Shrikanth Chaukimath Column: ಜಮಾದಾರ ಅವರ ಅವಮಾನವೇ ವಾದವಲ್ಲ; ವಿಮರ್ಶೆಗೆ ಮಿತಿ ಇದೆ
ಜಾಮದಾರ ಅವರ ನಿಲುವಿನಲ್ಲಿ ನನಗೆ ಕಾಣಿಸಿಕೊಂಡಿರುವ ಗಂಭೀರ ಪ್ರಶ್ನೆ ಏನೆಂದರೆ, ಅವರು ಇತರ ರನ್ನು ಸ್ವೇಚ್ಛೆಯಿಂದ ಟೀಕಿಸುವ ಸ್ವಾತಂತ್ರ್ಯ ತಮಗಿದೆ ಎಂದು ನಂಬುತ್ತಾರೆ, ಅಲ್ಲದೆ ಅವರನ್ನು ಪ್ರಶ್ನಿಸುವ ಅಥವಾ ವಿಮರ್ಶಿಸುವ ಹಕ್ಕು ಬೇರೆ ಯಾರಿಗೂ ಇಲ್ಲವೆಂಬ ಜಾಯಮಾನವನ್ನು ಪ್ರದರ್ಶಿಸು ತ್ತಾರೆ.
-
ಹಿತೋಪದೇಶ
ಶ್ರೀಕಂಠ ಚೌಕೀಮಠ
ವಿವಾದ ವಿಚಾರಗಳ ಮೇಲೆ ಇರಬಹುದು, ಪರಸ್ಪರ ನಿಂದನೆಗಳ ಮೇಲಲ್ಲ; ಅದೇ ಧಾರ್ಮಿಕ ಸಂವೇದನೆಯ ಗಡಿ. ವಿವಾದಗಳು ವಿಚಾರಗಳ ಮೇಲೆ ನಡೆಯಬಹುದು, ನಡೆಯಬೇಕು. ಆದರೆ ಅಖಂಡ ವೀರಶೈವ ಪರಂಪರೆಯ ಮೇಲೆ ಹಾಗೂ ವೇದಾಂತಿಗಳ ಮೇಲೆ ನಿರಂತರ ಅವಹೇಳನ ಮಾಡುವುದರಿಂದ ಸಾರ್ವಜನಿಕ ಪ್ರತಿಕ್ರಿಯೆಗಳು-ಪ್ರತಿಭಟನೆ ಗಳು ಸಹಜ. ತಲೆ ಗಟ್ಟಿ ಇದೆ ಎಂದು ಭ್ರಮಿಸಿ ಕಂಡ ಕಂಡ ಬಂಡೆಗಳಿಗೆ ಹಾಯಬಾರದು, ಹಾರಿ ಬರಬಾರದು.
ಕಳೆದ ಹಲವಾರು ದಿನಗಳಿಂದ ‘ವಿಶ್ವವಾಣಿ’ ಪತ್ರಿಕೆಯ ಅಂಕಣಗಳಲ್ಲಿ ರವಿ ಹಂಜ್ ಮತ್ತು ಡಾ. ಎಸ್.ಎಂ.ಜಾಮದಾರ ಅವರ ನಡುವೆ ನಡೆಯುತ್ತಿರುವ ವಾದವನ್ನು ಸಮಾಜ ಗಮನಿಸುತ್ತಿದೆ. ವಾದವಿವಾದಗಳು ಪ್ರಜಾಸತ್ತಾತ್ಮಕ ಸಮಾಜದ ಆರೋಗ್ಯಕರ ಭಾಗ. ಆದರೆ, ವಿಮರ್ಶೆಯ ಗಡಿ ದಾಟಿ, ಸಮುದಾಯದ ಪೌರಾಣಿಕ ಚರಿತ್ರೆಗೂ, ತ್ಯಾಗಮೂರ್ತಿಗಳಿಗೂ, ಸಂಸ್ಥೆಗಳಿಗೂ ಅವಹೇಳನ ಬೇರುಬಿಟ್ಟಾಗ, ಮೌನವೇ ತಪ್ಪಾಗುತ್ತದೆ.
ಹಾಗಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥೆಯ ಓರ್ವ ಸದಸ್ಯನಾಗಿ ದೆಹಲಿ ರಾಜ್ಯ ಘಟಕದ ಅಧ್ಯಕ್ಷನಾಗಿ ನನ್ನ ಅಭಿಪ್ರಾಯವನ್ನು ಮಂಡಿಸುತ್ತಿದ್ದೇನೆ. ಡಾ.ಎಸ್.ಎಂ.ಜಾಮದಾರ ಅವರ ದೀರ್ಘಕಾಲದ ವೃತ್ತಿ ಜೀವನದ ಪರಿಪೂರ್ಣತೆ ಮತ್ತು ನೈತಿಕತೆ ಬಗ್ಗೆ ನನಗೆ ಗೌರವವಿದೆ.
ಆದರೆ, ಅವರ ನಿವೃತ್ತಿ ನಂತರದ ಸಾರ್ವಜನಿಕ ಜೀವನದಲ್ಲಿ ಕಂಡುಬಂದಿರುವ, ಸಮುದಾಯ ವೊಂದನ್ನು ಗುರಿಯಾಗಿಸಿಕೊಂಡ ಅವಹೇಳನದ ಅಭಿಯಾನವನ್ನು ಅವರು ಯೋಜನಾಬದ್ಧವಾಗಿ ಮಾಡುತ್ತಿರುವುದನ್ನು ನೋಡಿದಾಗ ಬೇಸರ, ಕಳವಳ ಮತ್ತು ಆಕ್ರೋಶ ಮೂಡಿಸುವಂಥzಗಿದೆ. ಸಾರ್ವಜನಿಕ ಸಭೆಗಳಲ್ಲಿ, ಸಾಮಾಜಿಕ ವೇದಿಕೆಗಳಲ್ಲಿ, ಯುಟ್ಯೂಬ್ ಚಾನೆಲ್‌ಗಳ ಕಾರ್ಯಕ್ರಮ ಗಳಲ್ಲಿ ಅವರ ವಿಚಿತ್ರ ಆಂಗಿಕ ಭಂಗಿಗಳು, ವ್ಯಂಗ್ಯ ಧ್ವನಿಗಳು ಮತ್ತು ಅಸಭ್ಯ ಉದ್ದೇಶಾಕ್ರಮಣಗಳು ವಿಮರ್ಶಾತ್ಮಕ ಎನಿಸವು; ಅವೆಲ್ಲವೂ ಅವರಿಂದ ಉದ್ದೇಶಪೂರ್ವಕವಾಗಿ ಸಮುದಾಯಕ್ಕೆ ನೋವುಂಟು ಮಾಡುವ ಪ್ರಯತ್ನವಾಗಿರುವುದು ದುರಂತ.
