Vinayak M Bhat Column: ಅತಿ ವ್ಯಾಮೋಹ ಮಕ್ಕಳ ಭವಿಷ್ಯಕ್ಕೆ ಮಾರಕವಾಗಬಹುದು !
ವಾಸ್ತವಿಕವಾಗಿ ಆ ಹುಡುಗ ಸಣ್ಣವನಿದ್ದಾಗಿನಿಂದ ಅತಿ ಶ್ರೀಮಂತರ ಮಧ್ಯದಲ್ಲಿಯೇ ಬೆಳೆದವನು. ಅಪ್ಪ ಅಮ್ಮ ಅಷ್ಟು ಶ್ರೀಮಂತರಲ್ಲದಿದ್ದರೂ ಈತನನ್ನು ಶ್ರೀಮಂತರ ಮಕ್ಕಳು, ಉದ್ಯೋಗಪತಿಗಳ ಮಕ್ಕಳು ಮಾತ್ರ ಹೋಗುವ ದುಬಾರಿ ರೆಸಿಡೆನ್ಶಿಯಲ್ ಶಾಲೆಗೆ ಸೇರಿಸಲಾಗಿತ್ತು. ಅಲ್ಲಿ ಮಗನಿಗೆ ಯಾವುದಕ್ಕೂ ಕಡಿಮೆಯಗಬಾರದು, ಉಳಿದ ಶ್ರೀಮಂತ ಮಕ್ಕಳ ಮುಂದೆ ಈತ ಸಣ್ಣವನಾಗಬಾರದು ಎನ್ನುವ ಕಾರಣಕ್ಕೆ ಮಗನಿಗೆ ಹಣ ಬೇಕಾದಷ್ಟು ಕಳುಹಿಸಿದರು.
-
ವಿದ್ಯಮಾನ
ನನಗೊಬ್ಬ ಆತ್ಮೀಯರಿದ್ದಾರೆ. ಅವರು ಗಂಡ ಹೆಂಡಿರಿಬ್ಬರೂ ಸರಕಾರಿ ನೌಕರರಾಗಿದ್ದವರು. ನಿವೃತ್ತಿಯ ಸಮೀಪದಲ್ಲಿದ್ದಾಗಲೂ ನಾವು ದುಡಿದಿಟ್ಟಿದ್ದು ಸಾಕಾಗಲಿಲ್ಲ ಎನ್ನುವ ಭಾವನೆಯ ಮರುಗುತ್ತಿದ್ದವರು. ಸರಕಾರಿ ನೌಕರರಾಗಿದ್ದಾರೆ ಅಂದ ಮೇಲೆ ಆಗಲೇ ಸಾಕಷ್ಟು ಆಸ್ತಿಪಾಸ್ತಿಗಳಿ ದ್ದವು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
‘ಯಾಕೆ ಸರ್, ಇಷ್ಟೊಂದು ಕಷ್ಟ ಪಡ್ತೀರಾ, ಇನ್ನಾದ್ರೂ ನೀವು ಆರಾಮಾಗಿ ಇರ್ಬಾರ್ದಾ’ ಅಂತ ಕೇಳಿದರೆ, ಇಲ್ಲ, ಮಗನಿಗೆ ತಿಂಗಳಿಗೆ ಐದು ಲಕ್ಷ ಬಡ್ಡಿಯ ಹಣ ಬರುವಷ್ಟು ಹಣ ಸಂಪಾದನೆ ಮಾಡಿಡುವುದು ನಮ್ಮ ಗುರಿ, ಹಾಗಾಗಿ ಇಬ್ಬರೂ ದುಡೀತಾ ಇದ್ದೀವಿ ಅಂದ್ರು. ನೀವು ದುಡಿದಿಟ್ಟ ಬಡ್ದಿ ಹಣದಲ್ಲಿ ಬದುಕಬೇಕಾದ ಅನಿವಾರ್ಯತೆ ನಿಮ್ಮ ಮಗನಿಗೇನು? ಆತನೇನು ವಿಶೇಷ ಚೇತನನೇ? ಅ ಅಂತಾದರೆ ಆತ ಈಗ ಏನು ಮಾಡ್ತಾ ಇದ್ದಾನೆ ಅಂತ ಕೇಳಿದರೆ, ‘ಸದ್ಯ ಏನೂ ಇಲ್ಲಾ’ ಅಂದ್ರು.
ಅವನು ಏನು ಓದಿದ್ದಾನೆ ಅಂತ ಕೇಳಿದೆ. ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಸೀಟ್ ಸಿಕ್ಕಿತ್ತು. ಒಂದು ವರ್ಷ ಕಾಲೇಜಿಗೂ ಹೋಗಿದ್ದ, ಇದ್ದಕ್ಕಿದ್ದ ಹಾಗೆ ಅವನಿಗೆ ಓದುವ ಮೂಡೇ ಹೊರಟು ಹೋಯಿತಂತೆ. ಹಾಗಾಗಿ ಕಾಲೇಜು ಬಿಟ್ಟು ಮನೆಗೆ ಬಂದಿದ್ದಾನೆ. ಹಾಗಾದರೆ ಈಗ ಏನಾದರೂ ಕೆಲಸ ಮಾಡಿಕೊಂಡಿದ್ದಾನಾ ಎಂದರೆ, ಇಲ್ಲಾ, ಯಾರ ಕೆಳಗೂ ನಾನು ಕೆಲಸ ಮಾಡಲಾರೆ, ನೌಕರಿ ಎನ್ನುವುದು ಒಂಥರಾ ದಾಸ್ಯ ಇದ್ದ ಹಾಗೆ, ಅದು ನನಗೆ ಸಾಧ್ಯವಾಗದ್ದು ಅಂತಾನೆ ಅಂದ್ರು.
