Nithin A Gokhale Column: ತೊಂದರೆ ಕೊಟ್ಟು ಕೆಲಸ ಸಾಧಿಸೋದೇ ಟ್ರಂಪ್ ತಂತ್ರ !
ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಶ್ವೇತಭವನಕ್ಕೆ ಪುನಃ ಟ್ರಂಪ್ ಪ್ರವೇಶವಾಗಿದೆ. ಅವರ ಎರಡನೇ ಅವಧಿಯ ಬಗ್ಗೆ ಅಮೆರಿಕದಲ್ಲೂ, ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ನಾನಾ ನಿರೀಕ್ಷೆಗಳು ಮತ್ತು ಆತಂಕಗಳಿವೆ


ವಿಚಾರ ವೇದಿಕೆ
ನಿತಿನ್ ಎ ಗೋಖಲೆ
ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ಗೆ ಹೆಚ್ಚು ಹಣ ನೀಡಿ, ಅವರ ನಿಲುವು ಗಳಿಗೆ ಬೇಷರತ್ ಬೆಂಬಲ ನೀಡಿದವರು ಅಮೆರಿಕದ ಉದ್ಯಮಿ ಎಲಾನ್ ಮಸ್ಕ್. ಟ್ರಂಪ್‌ರ ಚುನಾವಣಾ ಪ್ರಚಾರಕ್ಕೆ ಕೋಟ್ಯಂತರ ಡಾಲರ್‌ಗಳನ್ನು ಮಸ್ಕ್ ಸುರಿದಿದ್ದಾರೆ. ಅವರನ್ನೂ, ವಿವೇಕ್ ರಾಮಸ್ವಾಮಿ ಯನ್ನೂ ಟ್ರಂಪ್ ತಮ್ಮ ಸರಕಾರದ ದಕ್ಷತೆಯನ್ನು ಹೆಚ್ಚಿಸುವ ಕೆಲಸಕ್ಕೆ ನಿಯೋಜಿಸಿಕೊಂಡಿದ್ದಾರೆ. ಹೀಗಾಗಿ ಮುಂದಿನ 4 ವರ್ಷ ಅಮೆರಿಕದ ಆಡಳಿತದಲ್ಲಿ ಎಲಾನ್ ಮಸ್ಕ್ ದೊಡ್ಡ ಪ್ರಭಾವ ಹೊಂದಿರುತ್ತಾರೆ ಎಂಬ ಭಾವನೆ ಜನರಲ್ಲಿದೆ.
ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಶ್ವೇತಭವನಕ್ಕೆ ಪುನಃ ಟ್ರಂಪ್ ಪ್ರವೇಶವಾಗಿದೆ. ಅವರ ಎರಡನೇ ಅವಧಿಯ ಬಗ್ಗೆ ಅಮೆರಿಕದಲ್ಲೂ, ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ನಾನಾ ನಿರೀಕ್ಷೆಗಳು ಮತ್ತು ಆತಂಕಗಳಿವೆ. ವಿದೇಶಾಂಗ ವ್ಯವಹಾರಗಳ ತಜ್ಞರು ಟ್ರಂಪ್ ಅಧಿಕಾರ ಹೇಗೆ ಅಮೆರಿಕದ ಜಾಗತಿಕ ಸಂಬಂಧಗಳ ಮೇಲೆ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರಗಳಲ್ಲಿ ತೊಡಗಿದ್ದಾರೆ. ಒಟ್ಟಿನಲ್ಲಿ ಟ್ರಂಪ್ ಪುನರಾಗಮನ ಸಾಕಷ್ಟು ಕುತೂಹಲ ವನ್ನಂತೂ ಮೂಡಿಸಿದೆ. ಮುಂದೇ ನಾಗಲಿದೆ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ.