ಇದನ್ನೂ ಓದಿ: L P Kulkarni Column: ಸೆಲ್ಸಿಯಸ್ ಎಂಬ ಹೆಸರು ಹೇಗೆ ಬಂತು ?
ಜಾಮದಾರ ಅವರ ನಿಲುವಿನಲ್ಲಿ ನನಗೆ ಕಾಣಿಸಿಕೊಂಡಿರುವ ಗಂಭೀರ ಪ್ರಶ್ನೆ ಏನೆಂದರೆ, ಅವರು ಇತರರನ್ನು ಸ್ವೇಚ್ಛೆಯಿಂದ ಟೀಕಿಸುವ ಸ್ವಾತಂತ್ರ್ಯ ತಮಗಿದೆ ಎಂದು ನಂಬುತ್ತಾರೆ, ಅಲ್ಲದೆ ಅವರನ್ನು ಪ್ರಶ್ನಿಸುವ ಅಥವಾ ವಿಮರ್ಶಿಸುವ ಹಕ್ಕು ಬೇರೆ ಯಾರಿಗೂ ಇಲ್ಲವೆಂಬ ಜಾಯಮಾನ ವನ್ನು ಪ್ರದರ್ಶಿಸುತ್ತಾರೆ.
ಇದು ಚಿಂತನಶೀಲತೆಯಲ್ಲ, ಚಿಂತೆಯ ವಿಷಯ. ಡಾ.ಜಾಮದಾರ ಅವರು ಬರೆದು, ಪ್ರಕಟಿಸಿ ಮಾರುತ್ತಿರುವ ‘ಅಖಿಲ ಭಾರತ ವೀರಶೈವ ಮಹಾಸಭೆ ಸತ್ಯವನ್ನು ಅರ್ಥ ಮಾಡಿಕೊಳ್ಳುವುದೇ’ ಎಂಬ ಹೆಸರಿನಲ್ಲಿನ ಪುಸ್ತಕದ ಶೀರ್ಷಿಕೆ ಮಾತ್ರ ಸತ್ಯಪ್ರಯತ್ನದ ಸುಳಿವು ನೀಡುತ್ತದೆ; ಆದರೆ ಒಳಗಿನ ವಿಷಯಗಳು ಅತಾರ್ಕಿಕತೆ, ಅಸತ್ಯ ಮತ್ತು ಅವಹೇಳನದ ಪ್ರಚಾರದ ಬರವಣಿಗೆಗಳ ಸಂಗ್ರಹ ವಾಗಿದೆ.
20ನೇ ಶತಮಾನದ ಆರಂಭದ ಕಷ್ಟಕರ ಪರಿಸ್ಥಿತಿಯಲ್ಲಿ, ಸಮಾಜದ ಶಿಕ್ಷಣ, ಧಾರ್ಮಿಕ, ಸಾಮಾಜಿಕ ಸಮಾನತೆ ಕಾಪಾಡಲು ತ್ಯಾಗ ಮಾಡಿದ ವೀರಶೈವ-ಲಿಂಗಾಯತ ನಾಯಕರ ಬಗ್ಗೆ ಅವರು ಬರೆದಿ ರುವ ಪದಗಳನ್ನು ನೋಡಿದರೆ, ಅದು ಇತಿಹಾಸದ ಕೃತಜ್ಞತೆಯ ಕೊರತೆ ಮಾತ್ರವಲ್ಲ, ಕೀಳು ಮನಸ್ಸನ್ನು ಅನಾವರಣಗೊಳಿಸುತ್ತದೆ. ಅವರು ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ, ‘ನಿರಕ್ಷರ ಕುಕ್ಷಿಗಳು’, ‘ಅಜ್ಞಾನಿಗಳು’, ‘ಬ್ರಾಹ್ಮಣ್ಯದ ಹುಚ್ಚು ಹಿಡಿದವರು’, ‘ಸರಕಾರಿ ಕಾರಕೂನಿನ ಮಟ್ಟ ದವರು’, ‘ಓದಿಲ್ಲದವರು’ ಎಂದೆಲ್ಲ ಡಾ.ಜಾಮದಾರರಿಂದ ಅವಹೇಳನಕ್ಕೆ ಒಳಗಾದವರು ಪೂಜ್ಯ ಹಾನಗಲ್ಲ ಕುಮಾರ ಮಹಾಸ್ವಾಮಿಗಳು, ತ್ಯಾಗವೀರ ಶಿರಸಂಗಿ ಲಿಂಗರಾಜರು, ದಾನಶೂರ ವಾರದ ಮಲ್ಲಪ್ಪ, ರಾವ್ ಬಹೂದ್ದೂರ ಅರಟಾಳ ರುದ್ರಗೌಡರು, ಹಾಲಭಾವಿ ವೀರಭದ್ರಪ್ಪ, ಪುಟ್ಟಣ್ಣ ಶೆಟ್ಟರು, ಶಾಂತವೀರಪ್ಪ ಮೆಣಸಿನಕಾಯಿ ಅವರು. ಇವರೆಲ್ಲರೂ ವೀರಶೈವ-ಲಿಂಗಾಯತ ಸಮಾಜದ ಸ್ವಾಭಿಮಾನ ಎತ್ತಿ ಹಿಡಿದ ಮಹಾಪುರುಷರು.
