M J Akbar Column: ಮೆಕ್ಕಾ ಒಪ್ಪಂದ ಬಳಿಕ ಒತ್ತಡಕ್ಕೆ ಸಿಲುಕಿದ ಪಾಕಿಸ್ತಾನ
ಮೆಕ್ಕಾ ಒಪ್ಪಂದದ ಬಳಿಕ ಪಾಕಿಸ್ತಾನದ ಸೇನೆ ತನ್ನ ಚಟುವಟಿಕೆಯನ್ನು ಇನ್ನೂ ಒಂದು ಸೆಕ್ಟರ್‌ಗೆ, ಅಂದರೆ ವಿದೇಶಕ್ಕೂ ವಿಸ್ತರಿಸಬೇಕಾಗುತ್ತದೆ. ಬಹುಶಃ ಹೌತಿಗಳಿಂದ ಹಿಡಿದು ದಕ್ಷಿಣ ಸೌದಿ ಅರೇಬಿಯಾ ವರೆಗೆ, ಅಲ್ಲಿಂದ ಸೋಮಾಲಿಯಾವರೆಗೆ, ಕೊನೆಗೆ ಅಗತ್ಯಬಿದ್ದರೆ ದಕ್ಷಿಣ ಸುಡಾನ್‌ಗೂ ಪಾಕ್ ತನ್ನ ಸೇನೆಯ ತುಕಡಿಗಳನ್ನು ಕಳುಹಿಸಬೇಕಾಗುತ್ತದೆ. ಸದ್ಯ ಭಾರತದ ಗಡಿಯಲ್ಲಿ ಪಾಕಿಸ್ತಾನದ ಸೇನಾಪಡೆಗಳ ನಿಯೋಜನೆ ನಿಧಾನವಾಗಿ ಕ್ಷೀಣಿಸುತ್ತಿರುವುದಕ್ಕೆ ಇದೇ ಕಾರಣ.
-
ಅಕ್ಬರ್‌ನಾಮಾ
ಎಂ.ಜೆ.ಅಕ್ಬರ್
(ಭಾಗ 3)
‘ಯುದ್ಧವೆಂದರೆ ಅಮೆರಿಕನ್ನರಿಗೆ ಭೂಗೋಳವನ್ನು ಕಲಿಸುವ ದೇವರ ವಿಧಾನ’ ಎಂದು ಬ್ರಿಟನ್ನಿನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಹೇಳಿದ್ದರು. ಈಗ ಇರಾನ್ ಮತ್ತು ಚೀನಾ ಸೇರಿಕೊಂಡು ವಾಷಿಂಗ್ಟನ್‌ಗೆ ಅದರ ಇತಿಮಿತಿಗಳನ್ನು ಕಲಿಸಿವೆ. ಪಾಠ ಮುಂದುವರೆದಿದೆ. ಪಾಕಿಸ್ತಾನ ಈ ಘಟನೆ ಯಿಂದ ಕಲಿಯಬೇಕಾದ ಪಾಠ ಬಹುಶಃ ವಿರೋಧಾಭಾಸದಿಂದ ಕೂಡಿರಬಹುದು. ಮೆಕ್ಕಾ ಒಪ್ಪಂದದ ಬಳಿಕ ಪಾಕಿಸ್ತಾನದ ಸೇನಾಪಡೆಯ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದ ಆ ದೇಶ ಒಟ್ಟಾರೆಯಾಗಿ ಇನ್ನೂ ದುರ್ಬಲವಾಗಲಿದೆಯೇ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.
ಪಾಕಿಸ್ತಾನದ ಮಿಲಿಟರಿ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುವವರ ಪ್ರಕಾರ ಇತ್ತೀಚಿನವ ರೆಗೂ ಅಲ್ಲಿನ ಸೇನಾಪಡೆಯ ಶೇ.80ರಷ್ಟು ಸಾಮರ್ಥ್ಯವನ್ನು ಭಾರತದ ಗಡಿಯಲ್ಲಿರುವ ಕಾರ್ಗಿಲ್ ಮತ್ತು ಕಚ್ ನಡುವಿನ ಪ್ರದೇಶಗಳಲ್ಲೇ ನಿಯೋಜಿಸಲಾಗಿತ್ತು. ಪಾಕಿಸ್ತಾನದಲ್ಲಿ 6,00,000 ಸೈನಿಕ ರಿದ್ದಾರೆ. ಅವರಲ್ಲಿ ಹೆಚ್ಚಿನವರು ಭಾರತದ ಗಡಿಯಲ್ಲೇ ಇರುತ್ತಾರೆ. ಆದರೆ ಈಗ ಭಾರತದ ಗಡಿಯಿಂದ ಸಾಕಷ್ಟು ಸೈನಿಕರನ್ನು ಹಿಂಪಡೆದು ಬಲೂಚಿಸ್ತಾನ, ಖೈಬರ್ ಪಖ್ತೂನ್‌ಕ್ವಾ ಹಾಗೂ ಅಫ್ಘಾನಿಸ್ತಾನದ ಕಾರ್ಯಾಚರಣೆಯಲ್ಲಿ ನಿಯೋಜಿಸಲಾಗಿದೆ.
ಮೆಕ್ಕಾ ಒಪ್ಪಂದದ ಬಳಿಕ ಪಾಕಿಸ್ತಾನದ ಸೇನೆ ತನ್ನ ಚಟುವಟಿಕೆಯನ್ನು ಇನ್ನೂ ಒಂದು ಸೆಕ್ಟರ್‌ಗೆ, ಅಂದರೆ ವಿದೇಶಕ್ಕೂ ವಿಸ್ತರಿಸಬೇಕಾಗುತ್ತದೆ. ಬಹುಶಃ ಹೌತಿಗಳಿಂದ ಹಿಡಿದು ದಕ್ಷಿಣ ಸೌದಿ ಅರೇಬಿ ಯಾವರೆಗೆ, ಅಲ್ಲಿಂದ ಸೋಮಾಲಿಯಾವರೆಗೆ, ಕೊನೆಗೆ ಅಗತ್ಯಬಿದ್ದರೆ ದಕ್ಷಿಣ ಸುಡಾನ್‌ಗೂ ಪಾಕ್ ತನ್ನ ಸೇನೆಯ ತುಕಡಿಗಳನ್ನು ಕಳುಹಿಸಬೇಕಾಗುತ್ತದೆ. ಸದ್ಯ ಭಾರತದ ಗಡಿಯಲ್ಲಿ ಪಾಕಿಸ್ತಾನದ ಸೇನಾಪಡೆಗಳ ನಿಯೋಜನೆ ನಿಧಾನವಾಗಿ ಕ್ಷೀಣಿಸುತ್ತಿರುವುದಕ್ಕೆ ಇದೇ ಕಾರಣ.
ಇದನ್ನೂ ಓದಿ: M J Akbar Column: ದಿ ಟ್ರಂಪ್ ಸಿಂಡ್ರೋಮ್: ಜಗತ್ತನ್ನು ದೊಡ್ಡಣ್ಣ ನೋಡುವ ಪರಿ
ಪಾಕಿಸ್ತಾನ ಈಗಾಗಲೇ ತನ್ನ ಹೊಸ ಸಾಹಸಗಳಿಗಾಗಿ 13,000 ಸೈನಿಕರು ಹಾಗೂ 20 ಯುದ್ಧ ವಿಮಾನಗಳನ್ನು ಕಳುಹಿಸಿದೆ ಎಂದು ಹೇಳಲಾಗುತ್ತಿದೆ. ಹೌತಿಗಳ ವಿರುದ್ಧ ಇನ್ನೂ ಹೆಚ್ಚಿನ ಹೋರಾಟ ನಡೆಸಬೇಕೆಂದರೆ ಹೆಚ್ಚಿನ ಸೇನಾಪಡೆಗಳು ಬೇಕಾಗುತ್ತವೆ. ಪ್ರತಿಯೊಬ್ಬ ಹೆಚ್ಚುವರಿ ಸೈನಿಕ, ಪ್ರತಿಯೊಂದು ಹೆಚ್ಚುವರಿ ಯುದ್ಧ ವಿಮಾನ ಅಂದರೆ ಭಾರತದ ಗಡಿಯಲ್ಲಿ ಅಷ್ಟೇ ಸಂಖ್ಯೆಯ ಸೈನಿಕರು ಮತ್ತು ಯುದ್ಧ ವಿಮಾನ ಕಡಿಮೆಯಾಗುತ್ತದೆ ಎಂದೂ ಅರ್ಥ. ಪಾಕಿಸ್ತಾನದ ಬಳಿ ಒಳ್ಳೆಯ ರಕ್ಷಣಾ ಉದ್ದಿಮೆಯಿದೆ. ಅಲ್ಲಿಗೆ ಡ್ರೋನ್‌ಗಳು ಟರ್ಕಿಯಿಂದ ಬರುತ್ತವೆ. ಆದರೆ ನಿಜವಾದ ಅಪಾಯವಿರುವುದು ಪಾಕಿಸ್ತಾನದ ಸೇನಾಪಡೆ ಯ ವ್ಯಾಪ್ತಿ ಮತ್ತು ಹಿಗ್ಗಿಸಿದ ವ್ಯಾಪ್ತಿಯ ನಡುವೆ ಎಂಬುದು ಪ್ರತಿಯೊಬ್ಬ ಕಮಾಂಡರ್‌ಗೂ ಗೊತ್ತಿದೆ.