ಟ್ರಂಪ್ ಆಡಳಿತ 2.0
ಶ್ವೇತಭವನದಲ್ಲಿ ಟ್ರಂಪ್ ಅವರ ಎರಡನೇ ಇನ್ನಿಂಗ್ಸ್ ಹೇಗಿರಬಹುದು ಎಂಬ ಬಗ್ಗೆ ನಾನಾ ಊಹಾ ಪೋಹಗಳು ಹರಡುತ್ತಿವೆ. ರಾಜಕೀಯ ವಿಶ್ಲೇಷಕ ಹಾಗೂ ಹಿರಿಯ ಪತ್ರಕರ್ತ ಎಂ.ಜೆ.ಅಕ್ಬರ್ ಅವರ ಪ್ರಕಾರ ಈ ಅವಧಿ ಯಲ್ಲೂ ನಾವು ಹಳೆಯ ಟ್ರಂಪ್ ಅವರನ್ನೇ ನೋಡಬಹುದು, ಆದರೆ ಶ್ವೇತ ಭವನವೇ ಬದಲಾಗಿರುತ್ತದೆ. ಅದು ಹೇಗೆ? ಟ್ರಂಪ್ ಬಗ್ಗೆ ಯೋಚಿಸಿದಾಗಲೆಲ್ಲ ನಮಗೆ ಅವರ ಅತಿರೇಕದ ವರ್ತನೆಗಳು ಹಾಗೂ ಬೆದರಿಕೆಯ ಪ್ರವೃತ್ತಿಯೇ ನೆನಪಿಗೆ ಬರುತ್ತದೆ. ವಾಸ್ತವವಾಗಿ ಇದೇ ಟ್ರಂಪ್ ಅವರ ತಂತ್ರಗಾರಿಕೆ. ತಾವು ಅಂದುಕೊಂಡಿದ್ದನ್ನು ಸಾಧಿಸಲು ಹಾಗೂ ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳಲು ಅವರು ‘ತೊಂದರೆ ಕೊಟ್ಟು ದಾರಿಗೆ ತರುವ’ ಕಾರ್ಯಶೈಲಿ ಅನುಸರಿಸು ತ್ತಾರೆ. ಹಾಗಂತ ತೊಂದರೆ ಕೊಡು ವುದೇ ಅವರ ಉದ್ದೇಶವಲ್ಲ. ಅವರೊಬ್ಬ ಪರ್ಮನೆಂಟ್ ಟ್ರಬಲ್ ಮೇಕರ್ ಅಲ್ಲ. ಆದರೆ ತಮ್ಮ ಗುರಿ ಸಾಧಿಸಲು ಯಾರಿಗೆ ಎಷ್ಟು ತೊಂದರೆ ಕೊಡಬೇಕೋ ಅಷ್ಟು ತೊಂದರೆಯನ್ನು ಸೀಮಿತ ಅವಧಿಗೆ ಕೊಟ್ಟು ಕಾರ್ಯಸಾಧನೆ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ಎಂ.ಜೆ.ಅಕ್ಬರ್. ಅದಕ್ಕೆ ತಕ್ಕಂತೆ ಅವರ ಎರಡನೇ ಅವಧಿಯಲ್ಲಿ ಶ್ವೇತಭವನವೇ ಮರುವಿನ್ಯಾಸ ಗೊಳ್ಳಲಿದೆ.
ಇದನ್ನೂ ಓದಿ: Rajendra Bhat Column: ಕ್ರಾಂತಿಯ ಕಿಡಿ ನೇತಾಜಿ ಸುಭಾಸ್ ಚಂದ್ರ ಬೋಸ್
ಗಾಜಾದಲ್ಲಿ ಶಾಂತಿ ಸ್ಥಾಪನೆ
ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧ ನಿಲ್ಲಬೇಕೆಂದು ಟ್ರಂಪ್ ಗುಡುಗಿ ದ್ದರು. ತಾವು ಅಧಿಕಾ ರಕ್ಕೆ ಬರುವುದರೊಳಗೆ ಅಲ್ಲಿ ಕದನವಿರಾಮ ಜಾರಿಗೆ ಬಂದಿರಬೇಕು ಎಂದು ಗಡುವು ವಿಧಿಸಿದ್ದರು. ಅದರಂತೆ ಅಲ್ಲೀಗ ಕದನವಿರಾಮ ಜಾರಿಗೆ ಬಂದಿದೆ.
ಅವರಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಒಂದಷ್ಟು ಶಾಂತಿ ನೆಲೆಸುವಂತಾಗಿದೆ ಅಂದರೆ ಅದರ ಅರ್ಥ ಅಮೆರಿಕದ ಬೇರೆಲ್ಲಾ ಅಧ್ಯಕ್ಷರಿಗೆ ಹೇಗೆ ಜಗತ್ತಿನ ಯಾವುದಾದರೂ ಒಂದು ಭಾಗದಲ್ಲಿ ಯಾವಾ ಗಲೂ ಯುದ್ಧ ನಡೆಯುತ್ತಿರಬೇಕು ಎಂಬ ಉದ್ದೇಶವಿರುತ್ತದೆಯೋ ಅಂಥ ಉದ್ದೇಶ ಟ್ರಂಪ್‌ಗೆ ಇಲ್ಲ. ಅಂದರೆ ಯುದ್ಧದಲ್ಲಿ ಟ್ರಂಪ್ ಬಂಡವಾಳ ಹೂಡಿಕೆ ಮಾಡಿಲ್ಲ.
ಇಸ್ರೇಲ್-ಗಾಜಾ ಶಾಂತಿ ಒಪ್ಪಂದದಲ್ಲಿ ಟ್ರಂಪ್ ಪಾತ್ರವಿದೆ ಎಂದು ಜೋ ಬೈಡೆನ್ ಆಡಳಿತವೇ ಒಪ್ಪಿಕೊಂಡಿದೆ. ಟ್ರಂಪ್ ಅವರ ದೂತ ಇಂಥದೊಂದು ಒಪ್ಪಂದ ಯಶಸ್ವಿಯಾಗಿ ಜಾರಿಗೆ ಬರು ವಂತೆ ನೋಡಿಕೊಂಡಿದ್ದಾನೆ. ‘ನನ್ನ ಪ್ರಕಾರ ಟ್ರಂಪ್‌ಗೆ ಶ್ವೇತಭವನದ ಅಗತ್ಯಕ್ಕೆ ತಕ್ಕಂತೆ ಶಾಂತಿ ಸ್ಥಾಪನೆಯಾಗುವ ಅಗತ್ಯವಿದೆ. ಅಂದರೆ ತಮಗೆ ಹೇಗೆ ಬೇಕೋ ಹಾಗೆ ಶಾಂತಿ ಸ್ಥಾಪನೆಯಾಗಬೇಕಿದೆ. ಅದನ್ನು ಅವರು ಏನಕೇನ ಪ್ರಕಾರೇಣ ಮಾಡಿಯೇ ಮಾಡುತ್ತಾರೆ.
ತಕ್ಷಣವೇ ಅಂಥ ಕೆಲಸಕ್ಕೆ ಕೈಹಾಕುತ್ತಾರೆ. ಸ್ಥಾಪಿತ ಸತ್ಯಗಳನ್ನು ಮುರಿಯುವುದು ಅಂದರೆ ಅವರಿಗೆ ಇಷ್ಟ. ಏಕೆಂದರೆ ಅಂಥ ವ್ಯವಸ್ಥೆಗೆ ಅವರು ಮಾನ್ಯತೆಯನ್ನೇ ನೀಡುವುದಿಲ್ಲ’ ಎಂಬುದು ಎಂ.ಜೆ. ಅಕ್ಬರ್ ಅಭಿಮತ.
ಪಕ್ಕಾ ಪ್ರಾಕ್ಟಿಕಲ್ ಮನುಷ್ಯ
ಎಂ.ಜೆ.ಅಕ್ಬರ್ ಪ್ರಕಾರ ಟ್ರಂಪ್ ಅಧಿಕಾರಕ್ಕೆ ಬಂದರೆ ಏನೇನಾಗುತ್ತದೆ ಎಂದು ಜನರು ಲೆಕ್ಕ ಹಾಕು ತ್ತಿದ್ದಾರೋ ಅದೆಲ್ಲವೂ ಆಗುವುದಿಲ್ಲ. ಅವುಗಳಲ್ಲಿ ಕೆಲವು ಜಾರಿಗೆ ಬರಬಹುದಷ್ಟೆ. ಹೀಗಾಗಿ ಜಗತ್ತು ನಿರೀಕ್ಷಿಸಿದಂತೆ ಟ್ರಂಪ್ ಆಡಳಿತ ಇರುವುದಿಲ್ಲ. ಉದಾಹರಣೆಗೆ, ಉಕ್ರೇನ್ ಯುದ್ಧದ ವಿಷಯವನ್ನೇ ತೆಗೆದುಕೊಳ್ಳಿ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರನ್ನು ಟ್ರಂಪ್ ಭೇಟಿಯಾದರೆ ಏನು ತಪ್ಪು? ಇಷ್ಟು ದಿನ ಅಮೆರಿಕವು ಉಕ್ರೇನ್ ಪರ ನಿಂತು, ರಷ್ಯಾವನ್ನು ಬಹಿರಂಗವಾಗಿ ವಿರೋಽಸುತ್ತಿತ್ತು. ಆದರೆ ಟ್ರಂಪ್ ಪ್ರಾಕ್ಟಿಕಲ್ ಮನುಷ್ಯ. ಉಕ್ರೇನ್‌ನಲ್ಲಿ ಪುಟಿನ್ ಮಾಡಿದ್ದನ್ನು ನಾವು-ನೀವು ಒಪ್ಪದೆ ಇರಬಹುದು.
