ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಇಸ್ರೇಲ್‌ ಮಿಲಿಟರಿಯಲ್ಲಿ ಯುದ್ಧದಲ್ಲಿ ಗಾಯಗೊಂಡ ಪ್ರಾಣಿಗಳ ಚಿಕಿತ್ಸೆಗೂ ಒಂದು ಘಟಕ !

ಒಂದು ವೇಳೆ ಪ್ರಾಣಿಗಳು ಗಾಯಗೊಂಡರೆ ಅವುಗಳನ್ನು ರಕ್ಷಿಸುವ ಮತ್ತು ಚಿಕಿತ್ಸೆ ನೀಡುವ ವಿಶೇಷ ಘಟಕವನ್ನು ಐಡಿಎಫ್ ಹೊಂದಿದೆ. ಇದು ಪ್ರಾಣಿಗಳ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುವ‌ ಒಂದು ಅನನ್ಯ ಉಪಕ್ರಮ. ಈ ಘಟಕವು ಇಸ್ರೇಲ್‌ನ ಆರ್ಮಿ ವೆಟರಿನರಿ ಕಾರ್ಪ್ಸ್ ( Army Veterinary Corps ) ನ ಒಂದು ಭಾಗವಾಗಿದೆ.‌

ಯುದ್ಧದಲ್ಲಿ ಗಾಯಗೊಂಡ ಪ್ರಾಣಿಗಳ ಚಿಕಿತ್ಸೆಗೂ ಒಂದು ಘಟಕ !

-

ಇದೇ ಅಂತರಂಗ ಸುದ್ದಿ

vbhat@me.com

ಪ್ರಾಯಶಃ ಇಂಥದ್ದೊಂದು ಘಟಕ ಯಾವ ದೇಶದ ಸೇನೆಯಲ್ಲೂ ಇದ್ದಿರಲಿಕ್ಕಿಲ್ಲ. ಇಸ್ರೇಲ್ ರಕ್ಷಣಾ ಪಡೆಗಳಲ್ಲಿ (Israel Defense Forces- IDF) ಒಂದು ವಿಶೇಷ ಚಿಕಿತ್ಸಾ ಘಟಕವಿದೆ. ಯುದ್ಧದಲ್ಲಿ ಸೈನಿಕರು ಅಥವಾ ನಾಗರಿಕರು ಗಾಯಗೊಂಡರೆ ಅವರಿಗೆ ಚಿಕಿತ್ಸೆ ನೀಡುವುದು ಸಾಮಾನ್ಯ. ಆದರೆ ಪ್ರಾಣಿಗಳು ಗಾಯಗೊಂಡರೆ? ಹೌದು, ಯುದ್ಧದಲ್ಲಿ ಮನುಷ್ಯರೊಂದೇ ಅಲ್ಲ, ಪ್ರಾಣಿಗಳೂ ಗಾಯ ಗೊಳ್ಳಬಹುದು.

ಒಂದು ವೇಳೆ ಪ್ರಾಣಿಗಳು ಗಾಯಗೊಂಡರೆ ಅವುಗಳನ್ನು ರಕ್ಷಿಸುವ ಮತ್ತು ಚಿಕಿತ್ಸೆ ನೀಡುವ ವಿಶೇಷ ಘಟಕವನ್ನು ಐಡಿಎಫ್ ಹೊಂದಿದೆ. ಇದು ಪ್ರಾಣಿಗಳ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುವ‌ ಒಂದು ಅನನ್ಯ ಉಪಕ್ರಮ. ಈ ಘಟಕವು ಇಸ್ರೇಲ್‌ನ ಆರ್ಮಿ ವೆಟರಿನರಿ ಕಾರ್ಪ್ಸ್ ( Army Veterinary Corps ) ನ ಒಂದು ಭಾಗವಾಗಿದೆ.‌

ಇದರ ಮುಖ್ಯ ಕಾರ್ಯವೆಂದರೆ ಯುದ್ಧದ ಅಥವಾ ಸೈನ್ಯದ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು ಮತ್ತು ರಕ್ಷಿಸುವುದು. ಈ ಘಟಕವು ಕೇವಲ ಸೇನೆಯಲ್ಲಿರುವ ಪ್ರಾಣಿಗಳಿಗೆ ಸೀಮಿತವಾಗಿಲ್ಲ, ಬದಲಾಗಿ ಯುದ್ಧ ಅಥವಾ ಭದ್ರತಾ ಕಾರ್ಯಾಚರಣೆಗಳ ಸಮಯ ದಲ್ಲಿ ಗಾಯಗೊಂಡ ನಾಗರಿಕ ಪ್ರಾಣಿಗಳಿಗೂ ಸಹಾಯ ಮಾಡುತ್ತದೆ.

Screenshot_2 R

ಯುದ್ಧದ ವೇಳೆ ಗಾಯಗೊಂಡ ಪ್ರಾಣಿಗಳಿಗೆ, ಅದರಲ್ಲೂ ವಿಶೇಷವಾಗಿ ಮಿಲಿಟರಿ ಶ್ವಾನಗಳಿಗೆ ( military dogs) ತುರ್ತು ವೈದ್ಯಕೀಯ ಸೇವೆ ನೀಡುವುದು ಈ ಘಟಕದ ಪ್ರಮುಖ ಜವಾಬ್ದಾರಿ ಯಾಗಿದೆ. ಈ ಘಟಕದ ಸದಸ್ಯರು ಪಶುವೈದ್ಯರಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಪ್ರಾಣಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಸಹ ಮಾಡುತ್ತಾರೆ.

ಇಸ್ರೇಲ್ ರಕ್ಷಣಾ ಪಡೆಗಳು ಹಲವು ಕಾರ್ಯಾಚರಣೆಗಳಲ್ಲಿ ಶ್ವಾನಗಳನ್ನು ಬಳಸಿಕೊಳ್ಳುತ್ತವೆ. ಈ ಶ್ವಾನಗಳಿಗೆ ಅಗತ್ಯವಾದ ಆರೋಗ್ಯ ತಪಾಸಣೆ, ಪೋಷಣೆ ಮತ್ತು ತರಬೇತಿ ನೀಡುವ ಜವಾಬ್ದಾರಿ ಈ ಘಟಕದ ಮೇಲಿದೆ. ಯುದ್ಧ ಪರಿಸರದಲ್ಲಿ ಸಿಲುಕಿರುವ ಅಥವಾ ಗಾಯಗೊಂಡಿರುವ ನಾಗರಿಕ ಪ್ರಾಣಿಗಳನ್ನು ರಕ್ಷಿಸಿ ಅವುಗಳಿಗೆ ಚಿಕಿತ್ಸೆ ನೀಡುವುದು ಈ ಘಟಕದ ಮಾನವೀಯ ಮುಖವನ್ನು ತೋರಿಸುತ್ತದೆ.

ಇದನ್ನು ಕೆಲವು ಸಲ ಸಾರ್ವಜನಿಕ ಸಂಬಂಧದ ಒಂದು ಭಾಗವೆಂದು ಪರಿಗಣಿಸಲಾಗುತ್ತದೆ. ಯುದ್ಧ ವಲಯದಲ್ಲಿ ಪ್ರಾಣಿಗಳು ವಿಷಪೂರಿತ ವಸ್ತುಗಳನ್ನು ಸೇವಿಸುವುದನ್ನು ತಡೆಯಲು ಅಥವಾ ಗಾಯಗೊಂಡ ಪ್ರಾಣಿಗಳಿಗೆ ರಕ್ತದಾನ ನೀಡುವ ತುರ್ತು ಸೇವೆಗಳನ್ನು ಈ ಘಟಕ ಒದಗಿಸು ತ್ತದೆ.

Screenshot_5 R

ಇಸ್ರೇಲ್ ಸೇನೆಯ ಈ ವಿಶೇಷ ಘಟಕವು ಪ್ರಾಣಿ ಕಲ್ಯಾಣ ಮತ್ತು ಮಾನವೀಯ ಮೌಲ್ಯಗಳಿಗೆ ಇಸ್ರೇಲ್‌ನ ಸೈನಿಕರು ನೀಡುವ ಗೌರವದ ಪ್ರತೀಕವಾಗಿದೆ. ಇದು ಇಡೀ ಸೈನ್ಯದ ನೈತಿಕ ಸ್ಥೈರ್ಯ ವನ್ನು ಹೆಚ್ಚಿಸುತ್ತದೆ ಮತ್ತು ಪ್ರಾಣಿಗಳನ್ನು ಕೇವಲ ಮಿಲಿಟರಿ ಸಾಧನಗಳಾಗಿ ನೋಡದೇ ಅವುಗಳ ಜೀವಕ್ಕೂ ಬೆಲೆ ಕೊಡುವ ಒಂದು ಉದಾತ್ತ ಕ್ರಮವಾಗಿದೆ. ಈ ರೀತಿ ಪ್ರಾಣಿಗಳನ್ನು ರಕ್ಷಿಸುವ ಕಾರ್ಯವು ಇತರ ದೇಶಗಳ ಸೇನಾಪಡೆಗಳಿಗೂ ಒಂದು ಪ್ರೇರಣೆಯಾಗಿದೆ.

ಪ್ರಾಣಿಗಳ ರಕ್ಷಣೆಯು ಮಾನವೀಯತೆ ಮತ್ತು ಸಾಮಾಜಿಕ ಮೌಲ್ಯವನ್ನು ಸೂಚಿಸುತ್ತದೆ. ಯುದ್ಧ ಅಥವಾ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಸಿಕ್ಕಿಬಿದ್ದ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಈ ಘಟಕದ ಪಾತ್ರ ದೊಡ್ಡದು. 2006ರ ಲೆಬನಾನ್ ಯುದ್ಧದ ಸಮಯದಲ್ಲಿ ಈ ಘಟಕವು ಸಾವಿರಾರು ಪ್ರಾಣಿಗಳಿಗೆ ಚಿಕಿತ್ಸೆ ನೀಡಿ ಅವುಗಳನ್ನು ರಕ್ಷಿಸಿತ್ತು.

ಹೀಗಾಗಿ, ಇದು ಕೇವಲ ಒಂದು ಮಿಲಿಟರಿ ಘಟಕವಾಗಿ ಕಾರ್ಯನಿರ್ವಹಿಸದೇ, ಅದನ್ನು ಮೀರಿದ ಒಂದು ಮಾನವೀಯ ಮುಖದ ಅನಾವರಣ ಮಾಡುತ್ತದೆ. ಯುದ್ಧ ವಲಯದಲ್ಲಿ ಸಾಕುಪ್ರಾಣಿ ಗಳಿಂದ ಅಥವಾ ಕಾಡುಪ್ರಾಣಿಗಳಿಂದ ಸೈನಿಕರಿಗೆ ಸಾಂಕ್ರಾಮಿಕ ರೋಗ ಹರಡದಂತೆ ಈ ಘಟಕ ಕ್ರಮಗಳನ್ನು ಕೈಗೊಳ್ಳುತ್ತದೆ.

ಮಿಲಿಟರಿ ಶ್ವಾನಗಳು ಸೈನಿಕರಿಗೆ ಅತ್ಯುತ್ತಮ ಸಂಗಾತಿಗಳು. ಜತೆಯಲ್ಲಿ ನಾಯಿಯಿದ್ದರೆ ಮತ್ತಷ್ಟು ಧೈರ್ಯ. ಹೀಗಾಗಿ, ತಮ್ಮ ಜತೆಗಿರುವ ಪ್ರಾಣಿಗಳಿಗೆ ಉತ್ತಮ ಚಿಕಿತ್ಸೆ ಸಿಗುತ್ತದೆ ಎಂಬ ನಂಬಿಕೆ ಸೈನಿಕರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಯುದ್ಧದ ಸಂದರ್ಭದಲ್ಲಿ ನಾಗರಿಕ ಪ್ರಾಣಿಗಳನ್ನು ರಕ್ಷಿಸುವುದು ಆ ಪ್ರದೇಶದ ಜನರಿಗೆ ಇಸ್ರೇಲ್ ಸೇನೆಯ ಬಗ್ಗೆ ಒಳ್ಳೆಯ ಭಾವನೆ ಮೂಡಿಸಲು ಸಹಾಯಕ. ಇದು ಸೈನ್ಯದ ಮತ್ತು ನಾಗರಿಕ ಜನರ ಸಂಬಂಧವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.

2023ರ ಗಾಜಾ ಯುದ್ಧದಲ್ಲಿ 29 ಶ್ವಾನಗಳು ತೀವ್ರವಾಗಿ ಗಾಯಗೊಂಡಿದ್ದವು. ಪ್ರಾಣಿ ಘಟಕದ ವೈದ್ಯರ ಪರಿಶ್ರಮದಿಂದ ಅವು ಬದುಕುಳಿದವು. ಪುಂಬಾ ಎಂಬ ನಾಯಿ ಗ್ರೆನೇಡ್ ಸ್ಫೋಟದಲ್ಲಿ ಕಾಲು ಕಳೆದುಕೊಂಡರೂ, ಚಿಕಿತ್ಸೆಯ ನಂತರ ಮತ್ತೆ ನಡೆಯಲು ಕಲಿತದ್ದು ಈ ಘಟಕದ ದೃಢ ಸಂಕಲ್ಪವನ್ನು ತೋರಿಸುತ್ತದೆ. ಇಸ್ರೇಲ್‌ನ ಸೇನೆ ಈ ವಿಷಯದಲ್ಲಿ ಇತರೆ ದೇಶಗಳಿಗೆ ಒಂದು ಉತ್ತಮ ಉದಾಹರಣೆಯಾಗಿದೆ. ಹಲವು ದೇಶಗಳು ಇಸ್ರೇಲ್‌ನ ಈ ರೀತಿಯ ಕಾರ್ಯಾಚರಣೆಗಳನ್ನು ತಮ್ಮಲ್ಲೂ ಅಳವಡಿಸಿಕೊಂಡಿರುವುದು ಗಮನಾರ್ಹ.

ಇದನ್ನೂ ಓದಿ: Vishweshwar Bhat Column: ಜೈಲ್‌ ಸಿಂಗ್‌ ಸಣ್ಣತನ

ಸಾಕುಪ್ರಾಣಿಗಳ ರಕ್ಷಣೆ

ಕ್ಷಿಪಣಿ ಅಥವಾ ಬಾಂಬ್ ದಾಳಿಯಿಂದ ಮನೆಗಳು ಧ್ವಂಸವಾದರೆ, ಜನರ ಜತೆ ನಾಯಿ, ಬೆಕ್ಕುಗಳು ಸಾಯುವುದುಂಟು. ಕೆಲವು ಸಂದರ್ಭದಲ್ಲಿ ಸಾಕುಪ್ರಾಣಿಗಳು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿ ಒzಡುವುದು ಸಾಮಾನ್ಯ. ಇಂಥ ಸಂದರ್ಭದಲ್ಲಿ ಇಸ್ರೇಲಿ ಸೈನಿಕರು ಸಾಕುಪ್ರಾಣಿಗಳನ್ನು ರಕ್ಷಿಸಲು ಜೀವದ ಹಂಗು ತೊರೆದು ಹೆಣಗುತ್ತಾರೆ. ಗಾಯಗೊಂಡ ಸಾಕುಪ್ರಾಣಿಗಳನ್ನು ನಾಗರಿಕರು ದತ್ತು ಪಡೆಯುತ್ತಾರೆ. ಟೈಗ್ರಿಸ್ ಎಂಬ ನಾಯಿಯನ್ನು ಒಬ್ಬ ಸೈನಿಕ ದತ್ತು ತೆಗೆದುಕೊಂಡ ಕಥೆಯು ಇಸ್ರೇಲ್‌ನ ಸೈನಿಕರ ಮಾನವೀಯತೆಗೆ ಬರೆದ ಭಾಷ್ಯದಂತಿದೆ.

ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಭೀಕರ ಯುದ್ಧದಲ್ಲಿ ಗಾಜಾದಲ್ಲಿ ಸೈನಿಕರು ರಕ್ಷಿಸಿ ದತ್ತು ತೆಗೆದುಕೊಂಡ ವಿಲ್ಲಿ ಮತ್ತು ಬಿಲ್ಲಿ ಎಂಬ ನಾಯಿಗಳ ಕಥೆ ಕರುಣಾಜನಕ. ಒಮ್ರಿ ವಕ್ನಿನ್ ಎಂಬ ಇಸ್ರೇಲಿ ಸೈನಿಕ ಗಾಜಾದಲ್ಲಿನ ಒಂದು ಶಾಲೆಯ ಬಳಿ ಈ ನಾಯಿಯನ್ನು ಕಂಡ. ಅದು ಭಯದಿಂದ ನಡುಗುತ್ತಿತ್ತು.

ಒಮ್ರಿ ಅದರ ಬಳಿ ಹೋದಾಗ ಅದು ಓಡಿಹೋಯಿತು. ನಾಯಿಯ ವಿಶ್ವಾಸ ಗಳಿಸಲು ಮೀನು ತುಂಬಿದ ಡಬ್ಬಿಯನ್ನು ತೆರೆದು ಅದರ ಪಕ್ಕದಲ್ಲಿ ಇಟ್ಟ. ನಾಯಿ ನಿಧಾನವಾಗಿ ಬಂದು ಅದನ್ನು ತಿನ್ನಲು ಆರಂಭಿಸಿತು. ವಿಲ್ಲಿ ಬೇರೆ ನಾಯಿಗಳೊಂದಿಗೆ ಹೊಂದಿಕೊಳ್ಳದೇ ಪ್ರತ್ಯೇಕವಾಗಿ ಇರುವುದನ್ನು ಒಮ್ರಿ ಗಮನಿಸಿದ. ಗಾಜಾದಿಂದ ಹೋಗುವಾಗ ಇದನ್ನು ತನ್ನೊಂದಿಗೆ ಕರೆದು ಕೊಂಡು ಹೋಗಲು ನಿರ್ಧರಿಸಿದ.

ಆದರೆ ಮೇಲಧಿಕಾರಿಗಳು ನಾಯಿಯನ್ನು ಕರೆದುಕೊಂಡು ಹೋಗಲು ಅನುಮತಿ ನೀಡಲಿಲ್ಲ. ಆಗ ಒಮ್ರಿ ಇನ್ಸ್ಟಾಗ್ರಾಮ್‌ನಲ್ಲಿ ಆ ನಾಯಿಯ ಫೋಟೋವನ್ನು ಹಾಕಿ, ತನ್ನ ಮನದ ಇಂಗಿತವನ್ನು ಹಂಚಿಕೊಂಡು, ಸಾರ್ವಜನಿಕರ ಸಹಾಯ ಕೋರಿದ. ಅವನ ಮನವಿಗೆ ಸಾವಿರಾರು ಜನರು ಸ್ಪಂದಿಸಿದರು. ಕೆಲವು ಸಂಸತ್ ಸದಸ್ಯರು ಕೂಡ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದರು. ನಂತರ ಮಿಲಿಟರಿ ಆತನಿಗೆ ನಾಯಿಯನ್ನು ದತ್ತು ತೆಗೆದುಕೊಳ್ಳಲು ಅನುಮತಿ ನೀಡಿತು. ನಂತರ ಆತ ಗಾಜಾದಿಂದ ಮರಳುವಾಗ ಆ ನಾಯಿಯನ್ನು ಇಸ್ರೇಲ್‌ಗೆ ಕರೆದುಕೊಂಡು ಬಂದ.

2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದಾಗ, ಕಿಬ್ಬುಟ್ಜ್ ನಿರ್ ಓಜ್‌ನಿಂದ ಬಿಲ್ಲಿ ಎಂಬ ನಾಯಿ ಕಳುವಾಗಿತ್ತು. ಅದು ಹಮಾಸ್ ಉಗ್ರರ ಬಾಂಬ್ ದಾಳಿಯಲ್ಲಿ ಧ್ವಂಸವಾದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ನಂತರ ಅದು ಗಾಜಾ ಪಟ್ಟಿಯ ರಫಾ ನಗರಕ್ಕೆ ಓಡಿ ಹೋಗಿತ್ತು. ಇಸ್ರೇಲಿ ಸೈನಿಕರು ಅಲ್ಲಿ ಕಾರ್ಯಾಚರಣೆ ಮಾಡುವಾಗ ಅದು ಕಟ್ಟಡದ ಅವಶೇಷಗಳ ಅಡಿಯಲ್ಲಿ ಅಡಗಿ ಕುಳಿತಿತ್ತು. ಅಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸೈನಿಕರು ಹೀಬ್ರೂ ಭಾಷೆಯಲ್ಲಿ ಮಾತಾಡುತ್ತಿರುವುದನ್ನು ಕೇಳಿದ ನಂತರ ಅದು ನಿಧಾನವಾಗಿ ಧೈರ್ಯದಿಂದ ಅವಶೇಷಗಳ ಅಡಿಯಿಂದ ಹೊರಬಂದಿತು.

ಬಿಲ್ಲಿ ಕುತ್ತಿಗೆಯಲ್ಲಿ ಒಂದು ಮೈಕ್ರೋಚಿಪ್ ಇತ್ತು. ಇದರಿಂದಾಗಿ ಸೈನಿಕರಿಗೆ ಮತ್ತು ವೈದ್ಯರಿಗೆ ಅದರ ಮಾಲೀಕನನ್ನು ಪತ್ತೆ ಹಚ್ಚಲು ಸುಲಭವಾಯಿತು. ಈ ನಾಯಿಯನ್ನು ಅದರ ಮಾಲೀಕನಿಗೆ ಮರಳಿ ನೀಡಲಾಯಿತು. ಕೆಲವು ಪ್ರಾಣಿಗಳನ್ನು, ವಿಶೇಷವಾಗಿ ಗಾಜಾದಂಥ ಪ್ರದೇಶಗಳಿಂದ ರಕ್ಷಿಸಿದ ಪ್ರಾಣಿಗಳನ್ನು, ಸೈನಿಕರು ಅಥವಾ ಇಸ್ರೇಲ್ ನಲ್ಲಿರುವ ಕುಟುಂಬಗಳು ದತ್ತು ತೆಗೆದುಕೊಳ್ಳುವು ದುಂಟು.

ಯುದ್ಧದಲ್ಲಿ ಸಂತ್ರಸ್ತವಾದ ಯಾವ ಸಾಕುಪ್ರಾಣಿಯನ್ನೂ ಅನಾಥವಾಗಲು ಅಲ್ಲಿನ ಜನ ಬಿಡುವುದಿಲ್ಲ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ ಪ್ರಾಣಿಗಳನ್ನು ಪತ್ತೆ ಹಚ್ಚಲು, ಥರ್ಮಲ್ ಇಮೇಜಿಂಗ್ ಕೆಮೆರಾ ಎಂಬ ಸಾಧನವನ್ನು ಬಳಸಲಾಗುತ್ತದೆ. ಈ ಕೆಮೆರಾ ಉಷ್ಣತೆ ಯನ್ನು ಆಧರಿಸಿ ಚಿತ್ರಗಳನ್ನು ರೂಪಿಸುತ್ತದೆ. ಇದು ಕಣ್ಣಿಗೆ ಕಾಣದ ಅತಿಗೆಂಪು ( infrared ) ವಿಕಿರಣಗಳನ್ನು ಸೆರೆ ಹಿಡಿದು, ಅದನ್ನು ದೃಶ್ಯಮಾನ ಚಿತ್ರಗಳಾಗಿ ಪರಿವರ್ತಿಸುತ್ತದೆ.

ದಟ್ಟ ಹೊಗೆಯ ಮಧ್ಯದಲ್ಲಿ ಸಿಕ್ಕಿಬಿದ್ದ ಜನರನ್ನು ಮತ್ತು ಪ್ರಾಣಿಗಳನ್ನು ಪತ್ತೆ ಹಚ್ಚಲು ಮತ್ತು ಬೆಂಕಿಯ ಮೂಲವನ್ನು ಗುರುತಿಸಲು ಅಗ್ನಿಶಾಮಕ ದಳದವರು ಈ ಕೆಮೆರಾಗಳನ್ನು ಬಳಸುತ್ತಾರೆ. ರಾತ್ರಿ ವೇಳೆ ಅಪರಾಧಿಗಳನ್ನು ಪತ್ತೆ ಹಚ್ಚಲು ಅಥವಾ ಕಾಣೆಯಾದವರನ್ನು ಹುಡುಕಲು ಸಹ ಸೈನಿಕರು ಈ ತಂತ್ರಜ್ಞಾನವನ್ನು ಉಪಯೋಗಿಸುತ್ತಾರೆ.

ಥರ್ಮಲ್ ಪಲ್ಸ್ ಲೋಕೇಟರ‍್ಸ್, ಕಟ್ಟಡದ ಅವಶೇಷಗಳ ಅಡಿಯಲ್ಲಿ ಯಾವುದೇ ಕಂಪನ ಅಥವಾ ಚಲನೆಯನ್ನು ಗುರುತಿ‌ಸುವ ಮೂಲಕ ಜೀವಿಗಳನ್ನು ಪತ್ತೆ ಹಚ್ಚುತ್ತವೆ. ಈ ಸಂವೇದಕಗಳು ನೆಲದ ಕಂಪನಗಳನ್ನು ಪತ್ತೆ ಹಚ್ಚುತ್ತವೆ. ಕಟ್ಟಡಗಳ ಅವಶೇಷಗಳ ಕೆಳಗೆ ಸಿಕ್ಕಿಬಿದ್ದವರ ಹೃದಯ ಬಡಿತ, ಉಸಿರಾಟ ಅಥವಾ ಚಲನೆಯಿಂದ ಉಂಟಾಗುವ ಸೂಕ್ಷ್ಮ ಕಂಪನಗಳನ್ನು ಇವು ಗ್ರಹಿಸುತ್ತವೆ.

ನೀರಿನ ಉಳಿತಾಯ ಕ್ರಮ

ಮೊನ್ನೆ ಇಸ್ರೇಲ್‌ಗೆ ಹೋದಾಗ ನಮ್ಮ ಗೈಡ್ ಅಲ್ಲಿನ ನೀರಿನ ಸಂರಕ್ಷಣೆ ಬಗ್ಗೆ ಹೇಳುತ್ತಿದ್ದ. ಒಂದು ಸಣ್ಣ ಮತ್ತು ಒಣಭೂಮಿ ರಾಷ್ಟ್ರವಾಗಿರುವ ಇಸ್ರೇಲ್ ನಲ್ಲಿ ನೀರಿನ ಸಂಪನ್ಮೂಲಗಳು ಬಹಳ ಕಡಿಮೆ. ಹೀಗಾಗಿ, ನೀರಿನ ಪ್ರತಿ ಹನಿಯೂ ಅಮೂಲ್ಯ ಎಂದು ಅಲ್ಲಿನ ಜನ ಭಾವಿಸುತ್ತಾರೆ. ಅಲ್ಲಿನ ಜನರು ಚಿಕ್ಕ ವಯಸ್ಸಿನಿಂದಲೇ ನೀರು ಉಳಿಸುವ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ.

ಇಸ್ರೇಲ್‌ನ ಭೌಗೋಳಿಕ ಪರಿಸ್ಥಿತಿ ಇದಕ್ಕೆ ಮುಖ್ಯ ಕಾರಣ. ದೇಶದ ದಕ್ಷಿಣ ಭಾಗವು ನೆಗೆವ್ ಮರುಭೂಮಿಯಿಂದ ಆವೃತವಾಗಿದೆ. ಜೋರ್ಡಾನ್ ನದಿ, ಸಮುದ್ರ ಮತ್ತು ಕೆಲವು ಅಂತರ್ಜಲ ಕೇಂದ್ರಗಳು ನೀರಿನ ಮುಖ್ಯ ಮೂಲಗಳು. ಆದರೆ, ಇವುಗಳ ಮೇಲೆ ಒತ್ತಡ ಜಾಸ್ತಿ. ನೀರನ್ನು ಉಳಿಸುವುದು ಕೇವಲ ವೈಯಕ್ತಿಕ ಅಭ್ಯಾಸವಲ್ಲ. ಇದು ರಾಷ್ಟ್ರೀಯ ನೀತಿಯ ಒಂದು ಭಾಗ. ಸರಕಾರವು ನೀರನ್ನು ಪರಿಣಾಮಕಾರಿಯಾಗಿ ಬಳಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.

