ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shashidhara Halady Column: ಮಳೆ ನೀರನ್ನೇ ಕುಡಿಯುತ್ತಿದ್ದ ಆ ದಿನಗಳು!

ಕಳೆದ ವರ್ಷದ ತನಕ ಇಂತಹ ಪರಿಸ್ಥಿತಿ ಇರಲಿಲ್ಲ; ನಮ್ಮ ಸಂಕೀರ್ಣದ ಆವರಣದಲ್ಲೇ ಎರಡು ಬೋರ್‌ ವೆಲ್‌ಗಳು ನೀರನ್ನು ಕೊಡುತ್ತಿದ್ದೆವು; ಅದರಿಂದ ಪಂಪ್ ಆದ ನೀರು ನಮ್ಮ ನಲ್ಲಿಗಳಲ್ಲಿ ಬರುತ್ತಿತ್ತು; ಆ ಬೋರ್‌ವೆಲ್‌ಗಳು ಈಗ ಬತ್ತಿಹೋಗಿವೆ. ಪಕ್ಕದ ಸೈಟ್‌ನಲ್ಲಿ ಯಾರೋ ಒಂದೆರಡು ಬೋರ್‌ವೆಲ್ ತೋಡಿ, ಅದರಿಂದ ನೀರು ತೆಗೆದು, ಲಾರಿಯಲ್ಲಿ ತುಂಬಿಸಿ, ಎಲ್ಲರಿಗೂ ನೀರನ್ನು ಮಾರುತ್ತಿದ್ದಾರೆ; ಅದೇ ನೀರನ್ನು ನಮ್ಮ ಸಂಕೀರ್ಣದವರು ಈಗ ಖರೀದಿಸುವುದು!

ಮಳೆ ನೀರನ್ನೇ ಕುಡಿಯುತ್ತಿದ್ದ ಆ ದಿನಗಳು!

-

ಶಶಾಂಕಣ

ದೊಡ್ಡ ನಗರದಲ್ಲಿ ವಾಸಿಸುವ ನಮ್ಮ ವಸತಿ ಸಂಕೀರ್ಣದಲ್ಲಿ ಈ ವರ್ಷ, ಕಳೆದ ಒಂದು ತಿಂಗಳಿ ನಿಂದ, ಪ್ರತಿದಿನ ಎಂಬಂತೆ, ಒಂದು ದೃಶ್ಯ ಸಾಮಾನ್ಯ: ದಿನಕ್ಕೆ ಆರೇಳು ಬಾರಿ ತುಂಬಾ ನೀರನ್ನು ತುಂಬಿಸಿಕೊಂಡು, ಲಾರಿಯೊಂದು ಏದುಸಿರು ಬಿಡುತ್ತಾ, ನಮ್ಮ ವಸತಿ ಸಂಕೀರ್ಣ ಪ್ರವೇಶಿಸಿ, ನೀರನ್ನು ನೆಲಮಟ್ಟದ ಟ್ಯಾಂಕ್‌ಗೆ ಸುರಿಯುತ್ತದೆ! ಒಂದು ಟ್ಯಾಂಕರ್ ನೀರಿನ ಬೆಲೆ ಎಷ್ಟು? ಎಂದು ವಿಚಾರಿಸಿದಾಗ, ಒಂದು ಸಾವಿರ ರುಪಾಯಿ ಮೀರಿದೆ ಎಂಬ ಉತ್ತರ ದೊರಕಿತು. ಈಗ ಒಂದು ತಿಂಗಳಿನಿಂದ ನಮ್ಮ ನಲ್ಲಿಯಲ್ಲಿ ಬರುತ್ತಿರುವುದು, ಅದೇ ಟ್ಯಾಂಕರ್ ನೀರು; ನಾವು ಕುಡಿಯುತ್ತಿರು ವುದು ಅದೇ ನೀರನ್ನು. ವ್ಯತ್ಯಾಸವೆಂದರೆ, ಇನ್ನಷ್ಟು ಜಾಗ್ರತೆಗೋ ಎಂಬಂತೆ, ಆರ್.ಒ.ಫಿಲ್ಟರ್ ನೀರನ್ನು ಕುಡಿಯುತ್ತೇವೆ, ಆ ಪುಟ್ಟ ಯಂತ್ರ ಸುಸ್ಥಿತಿಯಲ್ಲಿದೆ ಎಂದು ಎಲ್ಲರೂ ‘ಸರ್ವಿಸಿಂಗ್’ ಮಾಡಿಸಿಕೊಂಡಿದ್ದೇವೆ.

