#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Roopa Gururaj Column: ಅಪರಿಚಿತರಿಗಿಂತ, ನಮ್ಮವರು ಕೊಡುವ ಪೆಟ್ಟು ದೊಡ್ಡದು

ಒಂದು ದಿನ ಅಕ್ಕಸಾಲಿಗನು ಕೆಲಸ ಮಾಡುವಾಗ ಚಿನ್ನದ ಒಂದು ತುಣುಕು ಸಿಡಿದು ಕಮ್ಮಾರನ ಕುಲುಮೆಗೆ ಬಿತ್ತು. ಅಲ್ಲಿ ಅದು ಒಂದು ಕಬ್ಬಿಣದ ತುಣುಕನ್ನು ಭೇಟಿಯಾಯಿತು. ಆಗ ಚಿನ್ನದ ತುಣುಕು ಕಬ್ಬಿಣದ ತುಣುಕಿಗೆ ಹೇಳಿತು ಸಹೋದರ, ‘ನಮ್ಮಿಬ್ಬರ ಕಷ್ಟ-ದುಃಖವು ಸಮಾನವಾಗಿದೆ, ನಮ್ಮಿಬ್ಬ ರನ್ನೂ ಒಂದೇ ರೀತಿಯಲ್ಲಿ ಬೆಂಕಿಯಲ್ಲಿ ಚೆನ್ನಾಗಿ ಬಿಸಿ ಮಾಡುತ್ತಾರೆ ಮತ್ತು ಸುತ್ತಿಗೆಯ ಏಟಿನ ಹೊಡೆತ ಗಳ ಚಿತ್ರಹಿಂಸೆಗಳನ್ನು ಅನುಭವಿಸಬೇಕಾಗುತ್ತದೆ

Roopa Gururaj Column: ಅಪರಿಚಿತರಿಗಿಂತ, ನಮ್ಮವರು ಕೊಡುವ ಪೆಟ್ಟು ದೊಡ್ಡದು

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಬ್ಬ ಅಕ್ಕಸಾಲಿಗನ ಅಂಗಡಿಯ ಪಕ್ಕದಲ್ಲೇ ಒಬ್ಬ ಕಮ್ಮಾರನ ಕುಲುಮೆ ಇತ್ತು. ತನ್ನ ಅಂಗಡಿಯಲ್ಲಿ ಕೆಲಸ ಮಾಡುವಾಗ ಅಕ್ಕಸಾಲಿಗನಿಗೆ ತುಂಬಾ ಸಣ್ಣದಾದ ಶಬ್ದವು ಕೇಳಿಸುತ್ತಿತ್ತು. ಆದರೆ ಕಮ್ಮಾ‌ ರನು ತನ್ನ ಕುಲುಮೆಯಲ್ಲಿ ಕೆಲಸ ಮಾಡುವಾಗ ಅಲ್ಲಿಂದ ಕಿವಿಯ ಒಳತಮಟೆಯು ಹರಿದೇ ಹೋಗುವುದೇನೋ ಎಂಬಷ್ಟು ಕರ್ಕಶವಾಗಿ ಶಬ್ದ ಬರುತ್ತಿತ್ತು.

ಒಂದು ದಿನ ಅಕ್ಕಸಾಲಿಗನು ಕೆಲಸ ಮಾಡುವಾಗ ಚಿನ್ನದ ಒಂದು ತುಣುಕು ಸಿಡಿದು ಕಮ್ಮಾರನ ಕುಲುಮೆಗೆ ಬಿತ್ತು. ಅಲ್ಲಿ ಅದು ಒಂದು ಕಬ್ಬಿಣದ ತುಣುಕನ್ನು ಭೇಟಿಯಾಯಿತು. ಆಗ ಚಿನ್ನದ ತುಣುಕು ಕಬ್ಬಿಣದ ತುಣುಕಿಗೆ ಹೇಳಿತು ಸಹೋದರ, ‘ನಮ್ಮಿಬ್ಬರ ಕಷ್ಟ-ದುಃಖವು ಸಮಾನವಾಗಿದೆ, ನಮ್ಮಿಬ್ಬರನ್ನೂ ಒಂದೇ ರೀತಿಯಲ್ಲಿ ಬೆಂಕಿಯಲ್ಲಿ ಚೆನ್ನಾಗಿ ಬಿಸಿ ಮಾಡುತ್ತಾರೆ ಮತ್ತು ಸುತ್ತಿಗೆಯ ಏಟಿನ ಹೊಡೆತಗಳ ಚಿತ್ರಹಿಂಸೆಗಳನ್ನು ಅನುಭವಿಸಬೇಕಾಗುತ್ತದೆ.

