ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shashidhara Halady Column: ಅಬೋಲಿ ಹೂವುಗಳನ್ನು ಬೆಳೆಯುವ ಹಳ್ಳಿ !

ಅನಾದಿ ಕಾಲದಿಂದ ಸ್ಥಳೀಯರಿಗೆ ನೆನಪಿರುವ ಹೆಸರಿನ ನಿಷ್ಪತ್ತಿಯನ್ನು, ಈಚಿನ ತಲೆಮಾರು ಹೊಸ ದಾಗಿ ತಿಳಿಯುವ ಪ್ರಕ್ರಿಯೆಯೂ ಹೌದು. ಎಷ್ಟೋ ಬಾರಿ ಸರಳ ಎನಿಸುವ ಊರಿನ ಹೆಸರು, ಬೇರೊಂದೇ ಪದನಿಷ್ಪತ್ತಿಯನ್ನು ಹೊಂದಿರಬಹುದು; ಇನ್ನು ಕೆಲವು ಬಾರಿ ತೀರ ಸಂಕೀರ್ಣ ಪದನಿಷ್ಪತ್ತಿ ಎಂದು ಮೇಲ್ನೋಟಕ್ಕೆ ತೋರುವ ಹೆಸರುಗಳ ಅರ್ಥ ಹುಡುಕಿದರೆ ಸರಳ ಎನಿಸಬಹುದು.

Shashidhara Halady Column: ಅಬೋಲಿ ಹೂವುಗಳನ್ನು ಬೆಳೆಯುವ ಹಳ್ಳಿ !

-

ಶಶಾಂಕಣ

ನಮ್ಮ ಹಳ್ಳಿಗಳ ಹೆಸರುಗಳ ಮೂಲವು ಎಂದಿಗೂ ಕುತೂಹಲ ಹುಟ್ಟಿಸುವಂತಹದ್ದು; ಒಂದು ಊರಿನ ಅಥವಾ ಜಾಗದ ಹೆಸರಿನ ಹಿನ್ನೆಲೆಯನ್ನು ಹುಡುಕುತ್ತಾ ಹೋಗುವ ಪಯಣವು, ಕೆಲವು ಬಾರಿ ನಿಜಕ್ಕೂ ರೋಮಾಂಚಕ. ಪುರ, ಪಟ್ಟಣ ಎಂಬ ಪದಗಳನ್ನು ಹೊಂದಿರುವ ಊರುಗಳು ಸಾಕಷ್ಟು ಆಧುನಿಕ ಮತ್ತು ಅವುಗಳ ಹೆಸರು ಹೇಗೆ ಬಂತು ಎಂಬುದಕ್ಕೆ ಐತಿಹಾಸಿಕ ದಾಖಲೆಗಳೇ ಇವೆಯಾದ್ದರಿಂದ, ಅದನ್ನು ಬಗೆಯುವದರಲ್ಲಿ ಅಂತಹ ರೋಚಕತೆ ಇಲ್ಲ; ಹಳ್ಳಿಗಳ ಹೆಸರುಗಳ ಹಿಂದೆ ಬಹು ಕುತೂಹಲಕಾರಿ ವಿಚಾರಗಳು ಅಡಗಿರುತ್ತವೆ.

ಈ ಹೆಸರುಗಳನ್ನು ಅರಸುತ್ತಾ ಹೊರಡುವುದು ಅದೆಷ್ಟು ಚೇತೋಹಾರಿ ಚಟುವಟಿಕೆ ಎಂದರೆ, ಈ ಕುರಿತು ಹಲವು ಬಾರಿ ನಾನು ಬರೆದದ್ದುಂಟು. ಆದರೆ, ಸ್ಥಳನಾಮಗಳ ಇತಿಹಾಸವನ್ನು ಬಗೆಯು ವುದು ಅಷ್ಟೊಂದು ಸುಲಭವೇನಲ್ಲ; ಶತಶತಮಾನಗಳ ಹಿಂದಿನ ಹೆಸರುಗಳು ಹುಟ್ಟಿಕೊಳ್ಳಲು ಆಗ ಇದ್ದ ಕಾರಣ ಅಥವಾ ಹಿನ್ನೆಲೆಯು, ಈಗಿನ ತಲೆಮಾರಿಗೆ ಪೂರ್ತಿಯಾಗಿ ಮರೆತೇ ಹೋಗಿರಬಹುದು.

