ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ರಾಮಚರಿತ ಮಾನಸ: ಹನುಮಂತನಿಗೆ ಸುರಸಾ ಪರೀಕ್ಷೆ

ಕೊನೆಗೆ ಸುರಸೆಯು ಅಹಂಕಾರದಿಂದ ತನ್ನ ಬಾಯಿಯನ್ನು ನೂರು ಯೋಜನಗಳಷ್ಟು ಭೀಕರವಾಗಿ ಹರಡುತ್ತಾಳೆ. ಆ ವಿಶಾಲವಾದ ಬಾಯಿ ಸಾಗರವನ್ನೇ ನುಂಗುವಂತೆ ಕಾಣುತ್ತಿರುತ್ತದೆ. ಆಗ ಹನುಮಂತ ನು ತನ್ನ ಬಲಪ್ರದರ್ಶನದಿಂದ ಪ್ರಯೋಜನವಿಲ್ಲವೆಂದು ಅರಿತುಕೊಳ್ಳುತ್ತಾನೆ. ಆ ಕ್ಷಣದ ತನ್ನ ಬೃಹತ್ ರೂಪವನ್ನು ಸಂಕುಚಿತಗೊಳಿಸಿ, ಒಂದು ಸಣ್ಣ ಸೊಳ್ಳೆಯಷ್ಟು (ಅತಿ ಲಘುರೂಪ) ರೂಪವನ್ನು ಧರಿಸುತ್ತಾನೆ. ಸುರಸೆಯು ಕಣ್ಣು ಮಿಟುಕಿಸುವಷ್ಟರಲ್ಲಿ ಅವಳ ಅಗಾಧವಾದ ಬಾಯಿಯೊಳಗೆ ಪ್ರವೇಶಿಸಿ, ಹಾಗೆಯೇ ಹೊರ ಬಂದು ಆಕೆಯ ಮುಂದೆ ವಿನಯದಿಂದ ನಿಲ್ಲುತ್ತಾನೆ.

Roopa Gururaj Column: ರಾಮಚರಿತ ಮಾನಸ: ಹನುಮಂತನಿಗೆ ಸುರಸಾ ಪರೀಕ್ಷೆ

-

ಒಂದೊಳ್ಳೆ ಮಾತು

ನಮ್ಮ ಗುರಿಯತ್ತ ಸಾಗುವಾಗ ಕೇವಲ ಶಕ್ತಿಯಿದ್ದರೆ ಸಾಲದು, ಸಂದರ್ಭಕ್ಕೆ ತಕ್ಕಂತೆ ಬಳಸುವ ವಿವೇಚನೆ ಮತ್ತು ಬುದ್ಧಿವಂತಿಕೆಯೂ ಅತಿ ಮುಖ್ಯ. ‘ಸುಂದರಕಾಂಡ’ದ ಈ ಪ್ರಸಂಗವು, ಅಹಂಕಾರ ವನ್ನು ಸೋಲಿಸಲು ವಿನಯ ಮತ್ತು ಯುಕ್ತಿ ಹೇಗೆ ಸಹಕಾರಿಯಾಗುತ್ತವೆ ಎಂಬುದನ್ನು ನಮಗೆ ತಿಳಿಸಿಕೊಡುತ್ತದೆ.

ಮೂಲ ಶ್ಲೋಕ (ಚೌಪಾಯಿ):

ಜೋಜನ ಭರಿ ತೆಹಿಂ ಬದನು ಪಸಾರಾ | ಕಪಿ ತನು

ಕೀನ್ಹ ದುಗುನ ಬಿಸ್ತಾರಾ ||

ಸೋಲಹ ಜೋಜನ ಮುಖ ತೆಹಿಂ ಭಯವೂ |

ತುರತ ಪವನಸುತ ಬತ್ತಿಸ ಭಯವೂ ||

ಸತ ಯೋಜನ ಮುಖ ತೇಹಿಂ ತಬ ಕೀನ್ಹಾ | ಅತಿ

ಲಘು ರೂಪ ಧರಹಿಂ ಹನುಮಾನಾ ||

ಹನುಮಂತನು ಶ್ರೀರಾಮನ ಕಾರ್ಯಕ್ಕಾಗಿ ಸಾಗರವನ್ನು ದಾಟಲು ಆಕಾಶಮಾರ್ಗದಲ್ಲಿ ಹಾರುತ್ತಿದ್ದಾಗ, ಅವನ ಬಲ ಮತ್ತು ಧೈರ್ಯವನ್ನು ಪರೀಕ್ಷಿಸಲು ದೇವತೆಗಳು ನಿರ್ಧರಿಸುತ್ತಾರೆ. ಈ ಪರೀಕ್ಷೆಗಾಗಿ ಅವರು ನಾಗಗಳ ಮಾತೆಯಾದ ಸುರಸಾ ಎಂಬ ದೇವತೆಯನ್ನು ಕಳುಹಿಸುತ್ತಾರೆ.

ಹನುಮಂತನು ವೇಗವಾಗಿ ಸಾಗುತ್ತಿರುವಾಗ, ಸುರಸೆಯು ವಿರಾಟ ರೂಪವನ್ನು ಧರಿಸಿ ದಾರಿಯನ್ನು ಅಡ್ಡಗಟ್ಟು ತ್ತಾಳೆ. ಅವಳು ಅಬ್ಬರಿಸುತ್ತಾ, “ಎಲೈ ವಾನರನೇ, ಇಂದು ದೇವತೆಗಳು ನಿನ್ನನ್ನು ನನಗೆ ಆಹಾರವಾಗಿ ನೀಡಿದ್ದಾರೆ. ನೀನು ನನ್ನ ಬಾಯಿಯೊಳಗೆ ಪ್ರವೇಶಿಸಲೇಬೇಕು" ಎಂದು ಬೆದರಿಸುತ್ತಾಳೆ.

ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ಹನುಮಂತ ಮತ್ತು ಮೈನಾಕ ಪರ್ವತ

ಹನುಮಂತನು ಮೊದಲು ಅತ್ಯಂತ ವಿನಯದಿಂದ ಕೈಮುಗಿದು, “ತಾಯಿ, ನಾನು ಪ್ರಭು ಶ್ರೀರಾಮನ ಕಾರ್ಯದ ನಿಮಿತ್ತ ಸೀತಾದೇವಿಯನ್ನು ಹುಡುಕಲು ಹೋಗುತ್ತಿದ್ದೇನೆ. ಆ ಕಾರ್ಯ ಮುಗಿಸಿ ಹಿಂದಿರುಗಿದ ಮೇಲೆ ನಾನೇ ಬಂದು ನಿನ್ನ ಆಹಾರವಾಗುತ್ತೇನೆ,

ಅಲ್ಲಿಯವರೆಗೆ ದಯವಿಟ್ಟು ನನಗೆ ದಾರಿ ಬಿಡು" ಎಂದು ಪ್ರಾರ್ಥಿಸುತ್ತಾನೆ. ಆದರೆ ಸುರಸೆಯು ಹಠ ಹಿಡಿಯುತ್ತಾಳೆ, ತನ್ನ ಬಾಯಿಯನ್ನು ತೆರೆದು ನುಂಗಲು ಮುಂದಾಗುತ್ತಾಳೆ.

ಇಲ್ಲಿಂದ ಹನುಮಂತ ಮತ್ತು ಸುರಸೆಯ ನಡುವೆ ಒಂದು ವಿಚಿತ್ರವಾದ ಪೈಪೋಟಿ ಆರಂಭವಾಗು ತ್ತದೆ. ಸುರಸೆಯು ತನ್ನ ಬಾಯಿಯನ್ನು ಒಂದು ಯೋಜನದಷ್ಟು (ಸುಮಾರು ಎಂಟು ಮೈಲಿ) ಅಗಲವಾಗಿ ತೆರೆದಾಗ, ಹನುಮಂತನು ತನ್ನ ಶರೀರವನ್ನು ಎರಡು ಪಟ್ಟು ಅಂದರೆ ಎರಡು ಯೋಜನಗಳಷ್ಟು ಬೆಳೆಸುತ್ತಾನೆ.

ಅವಳು ತನ್ನ ಬಾಯಿಯನ್ನು ಹದಿನಾರು ಯೋಜನಗಳಷ್ಟು ವಿಸ್ತರಿಸಿದಾಗ, ಹನುಮಂತನು ತಕ್ಷಣವೇ ಮೂವತ್ತೆರಡು ಯೋಜನದಷ್ಟು ಬೃಹದಾಕಾರವಾಗಿ ಬೆಳೆಯುತ್ತಾನೆ. ಸುರಸೆಯು ತನ್ನ ಗಾತ್ರವನ್ನು ಹೆಚ್ಚಿಸಿದಂತೆ, ಹನುಮಂತನು ಅವಳಿಗಿಂತ ದುಪ್ಪಟ್ಟು ಗಾತ್ರವನ್ನು ತಳೆದು ನಿಲ್ಲುತ್ತಾನೆ.

