂಬುದು ಕಹಿ ಮತ್ತು ಅಪರಿಚಿತ ಪಶ್ಚಿಮಾತ್ಯ ಪದ್ಧತಿಯಾಗಿ ಕಂಡುಬಂತು. ಕೋಟಿಗಟ್ಟಲೆ ನಷ್ಟ ಅನುಭವಿಸಿದ ನೆಸ್ಲೆ ಕಂಪನಿ, ಈ ರಹಸ್ಯವನ್ನು ಭೇದಿಸಲು ಡಾ. ಕ್ಲೋಟೇರ್ ರಾಪೈಲ್ (Dr.Clotaire Rapaille) ಎಂಬ ಫ್ರೆಂಚ್ ಮಕ್ಕಳ ಮನಃಶಾಸ್ತ್ರಜ್ಞನನ್ನು ಸಂಪರ್ಕಿಸಿತು.
ಇದನ್ನೂ ಓದಿ: Roopa Gururaj Column: ತಿರುಪತಿಯ ತಿಮ್ಮಪ್ಪನಿಗೆ ಕೂದಲು ಕೊಡುವ ಪದ್ದತಿ
ಡಾ.ರಾಪೈಲ್ ಜಪಾನಿನ ಗ್ರಾಹಕರೊಂದಿಗೆ ಒಂದು ವಿಶಿಷ್ಟ ಅಧ್ಯಯನ ನಡೆಸಿದರು. ಅವರು ಜನರನ್ನು ಶಾಂತವಾಗಿ ಕೂರಿಸಿ, ಅವರ ಬಾಲ್ಯದ ನೆನಪುಗಳನ್ನು ಕೆದಕಲು ಹೇಳಿದರು. ಜನರು ‘ಚಹಾ’ ಬಗ್ಗೆ ಮಾತನಾಡುವಾಗ ಭಾವುಕರಾದರು. ಅಜ್ಜಿಯ ಮನೆ, ಹಬ್ಬದ ವಾತಾವರಣ, ಸುರಕ್ಷತೆ ಯ ಭಾವನೆಗಳನ್ನು ನೆನಪಿಸಿಕೊಂಡರು. ಆದರೆ ‘ಕಾಫಿ’ ಬಗ್ಗೆ ಕೇಳಿದಾಗ ಅವರ ಮನಸ್ಸು ಸಂಪೂರ್ಣ ಖಾಲಿಯಾಗಿತ್ತು!
ಅವರ ಬಾಲ್ಯದಲ್ಲಿ ಕಾಫಿಯ ಯಾವುದೇ ನೆನಪುಗಳಿರಲಿಲ್ಲ. ಡಾ.ರಾಪೈಲ್ ನೆಸ್ಲೆ ಕಂಪನಿಗೆ ಒಂದು ಸರಳ ಆದರೆ ಮಾರ್ಮಿಕ ಸತ್ಯವನ್ನು ಹೇಳಿದರು: ಯಾವ ವಸ್ತುವಿನ ಬಗ್ಗೆ ಮನುಷ್ಯನ ಮನಸ್ಸಿನಲ್ಲಿ ಬಾಲ್ಯದ ನೆನಪಿರುವುದಿಲ್ಲವೋ, ಅದನ್ನು ನೀವು ಮಾರಾಟ ಮಾಡಲು ಸಾಧ್ಯವಿಲ್ಲ.
ಜಪಾನೀಯರಿಗೆ ಚಹಾದೊಂದಿಗೆ ಇದ್ದ ಭಾವನಾತ್ಮಕ ಬೆಸುಗೆ ಕಾಫಿಯೊಂದಿಗೆ ಇರಲಿಲ್ಲ. ದೊಡ್ಡ ವರನ್ನು ಬದಲಾಯಿಸುವುದು ಅಸಾಧ್ಯ ಎಂದು ಅವರು ನೆಸ್ಲೆಗೆ ಸ್ಪಷ್ಟಪಡಿಸಿದರು. ಇಲ್ಲಿಂದಲೇ ನೆಸ್ಲೆ ಕಂಪನಿಯ ನಿಜವಾದ ಆಟ ಶುರುವಾಗಿದ್ದು. ಡಾ.ರಾಪೈಲ್ ಒಂದು ಅದ್ಭುತ ಉಪಾಯ ಕೊಟ್ಟ. ಈಗಿನ ದೊಡ್ಡವರನ್ನು ಬಿಟ್ಟುಬಿಡಿ, ಅವರ ಮಕ್ಕಳ ಮನಸ್ಸನ್ನು ನೀವು ಗೆಲ್ಲಬಹುದು. ಆ ಮಕ್ಕಳಿಗೆ ಒಂದು ಸಿಹಿಯಾದ ಅನುಭವವನ್ನು ಕೊಡಿ.
ಇಂದಿನ ಅನುಭವ ನಾಳೆಗೆ ಸಿಹಿಯಾದ ನೆನಪಾಗುತ್ತದೆ. ಇಂದು ನೀವೇನೂ ಮಾಡುವುದು ಬೇಡ. ನಾಳೆಗಳು ಆಗ ನಿಮ್ಮವಾಗುತ್ತವೆ. ನೆಸ್ಲೆ ಕಂಪನಿ ದೊಡ್ಡ ರಿಸ್ಕ್ ತಗೆದುಕೊಂಡಿತು. ಅವರು ಕಾಫಿ ಪುಡಿ ಮಾರುವುದನ್ನು ನಿಲ್ಲಿಸಿ, ಜಪಾನಿನ ಮಕ್ಕಳಿಗಾಗಿ ಕಾಫಿ ಫ್ಲೆವರ್ ಹೊಂದಿದ್ದ ಚಾಕೊಲೇಟ್, ಕ್ಯಾಂಡಿ ಹಾಗೂ ಜೆಲ್ಲಿಗಳನ್ನು ಮಾರುಕಟ್ಟೆಗೆ ಲಗ್ಗೆ ಇಡಿಸಿದರು. ಜಪಾನಿನ ಮಕ್ಕಳಿಗೆ ಕಾಫಿಯ ಕಹಿ ಗೊತ್ತಿರಲಿಲ್ಲ, ಅವರಿಗೆ ಆ ಸಿಹಿ ಮಿಠಾಯಿಗಳು ತುಂಬಾ ಇಷ್ಟವಾದವು. ಆ ಟಾಫಿಗಳನ್ನು ಚಪ್ಪರಿಸುತ್ತಾ ಅರಿಯದ ವಯಸ್ಸಿನ ಆ ಮಕ್ಕಳ ಉಪಪ್ರಜ್ಞೆ ಮನಸ್ಸಿನಲ್ಲಿ ಕಾಫಿಯ ಸುವಾಸನೆ ಮತ್ತು ರುಚಿ, ಸಂತೋಷದ ಸಂಕೇತವಾಗಿ ಅಚ್ಚೊತ್ತಿ ಹೋಯಿತು! ಕಾಲ ಉರುಳಿತು.
ಹತ್ತು ವರ್ಷಗಳ ನಂತರ, ಚಾಕೊಲೇಟ್ ತಿಂದು ಬೆಳೆದ ಆ ಮಕ್ಕಳು ಈಗ ಯುವಕ/ ಯುವತಿಯ ರಾಗಿ ಜಪಾನಿನ ಕಾರ್ಪೊರೇಟ್ ಜಗತ್ತಿಗೆ ಕಾಲಿಟ್ಟರು. ದಿನವಿಡೀ ಕಷ್ಟಪಟ್ಟು ಕೆಲಸ ಮಾಡುವ ಅವರಿಗೆ ಆಯಾಸ ಪರಿಹರಿಸಿಕೊಳ್ಳಲು ಕೆಫೀನ್ ಅಗತ್ಯವಿತ್ತು. ಸರಿಯಾದ ಸಮಯ ನೋಡಿದ ನೆಸ್ಲೆ ಕಂಪನಿ, ಮತ್ತೆ ‘ನೆಸ್ಕೆಫೆ ಕಾಫಿ’ಯನ್ನು ಮಾರುಕಟ್ಟೆಗೆ ತಂದಿತು. ಈ ಬಾರಿ ಜಪಾನಿಯರಿಗೆ ಅದು ಅಪರಿಚಿತ ಪಾನೀಯವಾಗಿ ಕಾಣಲಿಲ್ಲ!
