ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rangaswamy Mookanahalli Column: ಕ್ರಿಮಿಯಿಂದ ರವಿವರೆಗೆ ಎಲ್ಲರಲ್ಲೂ ಒಂದೇ ಚೇತನ !

ಭಿಕ್ಷೆ ಬೇಡುವ ವ್ಯಕ್ತಿ ಕೋಟ್ಯಧಿಪತಿಯಾಗುತ್ತೇನೆ ಎಂದಾಗ ಈ ಮಾತು ಹುಟ್ಟಿದೆ. ಮುಕ್ಕಾಲು ಪಾಲು ಸಮಯ ಕೇವಲ ಬಾಯಿ ಮಾತಿಗೆ ಹೇಳಿ ಅದನ್ನು ಕಾರ್ಯಗತಗೊಳಿಸಲು ಕಷ್ಟ ಪಡದೆ ಇರುವ ಕಾರಣ ಬಯಸಿದ, ಅಥವಾ ಬಾಯಲ್ಲಿ ಹೇಳಿಕೊಂಡು ಓಡಾಡಿದ ಅಂಶ ಸಾಧನೆಯಾಗಿರುವುದಿಲ್ಲ. ಹೀಗಾಗಿ ಸಮಾಜ ಈ ರೀತಿಯ ಮಾತುಗಳನ್ನು ಹೇಳುತ್ತದೆ. ಹೀಗಾಗಿ ಕನಸು ಎಂದರೆ ಮಲಗಿದ್ದಾಗ ಬರುವ ಭ್ರಾಮಕ ಚಿತ್ರಣವಲ್ಲ.

ಕ್ರಿಮಿಯಿಂದ ರವಿವರೆಗೆ ಎಲ್ಲರಲ್ಲೂ ಒಂದೇ ಚೇತನ !

-

ವಿಶ್ವರಂಗ

ಪೋರ್ಚುಗಲ್ ದೇಶದ ಪ್ರಸಿದ್ಧ ಫುಟಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ‘ಕನಸು ಎಂದರೆ ನಿದ್ದೆ ಬಂದಾಗ ಬರುವುದಲ್ಲ, ನಿಮಗೆ ನಿದ್ದೆ ಬಾರದಂತೆ ಮಾಡುವುದು’ ಎಂದಿದ್ದಾರೆ. ಕನಸು ಎನ್ನುವುದು ಒಂದು ಗುರಿ, ಅದೊಂದು ನಿರೀಕ್ಷೆ. ನಿರೀಕ್ಷೆಯನ್ನು ಸಾಕಾರಗೊಳಿಸುವ ಹಂತದಲ್ಲಿ ನಿದ್ರೆ ಬರುವುದಾದರೂ ಹೇಗೆ? ಕನಸು ಎಂದ ತಕ್ಷಣ ರಾತ್ರಿ ನಿದ್ದೆಯಲ್ಲಿ ಬರುವ ಫ್ಯಾಂಟಸಿ ಲೋಕ ಎನ್ನುವುದು ನಮ್ಮಲ್ಲಿರುವ ನಂಬಿಕೆ.

ನಿಜ ಜೀವನದಲ್ಲಿ ಕಷ್ಟ ಸಾಧ್ಯ ಎನ್ನಿಸಿದ ವಿಷಯವನ್ನು ಮಾಡುತ್ತೇನೆ ಎಂದ ತಕ್ಷಣ ಸಮಾಜ ಹೇಳುವುದು ‘ಕನಸು ಕಾಣಬೇಡ’ ಎನ್ನುವ ಪದ. ನಾನು ಇದನ್ನು ಮಾಡಬೇಕು ಎಂದಿದ್ದೇನೆ ಎಂದಾ ಕ್ಷಣ ಸಮಾಜ ‘ತಿರುಕನ ಕನಸು’ ಎನ್ನುವ ಮಾತನ್ನೂ ಹೇಳುತ್ತದೆ. ನಾವು ಇಂದಿರುವ ಸ್ಥಿತಿಯಲ್ಲಿ ತಲುಪಬೇಕಾದ ಸ್ಥಳ ಬಹಳ ದೂರವಿದೆ ಎನ್ನಿಸುವ ಕಾರಣಕ್ಕೆ ಜಗತ್ತು ಈ ಮಾತು ಹೇಳುತ್ತದೆ.