ಕೊನೆಗೆ ಸುರಸೆಯು ಅಹಂಕಾರದಿಂದ ತನ್ನ ಬಾಯಿಯನ್ನು ನೂರು ಯೋಜನೆಗಳಷ್ಟು ಭೀಕರ ವಾಗಿ ಹರಡುತ್ತಾಳೆ. ಆ ವಿಶಾಲವಾದ ಬಾಯಿ ಸಾಗರವನ್ನೇ ನುಂಗುವಂತೆ ಕಾಣುತ್ತಿರುತ್ತದೆ. ಆಗ ಹನುಮಂತನು ತನ್ನ ಬಲಪ್ರದರ್ಶನದಿಂದ ಪ್ರಯೋಜನವಿಲ್ಲವೆಂದು ಅರಿತುಕೊಳ್ಳುತ್ತಾನೆ. ಆ ಕ್ಷಣದ ತನ್ನ ಬೃಹತ್ ರೂಪವನ್ನು ಸಂಕುಚಿತಗೊಳಿಸಿ, ಒಂದು ಸಣ್ಣ ಸೊಳ್ಳೆಯಷ್ಟು (ಅತಿ ಲಘುರೂಪ) ರೂಪವನ್ನು ಧರಿಸುತ್ತಾನೆ. ಸುರಸೆಯು ಕಣ್ಣು ಮಿಟುಕಿಸುವಷ್ಟರಲ್ಲಿ ಅವಳ ಅಗಾಧವಾದ ಬಾಯಿಯೊಳಗೆ ಪ್ರವೇಶಿಸಿ, ಹಾಗೆಯೇ ಹೊರ ಬಂದು ಆಕೆಯ ಮುಂದೆ ವಿನಯ ದಿಂದ ನಿಲ್ಲುತ್ತಾನೆ.

“ತಾಯಿ, ನಿನ್ನ ಷರತ್ತಿನಂತೆ ನಾನು ನಿನ್ನ ಬಾಯಿಯೊಳಗೆ ಹೋಗಿ ಬಂದಿದ್ದೇನೆ. ನಿನ್ನ ಆಹಾರ ವಾಗುವ ಶಾಪವೂ ವಿಮೋಚನೆಯಾಯಿತು, ನನ್ನ ಕಾರ್ಯವೂ ಬಾಕಿಯಿದೆ" ಎಂದು ನಗುತ್ತಾ ಹೇಳುತ್ತಾನೆ. ಹನುಮಂತನ ಈ ಅದ್ಭುತ ಸಮಯಪ್ರಜ್ಞೆ ಮತ್ತು ಯುಕ್ತಿಯನ್ನು ಕಂಡು ಸುರಸೆಯು ಬೆರಗಾಗುತ್ತಾಳೆ.

ಅವಳು ತನ್ನ ನಿಜರೂಪಕ್ಕೆ ಬಂದು, “ಹನುಮಂತಾ, ದೇವತೆಗಳು ನಿನ್ನ ಬುದ್ಧಿಶಕ್ತಿಯನ್ನು ಪರೀಕ್ಷಿಸಲು ನನ್ನನ್ನು ಕಳುಹಿಸಿದ್ದರು. ಬಲವೊಂದೇ ಸಾಲದು, ಬುದ್ಧಿಯೂ ಬೇಕು ಎಂಬುದನ್ನು ನೀನು ಸಾಬೀತುಪಡಿಸಿದೆ. ನಿನ್ನ ಕಾರ್ಯ ಯಶಸ್ವಿಯಾಗಲಿ" ಎಂದು ಮನಸಾರೆ ಹರಸಿ ದಾರಿ ಬಿಡುತ್ತಾಳೆ.

ಬದುಕಿನಲ್ಲಿ ಅನೇಕ ಬಾರಿ ನಮಗೆ ವಿಪತ್ತುಗಳು ಎದುರಾದಾಗ ಪ್ರತಿ ಬಾರಿಯೂ ಶಕ್ತಿಯಿಂದ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿರುವುದಿಲ್ಲ. ಅನೇಕ ಬಾರಿ ಶಕ್ತಿಗಿಂತ ಯುಕ್ತಿ ಬೇಕಾಗು ತ್ತದೆ. ಹೀಗಾಗಿಯೇ ಸಾಮಾನ್ಯರು ಕೂಡ ಅಸಾಮಾನ್ಯರನ್ನು ಸೋಲಿಸಿ ಮುನ್ನುಗ್ಗುತ್ತಾರೆ. ಇಂಥ ಸಮಯಪ್ರಜ್ಞೆ ನಮಗಿದ್ದಾಗ ಬದುಕಲ್ಲಿ ಎಂಥ ಪರಿಸ್ಥಿತಿ ಬಂದರೂ ನಿಭಾಯಿಸುವ ಆತ್ಮಸ್ಥೈರ್ಯ ನಮಗೆ ಸಿಗುತ್ತದೆ...