Rangaswamy Mookanahalli Column: ದುಡ್ಡಿಲ್ಲದೆ ಜಗವಿಲ್ಲ, ದುಡ್ಡಿದ್ದರೆ ಜಗವೆಲ್ಲ !
ಒಂದು ಸಂಸ್ಥೆ ನಡೆಯಬೇಕಾದರೆ ಹಣ ಬಹಳ ಮುಖ್ಯವಾಗುತ್ತದೆ. ಇವತ್ತಿಗೆ ಅವರ ಪ್ರಕಾಶನ ಸಂಸ್ಥೆ, ಟ್ರಸ್ಟ್ ತನ್ನೆಲ್ಲಾ ಖರ್ಚುಗಳನ್ನು ಸರಿದೂಗಿಸಿಕೊಂಡು ಎರಡು ಕೋಟಿಯಷ್ಟು ಹಣ ವನ್ನು ಹೊಂದಿದೆ ಎನ್ನುವ ಮಾತನ್ನು ಅವರು ಆಡಿದರು. ಒಳ್ಳೆಯ ಕೆಲಸ ಮಾಡಲು ಕೂಡ ಹಣ ಬೇಕು. ಹಣ ಗಳಿಸುವುದು, ಅದು ಕೂಡ ಸನ್ಮಾರ್ಗದಲ್ಲಿ ಹಣ ಗಳಿಸುವುದು ತಪ್ಪಲ್ಲ. ಅದು ಹಕ್ಕು. ಈ ಮಾತುಗಳನ್ನು ನಮ್ಮ ಎಲ್ಲಾ ಕಲಾವಿದರು, ಬರಹಗಾರರು ಅರಿತುಕೊಳ್ಳಬೇಕು.
-
ವಿಶ್ವರಂಗ
ಶುಕ್ರವಾರ, ಶನಿವಾರ ಮತ್ತು ಭಾನುವಾರ ಬೆಂಗಳೂರು ನಗರವು ಪುಸ್ತಕ ಸಂತೆಗೆ ಸಾಕ್ಷಿ ಯಾಯ್ತು. ಶನಿವಾರ ಬೆಳಗಿನ ಹನ್ನೆರಡು ಗಂಟೆಯಿಂದ ಸಂಜೆ ಏಳರವರೆಗೂ ಅಲ್ಲಿದ್ದು ಅಲ್ಲಿಗೆ ಹರಿದುಬಂದ ಜನಸಮೂಹಕ್ಕೆ ಸಾಕ್ಷಿಯಾದೆ. ಶನಿವಾರ ವೀರಲೋಕದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ.
‘ಸಾಹಿತ್ಯದಲ್ಲಿ ಸಂಪಾದಿಸುವುದು ಹೇಗೆ?’ ಎನ್ನುವುದು ವಿಷಯವಾಗಿತ್ತು. ಲೇಖಕರನ್ನು ನಾನು ಪ್ರತಿನಿಧಿಸುತ್ತಿದ್ದೆ. ಪ್ರಕಾಶಕರನ್ನು ಸಪ್ನಾ ಬುಕ್ ಹೌಸಿನ ದೊಡ್ಡೇಗೌಡರು ಪ್ರತಿನಿಧಿ ಸುತ್ತಿದ್ದರು. ನಮ್ಮನ್ನು ಮಹೇಶ ಅರಬಳ್ಳಿ ಅವರು ಸಂದರ್ಶಿಸುತ್ತಿದ್ದರು. ಹಣದ ಬಗ್ಗೆ ಮುಕ್ತವಾಗಿ ನಮ್ಮಲ್ಲಿ ಚರ್ಚೆಯಾಗುವುದೇ ಇಲ್ಲ. ಈ ವಿಷಯದಲ್ಲಿ ಬಹಳಷ್ಟು ಜನ ಮನಸ್ಸಿನಲ್ಲಿ ಮಂಡಿಗೆಯನ್ನು ತಿನ್ನುತ್ತಾರೆ.
ಮುಕ್ತವಾಗಿ ಹೇಳಿದರೆ ಎಲ್ಲಿ ಜನ ‘ಧನದಾಹಿ’ ಎಂದುಕೊಳ್ಳುತ್ತಾರೋ ಎನ್ನುವ ಭಯ. ಬರಹವನ್ನು ನಂಬಿಕೊಂಡು ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲವೇ? ಒಬ್ಬ ಲೇಖಕ ಒಂದು ಲೇಖನ ಬರೆಯಬೇಕು ಎಂದರೆ ಅದಕ್ಕೆ ಒಂದಷ್ಟು ತಯಾರಿ ಬೇಕೇಬೇಕು. ಓದ ಬೇಕು, ಅದನ್ನು ಸರಿಯಾಗಿ ಜೀರ್ಣಿಸಿಕೊಳ್ಳಬೇಕು ಮತ್ತು ಅದನ್ನು ಸರಿಯಾದ ರೀತಿಯಲ್ಲಿ ವಿಶ್ಲೇಷಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಇದರ ಜತೆಗೆ ಬರಹ ಹೆಚ್ಚು ತ್ರಾಸು ನೀಡದೆ ಓದಿಸಿಕೊಂಡು ಹೋಗುವಂತೆ ಕೂಡ ಇರಬೇಕು.