ಇದನ್ನೂ ಓದಿ: Vinayak M Bhat Column: ಇಂಥಾ ಪವಾಡಗಳು ಜಗತ್ತಿನಲ್ಲಿ ನಡೆಯುತ್ತಿರಬೇಕು
ವಾಸ್ತವಿಕವಾಗಿ ಆ ಹುಡುಗ ಸಣ್ಣವನಿದ್ದಾಗಿನಿಂದ ಅತಿ ಶ್ರೀಮಂತರ ಮಧ್ಯದಲ್ಲಿಯೇ ಬೆಳೆದವನು. ಅಪ್ಪ ಅಮ್ಮ ಅಷ್ಟು ಶ್ರೀಮಂತರಲ್ಲದಿದ್ದರೂ ಈತನನ್ನು ಶ್ರೀಮಂತರ ಮಕ್ಕಳು, ಉದ್ಯೋಗಪತಿಗಳ ಮಕ್ಕಳು ಮಾತ್ರ ಹೋಗುವ ದುಬಾರಿ ರೆಸಿಡೆನ್ಶಿಯಲ್ ಶಾಲೆಗೆ ಸೇರಿಸಲಾಗಿತ್ತು. ಅಲ್ಲಿ ಮಗನಿಗೆ ಯಾವುದಕ್ಕೂ ಕಡಿಮೆಯಗಬಾರದು, ಉಳಿದ ಶ್ರೀಮಂತ ಮಕ್ಕಳ ಮುಂದೆ ಈತ ಸಣ್ಣವನಾಗ ಬಾರದು ಎನ್ನುವ ಕಾರಣಕ್ಕೆ ಮಗನಿಗೆ ಹಣ ಬೇಕಾದಷ್ಟು ಕಳುಹಿಸಿದರು.
ಮಗ ಪ್ರೌಢಶಾಲೆಯಲ್ಲಿದ್ದಾಗಲೇ ಒಂದೆರಡು ಬಾರಿ ವಿದೇಶ ಪ್ರವಾಸನ್ನೂ ಮಾಡಿ ಬಂದಿದ್ದ. ಅವನ ಬಯಕೆಗಳ ಮೀಟರ್ ಬೆಳೆಯುತ್ತಾ ಸಾಗಿತು, ಕಾರಣ ಆ ಬಯಕೆಗೆ ಸತತವಾಗಿ ತಂದೆತಾಯಿ ನೀರೆರೆಯುತ್ತ ಬಂದಿದ್ದರು. ಬೆಂಗಳೂರಿನಲ್ಲಿ ಎರಡು ಮನೆ. ಊರಿನಲ್ಲಿ ಜಮೀನು. ಮಗನಿಗೇ ಪ್ರತ್ಯೇಕ ಎಸ್ಯುವಿ ಎಲ್ಲ ವ್ಯವಸ್ಥೆಯಾಯಿತು.
ಒಂದು ದಿನ ಮಗ ಬಂದು ಅಪ್ಪನಿಗೆ ಹೇಳಿದ, ‘ಅಪ್ಪಾ ನನ್ನ ಫ್ರೆಂಡ್ಸ್ಗಳ ತಂದೆತಾಯಂದಿರು ತಮ್ಮ ಮಗನಿಗಾಗಿ ದುಬೈ, ಸಿಂಗಾಪುರದಲ್ಲಿ ಫ್ಲ್ಯಾಟ್ ಕೊಡಿಸಿದ್ದಾರೆ. ನೀವು ನನಗೇ ಅಂತ ಬೆಂಗಳೂರಿ ನಲ್ಲೂ ಒಂದು ಮನೆ ಕೊಡ್ಸೋಕಾಗಲ್ವಾ?’. ಮಗ ಬೇಜಾರು ಮಾಡಿಕೊಂಡಿದ್ದಾನೆ ಅಂದುಕೊಂಡು ಮಗನಿಗೆ ಉಳಿದುಕೊಳ್ಳಲು ಪ್ರತ್ಯೇಕ ಮನೆಯ ವ್ಯವಸ್ಥೆಯೂ ಆಯಿತು. ಪ್ರೈವೆಸಿ ಬೇಕಲ್ಲಾ ಮಗನಿಗೆ ಪಾಪ!