ಇದನ್ನೂ ಓದಿ: ‌Roopa Gururaj Column: ಮೂರು ಉಳಿಸುವ ಸ್ವಾರ್ಥದಿಂದ ಆರು ನಷ್ಟ

ಆದರೆ ನಾನು ನನ್ನ ನೋವುಗಳನ್ನು ಮೌನವಾಗಿ ಸಹಿಸುತ್ತೇನೆ, ಆದರೆ ನೀನು ತುಂಬಾ ಆಕ್ರಂದನ ಮಾಡುವೆ ಏಕೆ?’ ಎಂದಿತು. ಅದಕ್ಕೆ ಕಬ್ಬಿಣದ ತುಣುಕು ಹೇಳಿತು ‘ನೀನು ಹೇಳಿದ್ದು ಸರಿ, ಆದರೆ ನಿನ್ನ ಮೇಲೆ ಏಟಿನ ಹೊಡೆತಗಳನ್ನು ಕೊಡುವ ಸುತ್ತಿಗೆಯು ನಿನ್ನ ಸ್ವಂತ ಸಹೋದರನಲ್ಲ. ಆದರೆ ನನಗೆ ಹೊಡೆಯುವ ದಪ್ಪ ಕಬ್ಬಿಣದ ಸುತ್ತಿಗೆಯು ನನ್ನ ನಿಜವಾದ ಸ್ವಂತ ಸಹೋದರ.

ಅದಕ್ಕೇ ನಾನು ಆಘಾತದಿಂದ ಕಿರುಚುತ್ತೇನೆ’ ಎಂದು ದುಃಖದಿಂದ ಉತ್ತರಿಸಿತು. ಸ್ವಲ್ಪಹೊತ್ತು ಸುಮ್ಮನಿದ್ದ ಕಬ್ಬಿಣದ ಕಣವು ಮತ್ತೆ ಹೇಳಿತು ‘ನಮ್ಮ ಸ್ವಂತದವರಿಂದ, ಪ್ರೀತಿಪಾತ್ರರಿಂದ ಉಂಟಾ ಗುವ ಗಾಯದ ನೋವು, ಅಪರಿಚಿತರು ಮಾಡುವ ನೋವಿಗಿಂತ ಹೆಚ್ಚು ಅಸಹನೀಯ ಅಲ್ಲವೇ?’ ಕುಟುಂಬದಲ್ಲಿ, ಸ್ನೇಹ ವಲಯದಲ್ಲಿ ನಾವು ಅನೇಕರಿಗೆ ಬಹಳ ಪ್ರೀತಿ ನಂಬಿಕೆಯಿಂದ ಸಹಾಯ ಮಾಡುತ್ತಿರುತ್ತೇವೆ.

ಅವರೂ ನಮ್ಮವರೇ, ಇಂದು ನಾವು ಅವರಿಗಾದರೆ ನಾಳೆ ನಮ್ಮ ಕಷ್ಟದ ಪರಿಸ್ಥಿತಿಯಲ್ಲಿ ಅವರು ನಮಗೆ ನೆರವಾಗುತ್ತಾರೆ ಎನ್ನುವ ದೂರದ ಆಲೋಚನೆಯೂ ನಮ್ಮಲ್ಲಿ ಇರುತ್ತದೆ. ಆದರೆ ಬದುಕಿನ ಲೆಕ್ಕಾಚಾರಗಳು ನಾವು ಅಂದುಕೊಂಡಂತೆ ಇರುವುದಿಲ್ಲ. ಹಣ, ಆಸ್ತಿ, ಅಧಿಕಾರ, ಇದು ಎಂತಹವರ ಮನಸ್ಸನ್ನು ಬೇಕಾ ದರೂ ಕೆಡಿಸಿಬಿಡುತ್ತದೆ. ಅಣ್ಣ-ತಮ್ಮಂದಿರು ದಾಯಾದಿಗಳಾಗಿ ಬಿಡುತ್ತಾರೆ.

ಅಕ್ಕ-ತಮ್ಮ ಬಾಂಧವ್ಯವನ್ನೇ ಮರೆತು ಹಾವು-ಮುಂಗುಸಿಯಂತೆ ಆಸ್ತಿ, ಹಣಕ್ಕಾಗಿ ಹೊಡೆದಾಡ ತೊಡಗುತ್ತಾರೆ. ಒಬ್ಬರ ಮೇಲೊಬ್ಬರು ವಿಷ ಕಾರುತ್ತಾ ಶಾಪ ಹಾಕುತ್ತಾ ಬದುಕನ್ನು ನರಕ ಮಾಡಿ ಕೊಂಡು ಬಿಡುತ್ತಾರೆ. ಒಡಹುಟ್ಟಿದವರೇ ಹೀಗಾದ ಮೇಲೆ, ಇನ್ನು ಚಿಕ್ಕಪ್ಪ- ದೊಡ್ಡಪ್ಪಂದಿರ ಮಕ್ಕಳು ಜೀವಕ್ಕೆ ಹಾನಿ ಮಾಡುವುದಕ್ಕೂ ಒಮ್ಮೊಮ್ಮೆ ಇಂದು ಮುಂದೆ ನೋಡುವುದಿಲ್ಲ.