ಅನಾದಿ ಕಾಲದಿಂದ ಸ್ಥಳೀಯರಿಗೆ ನೆನಪಿರುವ ಹೆಸರಿನ ನಿಷ್ಪತ್ತಿಯನ್ನು, ಈಚಿನ ತಲೆಮಾರು ಹೊಸದಾಗಿ ತಿಳಿಯುವ ಪ್ರಕ್ರಿಯೆಯೂ ಹೌದು. ಎಷ್ಟೋ ಬಾರಿ ಸರಳ ಎನಿಸುವ ಊರಿನ ಹೆಸರು, ಬೇರೊಂದೇ ಪದನಿಷ್ಪತ್ತಿಯನ್ನು ಹೊಂದಿರಬಹುದು; ಇನ್ನು ಕೆಲವು ಬಾರಿ ತೀರ ಸಂಕೀರ್ಣ ಪದನಿಷ್ಪತ್ತಿ ಎಂದು ಮೇಲ್ನೋಟಕ್ಕೆ ತೋರುವ ಹೆಸರುಗಳ ಅರ್ಥ ಹುಡುಕಿದರೆ ಸರಳ ಎನಿಸ ಬಹುದು. ಆದರೆ, ಕೆಲವು ಊರುಗಳ ಹೆಸರಿನ ಮೂಲ ಅದೆಷ್ಟು ಪುರಾತನ ಅಥವಾ ಅಪಭ್ರಂಶ ಗೊಂಡಿದೆ ಎಂದರೆ, ಜಪ್ಪಯ್ಯ ಎಂದರೂ ಸ್ಪಷ್ಟ ಅರ್ಥ ಹೊಳೆಯದೇ ಇರಬಹುದು.

ನಮ್ಮೂರಿನ ಹತ್ತಿರ ‘ಜನ್ನಾಡಿ’ ಎಂಬ ಹಳ್ಳಿಯಿದೆ; ಮೇಲ್ನೋಟಕ್ಕೆ ಅದು ‘ಜೈನರು ಇದ್ದ ಜಾಗ’ ಎಂಬ ಅರ್ಥ ಕೊಡುತ್ತದೆ. ನಮ್ಮ ರಾಜ್ಯವನ್ನು, ಕರಾವಳಿಯ ಭಾಗಗಳನ್ನು ಜೈನ ಅರಸರು, ಪಾಳೆಗಾರರು, ‘ಒಡೆಯರುಗಳು’ ಸಾಕಷ್ಟು ದೀರ್ಘಕಾಲ ಆಳಿದ್ದಾರೆ. ಆದ್ದರಿಂದ ಜೈನರ ಮನೆಗಳು ಅಲ್ಲಿದ್ದವು ಎನ್ನಲು ಅಡ್ಡಿಲ್ಲ.

ಇದನ್ನೂ ಓದಿ: Shashidhara Halady Column: ಕನ್ನಡ ಓದುಗರ ಅಭಿರುಚಿ ಮತ್ತು ಗ್ರಂಥಾಲಯ ಖರೀದಿ

ಕುಂದಗನ್ನಡದಲ್ಲಿ ‘ಅಡಿ’ ಎಂದರೆ ಒಂದು ಜಾಗ, ತಾಣ ಎಂಬರ್ಥ; ಆದರೆ ಅಲ್ಲಿ ಈಗ ಜೈನರು ಇಲ್ಲ- ಆ ಸುತ್ತಲೆಲ್ಲೂ ಇಂದು ಜೈನರ ವಸತಿ ಇಲ್ಲ. ಹಿಂದೆ ಅಲ್ಲಿದ್ದ ಜೈನರು ಆ ಪ್ರದೇಶವನ್ನು ತೊರೆದು ಹೋಗಿರಬಹುದು ಅಥವಾ ಸುತ್ತಲೂ ಇದ್ದ ಪ್ರಭಾವಿ ಧರ್ಮಕ್ಕೆ ಮತಾಂತರ ಹೊಂದಿರ ಬಹುದು - ಹೊಯ್ಸಳ ರಾಜ ಬಿಟ್ಟಿದೇವನು ಜೈನ ಮತ ತೊರೆದು, ರಾಮಾನುಜಾಚಾರ್ಯರ ಪ್ರಭಾವದಿಂದ ವೈಷ್ಣವ ಮತಕ್ಕೆ ಸೇರಿಕೊಂಡ ಪ್ರಖ್ಯಾತ ಉದಾಹರಣೆಯೇ ಇದೆಯಲ್ಲ - ಆ ಮಹಾರಾಜನ ಜತೆಯಲ್ಲೇ, ಸಾಕಷ್ಟು ಸಂಖ್ಯೆ ಅಧಿಕಾರಿಗಳು, ಸೈನಿಕರು, ಜನಸಾಮಾನ್ಯರು ಸಹ ಜೈನ ಮತ ತೊರೆದಿದ್ದರು.

ಯಾರಿಗ್ಗೊತ್ತು, ಆ ಸಮಯದಲ್ಲೇ ಈ ‘ಜೈನಡಿ‘ (ಜನ್ನಾಡಿ) ಯಲ್ಲಿದ್ದ ಜೈನರು ಬದಲಾಗಿರಲೂ ಬಹುದು ಅಥವಾ ಬೇರಾವುದೋ ಸಂದರ್ಭದಲ್ಲಿ ಇಂತಹ ಬದಲಾವಣೆ ಆಗಿರುವ ಸಾಧ್ಯತೆ ಇದೆ; ಹಳ್ಳಿಯ ಹೆಸರು ಮಾತ್ರ ಜನ್ನಾಡಿಯಾಗಿ ಈಗಲೂ ಉಳಿದುಕೊಂಡಿದೆ.

‘ಜನ್ನಾಡಿ’ಯ ಈಶಾನ್ಯ ದಿಕ್ಕಿಗೆ ಸಾಗಿದರೆ ‘ಸೌಡ’ ಎಂಬ ಹಳ್ಳಿಯಿದೆ; ಆ ಹೆಸರಿನ ಮೂಲವನ್ನು ತಿಳಿದುಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ; ಬಹುಷಃ ಅಲ್ಲಿನ ಶಾಸನಗಳನ್ನು ಅಧ್ಯಯನ ಮಾಡಿದರೆ, ಸ್ಥಳೀಯರ ಜತೆ ಒಡನಾಡಿದರೆ ಆ ಊರಿನ ಹೆಸರು ಹೇಗೆ ಬಂತು ಎಂಬುದನ್ನು ತಿಳಿಯಬಹುದೇನೋ.

ಏಕೆಂದರೆ, ಸೌಡವು ಬಹು ಪುರಾತನ ಹಳ್ಳಿ; ಅಲ್ಲಿ ಇಂದಿಗೂ ಹಲವು ದೇವಾಲಯಗಳು ಮತ್ತು ಕೆಲವು ಶಾಸನಗಳು ಇವೆ. ಕೆಲವು ಶತಮಾನಗಳ ಹಿಂದೆ ಕರಾವಳಿಯಲ್ಲಿ ಸಂಬಾರಪದಾರ್ಥಗಳ ವ್ಯಾಪಾರ ಬಿರುಸಾಗಿದ್ದಾಗ, ಸೌಡದ ತನಕ ದೊಡ್ಡ ಗಾತ್ರದ ದೋಣಿಗಳು ಬರುತ್ತಿದ್ದವು; ಪಕ್ಕದಲ್ಲೇ ವಾರಾಹಿ ನದಿ ಹರಿಯುತ್ತದೆ. ಆ ವಾರಾಹಿ ನದಿಯನ್ನು ದಾಟಿದರೆ ದೊರೆಯುವ ‘ಶಂಕರ ನಾರಾಯಣ’ ಎಂಬ ಊರಿನ ಹೆಸರು ಮಾತ್ರ ಬಹಳ ಕುತೂಹಲಕಾರಿ.

aboli flower

ಎರಡು ಹೆಸರುಗಳನ್ನು ಸಂಯೋಜಿಸಿದಾಗ ಉಂಟಾದ ಶಬ್ದವೇ ಆ ಊರಿನ ಹೆಸರು ಎಂದು ಹೊಸ ದಾಗಿ ಕೇಳಿದವರಿಗೂ ಅರ್ಥವಾಗುವಷ್ಟು ಸ್ಪಷ್ಟವಾಗಿದೆ ಆ ಹೆಸರು - ಅದೂ ನಿಜವೇ - ಶಂಕರ ಮತ್ತು ನಾರಾಯಣ (ಹರಿಹರ) ದೇವರುಗಳ ದೇಗುಲ ಅಲ್ಲಿರುವುದರಿಂದಾಗಿ ‘ಶಂಕರನಾರಾ ಯಣ’ ಎಂಬ ಹೆಸರು ಅಧಿಕೃತ ದಾಖಲೆಗಲ್ಲಿ ನಮೂದಾಗಿ, ಪ್ರಚುರಗೊಂಡಿದೆ. ಆದರೆ ಅಲ್ಲಿಗೆ ಹಿಂದೆ ಬೇರೊಂದೇ ಹೆಸರಿತ್ತು!

ಮೂರು ರಸ್ತೆ ಕೂಡುವ ಆ ಜಾಗಕ್ಕೆ ‘ಗೋಳಿ ಕಟ್ಟೆ’ ಎಂಬ ಧ್ವನಿಪೂರ್ಣ ಹೆಸರಿತ್ತು. ಗೋಳಿ ಮರ (ಗೋಣಿ ಮರ)ವು ಅಲ್ಲಿ ಪ್ರಧಾನವಾಗಿದ್ದು, ಅಲ್ಲಿ ಸಂತೆಯೂ ನಡೆಯುತ್ತಿದ್ದುದರಿಂದ, ಆ ಹೆಸರು ಜನಪದರ ಬಾಯಲ್ಲಿ ರೂಪುಗೊಂಡಿರಬೇಕು. ಆದರೆ, ಹೆಚ್ಚು ಪ್ರಸಿದ್ಧಿ ಪಡೆದ ಶಂಕರ-ನಾರಾಯಣ ದೇವರುಗಳ ಪ್ರಭಾವದಿಂದಾಗಿ, ಗೋಳೀಕಟ್ಟೆ ಎಂಬ ಪುರಾತನ ಹೆಸರು ಕ್ರಮೇಣ ಮರೆಯಾಯಿತು.

ಅಲ್ಲಿರುವ ಶಂಕರನಾರಾಯಣ ದೇಗುಲವೂ ಬಹಳ ಪುರಾತನ ಎಂಬುದರಲ್ಲಿ ಸಂಶಯವಿಲ್ಲ. ಕೆರೆಯ ಮೇಲೆ ದೇವತೆಗಳಿಂದ ನಿರ್ಮಾಣಗೊಂಡ ದೇಗುಲ ಎಂಬ ವಿಶೇಷಣ ಹೊಂದಿರುವ ಆ ದೇಗುಲ ಪುರಾತನ ಕಾಲದಿಂದಲೂ ಇದೆ; ಪ್ರಾಗೈತಿಹಾಸಿಕ ಕಾಲದ ಕೆಲವು ಕುರುಹುಗಳನ್ನೊಳ ಗೊಂಡ ಕಥೆಯೊಂದು ಸಹ ಆ ದೇಗುಲದ ಮೂಲದೊಂದಿಗೆ ಗುರುತಿಸಿಕೊಂಡಿದೆ.

ಬೆಟ್ಟದ ಮೇಲೆ ಒಂದು ಗುಹೆಯಲ್ಲಿ ವಾಸವಾಗಿದ್ದ ದೇವರು, ಅಲ್ಲಿಂದ ಕೆಳಗೆ ಹಾರಿದನು ಎಂಬ ಐತಿಹ್ಯವಿದೆ; ಮತ್ತು ಆ ರೀತಿ ಮೇಲಿನಿಂದ ಕೆಳಗೆ ದೇವರು ಹಾರಿದಾಗ, ಆತನ ಹೆಜ್ಜೆ ಗುರುತು ದೇಗುಲದ ಎದುರಿನ ವಿಶಾಲ ಬಂಡೆ ಹಾಸಿನ ಮೇಲೆ ಒಡಮೂಡಿದೆ ಎಂಬ ನಂಬಿಕೆ. ಆ ಬಂಡೆಯ ಹಾಸಿನ ಮೇಲೆ ಒಟ್ಟು ಎರಡು ಹೆಜ್ಜೆಗುರುತುಗಳು ಕಲ್ಲಿನ ಮೇಲೆ ಸ್ಪಷ್ಟವಾಗಿ ಮೂಡಿವೆ; ಅವು ಹೇಗೆ ಉಂಟಾದವು ಎಂದು ಶಿಲಾತಜ್ಞರು ಗುರುತಿಸಿದರೆ, ಬೇರೊಂದೇ ಕಥೆ ತೆರೆದುಕೊಂಡೀತು!

ಬೆಟ್ಟದ ಮೇಲೆ ಮೂಲ ಶಂಕರನಾರಾಯಣದ ಸ್ಥಳ ಇಂದಿಗೂ ಇದೆ. ಸ್ಥಳೀಯ ಜನರ ಬೇಡಿಕೆಯ ಮೇರೆಗೆ, ದೇವರು ಮೇಲಿನಿಂದ ಕೆಳಗೆ ನೆಗೆದು, ಈಗಿರುವ ದೇಗುಲದಲ್ಲಿ ನೆಲೆ ನಿಂತರು ಎಂಬ ನಂಬಿಕೆ. ಅಲ್ಲಿಂದ ಹರದಾರಿ ದೂರದ ಸುತ್ತಳತೆಯಲ್ಲಿ, ಒಟ್ಟು ಐದು ಶಂಕರನಾರಾಯಣ (ಹರಿಹರ) ದೇಗುಲಗಳಿದ್ದು, ಬಹು ಹಿಂದೆ ಉದ್ಭವಿಸಿರಬಹುದಾದ ಪಂಥ ಸಂಘರ್ಷ ಮರೆಸಲು ರೂಪುಗೊಂಡ ಸಮನ್ವಯದ ಪ್ರಯತ್ನವನ್ನು ನೆನಪಿಸುತ್ತದೆ.

ಕರಾವಳಿಯ ಸಪ್ತ ಪುರಾತನ ಕ್ಷೇತ್ರಗಳಲ್ಲಿ, ಗೋಕರ್ಣವನ್ನೂ ಒಳಗೊಂಡು ಈ ಕ್ಷೇತ್ರಕ್ಕೆ ಸ್ಥಾನವಿದೆ ಎಂದ ಮೇಲೆ, ಕನಿಷ್ಟ 2000 ವರ್ಷಗಳಿಗೂ ಹಿಂದಿನ ಇತಿಹಾಸ ಈ ಸ್ಥಳಕ್ಕಿದೆ ಎನ್ನಬಹುದು. ಆದರೆ, ಹಲವು ಹಕ್ಕಿಗಳಿಗೆ ಆಶ್ರಯ ನೀಡುವ ಗೋಳಿ ಮರವನ್ನು ನೆನಪಿಸುವ ‘ಗೋಳಿಕಟ್ಟೆ’ ಎಂಬ ಸುಂದರ ಹೆಸರು ಮಾತ್ರ ಇಂದಿಗೂ ಮುಂದುವರಿಯಬೇಕಿತ್ತು ಎಂಬ ಭಾವ ನನ್ನ ಮನದಾಳದಲ್ಲಿ ಕುಳಿತುಬಿಟ್ಟಿದೆ.

ಕೆಲವು ಊರುಗಳ ಹೆಸರನ್ನು ಸ್ಪಷ್ಟವಾಗಿ ವಿವರಿಸಿ ಹೇಳುವುದು ಕಷ್ಟ ಎಂಬುದಕ್ಕೆ ಒಂದು ಉದಾ ಹರಣೆ ಎಂದರೆ, ನಮ್ಮ ಹಳ್ಳಿಯಾದ ಹಾಲಾಡಿ. ‘ಅಡಿ’ ಎಂದರೆ ಸ್ಥಳ ಎಂಬುದರಲ್ಲಿ ಅನುಮಾನ ವಿಲ್ಲ; ಆದರೆ ಹೆಸರಿನ ಮೊದಲ ಭಾಗವನ್ನು ವಿಭಿನ್ನವಾಗಿ ಅರ್ಥೈಸಲಾಗಿದೆ. ‘ಹಾಲು’ ಇರುವ ‘ಅಡಿ’ (ಸ್ಥಳ) ಎಂದು ಅಭಿಮಾನದಿಂದ ಈಚೆಗೆ ಕೆಲವರು ಪದನಿಷ್ಪತ್ತಿಯನ್ನು ಮಾಡಿದ್ದಾರೆ; ಆದರೆ, ಹಿಂದೆ ‘ಹಾಳು’ ‘ಅಡಿ’ ಎಂದು ಕೆಲವರು ಅರ್ಥೈಸಿದ್ದುಂಟು - ಅಂದರೆ, ಜನರು ವಾಸವಿಲ್ಲದೇ ಇರುವ, ಹಾಳು ಬಿದ್ದ ಜಾಗ ಎಂದು. ಆದರೆ, ಇದನ್ನು ಎಲ್ಲರೂ ಒಪ್ಪುತ್ತಿಲ್ಲ; ಏಕೆಂದರೆ, ಅಲ್ಲಿ ಹಾಳು ಬಿದ್ದ ಐತಿಹಾಸಿಕ ಜಾಗಗಳನ್ನು ಗುರುತಿಸಲು ಸಾಧ್ಯವಾಗಿಲ್ಲ, ಬದಲಿಗೆ ಎಲ್ಲಾ ಕಡೆ, ಕಾಡು, ಗುಡ್ಡಗಳೇ ಇವೆ.

ಬಹು ಹಿಂದೆ ಬಾರಕೂರು ಸೀಮೆಯಲ್ಲಿ ‘ಹಲ’ರು ಪ್ರಮುಖರು ಎನಿಸಿದ್ದರು; ವ್ಯಾಪಾರದಲ್ಲಿ ಮುಂಚೂಣಿಯಲ್ಲಿದ್ದ ‘ಹಲ’ರು, ಇಲ್ಲಿ ತಮ್ಮ ಗೋದಾಮುಗಳನ್ನು ಸ್ಥಾಪಿಸಿರಬಹುದು; ಏಕೆಂದರೆ, ಇಲ್ಲಿನ ನದಿಯನ್ನು ದಾಟಲು ದೋಣಿಯ ಅಗತ್ಯವಿತ್ತು ಮತ್ತು ನದಿಯನ್ನು ದಾಟಿದರೆ ಬಿದನೂರು ನಗರ, ಮೇಗರವಳ್ಳಿ ಮೊದಲಾದ ಘಟ್ಟದ ಮೇಲಿನ ವ್ಯಾಪಾರಿ ಸ್ಥಳಗಳನ್ನು ತಲುಪಬಹುದಾಗಿತ್ತು.

ಆದ್ದರಿಂದ, ಹಲ ಎಂಬ ವ್ಯಾಪಾರಿಗಳು ಬಂದು ತಂಗಿದ ಜಾಗವೇ ಹಾಲಾಡಿ ಎಂದು ಅರ್ಥೈಸಿದರೆ, ತರ್ಕಬದ್ಧವಾಗುತ್ತದೆ. ಈ ಕುರಿತು ಭಾಷಾ ತಜ್ಞರು ಮತ್ತು ಇತಿಹಾಸ ತಜ್ಞರು ಇನ್ನಷ್ಟು ಸಂಶೋಧನೆ ಮಾಡಿ, ಬೆಳಕು ಚೆಲ್ಲಬೇಕಾಗಿದೆ. ಇಲ್ಲಿಗೆ ಎರಡು ಕಿ.ಮೀ. ದೂರದಲ್ಲಿ, ಅಂದರೆ ನಮ್ಮ ಮನೆಯ ಹತ್ತಿರವೇ ಇರುವ ‘ಕೋಟೆಹಕ್ಲು’ ಎಂಬ ಜಾಗಕ್ಕೆ ಇನ್ನೂ ಪುರಾತನವಾದ ಇತಿಹಾಸವಿದೆ.

ಬಾರಕೂರು ಅರಸರ ಆಳ್ವಿಕೆಯ ವ್ಯಾಪ್ತಿಯಲ್ಲಿ, ‘ಮುದ್ದಳ’ ಎಂಬಾತನು ಇಲ್ಲಿ ಆಳ್ವಿಕೆ ನಡೆಸುತ್ತಿದ್ದ ನಂತೆ. ಆದ್ದರಿಂದ ಈ ಪ್ರದೇಶಕ್ಕೆ ಮುದುವೇರಿ (ಮುದುವರಿ) ಅಥವಾ ಮುದೂರಿ ಎಂಬ ಹೆಸರು ಬಂದಿದೆ. ಇಲ್ಲಿರುವ ಒಂದು ಶಾಸನದಲ್ಲಿ ಈ ಪ್ರದೇಶವನ್ನು ಮುದುವರಿ ಎಂದೇ ಕರೆಯಲಾಗಿದೆ.

ಈ ರೀತಿ ಮುದುವರಿ ಸ್ಥಳನಾಮ ಹುಟ್ಟಲು, ಅಲ್ಲಿ ಆಳಿದ ಮುದ್ದಳ ಎಂಬಾತನೇ ಕಾರಣವಿರ ಬಹುದು. ಆದರೆ, ಈ ಸುತ್ತಮುತ್ತಲೂ ಇರುವ ಇತರ ಕೆಲವು ಸ್ಥಳಗಳ ಪದನಿಷ್ಪತ್ತಿಯನ್ನು ಹುಡುಕುವುದು ಕಷ್ಟವೇ ಸರಿ - ನೀಕ್ಮಡಿ, ಮುಡಾರಿ, ಚೇರ್ಕಿ, ಗೊರಾಜಿ, ತಟ್ಟುವಟ್ಟು, ಹಿಲಿಯಾಣ, ಹೀಗೆ.

ಈ ಪ್ರದೇಶದ ದಕ್ಷಿಣ ದಿಕ್ಕಿನಲ್ಲಿರುವ ಚೋರಾಡಿ ಎಂಬ ಹಳ್ಳಿಯ ಹೆಸರಿನ ಪದನಿಷ್ಪತ್ತಿಯು ಸ್ಪಷ್ಟ ವಿದೆ - ಬಹು ಹಿಂದೆ ಇಲ್ಲಿಗೆ ಬಂದ ಚಾರುರತಿ ಎಂಬ ನಾಗಕನ್ಯೆಯು ನೆಲೆ ನಿಂತ ಜಾಗ (ಅಡಿ) ಇದು ಎಂಬ ನಂಬಿಕೆ. ಇದೇ ರೀತಿ, ಚಾರುರತಿ ಎಂಬಾಕೆಯ ಸಹೋದರಿಯರಾದ ಇನ್ನೂ ನಾಲ್ವರು ನಾಗಕನ್ನಿಕೆಯರು ನೆಲೆ ನಿಂತ ಜಾಗಗಳು ಮಂದರ್ತಿ, ದೇವರತಿ, ನಾಗರತಿ ಮತ್ತು ನೀಲರತಿ; ಅಲ್ಲೆಲ್ಲಾ ಇಂದು ನಾಗದೇವತೆಯ (ಅಮ್ಮನವರು) ದೇಗುಲಗಳಿರುವುದು ವಿಶೇಷ. ಈ ಐವರು ನಾಗಕನ್ನಿಕೆಯರಿಗೆ ಬಹು ಪುರಾತನ ಕಾಲದಲ್ಲೇ ಕಾಡಿನ ನಡುವೆ ಪೂಜಾಸ್ಥಳಗಳನ್ನು ನಿರ್ಮಿಸ ಲಾಗಿತ್ತು ಮತ್ತು ಸ್ಥಳೀಯರು ಪೂಜಿಸುತ್ತಿದ್ದರು; ಅವೆಲ್ಲವೂ ಈಚಿನ ದಶಕಗಳಲ್ಲಿ ವೈದಿಕ ಪೂಜಾ ಪದ್ಧತಿಗೆ ಒಳಪಟ್ಟು, ಆ ಪುರಾತನ, ಪೂಜ್ಯ ನಾಗಕನ್ನಿಕೆಯರನ್ನು ‘ದುರ್ಗಾಪರಮೇಶ್ವರಿ’ ಎಂದು ಕರೆದು, ಪೂಜಿಸುವ ಪದ್ಧತಿ ಬೆಳೆದುಬಂದಿದೆ!

ಈ ಬೆಳವಣಿಗೆಯೂ ಸಹ, ಆ ಹಳ್ಳಿಗಳ ಹೆಸರಿನಷ್ಟೇ ಕುತೂಹಲಕಾರಿ ಮತ್ತು ಅಧ್ಯಯನಯೋಗ್ಯ ವಿದ್ಯಮಾನ ಎನ್ನಬಹುದು. ಇಂದು ನಮ್ಮ ರಾಜ್ಯದ ಕರಾವಳಿಯ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ‘ಮಂದಾರ್ತಿ’ ದೇವಾಲಯದ ಒಳ ಸುತ್ತಿನಲ್ಲಿ, ಗೋಡೆಯ ಮೇಲೆ ಒಂದು ಜಾಗದಲ್ಲಿ ‘ವಲ್ಮೀಕ ದರ್ಶನ’ ಎಂದು ಬರೆಸಿದ್ದಾರೆ. ಅಲ್ಲಿ ನಿಂತು ನೋಡಿದರೆ, ಗರ್ಭಗುಡಿಯ ಮೇಲ್ಭಾಗದಲ್ಲಿ ಬೃಹತ್ ಹುತ್ತವನ್ನು ಕಾಣಬಹುದು. ಇದು, ಮೂಲ ನಾಗಕನ್ನಿಕೆಯ ತಾಣ ಎಂಬುದಕ್ಕೆ ಈ ಹುತ್ತವೂ ಒಂದು ಪುರಾವೆ.

ಚಾರುರತಿ ಮತ್ತು ನಾಗರತಿಯರ ದೇಗುಲಗಳಿಂದ ಮುಂದೆ ಸಾಗಿ, ನಾಲ್ಕೈದು ಕಿ.ಮೀ. ಕ್ರಮಿಸಿದರೆ, ‘ತಾರಿಕಟ್ಟೆ’ ಎಂಬ ಪುಟ್ಟ ಹಳ್ಳಿಯಿದೆ. ಅಲ್ಲೊಂದು ದೊಡ್ಡ ಗಾತ್ರದ ತಾರಿ ಮರ ಇರುವುದರಿಂದಾಗ, ಆ ಮರದ ಬುಡದಲ್ಲಿ ಕಟ್ಟಿದ ಕಟ್ಟೆಯಿಂದಾಗಿ ಹಳ್ಳಿಗೆ ಹೆಸರು ಬಂದಿರುವುದು ಸ್ಪಷ್ಟ. ವಿಶೇಷ ವೆಂದರೆ, ಅಲ್ಲಿ ಒಂದು ವಿಶಾಲವಾದ ತಾರಿಮರ ಇಂದಿಗೂ ಇದೆ - ನಾನು ಬಾಲ್ಯದಲ್ಲಿ ಕಂಡಾಗಲೂ ಆ ಮರ ಇಷ್ಟೇ ದೊಡ್ಡದಾಗಿ, ವಿಶಾಲವಾಗಿ ಬೆಳೆದುಕೊಂಡಿತ್ತು!

ಆ ಮರದ ಆಯಸ್ಸು ಈಗ ನೂರು ವರ್ಷ ಮೀರಿದೆ. ಆ ಮರದ ಪಕ್ಕದಲ್ಲೇ ಒಂದು ಕಚ್ಚಾ ರಸ್ತೆ ಇದೆ; ಕೆಲವು ವರ್ಷಗಳ ಹಿಂದೆ ಆ ರಸ್ತೆಯಲ್ಲಿ ಸಾಗುತ್ತಿದ್ದ, ಶಿಲೆಕಲ್ಲು ತುಂಬಿದ್ದ ಲಾರಿಯೊಂದು ಆ ಮರಕ್ಕೆ ಡಿಕ್ಕಿ ಹೊಡೆದು, ಮರದ ಕಾಲು ಭಾಗ ಕುಸಿದು ಬಿತ್ತು; ಆದರೆ, ಮರ ಪುನಃ ಚಿಗುರಿ ಬೆಳೆದಿದೆ. ಆ ಅಪಘಾತದಲ್ಲಿ ಲಾರಿ ಮಾತ್ರ ಜಖಂ ಆಯ್ತು.