ಇಸ್ರೇಲ್‌ನಲ್ಲಿ ನೀರು ತುಂಬಾ ದುಬಾರಿ. ಹೆಚ್ಚು ನೀರು ಬಳಸಿದರೆ, ಅದಕ್ಕೆ ಹೆಚ್ಚು ಬೆಲೆ ತೆರಬೇಕಾಗು ತ್ತದೆ. ಇದರಿಂದ ಜನರು ನೀರು ಉಳಿಸಲು ಹೆಣಗುತ್ತಾರೆ. ನೀರನ್ನು ಮರುಬಳಕೆ ಮಾಡುವುದರಲ್ಲಿ ಅದು ಜಗತ್ತಿನಲ್ಲಿಯೇ ಅಗ್ರಸ್ಥಾನದಲ್ಲಿದೆ. ಮನೆಯಲ್ಲಿ ಬಳಸಿದ ನೀರನ್ನು ಸಂಸ್ಕರಿಸಿ ಕೃಷಿಗೆ ಮತ್ತು ಉದ್ಯಮಗಳಿಗೆ ಬಳಸಲಾಗುತ್ತದೆ. ಇದು ನೀರಿನ ಉಳಿತಾಯಕ್ಕೆ ದೊಡ್ಡ ಕೊಡುಗೆ ನೀಡಿದೆ. ಇಸ್ರೇಲ್ ದೊಡ್ಡ ಪ್ರಮಾಣದಲ್ಲಿ ಸಮುದ್ರದ ನೀರನ್ನು ಶುದ್ಧೀಕರಿಸಿ ಕುಡಿಯಲು ಯೋಗ್ಯವಾಗುವಂತೆ ಮಾಡುತ್ತದೆ. ಇದು ನೀರಿನ ಕೊರತೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ಇಸ್ರೇಲ್‌ನಲ್ಲಿ ಮಕ್ಕಳಿಗೆ ಶಾಲೆಯಲ್ಲಿಯೇ ನೀರಿನ ಮಹತ್ವ ಮತ್ತು ಅದನ್ನು ಹೇಗೆ ಉಳಿಸಬೇಕು ಎಂಬುದನ್ನು ಕಲಿಸಲಾಗುತ್ತದೆ. ‘ಟೂತ್ ಬ್ರಷ್ ಮಾಡುವಾಗ ಟ್ಯಾಪ್ ಆಫ್ ಮಾಡಿ’, ‘ಪಾತ್ರೆ ತೊಳೆಯುವಾಗ ಟ್ಯಾಪ್ ಅನ್ನು ನಿರಂತರವಾಗಿ‌ ತೆರೆದಿಡಬೇಡಿ’ ಎಂಬ ಸರಳ ನಿಯಮಗಳನ್ನು ಕಲಿಸಲಾಗುತ್ತದೆ.

ಕುಟುಂಬದ ಸದಸ್ಯರು ನೀರು ಉಳಿತಾಯದ ಮಾದರಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಮಕ್ಕಳು ಹಿರಿಯರನ್ನು ನೋಡಿ ನೀರು ಉಳಿಸುವುದನ್ನು ಕಲಿಯುತ್ತಾರೆ. ನೀರನ್ನು ಉಳಿಸುವುದು ಕೇವಲ ಒಂದು ಅಭ್ಯಾಸವಲ್ಲ. ಅದು ಇಸ್ರೇಲ್‌ನ ಸಂಸ್ಕೃತಿಯ ಭಾಗ. ನೀರು ಅಮೂಲ್ಯ ಸಂಪತ್ತು ಎಂಬ ಭಾವನೆ ಅಲ್ಲಿನ ಜನರ ಮನಸ್ಸಿನಲ್ಲಿ ಬೇರೂರಿದೆ.

ಇಸ್ರೇಲ್‌ನಲ್ಲಿ ನೀರು ಉಳಿಸುವುದು ಕೇವಲ ಒಂದು ಘೋಷಣೆಯಲ್ಲ. ಅದು ದೇಶದ ಅಳಿವು-ಉಳಿವಿಗೆ ಸಂಬಂಧಿಸಿದ ಒಂದು ಮುಖ್ಯ ವಿಷಯ. ನೀರಿನ ಕೊರತೆಯ ಬಗ್ಗೆ ಇರುವ ಜಾಗೃತಿ ಅಲ್ಲಿನ ಜನರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡಿರುವುದು ಸುಳ್ಳಲ್ಲ.

ಸೌರಶಕ್ತಿ: ಇಸ್ರೇಲ್ ಮತ್ತು ಅಮೆರಿಕ

1980ರ ದಶಕದಲ್ಲಿ ಇಸ್ರೇಲ್ ಸರಕಾರ, ಹೊಸದಾಗಿ ನಿರ್ಮಿಸುವ ಎಲ್ಲ ಮನೆಗಳಿಗೆ ಸೌರಶಕ್ತಿ ವಾಟರ್ ಹೀಟರ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂಬ ಕಾನೂನನ್ನು ಜಾರಿಗೆ ತಂದಿತು. ದೇಶದಲ್ಲಿ ಸೌರಶಕ್ತಿಯ ಬಳಕೆ ಹೆಚ್ಚಲು ಇದು ಕಾರಣವಾಯಿತು. ಈ ಕಾನೂನು ಜಾರಿಗೆ ಬಂದ ನಂತರವೇ ಇಸ್ರೇಲ್‌ನಲ್ಲಿ ಈ ತಂತ್ರಜ್ಞಾನದ ಬಳಕೆ ಗಮನಾರ್ಹವಾಗಿ ಹೆಚ್ಚಾಯಿತು.

ಇಸ್ರೇಲ್‌ನಲ್ಲಿ ನೈಸರ್ಗಿಕ ಸಂಪನ್ಮೂಲಗಳಾದ ಕಲ್ಲಿದ್ದಲು ಅಥವಾ ಪೆಟ್ರೋಲಿಯಂ ಹೆಚ್ಚಾಗಿಲ್ಲ. ಹೀಗಾಗಿ, ಬೇರೆ ಶಕ್ತಿಮೂಲಗಳ ಮೇಲೆ ಅವಲಂಬಿತವಾಗಬೇಕಾದ ಪರಿಸ್ಥಿತಿ ಇದೆ. ಆದರೆ ಇಸ್ರೇಲ್‌ಗೆ ವರ್ಷವಿಡೀ ಉತ್ತಮ ಸೂರ್ಯನ ಬೆಳಕು ಲಭ್ಯವಿದೆ. ಇದು ಸೌರಶಕ್ತಿ ಉತ್ಪಾದನೆಗೆ ಸೂಕ್ತ ವಾತಾವರಣವನ್ನು ಸೃಷ್ಟಿಸಿದೆ. ಸೌರಶಕ್ತಿ ವಾಟರ್ ಹೀಟರ್‌ಗಳನ್ನು ಒಮ್ಮೆ ಅಳವಡಿಸಿಕೊಂಡರೆ, ಅವು ವಿದ್ಯುತ್ ಅಥವಾ ಇತರ ಶಕ್ತಿಮೂಲಗಳಿಗಿಂತ ಕಡಿಮೆ ಖರ್ಚಿನಲ್ಲಿ ಬಿಸಿನೀರು ಒದಗಿಸುತ್ತವೆ.