ಪಾಕಿಸ್ತಾನದ ಸೇನಾಪಡೆಗಳು ಅಲ್ಲಿನ ಜನರಲ್ಲಿ ಭಾರತದ ಬಗ್ಗೆ ಭಯ ಹುಟ್ಟಿಸಿ ತೆರಿಗೆ ಹಣವನ್ನು ಸುಲಿಗೆ ಮಾಡುತ್ತಾ ಬಂದಿವೆ. ಭಾರತಕ್ಕೆ ಪಾಕಿಸ್ತಾನವನ್ನು ಕಬಳಿಸಿ ದೇಶ ವಿಭಜನೆಯ ಪೂರ್ವ ದಲ್ಲಿದ್ದ ಸಮಗ್ರ ಭಾರತವನ್ನು ಕಟ್ಟುವ ರಹಸ್ಯ ಉದ್ದೇಶವಿದೆ, ಅದಕ್ಕಾಗಿ ಭಾರತ ಯಾವಾಗ ಬೇಕಾದರೂ ಯುದ್ಧ ಸಾರಬಹುದು, ಅದನ್ನು ಎದುರಿಸಲು ನಮ್ಮ ಸೇನಾಪಡೆಯನ್ನು ಸನ್ನದ್ಧ ವಾಗಿ ಇರಿಸಿಕೊಳ್ಳಬೇಕು ಎಂದು ಹೇಳಿ ಸರ್ಕಾರದಿಂದ ಪಾಕ್‌ನ ಸೇನೆ ಸಾಕಷ್ಟು ಹಣ ಸುಲಿಯುತ್ತಿದೆ.
ಆದರೆ ಯಾವೊಬ್ಬ ಭಾರತೀಯನೂ 21ನೇ ಶತಮಾನದಲ್ಲಿ ಪಾಕಿಸ್ತಾನವನ್ನು ನಮ್ಮ ವಶಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿಲ್ಲ. ನಮಗೆ ಅಂತಹದ್ದೊಂದು ಆಸೆಯೂ ಇಲ್ಲ. ಆದರೂ ಪಾಕಿಸ್ತಾನದಂತಹ ಅಸ್ಥಿರ ದೇಶದ ಮಿಲಿಟರಿ ಬಜೆಟ್ಟನ್ನು ವಾಸ್ತವಾಂಶಗಳು ನಿರ್ಧಾರ ಮಾಡುವು ದಿಲ್ಲ. ಈಗೀಗ ಅಲ್ಲಿನ ಜನರಿಗೆ ನಿಜ ಏನೆಂಬುದು ತಿಳಿಯತೊಡಗಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿರುವ ಕಾಶ್ಮೀರಿಗಳು ಇನ್ನುಮುಂದೆಯೂ ಮೂರ್ಖರಾಗಲು ಸಿದ್ಧರಿಲ್ಲ. ಪಾಕಿಸ್ತಾನ ಹೇಳಿದ್ದನ್ನೆಲ್ಲಾ ಕೇಳಲು ಅವರು ತಯಾರಿಲ್ಲ. ಪಾಕಿಸ್ತಾನ ತಮ್ಮನ್ನು ವಸಾಹತುವಿನಂತೆ ನೋಡು ತ್ತಿದೆ ಎಂಬ ಸಿಟ್ಟು ಪಿಒಕೆಯ ಜನರಿಗಿದೆ.