ನಾಗರಿಕ ಮಾನವನು ತೊಂದರೆ ಕೊಡದೇ ಇದ್ದರೆ, ಆ ತಾರಿ ಮರ ಇನ್ನೂ ನೂರು ವರ್ಷ ಅಲ್ಲೇ ಇದ್ದು, ತಾರಿಕಟ್ಟೆ ಎಂಬ ಊರಿನ ಹೆಸರಿನ ಆಧಾರಸ್ತಂಭದಂತೆ ನಿಂತಿರುವುದರಲ್ಲಿ ಅನುಮಾನ ವಿಲ್ಲ. ಆದರೆ, ಈಗಿನ ಆಧುನಿಕ ಮಾನವನನ್ನು ನಂಬುವಂತಿಲ್ಲ - ಸುತ್ತಲಿನ ಬಂಡೆಗಳನ್ನು ಒಡೆದು, ಕಲ್ಲುಗಳನ್ನು ಪೇಟೆಗೆ ಸಾಗಿಸುವ ಲಾರಿಗಳು ಸಲೀಸಾಗಿ ಚಲಿಸುವ ಉದ್ದೇಶಕ್ಕಾಗಿ, ಅಲ್ಲಿನ ರಸ್ತೆಯನ್ನು ಇನ್ನಷ್ಟು ಅಗಲ ಮಾಡುವ ನೆಪದಲ್ಲಿ, ಆ ದೊಡ್ಡ, ವಿಶಾಲ, ಪುರಾತನ, ಸುಂದರ, ಐತಿಹಾಸಿಕ ಮರವನ್ನು ಸದ್ಯದಲ್ಲೇ ಯಾರಾದರೂ ‘ಕಂತ್ರಾಟುದಾರ’ ಕಡಿದು ಹಾಕಿದರೂ ಹಾಕಿಯಾನು!

ತಾರಿಕಟ್ಟೆಯ ಹತ್ತಿರವೇ, ಅರ್ಧ ಕಿ.ಮೀ. ದೂರದಲ್ಲಿ ಅಬ್ಲಿಕಟ್ಟೆ ಎಂಬ ಹಳ್ಳಿಯಿದೆ; ‘ಅಬ್ಲಿ ಹೂ’ (ಕನಕಾಂಬರ) ಗಳನ್ನು ಹೇರಳವಾಗಿ ಬೆಳೆದ ಜಾಗ ಅದಾಗಿರಬಹುದು. ಈ ಅಬ್ಲಿ ಹೂ (ಅಬೋಲಿ) ಅಥವಾ ಕನಕಾಂಬರವು ಪೋರ್ಚುಗೀಸರು ತಂದ ಸಸ್ಯ! ಮೂಲತಃ ದಕ್ಷಿಣ ಆಫ್ರಿಕಾದ ಹೂಗಿಡ ಇದು. ಗೋವಾ ಪ್ರದೇಶದಲ್ಲಿ ಇದನ್ನು ‘ಅಬೋಲಿ ಹೂವು’ ಎನ್ನುವುದುಂಟು. ಸುಮಾರು ನಾಲ್ಕು ಶತಮಾನಗಳ ಹಿಂದೆ ಗೋವಾದಲ್ಲಿ ನಡೆದ ವಿಪ್ಲವದಿಂದ ಬಚಾವಾಗಲು ಓಡಿ ಬಂದ ಹಲವು ಜನಾಂಗಗಳಲ್ಲಿ, ಕುಡಿಬಿಯೂ ಪ್ರಮುಖವಾಗಿದ್ದು, ಆ ಜನಾಗಂದವರು ನೆಲೆಸಿದ ಜಾಗವೇ ‘ಅಬ್ಲಿಕಟ್ಟೆ’ ಎನಿಸಿದೆ; ಅವರು ತಮ್ಮ ಜತೆ ಅಬೋಲಿ ಅಥವಾ ಅಬ್ಲಿ ಹೂಗಿಡಗಳನ್ನೂ ತಂದರು!

‘ಅಬೋಲಿ’ ಹೂವನ್ನು (ಕನಕಾಂಬರ ಹೂ) ಅವರು ಹೇರಳವಾಗಿ ಬೆಳೆಯುವುದರಿಂದಾಗಿ, ಹೂವಿನ ಹೆಸರನ್ನೇ ಹೊತ್ತ ಹಳ್ಳಿಯಾಗಿ ಆ ತಾಣವು ರೂಪುಗೊಂಡಿದೆ. ಇಂದಿಗೂ ಆ ಪ್ರದೇಶದಲ್ಲಿ ಕನಕಾಂಬರ ಹೂವುಗಳು ಹೇರಳ ಎಂಬುವುದು ಇನ್ನೊಂದು ವಿಶೇಷ.