ಭಿಕ್ಷೆ ಬೇಡುವ ವ್ಯಕ್ತಿ ಕೋಟ್ಯಧಿಪತಿಯಾಗುತ್ತೇನೆ ಎಂದಾಗ ಈ ಮಾತು ಹುಟ್ಟಿದೆ. ಮುಕ್ಕಾಲು ಪಾಲು ಸಮಯ ಕೇವಲ ಬಾಯಿ ಮಾತಿಗೆ ಹೇಳಿ ಅದನ್ನು ಕಾರ್ಯಗತಗೊಳಿಸಲು ಕಷ್ಟ ಪಡದೆ ಇರುವ ಕಾರಣ ಬಯಸಿದ, ಅಥವಾ ಬಾಯಲ್ಲಿ ಹೇಳಿಕೊಂಡು ಓಡಾಡಿದ ಅಂಶ ಸಾಧನೆಯಾಗಿರುವುದಿಲ್ಲ. ಹೀಗಾಗಿ ಸಮಾಜ ಈ ರೀತಿಯ ಮಾತುಗಳನ್ನು ಹೇಳುತ್ತದೆ. ಹೀಗಾಗಿ ಕನಸು ಎಂದರೆ ಮಲಗಿದ್ದಾಗ ಬರುವ ಭ್ರಾಮಕ ಚಿತ್ರಣವಲ್ಲ.

ಕನಸು ಎಂದರೆ ವಿಷನ್. ಏನಾಗಬೇಕು ಎನ್ನುವ ಗುರಿ. ಹೀಗಾಗಿ ಕನಸು ಎಂದ ತಕ್ಷಣ ಸುಮ್ಮನೆ ಅದಾಗ ಬೇಕು, ಇದಾಗಬೇಕು ಎಂದು ಹೇಳುವ ಬಾಯಿ ಮಾತಲ್ಲ. ಅದೊಂದು ಗುರಿ. ಗುರಿ ತಲುಪಲು ನಡೆಯಬೇಕಾದ ಹಾದಿಯ ನೀಲನಕ್ಷೆ! ಸಂಸ್ಕೃತದಲ್ಲಿ ಡ್ರೀಮ್, ಕನಸಿಗೆ ‘ಸ್ವಪ್ನ’ ಪದವನ್ನು ಬಳಸುತ್ತಾರೆ.

ಇದನ್ನೂ ಓದಿ: Rangaswamy Mookanahalli Column: ಬೆರೆಯದ ಬದುಕು: ನಿಮ್ಮೊಡನಿದ್ದೂ ನಿಮ್ಮಂತಾಗದೆ !

ಸ್ವಪ್ನ ಪದದ ಅರ್ಥವೇನು ಗೊತ್ತೇ? ‘ನಿಜ ಜೀವನದಲ್ಲಿ ಅಂದರೆ ಲೌಕಿಕದಲ್ಲಿ ಅನುಭವಿಸದೆ ಇರುವ ಅನುಭವವನ್ನು, ಅಲೌಕಿಕದಲ್ಲಿ ನಿಜ ಎನ್ನುವ ಮಟ್ಟಕ್ಕೆ ಅನುಭವಿಸುವುದು’ ಎನ್ನುವ ಅರ್ಥವನ್ನು ಕೊಡುತ್ತದೆ. ದೇವರು ನನಗೆ ಸ್ವಪ್ನದಲ್ಲಿ ಬಂದು ಈ ರೀತಿಯ ಕಾರ್ಯ ಮಾಡಲು ಆದೇಶ ನೀಡಿದ ಎನ್ನುವ ಮಾತುಗಳನ್ನು ಕೂಡ ನಾವು ಕೇಳಿದ್ದೇವೆ.

ನಿಜ ಜೀವನದಲ್ಲಿ ನಾವು ಏನು ಮಾಡಬೇಕು ಎಂದು ಉತ್ಕಟವಾಗಿ ಬಯಸುತ್ತೇವೆ ಅದು ನಮ್ಮ ಸುಪ್ತ ಮನಸ್ಸಿನಲ್ಲಿ ಉಳಿದುಕೊಂಡು ಬಿಡುತ್ತದೆ. ಅದೆಷ್ಟು ಗಾಢವಾಗಿ ನಮ್ಮ ಸುಪ್ತ ಮನಸ್ಸಿನಲ್ಲಿ ಉಳಿದಿದೆ ಎನ್ನುವುದರ ಆಧಾರದ ಮೇಲೆ ಕನಸು ಕೆಲವು ಕ್ಷಣ, ಗೆಲವು ನಿಮಿಷಗಳವರೆಗೂ ಬಿತ್ತರವಾಗುತ್ತದೆ. ಈಗಿನ ಸಮಾಜದಲ್ಲಿ ನಾವು ಎಚ್ಚರವಾಸ್ಥೆ, ಸುಪ್ತಾವಸ್ಥೆ ಅಂದರೆ ಕಾನ್ಶಿಯಸ್ ಮತ್ತು ಆನ್‌ಕಾನ್ಶಿಯಸ್ ಮೈಂಡ್ ಎನ್ನುವ ಪರಿಧಿಯೊಳಗೆ ಬಂಧಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಇದಕ್ಕೂ ಮೊದಲು ಕನಸು ಎಂದರೆ ಅದನ್ನು ವಾಯ್ಸ್ ಆಫ್ ಗಾಡ್, ದೇವರ ಆದೇಶ, ಧ್ವನಿ ಎಂದು ಭಾವಿಸಲಾಗುತ್ತಿತ್ತು. ‌

ನಿನ್ನೆ ಮತ್ತು ಇಂದಿನ ಲೆಕ್ಕಾಚಾರ ಹೇಗೇ ಇರಲಿ. ಒಂದಂತೂ ಸತ್ಯ. ಕನಸು ಎಂದರೆ ಗುರಿ, ನಾವು ಮುಟ್ಟಬೇಕಾಗಿರುವ ಲಕ್ಷ್ಯ. ನಾಳೆ ಹೀಗಿರಬೇಕು ಎನ್ನುವ ವಿಷನ್. ಕನಸು ಎಂದರೆ ನಮ್ಮಲ್ಲಿ ಉತ್ಕಟ ವಾಗಿರುವ ಬಯಕೆ ಎಂದು ಕೂಡ ಹೇಳಬಹುದು. ಸದ್ಯಕ್ಕೆ ವಾಸ್ತವದಲ್ಲಿ ನಿಜವಾಗಿರದ ಸಂಗತಿ ಎನ್ನುವುದು ಬಿಟ್ಟರೆ, ಹೆಚ್ಚಿನ ವ್ಯತ್ಯಾಸವಿಲ್ಲ.

