ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir Hegde Column: ಅಸಾಮಾನ್ಯ ಜಗತ್ತಿನ ಸಾಮಾನ್ಯ ಬದುಕು ಇತಿಹಾಸವಾಗುವುದಿಲ್ಲ

ರಾತ್ರಿಯಿಡೀ ಪ್ರಖರವಾಗಿದ್ದ ಬಸ್ಸಿನ ಬೆಳಕು ಕತ್ತಲೆ ಸರಿಯುತ್ತಿದ್ದಂತೆ ಸೋತು ದುರ್ಬಲವಾಗುತ್ತದೆ. ಈಗ ಬಸ್ಸಿಗೆ ಹೆಡ್‌ಲೈಟ್ ಹಂಗಿಲ್ಲ, ಆದರೂ ಬೇಕು. ಸ್ವಲ್ಪ ದೂರದಲ್ಲಿ ಪೇಪರಿನ ಹುಡುಗ ರಸ್ತೆಯ ಹೊಂಡ ಗಳನ್ನು ತಪ್ಪಿಸಿಕೊಂಡು ನಾಜೂಕಾಗಿ ಸೈಕಲ್ ಸವಾರಿ ಮಾಡುತ್ತಿದ್ದಾನೆ. ಅತ್ತಿಂದ ಬೈಕಿನಲ್ಲಿ ಹುಲ್ಲಿನ ರಾಶಿಯನ್ನು ಯಾರೋ ರೈತ ಅಷ್ಟು ಬೆಳಗ್ಗೆ ಎಲ್ಲಿಗೋ ಸಾಗಿಸುತ್ತಿದ್ದಾನೆ.

ಅಸಾಮಾನ್ಯ ಜಗತ್ತಿನ ಸಾಮಾನ್ಯ ಬದುಕು ಇತಿಹಾಸವಾಗುವುದಿಲ್ಲ

-

ಶಿಶಿರಕಾಲ

shishirh@gmail.com

ನಮ್ಮೂರು ಕುಮಟಾದ ಬೇಸಗೆಯ ಸೆಖೆ ಅಲ್ಲಿಯೇ ಹುಟ್ಟಿ ಬೆಳೆದವರಿಗೂ ತಡೆದುಕೊಳ್ಳುವುದು ಕಷ್ಟ. ಕರಾವಳಿಯ ಮಂಗಳೂರು, ಕಾರವಾರ, ಕುಂದಾಪುರ, ಉಡುಪಿ, ಭಟ್ಕಳ ಎಲ್ಲಾ ಊರುಗಳೂ ಬೇಸಗೆಯಲ್ಲಿ ಇಡ್ಲಿ ಕುಕ್ಕರಿನಂತಾಗುತ್ತವೆ. ಇಂಥ ಬೇಸಿಗೆಯಲ್ಲಿ ಈ ಊರುಗಳಿಂದ ಬೆಂಗಳೂರಿಗೆ ರಾತ್ರಿ ಬಸ್ ಪ್ರಯಾಣ ಮಾಡುವುದು ನನ್ನ ಮಟ್ಟಿಗೆ ಪರಮಸಾಹಸದ ಕೆಲಸ. ಬಸ್ಸಿಗೆ ಕಾದು, ಅದರೊಳಕ್ಕೆ ಕೂತು ಹೊರಡುವಲ್ಲಿಯವರೆಗೇ ಮೈಯೆ ಬೆವರಾಗಿ, ಅರ್ಧ ಬಸವಳಿದಾಗಿರುತ್ತದೆ.

ಆ ಬಸ್ಸಿನವನು ನಾವು ಬ್ಯಾಗ್ ಇತ್ಯಾದಿ ಇಟ್ಟುಕೊಂಡು ಕಾಯುತ್ತಾ ನಿಂತ ಬಸ್ ನಿಲ್ದಾಣದಿಂದ ಐವತ್ತು ಮೀಟರ್ ಮುಂದೆ ಹೋಗಿಯೇ ನಿಲ್ಲಿಸುವುದು, ಯಾವತ್ತೂ. ಅದೇಕೋ ಗೊತ್ತಿಲ್ಲ, ಗಟ್ಟಿ ಬ್ರೇಕ್ ಹಾಕಲು ಆಲಸ್ಯವಿರುವ ಡ್ರೈವರ್ ಅನ್ನು ಪಶ್ಚಿಮ ಘಟ್ಟಗಳ ತಿರುವಿನಲ್ಲಿ ಹೇಗೆ ನಂಬುವುದು ಎಂದು ಯೋಚಿಸುವಂತಿಲ್ಲ.

ಹೇಗೋ ನಂಬಿ ಬಸ್ಸಿನೊಳಗೆ ಸ್ಥಾಪನೆಯಾಗುತ್ತಿದ್ದಂತೆ ಮರಳುಗಾಡಿನಷ್ಟು ಬಾಯಾರಿಕೆ. ಆದರೆ ಬಾಯಾರಿಕೆಯೆಂದು ಲೀಟರ್‌ಗಟ್ಟಲೆ ನೀರು ಕುಡಿಯುವಂತಿಲ್ಲ. ಕುಡಿದರೆ ಕೆಟ್ಟಿರಿ. ಕುಮಟಾದಲ್ಲಿ ತನ್ನ ಅಸ್ತಿತ್ವವೇ ಇಲ್ಲದ ರೀತಿ ಬಿಸಿಗಾಳಿ ಬೀಸುವ ಬಸ್ಸಿನ ಏರ್‌ಕಂಡೀಶನಿಂಗ್ ಪಶ್ಚಿಮಘಟ್ಟ ಹತ್ತುತ್ತಿದ್ದಂತೆ ಹೊರಗಿನ ಚಳಿಯನ್ನೆಲ್ಲ ಒಳತಂದು ಇಡೀ ಬಸ್ಸನ್ನು ಫ್ರೀಜರ್ ಮಾಡಿ ಬಿಡುತ್ತದೆ.

