ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಟ್ಯಾಕ್ಸಿ ಶಿಷ್ಟಾಚಾರ

ಜಪಾನಿನ ಟ್ಯಾಕ್ಸಿ ಚಾಲಕರು ತಮ್ಮನ್ನು ‘ದೇಶದ ರಾಯಭಾರಿ’ ಎಂದು ಭಾವಿಸಿರುತ್ತಾರೆ ಅಂತ ಹೇಳುವುದನ್ನು ಕೇಳಿದ್ದೆ. ಆದರೆ ಅಲ್ಲಿಗೆ ಹೋದಾಗ ಟ್ಯಾಕ್ಸಿಯಲ್ಲಿ ಎರಡು ಸಲ ಓಡಾಡಿದಾಗ, ಇದು ಮನವರಿಕೆಯಾಯಿತು. ಅಲ್ಲಿನ ಟ್ಯಾಕ್ಸಿ ಬಳಸುವಾಗ ಕೆಲವು ನಿಯಮಗಳನ್ನು ಅನು ಸರಿಸ‌ಬೇಕು. ಆ ಪೈಕಿ ಒಂದು ಪ್ರಮುಖ ನಿಯಮವೆಂದರೆ, ಟ್ಯಾಕ್ಸಿಯ ಬಾಗಿಲನ್ನು ತೆಗೆಯಲು ಪ್ರಯತ್ನಿಸಬಾರದು.

ಟ್ಯಾಕ್ಸಿ ಶಿಷ್ಟಾಚಾರ

ಜಪಾನ್ ತನ್ನ ಶಿಸ್ತಿನ ಶೈಲಿ, ಪರಿಪೂರ್ಣ ಸೇವೆ ಮತ್ತು ವಿಶೇಷ ಸಂಸ್ಕೃತಿಯ ಮೂಲಕ ಪ್ರಪಂಚದಾದ್ಯಂತ ಪ್ರಸಿದ್ಧ. ಅಂಥ ವಿಶಿಷ್ಟ ಸಂಸ್ಕೃತಿಯ ಭಾಗವಾಗಿ, ಅಲ್ಲಿ ಟ್ಯಾಕ್ಸಿ ಸೇವೆ ಯನ್ನು ಬಳಸುವಾಗ ವಿಶೇಷ ಮಾನದಂಡ ಮತ್ತು ಶಿಷ್ಟಾಚಾರಗಳಿವೆ. ಸಾಮಾನ್ಯವಾಗಿ ಈ ಸಂಗತಿಗಳ ಬಗ್ಗೆ ಯಾವ ಪ್ರವಾಸಿಗರೂ ಹೆಚ್ಚು ಯೋಚಿಸಿರುವುದಿಲ್ಲ. ಜಪಾನಿನ ಟ್ಯಾಕ್ಸಿ ಚಾಲಕರು ತಮ್ಮನ್ನು ‘ದೇಶದ ರಾಯಭಾರಿ’ ಎಂದು ಭಾವಿಸಿರುತ್ತಾರೆ ಅಂತ ಹೇಳುವುದನ್ನು ಕೇಳಿದ್ದೆ. ಆದರೆ ಅಲ್ಲಿಗೆ ಹೋದಾಗ ಟ್ಯಾಕ್ಸಿಯಲ್ಲಿ ಎರಡು ಸಲ ಓಡಾಡಿದಾಗ, ಇದು ಮನವರಿಕೆಯಾಯಿತು. ಅಲ್ಲಿನ ಟ್ಯಾಕ್ಸಿ ಬಳಸುವಾಗ ಕೆಲವು ನಿಯಮಗಳನ್ನು ಅನುಸರಿಸ ಬೇಕು. ಆ ಪೈಕಿ ಒಂದು ಪ್ರಮುಖ ನಿಯಮವೆಂದರೆ, ಟ್ಯಾಕ್ಸಿಯ ಬಾಗಿಲನ್ನು ತೆಗೆಯಲು ಪ್ರಯತ್ನಿಸಬಾರದು.