ಕಳೆದ ವರ್ಷದ ತನಕ ಇಂತಹ ಪರಿಸ್ಥಿತಿ ಇರಲಿಲ್ಲ; ನಮ್ಮ ಸಂಕೀರ್ಣದ ಆವರಣದಲ್ಲೇ ಎರಡು ಬೋರ್‌ವೆಲ್‌ಗಳು ನೀರನ್ನು ಕೊಡುತ್ತಿದ್ದೆವು; ಅದರಿಂದ ಪಂಪ್ ಆದ ನೀರು ನಮ್ಮ ನಲ್ಲಿಗಳಲ್ಲಿ ಬರುತ್ತಿತ್ತು; ಆ ಬೋರ್‌ವೆಲ್‌ಗಳು ಈಗ ಬತ್ತಿಹೋಗಿವೆ. ಪಕ್ಕದ ಸೈಟ್‌ನಲ್ಲಿ ಯಾರೋ ಒಂದೆರಡು ಬೋರ್‌ವೆಲ್ ತೋಡಿ, ಅದರಿಂದ ನೀರು ತೆಗೆದು, ಲಾರಿಯಲ್ಲಿ ತುಂಬಿಸಿ, ಎಲ್ಲರಿಗೂ ನೀರನ್ನು ಮಾರುತ್ತಿದ್ದಾರೆ; ಅದೇ ನೀರನ್ನು ನಮ್ಮ ಸಂಕೀರ್ಣದವರು ಈಗ ಖರೀದಿಸುವುದು!

ಬೆಂಗಳೂರಿಗರು ಹೆಮ್ಮೆಯಿಂದ ಹೇಳಿಕೊಳ್ಳುವ ‘ಕಾವೇರಿ ವಾಟರ್’ ಸಹ ನಮ್ಮ ಸಂಕೀರ್ಣದ ಮನೆಗಳಲ್ಲಿನ ಒಂದು ನಳದಲ್ಲಿ ಬರುತ್ತದೆ. ಒಮ್ಮೊಮ್ಮೆ ಕಾವೇರಿ ವಾಟರ್ ಕಡಿಮೆಯಾದಾಗ, ಆ ನಳದಲ್ಲಿ ಸುರಿವ ಬೋರ್‌ವೆಲ್ ನೀರು, ಒಗರು ಒಗರಾಗಿರುತ್ತಿತ್ತು; ಮತ್ತೆ ಆರ್.ಒ.ಫೀಲ್ಟರ್‌ಗೆ ಇನ್ನಷ್ಟು ಕೆಲಸ! ಅಂತೂ, ನೀರಿಗೂ ಕೃತಕ ಸಿಹಿ ರುಚಿಯನ್ನು ಬರಿಸಿ ಕುಡಿಯುವ, ನಮ್ಮಂತಹ ನಗರಿಗರು, ಮೇಲ್ನೋಟಕ್ಕೆ, ನೀರಿನ ಕೊರತೆ ಇಲ್ಲದೇ ಸಂತಸದಿಂದ ದಿನಚರಿ ನಡೆಸುತ್ತಿದ್ದೇವೆ.

ನಡುನಡುವೆ, ಒಮ್ಮೊಮ್ಮೆ ಕೆಲವು ಪತ್ರಿಕೆಗಳಲ್ಲಿ, ‘ಆರ್.ಒ.ನೀರಿನಲ್ಲಿ ಪೌಷ್ಟಿಕಾಂಶ ಇಲ್ಲ’ ಎಂಬ ವರದಿ ಛಾಪುಗೊಂಡು, ನಮ್ಮ ಸಂಕೀರ್ಣದಲ್ಲಿನ ಕೆಲವರ ಮನದಲ್ಲಿ ಅಶಾಂತಿ ಮೂಡುವು ದುಂಟು!

ಇದನ್ನೂ ಓದಿ: Shashidhara Halady Column: ಕೋಣಗಳ ಜತೆ ಮಕ್ಕಳಿಗೂ ತೋಡಿನ ಸ್ನಾನ!