ಆದರೆ, ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದರಲ್ಲಿ ಏನು ತಪ್ಪಿದೆ? ಪುಟಿನ್ ಎಂಬ ಅಧ್ಯಕ್ಷ ಅಸ್ತಿತ್ವದಲ್ಲೇ ಇಲ್ಲ ಎಂಬಂತೆ ಅವರನ್ನು ಕಡೆಗಣಿಸಿ ಉಕ್ರೇನ್ ಬಿಕ್ಕಟ್ಟಿಗೆ ಯಾರೂ ಪರಿ ಹಾರ ಹುಡುಕಲು ಸಾಧ್ಯವಿಲ್ಲ. ಹೀಗಾಗಿ, ನನ್ನ ಪ್ರಕಾರ, ಟ್ರಂಪ್ ಅವರ ಆಡಳಿತದ ಮುಂದಿನ ನಾಲ್ಕು ವರ್ಷಗಳು ವಿರೋಧಿಗಳು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ನಾಟಕೀಯವಾಗಿಯೂ, ಶಾಂತಿಯ ಪ್ರತಿಪಾದಕರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ನಾಟಕೀಯವಾಗಿಯೂ ಇರುತ್ತದೆ ಎನ್ನುತ್ತಾರೆ ಎಂ.ಜೆ. ಅಕ್ಬರ್.
ಎಲಾನ್ ಮಸ್ಕ್ ಜತೆ ಸ್ನೇಹ
ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ಗೆ ಅತಿ ಹೆಚ್ಚು ಹಣ ನೀಡಿ, ಅವರ ನಿಲುವುಗಳಿಗೆ ಬೇಷರತ್ ಬೆಂಬಲ ನೀಡಿದವರು ಅಮೆರಿಕದ ಅತಿದೊಡ್ಡ ಉದ್ಯಮಿ ಎಲಾನ್ ಮಸ್ಕ್. ಟ್ರಂಪ್ ಅವರ ಚುನಾವಣಾ ಪ್ರಚಾರಕ್ಕೆ ಕೋಟ್ಯಂತರ ಡಾಲರ್‌ಗಳನ್ನು ಮಸ್ಕ್ ಸುರಿದಿದ್ದಾರೆ.
ಅವರನ್ನೂ, ವಿವೇಕ್ ರಾಮಸ್ವಾಮಿಯನ್ನೂ ಟ್ರಂಪ್ ತಮ್ಮ ಸರಕಾರದ ದಕ್ಷತೆಯನ್ನು ಹೆಚ್ಚಿಸುವ ಕೆಲಸಕ್ಕೆ ನಿಯೋಜಿಸಿಕೊಂಡಿದ್ದಾರೆ. ಹೀಗಾಗಿ ಮುಂದಿನ ನಾಲ್ಕು ವರ್ಷಗಳ ಕಾಲ ಅಮೆರಿಕದ ಆಡಳಿತದಲ್ಲಿ ಎಲಾನ್ ಮಸ್ಕ್ ದೊಡ್ಡ ಪ್ರಭಾವ ಹೊಂದಿರುತ್ತಾರೆ ಎಂಬ ಭಾವನೆ ಸಾಕಷ್ಟು ಜನರಲ್ಲಿದೆ.