ಒಂದು ಲೇಖನ ಬರೆಯಲು ಕನಿಷ್ಠ ಒಂದೆರಡು ತಾಸು ಅವರು ವ್ಯಯಿಸಬೇಕಾಗುತ್ತದೆ. ಇನ್ನು ಒಂದು ಪುಸ್ತಕವನ್ನು ಬರೆಯಲು ಮೂರು ತಿಂಗಳು ಬೇಕಾಗುತ್ತದೆ. ಸಮಾಜಕ್ಕೆ, ಓದುಗರಿಗೆ ಏನು ಬೇಕು ಎಂದು ಅರಿಯುವುದು ಬಹಳ ಮುಖ್ಯ. ಇಷ್ಟೆ ಮಾಡಿ ಕೂಡ ಒಬ್ಬ ಲೇಖಕ ಗೆಲ್ಲುತ್ತಾನೆ ಎನ್ನುವುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ.
ಇದನ್ನೂ ಓದಿ: Rangaswamy Mookanahalli Column: ಸಾಧಿಸುವ ಮನಸ್ಸಿದ್ದರೆ ನಮ್ಮೆಲ್ಲಾ ಕನಸುಗಳೂ ಈಡೇರುತ್ತವೆ !
ಆದರೆ, ಆತನ ಶ್ರಮಕ್ಕೆ ತಕ್ಕಷ್ಟು ಅಲ್ಲದಿದ್ದರೂ ಒಂದು ಗೌರವಧನವನ್ನು ಆತ ಬಯಸಿದರೆ ತಪ್ಪೇನು? ಮೊದಲ ಸಾಲುಗಳಲ್ಲಿ ಹೇಳಿದಂತೆ ಹಣದ ಬಗ್ಗೆ ಮಾತಾಡುವುದು ಮಹಾ ಪರಾಧ ಎನ್ನುವ ಸನ್ನಿವೇಶ ನಮ್ಮ ಸಮಾಜದಲ್ಲಿದೆ. ಅದು ಎಲ್ಲಾ ವಲಯದಲ್ಲೂ ಇಲ್ಲ. ಕಲಾವಿದರು ಮತ್ತು ಬರಹಗಾರರಲ್ಲಿ ಇದು ಬಹಳ ಹೆಚ್ಚಿದೆ.
ಯಾರೆಲ್ಲಾ ಸೃಜನಾತ್ಮಕ ಕೆಲಸದಲ್ಲಿ ತೊಡಗಿದ್ದಾರೆ ಅವರೆಲ್ಲಾ ಹಣದ ಬಗ್ಗೆ ಮಾತಾಡಲು, ‘ನನ್ನ ಕಾರ್ಯಕ್ಕೆ ಇಷ್ಟು ಹಣ ಬೇಕು’ ಎನ್ನಲು ಬಹಳ ಸಂಕೋಚ ಪಡುತ್ತಾರೆ. ಅದರಲ್ಲೂ ಉದಯೋನ್ಮುಖ ಬರಹಗಾರರು ಅಥವಾ ಕಲಾವಿದರು ಆಗಿದ್ದು ಅವರು ಹಣದ ಬಗ್ಗೆ ಮಾತಾಡಿದಾದರೆ ಅಲ್ಲಿಗೆ ಅವರ ಪಯಣ ಕೊನೆಯಾಗಿಬಿಡುತ್ತದೆ.
ಸಿನಿಮಾ ಮತ್ತು ಕಿರುತೆರೆ ಕ್ಷೇತ್ರದಲ್ಲಿ ಕೆಲಸ ಮಾಡುವವರ ಪಾಡು ಇದಕ್ಕಿಂತ ವಿಭಿನ್ನ ವಾಗೇನೂ ಇಲ್ಲ. ಅಲ್ಲಿ ಒಂದಿಬ್ಬರು ಪೋಷಕ ಪಾತ್ರ ಮಾಡುವವರಿಗೆ, ನಾಯಕ ಮತ್ತು ನಾಯಕಿ ಪಾತ್ರಧಾರಿಗಳಿಗೆ ಸಂಭಾವನೆ ಕೊಟ್ಟರೆ ಅಲ್ಲಿಗೆ ಮುಗಿಯಿತು.
ಉಳಿದವರನ್ನು ದಿನಗೂಲಿಗಳ ಲೆಕ್ಕದಲ್ಲಿ ನೋಡಲಾಗುತ್ತದೆ. ಅದೇಕೆ ನಮ್ಮ ಕಲಾವಿದರು, ಬರಹಗಾರರು ಇದರ ಬಗ್ಗೆ ಮಾತಾಡುವುದಿಲ್ಲ? ಬರಹವನ್ನು ನಂಬಿಕೊಂಡು ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲವೇ? ಪಾಶ್ಚಾತ್ಯ ದೇಶಗಳಲ್ಲಿ ಬರಹದಿಂದ ಅತ್ಯುತ್ತಮ ಬದುಕನ್ನು ಕಟ್ಟಿಕೊಂಡವರ ