Vishweshwar Bhat Column: ಅತಿ ವಿಶಿಷ್ಟ ಕುಲುಲ ಏರ್ʼಲೈನ್ಸ್
ಈ ವಿಮಾನದ ವಿಶೇಷವೇನೆಂದರೆ, ಇದು ಪ್ರಕಾಶಮಾನವಾದ ಹಸಿರು ಬಣ್ಣವನ್ನು ಹೊಂದಿತ್ತು (ಸಾಮಾನ್ಯವಾಗಿ ವಿಮಾನಗಳು ಹಸಿರು ಬಣ್ಣದಲ್ಲಿ ಇರುವುದಿಲ್ಲ). ಇದರ ಮೇಲೆ ಬಿಳಿ ಬಣ್ಣದ ಬಾಣದ ಗುರುತುಗಳು ಮತ್ತು ಅಕ್ಷರಗಳನ್ನು ಬರೆಯಲಾಗಿತ್ತು. ಈ ಗುರುತುಗಳು ವಿಮಾನದ ಪ್ರತಿ ಯೊಂದು ಭಾಗವನ್ನೂ ತೋರಿಸಿ, ಅದು ಏನು ಮತ್ತು ಅದರ ಕೆಲಸವೇನು ಎಂಬುದನ್ನು ಅತ್ಯಂತ ತಮಾಷೆಯಾಗಿ ವಿವರಿಸಲಾಗಿತ್ತು
-
ಸಂಪಾದಕರ ಸದ್ಯಶೋಧನೆ
ವಿಮಾನಯಾನ ಕ್ಷೇತ್ರವೆಂದರೆ ಶಿಸ್ತು, ಗಾಂಭೀರ್ಯ ಮತ್ತು ಕಟ್ಟುನಿಟ್ಟಾದ ನಿಯಮಗಳಿಗೆ ಹೆಸರು ವಾಸಿ. ಆದರೆ, ದಕ್ಷಿಣ ಆಫ್ರಿಕಾದ ಕುಲುಲ ಏರ್ಲೈನ್ಸ್ನ ಬೋಯಿಂಗ್ 737 ವಿಮಾನವು ಈ ಎಲ್ಲ ಗಾಂಭೀರ್ಯವನ್ನು ಮುರಿದು, ಆಕಾಶದಲ್ಲಿ ಹಾರಾಡುವ ಒಂದು ದೊಡ್ಡ ಹಾಸ್ಯದ ತುಣುಕಿನಂತೆ ಪ್ರಸಿದ್ಧಿ ಪಡೆದಿತ್ತು.
ಹಸಿರು ಬಣ್ಣದ ಈ ವಿಮಾನವು ಕೇವಲ ಪ್ರಯಾಣಿಕರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯುವ ವಾಯುವಾಹನವಾಗಿರದೇ, ನೋಡುವವರ ಮುಖದಲ್ಲಿ ನಗು ತರಿಸುವ ಕಲಾಕೃತಿ ಯಾಗಿತ್ತು. ಈ ವಿಮಾನವು ಏಕೆ ಅಷ್ಟೊಂದು ವಿಶೇಷವಾಗಿತ್ತು? ಕುಲುಲ ಏರ್ಲೈನ್ಸ್ ಯಾವಾಗಲೂ ತನ್ನ ಹಾಸ್ಯಮಯ ಜಾಹೀರಾತುಗಳಿಗೆ ಹೆಸರುವಾಸಿಯಾಗಿತ್ತು. ಆದರೆ ಏರ್ಲೈನ್ಸ್ ತನ್ನ ಬೋಯಿಂಗ್ 737-800 ವಿಮಾನಕ್ಕೆ ‘Flying 101' ಎಂದು ಹೆಸರಿಸಿ, ಇಡೀ ವಿಮಾನವನ್ನೇ ಒಂದು ಇನ್ಫೋಗ್ರಾಫಿಕ್ ಆಗಿ ಬದಲಾಯಿಸಿದಾಗ ಜಗತ್ತಿನ ಗಮನ ಸೆಳೆಯಿತು.
ಈ ವಿಮಾನದ ವಿಶೇಷವೇನೆಂದರೆ, ಇದು ಪ್ರಕಾಶಮಾನವಾದ ಹಸಿರು ಬಣ್ಣವನ್ನು ಹೊಂದಿತ್ತು (ಸಾಮಾನ್ಯವಾಗಿ ವಿಮಾನಗಳು ಹಸಿರು ಬಣ್ಣದಲ್ಲಿ ಇರುವುದಿಲ್ಲ). ಇದರ ಮೇಲೆ ಬಿಳಿ ಬಣ್ಣದ ಬಾಣದ ಗುರುತುಗಳು ಮತ್ತು ಅಕ್ಷರಗಳನ್ನು ಬರೆಯಲಾಗಿತ್ತು. ಈ ಗುರುತುಗಳು ವಿಮಾನದ ಪ್ರತಿ ಯೊಂದು ಭಾಗವನ್ನೂ ತೋರಿಸಿ, ಅದು ಏನು ಮತ್ತು ಅದರ ಕೆಲಸವೇನು ಎಂಬುದನ್ನು ಅತ್ಯಂತ ತಮಾಷೆಯಾಗಿ ವಿವರಿಸಲಾಗಿತ್ತು.
ಇದನ್ನೂ ಓದಿ: Vishweshwar Bhat Column: ಸಣ್ಣ ಸನ್ನೆ, ಉಳಿದ ಪ್ರಾಣ
ಸಾಮಾನ್ಯವಾಗಿ ಪೈಲಟ್ಗಳಿಗೆ ಅಥವಾ ಮೆಕ್ಯಾನಿಕ್ಗಳಿಗೆ ಮಾತ್ರ ತಿಳಿಯುವ ತಾಂತ್ರಿಕ ವಿಷಯ ಗಳನ್ನು, ಸಾಮಾನ್ಯ ಜನರಿಗೂ ಅರ್ಥವಾಗಿಸುವುದು ಮತ್ತು ನಗು ಉಕ್ಕಿಸುವುದು ಇದರ ಉದ್ದೇಶ ವಾಗಿತ್ತು. ವಿಮಾನದ ಮೂಗಿ (ಮೂತಿ) ನಿಂದ ಹಿಡಿದು ಬಾಲದವರೆಗೆ ಬರೆಯಲಾದ ತಮಾಷೆಯ ವಾಕ್ಯಗಳೇ ಈ ವಿಮಾನದ ಜೀವಾಳ.
ಕಾಕ್ಪಿಟ್ ಕಿಟಕಿಯ ಬಳಿ ‘ಕ್ಯಾಪ್ಟನ್’ ಕುಳಿತುಕೊಳ್ಳುವ ಜಾಗಕ್ಕೆ ಬಾಣದ ಗುರುತು ಹಾಕಿ ‘ದ ಬಿಗ್ ಚೀಸ್’ (ಅದರ ಕೆಳಗಡೆ ‘ಕ್ಯಾಪ್ಟನ, ಮೈ ಕ್ಯಾಪ್ಟನ್’ ಎಂದಿತ್ತು) ಎಂದು ಬರೆಯಲಾಗಿತ್ತು. ಕ್ಯಾಪ್ಟನ್ ಪಕ್ಕದ ಸೀಟಿಗೆ ‘ಕೋ-ಕ್ಯಾಪ್ಟನ್’ ಎಂದು ಬರೆಯಲಾಗಿತ್ತು.
ಸಾಮಾನ್ಯವಾಗಿ ಇವರನ್ನು - ಆಫೀಸರ್ ಎಂದು ಕರೆಯುತ್ತಾರೆ. ಆದರೆ ಕುಲುಲ ಇದನ್ನು ‘ಇನ್ನೊಬ್ಬ ಆಟಗಾರ’ ಎಂಬರ್ಥದಲ್ಲಿ ತಮಾಷೆಯಾಗಿ ತೋರಿಸಿತ್ತು. ವಿಮಾನದ ಮುಂಭಾಗದ ಕೋನ್ಗೆ ಬಾಣದ ಗುರುತು ಹಾಕಿ, ‘ರಾಡಾರ್, ಆಂಟೆನಾ ಮತ್ತು ಡಿಶ್- ಇವೆಲ್ಲವೂ ಒಳಗಿವೆ’ ಎಂದು ಬರೆಯ ಲಾಗಿತ್ತು.