ಇಂಥ ಸಂದರ್ಭದಲ್ಲಿ ಜಾಸ್ತಿ ನೀರು ಕುಡಿದಿದ್ದರೆ ಪಡ್ಚ. ‘ಹೊರಟು ನೆಟ್ಟಗೆ ಒಂದು ಗಂಟೆಯಾಗಿಲ್ಲ, ಮುಂದೆ ನಿಲ್ಲಿಸ್ತೀವಿ, ಹೋಗ್ರಿ’ ಎಂದು ಡ್ರೈವರ್ ಅಲ್ಲ, ಅವನ ಸಹಾಯಕನೇ ಬಹಿರಂಗವಾಗಿ ತನ್ನ ಅಸಹನೆ ತೋರಿಸುತ್ತಾನೆ. ‘ಮುಂದೆ ನಿಲ್ಲಿಸ್ತೇವೆ’ ಎಂದು ಹೇಳಿದ ಡ್ರೈವರ್ ನಮ್ಮನ್ನು ಮರೆತೇ ಬಿಡುತ್ತಾನೆ.

ಒಟ್ಟಾರೆ ರಾತ್ರಿ ಪ್ರಯಾಣದ ದಿನದ ಮಧ್ಯಾಹ್ನದಿಂದಲೇ ಕುಸ್ತಿಪಟುಗಳು ಕ್ಯಾಲೊರಿ ಲೆಕ್ಕವಿಟ್ಟಂತೆ ನೀರು ಕುಡಿಯುವುದರ ಬಗ್ಗೆ ಗಮನವಿರಬೇಕು. ಆಗ ಮಾತ್ರ ಸುಖಪ್ರಯಾಣ. ಆದರೆ ಅದೇ ಬಸ್ ನಸುಕಿನಲ್ಲಿ ಬೆಂಗಳೂರೆಂಬ ಮಹಾನಗರದ ಒಳಸೇರುವ ಕೊನೆಯ 2-3 ಗಂಟೆಯ ಸನ್ನಿವೇಶವಿದೆ ಯಲ್ಲ- ಅದು ಮಾತ್ರ ಪ್ರತಿ ಬಾರಿಯೂ ಒಂದು ಅದ್ಭುತ ಅನುಭವ.

ಅದು ಬೆಳಗಿನ ದೇಹಬಾಧೆಯನ್ನೂ ಮರೆಸುವಂಥದ್ದು. ನಾನು ಅದನ್ನು ಎಂದಿಗೂ ಮಿಸ್ ಮಾಡಿ ಕೊಳ್ಳುವುದಿಲ್ಲ. ಬೆಳಗಾಗುತ್ತಿದ್ದಂತೆ ಕಿಟಕಿಗೆ ಮುಖ ಮಾಡಿ ಕೂತರೆ ಜಗತ್ತು ಬೆಳಗಿನ ಭಾವಕ್ಕೆ ಮೈಮುರಿಯಲು ಆರಂಭಿಸುವುದು ಕಾಣಿಸುತ್ತದೆ. ಬಸ್ಸು ತುಮಕೂರು ತಲುಪುವಾಗಲೇ ಅಲ್ಲಿ ಪೇಪರ್ ಹಂಚುವವರು ಮುಚ್ಚಿದ ಅಂಗಡಿಯ ಎದುರು ರಾಶಿ ಹಾಕಿಕೊಂಡಿರುತ್ತಾರೆ.

ರಾತ್ರಿಯಿಡೀ ಪ್ರಖರವಾಗಿದ್ದ ಬಸ್ಸಿನ ಬೆಳಕು ಕತ್ತಲೆ ಸರಿಯುತ್ತಿದ್ದಂತೆ ಸೋತು ದುರ್ಬಲವಾಗುತ್ತದೆ. ಈಗ ಬಸ್ಸಿಗೆ ಹೆಡ್‌ಲೈಟ್ ಹಂಗಿಲ್ಲ, ಆದರೂ ಬೇಕು. ಸ್ವಲ್ಪ ದೂರದಲ್ಲಿ ಪೇಪರಿನ ಹುಡುಗ ರಸ್ತೆಯ ಹೊಂಡಗಳನ್ನು ತಪ್ಪಿಸಿಕೊಂಡು ನಾಜೂಕಾಗಿ ಸೈಕಲ್ ಸವಾರಿ ಮಾಡುತ್ತಿದ್ದಾನೆ. ಅತ್ತಿಂದ ಬೈಕಿ ನಲ್ಲಿ ಹುಲ್ಲಿನ ರಾಶಿಯನ್ನು ಯಾರೋ ರೈತ ಅಷ್ಟು ಬೆಳಗ್ಗೆ ಎಲ್ಲಿಗೋ ಸಾಗಿಸುತ್ತಿದ್ದಾನೆ.