ಇದು ದೀರ್ಘಾವಧಿಯಲ್ಲಿ ಹಣ ಉಳಿತಾಯಕ್ಕೆ ಸಹಾಯಕ. ಇಸ್ರೇಲಿಗೆ ಹೋಲಿಸಿದರೆ ಅಮೆರಿಕದಲ್ಲಿ ಸೌರಶಕ್ತಿ ವಾಟರ್ ಹೀಟರ್‌ಗಳ ಬಳಕೆ ಕಡಿಮೆ. ಅಮೆರಿಕದಲ್ಲಿ ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲಿ ನಂಥ ಸಂಪನ್ಮೂಲಗಳು ಹೇರಳ. ಹೀಗಾಗಿ ವಿದ್ಯುತ್ ಮತ್ತು ಬಿಸಿನೀರು ಕಡಿಮೆ ವೆಚ್ಚದಲ್ಲಿ ಸಿಗುತ್ತವೆ. ಇದು ಸೌರಶಕ್ತಿಯಂಥ ಪರ್ಯಾಯ ಶಕ್ತಿಮೂಲಗಳನ್ನು ಬಳಸಲು ಜನರನ್ನು ಪ್ರೋತ್ಸಾ ಹಿಸುವುದಿಲ್ಲ.

ಅಮೆರಿಕದ ಕೆಲವು ಪ್ರದೇಶಗಳಲ್ಲಿ, ಇಸ್ರೇಲ್‌ನಂತೆ ವರ್ಷವಿಡೀ ಉತ್ತಮ ಸೂರ್ಯನ ಬೆಳಕು ಲಭ್ಯವಿಲ್ಲ. ತೀವ್ರ ಚಳಿಗಾಲ ಮತ್ತು ಕಡಿಮೆ ಸೂರ್ಯನ ಬೆಳಕು ಇರುವ ಪ್ರದೇಶಗಳಲ್ಲಿ ಸೌರಶಕ್ತಿ ವಾಟರ್ ಹೀಟರ್‌ಗಳು ಅಷ್ಟಾಗಿ ಪರಿಣಾಮಕಾರಿಯಲ್ಲ.

ಅಮೆರಿಕದ ಸರಕಾರ ಈ ರೀತಿಯ ತಂತ್ರeನಗಳ ಬಳಕೆಯನ್ನು ಕಡ್ಡಾಯಗೊಳಿಸುವ ಕಾನೂನು ಗಳನ್ನು ಇಸ್ರೇಲ್‌ನಂತೆ ಅಳವಡಿಸಿಕೊಂಡಿಲ್ಲ. ಇದರಿಂದ ಜನರು ಈ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಅಮೆರಿಕದಲ್ಲಿ ಸೌರಶಕ್ತಿ ಬಳಕೆ ಬಗ್ಗೆ ಜಾಗೃತಿ ಇದ್ದರೂ, ಅದು ಮನೆಗಳಲ್ಲಿ ಬಿಸಿನೀರು ತಯಾರಿಸುವಷ್ಟರ ಮಟ್ಟಿಗೆ ತಲುಪಿಲ್ಲ. ಬದಲಾಗಿ, ಅಮೆರಿಕದಲ್ಲಿ ಸೌರಶಕ್ತಿ ಫಲಕ ಗಳನ್ನು ಬಳಸಿ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ಯುದ್ಧ ನಡೆಯುತ್ತಿದ್ದರೂ, ಸಂತೋಷಕ್ಕೆ ಬರವಿಲ್ಲ ಇಸ್ರೇಲ್‌ನಲ್ಲಿ ಕಳೆದ 2 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಯುದ್ಧ ಮತ್ತು ಸಂಘರ್ಷಗಳ ನಡುವೆಯೂ ‘ಜಾಗತಿಕ ಸಂತೋಷ ವರದಿ’ಯಲ್ಲಿ ( World Happiness Report) ಆ ದೇಶವು ಅಗ್ರ ಹತ್ತು ದೇಶಗಳಲ್ಲಿ ಒಂದಾಗಿರುವುದು ಆಶ್ಚರ್ಯಕರ ಸಂಗತಿಯೇ ಸರಿ.

ಇದು ಕೇವಲ ಅಂಕಿ-ಅಂಶವಲ್ಲದೇ, ಇಸ್ರೇಲ್ ಸಮಾಜದ ಕೆಲವು ವಿಶಿಷ್ಟ ಗುಣಗಳನ್ನು ಎತ್ತಿ ತೋರಿಸುತ್ತದೆ. ಜಾಗತಿಕ ಸಂತೋಷ ವರದಿಯಲ್ಲಿ ದೇಶಗಳನ್ನು ಹಲವು ಮಾನದಂಡಗಳ ಆಧಾರದ ಮೇಲೆ ಅಳೆಯಲಾಗುತ್ತದೆ. ಅವುಗಳಲ್ಲಿ ಮುಖ್ಯವಾದವು ಹೀಗಿವೆ:

೧. ಉತ್ತಮ ಸಾಮಾಜಿಕ ಸಂಪರ್ಕಗಳು. ಇಸ್ರೇಲ್‌ನಲ್ಲಿ ಸಾಮಾಜಿಕ ಸಂಪರ್ಕಗಳಿಗೆ ಮೊದಲ ಸ್ಥಾನ. ಜನರು ಪರಸ್ಪರ ನಂಬಿಕೆಯನ್ನಿಡುತ್ತಾರೆ ಮತ್ತು ಕಷ್ಟಕಾಲದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆ. ಯುದ್ಧದಂಥ ಕಠಿಣ ಪರಿಸ್ಥಿತಿಯಲ್ಲಿ ಈ ಸಾಮಾಜಿಕ ಬೆಂಬಲ ವ್ಯವಸ್ಥೆಯು ಜನರಿಗೆ ಮಾನಸಿಕ ಶಕ್ತಿ ನೀಡುತ್ತದೆ.

