Roopa Gururaj Column: ಮನುಷ್ಯರಾಗಿ ನಾವು ಪಾಲಿಸಬೇಕಾದ ಧರ್ಮ
ಪ್ರಧಾನಮಂತ್ರಿಯಾಗಿ ಪಾಂಡು, ಧೃತರಾಷ್ಟ್ರ ಮತ್ತು ಧರ್ಮರಾಜನಿಗೆ ನೆರವು ನೀಡಿದ್ದ ಪ್ರಮುಖ ವ್ಯಕ್ತಿ ವಿದುರ. ವಿದುರನ ನೀತಿ ಇಂದಿಗೂ ಪ್ರಸಿದ್ಧಿ. ವಿದುರನ ನೀತಿಗಳು ಜೀವನ ಮೌಲ್ಯವನ್ನು ಕಟ್ಟಿಕೊಡು ತ್ತದೆ. ನಮ್ಮೆಲ್ಲರ ಬದುಕಿಗೆ ದಾರಿ ದೀಪದಂತಿದೆ. ವಿದುರನ ಮಾತುಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡರೆ ಜೀವನ ಇನ್ನಷ್ಟು ಅರ್ಥಪೂರ್ಣತೆಯಿಂದ ಕೂಡಿರುತ್ತದೆ
Source : Vishwavani Daily News Paper
ಒಂದೊಳ್ಳೆ ಮಾತು
ರೂಪಾ ಗುರುರಾಜ್
ವಿದುರ ಮಹಾಭಾರತದಲ್ಲಿ ಬರುವ ಅದ್ಭುತ ಜ್ಞಾನಿ. ವಿದುರನ ಮಾತೆಂದರೆ ಅದು ಪರಮ ಸತ್ಯ. ಧರ್ಮ, ನ್ಯಾಯ, ಸತ್ಯದ ಹಾದಿಯಲ್ಲಿ ಸಾಗುತ್ತಿದ್ದ ವಿದುರನ ಮಾತಿಗೆ ಧೃತರಾಷ್ಟ, ಪಾಂಡು, ಭೀಷ್ಮ, ದ್ರೋಣ, ಪಾಂಡವರು ಸೇರಿದಂತೆ ಎಲ್ಲರೂ ಸಮ್ಮತಿಸುತ್ತಿದ್ದರು. ರಾಜ್ಯ, ರಾಜನ ಹಿತವನ್ನು ಗಮನದಲ್ಲಿಟ್ಟುಕೊಂಡೇ ವಿದುರ ತನ್ನ ನಿರ್ಧಾರಗಳನ್ನು, ಸಲಹೆಗಳನ್ನು ನೀಡುತ್ತಿದ್ದದ್ದು. ಹೀಗಾಗಿ, ವಿದುರನ ಮಾತಿಗೆ ಅಷ್ಟು ತೂಕವಿತ್ತು.
ಪ್ರಧಾನಮಂತ್ರಿಯಾಗಿ ಪಾಂಡು, ಧೃತರಾಷ್ಟ್ರ ಮತ್ತು ಧರ್ಮರಾಜನಿಗೆ ನೆರವು ನೀಡಿದ್ದ ಪ್ರಮುಖ ವ್ಯಕ್ತಿ ವಿದುರ. ವಿದುರನ ನೀತಿ ಇಂದಿಗೂ ಪ್ರಸಿದ್ಧಿ. ವಿದುರನ ನೀತಿಗಳು ಜೀವನ ಮೌಲ್ಯವನ್ನು ಕಟ್ಟಿಕೊಡುತ್ತದೆ. ನಮ್ಮೆಲ್ಲರ ಬದುಕಿಗೆ ದಾರಿ ದೀಪದಂತಿದೆ. ವಿದುರನ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಇನ್ನಷ್ಟು ಅರ್ಥಪೂರ್ಣತೆಯಿಂದ ಕೂಡಿರುತ್ತದೆ.
ಇಂತಹ ಮಹಾನ್ ಜ್ಞಾನಿ, ಸತ್ಯಸಂಧ, ನ್ಯಾಯನೀತಿಗೆ ಹೆಸರಾದ ವಿದುರ ಕೆಲವು ಸೇವೆಗಳ ಬಗ್ಗೆ ಯೂ ತನ್ನ ನೀತಿಯಲ್ಲಿ ಹೇಳಿದ್ದಾನೆ. ಜೀವನದಲ್ಲಿ ಪ್ರಗತಿ, ಗೌರವ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಈ ಐವರ ಸೇವೆಯನ್ನು ಅತ್ಯಂತ ಶ್ರದ್ಧೆ ಮತ್ತು ಸಮರ್ಪಣಾ ಭಾವದಿಂದ ಮಾಡಬೇಕು ಎನ್ನುವುದು ವಿದುರನ ಮಾತು. ಈ ಎಲ್ಲ ಸೇವೆಗಳಿಂದ ನಮ್ಮ ಜೀವನವು ಧನ್ಯವಾಗುತ್ತದೆ ಮತ್ತು ಸುತ್ತಲೂ ಗೌರವ ಪ್ರಾಪ್ತಿಯಾಗುತ್ತದೆ ಎನ್ನುವುದು ಮಹಾತ್ಮ ವಿದುರನ ಸಂದೇಶ.
ತಾಯಿಯ ಸೇವೆ:ತಾಯಿ ನಮ್ಮ ಜನ್ಮಕ್ಕೆ ಕಾರಣರಾದ, ನಮಗೆ ಉಸಿರು ನೀಡಿದವರು. ತಾಯಿಗೆ ದೇವರ ಸ್ಥಾನ. ತಾಯಿಯ ಆಶೀರ್ವಾದ ಇಲ್ಲದಿದ್ದರೆ ಯಾವ ಕಾರ್ಯವೂ ಕೈಗೂಡುವುದೇ ಇಲ್ಲ. ಹೀಗಾಗಿ, ತಾಯಿಯ ಸೇವೆಯನ್ನು ನಿರ್ಮಲು ಮನಸ್ಸಿನಿಂದ ಮಾಡಬೇಕು. ಅವರ ಮನಸ್ಸಿಗೆ ನೋ ವಾಗದಂತೆ ನಡೆದುಕೊಳ್ಳಬೇಕು ಎಂಬುದು ವಿದುರನ ಮಾತು.
ತಂದೆಯ ಸೇವೆ: ತಾಯಿಯಂತೆಯೇ ತಂದೆಗೂ ದೇವರ ಸ್ಥಾನವಿದೆ. ತಾಯಿ ತಂದೆ ಇಬ್ಬರೂ ಪ್ರತಿಯೊಬ್ಬರಿಗೂ ಎರಡು ಕಣ್ಣುಗಳಿದ್ದಂತೆ. ಇವರಿಬ್ಬರೂ ಪ್ರತ್ಯಕ್ಷ ದೇವರು. ಮಕ್ಕಳ ಏಳಿಗೆಗಾಗಿ ತಮ್ಮ ಜೀವನವನ್ನೇ ಇವರು ಮುಡಿಪಾಗಿಟ್ಟಿರುತ್ತಾರೆ. ಅಂತೆಯೇ, ತಂದೆ ತನ್ನ ಕುಟುಂಬಕ್ಕಾಗಿ ಸಾಕಷ್ಟು ಕಷ್ಟಪಡುತ್ತಾರೆ. ಹೀಗಾಗಿ, ತಂದೆಯ ಆಶೀರ್ವಾದವೂ ಎಲ್ಲರಿಗೂ ಶ್ರೀರಕ್ಷೆ. ಇಂತಹ ದೇವರ ಸ್ಥಾನದಲ್ಲಿರುವ ತಂದೆಯ ಸೇವೆ ಮಾಡಿದರೆ ಸಾಕಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ.
ಗುರುಸೇವೆ:ತಾಯಿ ತಂದೆಯಂತೆಯೇ ಪರಮ ಪವಿತ್ರ ಸ್ಥಾನದಲ್ಲಿರುವ ಇನ್ನೊಬ್ಬರು ಎಂದರೆ ಗುರು. ಪ್ರತಿಯೊಬ್ಬರ ಬಾಳಿಗೂ ದಾರಿ ತೋರಿಸುವ ಗುರುಬೇಕೇ ಬೇಕು. ಸದಾ ಗುರುಗಳ ಸೇವೆ ಮಾಡಿ ಅಶೀ ರ್ವಾದ ಪಡೆಯಬೇಕು. ಗುರುಗಳ ಮಾರ್ಗ ದರ್ಶನವಿಲ್ಲದೇ ಇದ್ದರೆ ಜೀವನದಲ್ಲಿ ಯಶಸ್ಸು ಸಿಗದು.