ಎಲ್ಲವೂ ಇರುವ ಗಂಡುಮಕ್ಕಳಿಗೇ ಹೆಣ್ಣು ಸಿಗದ ಈ ಕಾಲದಲ್ಲಿ, ಕೈಯ್ಯಲ್ಲಿ ಏನೂ ಕೆಲಸವಿಲ್ಲದ ಈ ಶೋಕಿ ಹುಡುಗನಿಗೆ ಹುಡುಗಿಯೂ ಸಿಕ್ಕಿ ಮದುವೆಯೂ ಆಯಿತು. ಹಾಗಾದ್ರೆ ಆ ಹುಡುಗ ಮದುವೆಯಾದ ಮೇಲಾದರೂ ಏನಾದ್ರೂ ಮಾಡುತ್ತಿರಬೇಕಲ್ಲಾ! ಅಂದ್ರೆ, ಇಲ್ಲವೇ ಇಲ್ಲ ಈಗಲೂ ಅಪ್ಪ ಅಮ್ಮ ದುಡಿದಿಟ್ಟ ದುಡ್ಡಿನ ಚೈನಿ ಮಾಡುತ್ತಿದ್ದಾನೆ. ಮಗ ಏನಾದರೂ ಬಯಸಿದರೆ ಸಾಕು, ಎದ್ದೂ ಬಿದ್ದೂ ಭಯದಿಂದ ತಂದೆ ತಾಯಿ ಇಂದಿಗೂ ಪೂರೈಸುತ್ತಿದ್ದಾರೆ. ಮೊದಲು ಪ್ರೀತಿಯಿಂದ ಮುದ್ದಿನಿಂದ ಮಾಡಿದರು, ಈಗ ಭಯದಿಂದ ಮಾಡುತ್ತಿದ್ದಾರಷ್ಟೇ!
ನನ್ನ ಮಗನಿಗೆ ಒಂದು ಒಳ್ಳೇ ಬೈಕ್ ಕೊಡಿಸಬೇಕು, ಸಾಲ ಮಾಡಿಯಾದರೂ ಸರಿ! ಅವನದ್ದು ಅಂತ ಒಂದು ಕಾರು ಬೇಕಲ್ಲ, ಹಾಗಾಗಿ ಅವನಿಗೊಂದು ಕಾರು ಕೊಡಿಸಬೇಕು, ಅದು ಕೊಡಿಸಬೇಕು ಇದು ಕೊಡಿಸಬೇಕು ಎನ್ನುವುದು ಸಾಮಾನ್ಯ ಪಾಲಕರ ಸ್ವಭಾವವಾಗಿದೆ. ನೀವು ಏನು ಬೇಕಾದರೂ ಕೊಡಿಸಬಹುದು, ಕೊಡಿಸುತ್ತಾ ಹೋದಷ್ಟು ಆತನ ಸ್ವಂತ ಖರೀದಿಸುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಹಣ, ಸಮಯ ಶ್ರಮ, ಹಾಗೂ ವಿದ್ಯೆ ಇವುಗಳ ಮಹತ್ವದ ಬಗ್ಗೆ ಸಣ್ಣವರಿದ್ದಾಗಲೇ ತಿಳಿವಳಿಕೆ ಕೊಡದಿದ್ದರೆ ತಪ್ಪು ಪಾಲಕರದ್ದೇ ಆಗುತ್ತದೆ. ನನ್ನ ಮಗಳು ಚಿಕ್ಕವಳಿದ್ದಾಗ ಒಮ್ಮೆ ಏನೋ ಬೇಕು ಅಪ್ಪಾ ಅಂದಳು. ಇಲ್ಲಾ ಮಗಾ, ಈಗ ತಿಂಗಳ ಕೊನೆಯಲ್ಲಿದ್ದೇವೆ. ದುಡ್ಡಿಲ್ಲ, ಮುಂದಿನ ತಿಂಗಳು ನೋಡೋಣ ಅಂದೆ. ಅದಕ್ಕೆ ಆಕೆ, ಯಾಕಪ್ಪಾ ಚಿಂತೆ ಮಾಡ್ತೀಯ? ಏಟಿಎಂಗೆ ಹೋದ್ರೆ ಆಯ್ತಪ್ಪ, ಕಾರ್ಡ್ ಹಾಕಿದರೆ ದುಡ್ಡು ಈಚೆ ಬರುತ್ತೆ, ನಾನು ನೋಡಿದೀನಿ ಅಂದಿದ್ದಳು, ಆಕೆ ನೋಡಿದ್ದು ಅಷ್ಟನ್ನೇ ಆಗಿತ್ತು.
ಇನ್ನೂ ಹೆಚ್ಚಿಗೆ ತಿಳಿದುಕೊಳ್ಳುವ ವಯಸ್ಸಾಗಿರಲಿಲ್ಲ ಅವಳದ್ದು, ಅಪ್ಪ ದುಡಿಯುತ್ತಿದ್ದ ಸಂಸ್ಥೆಯವರು ಸಂಬಳದ ಹಣವನ್ನು ಖಾತೆಗೆ ವರ್ಗಾಯಿಸುತ್ತಾರೆ, ಆ ಹಣ ಖರ್ಚಾಗುವವರೆಗೆ ಮಾತ್ರ ಎಟಿಎಂ ದುಡ್ಡು ಕೊಡುತ್ತೆ ಎನ್ನುವ ತಿಳಿವಳಿಕೆ ಆಕೆಗಿನ್ನೂ ಬಂದಿರಲಿಲ್ಲ ಪಾಪ. ಆದರೆ, ತಂದೆಯ ಇತಿ ಮಿತಿ ಆಕೆಗೆ ಗೊತ್ತಾಗಬೇಕಲ್ಲ.
