ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MarilingaGowda M Patil Column: ಹಿಂಬಾಲಕರ ಸಂಕಷ್ಟಗಳು: ಉಪ್ಪು ತಿಂದವನು ನೀರು ಕುಡಿಯಲೇಬೇಕು !

‘ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅರಿಯಬೇಕಾದರೆ ಅವನಿಗೆ ಅಧಿಕಾರ ಕೊಟ್ಟು ನೋಡು’ ಎಂದಿದ್ದಾರೆ ಹಿರಿಯರು. ಅಧಿಕಾರ ವ್ಯಕ್ತಿಗೆ ಅಮಲೇರಿಸುತ್ತದೆ. ಆತನ ನಿಜವಾದ ವ್ಯಕ್ತಿತ್ವವನ್ನು ಹೊರಗೆಡವುತ್ತದೆ. ಅಮಲಿನಲ್ಲಿ ವಾಸ್ತವ ಗೋಚರವಾಗುವುದಿಲ್ಲ. ತಾನು ಏನನ್ನು ಮಾಡಿದರೂ ದಕ್ಕಿಸಿಕೊಳ್ಳಬ ಎಂಬ ಮತಿಗೇಡಿತನ ಮಿದುಳನ್ನು ಆವರಿಸುತ್ತದೆ.

ಹಿಂಬಾಲಕರ ಸಂಕಷ್ಟಗಳು: ಉಪ್ಪು ತಿಂದವನು ನೀರು ಕುಡಿಯಲೇಬೇಕು !

-

Profile
Ashok Nayak Apr 21, 2026 9:01 AM

ನ್ಯಾಯದಾನ

ಮರಿಲಿಂಗಗೌಡ ಮಾಲಿ ಪಾಟೀಲ

ಆರೋಪಿಯನ್ನು ಅಪರಾಧಿಯೆಂದು ನ್ಯಾಯಾಧೀಶರು ಘೋಷಿಸಿದಾಗ ಅಪರಾಧಿ ನ್ಯಾಯಾಲಯ ದಲ್ಲಿ ಕಣ್ಣೀರಿಟ್ಟರು. ಚಿಕ್ಕ ಮಕ್ಕಳಿರುವುದರಿಂದ ಪ್ರಕರಣದ ಸೂತ್ರಧಾರಿಗೆ ಶಿಕ್ಷೆಯಲ್ಲಿ ರಿಯಾಯಿತಿ ನೀಡಲು ಅಪರಾಧಿ ಪರ ವಕೀಲರು ನ್ಯಾಯಾಧೀಶರಲ್ಲಿ ವಿನಂತಿಸಿಕೊಂಡರು. ಆದರೆ ಕೊಲೆ ಮಾಡಲು ನಿರ್ಧರಿಸಿದಾಗ, ರೆಸಾರ್ಟ್‌ನಲ್ಲಿ ಕೊಲೆಗೆ ಸ್ಕೆಚ್ ಹಾಕುತ್ತಿದ್ದಾಗ ಬಲಿಪಶುವಿಗೂ ಮಕ್ಕಳಿದ್ದಾರೆ ಎಂಬ ಯೋಚನೆ ಅಪರಾಧಿಗೆ ಬರಲಿಲ್ಲವೇ? ‘ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು’ ಎಂದು ಸರ್ವಜ್ಞ ಹೇಳಿದ್ದು ಇದನ್ನೆ.

ತನ್ನ ಮಕ್ಕಳಿಗೆ ಅಪ್ಪ ಬೇಕು. ಆದರೆ, ಬೇರೆ ಮಕ್ಕಳ ಅಪ್ಪನನ್ನು ತಾನು ಕೊಲ್ಲಿಸಬಹುದೇ? ಎಂದು ಯೋಚಿಸಬೇಕಿತ್ತಲ್ಲವೇ? ಜೀವ ಕೊಡಲು ಸಾಧ್ಯವಿಲ್ಲದ ಯಾರಿಗೂ ಜೀವ ತೆಗೆಯುವ ಹಕ್ಕಿಲ್ಲ ಎನ್ನುವುದು ನ್ಯಾಯ. ಆದರೆ ಹಣ, ಯೌವನ, ಅಧಿಕಾರದ ಮದಗಳು ವಿವೇಕವನ್ನು ಆಕ್ರಮಿಸಿದಾಗ ಮನುಷ್ಯನಿಗೆ ನ್ಯಾಯ ಮರೆತು ಹೋಗುತ್ತದೆ.