ಇನ್ನೊಂದಿಷ್ಟು ರೈತರು ಹೊಲದಲ್ಲಿ ಅದಾಗಲೇ ಕೆಲಸ ಶುರುಮಾಡಿಕೊಂಡಿದ್ದಾರೆ. ಬಸ್ಸು ಮುಂದೆ ದಾಬಸ್‌ಪೇಟೆ ತಲುಪುವಾಗ ಅಲ್ಲಿನ ಜನಜೀವನ ಇನ್ನಷ್ಟು ಎಚ್ಚರವಾಗಿರುತ್ತದೆ. ಚಿಕ್ಕ ಚಹಾ ಅಂಗಡಿಯವನು ಶಟರ್ ತೆಗೆದು ಜೀರೋ ವೋಲ್ಟಿನ ಬಲ್ಬ್ ಕೆಳಗೆ ಹಾಲು ಕಾಯಿಸುತ್ತಿದ್ದಾನೆ. ‌

ಅಂದೆರಡು ಮಂದಿ ಸಿಗರೇಟು ಹಚ್ಚಿ ಹೊಗೆ ಬಿಡುತ್ತಿದ್ದಾರೆ. ಪಕ್ಕದಲ್ಲಿ ಯಾರೋ ಕಸ ಗುಡಿಸು ತ್ತಿದ್ದಾರೆ. ಎಂಟನೇ ಮೈಲಿ ದಾಟುವಾಗ ಯೂನಿಫಾರ್ಮ್ ಹಾಕಿದ ಹುಡುಗ ರಸ್ತೆಯಲ್ಲಿ ಸೈಕಲ್‌ಗೆ ಒರಗಿ ನಿಂತು ಆಕಳಿಕೆ ತೆಗೆಯುತ್ತಿದ್ದಾನೆ. ಯಾರುಯಾರೋ ಎಲ್ಲಿಗೋ ಹೋಗುತ್ತಿದ್ದಾರೆ. ಮುಂದೆ ಬೆಂಗಳೂರಿಗೆ ಬಂದು ಮುಟ್ಟುವಾಗ ಜಗತ್ತು ಇನ್ನಷ್ಟು ಜಾಗ್ರತ. ಹೋಟೆಲ್, ಅಂಗಡಿಗಳು, ಆಟೋ ರಿಕ್ಷಾದವರು, ತರಕಾರಿ ಗಾಡಿಯವರು, ಶಾಲೆಗೆ ಹೋಗುವ ಮಕ್ಕಳು, ಕುತ್ತಿಗೆಗೆ ಐಡಿ ಕಾರ್ಡ್ ನೇತು ಹಾಕಿಕೊಂಡು ಆಫೀಸಿನ ಬಸ್‌ಗೆ ಕಾದು ನಿಂತವರು ಇತ್ಯಾದಿ. ‌ಅಷ್ಟು ಬೆಳಗ್ಗೆ ಮೆಡಿಕಲ್ ಶಾಪ್‌ನಲ್ಲಿ ಯಾರೋ ಏನನ್ನೋ ಖರೀದಿಸುತ್ತಿದ್ದಾರೆ ಎಂದರೆ ಅದು ಬೆಂಗಳೂರು!

ಮೊದಲೆಲ್ಲ ಪ್ರಯಾಣದಲ್ಲಿ ಪರಿಚಯವಾಗುತ್ತಿದ್ದ ಊರು, ಅಲ್ಲಿನ ಅಂಗಡಿ ಬೋರ್ಡುಗಳು, ಹಣ್ಣು, ತಿಂಡಿ, ಐಸ್‌ಕ್ಯಾಂಡಿ ಇತ್ಯಾದಿ ಈಗೀಗ ಬೈಪಾಸ್ ಮರೆಯಲ್ಲಿಯೇ ಸರಿದು ಹೋಗುತ್ತವೆ. ಆದರೂ ಬೆಳಗ್ಗೆ ಬಸ್ಸಿನೊಳಗೆ ನಿದ್ರೆಯಿಂದ ಎದ್ದಾಗಿನಿಂದ ಬೆಂಗಳೂರು ತಲುಪಿ ಬಸ್ ಇಳಿಯು ವಲ್ಲಿಯವರೆಗೆ ಕನಿಷ್ಠ ಐದೆಂಟು ಸಾವಿರ ಬದುಕು ನಮ್ಮೆದುರು ಪಟಪಟಪಟನೆ ಸರಿದು ಹೋಗಿರುತ್ತದೆ.

ಪ್ರತಿಯೊಬ್ಬರದೂ ಒಂದೊಂದು ಬದುಕು, ಕಥೆ, ಸಮಸ್ಯೆ, ಉದ್ದೇಶ, ಸ್ಥಿತಿ, ಗುರಿ. ಮುಂಬೈನ ಬೆಳಗಾಗುವ ಪ್ರಕ್ರಿಯೆ- ಸ್ವಿಜರ್ಲೆಂಡ್‌ನ ಬರ್ನ್ ಅಥವಾ ಅಮೆರಿಕದ ನ್ಯೂಯಾರ್ಕಿನ ಪ್ರಕ್ರಿಯೆ, ಶೈಲಿ ವಿಭಿನ್ನವಿರಬಹುದು, ಆದರೆ ಮನುಷ್ಯ ಜಗತ್ತು ಎಚ್ಚರಗೊಳ್ಳುವ ದೃಗ್ಗೋಚರ ಬೆಳಗಿನ ಆ ಗಡಿಬಿಡಿ- ಉತ್ಸಾಹ ಸಾರ್ವತ್ರಿಕ. ಆ ಪ್ರಕ್ರಿಯೆಯಲ್ಲಿ ಸಾಮ್ಯತೆ, ಏಕತೆ ಇದೆ.

ಇತ್ತ ಇಸ್ರೇಲ್-ಹಮಾಸ್ ಯುದ್ಧ, ಉಕ್ರೇನ್-ರಷ್ಯಾ ಯುದ್ಧ ನಿಲ್ಲುತ್ತಿಲ್ಲ, ಡೊನಾಲ್ಡ್‌ ಸುಮ್ಮನಿರು ತ್ತಿಲ್ಲ, ಮೋದಿ ನಿದ್ದೆ ಮಾಡುತ್ತಿಲ್ಲ, ಸಿದ್ದರಾಮಯ್ಯ ಬಹುವಚನ ಕಲಿತಿಲ್ಲ, ಸಲ್ಮಾನ್ ಖಾನ್‌ಗೆ ಮದುವೆಯಿಲ್ಲ, ಅತ್ತ ಹಿಮಗಡ್ಡೆ ಕರಗುತ್ತಿದೆ, ಗ್ಲೋಬಲ್ ವಾರ್ಮಿಂಗ್, ಸಮುದ್ರ ಮಟ್ಟ ಏರುತ್ತಿದೆ, ಕೆನಡಾದಲ್ಲಿ ಕಾಡ್ಗಿಚ್ಚು, ಜಪಾನಿನಲ್ಲಿ ಭೂಕಂಪ, ಅಲ್ಲಿ ನೆರೆ, ಇಲ್ಲಿ ಬರ. ಇದೆಲ್ಲ, ಏನೆಲ್ಲ ಅಸಾಮಾನ್ಯಗಳ ನಡುವೆಯೂ ಅಲ್ಲ, ಸಾಮಾನ್ಯರ ಬದುಕು-ದಿನಚರಿ ನಿತ್ಯ ನಿರಂತರ- ಹೆಚ್ಚು ಬದಲಾಗದಂತೆ ನಡೆಯುತ್ತಲೇ ಇರುತ್ತದೆ.

ಜಗತ್ತಿನಲ್ಲಿ ಶೇ.99 ಜನರದು ಸಾಮಾನ್ಯ ಬದುಕು. ಹೆಚ್ಚಿನವರದು ನಿತ್ಯ, ವಾರದ, ತಿಂಗಳ, ವರ್ಷದ ಪುನರಾವರ್ತನೆಯ ಉದ್ಯೋಗ. ಬದುಕು ಕೂಡ ಪುನರಾವರ್ತನೆ. ಅದೇನೂ ತಪ್ಪಲ್ಲ, ಬೇಸರದ ವಿಷಯವಲ್ಲ. ಹಕೀಕತ್ತು. ಮೇಷ್ಟ್ರು ಹತ್ತಾರು ವರ್ಷಗಳಿಂದ ನಿತ್ಯ ಶಾಲೆಗೆ ಹೋಗಿ ಪಾಠ ಮಾಡುವುದು, ಒಬ್ಬ ಐಟಿ ಉದ್ಯೋಗಿ ಆಫೀಸಿಗೆ ಹೋಗಿ ಮಾಡುವ ಕೆಲಸ ಎಲ್ಲವೂ ಹಾಗೆಯೇ.

ಕೆಲಸ ಬದಲಿಸಿದರೆ ಇನ್ನೊಂದು ರೀತಿಯ ಪುನರಾವರ್ತನೆಯ ದಿನಚರಿ. ಮನೆಯಲ್ಲೂ ಅಡುಗೆ ಇತ್ಯಾದಿ. ಜೀವನಚಕ್ರ ಮುಂದೆ ಸಾಗುವಾಗ ತನ್ನಷ್ಟಕ್ಕೆ ತಾನೂ ಸುತ್ತಬೇಕಲ್ಲ. ಸಾಮಾನ್ಯ ಬದುಕು ಕೂಡ ಹಾಗೆಯೇ. ವಿದ್ಯಾಭ್ಯಾಸವಾಯ್ತು, ಮದುವೆಯಾಯಿತು, ಮಕ್ಕಳಾದವು, ಅವರಿಗೆ ಕಲಿಸಿದ್ದಾಯ್ತು, ದುಡಿದದ್ದಾಯ್ತು. ಶೇ.99 ಜನರ ಬದುಕು ಇತಿಹಾಸದಲ್ಲಿ ದಾಖಲಾಗುವುದಿಲ್ಲ.

ಇತಿಹಾಸ ಅವರದ್ದೇ ಆದರೂ ಅವರು ವೈಯಕ್ತಿಕವಾಗಿ ಅದರ ಭಾಗವಾಗುವುದಿಲ್ಲ. ನಾವು ಐತಿಹಾಸಿಕ ಬದುಕನ್ನು ಬದುಕಬೇಕಿಲ್ಲ ಎಂಬುದನ್ನು ಕೆಲವರು ಒಪ್ಪಿ ಬದುಕುತ್ತಾರೆ. ಅವರದು ನೆಮ್ಮದಿಯ ಬದುಕು. ಆಂಟನಿ ಡಿಪೆಲ್ಮಾ ಬರೆದಿರುವ The Cubans: Ordinary Lives in Extra ordinary Times, ಎಂಬ ಪುಸ್ತಕವನ್ನು ಇತ್ತೀಚೆಗೆ ಓದುತ್ತಿದ್ದೆ. ಕ್ಯೂಬಾ ಕ್ರಾಂತಿಯ ಬಗ್ಗೆ ಸಾಕಷ್ಟು ಪುಸ್ತಕಗಳಿವೆ. ಆದರೆ ಈ ಪುಸ್ತಕ ಬಹಳ ವಿಭಿನ್ನವೆನಿಸಿತು.