ಅಪ್ಪನ ಕಿಸೆ ಅಕ್ಷಯ ಭಂಡಾರವಲ್ಲ ಎನ್ನುವುದು ಗೊತ್ತಾದಾಗ ಮಾತ್ರ ನಿಜವಾದ ಬದುಕನ್ನು ಆಕೆ ನೋಡಲು ಸಾಧ್ಯ ತಾನೆ? ಅವಳಿಗೆ ಎಟಿಎಂನಿಂದ ದುಡ್ಡು ಬರುವ ಹಿಂದಿನ ರಹಸ್ಯವನ್ನೆಲ್ಲ ಹೇಳಿದ್ದಾಯಿತು. ಇಂದಿನ ಮಕ್ಕಳಿಗೆ Fear of rejection Syndrome ಬೆಳೆಸುವವರು ಪಾಲಕರೇ. ನಮಗೆ ಬೇಕಾದ್ದೆಲ್ಲ, ಬೇಕಾದಾಗೆಲ್ಲ ಸಿಗೋದಿಲ್ಲ ಎನ್ನುವುದನ್ನು ಸಣ್ಣವರಿದ್ದಾಗಲೇ ಕಲಿಸಿದ್ದರೆ, ನಮಗೆ ಸಾಮರ್ಥ್ಯವಿದ್ದರೂ, ಕೊಡಿಸಬೇಕಾದ್ದನ್ನು ಕೊಡಿಸಲು ಸ್ವಲ್ಪ ಸಮಯ ತೆಗೆದುಕೊಂಡಿ ದ್ದರೆ, ದುಡ್ಡಿನ ಮಹತ್ವವನ್ನು ಬಾಲ್ಯದಲ್ಲಿಯೇ ಪ್ರಯತ್ನಪೂರ್ವಕವಾಗಿ ಕಲಿಸಿದ್ದರೆ ಎಷ್ಟೋ ಇವತ್ತು ಆತ್ಮಹತ್ಯೆಗಳನ್ನು ತಡೆಯಬಹುದಾಗಿತ್ತೇನೋ!
ಇಲ್ಲಾ ಅನ್ನಿಸಿಕೊಂಡೇ ಗೊತ್ತಿಲ್ಲದಿದ್ದರೆ, ನಿಮ್ಮ ಅನುಪಸ್ಥಿತಿಯಲ್ಲಿ, ಇಲ್ಲವನ್ನೇ ತುಂಬಿಕೊಂಡಿ ರುವ ನಕಾರಾತ್ಮಕ ಸಮಾಜವನ್ನು ಮಕ್ಕಳು ಎದುರಿಸುವುದಾದರೂ ಹೇಗೆ? ಅಗತ್ಯವಿಲ್ಲದಿದ್ದರೂ ಅಗತ್ಯಗಳನ್ನು ಹುಟ್ಟುಹಾಕಬೇಕು, ಸುಲಭವಾಗಿ ಪೂರೈಸಬಾರದು.
ವಾಸ್ತವಿಕವಾಗಿ, ಮಕ್ಕಳು ಪಾಲಕರ ಇಚ್ಛೆ ಪೂರ್ತಿಗಾಗಿ ಕೆಲಸ ಮಾಡಬೇಕು, ಆದರೆ ಈ ಕಾಲದಲ್ಲಿ ಹಾಗಲ್ಲ. ತಂದೆತಾಯಿಯರು ಮಕ್ಕಳ ಇಚ್ಛೆ ಪೂರ್ತಿಗಾಗಿಯೇ ಜೀವನವನ್ನು ತೇಯುತ್ತಾರೆ. ಕಾಲೋ ವಿಚಿತ್ರಾಗತಿಃ ಏನು ಮಾಡೋಣ! ತಮ್ಮ ಮಕ್ಕಳು ತೊಂದರೆಗೆ ಸಿಲುಕಬಾರದು, ಅವರಿಗೆ ಜೀವನ ದಲ್ಲಿ ಕೊರತೆಯಾಗಬಾರದು ಎನ್ನುವುದು ಎಲ್ಲ ಪಾಲಕರ ಆಸೆಯೇ. ಪಾಲಕರು ಮಕ್ಕಳಿಗೆ ಬೆಂಬಲವಾಗಿ ನಿಲ್ಲಬೇಕು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಅವರ ಹಿಂದೆ ಇರೋಣ, ಆದರೆ ನೆರಳಿನಂತೆ ಅವರನ್ನು ಬಿಟ್ಟೂ ಬಿಡದಂತೆ ಇರುವುದಲ್ಲ, ಸ್ವಲ್ಪ ದೂರದಿಂದ ಅವರ ಚರ್ಯೆಯನ್ನು ನೋಡುವುದು ಒಳಿತು.
ಹೀಗೆ ಸ್ವತಂತ್ರವಾಗಿ ನಡೆಯುವಾಗ ಮಕ್ಕಳು ಎಡವಬಹುದು, ಬೀಳಬಹುದು ಅಥವಾ ಗಾಯ, ನೋವುಗಳಾಗಬಹುದು. ತೊಂದರೆ ಇಲ್ಲ, ಹಾಗೆ ಎಡವಿದ, ಬಿದ್ದ ಗಾಯಗೊಂಡ ಪರಿಸ್ಥಿತಿ ಯಿಂದಲೇ ಅವರು ಮತ್ತೆ ಬೀಳದ ಪಾಠವನ್ನು ಕಲಿತೇ ಕಲಿಯುತ್ತಾರೆ. ಅವರ ವಿಚಾರ ಸಂಶೋಧನೆಯಲ್ಲಿ ನೀವೂ ಭಾಗಿಯಾಗಿ ಅವರನ್ನು ವೈಚಾರಿಕವಾಗಿ ಗಟ್ಟಿ ಮಾಡುವಲ್ಲಿ ನಾವು ಪಾಲ್ಗೊಳ್ಳಬಹುದು.