ಇದು ವಿಮಾನಕ್ಕೆ ದಾರಿ ತೋರಿಸುವ ಪ್ರಮುಖ ಭಾಗವಾಗಿದೆ. ವಿಮಾನದ ಹಿಂಭಾಗದ ಕಡೆಗೆ ಬಾಣದ ಗುರುತು ಹಾಕಿ ‘ಬ್ಲ್ಯಾಕ್ ಬಾಕ್ಸ್’ (ಇದು ವಾಸ್ತವವಾಗಿ ಕಿತ್ತಳೆ ಬಣ್ಣದ್ದಾಗಿದೆ) ಎಂದು ಬರೆಯಲಾಗಿತ್ತು. ಏಕೆಂದರೆ ವಿಮಾನದ ಬ್ಲ್ಯಾಕ್ ಬಾಕ್ಸ್ ಕಪ್ಪಾಗಿರುವುದಿಲ್ಲ, ಸುಲಭವಾಗಿ ಕಾಣಲಿ ಎಂದು ಅದು ಪ್ರಕಾಶಮಾನವಾದ ಕಿತ್ತಳೆ ಬಣ್ಣದಲ್ಲಿರುತ್ತದೆ.
ಈ ಸತ್ಯವನ್ನು ಹಾಸ್ಯದ ಮೂಲಕ ತಿಳಿಸಲಾಗಿತ್ತು. ವಿಮಾನದ ಚಕ್ರಗಳ ಭಾಗಕ್ಕೆ ‘ಲ್ಯಾಂಡಿಂಗ್ ಗೇರ್’ ಎಂದು ಬರೆದು, ಅದರ ಕೆಳಗೆ ಸಣ್ಣದಾಗಿ ‘ Comes Standard’ (ಇದು ಸಾಮಾನ್ಯವಾಗಿ ವಿಮಾನದ ಜತೆಯ ಬರುತ್ತದೆ) ಎಂದು ಬರೆಯಲಾಗಿತ್ತು. ಅಂದರೆ, ಕಾರುಗಳನ್ನು ಕೊಳ್ಳುವಾಗ ಕೆಲವು ಫೀಚರ್ಗಳಿಗೆ ಎಕ್ಸ್ಟ್ರಾ ಹಣ ಕೊಡಬೇಕಾಗುತ್ತದೆ. ಆದರೆ ವಿಮಾನಕ್ಕೆ ಚಕ್ರಗಳು ಉಚಿತ ವಾಗಿ ಬರುತ್ತವೆ ಎಂದು ತಮಾಷೆ ಮಾಡಲಾಗಿತ್ತು.
ವಿಮಾನದ ಕಿಟಕಿಗಳಿಲ್ಲದ ಭಾಗಕ್ಕೆ ಬಾಣದ ಗುರುತು ಹಾಕಿ ‘ಲೂ’ (ಅಥವಾ ಶೌಚಾಲಯ) ಎಂದು ಸರಳವಾಗಿ ಬರೆಯಲಾಗಿತ್ತು. ‘ಆಕಾಶದಲ್ಲಿ ಅತ್ಯುತ್ತಮ ನೋಟವಿರುವ ಜಾಗ’ ಎಂದೂ ಉಲ್ಲೇಖಿಸ ಲಾಗಿತ್ತು. ಆಹಾರ ಸಾಗಿಸುವ ಗ್ಯಾಲಿಗೆ ‘ಆಹಾರ, ಪಾನೀಯ ಮತ್ತು ಅತಿಥಿ ಸತ್ಕಾರ ಇಲ್ಲಿ ನಡೆ ಯುತ್ತದೆ’ ಎಂದು ಬರೆಯಲಾಗಿತ್ತು.
‘ಕುಲುಲ’ ಎಂಬ ಪದವು ಝುಲು ಭಾಷೆಯಿಂದ ಬಂದಿದೆ, ಇದರ ಅರ್ಥ ‘ಇದು ಸುಲಭ’ ಅಥವಾ ‘ಹಗುರ’ ಎಂದು. ಈ ಹೆಸರಿಗೆ ತಕ್ಕಂತೆ, ಅವರು ವಿಮಾನಯಾನವನ್ನು ಗಂಭೀರ ವಿಷಯವಾಗಿ ನೋಡದೇ, ಅದನ್ನು ಸುಲಭ ಮತ್ತು ಆನಂದದಾಯಕವಾಗಿಸಲು ಪ್ರಯತ್ನಿಸಿದ್ದರು. ದುರ್ದೈವ ಅಂದ್ರೆ, ಕೋವಿಡ್ ಆರ್ಥಿಕ ಸಂಕಷ್ಟಗಳ ಕಾರಣದಿಂದಾಗಿ, ಕುಲುಲ ಏರ್ಲೈನ್ಸ್ 2022ರಲ್ಲಿ ತನ್ನ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿತು.