ಆಧಾರ, ನಂಬಿಕೆ, ದೂಷಣೆ ಇತ್ಯಾದಿ
ನೂರಾರು, ಸಾವಿರಾರು ವರ್ಷಗಳ ಹಿಂದೆ, ಯಾವ ಆಧಾರವೂ ಇಲ್ಲದೆ, ಯಾವ ದಾಖಲೆಯೂ ಇಲ್ಲದೆ, ದೇವರುಗಳ, ರಾಕ್ಷಸರುಗಳ, ಜನ್ಮಜನ್ಮಗಳ ವೃತ್ತಾಂತಗಳನ್ನು, ‘ಇದು ಹೀಗೆಯೇ’ ಎಂದು ಯಾರೋ ಹೇಳಿದ್ದನ್ನು ಇಂದು ನಾವು ಹೇಗೆ ನಂಬಲು ಸಾಧ್ಯ? ಆದ್ದರಿಂದ, ನಾವೇಕೆ ಒಪ್ಪಬೇಕು? ಆದರೂ ಒಪ್ಪುತ್ತೇವೆ. ಏಕೆ? ಏಕೆಂದರೆ, ನಾವು ನಂಬುತ್ತೇವೆ.
-
ಪ್ರತ್ಯುತ್ತರ
ಎಚ್.ಆನಂದರಾಮ ಶಾಸ್ತ್ರೀ
ಎಷ್ಟೆಲ್ಲ ದೇವತೆಗಳಿದ್ದಾರೆ, ಯಾರೆಲ್ಲ ರಾಕ್ಷಸರು ಇದ್ದರು, ಅವರೆಲ್ಲರೂ ಹೇಗೆಲ್ಲ ಹುಟ್ಟಿದರು, ಏನೇನು ಮಾಡಿದರು, ಅವರು ತಮ್ಮ ಹಿಂದಿನ ಜನ್ಮಗಳಲ್ಲಿ ಏನೇನಾಗಿದ್ದರು, ಇವೆಲ್ಲವನ್ನೂ ನಮ್ಮ ಪೂರ್ವಜರು ನಮಗೆ ತಿಳಿಸಿದ್ದಾರೆ!
ಅರೆ! ಇಂತಹ ವಿಷಯಗಳನ್ನು ನಂಬುವ ಮನೋಭಾವವುಳ್ಳ ಪಕ್ಷವೆಂದು ಹೇಳಬಹುದಾದ ಪಕ್ಷವು ಅಳುತ್ತಿರುವ ಈ ದೇಶದ ಚುನಾವಣಾ ಆಯೋಗವು, ನಿರ್ದಿಷ್ಟ ದಾಖಲೆಗಳನ್ನು ನಾನು ಒದಗಿಸದೆ ಹೋದರೆ, ಮತದಾನದ ಹಕ್ಕನ್ನು ಹೊಂದಿರುವ ಈ ದೇಶದ ಪ್ರಜೆ ಎಂದು ನನ್ನನ್ನೇ ಒಪ್ಪುವುದಿಲ್ಲ!
ಹೀಗಿರುವಾಗ, ನೂರಾರು, ಸಾವಿರಾರು ವರ್ಷಗಳ ಹಿಂದೆ, ಯಾವ ಆಧಾರವೂ ಇಲ್ಲದೆ, ಯಾವ ದಾಖಲೆಯೂ ಇಲ್ಲದೆ, ದೇವರುಗಳ, ರಾಕ್ಷಸರುಗಳ, ಜನ್ಮಜನ್ಮಗಳ ವೃತ್ತಾಂತಗಳನ್ನು, ‘ಇದು ಹೀಗೆಯೇ’ ಎಂದು ಯಾರೋ ಹೇಳಿದ್ದನ್ನು ಇಂದು ನಾವು ಹೇಗೆ ನಂಬಲು ಸಾಧ್ಯ? ಆದ್ದರಿಂದ, ನಾವೇಕೆ ಒಪ್ಪಬೇಕು? ಆದರೂ ಒಪ್ಪುತ್ತೇವೆ. ಏಕೆ? ಏಕೆಂದರೆ, ನಾವು ನಂಬುತ್ತೇವೆ.
ಇದನ್ನೂ ಓದಿ: Shashidhara Halady Column: ಮಳೆ ನೀರನ್ನೇ ಕುಡಿಯುತ್ತಿದ್ದ ಆ ದಿನಗಳು!
ಏಕೆ ನಂಬುತ್ತೇವೆ? ನಂಬಿಕೆಯೇ ನಮ್ಮ ಜೀವ, ನಮ್ಮ ಜೀವನ. ನಮ್ಮ ಭಯಗಳಿಗೆ, ದುಃ ಖಗಳಿಗೆ, ಸಮಸ್ಯೆಗಳಿಗೆ ಪರಿಹಾರ ನಂಬಿಕೆ. ಆಸೆಗಳಿಗೆ, ಕೊನೆಗೆ ನಮ್ಮ ವೈರಾಗ್ಯಕ್ಕೂ ಆಸರೆ ನಂಬಿಕೆ. ‘ಇದ ಮಿತ್ಥಮ’ ಎಂದು ಯಾವುದೂ ಗೊತ್ತಿರದ ನಮ್ಮೀ ಬಾಳಿನಲ್ಲಿ, ನಂಬಿಕೆ ಎಂಬ ಪರಿಹಾರದ, ಆಸರೆಯ ಪಾತ್ರ ದೊಡ್ಡದು. ಆದ್ದರಿಂದ ನಾವು ನಂಬುತ್ತೇವೆ.