‘ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅರಿಯಬೇಕಾದರೆ ಅವನಿಗೆ ಅಧಿಕಾರ ಕೊಟ್ಟು ನೋಡು’ ಎಂದಿದ್ದಾರೆ ಹಿರಿಯರು. ಅಧಿಕಾರ ವ್ಯಕ್ತಿಗೆ ಅಮಲೇರಿಸುತ್ತದೆ. ಆತನ ನಿಜವಾದ ವ್ಯಕ್ತಿತ್ವವನ್ನು ಹೊರಗೆಡವುತ್ತದೆ. ಅಮಲಿನಲ್ಲಿ ವಾಸ್ತವ ಗೋಚರವಾಗುವುದಿಲ್ಲ. ತಾನು ಏನನ್ನು ಮಾಡಿದರೂ ದಕ್ಕಿಸಿಕೊಳ್ಳಬಲ್ಲೆ ಎಂಬ ಮತಿಗೇಡಿತನ ಮಿದುಳನ್ನು ಆವರಿಸುತ್ತದೆ.

ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂಬಂತೆ ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇ ಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವಿನಯ್ ಕುಲಕರ್ಣಿಗೆ ಏನು ಕಡಿಮೆ ಆಗಿತ್ತು? ರಾಜಕೀಯ ಕ್ಷೇತ್ರದಲ್ಲಿ ತನ್ನ ಬದುಕು ರೂಪಿಸಿಕೊಳ್ಳಲು ನಿರ್ಧರಿಸಿದ ಬಳಿಕ ಮಾಡಿದ ಸಾಧನೆ ಶ್ಲಾಘನೀಯವಾದದ್ದು.

ಇದನ್ನೂ ಓದಿ: Marilinga Gowda Mali Patil Column: ರಾಜ್ಯ ಕ್ರಿಕೆಟಿಗೆ ಕಾಯಕಲ್ಪ ಅನಿವಾರ್ಯವಾಗಿದೆ..

ಪಕ್ಷೇತರನಾಗಿ ಚುನಾವಣೆ ಗೆದ್ದು, ರಾಜ್ಯದ ಪ್ರಬಲ ಪಕ್ಷವನ್ನು ಸೇರಿ ಸಚಿವರಾದದ್ದು ಗಮನಾರ್ಹ ಸಾಧನೆ. ವಾಂಶಿಕ ಹಿನ್ನೆಲೆಯಿತ್ತು, ಪಕ್ಷದ ಬೆಂಬಲವಿತ್ತು, ಹಣ, ಅಧಿಕಾರ, ವಯಸ್ಸು ಎಲ್ಲವೂ ಇತ್ತು. ತನ್ನ ಸನ್ನಡತೆಯಿಂದ, ಜನಪರ ಕೆಲಸಗಳಿಂದ ಸಮಾಜದಲ್ಲಿದ್ದ ಒಳ್ಳೆಯ ಸ್ಥಾನ ಉಳಿಸಿ ಕೊಳ್ಳುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ, ಅವಿವೇಕದ, ಅಧಿಕಾರ ಲಾಲಸೆಯ ಒಂದು ತಪ್ಪು ನಡೆ ಎಲ್ಲವನ್ನೂ ಹಾಳುಗೆಡವಿದೆ.

ಮುಖಂಡ ಇಂಥ ನಿರ್ಧಾರ ತೆಗೆದುಕೊಂಡಾಗ ಅದಕ್ಕೆ ಆತನ ಹಿಂಬಾಲಕರು ತಲೆ ಕೊಡಬೇಕಾಗು ತ್ತದೆ. ಹಿಂಬಾಲಕನಾಗುವುದಾಗಲಿ, ಬೆಂಬಲಿಗನಾಗುವುದಾಗಲಿ ಖಂಡಿತ ತಪ್ಪಲ್ಲ. ‘ಎಲ್ಲರೂ ಆಡುವ ಬಾಯಿಗಳಾದರೆ ಚಪ್ಪಾಳೆಗಳಿಗೆ ಕೈ ಎಲ್ಲಿ’? ಎಂಬ ಪ್ರಸಿದ್ಧ ಮಾತಿನಂತೆ ಚಪ್ಪಾಳೆಗಳನ್ನು ಹೊಡೆಯುವ ಕೈಗಳಿದ್ದರೆ ಮಾತ್ರ ಭಾಷಣ ಮಾಡುವವರು ಇರುತ್ತಾರೆ.