ಎಂ.ಜೆ.ಅಕ್ಬರ್ ಪ್ರಕಾರ ಹಾಗೇನೂ ಇರುವುದಿಲ್ಲ. ಏಕೆಂದರೆ ರಾಜಕಾರಣದಲ್ಲಿ ಉಪಕಾರ ಸ್ಮರಣೆಗೆ ಅಷ್ಟೇನೂ ಮಹತ್ವವಿಲ್ಲ. ಅದರ ಆಯಸ್ಸು ತುಂಬಾ ಸಣ್ಣದು. ‘ಮಸ್ಕ್ ನೀಡಿದ ಡಾಲರ್‌ಗಳಿಗೆ ಟ್ರಂಪ್ ಖಂಡಿತ ಆಭಾರಿಯಾಗಿರುತ್ತಾರೆ. ಆದರೆ, ತಮ್ಮ ಕಚೇರಿಯ ವ್ಯವಹಾರಗಳನ್ನು ಅಸ್ಥಿರ ಗೊಳಿಸುವುದಕ್ಕೆ ಅಥವಾ ಅನಗತ್ಯ ಪ್ರಭಾವಗಳನ್ನು ಬೀರುವುದಕ್ಕೆ ಟ್ರಂಪ್ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ನನಗೆ ಅನ್ನಿಸುತ್ತದೆ’ ಎಂದು ಅಕ್ಬರ್ ಹೇಳುತ್ತಾರೆ.
ಅಮೆರಿಕದ ಸರಕಾರವೇನೂ ಕಾರ್ಪೊರೇಟ್ ಕಂಪನಿಯಲ್ಲ. ಅದು ಕಾರ್ಪೊರೇಟ್‌ಗಿಂತ ಬಹಳ ದೊಡ್ಡದು ಹಾಗೂ ಅದಕ್ಕಿಂತ ಹೆಚ್ಚು ಸಂಕೀರ್ಣವಾದುದು. ಮಸ್ಕ್ ಮತ್ತು ರಾಮಸ್ವಾಮಿಗೆ ಎಕ್ಸಿಕ್ಯೂಟಿವ್ ಅಧಿಕಾರವನ್ನು ಟ್ರಂಪ್ ನೀಡುವುದಿಲ್ಲ. ಅಂದರೆ, ಅವರಿಬ್ಬರೂ ಏನು ಹೇಳು ತ್ತಾರೋ ಅದು ಅವರ ಆದೇಶವೆಂಬಂತೆ ಜಾರಿಗೆ ಬರುವುದಿಲ್ಲ.
ಬದಲಿಗೆ, ಅವರು ಅಮೆರಿಕದ ಸರಕಾರಕ್ಕೆ ಸಲಹೆಗಳನ್ನು ನೀಡುತ್ತಾರಷ್ಟೆ. ಸರಕಾರದ ಗಾತ್ರವನ್ನು ಹೇಗೆ ಕಡಿಮೆ ಮಾಡಬಹುದು ಎಂಬ ಬಗ್ಗೆ ನೀವು ಸಲಹೆ ನೀಡಿ ಎಂದು ಅವರಿಗೆ ಟ್ರಂಪ್ ಸೂಚಿಸಿ ದ್ದಾರೆ. ಸರಕಾರವನ್ನು ನಡೆಸುವುದಕ್ಕಾಗಲೀ, ಬದಲಾಯಿಸುವುದಕ್ಕಾಗಲೀ ಅವರಿಗೆ ಯಾವುದೇ ಅಧಿಕಾರ ನೀಡಿಲ್ಲ.