ಹೀಗಿರುವಾಗ, ಒಬ್ಬರ ನಂಬಿಕೆಯನ್ನು, ಎಲ್ಲಿಯ ವರೆಗೂ ಅದು ಇತರರಿಗೆ ಯಾವ ಹಾನಿಯನ್ನೂ ಮಾಡು ವುದಿಲ್ಲವೋ, ಅಲ್ಲಿಯವರೆಗೂ ಖಂಡಿ ಸದಿರುವುದು ನೀತಿ, ಧರ್ಮ. ಖಂಡಿಸಿದರೆ ಅದು ಅನೀತಿ, ಅಧ ರ್ಮ. ಆ ನಂಬಿಕೆಯು ಒಂದು ವೇಳೆ ಮೌಢ್ಯವಾಗಿ, ಇತರರನ್ನು ಅಥವಾ ನಂಬಿದ ವ್ಯಕ್ತಿಯನ್ನೇ ತೊಂದರೆಗೀಡು ಮಾಡುವಂತಿದ್ದರೆ ಅಂಥ ನಂಬಿಕೆ ಯನ್ನು ನಿವಾರಿಸ ಬೇಕಾದ ನೈತಿಕ ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆ ಸಮಾಜಕ್ಕೆ ಇದೆ. ಇದರ ಹೊರತಾಗಿ, ಸ್ವಾತಂತ್ರ್ಯ ವೆಂಬುದು ಸ್ವೇಚ್ಛೆಯಾಗುವುದು ತರವಲ್ಲ.
‘ನನ್ನ ಮಠದೊಳಗೆ, ಮನೆಯೊಳಗೆ ನನ್ನವರಿಗಾಗಿ ನಾನು ಹೇಳಿದರೆ ಹೊರಗಿನವರಾದ ನೀವೇಕೆ ಉರಿದು ಬೀಳುತ್ತೀರಿ’, ಎಂದು ಪ್ರಶ್ನಿಸುವುದು ಧೂರ್ತ ನಡೆ. ನನ್ನ ಮನೆಯೊಳಗೆ ನಾನು ನನ್ನವ ರೆದುರು ಹೊರಗಿನ ಯಾರನ್ನೋ ದೂಷಿಸಿ, ಹಾಗೆ ದೂಷಿಸಿದ್ದನ್ನು ಬೋರ್ಡಿನಲ್ಲಿ ಬರೆದು ಮನೆಯ ಗೇಟಿನ ಹೊರಗೆ ರಸ್ತೆ ಬದಿಯಲ್ಲಿ ಪ್ರದರ್ಶಿಸಿದರೆ, ಅದನ್ನು ನೋಡಿಯೂ ಸಂಬಂಧಿಸಿದವರು ಸುಮ್ಮನಿರಬೇಕೇ? ದೂಷಿಸಲೇಬೇಕೆಂದಿದ್ದರೆ, ದೂಷಿಸಿದ್ದನ್ನು ಜಾಹಿರುಗೊಳಿಸಲೇ ಬೇಕೆಂದಿದ್ದರೆ ಸಂಬಂಧಿಸಿದವರ ಸಮಕ್ಷಮದಲ್ಲಿ, ಆಧಾರಸಹಿತವಾಗಿ ವಾದ ಮಂಡಿಸಿ, ಅವರ ವಾದವನ್ನು ಸ್ವೀಕರಿಸಿ ಚರ್ಚಿಸಬೇಕಾದ್ದು ನ್ಯಾಯ ತಾನೆ? ಉಡುಪಿಯ ಮಠವೊಂದರಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಆಡಲಾದ ದೂಷಣೆಯ ಮಾತುಗಳು ಹುಟ್ಟುಹಾಕಿರುವ ವಿವಾದದ ಬಗ್ಗೆ ಇಷ್ಟೆಲ್ಲ ಹೇಳಿದ ಮೇಲೆ ಕೊನೆಯಲ್ಲಿ ನಾನು ಹೇಳುವುದಿಷ್ಟೇ, ಅಧಿಕೃತ ಮತ್ತು ಸತ್ಯ ಎಂದು ಪ್ರೂವ್ ಮಾಡಬಹುದಾದ ದಾಖಲೆ ಇಲ್ಲದೆ, ಏನನ್ನೇ ಆಗಲಿ, ಯಾರನ್ನೇ ಆಗಲಿ ದೂಷಿಸುವುದು ಪರಮ ಮೌಢ್ಯ ಅಥವಾ ಪೂರ್ವಗ್ರಹ ಪೀಡೆ ಅಥವಾ ತಣ್ಣನೆಯ ಕ್ರೌರ್ಯ.