ಹಾಗಾಗಿ ನಾಯಕ ಮತ್ತು ಬೆಂಬಲಿಗ ಎಂಬ ಎರಡು ಪಾತ್ರಗಳು ಬದುಕಿನಲ್ಲೂ ಇರುವುದು ಸಹಜ. ಎಲ್ಲರೂ ನಾಯಕರಾಗುವುದು ಸಾಧ್ಯವೂ ಇಲ್ಲ. ವಿಶಿಷ್ಟ, ವಿಭಿನ್ನ ವ್ಯಕ್ತಿತ್ವಗಳಿಗೆ, ಸಾಧಕರಿಗೆ ಜನರು ಮನಸೋಲುವುದು ಸ್ವಾಭಾವಿಕ. ಅವರ ಪ್ರಭಾವಕ್ಕೆ ಒಳಗಾಗಿ ಅಭಿಮಾನಿಗಳಾಗುವುದು ಸಹಜ. ಪ್ರಸಿದ್ಧ ಸಾಹಿತಿಗಳಿಗೆ, ಚಿತ್ರಕಲಾವಿದರಿಗೆ, ಗಾಯಕರಿಗೆ ಅಭಿಮಾನಿಗಳಿರುವಂತೆ ರಾಜಕೀಯ ನಾಯಕರಿಗೂ ಅಭಿಮಾನಿಗಳಿರುತ್ತಾರೆ.

Vinay K

ಇನ್ನು ಕೆಲವರಿಗೆ ಬೆಂಬಲಿಗರಾಗುವುದು ಒಂದು ವೃತ್ತಿಯೂ ಆಗಿರುತ್ತದೆ. ಅದು ಅವರ ಬದುಕಿನ ಪ್ರಶ್ನೆ. ಒಬ್ಬ ವ್ಯಕ್ತಿಗೆ ಹಿಂಬಾಲಕನಾಗಿ ಬದುಕು ಕಟ್ಟಿಕೊಳ್ಳುತ್ತೇನೆ ಎನ್ನುವವರು ಒಂದು ಕ್ಷಣ ಯೋಚಿಸಬೇಕಿದೆ. ‘ಹಿಂಬಾಲಕನಾಗುವವನು ಯಾರಿಗೆ ಹಿಂಬಾಲಕ’? ಎಂಬುದನ್ನೂ ಯೋಚಿಸ ಬೇಕು. ಬಾಲಕರಿಗೆ ಬೆಳವಣಿಗೆ ಇದೆ. ಬಹುತೇಕ ಹಿಂಬಾಲಕರಿಗೆ ಬೆಳವಣಿಗೆ ಇಲ್ಲ. ಅವರು ಯಾವತ್ತಾದರೂ ಹಿಂಬಾಲಕರಾಗಿಯೇ ಉಳಿಯಬೇಕು.

ನಾಯಕ ಒಳ್ಳೆವಯನಾಗಿದ್ದರೆ ಹಿಂಬಾಲಕರಾಗಿ ಉಳಿದೂ ಸಾರ್ಥಕತೆ ಕಂಡುಕೊಳ್ಳಬಹುದು. ಯಜಮಾನ ದುಷ್ಟನಾಗಿದ್ದರೆ ತಾನು ಪಾತಾಳಕ್ಕೆ ಬೀಳುವುದರ ಜತೆಗೆ ಹಿಂಬಾಲಕನನ್ನೂ ಎಳೆದು ಕೊಳ್ಳುತ್ತಾನೆ. ಬಸವರಾಜ ಮುತಗಿಯ ಮನೆಗೆ ಪೊಲೀಸರಿಂದ ಬಿಗಿ ಬಂದೋಬಸ್ತ್ ಎಂಬ ಸುದ್ದಿ ಯಲ್ಲಿಯೇ ಅವರ ಮುಂದಿನ ದಿನಗಳು ಕಷ್ಟಕರ ಎಂಬ ಸೂಚನೆ ಇದೆ. ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಹೊರಟದ್ದಕ್ಕೆ ಬಸವರಾಜ್ ಮುತಗಿ ಎಂಬ ಹಿಂಬಾಲಕ ನೀಡಬೇಕಾದ ಕಂದಾಯ ವಿದು.‌ ಯಜಮಾನ ಹೇಳಿದಂತೆ ನಡೆದುಕೊಳ್ಳಬೇಕಾದ ಅನಿವಾರ್ಯತೆ ಹಿಂಬಾಲಕರಿಗಿದೆ. ಇಲ್ಲದಿದ್ದರೆ ಹಿಂಬಾಲಕನ ಜೀವಕ್ಕೂ ಸಂಚಕಾರ!