ಇದರಲ್ಲಿ ಪತ್ರಕರ್ತ ಆಂಟನಿ ಡಿಪೆಲ್ಮಾ ಕ್ಯೂಬಾ ರಾಜಧಾನಿ ವಾಹನಾದ ಕೇರಿಯೊಂದರಲ್ಲಿ ಬದುಕುತ್ತಿದ್ದ ಒಬ್ಬ ಚಿತ್ರಕಾರ, ಕ್ಷೌರಿಕ, ಶಿಕ್ಷಕ, ಬೇಕರಿಯವ, ಹಿಟ್ಟಿನ ಗಿರಣಿಯವನು ಮೊದಲಾದ ವರ ನಿತ್ಯದ ಸಾಮಾನ್ಯಬದುಕಿನ ವಿವರಣೆ ದಾಖಲು ಮಾಡಿದ್ದಾನೆ. ಅವರ ಬದುಕನ್ನು ಕ್ರಾಂತಿ ಹೇಗೆಲ್ಲ ಬದಲಿಸಿತು ಎಂದು ವಿವರಿಸುತ್ತ ಅಂದಿನ ಇಡೀ ಸಮಾಜದ ಜನಸಾಮಾನ್ಯರ ಚಿತ್ರಣ ಕಟ್ಟಿಕೊಟ್ಟಿದ್ದಾನೆ.

ಕ್ಯೂಬಾ ದೇಶದ ಕ್ರಾಂತಿಯ ಬಗ್ಗೆ ನನಗೆ ವಿಶೇಷ ಆಸಕ್ತಿಯಿಲ್ಲದಿದ್ದರೂ ಓದುತ್ತ ಹೋದಂತೆ ಅಲ್ಲಿನ ಅಂದಿನ ಸಾಮಾನ್ಯ ಬದುಕಿನ ಸ್ಪಷ್ಟ ಚಿತ್ರಣ ನನ್ನೆದುರು ಪ್ರಕಟವಾಯಿತು. ಈ ರೀತಿ ದಾಖಲಾಗುವ ಇತಿಹಾಸ ತೀರಾ ಕಡಿಮೆ. ಬ್ರಿಟಿಷ್ ಆಡಳಿತದಲ್ಲಿ ಸಾಮಾನ್ಯರ ಬದುಕು ಹೇಗಿತ್ತು, ಹೇಗೆ ಬದಲಾಯಿತು ಎನ್ನುವುದರ ಬಗ್ಗೆ ಹೆಚ್ಚಿನ ಬರೆದಿಟ್ಟ ನೈಜ ಇತಿಹಾಸ ಸಿಗುವುದಿಲ್ಲ.

ಬ್ರಿಟಿಷರು ಬರೆದಿದ್ದರಲ್ಲಿ ಹೆಚ್ಚಿನವು ಸುಳ್ಳು, ನಮ್ಮವರು ಬರೆದಿಟ್ಟದ್ದು ಶೇ.1ರಷ್ಟು ಇತಿಹಾಸ. ವ್ಯವಸ್ಥೆಯ ಇತಿಹಾಸ. ಸಾಮಾನ್ಯರ ಬದುಕಿನ ಎಳೆಗಳಲ್ಲಿದ್ದ ನಿಜವಾದ ಇತಿಹಾಸದ ದಾಖಲೆಗಳು ತೀರಾ ಇಲ್ಲವೇ ಇಲ್ಲ. ಎಲ್ಲಾ ಇತಿಹಾಸಗಳ ದೊಡ್ಡ ಕೊರತೆಯೇ ಅದು. ರಾಜನಿದ್ದನಂತೆ, ಹಾಗೆ ಯುದ್ಧವಾಯಿತಂತೆ, ಸರ್ವಾಧಿಕಾರಿಯಿದ್ದನಂತೆ, ದೇಶ ಶ್ರೀಮಂತವಿತ್ತಂತೆ, ಕಟ್ಟಡಗಳು, ರಸ್ತೆಗಳಾದುವಂತೆ, ಕ್ಷಾಮ ಬಂತಂತೆ- ಹೀಗೆ ಹೇಳುವ ಇತಿಹಾಸವು ಸಾಮಾನ್ಯರ ಬದುಕು ಹೇಗಿತ್ತು ಎಂದು ಹೇಳುವುದೇ ಇಲ್ಲ.

ಆ ಕಾರಣಕ್ಕೆ ನಮಗೆ 1862ರಲ್ಲಿ ನಮ್ಮ ಊರಿನ ಜನರ ಬದುಕು ಹೇಗಿತ್ತು? ಇವತ್ತಿಗಿಂತ ಹೆಚ್ಚಿನ ನೆಮ್ಮದಿ ಇತ್ತೋ ಇಲ್ಲವೋ ಎಂಬ ವಿವರ ತಿಳಿಯಲಾಗುವುದಿಲ್ಲ. ಆ ಕಾರಣಕ್ಕೆ ಹಿಂದಿನವರzಲ್ಲ ಅತ್ಯಂತ ಕಷ್ಟದ ಬದುಕಾಗಿತ್ತು ಎಂದು ಸಾಮಾನ್ಯೀಕರಿಸಿಕೊಂಡು ಬಿಡುತ್ತೇವೆ. ಈಗ ತಂತ್ರಜ್ಞಾನ, ಸಲಕರಣೆಗಳು, ಇಂಟರ್ನೆಟ್, ಟಿವಿ ಎಲ್ಲವೂ ಬಂದಿವೆ.