ಆತ್ಮದ ಸೇವೆ: ಅಂದರೆ, ನಮ್ಮ ಆತ್ಮವನ್ನು ನಾವು ಯಾವಾಗಲೂ ಶುದ್ಧವಾಗಿಟ್ಟುಕೊಳ್ಳಬೇಕು. ಕೆಟ್ಟ ಯೋಚನೆ ಮನಸ್ಸಿನಲ್ಲಿ ಸುಳಿಯದಂತೆ ನೋಡಿಕೊಳ್ಳಬೇಕು. ಶುದ್ಧ ಮನಸ್ಸಿನಿಂದ ಎಲ್ಲ ವನ್ನೂ ಸ್ವೀಕರಿಸಬೇಕು. ಅಂತರಂಗದ ಶುದ್ಧಿ ಪ್ರತಿಯೊಬ್ಬರಿಗೂ ಬಹಳ ಮುಖ್ಯ. ಅಂತೆಯೇ, ದೇಹದ ಆರೋಗ್ಯವನ್ನೂ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದು ವಿದುರನ ಮಾತು. ಈ ಸೇವೆ ಕೂಡಾ ಮನುಷ್ಯನ ಯಶಸ್ಸಿಗೆ ದಾರಿ.
ಅಗ್ನಿಯ ಸೇವೆ: ಪಂಚಭೂತಗಳೂ ಪ್ರತಿಯೊಬ್ಬರಿಗೂ ಮುಖ್ಯ. ಅಂತೆಯೇ, ಅಗ್ನಿಯ ಸೇವೆ ಕೂಡಾ ಜೀವನದಲ್ಲಿ ಪ್ರಮುಖ ಭಾಗ ಎನ್ನುತ್ತಾನೆ ವಿದುರ. ಅಗ್ನಿ ಇಲ್ಲದೇ ಯಾಗದ ಫಲವೇ ಸಿಗದು. ನಮ್ಮ ಜೀವನದಲ್ಲಿ ಅಗ್ನಿಯ ಪಾತ್ರ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೇಲೆ ಹೇಳಿದ ವಿಚಾರ ಗಳು ನಮಗೆ ಗೊತ್ತಿರುವುದೇ ಆದರೂ, ಕೆಲವೊಮ್ಮೆ ಮತ್ತೆ ಮತ್ತೆ ಅದನ್ನು ಓದಿದಾಗ, ಯಾರಾದರೂ ಹೇಳಿದಾಗ ಮನಸ್ಸು ಅದನ್ನು ಗಟ್ಟಿಯಾಗಿ ಸ್ವೀಕರಿಸುತ್ತದೆ. ತಂದೆ ತಾಯಿ ಗುರುಗಳಿಗೆ ನಾವು ಮಾಡುವ ಸೇವೆ ಕೊಡುವ ಗೌರವ ಸದಾ ನಮಗೆ ಆಶೀರ್ವಾದವಾಗಿ ನಮ್ಮನ್ನು ಕಾಯುತ್ತದೆ. ಆತ್ಮ ಶುದ್ಧಿ, ಒಳ್ಳೆಯ ಅಂತಂಕರಣ ಮನುಷ್ಯ ರಾಗಿ ಬದುಕಲು ನಮಗಿರಬೇಕಾದ ಮೊದಲ ಅರ್ಹತೆ . ಇದೆಲ್ಲದರ ಜೊತೆ ಪ್ರಕೃತಿಗೂ ಕೂಡ ನಾವು ಗೌರವ ಸಲ್ಲಿಸಿದಾಗ ಪ್ರಕೃತಿ ನಮ್ಮನ್ನು ಕಾಯುತ್ತದೆ.
ಇದನ್ನೂ ಓದಿ: Roopa Gururaj Column: ಚಮತ್ಕಾರ ಮತ್ತು ಆಧ್ಯಾತ್ಮಿಕತೆ