ಭಾರತದ ಮೇಲೆ ಪರಿಣಾಮ
ಯಾವುದೇ ದೇಶದಲ್ಲಿ ಸರಕಾರ ಬದಲಾದರೂ ಸಹಜವಾಗಿಯೇ ಭಾರತ ತನ್ನ ಹಿತಾಸಕ್ತಿಯ ಕೋನದಿಂದಲೇ ಆ ಬೆಳವಣಿಗೆಯನ್ನು ಗಮನಿಸುತ್ತದೆ. ಟ್ರಂಪ್ ಮತ್ತು ಅಮೆರಿಕದ ವಿಷಯದಲ್ಲಿ ಭಾರತದ ನಿಲುವು ಪ್ರಧಾನಿ ನರೇಂದ್ರ ಮೋದಿಯವರ ವಾಸ್ತವವಾದಿ ದೃಷ್ಟಿಕೋನಗಳ ಮೇಲೆ ನಿಂತಿರುತ್ತದೆ ಎನ್ನುತ್ತಾರೆ ಅಕ್ಬರ್. ಇದಕ್ಕೆ ಅವರು ಕೆಲ ನಿರ್ದಿಷ್ಟ ಉದಾ ಹರಣೆಗಳನ್ನು ನೀಡು ತ್ತಾರೆ.
ಭಾರತ ಅತಿಹೆಚ್ಚು ಗಮನ ನೀಡುವುದು ತನ್ನ ನೆರೆ ದೇಶಗಳಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ. ನಂತರ ಕ್ವಾಡ್ ದೇಶಗಳು ಮತ್ತು ಪಶ್ಚಿಮ ಏಷ್ಯಾದ ದೇಶಗಳ ಬಗ್ಗೆ ಗಮನ ಹರಿಸುತ್ತದೆ. ಭಾರತೀಯ ನೌಕಾಪಡೆ ಈಗ ಕೆಂಪು ಸಮುದ್ರದಲ್ಲಿ ಮಿಲಿಟರಿ ಚಟುವಟಿಕೆಗಳನ್ನು ನಡೆಸಲು ಆರಂಭಿಸಿದೆ. ಭಾರತದ ಪ್ರಾಥಮಿಕ ಉದ್ದೇಶವೇನಿದ್ದರೂ ಆರ್ಥಿಕಾಭಿವೃದ್ಧಿ ಸಾಧಿಸುವುದು ಮತ್ತು ಎಲ್ಲರಿಗೂ ದರ ಲಾಭ ಸಿಗುವಂತೆ ನೋಡಿಕೊಳ್ಳುವುದು.
2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂಬುದು ಭಾರತದ ಗುರಿ. ಇದನ್ನು ಸಾಧಿ ಸಲು ಯಾವ ರೀತಿಯ ಸಂಬಂಧಗಳನ್ನು ಹೊಂದಬೇಕು, ಯಾವ ದೇಶದ ಜತೆಗೆ ಎಂಥ ಸಹಭಾಗಿತ್ವ ಸ್ಥಾಪಿಸಿಕೊಳ್ಳಬೇಕು, ಎಂಥ ವಿದೇಶಾಂಗ ನೀತಿಯನ್ನು ಹೊಂದಿರಬೇಕು, ಎಂಥ ಸ್ವದೇಶಿ ನೀತಿ ಯನ್ನು ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಭಾರತ ಗಮನ ಹರಿಸುತ್ತದೆ ಎನ್ನುತ್ತಾರೆ ಅಕ್ಬರ್.
ಅಷ್ಟರ ಮಟ್ಟಿಗೆ ಜಾಗತಿಕ ಸೂಪರ್ ಪವರ್ ದೇಶಗಳು ಭಾರತದ ದೃಷ್ಟಿಕೋನ ಮತ್ತು ಅಗತ್ಯಗಳ ಚೌಕಟ್ಟಿನೊಳಗೆ ಹೊಂದಿಕೊಳ್ಳಬೇಕು. ಭಾರತ ಕೂಡ ತನ್ನ ಹಿತಾಸಕ್ತಿಗಳಿಗೆ ಎಲ್ಲಿ ಬೆಂಬಲ ಸಿಗುತ್ತ ದೆಯೋ ಅಲ್ಲಿಗೆ ಸ್ನೇಹಹಸ್ತ ಚಾಚುತ್ತದೆ. ಟ್ರಂಪ್ ಅವರ ಶ್ವೇತಭವನ ಭಾರತದ ಅನುಕೂಲಕ್ಕೆ ಯಾವ ಪ್ರಮಾಣದಲ್ಲಿ ಒದಗಿಬರುತ್ತದೆ ಎಂಬುದನ್ನು ಕಾದುನೋಡಬೇಕಷ್ಟೆ.
(ಲೇಖಕರು ಹಿರಿಯ ಪತ್ರಕರ್ತರು)