ಹಾಗೆಂದು ಯಜಮಾನ ತಪ್ಪು ದಾರಿಯಲ್ಲಿ ನಡೆಯಲು ನಿರ್ಧರಿಸಿದಾಗ ಹಿಂಬಾಲಕ ಬುದ್ಧಿ ಹೇಳುವುದು ಸಾಧ್ಯವೇ? ಬುದ್ಧಿ ಹೇಳಿದರೆ ಯಜಮಾನ ಕೇಳುತ್ತಾನೆಯೇ? ಹೀಗೆ ಯಜಮಾನನಿಂದ ಒತ್ತಡಕ್ಕೊಳಗಾಗಿ ತಪ್ಪು ದಾರಿಯಲ್ಲಿ ನಡೆದ ಬಳಿಕ ಏನೇ ಪಶ್ಚಾತ್ತಾಪವಾದರೂ ಸರಿದಾರಿಯಲ್ಲಿ ನಡೆಯಲು ಪ್ರಯತ್ನಿಸಿದರೂ ಬದುಕು ದುರಂತವಾಗುತ್ತದೆ. ಬಸವರಾಜ್ ಮುತಗಿಯ ಬದುಕಿನಲ್ಲಿ ಸಂಭವಿಸಿದ ದುರಂತಕ್ಕೆ ವಿನಯ್ ಕುಲಕರ್ಣಿಯ ಹಿಂಬಾಲಕನಾಗಿದ್ದು ಕಾರಣವಲ್ಲದೇ ಇನ್ನೇನು?

ಮಾಜಿ ಸಚಿವ ವಿನಯ್ ಕುಲಕರ್ಣಿ, ಯೋಗೀಶ್ ಗೌಡರನ್ನು ತನ್ನ ಎದುರಾಳಿ ಎಂದು ಭಾವಿಸದೆ, ವೈರಿ ಎಂದು ಭಾವಿಸಿದರೇ? ಬದುಕಿನ ಸೊಗಸಿರುವುದೇ ಸ್ಪರ್ಧೆಯಲ್ಲಿ. ತನಗೊಬ್ಬ ಪ್ರಬಲ ಪ್ರತಿಸ್ಪರ್ಧಿ ಇದ್ದಾನೆ ಎಂದು ಅರಿವಾದ ತಕ್ಷಣ ಸ್ಪರ್ಧೆ ಇನ್ನಷ್ಟು ಬಿರುಸಾಗುತ್ತದೆ. ಜನಪರ ಕೆಲಸ ಗಳನ್ನು ಮಾಡುವುದು ಅನಿವಾರ್ಯವಾಗುತ್ತದೆ.

ಸ್ಪರ್ಧೆಯಲ್ಲಿ ಹೇಗೂ ಒಂದು ಹೆಜ್ಜೆ ಮುಂದಿದ್ದಾತನಿಗೆ ಮುಂದಿನ ಸ್ಪರ್ಧೆ ಸುಲಭ. ರಾಜಕೀಯ ದಲ್ಲಿ ಎದುರಾಳಿಗಳನ್ನು ಮುಗಿಸುವುದೆಂದರೆ ಆತ ಹಗರಣವನ್ನು ಮಾಡಿದ್ದರೆ ಬಯಲಿಗೆಳೆಯು ವುದು, ತಾನು ಸ್ವಚ್ಛ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಎದುರಾಳಿ ತನ್ನ ಚಾರಿತ್ರ್ಯ ಹನನವನ್ನು ಮಾಡದಂತೆ ಎಚ್ಚರಿಕೆಯಿಂದಿರುವುದು, ಜನಪರ ಕೆಲಸಗಳ ಮೂಲಕ ಜನರ ಹೃದಯದಲ್ಲಿ ಸ್ಥಾನಗಳಿಸುವುದು, ಪಕ್ಷನಿಷ್ಠೆಯ ಮೂಲಕ ಪಕ್ಷದ ಹಿರಿಯರ ಬೆಂಬಲಗಳಿಸುವುದು, ಇಷ್ಟಾಗಿಯು ಪಕ್ಷ ತನ್ನನ್ನು ಕಡೆಗಣಿಸುತ್ತದೆ ಎಂಬ ಭಾವನೆ ಮೂಡಿದರೆ ಸಮಯ ಸಂದರ್ಭ ನೋಡಿಕೊಂಡು ಲಾಭದಾಯಕ ಪಕ್ಷಾಂತರ ಮಾಡಿ ರಾಜಕೀಯದಲ್ಲಿ ಮೇಲೇರುವುದು.