ಪಾಕಿಸ್ತಾನ ಅವಲಂಬಿತ ರಾಷ್ಟ್ರ. ಹೀಗಾಗಿ ಅದು ಪಾಲುದಾರ ದೇಶವಾಗಲು ಸಾಧ್ಯವಿಲ್ಲ. ಪಾಕಿಸ್ತಾನಕ್ಕೆ ಆರ್ಥಿಕ ಸಮಸ್ಯೆ ಬಂದಾಗಲೆಲ್ಲಾ ವಿದೇಶಿ ನೆರವಿನಿಂದ ಅದು ಜೀವ ಉಳಿಸಿಕೊಳ್ಳು ತ್ತಿದೆ. ಅಲ್ಲೀಗ ಆರ್ಥಿಕ ಬಿಕ್ಕಟ್ಟಿದೆ. ಬಡತನ, ಹಸಿವಿನ ಸಮಸ್ಯೆ ವಿಪರೀತವಿದೆ. ಈ ಆಗಸ್ಟ್‌ನಲ್ಲೇ ರಿಯಾಧ್‌ನಿಂದ ಹೆಚ್ಚುವರಿ 3 ಬಿಲಿಯನ್ ಡಾಲರ್ ಹಣ ಪಾಕಿಸ್ತಾನದ ಸ್ಟೇಟ್ ಬ್ಯಾಂಕ್‌ಗೆ ರವಾನೆ ಯಾಗಿದೆ. ಅಲ್ಲಿಗೆ ಸೌದಿ ಅರೇಬಿಯಾ ದಿಂದ ಪಾಕಿಸ್ತಾನ ತೆಗೆದುಕೊಂಡಿರುವ ಸಾಲದ ಮೊತ್ತ 8 ಬಿಲಿಯನ್ ಡಾಲರ್ ಆದಂತಾಗಿದೆ.
ಇದರ ಜೊತೆಗೆ, ತೈಲ ಆಮದು ಮಾಡಿಕೊಂಡಿದ್ದಕ್ಕೆ 1.2 ಬಿಲಿಯನ್ ಡಾಲರ್ ಪಾವತಿಸುವುದು ಬಾಕಿಯಿದೆ. ಹೀಗಾಗಿ ಇಸ್ಲಾಮಾಬಾದ್ ಈಗ ಅಮೆರಿಕದ ಕಡೆ ನೋಡುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದ 10 ಬಿಲಿಯನ್ ಡಾಲರ್ ಸಾಲ ಕೊಡಿಸಿ ಎಂದು ಅಮೆರಿಕಕ್ಕೆ ಪಾಕಿಸ್ತಾನ ದುಂಬಾಲು ಬಿದ್ದಿದೆ. ಸದ್ಯ ಪಾಕಿಸ್ತಾನದ ಒಟ್ಟಾರೆ ವಿದೇಶಿ ಸಾಲ 140 ಬಿಲಿಯನ್ ಡಾಲರ್ ಆಗಿದೆ. ಅದರಲ್ಲಿ 70 ಬಿಲಿಯನ್ ಡಾಲರ್ ಸಾಲವನ್ನು ಚೀನಾ ದೇಶವೊಂದೇ ಕೊಟ್ಟಿದೆ!
ವಿದೇಶಿ ಸಾಲದ ಜೊತೆಗೆ ಆಂತರಿಕ ಸಾಲವೂ ಸೇರಿದರೆ ಪಾಕಿಸ್ತಾನದ ತಲೆಯ ಮೇಲಿರುವ ಒಟ್ಟು ಸಾಲದ ಮೊತ್ತ 300 ಬಿಲಿಯನ್ ಡಾಲರ್ ಆಗುತ್ತದೆ. ಇದು ಅಲ್ಲಿನ ಜಿಡಿಪಿಯ ಶೇ.70ರಷ್ಟು. ಈ ಪ್ರಮಾಣದ ಸಾಲ ಇಟ್ಟುಕೊಂಡು ಯಾವ ದೇಶವೂ ಉದ್ಧಾರವಾಗಲು ಸಾಧ್ಯವಿಲ್ಲ. ಸೌದಿಯ ದೊರೆಗಳು ಕೊಡುತ್ತಿರುವ ಗುಟುಕಿನಿಂದ ಪಾಕಿಸ್ತಾನ ಜೀವ ಹಿಡಿದುಕೊಂಡಿದೆ.