Screenshot_1 ok

ಕನಸು ಕಾಣಬೇಕು, ಕನಸು ಇರದಿದ್ದರೆ ನಾವು ತಲುಪುವುದಾದರೂ ಎಲ್ಲಿಗೆ? ಇದನ್ನು ನಾನು ಸದಾ ಲಾಟರಿ ಟಿಕೆಟ್ ಖರೀದಿ ಜೊತೆ ಹೋಲಿಕೆ ಮಾಡುತ್ತಿರುತ್ತೇನೆ. ನಾವು ಲಾಟರಿ ಟಿಕೆಟ್ ಖರೀದಿ ಮಾಡದೆ ಇದ್ದರೆ ಅದು ನಮಗೆ ಲಭಿಸುವ ಸಾಧ್ಯತೆ ಸೊನ್ನೆ. ಅದೇ ಲಾಟರಿ ಟಿಕೆಟ್ ಖರೀದಿ ಮಾಡಿ ದ್ದರೆ ಅದು ನಮಗೆ ದಕ್ಕುವ ಸಾಧ್ಯತೆ ಐವತ್ತು ಪ್ರತಿಶತವಾಗುತ್ತದೆ. ಈ ಲೆಕ್ಕಾಚಾರದಲ್ಲಿ ಕನಸು ಕಾಣಬೇಕು.

ಕನಸು ನಿತ್ಯ ಜೀವನದ ಅಡೆತಡೆಗಳನ್ನು ಹಿಮ್ಮೆಟಿಸಲು ಬೇಕಾಗಿರುವ ಟಾನಿಕ್! ನಾವು ಯಾವುದ ನ್ನು ತೀವ್ರವಾಗಿ ಬಯಸುತ್ತೇವೆ ಅದು ಕನಸಿನ ರೂಪದಲ್ಲಿ ಬರುತ್ತದೆ ಎನ್ನುವುದು ಕೇವಲ ನಂಬಿಕೆ ಮಾತ್ರವಲ್ಲ, ನಿಜವೂ ಹೌದು ಎನ್ನುವುದಕ್ಕೆ ಸಣ್ಣ ಉದಾಹರಣೆ ಕೊಡುತ್ತೇನೆ.

ಬಾಲ್ಯದಲ್ಲಿ ಅತೀವ ಬಡತನದ ಕಾರಣ ಸಮಾಜದಲ್ಲಿ ಒಂದು ಒಳ್ಳೆಯ ಮಟ್ಟವನ್ನು ಮುಟ್ಟಬೇಕು. ಅಪ್ಪ- ಅಮ್ಮನಿಗೆ ಒಂದೊಳ್ಳೆ ಮನೆ ಕಟ್ಟಿಸಿಕೊಡಬೇಕು. ಅವರಿಗೆ ಓಡಾಟಕ್ಕೆ ಕಾರು ಕೊಡಿಸಬೇಕು. ಅದಕ್ಕೊಬ್ಬ ಡ್ರೈವರ್ ಇರಬೇಕು ಎನ್ನುವ ತೀವ್ರ ಹಂಬಲ ನನ್ನದು. ಕೈಯಲ್ಲಿ ನಯಾಪೈಸೆ ಇಲ್ಲದ ದಿನಗಳವು! 1995-96ರಲ್ಲಿ ಕಂಡ ಕನಸದು. 2005ರ ವೇಳೆಗೆ ಒಂದಲ್ಲ ಹತ್ತಾರು ಮನೆಯನ್ನು ಕಟ್ಟಿದ್ದೆ, ಅಪ್ಪ- ಅಮ್ಮನಿಗೆ ಕಾರು, ಡ್ರೈವರ್ ಸಹಿತ ಗಿಫ್ಟ್ ಮಾಡಿದ್ದೆ!