ಯಾಕೆ ಬಿದ್ದೆ, ಅದಕ್ಕೆ ಕಾರಣಗಳೇನು, ಮುಂದೆ ಹಾಗೆ ಜಾರದಿರಲು ಏನು ಮಾಡಬೇಕು ಮುಂತಾದ ವಿಶ್ಲೇಷಣೆಯಲ್ಲಿ ಪಾಲಕರು ಪಾಲ್ಗೊಳ್ಳಬೇಕು, ಆದರೆ ಕೈಬಿಟ್ಟರೆ ಬಿದ್ದು ಹೋಗುತ್ತಾನೆ ಎನ್ನುವ ಕಾರಣಕ್ಕೆ ಹಿಡಿದ ಕೈ ಬಿಡುವುದೇ ಇಲ್ಲ ಎನ್ನುವುದು ಪಾಲಕರು ಮಕ್ಕಳಿಗೆ ಮಾಡುವ ದೊಡ್ಡ ದ್ರೋಹವೇ ಸರಿ.
ವಾಸ್ತವಿಕವಾಗಿ ಹಡಗಿನ ನಿರ್ಮಾಣ ಮಾಡುವುದೇ ಅದನ್ನು ನೀರಿಗೆ ಬಿಡಲು. ವರ್ಷಗಟ್ಟಲೇ ಬಹಳ ಕಷ್ಟಪಟ್ಟು ಪ್ರೀತಿಯಿಂದ ತಯಾರು ಮಾಡಿದ ಹಡಗಿದು, ನೀರಿಗೆ ಬಿಡಲು ಮನಸ್ಸಾಗುತ್ತಿಲ್ಲ ಎಂದರೆ ಹೇಗೆ? ಹಾಗೆ ಮಕ್ಕಳು ಸಮಾಜವೆಂಬ ಸಮುದ್ರಕ್ಕೆ ಬಿದ್ದಾಗಲೇ ಈಜನ್ನು ಕಲಿಯಲು ಸಾಧ್ಯ, ಮನೆ ಗುಬ್ಬಿಯಾಗಿದ್ದುಬಿಟ್ಟರೆ ಅವರು ಯಾವ ಸಣ್ಣ ಸವಾಲನ್ನೂ ಎದುರಿಸುವುದು ಸಾಧ್ಯವಾಗುವು ದಿಲ್ಲ.
ತಂದೆತಾಯಿಯರ, ಮನೆಯ ಹಿರಿಯರಿಗೆ ಮೊದಲ ಆದ್ಯತೆ ಇದ್ದ ಒಂದು ಕಾಲವಿತ್ತು. ಮನೆಯಲ್ಲಿ ಹಿರಿಯರ ಮಾತಿಗೆ ಮನ್ನಣೆ ಇರುತ್ತಿತ್ತು. ಈಗ ಹಾಗಲ್ಲ, ಮನೆಯ ಆಡಳಿತವೆಲ್ಲ ಮಕ್ಕಳ ಕೈಯ್ಯಲ್ಲಿ. ಈ ವರ್ಷ ಟೂರಿಗೆ ಹೋಗುವುದೆಲ್ಲಿಗೆ, ಯಾವ ಕಾರ್ ತಗೋಬೇಕು ಮುಂತಾದ ಎಲ್ಲ ನಿರ್ಧಾರಗಳು ಮಕ್ಕಳೇ ಮಾಡುವುದು. ನಾವು ತಲೆತಗ್ಗಿಸಿದರೂ ಸರಿ, ನಮ್ಮ ಮಕ್ಕಳು ಯಾರ ಮುಂದೂ ತಲೆ ತಗ್ಗಿಸಬಾರದು.
ನಮ್ಮ ಮಕ್ಕಳಿಗೆ ಯಾರೂ ಏನೂ ಹೇಳಕೂಡದು. ಎಲ್ಲಿಯ ತನಕ ಎಂದರೆ ಮನೆಯ ಅಜ್ಜ ಅಜ್ಜಿ ಕೂಡಾ ಮಕ್ಕಳಿಗೆ ಏನೂ ಹೇಳುವ ಹಾಗಿಲ್ಲ. ಹಾಗೆ ಮಾಡಬೇಡ, ಹೀಗೆ ಮಾಡು ಅಂತ ತಾತ ಮೊಮ್ಮಗನಿಗೋ ಅಥವಾ ಮೊಮ್ಮಗಳಿಗೋ ಹೆಳಿದರೆ, ತಂದೆ ತಾಯಿಗಳು ಅದನ್ನು ತಮ್ಮ ಮಕ್ಕಳಿಗಾದ ಅವಮಾನವೆಂತಲೇ ಸ್ವೀಕರಿಸುವ ಪರಿಸ್ಥಿತಿ ಇದೆ ಈಗ. ನಾವು ಚಿಕ್ಕವರಿದ್ದಾಗ ನಮ್ಮ ಅಪ್ಪನನ್ನು ಏನಾದರೂ ಕೇಳಿದಾಗಲೆಲ್ಲ ಆತ ಇಲ್ಲಾ ಎಂದಿದ್ದೇ ಹೆಚ್ಚು.
