ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗ್ರಾಹಕರಿಗೆ ಗಾಯದ ಮೇಲೆ ಬರೆ; ಹಾಲಿನ ದರ ಹೆಚ್ಚಳದ ಬೆನ್ನಲ್ಲೇ ಹಲವೆಡೆ ಕಾಫಿ, ಟೀ ಬೆಲೆಯಲ್ಲಿ 5 ರೂ. ಏರಿಕೆ

ಸರ್ಕಾರ ನಂದಿನ ಹಾಲಿನ ದರದಲ್ಲಿ ಏಕಾಏಕಿ 8 ರೂ. ಹೆಚ್ಚಳ ಮಾಡಿದ ಬೆನ್ನಲ್ಲೇ ಇದೀಗ ಹೊಟೆಲ್‌ಗಳಲ್ಲಿ ಟೀ, ಕಾಫಿ ದರದಲ್ಲಿ ಏರಿಕೆ ಕಂಡುಬಂದಿದೆ. ಹಲವೆಡೆ ಟೀ, ಕಾಫಿ ಬೆಲೆಯಲ್ಲಿ ಇಂದಿನಿಂದ 5 ರೂ. ಹೆಚ್ಚಳವಾಗಿದೆ

ಹಾಲಿನ ದರ ಹೆಚ್ಚಳದ ಬೆನ್ನಲ್ಲೇ ಹಲವೆಡೆ ಕಾಫಿ, ಟೀ ಬೆಲೆಯಲ್ಲಿ 5 ರೂ. ಏರಿಕೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 2, 2026 8:26 AM

ಬೆಂಗಳೂರು: ಹಾಲು ಉತ್ಪಾದಕರು ಹಾಗೂ ಹಾಲು ನಿಗಮ ಮಂಡಳಿಗಳು ಹಾಲಿನ ದರ ಹೆಚ್ಚಳಕ್ಕೆ ತಮ್ಮ ಮುಂದಿಟ್ಟಿದ್ದ ಬೇಡಿಕೆಗೆ ಸರ್ಕಾರದ ಸ್ಪಂದಿಸಿದ್ದು,(Nandini Milk) ಕೆಎಂಎಫ್‌ ನಂದಿನಿ ಹಾಲಿನ (Tea Coffee Price Hike) ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸಿದೆ. ಹೀಗಾಗಿ ಹಾಲಿನ ದರ ಹೆಚ್ಚಳದ ಬೆನ್ನಲ್ಲೇ ಹಲವು ಹೋಟೆಲ್‌ಗಳು ಕಾಫಿ, ಟೀ ದರವನ್ನು 5 ರೂ. ಹೆಚ್ಚಳ ಮಾಡಿದ್ದು, ಗ್ರಾಹಕರಿಗೆ ಮತ್ತೆ ಗಾಯದ ಮೇಲೆ ಮತ್ತೆ ಬರೆ ಎಳೆದಂತಾಗಿದೆ.

ಹಾಲಿನ ದರ ಏರಿಕೆಯಿಂದಾಗಿ ಬಾದಾಮಿ ಹಾಲು, ಹಾರ್ಲಿಕ್ಸ್, ಮೊಸರು, ಮಜ್ಜಿಗೆ ಹಾಗೂ ಹಾಲಿನಿಂದ ತಯಾರಿಸುವ ಸಿಹಿ ತಿನಿಸುಗಳ ಬೆಲೆಯೂ ಹೆಚ್ಚಾಗಲಿದೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಪಿ. ಸಿ. ರಾವ್ ಮಾತನಾಡಿ, "ಸಾಮಾನ್ಯವಾಗಿ ಹಾಲಿನ ದರ ಲೀಟರ್‌ಗೆ 2 ಅಥವಾ 3 ರೂ. ಹೆಚ್ಚಾದರೆ ನಾವು ಗ್ರಾಹಕರಿಗೆ ಹೊರೆಯಾಗದಂತೆ ಹೋಟೆಲ್ ದರಗಳನ್ನು ಬದಲಾಯಿಸುತ್ತಿರಲಿಲ್ಲ. ಆದರೆ, ಹಾಲಿನ ಇತಿಹಾಸದಲ್ಲೇ ಮೊದಲ ಬಾರಿಗೆ ಲೀಟರ್‌ಗೆ 8 ರೂ. ರಷ್ಟು ಭಾರೀ ಮೊತ್ತವನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಹೋಟೆಲ್ ಉದ್ಯಮವನ್ನು ನಷ್ಟದಿಂದ ಉಳಿಸಿಕೊಳ್ಳಲು ಕಾಫಿ, ಟೀ ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಸುವುದು ಅನಿವಾರ್ಯವಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.

ಕೇವಲ ಹಾಲು ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಅಕ್ಕಿ, ಬೇಳೆಕಾಳುಗಳು, ಖಾದ್ಯ ತೈಲ ಮತ್ತು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಗಳೂ ಗಗನಕ್ಕೇರಿವೆ. ಈ ಎಲ್ಲಾ ವೆಚ್ಚಗಳನ್ನು ಸರಿದೂಗಿಸಲು ಇಡ್ಲಿ, ದೋಸೆ, ರೈಸ್ ಬಾತ್ ಸೇರಿದಂತೆ ಇತರೆ ತಿಂಡಿ ಮತ್ತು ಊಟದ ದರಗಳನ್ನು ಶೇ. 5 ರಿಂದ ಶೇ. 10 ರಷ್ಟು (ಅಂದಾಜು 10 ರಿಂದ 20 ರೂ.) ಹೆಚ್ಚಿಸಲು ಹೋಟೆಲ್ ಮಾಲೀಕರು ಸಜ್ಜಾಗುತ್ತಿದ್ದಾರೆ.

ಇಂದಿನಿಂದಲೇ ನಂದಿನಿ ಹಾಲು- ಮೊಸರಿನ ಬೆಲೆ ಏರಿಕೆ; ಹೊಸ ದರಪಟ್ಟಿ ಇಲ್ಲಿದೆ ನೋಡಿ

ನಂದಿನಿ ಹಾಲಿನ ಹೊಸ ದರ ಪಟ್ಟಿ (ಪ್ರತಿ ಲೀಟರ್‌ಗೆ):

  • ಟೋನ್ಡ್ ಹಾಲು 46 ಇದ್ದದ್ದು ಈಗ 54 ರೂ. ಕ್ಕೆ ಏರಿಕೆಯಾಗಿದೆ.
  • ಹೋಮೋಜಿನೈಸ್ಡ್ ಟೋನ್ಡ್ ಹಾಲು 47 ರೂ. ಇದ್ದದ್ದು ಈಗ 56 ರೂ. ಆಗಿದೆ.
  • ಹೋಮೋಜಿನೈಸ್ಡ್ ಹಸುವಿನ ಹಾಲು 50 ರೂ. ಇದ್ದದ್ದು ಈಗ 58 ರೂ. ಆಗಿದೆ.
  • ಸ್ಪೆಷಲ್ ಟೋನ್ಡ್ ಹಾಲು 52 ರೂ. ಇದ್ದದ್ದು ಈಗ 64 ರೂ. ಆಗಿದೆ.
  • ಶುಭಂ ಹಾಲು 52 ರೂ. ಇದ್ದದ್ದು ಈಗ 64 ರೂ. ಕ್ಕೆ ಏರಿಕೆಯಾಗಿದೆ.
  • ಹೋಮೋಜಿನೈಸ್ಡ್ ಶುಭಂ ಹಾಲು 53 ರೂ. ಇದ್ದದ್ದು ಈಗ 65 ರೂ. ಆಗಿದೆ.