ಅದು ಕನಸಿಗಿರುವ ತಾಕತ್ತು. ಆಸೆ ಎನ್ನುವುದು ಎಲ್ಲರಿಗೂ ಇರುತ್ತದೆ. ಕೇವಲ ಆಸೆಯಿಂದ ಸಾಧನೆ ಸಾಧ್ಯವಾಗುವುದಿಲ್ಲ. ತೀವ್ರ ಬಯಕೆ, ಅದಿಲ್ಲದೆ ಬದುಕಿಲ್ಲ ಎನ್ನುವ ಮಟ್ಟದ ಕಮಿಟ್ಮೆಂಟ್ ಇದ್ದಾಗ ಪೂರ್ಣವಾಗದ ಆಸೆಗಳಿಲ್ಲ ಎನ್ನುವುದು ನನ್ನ ನಂಬಿಕೆ. 1995ರಲ್ಲಿ ನಾನು ಅಪ್ಪ ಅಮ್ಮನಿಗೆ ಪ್ರೈವೇಟ್ ಜೆಟ್ ಕೊಡಿಸಬೇಕು ಎನ್ನುವ ಕನಸು ಕಂಡಿದ್ದರೆ? ಭಾರತದ ಪ್ರಧಾನಿಯಾಗಬೇಕು ಎನ್ನುವ ಕನಸು ಕಂಡಿದ್ದರೆ? ಸಾಧ್ಯವಾಗುತ್ತಿತ್ತೆ? ನೀವೇಕೆ ಅಂತಹ ಕನಸು ಕಾಣಲಿಲ್ಲ ಎಂದು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸಿರಬಹುದು.

ಇದಕ್ಕೆ ಸಮಾಧಾನ ಹೇಳಿ ಮುಂದಕ್ಕೆ ಹೋಗುವೆ. ನಾವೆಲ್ಲಾ ಸಮಯ ಎನ್ನುವ ಕಟ್ಟಳೆಯಲ್ಲಿ ಕೆಲಸ ಮಾಡಬೇಕು. ನಾವು ಕಳೆಯುವ ಒಂದೊಂದು ವರ್ಷವೂ ಕೆಲವೊಂದು ಕನಸುಗಳನ್ನು ನನಸಾಗಿಸುವುದರಿಂದ ನಮ್ಮಿಂದ ದೂರಕ್ಕೆ ಒಯ್ಯುತ್ತವೆ. ಅಂದರೆ ಅರ್ಥವಿಷ್ಟೆ, ನಾನು ನನ್ನ ಜೀವನದ 23-25 ವರ್ಷವನ್ನು ಓದುವುದರಲ್ಲಿ, ಕಾಮರ್ಸ್ ಮತ್ತು ಎಕನಾಮಿಕ್ಸ್ ಓದುವುದರಲ್ಲಿ ಕಳೆದು ಬಿಟ್ಟಿದ್ದೆ.

ನಾವು ಯಾವ ದಾರಿಯಲ್ಲಿ ಮುಂದಕ್ಕೆ ಬಂದಿರುತ್ತೇವೆ, ಆ ದಾರಿಯಲ್ಲಿನ ಮಹತ್ತರ ಸಾಧನೆಯ ಬಗ್ಗೆ ಕನಸು ಕಾಣಬೇಕು. ಅರ್ಥ ಸಾಧಿಸಲು ಸಾಧ್ಯವಾಗುವ ಕನಸು ಕಾಣಬೇಕು. ಸುಮ್ಮನೆ ಥಿಂಕ್ ಬಿಗ್, ಡ್ರೀಮ್ ಬಿಗ್ ಎನ್ನುವ ವಾಕ್ಯವನ್ನು ಕೇಳಿ ಕನಸು ಕಾಣುವುದರಿಂದ ಪ್ರಯೋಜವಿಲ್ಲ. ದೇಶದ ಪ್ರಧಾನಿಯಾಗುವ ಕನಸು ಅಂತಹುದ್ದು. ಪ್ರೈವೇಟ್ ಜೆಟ್ ಕನಸು ಅಸಾಧ್ಯವೇನಲ್ಲ!

ನಮ್ಮ ಮನಸ್ಸಿಗೆ ಕೂಡ ಇದು ಸಾಧ್ಯ ಎನ್ನಿಸುವ ಟಾರ್ಗೆಟ್, ಕನಸು ಕೊಡಬೇಕು. ಒಂದಿಪ್ಪತ್ತು ಪ್ರತಿಶತ ದೊಡ್ಡ ಮಟ್ಟದ ಕನಸು ಕಂಡರೂ ಓಕೆ. ಆಕಾಶಕ್ಕೆ ಏಣಿ ಹಾಕುವ ಕನಸುಗಳಿಂದ ಸಮಯ ಹಾಳಾಗುತ್ತದೆ. ಈ ಅಂಶವನ್ನು ಸಿರಿವಂತರು ಮನಗಂಡಿದ್ದಾರೆ.