ನಾವು ಏನು ಮಾಡಿದರೂ ಬಯ್ಯುತ್ತಿದ್ದವ, ಕುಂತರೂ ಸರಿಯಿಲ್ಲ ನಿಂತರೂ ಇಲ್ಲ. ಆದರೆ ಇಂದು ಆತ ಅತ್ಯಂತ ಗೌರವದಿಂದ ನೋಡುವ, ನಿಜವಾದ ಅರ್ಥದಲ್ಲಿ ಪ್ರೀತಿಸುವ ಪ್ರಾಣಿ. ಹೌದಾ ಅಲ್ವಾ ನೋಡಿ! ನಾವು ಅವನನ್ನು ಇಂದಿಗೂ ದೂಷಿಸುವುದಿಲ್ಲ, ಬೇರೆ ಯಾರಾದರೂ ದೂಷಿಸಿದರೆ ಸಹಿಸುವುದೂ ಇಲ್ಲ. ನನ್ನ ಅಪ್ಪ ಬಹಳ strict ಮನುಷ್ಯನಾಗಿದ್ದ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ.
ಕೆನ್ನೆ ಕೆಂಪಡರುವ ಹಾಗೆ ಬಾರಿಸಿದ್ದನ್ನು ಇಂದು ಅಭಿಮಾನದಿಂದ ಹೇಳಿಕೊಳ್ಳುತ್ತೇವೆ. ನನ್ನ ಅಪ್ಪ ಹಾಗಿದ್ದಿದ್ದರಿಂದ ಇಂದು ನಾನು ಹೀಗಿದ್ದೇನೆ ಎಂದು ಅಪ್ಪನ ಗುಣಕ್ಕೆ ಮಂಗಳ ಶಾಸನ ಮಾಡುತ್ತೇವೆ. ಅದೇ ಕೇಳಿದ್ದೆಲ್ಲ ಕೊಡಿಸಿದ ಸ್ನೇಹಿತನ ಹಾಗಿದ್ದ ಅಪ್ಪ ಹೇಗಿದ್ದಾನೆ ಎಂದು ನೋಡುವುದಾದರೆ, ಎಲ್ಲವನ್ನೂ ಕೊಡಿಸಿ ಯಾವುದೋ ಒಂದನ್ನು ಕೊಡಿಸಲಾಗದಿದ್ದಕ್ಕೆ ಅಪ್ಪನ ಜೊತೆ ಮಗ ಮಾತು ಬಿಟ್ಟಿದ್ದಾನೆ.
ಇವತ್ತು ಆತನ ಕಣ್ಣಲ್ಲಿ ಅಪ್ಪನನ್ನು ನೋಡುವುದಾದರೆ ಆತ ಖಳನಾಯಕನೇ ಸರಿ. ಮುಂಬೈನಲ್ಲಿ ಐಫೋನ್ಗಾಗಿ ತಂದೆತಾಯಿಯರನ್ನು ಆಟವಾಡಿಸಿ ಮೂವರೂ ಮಣ್ಣುಪಾಲಾಗುವಂತೆ ಮಾಡಿದ ಕಥೆ ನಮ್ಮ ಮುಂದಿದೆ. ನಿಮ್ಮ ಕಥೆ ಹೇಳ್ರೀ, ನಿಮಗೆ ಫೋನ್ ಯಾರು ಕೊಡಿಸಿದ್ದು ? ನಿಮ್ಮ ಬೈಕ್ಗೆ ಅಪ್ಪ ದುಡ್ಡು ಕೊಟ್ಟಿದ್ನಾ? ಪಟ್ಟಣದಲ್ಲಿ ಮನೆಕಟ್ಟಲು ಅಪ್ಪ ದುಡ್ಡು ಕೊಟ್ಟಿದ್ನಾ? ಪಾಕೆಟ್ ಮನಿ ನಿಮಗೆ ಸಿಕ್ತಾ ಇತ್ತಾ? ಇಲ್ಲ ಎನ್ನುವುದು ಉತ್ತರವಾದರೆ, ನೀವ್ಯಾಕೆ ಇದನ್ನೆ ನಿಮ್ಮ ಮಕ್ಕಳಿಗೆ ಮಾಡುತ್ತಿದ್ದೀರಿ? ಯೋಚಿಸಬೇಕಲ್ವಾ? ಒಂದು ವಯಸ್ಸಾದ ಮೇಲೆ ನಾವು ಎದುರಿಸಬೇಕಾಗಿ ಬರುವುದು ಎರಡೇ ಪ್ರಶ್ನೆಯಂತೆ, ಮೊದಲನೆಯದು ನಿಮ್ಮ ಆರೋಗ್ಯ ಹೇಗಿದೆ? ಎರಡನೆಯದು ನಿಮ್ಮ ಮಕ್ಕಳು ಏನು ಮಾಡ್ಕೊಂಡಿದಾರೆ? ಒಂದು ಕಾಲದ ನಂತರ ಎಷ್ಟು ಸೈಟ್ ಇದೆ, ಬಂಗಾರವೆಷ್ಟಿದೆ? ನೀವು ಎಷ್ಟು ದುಡ್ಡು ಮಾಡಿದ್ದೀರಿ? ಮುಂತಾದ ಪ್ರಶ್ನೆಗಳೇ ಬರುವುದಿಲ್ಲ ನೋಡಿ!