ಇದು ಯಾವುದು ಗಣಿತದಲ್ಲಿರುವಂತೆ ಸಿದ್ಧ ಸೂತ್ರಗಳಲ್ಲ. ಬದಲಿಗೆ ಸಂದರ್ಭಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಚಾಣಾಕ್ಷತೆಯನ್ನು ಪ್ರದರ್ಶಿಸುವುದು. ಆದರೆ, ಸ್ಪರ್ಧಾಳುವನ್ನೇ ಇಲ್ಲವಾಗಿಸಿ ಸ್ಪರ್ಧೆ ಗೆಲ್ಲುವ ವಿನಾಶಕಾರಿ ಯೋಜನೆ ವಿನಯ್ ಕುಲಕರ್ಣಿಯ ಮಿದುಳಿನಲ್ಲಿ ಅಂಕುರಿಸುತ್ತದೆ. ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತನ್ನ ಬೆಂಬಲಿಗನನ್ನು ಸೋಲಿಸಿದ್ದು ವಿನಯ್ ಕುಲಕರ್ಣಿಯ ನಿದ್ರೆಗೆಡಿಸುತ್ತದೆ. ಮುಂದೆ ಈತ ತನ್ನ ಸ್ಥಾನಕ್ಕೂ ಸಂಚಕಾರ ತರಬಹುದು ಎಂಬ ಯೋಚನೆಯಿಂದ ಇಂಥ ದುಷ್ಕೃತ್ಯಕ್ಕೆ ಕೈಹಾಕುತ್ತಾನೆ. ದುರಂತವೆಂದರೆ ಆಗ ಆತನಿಗೆ ವಿವೇಕ ಹೇಳುವವರು ಯಾರೂ ಇರಲಿಲ್ಲ. ಸಚಿವರ ಅಧಿಕಾರ ದುರ್ಬಳಕೆಗೆ ಪೊಲೀಸ್ ಅಧಿಕಾರಿಗಳೂ ಕೈ ಜೋಡಿಸಿದರು.

ರೆಸಾರ್ಟ್‌ನಲ್ಲಿ ಹತ್ಯೆಗೆ ಸ್ಕೆಚ್ ರೂಪಿಸಲ್ಪಟ್ಟಿತು. ಯೋಗೀಶ್ ಗೌಡರದೇ ಜಿಮ್ ನಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಲಾಯಿತು. ರಾಜಕೀಯ ಪ್ರಭಾವದಿಂದ ತನಿಖೆಯ ದಾರಿ ತಪ್ಪಿಸುವ ಕೆಲಸ ವ್ಯವಸ್ಥಿತವಾಗಿ ನಡೆಯಿತು. ಪೊಲೀಸರನ್ನು ಬಳಸಿಕೊಂಡು ಸಾಕ್ಷಿ ನಾಶ ಯಶಸ್ವಿಯಾಯಿತು. ಬಹುತೇಕ ಅಪರಾಧಿ ಬಚಾವಾಗುವ ಎಲ್ಲ ಸಾಧ್ಯತೆಗಳೂ ಇತ್ತು. ಆದರೆ, ಸರಕಾರ ಬದಲಾಯಿತು.

ಪ್ರಕರಣ ಸಿಬಿಐ ಕೈಗೆ ಸೇರಿತು. ತನಿಖೆಯ ದಿಕ್ಕು ಬದಲಾಯಿತು. ಆರೋಪಿಗಳಲ್ಲಿ ಮಾಫಿ ಸಾಕ್ಷಿಗಳು ಹುಟ್ಟಿಕೊಂಡರು. ಜೀವಂತ ಸಾಕ್ಷಿಗಳನ್ನು ಬೆದರಿಸಬಹುದು, ಆಮಿಷ ವೊಡ್ಡಬಹುದು. ಆದರೆ ಡಿಜಿಟಲ್ ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದು ಸಾಧ್ಯವೇ ಇಲ್ಲ ಎಂಬುದು ಸಾಧ್ಯವಾಯಿತು.