ಆಗ, ನಿವಾಸಿಗಳ ಸಂಘದ ವಾಟ್ಸಾಪ್ ಗುಂಪಿನಲ್ಲಿ, ಒಂದಷ್ಟು ಚರ್ಚೆ : ‘ನಾವು ಆರ್.ಒ.ವಾಟರ್ ಪ್ರತಿದಿನ ಕುಡಿದರೆ, ಮೂಳೆ ದುರ್ಬಲವಾಗುತ್ತದಂತೆ, ಹೌದಾ?’ ‘ಆರ್.ಒ.ನೀರಿನಲ್ಲಿ ಸ್ವಲ್ಪ ಲವಣಾಂಶ ಇರುವಂತೆ ಮಾಡಲು, ಇದೊಂದು ಸೆಟಿಂಗ್ ಮಾಡಿ’ ಇತ್ಯಾದಿ ಸೂಚನೆಗಳು!

ಈ ನಡುವೆ, ವಾಟ್ಸಾಪ್ ಯೂನಿವರ್ಸಿಟಿಯಲ್ಲೂ, ಆರ್.ಒ.ವಾಟರ್‌ನ ಗುಣಾವಗುಣಗಳ ಕುರಿತು ಒಂದರ ಹಿಂದೆ ಒಂದರಂತೆ ರೀಲ್ಸ್ ಹರಿಯುತ್ತಿದ್ದು, ಅದನ್ನು ನೋಡಿದ ಇನ್ನು ಕೆಲವು ನಿವಾಸಿಗಳ ತಲೆಯೊಳಗೆ ಹುಳ ಹರಿಯತೊಡುವುದೂ ಉಂಟು! ಕೊನೆಗೂ, ನಾವೆಲ್ಲಾ ಉಪಯೋಗಿಸುವ ಆರ್.ಒ. ನೀರು, ಅಷ್ಟೊಂದು ಒಳ್ಳೆಯದಲ್ಲ ಎಂಬ ವಿಚಾರ ಮನವರಿಕೆಯಾದರೂ, ಯಾರೂ ಆರ್.ಒ.ಫಿಲ್ಟರ್‌ನ್ನು ಮಾತ್ರ ತೆಗೆಸುವುದಿಲ್ಲ, ಆ ಸಿಹಿ ನೀರಿನ ಉಪಯೋಗವನ್ನು ನಿಲ್ಲಿಸುವುದೂ ಇಲ್ಲ. ಹೆಚ್ಚೆಂದರೆ, ಪ್ಲಾಸ್ಟಿಕ್ ಕ್ಯಾನ್‌ನಲ್ಲಿ ಸಿಗುವ, ದುಡ್ಡು ಕೊಟ್ಟು ನೀರನ್ನು ತರಿಸುವ ಕೆಲಸವನ್ನು ಮಾಡುತ್ತಾರೆ.

ಬಹುಷಃ, ನಮ್ಮ ನಾಡಿನ ನಗರಿಗರು, ನೀರಿನ ಕುರಿತಾದ ಇಂತಹ ಒಂದು ಅವಲಂಬನೆ, ಡಿಪೆಂಡೆನ್ಸ್‌ ನ್ನು ಯಾವ ಮಟ್ಟಕ್ಕೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ ಎಂದರೆ, ಯಾರೂ, ಆ ದಾರಿಯಲ್ಲಿ ಹಿಂದಿರುಗಿ ಹೋಗಲಾರದಷ್ಟು ದೂರ ಬಂದು ಬಿಟ್ಟಿದ್ದಾರೆ!

ಮುಂದಿನ ದಿನಗಳಲ್ಲಿ, ನೀರನ್ನು ಮಾರುವ ವ್ಯಾಪಾರ, ಇನ್ನಷ್ಟು ಭರದಿಂದ ಸಾಗಲಿದೆ; ಅದೇ ಒಂದು ಬಹುರಾಷ್ಟ್ರೀಯ ವ್ಯಾಪಾರದ ಮಟ್ಟವನ್ನು ಮುಟ್ಟಿದರೂ ಅಚ್ಚರಿಯಿಲ್ಲ! ನೀರು ಸಹಜ ವಾಗಿರಬೇಕು, ಆಗಲೇ ಅದಕ್ಕೆ ರುಚಿ ಜಾಸ್ತಿ ಎಂಬ ಭಾವನೆ ಎಲ್ಲರ ಮನಸ್ಸಿನಲ್ಲೂ ಇದೆ. ನೈಸರ್ಗಿಕ ಮೂಲದ ನೀರನ್ನು ಕುಡಿಯಬೇಕು ಎಂಬ ಆಸೆ ಮನಸ್ಸಿನಲ್ಲಿ ಮೂಡುತ್ತದೆ. ನಿಮಗೂ ಹೀಗೆ ಆಗಿರ ಬೇಕಲ್ಲವೆ? ಪರಿಶುದ್ಧ ನೀರಿನ ಸೇವನೆ ಎಂದಾಕ್ಷಣ ನನ್ನ ಮನಸ್ಸು ಥಟ್ಟನೆ ನನ್ನ ಬಾಲ್ಯಕ್ಕೆ ಜಾರು ತ್ತದೆ. ಪ್ರತಿದಿನ ಶಾಲೆ ಮುಗಿಸಿ, ನಡೆದುಕೊಂಡೇ ಮೂರು ಕಿ.ಮೀ. ದೂರದ ಮನೆಗಳಿಗೆ ವಾಪಸಾಗು ತ್ತಿದ್ದ ನಾವೆಲ್ಲಾ ಮಕ್ಕಳು, ಗುಡ್ಡವೊಂದರ ಕಿಬ್ಬದಿಯಲ್ಲಿ ಹರಿದು ಬರುತ್ತಿದ್ದ, ಕಲ್ಲುಗಳ ನಡುವೆ ನೆಗೆಯುತ್ತಾ ಜುಳು ಜುಳು ಸದ್ದು ಮಾಡುತ್ತಿದ್ದ ಪುಟ್ಟ ತೊರೆಯೊಂದರ ನೀರನ್ನು ಕುಡಿದು, ಬಾಯಾರಿಕೆ ತಣಿಸಿಕೊಳ್ಳುತ್ತಿದ್ದೆವು!

72 17 ok

ಆಗೆಲ್ಲಾ ಮನೆಯಿಂದ ಕುಡಿಯುವ ನೀರನ್ನು ಶಾಲೆಗೆ ಕೊಂಡೊಯ್ಯುವ ಪದ್ಧತಿ, ಪ್ರಮೇಯ, ಅವಕಾಶ ಇರಲಿಲ್ಲ. ಏಕೆಂದರೆ, ಪ್ಲಾಸ್ಟಿಕ್ ಬಾಟಲಿಗಳು ನಮ್ಮ ನಾಡಿಗೆ ಆಗಿನ್ನೂ ಕಾಲಿಟ್ಟಿರಲಿಲ್ಲ; ಅಷ್ಟರ ಮಟ್ಟಿಗೆ ಪ್ಲಾಸ್ಟಿಕ್ ಮುಕ್ತ ವಾತಾವರಣ ನಮ್ಮದಾಗಿತ್ತು. ಶಾಲೆಯಲ್ಲಿ ಮಕ್ಕಳಿಗೆಂದೇ ಮಣ್ಣಿನ ಹೂಜಿಯೊಂದರಲ್ಲಿ ನೀರನ್ನಿಟ್ಟಿರುತ್ತಿದ್ದರು, ಅದನ್ನು ಆಗಾಗ ಕುಡಿಯುತ್ತಿದ್ದುದುಂಟು. ಅದು ಬಿಟ್ಟರೆ, ಸಂಜೆ ಶಾಲೆ ಬಿಟ್ಟ ನಂತರ, ಮೂರು ಕಿ.ಮೀ. ದೂರ ಮನೆಗೆ ಸಾಗುವಾಗ, ಬಾಯಾರಿ ದರೆ, ನಡುವೆ ಸಿಗುವ ಕಾಡಿನಲ್ಲಿ ಹರಿಯುತ್ತಿದ್ದ ಪುಟ್ಟ ತೊರೆಯ ನೀರೇ ನಮಗೆ ಅಮೃತ. ಒಮ್ಮೊಮ್ಮೆ, ದಾರಿಯಲ್ಲಿನ ಯಾರದ್ದಾದರೂ ಮನೆಗೆ ಹೋಗಿ ನೀರು ಕುಡಿಯುತ್ತಿದ್ದುದೂ ಇದೆ, ಅದು ಬೇಸಗೆಯಲ್ಲಿ ಮಾತ್ರ.

ನಮಗೆ ಆಗ ಒಂದು ಸಂಗತಿ ಗೊತ್ತಿರಲಿಲ್ಲ- ಆ ಬೆಟ್ಟಗುಡ್ಡಗಳ ಇಳಿಜಾರಿನಲ್ಲಿ ಹರಿಯುತ್ತಿದ್ದ ಆ ನೀರು ಖನಿಜಾಂಶಗಳ ಆಗರ, ಔಷಧಿಯ ಗುಣಗಳ ಖಣಿ ಎಂದು. ಆ ಬೆಟ್ಟಗಳ ಸುತ್ತಮುತ್ತಲೂ ನಾನಾ ರೀತಿಯ ಮರಗಳು, ಗಿಡಗಳು, ಬಳ್ಳಿಗಳು ಬೆಳೆದಿದ್ದವು; ಈ ಮರ, ಗಿಡ, ಬಳ್ಳಿಗಳ ಬೇರಿನ ನಡುವಿನಿಂದ ಒಂದೊಂದೇ ಹನಿ ನೀರು ಸಂಚಯನಗೊಂಡು, ಸೆಲೆಯ ರೂಪ ಪಡೆದು, ಮುಂದೆ ಪುಟ್ಟ ತೊರೆಯಾಗಿ ಹರಿದು ಬರುವಾಗ, ಆ ಎಲ್ಲಾ ಸಸ್ಯರಾಶಿಯ ಅಂಶಗಳೂ ಆ ನೀರಿನಲ್ಲಿ ತುಂಬಿ ರುವುದು ಸಹಜ ತಾನೆ! ಅದಕ್ಕೇ ಇರಬೇಕು, ಆ ನೀರಿನಲ್ಲಿ ಅಂತಹ ಅದ್ಭುತ ರುಚಿ! ಬೆಟ್ಟದ ಇಳಿ ಜಾರಿನಲ್ಲಿ, ಕಾಡು ಮರಗಳ ನೆರಳಿನಲ್ಲಿ, ಅವುಗಳ ಬೇರಿನ ಆಸರೆಯಲ್ಲಿದ್ದ ಸಣ್ಣಪುಟ್ಟ ಕಲ್ಲುಗಳ ನಡುವೆ ಹರಿದು ಬರುತ್ತಿದ್ದ ಪುಟಾಣಿ ತೊರೆಯೊಂದರ ನೀರನ್ನು ನಾನು ಅದೆಷ್ಟು ಬಾರಿ ಕುಡಿದಿದ್ದೇ ನೋ ಲೆಕ್ಕವೇ ಇಲ್ಲ.

ಮರಗಿಡಗಳಿಂದ ತುಂಬಿದ್ದ ಆ ಬೆಟ್ಟದಿಂದ ಹರಿದುಬರುತ್ತಿದ್ದ ಆ ಪುಟ್ಟ ತೊರೆಯ ನೀರು, ಮಳೆಗಾಲ ಮುಗಿದ ನಂತರವೂ ಒಂದೆರಡು ತಿಂಗಳುಗಳ ಕಾಲ ಹರಿದುಬರುತ್ತಿತ್ತು.

ಹಳ್ಳಿಮನೆಯಲ್ಲಿದ್ದಾಗ ಹೆಚ್ಚು ಕಮ್ಮಿ ವರ್ಷವಿಡೀ ನಾವು ಕುಡಿಯುತ್ತಿದ್ದುದು ಮಳೆನೀರು ಎಂದರೆ ಅಚ್ಚರಿಯೇ? ಮನೆ ಅಂಗಳದ ಒಂದು ಮೂಲೆಯಲ್ಲಿ, ಏಳೆಂಟು ಅಡಿ ಅಗಲದ ಸರಳ ಬಾವಿಯೇ ನಮ್ಮ ಜಲಮೂಲ. ಆ ಬಾವಿಗೆ ಕಾಡುಕಲ್ಲುಗಳನ್ನು ಒರಟೊರಟಾಗಿ ಜೋಡಿಸಿದ್ದರು; ಅದರ ತಳದಲ್ಲಿ ಬಕುಳ ಮರದ ಹಲಗೆಗಳನ್ನು ಜೋಡಿಸಿ, ಮಟ್ಟಸ ಮಾಡಲಾಗಿತ್ತು ಎಂದು ನಮ್ಮ ಅಮ್ಮಮ್ಮ ಹೇಳುತ್ತಿದ್ದರು; ಅದು, ಅವರು ನಮ್ಮ ಮನೆಗೆ ಮದುವೆಯಾಗಿ ಬಂದ ಹೊಸರದಲ್ಲಿ ಕಟ್ಟಿದ ಬಾವಿಯಂತೆ!

ಅದು ನೆಲಮಟ್ಟದ ಬಾವಿ- ಬಗ್ಗುಬಾವಿ. ಬಗ್ಗಿ, ಹಗ್ಗ ಇಳಿಬಿಟ್ಟು ಕೊಡದಿಂದ ನೀರನ್ನು ಎತ್ತುವ ಕ್ರಮ. ಮಳೆಗಾಲದಲ್ಲಿ ಅದರಲ್ಲಿ ತುಂಬಾ ನೀರು! ಪ್ರತಿವರ್ಷ ಜೂನ್ ಎರಡನೆಯ ವಾರದ ಹೊತ್ತಿಗೆ, ಆ ಬಾವಿಯ ನೀರು ಮತ್ತು ಅಂಗಳದ ನೀರುಗಳ ಸಂಗಮವಾಗುತ್ತದೆ! ಎಡೆಬಿಡದೆ ಮಳೆ ಸುರಿದಾಗ, ಅಂಗಳದಲ್ಲಿ ಹರಿದು ಬಂದ ನೀರೆಲ್ಲವೂ ಬಾವಿಯನ್ನು ತುಂಬಿ, ಬಾವಿ ಯಾವುದು ಅಂಗಳ ಯಾವುದು ಎಂದು ಗೊತ್ತಾಗದಂತಹ ಸನ್ನಿವೇಶ! ಇದೇ ಬಾವಿಯ ನೀರನ್ನು ನಾವು ವರ್ಷವಿಡೀ ಕುಡಿಯುತ್ತಿದ್ದುದರಿಂದ, ನಾವು ಸದಾಕಾಲ ಮಳೆನೀರನ್ನೇ ಕುಡಿಯುತ್ತಿದ್ದೆವು ಎಂದು ಭಾವಿಸಿಕೊಳ್ಳ ಬಹುದಲ್ಲವೆ!

ಈ ಬಗ್ಗುಬಾವಿಯು ಬೇಸಗೆಯಲ್ಲಿ ಒಣಗಿ ಹೋಗುತ್ತಿತ್ತು. ಆದ್ದರಿಂದ ಒಂದು ದೊಡ್ಡ ಬಾವಿಯನ್ನು ಮನೆಯ ಮುಂದಿನ ಅಗೇಡಿಯಲ್ಲಿ ತೋಡಿಸಿದರು. ಅದರಲ್ಲಿ ಸಂಗ್ರಹಗೊಂಡ ಅಪಾರ ಜಲರಾಶಿ ಯನ್ನು ನೋಡುತ್ತಾ, ಆ ನೀರನ್ನು ಕುಡಿದರೆ, ರುಚಿ ಕಡಿಮೆ! ಅಲ್ಲಿಂದ ಕೆಲವೇ ಅಡಿಗಳಷ್ಟು ದೂರ ದಲ್ಲಿದ್ದ ಬಗ್ಗು ಬಾವಿಯ ನೀರಿನ ರುಚಿ ಜಾಸ್ತಿ! ಇದು ಪ್ರಕೃತಿಯ ವಿಸ್ಮಯಗಳಲ್ಲಿ ಒಂದು.

ಈ ಎರಡೂ ಬಾವಿಗಳಿಗೆ ಮಳೆ ನೀರು ಸೇರುತ್ತಿದ್ದರೂ, ಮಳೆ ಕಡಿಮೆಯಾದ ನಂತರ, ಇವಕ್ಕೆ ನೆಲದಾಳದ ಜಲಮೂಲವೇ ಆಧಾರ. ಆ ನೆಲದಾಳದ ಜಲಮೂಲಗಳು ಶ್ರೀಮಂತವಾಗಲು, ನಮ್ಮ ಮನೆಯ ಸುತ್ತಲೂ ಹರಿಯುತ್ತಿದ್ದ ತೋಡುಗಳ ಪಾತ್ರ ಹಿರಿದು. ನಮ್ಮ ಮನೆಯ ಸುತ್ತಲೂ ಮೂರು ತೋಡುಗಳು ಹರಿಯುತ್ತಿದ್ದವು. (ತೋಡು=ತೊರೆ). ಮನೆ ಎದುರಿನ ಅಂಗಳದಲ್ಲಿ ಒಂದು ಬಗ್ಗು ಬಾವಿ. ಅದನ್ನು ದಾಟಿ ಕೆಲವೇ ಹೆಜ್ಜೆ ನಡೆದರೆ, ತೋಟದೊಳಗೆ ಒಂದು ಪುಟ್ಟ ತೋಡು. ಅದರ ಅಗಲ ಒಂದೆರಡು ಅಡಿ ಮಾತ್ರ; ಎರಡನೆಯ ಬೆಳೆ ಎನಿಸಿದ ಸುಗ್ಗಿ ಬೆಳೆಗೆ ಅನುಕೂಲವಾಗುವಂತೆ, ಮೇಲ್ಬಾಗದ ಜಾಗದಿಂದ ನೀರು ಹಾಯಿಸಲು ಮಾಡಿದ್ದ ಪುಟ್ಟ ತೋಡು. ಅದರಲ್ಲಿ ಜೂನ್‌ನಿಂದ ಜನವರಿ ತನಕ ನೀರು ಹರಿಯುತ್ತಿತ್ತು.

ಈ ಪುಟ್ಟ ತೋಡನ್ನು ಹಾದು, ಅಡಕೆ ತೋಟವನ್ನು ದಾಟಿದರೆ, ‘ಸಣ್ಣತೋಡು’ ಎಂಬ ನಾಮಧೇ ಯ ಹೊತ್ತ ಒಂದು ತೊರೆ. ಈ ಸಣ್ಣ ತೋಡು ನಮ್ಮ ಹಲವು ಅವಶ್ಯಕತೆಗಳನ್ನು ಪೂರೈಸುವ ಗಂಗೆ. ಅದರಲ್ಲಿ ಜೂನ್‌ನಿಂದ ಮುಂದಿನ ನಾಲ್ಕು ತಿಂಗಳುಗಳ ತನಕ ಶುದ್ಧ ನೀರು ಹರಿಯುತ್ತಿತ್ತು. ಆದರೆ ಆ ತೊರೆ ಹರಿದುಬರುವ ದಾರಿಯುದ್ದಕ್ಕೂ ಇರುವ ಮನೆಗಳವರು, ಆ ಶುದ್ಧ ನೀರನ್ನೇ ಪಾತ್ರೆ ತೊಳೆಯಲು, ಗಂಟಿ ಮೈ ತೊಳೆಯಲು, ಕೊನೆಗೆ ಬೆಳಗಿನ ಕೆಲಸವೂ ಸೇರಿದಂತೆ ಎಲ್ಲಾ ಕೆಲಸ ಗಳಿಗೂ ಬಳಸುತ್ತಿದ್ದುದರಿಂದ, ಸಣ್ಣ ತೋಡಿನ ನೀರು ಅಷ್ಟು ಚೊಕ್ಕಟ ಅಲ್ಲವೆಂಬ ಭಾವನೆ.

ಈ ಸಣ್ಣ ತೋಡು, ಗದ್ದೆಸಾಲುಗಳ ನಡುವೆ ಸುಮಾರು 100 ಅಡಿ ದೂರ ಹರಿದು, ದೊಡ್ಡ ತೋಡನ್ನು ಸೇರುತ್ತಿತ್ತು. ಈ ರೀತಿ ನಮ್ಮ ಮನೆಯ ಸುತ್ತಲೂ ಮೂರೂ ದಿಕ್ಕಿನಲ್ಲಿ ನೀರು ಹರಿಯುವ ಒರತೆಗಳು! ಬೈಲಿನುದ್ದಕ್ಕೂ ಹರಿದು ಹೋಗಿದ್ದ ದೊಡ್ಡ ತೋಡು, ಸದಾ ನೀರಿನಿಂದ ತುಂಬಿರು ತ್ತಿದ್ದ ಕಾಲ ಒಂದಿತ್ತು. ಹಿಂದೆ ಅದರಲ್ಲಿ ಜೂನ್‌ನಿಂದ ಎಪ್ರಿಲ್ ತನಕವೂ ನೀರು ಹರಿಯತ್ತಿತ್ತಂತೆ; ನಾನು ಕಂಡಂತೆ ಜೂನ್‌ನಿಂದ ಫೆಬ್ರವರಿ ತನಕ ನೀರು ಇರುತ್ತಿತ್ತು. ಈಗ ಡಿಸೆಂಬರ್ ಸಮಯಕ್ಕೇ ಅದರಲ್ಲಿನ ಒರತೆ ಬತ್ತತೊಡಗುತ್ತದೆ! ಈಚಿನ ನಾಲ್ಕಾರು ದಶಕಗಳಲ್ಲಿ, ಆ ಫಾಸಲೆಯಲ್ಲಿ ಕಾಡು ಮರಗಳ ಸಂಖ್ಯೆ ಕಡಿಮೆಯಾಗಿ, ಎಲ್ಲೆಂದರಲ್ಲಿ ಅಕೇಶಿಯಾ ಮರಗಳ ಹಿಂಡು ಜಾಸ್ತಿಯಾಗಿದ್ದ ರಿಂದಾಗಿ, ಡಿಸೆಂಬರ್ ಹೊತ್ತಿಗೆ ದೊಡ್ಡ ತೋಡು ಒಣಗಿಹೋಗುತ್ತದೆ.