ಈ ಪ್ರಶ್ನೆಗಳಿಗೆ ಗರ್ವದಿಂದ ಉತ್ತರಿಸಬೇಕೆಂದರೆ ಪೂರ್ವತಯಾರಿ ಬೇಕು. ತಮ್ಮ ಮಕ್ಕಳು ಹೇಗಾಗಬೇಕೆಂದು ಬಯಸುತ್ತಾರೋ ಅದರ ತಯಾರಿಯನ್ನು ಪಾಲಕರು ಹುಟ್ಟಿನಿಂದ ಮಾಡಬೇಕು. ವಯಸ್ಸಾದ ಮೇಲೆ ದೇಹಾರೋಗ್ಯ ಒಂದು ಮಟ್ಟಕ್ಕಿರಬೇಕೆಂದರೆ ಜನ ಯುವಕರಾಗಿದ್ದಾಗಲೇ ಕೆಲಸಕ್ಕಿಳಿಯಬೇಕು ತಾನೆ? ಆ ಮಕ್ಕಳಿಗೂ ಜೀವನದಲ್ಲಿ ಒಂದು ಭಾಗ್ಯರೇಖೆಯಿರುತ್ತದೆ.
ಹಣೆಬರಹವನ್ನು ಅವರೂ ಸ್ವತಂತ್ರವಾಗಿ ಪಡೆದುಕೊಂಡು ಹುಟ್ಟಿಬಂದಿರುತ್ತಾರೆ. ಅಂದಮೇಲೆ, ನಾವೇ ಅವರ ಭಾಗ್ಯವನ್ನು ಬರೆಯುತ್ತೇನೆ ಅಂತ ಪಾಲಕರು ಅಂದುಕೊಂಡರೆ ಹೇಗೆ? ನೀವು ಏನೇ ಮಾಡಿದರೂ ಅವರ ಭಾಗ್ಯದಲ್ಲಿ ಏನಿದೆಯೋ ಅದೇ ಆಗೋದು. ನೋಡಿ ಬೇಕಾದ್ರೆ. ನಾನೇ ಎಲ್ಲ ಮಾಡುತ್ತೇನೆ ಎನ್ನುವುದು ಬರೇ ಭ್ರಮೆ ಮಾತ್ರ. ಪಾಲಕರ ಈ ಪೊಸೆಸಿವ್ ವರ್ತನೆ ಕೆಲವೊಮ್ಮೆ ಮಕ್ಕಳಿಗೂ ಮುಜುಗರ ವಾಗುವಂತೆ ಮಾಡುತ್ತದೆ. ಬಹುತೇಕ ಮಕ್ಕಳು ಅದನ್ನು ಇಷ್ಟಪಡುವುದಿಲ್ಲ ಕೂಡ. ಆದರೆ ಪಾಲಕರು ಬಿಡಬೇಕಲ್ಲ!
ಇನ್ನೂ ಒಂದು ವಿಷ್ಯ, ಮಕ್ಕಳಿಗೆ ಸ್ವಂತ ಏನಾದರೂ ಸಾಧನೆ ಮಾಡಿ ದೊರೆಯವ ಸುಖ ಏನಿದೆ, ಅದು ತಂದೆತಾಯಿಗಳು ದಯಪಾಲಿಸಿದ ಸುಖಕ್ಕಿಂತ ಬಹಳ ಹೆಚ್ಚು. ಪ್ರಾಣಿಪಕ್ಷಿಗಳಲ್ಲಿ ಇಲ್ಲದ ನಾಳಿನ ಚಿಂತೆ, ನಾನು ನನ್ನದು ಎನ್ನುವ ವ್ಯಾಮೋಹ, ನನ್ನಮಕ್ಕಳು ಮಾತ್ರ ಬೆಳೆಯಬೇಕು ಎನ್ನುವ ತುರುಸು ಮನುಷ್ಯ ಪ್ರಾಣಿಗಳಿಗೆ ಮಾತ್ರ ಜಾಸ್ತಿ ಏಕೋ ತಿಳಿಯದು.
ಇನ್ನು ರಾಜಕಾರಣಿಗಳ ಬಗ್ಗೆ ಹೇಳುವುದೇ ಬೇಡ. ಅವರ ಕಣ್ಣಮುಂದೆ ಅವರ ಮಕ್ಕಳು ಎಂಎಲ್ಎ ಅಥವಾ ಎಂಪಿ ಆದಾಗಲೇ ಇವರು ನೆಮ್ಮದಿಯಿಂದ ಕಣ್ಣು ಮುಚ್ಚುವುದು. ಮಕ್ಕಳ ಕುರಿತು ಹೆತ್ತವರಿಗೆ ಪ್ರೇಮವಿರಬೇಕು, ಆದರೆ ಕುರುಡು ವ್ಯಾಮೋಹವಿರಬಾರದು. ಅನುರಾಗವಿರಬೇಕು, ರಾಗವಿರಬಾರದು. ಒಂದೊಂದೇ ಮಕ್ಕಳಿರುವ ಈ ಕಾಲದಲ್ಲಿ ಈ ಹುಚ್ಚು ಇನ್ನೂ ಹೆಚ್ಚು. ಮಕ್ಕಳು ಹೇಗಿದ್ದರೂ ಸರಿ ಪಾಲಕರಿಗೆ ಅವರೇ ಸಾಮ್ರಾಟರು.