ಈ ಪದ್ಧತಿಗೆ ಹಲವು ವಿಶೇಷ ಕಾರಣಗಳಿವೆ ಮತ್ತು ಅದು ಜಪಾನಿನ ಸಂಸ್ಕೃತಿ ಮತ್ತು ಸೇವಾ ಮನೋಭಾವವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಜಪಾನಿನ ಬಹುತೇಕ ನಗರಗಳಲ್ಲಿ ಬಳ ಸುವ ಟ್ಯಾಕ್ಸಿಗಳು ಸ್ವಯಂಚಾಲಿತ ಬಾಗಿಲು ( Automatic Door) ವ್ಯವಸ್ಥೆ ಹೊಂದಿ ರುತ್ತವೆ. ಟ್ಯಾಕ್ಸಿ ಚಾಲಕರು ತಮ್ಮ ಸೀಟಿನಲ್ಲಿ ಕುಳಿತುಕೊಂಡೇ ಬಾಗಿಲನ್ನು ತೆರೆಯುವ ಮತ್ತು ಮುಚ್ಚುವ ವ್ಯವಸ್ಥೆಯನ್ನು ನಿಯಂತ್ರಿಸಬಹುದು.

ಇದನ್ನೂ ಓದಿ: Vishweshwar Bhat Column: ಸುಮೋ ಅಳುವ ಮಗು ಉತ್ಸವ

ಪ್ರಯಾಣಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ತಾವು ಲಗೇಜ್ ಹಿಡಿದಿದ್ದರೂ ಅಥವಾ ಕೈಗಳಲ್ಲಿ ವಸ್ತುಗಳನ್ನು ಹೊಂದಿದ್ದರೂ ಬಾಗಿಲು ತೆರೆಯಲು ಅಥವಾ ಮುಚ್ಚಲು ಶ್ರಮಪಡಬೇಕಿಲ್ಲ. ಟ್ಯಾಕ್ಸಿ ಬಾಗಿಲು ತೆರೆಯುವ ನಿರ್ವಹಣಾ ವ್ಯವಸ್ಥೆ ಯನ್ನು ಡ್ರೈವರ್‌ನೇ ನಿರ್ವಹಿಸುವುದರಿಂದ ಪ್ರಯಾಣಿಕರು ಸುರಕ್ಷಿತ.

ಸ್ವಯಂಚಾಲಿತ ಬಾಗಿಲುಗಳು ಪ್ರಯಾಣಿಕರನ್ನು ಟ್ರಾಫಿಕ್ ಅವಘಡಗಳಿಂದ ರಕ್ಷಿಸುವಲ್ಲಿ ಸಹಕಾರಿ. ಜಪಾನಿನ ನಗರಗಳಲ್ಲಿ ರಸ್ತೆ ಸಂಚಾರ ಬಹಳ ದಟ್ಟವಾಗಿರುತ್ತದೆ. ಪ್ರಯಾಣಿಕರು ತಾವು ಬಾಗಿಲು ತೆಗೆಯಲು ಪ್ರಯತ್ನಿಸಿದರೆ, ಇನ್ನೊಂದು ವಾಹನ ಡಿಕ್ಕಿ ಹೊಡೆಯುವ ಅಪಾಯವಿರುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಟ್ಯಾಕ್ಸಿ ಚಾಲಕರೇ ಬಾಗಿಲು ತೆರೆದು ಮುಚ್ಚುವ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ.

ಜಪಾನಿನ ಟ್ಯಾಕ್ಸಿ ಸೇವೆಗಳು ತಮ್ಮ ಶಿಷ್ಟಾಚಾರ ಮತ್ತು ನಾವೀನ್ಯಕ್ಕೂ ಪ್ರಸಿದ್ಧ. ಟ್ಯಾಕ್ಸಿ ಚಾಲಕರು ತಮ್ಮ ಸೇವೆಯನ್ನು ಗೌರವದೊಂದಿಗೆ ಸಲ್ಲಿಸುತ್ತಾರೆ. ಪ್ರಯಾಣಿಕರು ಟ್ಯಾಕ್ಸಿಯ ಬಾಗಿಲು ತೆರೆಯಲು ಅಥವಾ ಮುಚ್ಚಲು ಯತ್ನಿಸಿದರೆ, ಚಾಲಕರಿಗೆ ಅದು ಅಪಮಾನ ವೆಂಬಂತೆ ಕಾಣಬಹುದು, ಏಕೆಂದರೆ ಅದು ಅವರ ಸೇವಾ ಕರ್ತವ್ಯವೆಂದು ಪರಿಗಣಿ ಸಲಾಗುತ್ತದೆ.