ಕಾಫಿಯ ಸುವಾಸನೆ ಮೂಗಿಗೆ ಬಡಿಯುತ್ತಿದ್ದಂತೆ, ಅವರಲ್ಲಿ ಬಾಲ್ಯದ ಮಧುರ ನೆನಪುಗಳು ಮುತ್ತಿಟ್ಟವು. ಜಪಾನ್ನ ಯುವ ಜನತೆಗೆ ಅದೊಂದು ಪರಿಚಿತ ಮತ್ತು ಆಪ್ತ ಅನುಭವವನ್ನು ನೀಡಿತು. ಕಾಫಿ ಯನ್ನು ಅಪರಿಚಿತ ಪೇಯವಾಗಿ ನೋಡುವ ಭಾವನಾತ್ಮಕ ಗೋಡೆ ಸಂಪೂರ್ಣ ವಾಗಿ ಉರುಳಿ ಬಿದ್ದಿತ್ತು! ಆ ಯಶಸ್ಸಿನ ನಂತರ ನೆಸ್ಲೆ ಹಿಂದೆ ತಿರುಗಿ ನೋಡಲೇ ಇಲ್ಲ. ಕಚೇರಿಗಳಿಗೆ ಉಚಿತ ಕಾಫಿ ಮೆಷಿನ್ ನೀಡುವ ‘ನೆಸ್ಕೆಫೆ ಅಂಬಾಸಿಡರ್’ ಪ್ರೋಗ್ರಾಂ ಮೂಲಕ ಪ್ರತಿಯೊಂದು ಆಫೀಸ್ ತಲುಪಿತು.
ಇಂದು ಜಪಾನ್ ಪ್ರಪಂಚದ ಅತಿ ಹೆಚ್ಚು ಕಾಫಿ ಬಳಸುವ ದೇಶಗಳಲ್ಲಿ ಒಂದಾಗಿದೆ ಮತ್ತು ಅಲ್ಲಿನ ಇನ್ಸ್ಟಂಟ್ ಕಾಫಿ ಮಾರುಕಟ್ಟೆಯ ಶೇಕಡಾ 70 ರಷ್ಟನ್ನು ನೆಸ್ಲೆ ಕಂಪನಿಯೇ ಆಳುತ್ತಿದೆ!
ಇಂದಿನ ಬಿಸಿನೆಸ್ ಜಗತ್ತು ತಕ್ಷಣದ ಲಾಭ ಮತ್ತು ಮುಂದಿನ ಕ್ವಾರ್ಟರ್ನ ರಿಸಲ್ಟ್ಗಾಗಿ ಓಡುತ್ತಿದೆ. ಕೆಲವೊಮ್ಮೆ ಮಾರುಕಟ್ಟೆ ಯನ್ನು ಗೆಲ್ಲಲು ತಾಳ್ಮೆ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿ ಕೊಳ್ಳುವ ಮನಸ್ಸು ಬೇಕು. ಇದು ಬಿಸಿನೆಸ್ಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ ಮನುಷ್ಯ ಸಂಬಂಧ ಗಳಲ್ಲೂ ಕೂಡ ತಾಳ್ಮೆ, ಭಾವನಾತ್ಮಕ ಅನುಬಂಧಗಳು ಎಲ್ಲವೂ ಅತ್ಯಗತ್ಯ