ಎಲ್ಲವೂ ಓಕೆ, ಆದರೆ ನಮ್ಮ ಮಕ್ಕಳು ನಮ್ಮ ಮೇಲೆಯೇ ತಿರುಗಿ ಬೀಳುವಾಗ, ನಮ್ಮ ಬಗ್ಗೆ ಅಗೌರವ ಹೊಂದಿದ್ದಾರೆ ಅನಿಸಲು ಪ್ರಾರಂಭವಾದಾಗಲೇ ಗಂಡ ಹೆಂಡತಿ ಒಟ್ಟಾಗಿ ಪ್ರತಿರೋಧಿಸ ಬೇಕಾಗುತ್ತದೆ. ಇಲ್ಲಿ ಎಡವಿದರೆ ಮುಂದೆ ಜೀವನಪೂರ್ತಿ ಅನುಭವಿಸಬೇಕಾಗಿ ಬರುತ್ತದೆ. ಸಾಮಾನ್ಯವಾಗಿ, ವಯಸ್ಸಿಗೆ ಬಂದ ಮಕ್ಕಳು ತಂದೆಗೆ ಎದುರು ನಿಂತು ಪ್ರಶ್ನೆಮಾಡಲು ಪ್ರಾರಂಭಿಸಿ ದರೆ, ನನಗೆ ಮಾಡಲಾಗದ ಕೆಲಸವನ್ನು, ಮಕ್ಕಳು ಮಾಡುತ್ತಿದ್ದಾರೆ ಎಂದು ತಾಯಿಯಾದವಳು ಹಿಗ್ಗಲು ಪ್ರಾರಂಭಿಸಿದರೆ ಅಥವಾ ತಾಯಿಗೆ ಆಡುವಾಗ ತಂದೆ ಅದನ್ನು ಎಂಜಾಯ್ ಮಾಡಿದರೆ ಆ ಮನೆಯ ಮಕ್ಕಳನ್ನು ದೇವರೂ ಕಾಪಾಡಲಾರ.
ತಂದೆಗೆ ಎದುರಾಡಿದರೆ ತಾಯಿಯೂ, ತಾಯಿಗೆ ಎದುರಾಡಿದರೆ ತಂದೆಯೂ ಮೊದಲು ಪ್ರತಿಭಟಿಸ ಬೇಕಾಗುತ್ತದೆ. ‘ಪ್ರಾಪ್ತೇಷು ಶೋಡಶೇ ವರ್ಷೆ ಪುತ್ರಂ ಮಿತ್ರವದಾಚರೇತ್’ ಎನ್ನುವ ಪ್ರಸಿದ್ಧ ವಚನವೊಂದಿದೆ. ಹದಿನಾರು ವರ್ಷಗಳು ದಾಟಿದ ಮಕ್ಕಳನ್ನು ಸ್ನೇಹಿತರಂತೆ ನೋಡಬೇಕಂತೆ. ಮಕ್ಕಳನ್ನು ಮಕ್ಕಳಾಗಿ ನೋಡಬೇಕಾದ ಅಗತ್ಯ ಇಂದು ಜಾಸ್ತಿ ಇದೆ ಎನ್ನುವುದು ನನ್ನ ಅನಿಸಿಕೆ, ನಮಗೂ ಹಾಗೂ ನಮ್ಮ ಮಕ್ಕಳಿಗೂ ಸ್ನೇಹಕ್ಕೆ ಜನ ಇದ್ದೇ ಇರುತ್ತಾರೆ.
ಇಬ್ಬರಿಗೂ ಇಂದು ಸ್ನೇಹಿತರ ಕೊರತೆಯಿಲ್ಲ, ತಂದೆ, ತಾಯಿಗಳಿಗೆ ನಿಜವಾದ ಮಕ್ಕಳ ಹಾಗೂ ಮಕ್ಕಳಿಗೆ ನಿಜವಾದ ತಂದೆ, ತಾಯಿಯರ ಕೊರತೆ ಇದೆ ಅಂತ ಅನಿಸೊಲ್ವಾ !? ಆದೇಶವೂ ಅಲ್ಲ, ಉಪದೇಶವೂ ಅಲ್ಲ ಅಥವಾ ಎಲ್ಲರೂ ಹೀಗೆ ಅಂತಲೂ ಅಲ್ಲ. ಬಹುತೇಕರನ್ನು ಬಾಧಿಸುತ್ತಿರುವ ವಿಷಯವಾದ್ದರಿಂದ ಚಿಂತನೆಯನ್ನು ಪ್ರಚೋದಿಸುವುದು ಮಾತ್ರ ಈ ಲೇಖನದ ಉದ್ದೇಶವಾಗಿದೆ.