ಪ್ರಕರಣದ ತನಿಖೆ, ವಿಚಾರಣೆ ಪೂರ್ತಿಯಾಗಿ ಸೆಶನ್ಸ್ ಕೋರ್ಟ್‌ನಲ್ಲಿ ಸಚಿವರೂ ಸೇರಿದಂತೆ ಹದಿನಾರು ಜನರಿಗೆ ಜೀವಾವಧಿ ಶಿಕ್ಷೆ ಘೋಷಣೆಯಾಯಿತು. ಈ ಪ್ರಕರಣದಿಂದ ಯಾರಿಗೆ ಏನು ಪಾಠ? ಯಜಮಾನನ ಮದವನ್ನೇ ಬೆಂಬಲಿಗರು ಹೊಂದಿರುವುದು ಸಹಜ. ಯಜಮಾನ ಚೆಲ್ಲುವ ದುಡ್ಡು ಹಿಂಬಾಲಕನಿಂದ ಹಾಗೆ ಮಾಡಿಸುತ್ತದೆ. ಆದರೆ, ನಿಜವಾದ ಬೆಂಬಲಿಗ ನಾಯಕ ತಪ್ಪು ದಾರಿಯಲ್ಲಿ ಹೆಜ್ಜೆ ಹಾಕಿದಾಗ ಸರಿಯಾದ ಮಾರ್ಗದರ್ಶನ ಮಾಡಬೇಕು. ಅದನ್ನು ನಾಯಕ ಕೇಳುತ್ತಾನೋ, ಬಿಡುತ್ತಾನೋ ಬೇರೆ ಮಾತು. ‌

ಸೀತೆಯನ್ನು ಕದ್ದು ತಂದ ರಾವಣನನ್ನು ವಿಭೀಷಣ ಬೆಂಬಲಿಸಲಿಲ್ಲ. ರಾವಣನಿಗೆ ಬುದ್ಧಿ ಹೇಳಿದ. ಆತ ಕೇಳದಿದ್ದಾಗ ರಾವಣನನ್ನು ತೊರೆದು ರಾಮನಿಗೆ ಶರಣಾದ. ಇಂಥದ್ದನ್ನೆಲ್ಲಾ ಇಂದಿನ ಬದುಕಿನಲ್ಲಿ ನಿರೀಕ್ಷಿಸುವುದು ಸಾಧ್ಯವಿಲ್ಲವಾದರೂ ಒಂದು ಹಂತದಲ್ಲಿ ಪಾಪಪ್ರಜ್ಞೆ ಮೂಡಿ ಸತ್ಯ ಹೇಳಲು ಸಿದ್ಧರಾದ ನಂತರ ಏನೇ ಬೆದರಿಕೆಗಳು ಬಂದರೂ ಆತ್ಮಸಾಕ್ಷಿ ಹೇಳಿದಂತೆ ನಡೆದುಕೊಂಡ ಮುತಗಿ ಅಭಿನಂದನಾರ್ಹರು.

ಹತ್ಯೆಗೆ ಕುಲಕರ್ಣಿ ಸಿದ್ಧನಾದಾಗ ವಿವೇಕ ಹೇಳುವವರು ಯಾರೂ ಇರಲಿಲ್ಲ. ಸ್ವಾರ್ಥಕ್ಕೆ ವಶನಾದ ಮನುಷ್ಯ ಎಲ್ಲವನ್ನೂ ಮರೆಯುತ್ತಾನೆ. ಬೇರೆಯವರ ಅನುಭವ ಪಾಠ ಕಲಿಸುವುದಿಲ್ಲ. ತಾನು ಏನು ಮಾಡಿದರೂ ದಕ್ಕಿಸಿಕೊಳ್ಳಬ ಎಂಬ ಅಹಂ ತಲೆಯೆತ್ತುತ್ತದೆ. ಕೊಲೆ ಮಾಡಿಸಿ ತಮ್ಮ ಹಣದಿಂದ ಅಮಾಯಕರನ್ನು ಸರೆಂಡರ್ ಮಾಡಿಸಿ ತಾನು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಲ್ಲೆ ಎಂಬ ಕುರುಡು ಆತ್ಮವಿಶ್ವಾಸ ಬೆಳೆಯುತ್ತವೆ. ಅದೇ ಎಲ್ಲ ದುರಂತಗಳ ಬೀಜವಾಗುತ್ತದೆ.