ಯಾವುದು ನಾವು ಹೆಚ್ಚು ಬಾರಿ ಪುನರಾವರ್ತನೆ ಮಾಡುತ್ತೇವೆ ಅದು ನಮ್ಮ ಗುಣಲಕ್ಷಣವಾಗಿ ಬಿಡುತ್ತದೆ. ಈ ಗುಣವನ್ನು ನಾವು ಕೂಡ ನಮ್ಮದಾಗಿಸಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ವಿಷಯವಿರಲಿ ಅದು ಎರಡು ಬಾರಿ ಸೃಷ್ಟಿಯಾಗುತ್ತದೆ ಎನ್ನುವ ಅಂಶವನ್ನು ನಾವು ಮನಗಾಣಬೇಕು. ಪ್ರಥಮವಾಗಿ ಅದು ನಮ್ಮ ಮನಸ್ಸಿನಲ್ಲಿ ರೂಪುಗೊಳ್ಳುತ್ತದೆ.

ಎರಡನೆಯದಾಗಿ ಅದು ಭೌತಿಕ ರೂಪವನ್ನು ಪಡೆದುಕೊಳ್ಳುತ್ತದೆ. ಉನ್ನತ ಶಿಕ್ಷಣ ವಿದೇಶದಲ್ಲಿ ಮಾಡಬೇಕು ಎನ್ನುವ ಕನಸು, ಬಯಕೆ ಮೊದಲು ರೂಪಗೊಂಡದ್ದು ಮನಸ್ಸಿನಲ್ಲಿ, ನಂತರ ನಿಜವಾಗಿ ಅಲ್ಲಿಗೆ ಹೋಗುವುದು ಅಲ್ಲವೇ? ಮನೆ ಕಟ್ಟುವುದು, ಮದುವೆಯಾಗುವುದು, ಕಾರು ಖರೀದಿ, ಮಕ್ಕಳು.. ಹೀಗೆ ನಮ್ಮ ಬದುಕಿನ ಬಹುತೇಕ ಎಲ್ಲವೂ ಮೊದಲಿಗೆ ನಮ್ಮ ಮನಸ್ಸಿನಲ್ಲಿ ರೂಪ ಪಡೆದುಕೊಳ್ಳುತ್ತವೆ. ಆ ನಂತರ ಜೀವ ಪಡೆದುಕೊಳ್ಳುತ್ತವೆ.

ಹೀಗಾಗಿ ಕನಸು ಎಂದರೆ ಅದೊಂದು ಗುರಿ. ವರ್ತಮಾನದಲ್ಲಿ ನಮ್ಮ ಬಳಿ ಇಲ್ಲದ ಆದರೆ ಭವಿಷ್ಯ ದಲ್ಲಿ ನಮ್ಮದಾಗಿಸಿಕೊಳ್ಳಬಹುದಾದ ವಸ್ತು ಅಥವಾ ವಿಷಯ. ಇಂದು ನಾವು ಏನು ಸಾಧಿಸಿದ್ದೇವೆ ಅದರ ಮೂಲಕ ಸಮಾಜ ನಂಗೊಂದು ಹೆಸರು ಕೊಟ್ಟಿರುತ್ತದೆ. ನಾವೇನು ಮಾಡಬಹುದು ಎನ್ನುವುದು ನಮ್ಮಲ್ಲಿರುವ ಕನಸಿನ ಆಧಾರದ ಮೇಲೆ ನಮ್ಮನ್ನು ನಾವು ಗುರುತಿಸಿಕೊಳ್ಳಬಹುದು.