ನಮ್ಮ ಮನೆಯ ಸುತ್ತಲೂ ಹರಿಯುತ್ತಿದ್ದ ಮೂರು ತೋಡುಗಳ ನೆನಪಿನಲ್ಲೇ, ಕೆಲವು ದಿನಗಳ ಹಿಂದೆ ಅದೇ ಭಾಗದಲ್ಲಿ ಓಡಾಡಿದೆ. ಮನೆಯ ಹತ್ತಿರವೇ ಹರಿಯುತ್ತಿದ್ದ ಪುಟಾಣಿ ತೋಡು ಈಗ ಬತ್ತಿಹೋಗಿದೆ; ಅದರ ಉಪಯೋಗವೇ ಇಲ್ಲವಾಗಿದೆ; ಅದರಲ್ಲಿ ಹರಿದು ಬರುತ್ತಿದ್ದ ನೀರನ್ನು ಉಪಯೋಗಿಸಿ ಬತ್ತದ ಬೆಳೆಯನ್ನು ತೆಗೆಯುವ ಪದ್ಧತಿಯೂ ನಿಂತು ಹೋಗಿದೆ; ಅಸಲಿಗೆ, ಬತ್ತದ ಬೆಳೆಯನ್ನು ಬೆಳೆಯುವುದು ತುಂಬಾ ನಷ್ಟದ ವ್ಯಾಪಾರ ಎಂದು ಹೆಚ್ಚು ಕಡಿಮೆ ಎಲ್ಲಾ ಕೃಷಿಕರು ನಿರ್ಧರಿಸಿದ್ದಾರೆ. ಹಿಂದೆಲ್ಲಾ ಬತ್ತ ಬೆಳೆಯುವ ಜಾಗಗಳಲ್ಲಿ ಹಲವು ಗದ್ದೆಗಳು ಇಂದು ತೋಟಗಳಾಗಿ ಪರಿವರ್ತನೆ ಹೊಂದಿವೆ, ಅಥವಾ ಮನೆ ಕಟ್ಟುವ ಜಾಗಗಳಾಗಿ ಬಿಟ್ಟಿವೆ.

ಸಣ್ಣ ತೋಡು ಮತ್ತು ದೊಡ್ಡ ತೋಡುಗಳಲ್ಲಿ ಮೊದಲಿನಂತೆ ನೀರಿದೆ; ಆದರೆ, ಕಟ್ಟು ಹಾಕಿ ಸುಗ್ಗಿ ಬೆಳೆ (ಎರಡನೆಯ ಬೆಳೆ) ಬೆಳೆಯುವ ಪದ್ಧತಿಯನ್ನು ಬಹುತೇಕ ಕೃಷಿಕರು ಕೈಬಿಟ್ಟಿದ್ದಾರೆ. ಹಲವು ಕೃಷಿಕರಿಗೆ, ರಿಯಾಯತಿ ದರದಲ್ಲಿ ಸರಕಾರ ನೀಡುವ ಅಕ್ಕಿಯೇ ಉತ್ತಮ ಎನಿಸಿದೆ; ಇನ್ನು ಕೆಲವರಿಗೆ ಬತ್ತ ಬೆಳೆಯಲು ನೀಡುವ ಮಜೂರಿಯ ಮೊತ್ತ ಬಹು ಭಾರ ಎನಿಸಿದೆ. ನೀರು, ಬೆಳೆ, ಬತ್ತ, ಕೃಷಿಕ, ಜಲಮೂಲ, ಮಳೆ, ಕಟ್ಟು, ಸಣ್ಣ ತೋಡುಗಳು - ಇವೆಲ್ಲವುಗಳ ನಡುವೆ ಇದ್ದ ಅವಿನಾಭಾವ ಸಂಬಂಧ ಇಂದು ದೂರಾಗಿದೆ, ಹಿಂದೆ ಅದೊಂದು ಸಂಬಂಧ ಭಾವನಾತ್ಮಕ ಎನಿಸಿತ್ತು. ಆದರೆ ಇಂದು ಎಲ್ಲವೂ ಕಪ್ಪು ಬಿಳುಪಿನ ಲೆಕ್ಕಾಚಾರಕ್ಕೆ ಒಳಗಾಗುತ್ತಿದೆ, ಹಸುರಿನ ಬಾಂಧವ್ಯ ಹಿನ್ನೆಲೆಗೆ ಸರಿದಿದೆ.