ಜಪಾನಿನ ‘ಒಮೊತೆನಾಶಿ’ ಎಂಬ ಅತಿಥಿ ಸತ್ಕಾರದ ಸಂಸ್ಕೃತಿಯು ಟ್ಯಾಕ್ಸಿ ಸೇವೆಗಳಲ್ಲೂ ಪರಿಣಾಮ ಬೀರಿದೆ. ಈ ಮನೋಭಾವ ಪ್ರಯಾಣಿಕರು ಸುಗಮ, ಸುರಕ್ಷಿತ ಮತ್ತು ಆಕರ್ಷಕ ಅನುಭವವನ್ನು ಪಡೆಯುವಂತೆ ಮಾಡಿದೆ. ಟ್ಯಾಕ್ಸಿ ಹತ್ತುವಾಗ ಅಥವಾ ಇಳಿಯುವಾಗ ಕೆಲವು ಶಿಷ್ಟಾಚಾರ ಪಾಲಿಸುವುದು ಅಲ್ಲಿನ ಸಂಸ್ಕೃತಿಯಲ್ಲಿ ಸಹಜವಾಗಿದೆ. ಟ್ಯಾಕ್ಸಿಗೆ ಹತ್ತುವ ಮೊದಲು ಡ್ರೈವರ್ ಗಾಗಿ ಪ್ರೀತಿಯ ನಗು ಅಥವಾ ನಡು ಬಗ್ಗಿಸಿ ನಮಸ್ಕಾರ ಮಾಡುವುದು ಒಳ್ಳೆಯದು.

ಅದು ಚಾಲಕರಿಗೆ ಅವರ ಸೇವೆಗೆ ಮತ್ತು ವೃತ್ತಿಗೆ ಗೌರವ ಸಲ್ಲಿಸುವ ಸಂಕೇತವೂ ಹೌದು. ಬಹುತೇಕ ಟ್ಯಾಕ್ಸಿ ಚಾಲಕರು ಪ್ರಯಾಣಿಕರಿಗೆ ಧನ್ಯವಾದ ಹೇಳುವುದರೊಂದಿಗೆ ಸೇವೆ ಯನ್ನು ಮುಗಿಸುತ್ತಾರೆ. ಪ್ರಯಾಣಿಕರು ಸಹ ‘ಅರಿಗತೋ ಗೋಝೈಮಸ್ (Thank you very much) ಎಂದು ಧನ್ಯವಾದ ಹೇಳುವುದು ವಾಡಿಕೆ. ಜಪಾನಿನ ಟ್ಯಾಕ್ಸಿ ಸೇವೆಯಲ್ಲಿ ಹೈಟೆಕ್ ವ್ಯವಸ್ಥೆ ಅಪಾರವಾಗಿ ಬಳಕೆಯಾಗುತ್ತವೆ.

ಸ್ವಯಂಚಾಲಿತ ಬಾಗಿಲುಗಳ ಜತೆಗೆ, ಟ್ಯಾಕ್ಸಿ ಒಳಗಡೆ ಪಾವತಿ ಯಂತ್ರಗಳು, ನವೀಕೃತ ಜಿಪಿಎಸ್ ವ್ಯವಸ್ಥೆಗಳು, ಟ್ಯಾಕ್ಸಿಯೊಳಗಿನ ಗಾಳಿಯ ಶುದ್ಧ ಪ್ರಮಾಣ ಅಳೆಯುವ ಉಪ ಕರಣ ಮತ್ತು ಇಂಗ್ಲಿಷ್ ಭಾಷೆಯ ನೆರವು ಸಹ ಲಭ್ಯವಿರುತ್ತವೆ. ಈ ಸೇವೆಗಳು ಪ್ರವಾಸಿಗರಿಗೆ ಅನುಕೂಲಕರವಾಗಿದ್ದು, ಅವು ದೇಶದ ಶಿಸ್ತಿನ ಜೀವನ ಶೈಲಿಯನ್ನು ಪ್ರತಿಬಿಂಬಿಸುತ್ತವೆ. ಜಪಾನಿಗೆ ಪ್ರವಾಸ ಬರುವ ವಿದೇಶಿಗರು ಅನೇಕ ಬಾರಿ ಟ್ಯಾಕ್ಸಿ ಬಾಗಿಲು ತೆರೆಯಲು ಹಾತೊರೆಯಬಹುದು.

ಇದು ಅವರ ಸಂಸ್ಕೃತಿ ಅಥವಾ ತಮ್ಮದೇ ದೇಶದ ಪದ್ಧತಿಗಳಿಂದ ಪ್ರಭಾವಿತ ವಾಗಿರ ಬಹುದು. ಆದರೆ, ಜಪಾನಿನಲ್ಲಿ ಪ್ರವಾಸಿಗರಿಗೂ ಈ ಶಿಷ್ಟಾಚಾರವನ್ನು ಪಾಲಿಸಲು ಪ್ರೋತ್ಸಾಹ ನೀಡಲಾಗುತ್ತದೆ.