೨. ಬಲವಾದ ಸಮುದಾಯ ಪ್ರಜ್ಞೆ. ಇಸ್ರೇಲಿಗಳು ತಮ್ಮ ಸಮುದಾಯದ ಬಗ್ಗೆ ಮತ್ತು ರಾಷ್ಟ್ರದ ಬಗ್ಗೆ ಬಲವಾದ ಹೆಮ್ಮೆಯನ್ನು ಹೊಂದಿದ್ದಾರೆ. ಈ ಬಲವಾದ ಸಮುದಾಯ ಪ್ರe ಅವರಿಗೆ ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ.

೩. ನಂಬಿಕೆ ಮತ್ತು ವಿಶ್ವಾಸ. ಇಸ್ರೇಲ್‌ನಲ್ಲಿ ಸರಕಾರ ಮತ್ತು ಸಂಸ್ಥೆಗಳ ಮೇಲೆ ಜನರಿಗೆ ಹೆಚ್ಚಿನ ನಂಬಿಕೆ ಇದೆ. ತುರ್ತು ಪರಿಸ್ಥಿತಿಯಲ್ಲಿ ಸರಕಾರ ಜನರನ್ನು ರಕ್ಷಿಸುತ್ತದೆ ಎಂಬ ವಿಶ್ವಾಸವು ಜನರ ನೆಮ್ಮದಿಗೆ ಕಾರಣವಾಗಿದೆ.

೪. ಮಾನಸಿಕ ಸ್ಥೈರ್ಯ. ಇಸ್ರೇಲ್‌ನ ಜನರು ಸತತವಾಗಿ ಯುದ್ಧ, ಸಂಘರ್ಷ ಮತ್ತು ಒತ್ತಡದ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಹೀಗಾಗಿ, ಮಾನಸಿಕ ಸ್ಥೈರ್ಯ ಮತ್ತು ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವ ಕೌಶಲಗಳು ಅವರ ಜೀವನದ ಒಂದು ಭಾಗವಾಗಿವೆ. ಇದು ಅವರನ್ನು ಬಲಶಾಲಿ ಗಳನ್ನಾಗಿ ಮಾಡಿದೆ.

೫. ಕೊನೆಯದಾಗಿ, ಸಮೃದ್ಧ ಜೀವನಶೈಲಿ. ಇಸ್ರೇಲ್‌ನ ಆರ್ಥಿಕತೆ ಬಲಿಷ್ಠವಾಗಿದೆ. ಶಿಕ್ಷಣ, ವೈದ್ಯಕೀಯ ಸೇವೆಗಳು ಮತ್ತು ತಂತ್ರಜ್ಞಾನದಲ್ಲಿ ಅದು ಮುಂಚೂಣಿಯಲ್ಲಿದೆ. ಇದು ಕೂಡ ಜನರ ಸಂತೋಷಕ್ಕೆ ಒಂದು ಪ್ರಮುಖ ಕಾರಣವಾಗಿದೆ.

ಯುದ್ಧ ಅಥವಾ ಸಂಘರ್ಷ ನಡೆಯುವಾಗಲೂ ಸಂತೋಷದ ಮಟ್ಟದಲ್ಲಿ ಏರುಪೇರಾಗದಿರುವುದು ಅಚ್ಚರಿಯೇ. ಯುದ್ಧದ ಸಂದರ್ಭದಲ್ಲಿ ಜನರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಇದು ಅವರನ್ನು ಹತ್ತಿರ ತಂದಿದೆ. ಈ ಕಠಿಣ ಸಮಯದಲ್ಲಿ ಸಣ್ಣ ಸಣ್ಣ ಸಂತೋಷಗಳು ಕೂಡ ದೊಡ್ಡ ಅರ್ಥವನ್ನು ಪಡೆಯುತ್ತವೆ. ಬಾಂಬ್ ದಾಳಿ ನಡೆದಾಗ ರಕ್ಷಣಾ ಪಡೆಗಳೊಂದಿಗೆ ನಾಗರಿಕರು ಒಟ್ಟಾಗಿ ಕೆಲಸ ಮಾಡುತ್ತಾರೆ.

ಆಸ್ಪತ್ರೆಗಳಲ್ಲಿ ಗಾಯಗೊಂಡವರಿಗೆ ಸಹಕರಿಸುತ್ತಾರೆ. ಈ ರೀತಿಯ ಸಹಕಾರ ಮತ್ತು ಒಗ್ಗಟ್ಟು ಸಮುದಾಯದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಇಸ್ರೇಲಿಗಳು ಯಾವುದೇ ಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಜೀವನದಲ್ಲಿ ಸವಾಲುಗಳು ಬಂದಾಗ ಅವುಗಳನ್ನು ಎದುರಿಸಲು ಅವರು ಸಿದ್ಧ. ಈ ಸಕಾರಾತ್ಮಕ ದೃಷ್ಟಿಕೋನವು ಅವರಿಗೆ ಮಾನಸಿಕ ಶಾಂತಿ ನೀಡುತ್ತದೆ. ಈ ವರದಿಯ ಪ್ರಕಾರ, ಇಸ್ರೇಲ್‌ನ ಜನರಿಗೆ ಹಣ ಮತ್ತು ವಸ್ತು ಗಳಿಗಿಂತ ಹೆಚ್ಚಾಗಿ, ಬಲವಾದ ಸಾಮಾಜಿಕ ಸಂಪರ್ಕಗಳು, ಭದ್ರತೆಯ ಭಾವನೆ ಮತ್ತು ಪರಸ್ಪರ ವಿಶ್ವಾಸದಿಂದ ಹೆಚ್ಚು ಸಂತೋಷ ಸಿಗುತ್ತದೆಯಂತೆ.