ಮೆಕ್ಕಾ ಒಪ್ಪಂದ ಏರ್ಪಟ್ಟ ಹದಿನೈದು ದಿನಗಳ ಒಳಗೇ, ಆಗಸ್ಟ್ 18ರಂದು, ಯೆಮನ್‌ನ ವಾರ್ತಾ ಸಚಿವ ಮುವಮ್ಮರ್ ಅಲ್ ಇರ್ಯಾನಿ ಅವರು ಫ್ರೆಂಚ್ ನ್ಯೂಸ್ ಏಜೆನ್ಸಿ ಎಎಫ್ʼಪಿ ಜೊತೆಗೆ ಮಾತನಾಡುತ್ತಾ, ‘ಹೌತಿ ಬಂಡುಕೋರರು ಬಾಬ್ ಎಲ್ ಮಾಂದೇಬ್ ಕೊಲ್ಲಿಯನ್ನು ವಶಪಡಿಸಿ ಕೊಳ್ಳಲು ತಯಾರಿ ನಡೆಸಿದ್ದಾರೆ. ಅದಕ್ಕಾಗಿ ಪಶ್ಚಿಮ ಕರಾವಳಿಯಲ್ಲಿ ತಮ್ಮ ಚಟುವಟಿಕೆಯನ್ನು ಹೆಚ್ಚಿಸಿದ್ದಾರೆ. ಕೆಂಪು ಸಮುದ್ರದಲ್ಲಿರುವ ಯೆಮನ್‌ನ ವ್ಯೂಹಾತ್ಮಕ ದ್ವೀಪವೊಂದನ್ನು ವಶಕ್ಕೆ ಪಡೆದುಕೊಳ್ಳುವುದಕ್ಕೂ ಪ್ರಯತ್ನಿಸುವವರಿದ್ದಾರೆ’ ಎಂದು ಹೇಳಿದ್ದರು. ಆಗಸ್ಟ್ ಎರಡನೇ ವಾರ ದಲ್ಲೇ ಹೌತಿಗಳು ಸೌದಿಯ ಎಂಟು ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿ, ಎರಡು ಯುದ್ಧ ನೌಕೆ ಗಳನ್ನು ಮುಳುಗಿಸಿದರು.
ಯೆಮನ್‌ನ ಮೋಖಾ ಬಂದರಿನ ಮೇಲೆ ಹೌತಿಗಳು ದಾಳಿ ನಡೆಸಲು ಯತ್ನಿಸುತ್ತಲೇ ಇದ್ದಾರೆ. ಅದೇ ವೇಳೆ, ಯೆಮನ್‌ನ ಸೇನಾ ನೆಲೆಗಳ ಮೇಲೂ ದಾಳಿ ನಡೆಸುತ್ತಿದ್ದಾರೆ. ಆಗಸ್ಟ್ 17ರಂದು ಎಪಿ ಸುದ್ದಿಸಂಸ್ಥೆ ಬಿಡುಗಡೆ ಮಾಡಿದ ಚಿತ್ರದಲ್ಲಿ ‘ತಿಹಾಮಾ’ ಎಂಬ ಸರಕು ಹಡಗಿನಲ್ಲಿದ್ದ ಪಾಕಿಸ್ತಾನದ ಸಿಬ್ಬಂದಿಯನ್ನು ಹೌತಿಗಳು ಹತ್ಯೆಗೈದಿರುವುದನ್ನು ಕಾಣಬಹುದಿತ್ತು. ಇರಾನ್ ಕೂಡ ಅಡ್‌ನಾಕ್ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿತ್ತು. ಇರಾನ್‌ನ ದೀರ್ಘಾವಧಿ ಹೋರಾಟದಲ್ಲಿ ಹೌತಿಗಳು ಯಾವಾಗ ಬೇಕಾದರೂ ನೆರವಿಗೆ ಬರುವ ಸ್ನೇಹಿತರಾಗಿ ಹೊರಹೊಮ್ಮಿದ್ದಾರೆ. ಆ ಪ್ರದೇಶದಲ್ಲಿ ಶಾಂತಿಯನ್ನು ಬಯಸುವವರು ಯಾರಾದರೂ ಇದ್ದರೆ ಅವರು ಬೈಬಲ್ ಓದಿಲ್ಲ ಎಂದರ್ಥ. ಅಥವಾ ಅವರು ಕಳೆದ ಎಂಟು ದಶಕಗಳ ಇತಿಹಾಸವನ್ನು ತಿಳಿದುಕೊಂಡಿಲ್ಲ.
ಸೌದಿಯವರಿಗೆ ಬಾಬ್ ಎಲ್ ಮಾಂದೇಬ್ ಕೊಲ್ಲಿಯನ್ನು ರಕ್ಷಿಸಿಕೊಳ್ಳಲೇಬೇಕು. ಅವರಿಗೆ ಬೇರೆ ದಾರಿ ಇಲ್ಲ. ಅದಕ್ಕಾಗಿ ಅವರಿಗೆ ಪದಾತಿ ಸೈನಿಕರು ಹಾಗೂ ಪರಿಣಾಮಕಾರಿ ವಾಯುಪಡೆ ಬೇಕು. ಹೌತಿಯ ಶಿಯಾ ಸೇನೆಯ ವಿರುದ್ಧ ಹೋರಾಡಲು ಸೌದಿಗೆ ಪಾಕಿಸ್ತಾನಿ ಸೇನೆಯ ನೆರವು ಅಗತ್ಯವಿದೆ. ಹೌತಿ ಶಿಯಾ ಸೇನೆ ಅಚ್ಚರಿಯ ರೀತಿಯಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸತೊಡಗಿದೆ.
ಪಾಕಿಸ್ತಾನವೇನಾದರೂ ಅವರ ವಿರುದ್ಧ ಸೌದಿಗೆ ನೆರವಾಗಲು ತನ್ನ ಯೋಧರನ್ನು ಕಳುಹಿಸಿದರೆ ಮತ್ತು ಆ ಯೋಧರು ಮುಸ್ಲಿಮರಿಂದಲೇ ಹತರಾದರೆ ಪಾಕಿಸ್ತಾನೀಯರು ಹೇಗೆ ಪ್ರತಿಕ್ರಿಯಿಸ ಬಹುದು? ಆಗ ಇರಾನ್ ಏನು ಮಾಡಬಹುದು? ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ವಿರೋಧಿಗಳ ನೆರವಿಗೆ ಧಾವಿಸುವ ಆಸೆ ಇರಾನಿನಲ್ಲಿ ಚಿಗುರೊಡೆಯ ಬಹುದೆ? ಇದು ಬೇರೆಲ್ಲೂ ಸಾಧ್ಯವಾಗ ದಿದ್ದರೆ ಕೊನೆಯ ಪಕ್ಷ ಅಲ್ಲಿನ ಚಿಂತಕರ ಚಾವಡಿಯ ಲೇಖನದಲ್ಲಾದರೂ ಕಾಣಿಸಿಕೊಳ್ಳಬಹುದೆ? ಪಾಕಿಸ್ತಾನದ ಸಶಸ ಪಡೆಗಳು ಬೇರೆಡೆಗೆ ತೆರಳಿದ್ದನ್ನು ನೋಡಿ ಆಫ್ಘನ್ ತಾಲಿಬಾನಿಗಳು ಡುರಾಂಡ್ ರೇಖೆಯಲ್ಲಿ ಚಿಗಿತುಕೊಳ್ಳಬಹುದೆ? ಯುದ್ಧ ತೀವ್ರಗೊಳ್ಳುತ್ತಾ ಹೋದರೆ ಭಾರತಕ್ಕೇನಾದರೂ ಅವಕಾಶಗಳು ತೆರೆದುಕೊಳ್ಳಬಹುದೆ? ಒಂದೇ ಒಂದು ಬೆಂಕಿ ಕಡ್ಡಿಯಿಂದ ದಾವಾಗ್ನಿಯನ್ನೇ ಹೊತ್ತಿಸಬಹುದು.
ಇಸ್ಲಾಮಿಕ್ ನ್ಯಾಟೋ ಎಂಬ ಹೆಸರು ಕೇಳುವುದಕ್ಕೆ ಚೆನ್ನಾಗಿರಬಹುದು. ಆದರೆ, ಇದಕ್ಕೂ ಮೊದಲಿ ನಿಂದಲೇ ಪಾಕಿಸ್ತಾನದಲ್ಲಿ ಅನಾಹುತಕಾರಿ ಚಿಂತನೆಯೊಂದು ತೆರೆಮರೆಯಲ್ಲೇ ಚರ್ಚಿತವಾಗುತ್ತಾ ಬಂದಿದೆ. ಪಾಕಿಸ್ತಾನದ ಅಣು ಬಾಂಬ್ ಪಿತಾಮಹ ಜುಲ್ಫಿಕರ್ ಅಲಿ ಭುಟ್ಟೋ ಮೊಟ್ಟಮೊದಲ ಬಾರಿ ಇದನ್ನು ಸಾರ್ವಜನಿಕ ಚರ್ಚೆಗೆ ಹರಿಬಿಟ್ಟಿದ್ದರು. ಅದು ಇಸ್ಲಾಮಿಕ್ ಬಾಂಬ್!
ಇಡೀ ಮುಸ್ಲಿಂ ಜಗತ್ತನ್ನು ರಕ್ಷಿಸಿಕೊಳ್ಳಲು ಇಂತಹದ್ದೊಂದು ಸೈದ್ಧಾಂತಿಕ ಬಾಂಬ್‌ನ ಕವಚ ಇರಬೇಕು ಎಂದು ಅವರು ಹೇಳಿದ್ದರು. ಪಾಕಿಸ್ತಾನದಲ್ಲಿ ಅಣ್ವಸ್ತ್ರ ಯೋಜನೆ ಆರಂಭಿಸಿದ ವಿಜ್ಞಾನಿ ಎ.ಕ್ಯು.ಖಾನ್ ಹೆಸರು ನಿಮಗೆ ಗೊತ್ತಿರುತ್ತದೆ. ಆತ ಭೋಪಾಲದಿಂದ ವಲಸೆ ಹೋಗಿ ಪಾಕ್‌ನಲ್ಲಿ ನೆಲೆಸಿದ್ದರು. ಜಗತ್ತಿನ ಅತ್ಯಂತ ಯಶಸ್ವಿ ಅಣ್ವಸ್ತ್ರ ಯೋಜನೆಗಳ ಹರಿಕಾರ ಎಂದು ಖ್ಯಾತಿ ಪಡೆದಿದ್ದರು. ಕೊನೆಗೆ ಪಾಕಿಸ್ತಾನದ ಅಣ್ವಸ ರಹಸ್ಯಗಳನ್ನು ವಿದೇಶಗಳಿಗೆ ಮಾರಿಕೊಂಡು ಅಪಾರ ಹಣ ಸಂಪಾದನೆ ಮಾಡಿ ಸಿಕ್ಕಿಬಿದ್ದಿದ್ದರು.
ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರಿಂದ ಒತ್ತಡ ಬಂದ ಮೇಲೆ 2004ರ ಜನವರಿ ಯಲ್ಲಿ ಪಾಕಿಸ್ತಾನದ ಮಿಲಿಟರಿ ಸರ್ವಾಧಿಕಾರಿ ಪರ್ವೇಜ್ ಮುಷರ್ರಫ್ ಅವರು ಎ.ಕ್ಯು.ಖಾನ್‌ರನ್ನು ಒಲ್ಲದ ಮನಸ್ಸಿನಿಂದ ವಜಾಗೊಳಿಸಿದ್ದರು. ಎ.ಕ್ಯು.ಖಾನ್ ಅಣ್ವಸ್ತ್ರ ರಹಸ್ಯ ಗಳನ್ನು ವಿದೇಶಕ್ಕೆ ಮಾರಿದ್ದರ ಬಗ್ಗೆ ಜಾರ್ಜ್ ಬುಷ್ ಸಾಕಷ್ಟು ಸಾಕ್ಷ್ಯಾಧಾರಗಳನ್ನೇ ಪಾಕಿಸ್ತಾನಕ್ಕೆ ಕಳುಹಿಸಿದ್ದರಿಂದ ಮುಷರ್ರಫ್ʼಗೆ ಬೇರೆ ದಾರಿ ಇರಲಿಲ್ಲ. 2021ರಲ್ಲಿ ಎ.ಕ್ಯು.ಖಾನ್ ಸತ್ತಾಗ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿತ್ತು.
ಈಗ ಮೆಕ್ಕಾ ಒಪ್ಪಂದದ ಅಡಿಯಲ್ಲೂ ರಹಸ್ಯವಾಗಿ ಮೌಲ್ಯವರ್ಧಿತ ಯುರೇನಿಯಂನ ವರ್ಗಾವಣೆ ನಡೆಯಲಿದೆಯೇ? ನಮಗೆ ಗೊತ್ತಿಲ್ಲ. ಅಂತಹ ವಿನಿಮಯಕ್ಕೆ ನಿರ್ಧಾರವಾಗಿದೆ ಎಂಬ ಬಗ್ಗೆ ನಮ್ಮಲ್ಲಿ ಸಾಕ್ಷ್ಯವಿಲ್ಲ. ಆದರೆ, ಇರಾನ್ ಬಳಿ ಅಣ್ವಸ್ತ್ರಗಳು ಇರುವುದರಿಂದ ತಮ್ಮಲ್ಲೂ ಅಣ್ವಸ್ತ್ರಗಳು ಇರಬೇಕು ಎಂದು ಸೌದಿ ಅರೇಬಿಯಾ ಬಯಸುತ್ತಿರುವುದು ರಾಷ್ಟ್ರೀಯ ರಹಸ್ಯವೇನೂ ಅಲ್ಲ. ಸೌದಿ ರಾಷ್ಟ್ರೀಯ ಅಣು ಇಂಧನ ಯೋಜನೆಯು ಶಾಂತಿಯುತ ಇಂಧನ ಅಭಿವೃದ್ಧಿಗೆ ಒತ್ತು ನೀಡುತ್ತದೆ ಎಂದು ಅಲ್ಲಿನ ಸರ್ಕಾರ ಹೇಳಿಕೊಳ್ಳುತ್ತದೆ. ಆದರೆ, ತೈಲದ ಮೇಲೆ ತೇಲುತ್ತಿರುವ ದೇಶಕ್ಕೆ ಬೇರೆ ಇಂಧನಗಳನ್ನು ಅಭಿವೃದ್ಧಿಪಡಿಸುವ ತುರ್ತೇನಿದೆ ಎಂಬುದು ಪ್ರಶ್ನೆ.