ಪುರಾಣದ ಕಂಸ ನೆನಪಾಗುತ್ತಾನೆ! ಆತನಿಗೂ ಎಲ್ಲವೂ ಇತ್ತು. ತಂದೆ ಉಗ್ರಸೇನನನ್ನು ಕಾರಾಗೃಹಕ್ಕೆ ಅಟ್ಟಿ ತಾನೇ ಮಥುರೆಯ ರಾಜನಾಗಿದ್ದ. ಅಪರಿಮಿತವಾಗಿ ಪ್ರೀತಿಸುತ್ತಿದ್ದ ತಂಗಿ ದೇವಕಿಗೆ ವಸುದೇವ ನೊಂದಿಗೆ ಮದುವೆ ಮಾಡಿಸಿದ್ದ. ವಸುದೇವ-ದೇವಕಿಯರನ್ನು ರಥದಲ್ಲಿ ಕುಳ್ಳಿರಿಸಿ ತಾನೇ ರಥದ ಸಾರಥಿಯಾಗಿ ನಗರದಲ್ಲಿ ವಿಜೃಂಭಣೆಯ ಮೆರವಣಿಗೆ ಮಾಡಿಸುತ್ತಿದ್ದ. ಆಗ ಆತನಿಗೆ ಅಶರೀರ ವಾಣಿ ಕೇಳಿಸುತ್ತದೆ- ದೇವಕಿಯ ಗರ್ಭದಲ್ಲಿ ಜನಿಸುವ ಎಂಟನೇ ಶಿಶು ನಿನ್ನ ಮರಣಕ್ಕೆ ಕಾರಣ ನಾಗುತ್ತಾನೆ ಎಂದು. ಅಂದರೆ ಕಂಸನಿಗೆ ಕನಿಷ್ಠ ಎಂಟು ವರ್ಷಗಳ ಅವಧಿಯ ಬದುಕು ಇದೆ ಎಂದು ಅಶರೀರ ವಾಣಿ ಹೇಳಿತ್ತು. ಆ ಎಂಟು ವರ್ಷಗಳನ್ನು ಸಾರ್ಥಕವಾಗಿ ಬದುಕುವುದು ಹೇಗೆ ಎಂದು ಕಂಸ ಯೋಚಿಸಿದ್ದರೆ ಸಾಕಿತ್ತು.

ಜನೋಪಕಾರಿ ರಾಜನಾಗಿ, ದೈವ ಮೆಚ್ಚುವಂತೆ ಬದುಕಿ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳ ಬಹುದಿತ್ತು. ಆದರೆ, ಕಂಸ ದೈವವಾಣಿಯನ್ನು ತಿದ್ದುವುದಕ್ಕೆ ಪ್ರಯತ್ನಿಸಿದ. ಸುದೇವ-ದೇವಕಿ ಯರನ್ನು ಸೆರೆಮನೆಯಲ್ಲಿರಿಸಿದ. ಆಕೆಗೆ ಜನಿಸಿದ ಆರು ಮಕ್ಕಳನ್ನು ಕ್ರೂರವಾಗಿ ಕೊಂದ. ಆದರೆ ಕಂಸನ ಪ್ರಯತ್ನವನ್ನು ಮೀರಿ ಏಳು ಮತ್ತು ಎಂಟನೇ ಶಿಶುಗಳು ಉಳಿದುಕೊಂಡವು.

ಎಂಟನೇ ಮಗು ಕಂಸನ ಮರಣಕ್ಕೆ ಕಾರಣವಾಯಿತು. ಪುರಾಣಗಳನ್ನು ಓದಿದರೆ ನಮ್ಮ ಬದುಕಿಗೆ ಅಲ್ಲಿ ಪಾಠಗಳಿವೆ. ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ಯೋಚಿಸುವ ವಿವೇಕ ಮನುಷ್ಯನಿಗಿದೆ. ಆದರೆ ಅಧಿಕಾರ, ಹಣ ಬಲದ ಕುರುಡು ನಂಬಿಕೆಯಲ್ಲಿ ಏನು ಮಾಡಿದರೂ ಬಚಾವಾಗಬ ಎಂಬ ಅಹಂಭಾವ ಬದುಕಿನಲ್ಲಿ ದುರಂತಗಳನ್ನು ತರುತ್ತದೆ.

ಇದು ಇಲ್ಲಿಗೇ ಕೊನೆಯಾಗುವುದಿಲ್ಲ. ಕಾನೂನಿನ ಹೋರಾಟದ ಹಾದಿ ತುಂಬಾ ಗಹನವಾದದ್ದು. ಆದರೆ ಯಾವತ್ತಿದ್ದರೂ ಶಿಕ್ಷೆ ಮಾತ್ರ ಕಟ್ಟಿಟ್ಟ ಬುತ್ತಿ. ಜೈಲಿನಲ್ಲಿ ದಿನಗಳನ್ನು ಸವೆಸುವುದು ಎಷ್ಟು ಕಠಿಣ ಎನ್ನುವುದು ಈಗಾಗಲೇ ಅರಿವಾಗಿರುತ್ತದೆ. ಅನ್ಯರ ಬದುಕು ಪ್ರತಿಯೊಬ್ಬನಿಗೂ ಪಾಠವಾಗ ಬೇಕು. ಇನ್ನೊಂದು ಹೈ ಪ್ರೊಫೈಲ್ ರಾಜಕೀಯ ಹತ್ಯೆಯ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಎದುರಾಳಿಯನ್ನು ಸೋಲಿಸುವುದೆಂದರೆ ಆತನನ್ನು ಮೀರಿ ಬೆಳೆಯುವುದೇ ಹೊರತಾಗಿ ಆತನನ್ನು ಅಳಿಸುವ ಪ್ರಯತ್ನವಲ್ಲ ಎಂಬ ವಿವೇಕ ಸಾರ್ವಕಾಲಿಕ ಸತ್ಯ.

ನಮ್ಮ ಬದುಕು ನಮ್ಮ ಕೈಯ್ಯಲ್ಲಿದೆಯೇ ಹೊರತು, ಇನ್ನೊಬ್ಬರ ಬದುಕನ್ನು ಅಂತ್ಯಗೊಳಿಸಿ ನಮ್ಮ ಬದುಕನ್ನು ರೂಪಿಸುವ ಪ್ರಯತ್ನಗಳು ದುರಂತದಲ್ಲಿ ಅಂತ್ಯವಾಗುತ್ತದೆ. ನಮ್ಮ ಸನ್ನಡತೆ, ಒಳ್ಳೆಯ ಕೆಲಸಗಳು ನಮ್ಮ ಬದುಕಿಗೆ ಭದ್ರ ಕೋಟೆಯಾಗುತ್ತದೆ. ದುಷ್ಟ ಯೋಚನೆಗಳಿಂದ ನಾವು ಕಟ್ಟಿದ ಕೋಟೆ ಶಿಥಿಲವಾಗಿ ಕುಸಿಯುತ್ತದೆ. ನಾಯಕನ ಯಶಸ್ಸಿನಲ್ಲಿ ಪಾತ್ರ ಪಡೆಯ ಬಯಸುವವರು, ನಾಯಕ ತಪ್ಪಿದಾಗ ತಿದ್ದುವ ಜವಾಬ್ದಾರಿಯನ್ನು ತೆಗೆದುಕೊಳ್ಳಲೇಬೇಕಿದೆ.

ಈ ಪ್ರಕರಣವನ್ನು ಅರಿತು ರಾಜಕೀಯ ನಾಯಕರ ಮಾತುಗಳಿಗೆ ಜೈಕಾರ ಹಾಕುವ ಯುವ ಪೀಳಿಗೆ ಸರಿದಾರಿಗೆ ಬಂದು ನಿಮ್ಮ ಬದುಕು ಕಟ್ಟಿಕೊಳ್ಳಬೇಕಾಗಿದೆ. ಇಲ್ಲವಾದರೆ ನಾಯಕರ ಮಾತುಗಳೇ ವೇದವಾಕ್ಯ ಎಂದು ಭಾವಿಸಿ ಕಾನೂನಿನ ವಿರುದ್ಧ ನಡೆದರೆ ಶ್ರೀಕೃಷ್ಣನ ಜನ್ಮಸ್ಥಾನ ಕಟ್ಟಿಟ್ಟ ಬುತ್ತಿ ಎನ್ನವುದು ಮರಿಯಬೇಡಿ!