ಆ ಪುಸ್ತಕಕ್ಕೆ ಸ್ಪಷ್ಟೀಕರಣವಾಗಿ ನಾನು ‘ಬೆಂಕಿ ಹಚ್ಚುವುದು ಸುಲಭ, ಆರಿಸುವುದು ಕಷ್ಟ’ ಎಂಬ ಶೀರ್ಷಿಕೆಯ ಪುಸ್ತಕವನ್ನು ಬರೆದೆ. ಆದರೆ ಆ ಪುಸ್ತಕದ ಲೋಕಾರ್ಪಣೆಯನ್ನೇ ತಡೆಯುವಂತೆ ಕೆಲವು ಶಕ್ತಿಗಳು ಮೈದಾನಕ್ಕಿಳಿದವು. ‘ಬುಕ್ ಬೃಹ್ಮ’ ಎಂಬ ವ್ಯಾವಹಾರಿಕ ಸಂಸ್ಥೆಯಿಂದ ಲೋಕಾ ರ್ಪಣೆ ವ್ಯವಸ್ಥೆಗೆ ಒಪ್ಪಿಗೆಯಾಗಿ ಇನ್ನೇನು ಮುಂಗಡ ಹಣವನ್ನು ಕೊಡಬೇಕು ಅನ್ನುವಷ್ಟ ರಲ್ಲಿ ತಡೆಯುಂಟಾಯಿತು!
ವ್ಯಾವಹಾರಿಕ ಸಂಸ್ಥೆಯಾಗಿ ಅದೆಷ್ಟೋ ಸಾಹಿತ್ಯಿಕ ಕೃತಿಗಳನ್ನು ತುಂಬಿ ತುಂಬಿ ಹಾಕುವ ಮತ್ತು ಹಣಕ್ಕಾಗಿ ಬಿಡುಗಡೆ ಸಮಾರಂಭ ಏರ್ಪಡಿಸುವ ಈವೆಂಟ್ ಮ್ಯಾನೇಜ್ಮೆಂಟ್ ಅಂಥ ಸಂಸ್ಥೆ ನನ್ನ ಪುಸ್ತಕದ ಬಿಡುಗಡೆಯಿಂದ ಬಿಡುಗಡೆ ಹೊಂದಿದ ಕಾರಣವೇನು ಎನ್ನುವುದನ್ನು ಜಾಮದಾರ ಮತ್ತು ಬುಕ್ ಬೃಹ್ಮದ ಶ್ರೀ ದೇವು ಪತ್ತಾರ ಅವರ ಆತ್ಮವಿಮರ್ಶೆಗೆ ಬಿಟ್ಟುಬಿಡುತ್ತೇನೆ.
ಕಳೆದ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಸವ ಸಂಸ್ಕೃತಿ ಅಭಿಯಾನ ಜರುಗಿತು. ಅದು ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳು ಭಾಗವಹಿಸಿದ ಬೃಹತ್ ಸಮ್ಮೇಳನ ವಾಗಿತ್ತು. ಡಾ.ಎಸ್.ಎಂ.ಜಾಮದಾರ ಅವರು ಬಸವ ಸಂಸ್ಕೃತಿ ಅಭಿಯಾನಕ್ಕೆ ತನು, ಮನ, ಧನ ದಿಂದ ಸೇವೆ ಸಲ್ಲಿಸಿದ ಏಳು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕಗಳಿಗೆ ಕೃತಜ್ಞತೆ ಸಲ್ಲಿಸುವ ವೇಳೆ ನೆರದ ಸಭಿಕರನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಹೆಸರನ್ನು ಹೇಳುವ ಮುನ್ನ ಹೀಗೆ ಪ್ರಚೋದಿಸಿದರು: “ಈ ಸಂಸ್ಥೆಯ ಹೆಸರನ್ನು ಹೇಳಿದರೆ ನಿಮಗೆಲ್ಲರಿಗೂ ಕೋಪ ಬರುತ್ತದೆ" ಸೋಜಿಗವೂ ಆಗುತ್ತದೆ ಎಂದು ಹೇಳಿ ಅಖಿಲ ಭಾರತ ವೀರಶೈವ ಮಹಾಸಭಾದ ಹೆಸರನ್ನು ಹೇಳಿದರು. ಆದರೆ ನೆರೆದ ಸಭಿಕರು ತುಂಬು ಹೃದಯದಿಂದ ಕರತಾಡನ ಮಾಡಿ ಶಿಳ್ಳೆಗಳಿಂದ ತಮ್ಮ ಕೃತಜ್ಞತೆ ಸಲ್ಲಿಸಿದರು.
ಬಹುಶಃ ಧಿಕ್ಕಾರದ ಘೋಷಣೆಗಳನ್ನು ನಿರೀಕ್ಷೆ ಮಾಡಿದಂತೆ ಇದ್ದ ಜಾಮದಾರ ಅವರಿಗೆ ಇರುಸು ಮುರುಸು ಆದಂತೆ ಕಂಡಿತು. ಹೊಳೆಯ ದಾಟಿದ ಮೇಲೆ ಅಂಬಿಗನ ಹಂಗೇಕೆ ಎನ್ನುವುದು ವಿದುರ ನೀತಿಯಲ್ಲಿ ಉಲ್ಲೇಖವಿದೆ.
ಉತ್ತರ ಕರ್ನಾಟಕದ ಗಾದೆಗಳಲ್ಲಿ ‘ಹೊಳೆ ದಾಟಿದ ಮೇಲೆ ಅಂಬಿಗ ನನ್ನ ಮಿಂಡ’ ಎಂದು ಸ್ಪಷ್ಟವಾಗಿ ಜನಜನಿತವಾಗಿದೆ. ತಿಂಗಳುಗಟ್ಟಲೆ ನಡೆದ ಅಭಿಯಾನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಏಳು ಜಿಲ್ಲಾ ಘಟಕಗಳ ಸಹಾಯ ಸಹಕಾರ ಮತ್ತು ಹಣ ಪಡೆದು ಕೆಲಸವಾದ ಮೇಲೆ ಸಹಜವಾಗಿ ವಿದುರ ನೀತಿಯನ್ನು ಜಾಮದಾರ ಅವರು ಸರಳವಾಗಿ ಪೂರೈಸಿದರು.
ಅಲ್ಲಿ ನೆರೆದ ಲಿಂಗಾಯತರು ಮತ್ತು ವೀರಶೈವರು ಒಂದೇ ತಾಯಿಯ ಮಕ್ಕಳು ಎಂದು ಅರಿತರೂ ‘ವಿಭಾಗಿಸಿ ಬಾಳು’ ಎಂಬ ಬ್ರಿಟಿಷ್ ಸಂಸ್ಕೃತಿಯ ರಕ್ತದ ವಾಸನೆಯನ್ನು ಹೀರಿ ಮೈಗೂಡಿಸಿ ಕೊಂಡಿರುವ ಜಾಮದಾರ ಅವರ ದಾಳ ಇಲ್ಲಿ ವಿಫಲವಾಯಿತು. ಹೇಗಾದರೂ ಮಾಡಿ ವೀರಶೈವ ರನ್ನು ಅಪಮಾನಿಸಬೇಕೆಂಬ ಏಕೈಕ ಉದ್ದೇಶದಿಂದ ಅನಗತ್ಯವಾಗಿ ಕಾಳಾಮುಖ ವೀರಶೈವರ ಮುಖಕ್ಕೆ ಮಸಿ ಬಳಿಯುವ ಅವರ ಬಯಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದರು.
ಜಾಮದಾರ ಅವರು ಹರಿ ಬಿಟ್ಟ ಅಂದಿನ ಆ ಮಾತಿನ ಫಲಕ್ಕೆ ಅವರು ಬಹುಶಃ ರವಿ ಹಂಜ್ ಅವರ ಇಂದಿನ ಇಂಥ ನಿಷ್ಠುರ ಪ್ರತಿಕ್ರಿಯೆ ನಿರೀಕ್ಷಿಸಿರಿರಲಿಲ್ಲವೇನೋ ಎಂದೆನಿಸುತ್ತದೆ. ಪ್ರತಿಕ್ರಿಯೆಯ ಲೇಖನದಲ್ಲಿ ರವಿ ಹಂಜ್ ಬರೆದ ಈ ಸಾಲುಗಳು ಹೊಸ ಭಾಷ್ಯೆಯನ್ನೇ ತೆರೆದುಬಿಟ್ಟವು: “ಹಮ್ ಕರೇ ತೋ ಪ್ಯಾರ್, ಆಪ್ ಕರೇ ತೋ ಬಲಾತ್ಕಾರ್ (ನಾವು ಮಾಡಿದರೆ ಪ್ರೇಮ, ನೀವು ಮಾಡಿದರೆ ಅತ್ಯಾಚಾರ) ಎಂಬ ಸೂತ್ರಕ್ಕೆ ಬದ್ಧರಾಗಿರುವುದು ಅವರ ನಡೆನುಡಿಯಲ್ಲಿ ಸ್ಫಟಿಕ ಸದೃಶವಾಗಿ ಕಾಣುತ್ತದೆ!". ಈ ಸಾಲುಗಳ ಪೂರಕವೆಂಬಂತೆ ಡಾ. ಎಸ್.ಎಂ.ಜಾಮದಾರ ಅವರ ಕೆಲವು ಸಪ್ರೇಮದ ಉವಾಚಗಳ ಕುರಿತು ಬಹಿರಂಗ ಚರ್ಚೆ ಮಾಡಲು ಬಯಸುವೆ: ೧) ಒಂದು ಖಾಸಗಿ ದೂರದರ್ಶನ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಜಾಮದಾರ ಅವರು ಮಾತನಾಡುತ್ತ ರಾಮದುರ್ಗದ ಪೂಜ್ಯ ಅವರಾದಿ ಫಲಹಾರೇಶ್ವರ ಮಠದ ಉಚಿತ ಪ್ರಸಾದ ನಿಲಯ ಮತ್ತು ಧಾರವಾಡದ ಪೂಜ್ಯ ಮೃತ್ಯುಂಜಯ ಅಪ್ಪಗಳ ಉಚಿತ ಪ್ರಸಾದ ನಿಲಯಗಳಿಗೆ ಅವರ ಹೋಗ ಬೇಕಾದ ಅನಿವಾರ್ಯತೆ ಬಂದಾಗ ಅದನ್ನು ತಡೆದು ಅವರ ತಂದೆ ಹೇಳಿದ ಮಾತನ್ನ ಸಾರ್ವಜನಿಕ ಗೊಳಿಸಿದ್ದನ್ನ ಇಡೀ ದೇಶ ಕೇಳಿಸಿಕೊಂಡಿದೆ.
ಅದು, “ಸ್ವಾಮಿಗಳು ಇರತಕ್ಕಂಥ ಬೋರ್ಡಿಂಗ್ ಮಠಗಳಲ್ಲಿ ಸ್ವಾಮಿಗಳು ಹಾಕತಕ್ಕಂಥ ಊಟ ಅಲ್ಲಿ ಇಲ್ಲಿ ಭಿಕ್ಷೆ ಬೇಡಿ ತಂದ, ‘ಭಿಕ್ಕಿ ಕೂಳು’. ಅಂಥ ಭಿಕ್ಷೆಯಿಂದ ತಂದಂಥ ಊಟವನ್ನು ನೀನು ಉಂಡರೆ, ನೀನು ಸಹ ಭಿಕ್ಷುಕನಾಗುತ್ತಿ, ಅಂದರೆ ಭಿಕ್ಷುಕರ ಭಿಕ್ಷುಕನಾಗುತ್ತಿಯ!" ಅವರ ತಂದೆ ಹಾಗೆ ಹೇಳಿರಬಹುದು, ಅದು ಅವರ ಕುಟುಂಬದ ತತ್ವಶಾಸ್ತ್ರ.