ಇಂತಹ ಅದೆಷ್ಟೋ ಸಾವಿರಾರು ಆಸ್ತಿ ವಿವಾದಗಳು ಇಂದಿಗೂ ಕೂಡ ಕೋರ್ಟಿನಲ್ಲಿ ಧೂಳು ಹೊಡೆ ಯುತ್ತಾ ಬಿದ್ದಿವೆ. ಕೆಲವರು ಅಸುನೀಡಿದ್ದರೂ ಕೂಡ ಅವರ ಆಸ್ತಿವ್ಯಾಜ್ಯ ಇನ್ನೂ ಬಗೆ ಹರಿದಿಲ್ಲ. ಯಾರೋ ಗೊತ್ತಿಲ್ಲದವರು ಬಂದು ಮೋಸ ಮಾಡಿ ದುಡ್ಡು ಹೊಡೆದುಕೊಂಡು ಹೋದಾಗ ಅವರ ಮೇಲೆ ಪೊಲೀಸ್ ಕಂಪ್ಲೇಂಟ್ ಅಥವಾ ಮತ್ತಾವುದಾದರೂ ದೂರು ಕೊಟ್ಟು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬಹುದು.

ನಮ್ಮವರೇ ನಮ್ಮ ನಂಬಿಕೆಗೆ ಪೆಟ್ಟು ನೀಡಿದಾಗ, ಆಗುವ ಆಘಾತ ಬಹಳ ದೊಡ್ಡದು. ಎಲ್ಲಕ್ಕಿಂತ ಹೆಚ್ಚಾಗಿ ಅನೇಕ ಬಾರಿ ನಮಗೆ ಮೋಸವಾಗುವುದು ಏನೂ ಅರಿಯದ ಅಪರಿಚಿತರಿಂದ ಅಲ್ಲ. ನಮ್ಮ ಬಗ್ಗೆ ಎಲ್ಲ ವಿವರಗಳನ್ನು ತಿಳಿದಿರುವ, ನಮ್ಮ ಮನೆಯ ಒಳ ಹೊರಗನ್ನ ಬಹಳ ಚೆನ್ನಾಗಿ ಅರಿತಿರುವ ನಮ್ಮವರಿಂದ. ಕೆಲವರ ಮನೆಯಲ್ಲಿ ಬಹಳಷ್ಟು ವರ್ಷ ಬಹಳ ನಂಬಿಕೆಯಿಂದ ಕೆಲಸ ಮಾಡಿದವರೇ. ಮನೆಯವರು ಇಲ್ಲದಿದ್ದಾಗ ಕಳ್ಳತನ ಮಾಡಿಬಿಡುತ್ತಾರೆ.

ಆದ್ದರಿಂದಲೇ ಯಾರನ್ನು ಅತಿಯಾಗಿ ನಂಬಬಾರದು. ನಮ್ಮ ಹುಷಾರಿನಲ್ಲಿ ನಾವಿರಬೇಕು. ಅನಗತ್ಯವಾದ ಮಾಹಿತಿ, ಅತಿಯಾದ ಸಲಿಗೆ ಎಂದಿಗೂ ಒಳ್ಳೆಯದಲ್ಲ. ಯಾರ ಮನಸ್ಸು ಯಾವಾಗ ಎಂತಹ ಪರಿಸ್ಥಿತಿಯಲ್ಲಿ ನಮ್ಮ ವಿರುದ್ಧ ತಿರುಗುತ್ತದೆ ಎಂದು ಕಂಡವರು ಯಾರು ಇಲ್ಲ. ಹಣ-ಆಸ್ತಿ ಎಂತಹವರ ಮನಸ್ಸನ್ನೂ ಕೆಡಿಸಿಬಿಡುತ್ತದೆ. ಅದಕ್ಕೆ ಆಸ್ಪದ ಕೊಡದೆ ನಮ್ಮ ಹುಷಾರಿನಲ್ಲಿ ನಾವಿದ್ದು ಸಂಬಂಧಗಳನ್ನು ಕೂಡ ಚೆನ್ನಾಗಿ ನಿಭಾಯಿಸಿಕೊಳ್ಳೋಣ.