ಇವೆಲ್ಲ ಸೌಲಭ್ಯಗಳಿಂದ ನಿತ್ಯದ ಸಾಮಾನ್ಯ ಬದುಕಿನ ನೆಮ್ಮದಿ ಹೆಚ್ಚಿದೆಯೇ, ಕಡಿಮೆಯಾಗಿದೆಯೇ ಎಂಬ ಬದುಕಿನ ಗುಣಮಟ್ಟವನ್ನು ಹೋಲಿಸುವ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಇದು ಕೊರತೆ. ನಾನಿಲ್ಲಿ ಸಾಮಾನ್ಯರ ಬದುಕು ಎಂದು ಹಗುರವಾಗಿ ಹೇಳುತ್ತಿಲ್ಲ. ನಿತ್ಯ ಬೆಳಗ್ಗೆ ಬ್ಯಾಂಕಿನ ಪ್ಯೂನ್ ಕೊಠಡಿಯನ್ನು ಸ್ವಚ್ಛವಾಗಿಡುತ್ತಾನೆ, ಆ ದಿನಕ್ಕೆ ಬ್ಯಾಂಕನ್ನು ತಯಾರು ಮಾಡುತ್ತಾನೆ.

ಶಿಕ್ಷಕ ನಿತ್ಯ ಬಂದು ಪಾಠ ಮಾಡುತ್ತಾನೆ, ಮುಂದಿನ ತಲೆಮಾರನ್ನು ಕಟ್ಟುತ್ತಾನೆ. ಬದುಕಿನ ಕೊನೆಯ ದಿನಗಳಲ್ಲಿ ಮನೆಯವರು ಜತೆಯಲ್ಲಿ ಇರದಾಗ ನರ್ಸ್ ರೋಗಿಗೆ ಆಪ್ತವಾಗುತ್ತಾಳೆ, ಧೈರ್ಯ ತುಂಬು ತ್ತಾಳೆ. ಅಂಗಡಿಯವನು ಗ್ರಾಹಕ ಬಡವನೆಂದು ಡಿಸ್ಕೌಂಟ್ ಕೇಳದೆಯೂ ಕೊಡುತ್ತಾನೆ. ಪೆಟ್ರೋಲ್ ಬಂಕಿನಲ್ಲಿ ಕಾರಿನ ಗ್ಲಾಸ್ ಸ್ವಚ್ಛಮಾಡುವವನು ಹತ್ತು ರೂಪಾಯಿ ಹೆಚ್ಚಿಗೆ ಸಂಪಾದಿಸಿದ್ದಕ್ಕೆ ಖುಷಿಯಾಗುತ್ತಾನೆ. ಅಸಂಖ್ಯ ಉದ್ಯೋಗ, ಅಸಂಖ್ಯ ಉದರ ನಿಮಿತ್ತದ ವೇಷಗಳು. ಎಲ್ಲರೂ ಸೇರಿದರಷ್ಟೇ ಸಮಾಜ.

ಸಾಮಾನ್ಯರ ನಿತ್ಯ ಬೋರಿಂಗ್ ಎನಿಸುವ, ಪುನರಾವರ್ತನೆಯ ದುಡಿಮೆ ಈ ಜಗತ್ತನ್ನು ಕಟ್ಟಿದೆ, ಕಟ್ಟುತ್ತಿದೆ. ಸಾಮಾನ್ಯರ ಬದುಕು ಇತಿಹಾಸವಾಗುವುದಿಲ್ಲ ನಿಜ, ಆದರೆ ನಿತ್ಯ ದಿನಚರಿಯ ಬದುಕು ಗಳೇ ಮನುಷ್ಯನ ಇಡೀ ಸಮಾಜವನ್ನು ಇಂದು ಇಲ್ಲಿಗೆ ತಂದು ನಿಲ್ಲಿಸಿರುವುದು. ಇಂದಿನ ತಲೆಮಾರಿ ನಲ್ಲಿ ಸಾರ್ಥಕ ಬದುಕಿನ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಬದುಕು ಸಾರ್ಥಕವಾಗ ಬೇಕೆಂದರೆ ದಿನಚರಿಯ ಬದುಕನ್ನು ಬಿಟ್ಟು ಸಾಹಸಮಯ ಬದುಕನ್ನು ಬದುಕುವುದು ಎಂಬ ನಂಬಿಕೆ ಹೆಚ್ಚುತ್ತಿದೆ.