ಆದರೆ ಅದನ್ನು ಸಾರ್ವಜನಿಕವಾಗಿ ಹೇಳುವ ಭಾಷಣಕ್ಕಾಗಿ ಆಯ್ಕೆ ಮಾಡುವುದು, ಶತಮಾನ ಗಳಿಂದಲೂ ಮಠಗಳ ಪ್ರಸಾದದ ಮೇಲೆ ಬದುಕು ಕಟ್ಟಿಕೊಂಡ ಲಕ್ಷಾಂತರ ಬಡ ವಿದ್ಯಾರ್ಥಿಗಳನ್ನು ಅವಮಾನಿಸುತ್ತದೆ. ಮಠದ ದಾಸೋಹ ತಿಂದರೆ, ‘ಭಿಕ್ಷುಕನಾಗುತ್ತೀಯೆ’ ಎಂಬ ಘನತೆಯ ಸ್ವಾಭಿಮಾನದ ಬಟ್ಟೆ ಹೊದ್ದ ಜಾಮದಾರ ಅವರು ಸರಕಾರದ ತೆರಿಗೆ ಹಣದಿಂದ ಬಂದ ಸ್ಕಾಲರ್‌ಶಿಪ್ ಪಡೆದು ಓದಿದಾಗ ಅಲ್ಲಿ ಆ ಸ್ವಾಭಿಮಾನ ಮೌನವಾದದ್ದು ಆಶ್ಚರ್ಯವೆನಿಸುತ್ತದೆ.
ಏಕೆಂದರೆ ಸ್ಕಾಲರ್‌ಶಿಪ್ ಹಣ ಆಕಾಶದಿಂದ ಉದುರಿಬಿದ್ದದ್ದಲ್ಲ. ಅದು ಸಹ ತೆರಿಗೆಯ ಹಣದಿಂದ ಉಚಿತವಾಗಿ ಕೊಡುವಂಥದ್ದು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ, ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಚಂದ್ರಶೇಖರ ಕಂಬಾರ, ಖ್ಯಾತ ಕವಿ ಚನ್ನವೀರ ಕಣವಿ, ಖ್ಯಾತ ಪತ್ರಕರ್ತ ಪಾಟೀಲ ಪುಟ್ಟಪ್ಪ, ಕ.ವಿ.ವಿ. ಕುಲಪತಿ ಡಾ.ಆರ್.ಸಿ. ಹಿರೇಮಠ, ಕರ್ನಾಟಕ ವಿಧಾನಸಭಾ ಸಭಾಪತಿ ಬಿ.ಜಿ.ಬಣಕಾರ ಇನ್ನೂ ಹಲವು ಮಹಾಪುರುಷರು, ಇವರೆಲ್ಲರೂ ಮಠದ ದಾಸೋಹದಿಂದಲೇ ವಿದ್ಯೆ ಪಡೆದ ದಿಗ್ಗಜರು. ಅವರು ಜಾಮದಾರರ ವ್ಯಾಖ್ಯೆಯಂತೆ ‘ಭಿಕ್ಷುಕ’ರಾಗದೇ ವಿಶ್ವಪ್ರತಿಷ್ಠಿತರಾದರು. ಕನ್ನಡ, ದೇಶ, ಸಮಾಜ, ಸಂಸ್ಕೃತಿ ಮತ್ತು ಆತ್ಮಗೌರವಕ್ಕೆ ಭುಜಬಲವಾದರು! ಅರಿವಿದ್ದರೆ ಅದನ್ನು ಸ್ವಯಂ ಅರಿವು ಎಂದು ಕರೆಯುತ್ತಾರೆ; ಅರಿವು ಇಲ್ಲದೆ ಅಹಂಕಾರವನ್ನು ಧ್ವಜವನ್ನಾಗಿಸಿದರೆ, ಅದು ಸಮಾಜ ವಿಭಜನೆಗೆ ಆಯುಧ ವಾಗುತ್ತದೆ.
೨) 2023ರಲ್ಲಿ ಬಸವಕಲ್ಯಾಣದಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಥಮ ಅಧಿವೇಶನದಲ್ಲಿ, ಮಹಾರಾಷ್ಟ್ರದ ಘಟಕದ ಅಧ್ಯಕ್ಷರು ಹಣಕಾಸು ವ್ಯವಹಾರಗಳ ಕುರಿತು ಸಂಪೂರ್ಣ ನ್ಯಾಯಸಮ್ಮತವಾದ ಪ್ರಶ್ನೆಗೆ, ಡಾ.ಎಸ್.ಎಂ.ಜಾಮದಾರ ಅವರು ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಬಳಸಿದ ಪದ, “ಕಳ್ಳ ಸೂಳೆ ಮಕ್ಕಳಿಗೆಲ್ಲ ನಾನು ಉತ್ತರ ಕೊಡುವುದಿಲ್ಲ".
ಈ ಒಂದು ವಾಕ್ಯವೇ ಅವರ ಪ್ರತಿಕ್ರಿಯೆಯ ಮಟ್ಟವನ್ನು ಜಗಜ್ಜಾಹೀರಾಗಿಸಿತು. ಬೌದ್ಧಿಕ ವಲಯ ದಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ಪ್ರಶ್ನೆ ಕೇಳುವವರನ್ನೇ ಕೆಳಮಟ್ಟದ ಪದಗಳಿಂದ ಅವಹೇಳನ ಮಾಡುವುದು, ಅದು ಯಾರಿಗಾಗಲಿ ಜ್ಞಾನಪ್ರಾಬಲ್ಯವಲ್ಲ. ಅವು ಜಾಮದಾರ ಅವರ ವೃತ್ತಿಜೀವನದ ಘನತೆಗೆ ಗೌರವ ನೀಡುವುದಿಲ್ಲ, ಅವರ ವ್ಯಕ್ತಿತ್ವಕ್ಕೆ ಮೌಲ್ಯ ಹೆಚ್ಚಿಸುವುದಿಲ್ಲ ಎನ್ನುವುದು ಸುಸ್ಪಷ್ಟ.