ರಕ್ಷಣಾ ಕ್ಷೇತ್ರದ ಹೊರತಾಗಿಯೂ ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನವನ್ನು ಬಾಧಿಸು ತ್ತಿರುವ ಸಾಕಷ್ಟು ಸಮಸ್ಯೆಗಳಿವೆ. ಶಾಂತಿ ಒಪ್ಪಂದಗಳು ಅಂದರೆ ನಿಷ್ಕ್ರಿಯವಾಗಿರುವ ದೀರ್ಘಾವಧಿ ಆಸ್ತಿಗಳಿದ್ದಂತೆ; ಸಮರ ಒಪ್ಪಂದಗಳು ಯಶಸ್ವಿಯಾಗಬೇಕು ಅಂದರೆ ಅದಕ್ಕೆ ಫೋಕಲ್ ಪಾಯಿಂಟ್ ಇರಬೇಕಾಗುತ್ತದೆ. ಅಮೆರಿಕದ ಅತ್ಯಂತ ಪ್ರಭಾವಿ ವಿದೇಶಾಂಗ ಸಚಿವರಾಗಿದ್ದ ಹೆನ್ರಿ ಕಿಸಿಂಜರ್ ಹಿಂದೊಮ್ಮೆ ಚರ್ಚಿಲ್‌ರ ಮಾತನ್ನೇ ಬೇರೆ ಪದಗಳಲ್ಲಿ ಹೇಳಿದ್ದರು.
‘ಅಮೆರಿಕದ ಶತ್ರುವಾಗಿರುವುದು ಅಪಾಯಕಾರಿ, ಆದರೆ ಅಮೆರಿಕದ ಸ್ನೇಹಿತನಾಗಿರುವುದು ಇನ್ನೂ ಅಪಾಯಕಾರಿ.’ ಸೌದಿ ಇತ್ಯಾದಿ ದೇಶಗಳಿಗೆ ಅಮೆರಿಕದ ರಕ್ಷಣೆಯಿದೆ ಎಂಬ ಭ್ರಮೆ ಇತ್ತೀಚೆಗೆ ಇರಾನ್ ಜೊತೆಗಿನ ಯುದ್ಧದ ವೇಳೆ ಆಗಸದಿಂದ ಸುರಿದ ಕ್ಷಿಪಣಿಗಳ ಬೆಂಕಿಯಲ್ಲಿ ಬೂದಿಯಾಗಿದೆ. ಆದರೆ, ಇದಕ್ಕೆ ಪರ್ಯಾಯವಾದ ಯಾವುದೇ ಪರಿಣಾಮಕಾರಿ ನಿರ್ಮಿತಿಯನ್ನು ಮರಳಿನ ಮೇಲೆ ಕಟ್ಟಲು ಸಾಧ್ಯವಿಲ್ಲ. ಚರ್ಚಿಲ್ ಹೇಳಿದ ಇನ್ನೊಂದು ಮಾತನ್ನು ನೆನಪಿಸಿಕೊಳ್ಳಲು ಇದು ಸಕಾಲ. ಕೊನೆಯ ಪಕ್ಷ ಅದು ಈಗಿನ ಪರಿಸ್ಥಿತಿಗೆ ಅರ್ಧದಷ್ಟಾದರೂ ಪ್ರಸ್ತುತವೆನ್ನಿಸುತ್ತದೆ. ‘ಯುದ್ಧದಲ್ಲಿ ಸತ್ಯವೆಂಬುದು ಎಷ್ಟು ಅಮೂಲ್ಯವೆಂದರೆ ಯಾವಾಗಲೂ ಅದು ಸುಳ್ಳುಗಳೆಂಬ ಬಾಡಿಗಾರ್ಡ್‌ಗಳ ರಕ್ಷಣೆಯಲ್ಲೇ ಇರಬೇಕಾಗುತ್ತದೆ.’
(ಮುಗಿಯಿತು)