ಹೀಗಾಗಿ ಕನಸು ಎನ್ನುವುದು ನಾಳೆಯ ಭವ್ಯ ಭವಿಷ್ಯಕ್ಕೆ ಇಂದು ಟಿಕೆಟ್ ಪಡೆದಂತೆ, ನಾಳಿನ ದಾರಿಗೆ ಕೈಲಿ ಹಿಡಿದ ಟಾರ್ಚ್‌ನಂತೆ! ಹಾರಲು ಬೇಕಾಗುವ ಬಲಿಷ್ಠ ರೆಕ್ಕೆಯಂತೆ, ವರ್ತಮಾನದಲ್ಲಿ ಅಡೆತಡೆಯಾಗುವ ಅಂಶಗಳನ್ನು ಎದುರಿಸಲು ಇರುವ ಸಶಕ್ತ ಆಯುಧದಂತೆ ಇದು ಕೆಲಸ ಮಾಡುತ್ತದೆ. ಹೀಗಾಗಿ ಕನಸು ಬದುಕಿಗೆ ಬಹಳ ಮುಖ್ಯ. ಕನಸು ಗುಂಪಿನಿಂದ ನಮ್ಮನ್ನು ಬೇರ್ಪಡಿಸುವುದು ಮಾತ್ರವಲ್ಲ, ವರ್ತಮಾನದ ನಮ್ಮಿಂದ ಭವಿಷ್ಯದ ನಮಗೆ ಇರುವ ಅಂತರಕ್ಕೆ ನಾವೇ ಕಟ್ಟಿಕೊಂಡಿರುವ ಸೇತುವೆ ಕೂಡ ಹೌದು.

ಹೀಗಾಗಿ ಕನಸು ಎನ್ನುವುದು ಸಾಧಿಸಲು ಸಾಧ್ಯವಾಗುವಂತೆ ಇರಲಿ, ಬಲಿಷ್ಠವಾಗಿರಲಿ, ಮತ್ತು ಅದು ಪದೇಪದೆ ಬದಲಾಗದೆ ಗಟ್ಟಿಯಾಗಿರಲಿ. ಸಿರಿವಂತರ, ಯಶಸ್ವಿ ವ್ಯಕ್ತಿಗಳ ಈ ಗುಣವನ್ನು ನಾವು ಕೂಡ ದತ್ತು ತೆಗೆದುಕೊಳ್ಳಬಹುದು. ಹೀಗೆ ದತ್ತು ತೆಗೆದುಕೊಳ್ಳುವುದಕ್ಕೆ, ನಮ್ಮದೆಂದು ಸಾಕಿಕೊಳ್ಳುವುದಕ್ಕೆ ಯಾವ ಅಡೆತಡೆಯೂ ಇಲ್ಲ. ಈ ಕನಸು ನನ್ನದು ಎನ್ನುವ ಪೇಟೆಂಟ್ ಕೂಡ ಯಾರೂ ಮಾಡಿಸಿಕೊಂಡಿಲ್ಲ. ಹೀಗಾಗಿ ಮುಕ್ತವಾಗಿ, ಸ್ವಚ್ಛವಾಗಿ, ಹೀಗಾಗಬೇಕು ಎನ್ನುವ ಗುರಿಯ ಕನಸು ನಮ್ಮದಾಗಲಿ.

‘ತನ್ತುಮಾತ್ರೋ ಭವೇದೇವ ಪಾತೋ ಯದ್ವದ್ವಿಚರಿತಃ, ಆತ್ಮಾ ತನ್ಮಾತ್ರಂ ಏವೇದಂ ತದ್ವದ್ವಿಶ್ವಂ ವಿಚಾರಿತಮ್’. ಒಂದು ಬಟ್ಟೆಯನ್ನು ನೋಡಿ, ಅದರಲ್ಲಿರುವುದು ಎಲ್ಲಾ ನೂಲಿನ ಎಳೆಗಳೇ. ಆದರೆ ಕೆಲವು ನೂಲುಗಳ ಮೇಲೆ ಚಿತ್ತಾರವಿದೆ, ಕೆಲವು ಹಾಗೆ ಉಳಿದುಕೊಂಡಿವೆ.

ಒಟ್ಟಾರೆ ಬಟ್ಟೆ ಉತ್ಪನ್ನವಾದದ್ದು ಈ ನೂಲುಗಳಿಂದ, ಆದರೆ ಕೆಲವು ನೂಲುಗಳು ಬಣ್ಣದ ಚಿತ್ತಾರ ರೂಪಿಸಿಕೊಂಡು ಅಂದವನ್ನು ಹೆಚ್ಚಿಸಿವೆ. ಒಂದೇ ನೂಲು ವಿಭಿನ್ನವಾಗುವುದು ತನ್ನಲ್ಲಿರುವ ಅಂತಃಸತ್ವದಿಂದ ಎನ್ನುವ ಅರ್ಥವನ್ನು ಈ ಶ್ಲೋಕ ನೀಡುತ್ತದೆ. ಸೃಷ್ಟಿಯಲ್ಲಿನ ಸಣ್ಣ ಕ್ರಿಮಿಯಿಂದ ಪ್ರಜ್ವಲಿಸುವ ಸೂರ್ಯನವರೆಗೆ ಎಲ್ಲರಲ್ಲೂ ಇರುವುದು ಅದೇ ಚೇತನ. ಆದರೂ ಇಷ್ಟೊಂದು ಬೇಧ ಉಂಟಾಗಿರುವುದು, ಬಡವ-ಶ್ರೀಮಂತ, ಸೋಲು- ಗೆಲುವು ಇವೆಲ್ಲವೂ ಸೃಷ್ಟಿಯಾಗಿರುವುದು ಕರ್ಮದ ಕಾರಣದಿಂದ, ನಮ್ಮಲ್ಲಿರುವ ಶಕ್ತಿಯನ್ನು ಹೇಗೆ ಬಳಸಿಕೊಂಡೆವು ಎನ್ನುವುದರ ಆಧಾರದ ಮೇಲೆ.

ಇದರರ್ಥ ಉನ್ನತಿಗೆ ಬೇಕಾದ ಎಲ್ಲವೂ ಎಲ್ಲರ ಬಳಿಯೂ ಇದೆ. ಅದನ್ನು ಗುರುತಿಸಿ ಸರಿಯಾಗಿ ದುಡಿಸಿಕೊಳ್ಳುವುದು ನಮ್ಮ ಕೈಲಿದೆ. ಸಿರಿವಂತರಿಗೆ, ಯಶಸ್ವಿ ಗಳಿಗೆ ನಾವು ಯಾರಿಗಿಂತಲೂ ಕಡಿಮೆಯಿಲ್ಲ, ನಮ್ಮಿಂದ ಎಲ್ಲವೂ ಸಾಧ್ಯ ಎನ್ನುವುದರ ಅರಿವಾಗಿರುತ್ತದೆ. ಅದನ್ನು ಅವರು ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಂಡಿರುತ್ತಾರೆ. ಅದು ಬದುಕಾಗಿರುತ್ತದೆ. ಅದು ಅವರ ಗುಣಲಕ್ಷಣವಾಗಿ ಪರಿವರ್ತನೆ ಗೊಂಡಿರುತ್ತದೆ. ಈ ಗುಣವನ್ನು ಯಾರು ಬೇಕಾದರೂ ಅವರದ್ದಾಗಿಸಿ ಕೊಳ್ಳಬಹುದು. ಮೊದಲೇ ಹೇಳಿದಂತೆ ಇದಕ್ಕೆ ಯಾವುದೇ ಪೇಟೆಂಟ್ ಇಲ್ಲ.