೩) ಯುಟ್ಯೂಬ್ ವಾಹಿನಿಯೊಂದರಲ್ಲಿ “ಲಿಂಗಾಯತ ಹೋರಾಟದ ಹಾದಿ ತಪ್ಪಬಾರದು" ಎಂಬ ಶೀರ್ಷಿಕೆಯ ಸಂದರ್ಶನದಲ್ಲಿ ಡಾ.ಎಸ್.ಎಂ.ಜಾಮದಾರ ನೀಡಿದ ಹೇಳಿಕೆ ವಾಚ್ಯವಾಗಿ ಕೇಳಿದರೂ, ಅದು ನೇರವಾಗಿ ಇತಿಹಾಸದ ಹೃದಯಕ್ಕೆ ಹೊಡೆದಂತೆ ಇತ್ತು. ಜಾಮದಾರರ ಮಾತು ಹೀಗಿತ್ತು:
“16ನೇ ಶತಮಾನದಲ್ಲಿ ಎಡೆಯೂರು ತೋಂಟದಾರ್ಯಸಿದ್ದಲಿಂಗ ಶಿವಯೋಗಿಗಳು ಸಾಂಸ್ಥೀಕರಣ ಮಾಡಿದರು. ಸ್ವಲ್ಪ ಉಪಯೋಗವಾಯ್ತು, ಆದರೆ ಅಧ್ವಾನಗಳೇ ಹೆಚ್ಚು. ಅವರು 500 ವಚನಗಳಲ್ಲಿ ‘ವೀರಶೈವ’ ಪದ ಬಳಸುವ ಮೂಲಕ ಭ್ರಷ್ಟತೆ ಉಂಟು ಮಾಡಿದರು". ಇಲ್ಲಿ ಭ್ರಷ್ಟತೆ ಎಂದರೆ- ನೈತಿಕತೆಯನ್ನು ತ್ಯಜಿಸಿ ಅಧಿಕಾರ ದುರುಪಯೋಗಪಡಿಸಿಕೊಂಡು ವೈಯಕ್ತಿಕ ಲಾಭ ಪಡೆಯುವ ಕ್ರಿಯೆ. ಅಧ್ವಾನ ಎಂದರೆ- ಪೂರ್ಣ ಅಸ್ತವ್ಯಸ್ತತೆ, ಹದಗೆಟ್ಟು ಉರುಳಿ ಬೀಳುವ ಸ್ಥಿತಿ.
ಹಾಗಾದರೆ ಸರಳ ಪ್ರಶ್ನೆ: ದೇಶ ಸುತ್ತಿ ಏಳುನೂರು ವಿರಕ್ತರನ್ನು ಒಗ್ಗೂಡಿಸಿ ಬಸವಣ್ಣನವರ ನಂತರ ಮೌನಕ್ಕೆ ತಳ್ಳಲ್ಪಟ್ಟಿದ್ದ ಧರ್ಮಕ್ಕೆ ತಳಮಟ್ಟದ ಪುನರುಜ್ಜೀವನ ನೀಡಿಕೊಂಡು ಮಠ-ಪೀಠಗಳನ್ನು ಮರುಸ್ಥಾಪಿಸಿ ಸಮಾಜದ ಆತ್ಮಗೌರವ ಜಾಗೃತಗೊಳಿಸಿದ ತೋಂಟದಾರ್ಯರನ್ನು ‘ಅಧ್ವಾನ’ ಮತ್ತು ‘ಭ್ರಷ್ಟತೆ’ ಎಂಬ ಪದಗಳ ಆಧಾರದ ಮೇಲೆ ತೀರ್ಪು ನೀಡುವುದು ಯಾವ ತಾರ್ಕಿಕ ಪುರುಷಾರ್ಥ? ಅದು ತರ್ಕವಲ್ಲ, ತ್ಯಾಗದ ಮೌಲ್ಯಕ್ಕೆ ಕಲ್ಲು ತೂರಿದಷ್ಟು ಕ್ರೂರ!
ಇತಿಹಾಸವನ್ನು ಬಾಯಿಯ ಪ್ರಭಾವದಿಂದ ಬದಲಾಯಿಸಲಾಗುವುದಿಲ್ಲ. ತೋಂಟದಾರ್ಯರು ಸಾಂಸ್ಥೀಕರಣ ಮಾಡದೆ ಇದ್ದರೆ ಇಂದು ನಾವು ಚರ್ಚಿಸುತ್ತಿರುವ ‘ಲಿಂಗಾಯತ’ ಎಂಬ ಗುರುತೇ ಇರುತ್ತಿರಲಿಲ್ಲ! ಆದರೆ ಈ ಹೇಳಿಕೆಯ ಬಗ್ಗೆ ಇನ್ನೂ ದೊಡ್ಡ ವೇದನೆ ಎಲ್ಲಿ ದೀಪಿಸುತ್ತದೆ ಎಂದರೆ- ತೋಂಟದಾರ್ಯರ ಪರಂಪರೆ, ಅವರ ಮಠಗಳು, ಅವರ ಭಕ್ತರು- ಯಾರೂ ಸಾರ್ವಜನಿಕವಾಗಿ ಜಾಮದಾರ ಅವರನ್ನು ಪ್ರಶ್ನಿಸುವ ಧೈರ್ಯ ತೋರಿಸುತ್ತಿಲ್ಲ.
ದ್ವೇಷಾತುರ ಆರೋಪಕ್ಕಿಂತ ಅಪಾಯಕಾರಿಯಾಗುವುದು, ಮೌನ! ಅವಮಾನಕ್ಕಿಂತ ದುಃಖಕರದ್ದು, ಪ್ರತಿಕ್ರಿಯೆಯ ಕೊರತೆ! ಪರಂಪರೆಯನ್ನು ಅರ್ಥೈಸದ ಮಾತಿಗಿಂತ ದೊಡ್ಡ ಹಾನಿ, ಪರಂಪರೆ ಯನ್ನು ರಕ್ಷಿಸುವ ಧೈರ್ಯ ಮಂಕಾದಾಗ ಎಂಬುದನ್ನು ಸಮಾಜ ಅರಿಯಬೇಕು.
೪) ಬೆಳಗಾವಿಯಲ್ಲಿ ನಡೆದ ‘ವಚನ ದರ್ಶನ ಮಿಥ್ಯ ವರ್ಸಸ್ ಸತ್ಯ’ ಗ್ರಂಥ ಬಿಡುಗಡೆ ಸಮಾರಂಭದ ಸಂದರ್ಭದಲ್ಲಿ, ಡಾ. ಎಸ್.ಎಂ. ಜಾಮದಾರ ನೀಡಿದ ಹೇಳಿಕೆಗಳು ಮತ್ತೊಮ್ಮೆ ಗಂಭೀರ ಪ್ರಶ್ನೆಗೆ ದಾರಿ ಮಾಡಿಕೊಟ್ಟವು. ಅವರು ತಮ್ಮ ಭಾಷಣದಲ್ಲಿ ವಚನ ದರ್ಶನದ ಗೌರವ ಸಂಪಾದಕರಾದ ಪೂಜ್ಯ ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳನ್ನು ಉಲ್ಲೇಖಿಸಿ, ಅವರ ಗುರುಶ್ರೇಣಿ ಯನ್ನು ಸರಣಿಯಾಗಿ ಹೆಸರಿಸಿದರು- ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಶ್ರೀ ಸಿದ್ದೇಶ್ವರ ಸ್ವಾಮಿ, ಶ್ರೀ ಸಿದ್ಧಾರೂಢಸ್ವಾಮಿ- ನಂತರ ಈ ಮಠಗಳ ಸಂಬಂಧಗಳನ್ನು ವ್ಯಂಗ್ಯ ಮತ್ತು ಸಂಶಯದ ಬಣ್ಣದಲ್ಲಿ ಚಿತ್ರಿಸಿದರು.
ಸದಾಶಿವಾನಂದ ಸ್ವಾಮಿಗಳ ಬಗ್ಗೆ ಟೀಕೆ ಮಾಡಲು ಜಾಮದಾರರು ಅವರ ಗುರುಪಂಕ್ತಿಯನ್ನೇ ಸಂಶಯದ ಸುಳಿಗೊಳಪಡಿಸುವ ರೀತಿಯಲ್ಲಿ ಪೂಜ್ಯ ಮಲ್ಲಿಕಾರ್ಜುನಸ್ವಾಮಿ, ಪೂಜ್ಯ ಸಿದ್ದೇಶ್ವರ ಸ್ವಾಮಿ, ವೇದಾಂತ ಕೇಸರಿ ಎಂಬ ಪವಿತ್ರ ಹೆಸರುಗಳನ್ನು ಸರಣಿಯಾಗಿ ಉಲ್ಲೇಖಿಸಿದರು.
ಪದಗಳಲ್ಲಿ ಹೊಗಳಿಕೆಯಂತೆ ಕಾಣಿಸಿದರೂ, ಸ್ವರದಲ್ಲಿ ಸಂಶಯ, ಅರ್ಥದಲ್ಲಿ ವ್ಯಂಗ್ಯವಾಗಿಸುತ್ತಾ ನಂತರ ಮಾತುಗಳನ್ನು ಇನ್ನಷ್ಟು ವಿಚಿತ್ರವಾಗಿ ತಿರುಗಿಸಿದರು: “ಸಿದ್ದೇಶ್ವರ ಸ್ವಾಮಿಗಳು ಅಪ್ಪಟ, ಅಪ್ಪಟ, ಅಪ್ಪಟ ಪರಿಶುದ್ಧ ವೇದಾಂತಿಗಳು ಸಚ್ಚಾರಿತ್ರ್ಯವುಳ್ಳವರು, ಕಿಸೆಯಿಲ್ಲದ ಅಂಗಿ ತೊಟ್ಟವರು, ಮಹಾನ್ ವೇದಾಂತಿಗಳು- ಹೌದೋ ಅ ನೀವೇ ಹೇಳ್ರಿ!".
ಒಬ್ಬ ಸಂಪಾದಕನನ್ನು ಪ್ರಶ್ನಿಸಲು ಅವರ ಗುರುಗಳನ್ನೇ ಜನರ ಮುಂದೆ ಪರೀಕ್ಷೆಗೆ ಇಡುವುದು, ಅವರ ಆಧ್ಯಾತ್ಮಿಕ ಬಿರುದನ್ನೇ ಸಂದೇಹಕ್ಕೆ ಗುರಿಮಾಡುವುದು, ಇದು eನಿಗಳ ವಿಧಾನವಲ್ಲ. ಧರ್ಮದಲ್ಲಿ ಮಾತು ಗಟ್ಟಿಯಾಗಿ ಹೇಳಬಹುದು, ಆದರೆ ಪವಿತ್ರ ಹೆಸರಿನ ಮೇಲೆ ವ್ಯಂಗ್ಯಮಯ ನೆರಳು ಹಾಯಿಸುವ ಹಕ್ಕು ಯಾರಿಗೂ ಇಲ್ಲ. ವಿಶೇಷವಾಗಿ ಸಿದ್ಧಾರೂಢ ಸ್ವಾಮಿಗಳ ಬಗ್ಗೆ ಜಾಮದಾರರು ಬಳಸಿದ ಚಿತ್ರಣ- “ಚಳಕಾಪುರದ ಶೆಟ್ರು ಗುಂಡಗಡಿಗೆ ಕರಡಿಗೆ ಹಾಕಿಕೊಂಡು ಲಿಂಗಾಯತರಾಗಿ ಬಂದವರು, ಅಲಕನಿರಂಜನ ಎಂದು ವಕ್ಕರಿಸಿಕೊಂಡವರು".