ಭಿನ್ನತೆಯ ಹುಚ್ಚು ಸಾರ್ವತ್ರಿಕವಾಗಿದೆ. ಯಾರೂ ಮಾಡದ್ದು ನಾನು ಮಾಡಬೇಕೆಂಬ ಹುಚ್ಚು. ಯಾರೂ ಬದುಕದ ರೀತಿ ನನ್ನ ಬದುಕಿರಬೇಕೆಂಬ ಹುಚ್ಚು. ನನ್ನ ಮದುವೆಯ ಫೋಟೋಶೂಟ್ ವಿಭಿನ್ನವಿರಬೇಕು, ನನ್ನ ಮಗುವಿನ ಹುಟ್ಟಿದ ಹಬ್ಬ, ಸೇರಿಸುವ ಶಾಲೆ, ನಾನು ಧರಿಸುವ ಬಟ್ಟೆ ಎಲ್ಲದರಲ್ಲೂ ಏನೋ ಒಂದು ಸ್ಪೆಷಲ್ ಬೇಕು, ನೌಕರಿ ಕೂಡ. ಆರ್ಡಿನರಿ ವಸ್ತುಗಳು, ನೌಕರಿ, ಅಡುಗೆ, ದಿನಚರಿಯ ಬದುಕು ನಿರರ್ಥಕರ ಎಂಬ ಭಾವನೆ ಸಮಾಜದಲ್ಲಿ ಮೂಡುತ್ತಿದೆ.

ಬದುಕೇ ‘ಡಿಫರೆಂಟ್’ ಇರಬೇಕೆಂಬ ಹುಚ್ಚಿನ ಹಿಂದೆ ಬಿದ್ದವರಿಗೆ ಭ್ರಮನಿರಸನ ಪಕ್ಕಾ. ಏಕೆಂದರೆ- ಶೇ.99 ಉದ್ಯೋಗ- ಬದುಕು ದಿನಚರಿಯ ಪುನರಾವರ್ತನೆಗಳವು. ಅದೇಕೋ ಈಗೀಗ ತಾನು ವಿಭಿನ್ನ, ತನ್ನ ಬದುಕು ವಿಭಿನ್ನ, ಎಲ್ಲರಂತಲ್ಲ ಎಂದು ತೋರಿಸಿಕೊಳ್ಳಬೇಕಾದ ಅವಶ್ಯಕತೆ ಸಮಾಜದಲ್ಲಿ ಹೆಚ್ಚುತ್ತಿದೆ. ಅದಕ್ಕೆ ಸೋಷಿಯಲ್ ಮೀಡಿಯಾ ನೇರ ಕಾರಣವೇ? ಇರಬಹುದು.

ದಿನಚರಿಯ ಸಾಮಾನ್ಯ ಜೀವನದಲ್ಲಿ ಮಾತ್ರ ಬದುಕಿನ ಪೂರ್ಣತೆಯನ್ನು ಕಂಡುಕೊಳ್ಳಲು ಸಾಧ್ಯ ಎನ್ನುವುದು ಅಷ್ಟೇ ಸತ್ಯ. ಸೆಲೆಬ್ರಿಟಿಯಾದವನಿಗೆ ಬಹಳಷ್ಟು ಸ್ವಾತಂತ್ರ್ಯವಿರುವುದಿಲ್ಲ. ಅರ್ಥ ಪೂರ್ಣ ಬದುಕಿಗೂ, ಸಾಧನೆಗೂ ಸಂಬಂಧವೇ. ಪೂರ್ಣ ಬದುಕು ಸಾಧನೆ ಮಾಡಿದಮೇಲೆ, ಯಥೇಚ್ಛ ದುಡಿದ ಮೇಲೆ ಸಿಗುವ ಕಪ್ ಅಲ್ಲ. ವ್ಯಕ್ತಿಯ ಸಾಧನೆಯ ಮೇಲೆ ಅವನ ಜೀವನದ ಸಾರ್ಥಕ್ಯವನ್ನು ಅಳೆಯುವುದು ಈ ತಲೆಮಾರಿನ ಹುಚ್ಚುತನ.

ಬದುಕಿನ ಸಾರ್ಥಕ್ಯ ತೀರಾ ವೈಯಕ್ತಿಕ. ಅದು ಅವರವರ ವ್ಯಾಖ್ಯಾನ. ಹೋಲಿಸಿದಷ್ಟು ಗೊಂದಲ ಜಾಸ್ತಿ. ಅರ್ಥಪೂರ್ಣ ಬದುಕು ಎಂದರೆ ಸೆಲೆಬ್ರಿಟಿಯೇ ಆಗಬೇಕಿಲ್ಲ, ಸಾವಿರ ಮಂದಿ ಚಪ್ಪಾಳೆ ತಟ್ಟಬೇಕಿಲ್ಲ. ಅರ್ಥಪೂರ್ಣ ಬದುಕು ಸದ್ದಿಲ್ಲದೆ ನಡೆಯುವ ವೈಯಕ್ತಿಕ ಪ್ರಕ್ರಿಯೆ. ಅದು ಉದ್ಯೋಗ, ಸಾಮಾಜಿಕ ಸ್ಥಿತಿ, ಆರ್ಥಿಕತೆ ಇವು ಯಾವುದರಿಂದಲೂ ನಿರ್ಧರಿತವಾಗುವುದಲ್ಲ.

ಹೊರಡುವ ಮುನ್ನ ಕನ್ನಡಿ ಸರಿಮಾಡುವ ಬಸ್ ಡ್ರೈವರ್, ಮಾಸ್ಕ್, ಸ್ಟೆಥಾಸ್ಕೋಪ್ ಧರಿಸಿ ರೌಂಡ್ಸ್‌ ಗೆ ಹೊರಡುವ ನರ್ಸ್-ಡಾಕ್ಟರ್, ಬೆಳಗ್ಗೆ ಐದುಗಂಟೆಗೆ ಬಂದು ಬಾಗಿಲು ತೆಗೆಯುವ ಜಿಮ್ ಇನ್‌ಸ್ಟ್ರಕ್ಟರ್, ನಸುಕಿನಲ್ಲಿ ತೋಟಕ್ಕೆ ನೀರು ಹಾಯಿಸಲು ಹೊರಟ ರೈತ, ಸಂಜೆ ಕೊನೆಯ ಪೂಜೆ ಪೂರೈಸಿ ದೇವಸ್ಥಾನದ ಬಾಗಿಲು ಮುಚ್ಚುವ ಅರ್ಚಕರು, ಊಟ ಬಡಿಸಿ ಪಾತ್ರೆ ತೊಳೆದಿಟ್ಟು ನಾಳಿನ ದಿನಕ್ಕೆ ತಯಾರಾಗುವ ಗೃಹಿಣಿ, ಹೀಗೆ ಅಸಂಖ್ಯ ಹೇಳಬಹುದು.

ಸಮಾಜ ಅತ್ಯುತ್ತಮವೆನಿಸಿಕೊಳ್ಳಬೇೆಂದರೆ ಇವರೆಲ್ಲರ ನಿತ್ಯಕರ್ಮ ಕುಂದಿಲ್ಲದೆ, ತಪ್ಪದೆ ನಡೆಯ ಬೇಕು. ಹಾಗಾಗಿಯೇ ಅವೆಲ್ಲ ಅತ್ಯುತ್ತಮ ಸಮಾಜದ ಲಕ್ಷಣಗಳು. ಮನುಷ್ಯ ಇಂದು ಈ ಹಂತಕ್ಕೆ ಬಂದು ಮುಟ್ಟಿರುವುದೇ ಈ ದಿನಚರಿಯ, ಪುನರಾವರ್ತನೆಯ ಶಕ್ತಿಯಿಂದಾಗಿ.

ಕಲಿಯುವುದು, ಪುನರಾವರ್ತಿಸುವುದು, ಸುಧಾರಿಸುವುದು, ಪುನರಾವರ್ತಿಸುವುದು. ಮನುಷ್ಯ ಸಮಾಜ ನಿರ್ಮಾಣವಾಗಿರುವುದು, ನಿಂತಿರುವುದು, ಮುಂದುವರಿದಿರುವುದು ಈ ಪುನರಾವರ್ತನೆ ಯ ದಿನಚರಿಯ ಬದುಕಿನ ಸ್ಥಿರತೆಯಿಂದ. ನಮ್ಮ ನಮ್ಮ ಬದುಕಿನ ಬಗ್ಗೆ ದೂರ ದರ್ಶಿತ್ವವಿರಬೇಕು ನಿಜ.

ಅದು ಲಕ್ಷ್ಯ. ಆದರೆ ರಾತ್ರಿ ಬೆಂಗಳೂರಿಗೆ ಹೊರಟ ಬಸ್ಸಿನ ಡ್ರೈವರ್‌ಗೆ ಯಾವುದೇ ಸಮಯದಲ್ಲಿ ಬಸ್ಸಿನಿಂದ ತುಸು ದೂರ ಮಾತ್ರ ಕಾಣಿಸುವುದು. ಆ ದೂರವನ್ನು ನೋಡುತ್ತ, ಸಾಗುತ್ತಲೇ ಆತ ಕುಮಟಾದಿಂದ ಬೆಂಗಳೂರಿಗೆ ತಲುಪುವುದು. ಬದುಕು ಕೂಡ ಹಾಗೆಯೇ. ಗುರಿ ಏನೇ ಇದ್ದರೂ ಅದನ್ನು ಮುಟ್ಟಬೇಕೆಂದರೆ ತುಸು ದೂರದ ದೃಗ್ಗೋಚರವನ್ನು ಮೊದಲು ಕ್ರಮಿಸಬೇಕು. ಮತ್ತೆ ಅಲ್ಲಿಂದ ಮುಂದೆ.

ಅಸಾಮಾನ್ಯ ಜಗತ್ತಿನಲ್ಲಿ ಸಾಮಾನ್ಯ ದಿನಚರಿಯ ಬದುಕು ಇತಿಹಾಸವಾಗುವುದಿಲ್ಲ, ಪರವಾಗಿಲ್ಲ. ಇತಿಹಾಸ ಸೇರಿದರಷ್ಟೇ ಬದುಕು ಸಾರ್ಥಕವೆಂದಲ್ಲ. ಜನಪ್ರಿಯತೆಯು ಸಾರ್ಥಕ್ಯದ ಮಾಪಕವಲ್ಲ. ಅದೇನೇ ಕಡಿದು ಗುಡ್ಡೆ ಹಾಕಿದ್ದರೂ ಮೂರು ತಲೆಮಾರಿನ ನಂತರ ವ್ಯಕ್ತಿಯ ಹೆಸರೂ ಉಳಿಯುವು ದಿಲ್ಲ. ಹಾಗಿದ್ದಲ್ಲಿ ಅದೇಕೆ ಇದೆಲ್ಲ ಹಪಾಹಪಿ? ಅಸಾಮಾನ್ಯ ಜಗತ್ತಿನಲ್ಲಿ ಸಾಮಾನ್ಯರ ಬದುಕು ಇತಿಹಾಸವಾಗುವುದಿಲ್ಲ. ಸರಿ ಏನೀಗ?