ಇದು ಮಾಹಿತಿ ಅನ್ವೇಷಣೆ ಅಲ್ಲ; ಪವಿತ್ರ ವ್ಯಕ್ತಿತ್ವದ ಮೇಲೆ ಅವಮಾನಕಾರಕ ಭಾಷೆಯ ಬಳಕೆ. ಪೂಜ್ಯ ಶ್ರೀ ಸಿದ್ಧಾರೂಢರನ್ನು ‘ಅಲಕನಿರಂಜನ’, ‘ಕರಡಿಗೆ ಹಾಕಿಕೊಂಡವರು’, ‘ವಕ್ಕರಿಸಿ ಕೊಂಡವರು’ ಎಂಬ ಪದಗಳಿಂದ ಉಲ್ಲೇಖಿಸುವಾಗ ಆ ಪದಗಳ ಐತಿಹಾಸಿಕ ಗೌರವ, ಭಕ್ತಿಯ ಭಾವಲೋಕ, ಸಾಮಾಜಿಕ ಪವಿತ್ರತೆ ಜಾಮದಾರರಿಗೆ ಅರ್ಥವಾಗಿರಲಿಲ್ಲ. ಅಥವಾ ಅರ್ಥವಾಗಿ ದ್ದರೂ ಕಡೆಗಣಿಸಲು ಆಯ್ದುಕೊಂಡಿರಬಹುದು.
ಏನೇ ಆಗಿರಲಿ, ಪರಿಣಾಮ ಒಂದೇ: ಗುರು ಪರಂಪರೆಯನ್ನು ಹೃದಯದ ಜಾಗದಲ್ಲಿ ಇರಿಸಿ ಕೊಂಡಿರುವ ಜನರ ಮನಸ್ಸುಗಳಿಗೆ ಅವಮಾನದ ನೋವು ತಗುಲಿತು. ಒಬ್ಬ ಶಿಷ್ಯ ತಪ್ಪಿದ್ದರೆ ಅದರ ಹೊಣೆ ಗುರುಗಳಿಗೆ ಎಂದು ಹೇಳುವ ಯಾವ ಧಾರ್ಮಿಕ, ನೈತಿಕ, ಮನೋವೈeನಿಕ ತರ್ಕವೂ ಇಲ್ಲ. ಯಾವ ಗುರುವೂ ಧರ್ಮ ಕೆಡಲಿ, ಸಮಾಜ ಒಡೆಯಲಿ ಎಂದು ಶಿಕ್ಷಣ ಕೊಡುವುದಿಲ್ಲ. ಧರ್ಮವನ್ನು ಒಡೆಯುವವರು ಸಮಯಸಾಧಕರು ಎಂಬುದು ತ್ರಿಕಾಲಸತ್ಯ.
ವಿವಾದ ವಿಚಾರಗಳ ಮೇಲೆ ಇರಬಹುದು; ಪರಸ್ಪರ ನಿಂದನೆಗಳ ಮೇಲಲ್ಲ; ಅದೇ ಧಾರ್ಮಿಕ ಸಂವೇದನೆಯ ಗಡಿ. ವಿವಾದಗಳು ವಿಚಾರಗಳ ಮೇಲೆ ನಡೆಯಬಹುದು, ನಡೆಯಬೇಕು. ಆದರೆ ಅಖಂಡ ವೀರಶೈವ ಪರಂಪರೆಯ ಮೇಲೆ ಹಾಗೂ ವೇದಾಂತಿಗಳ ಮೇಲೆ ನಿರಂತರ ಅವಹೇಳನ ಮಾಡುವುದರಿಂದ ಸಾರ್ವಜನಿಕ ಪ್ರತಿಕ್ರಿಯೆಗಳು-ಪ್ರತಿಭಟನೆಗಳು ಸಹಜ. ಈ ಸೂಕ್ಷ್ಮತೆಯನ್ನು ಮನದಲ್ಲಿ ಇಟ್ಟುಕೊಂಡು ಡಾ.ಎಸ್.ಎಂ.ಜಾಮದಾರ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ, ಲಿಂಗಾಯತರಿಗೆ ಪ್ರತ್ಯೇಕ ಧರ್ಮ/ಅಲ್ಪಸಂಖ್ಯಾತರ ಮಾನ್ಯತೆಗಾಗಿ ಹೋರಾಡಲಿ. ಅವರ ಹೋರಾಟ ಜಯಶಾಲಿಯಾಗಲಿ.
ಆದರೆ ಒಂದು ವಿನಂತಿ ಮಾತ್ರ: ತಲೆ ಗಟ್ಟಿ ಇದೆ ಎಂದು ಭ್ರಮಿಸಿ ಕಂಡ ಕಂಡ ಬಂಡೆಗಳಿಗೆ ಹಾಯಬಾರದು, ಹಾರಿ ಬರಬಾರದು. ವಿಮರ್ಶೆ ವಿಚಾರದ ಮೇಲೆ ಮಾತ್ರ ಇರಲಿ; ನಿರಂತರ ನಿಂದನೆಗಳನ್ನು ನಿಲ್ಲಿಸಿ. ಎಲ್ಲವನ್ನೂ ವಿರುದ್ಧ ಮುಖವಾಗಿ ನೋಡುವ ಅನವಶ್ಯಕ ದ್ವೇಷ ನಿಲ್ಲಿಸಿ. ಸರ್ವರನ್ನೂ ಒಗ್ಗೂಡಿಸುವ ತತ್ವವೇ ಎಲ್ಲ ಧರ್ಮಗಳ ಹೃದಯದಲ್ಲಿರುವುದು.
ಹಾಗೆ ನೋಡದೆ ಜಾಮದಾರರು ಈಗ ತಮ್ಮ ಕಣ್ಣುಗಳನ್ನು ಇರಿಸಿಕೊಂಡಂತಾಗಿದೆ. ಹಾಗಾಗಿ ಜಾಮದಾರರು ಪ್ರಾಮಾಣಿಕವಾಗಿ ವಿಚಾರ ಮಂಡನೆಯತ್ತ ಚಿತ್ತ ಹರಿಸಲಿ, ಸಮಾಜದಲ್ಲಿ ಪ್ರಶಾಂತ ವಾತಾವರಣವನ್ನು ಕದಡದಿರಲಿ ಎಂದು ವಿನಂತಿಸುವೆ.
(ಲೇಖಕರು ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾ, ದೆಹಲಿ ರಾಜ್ಯ ಘಟಕ, ನವದೆಹಲಿ)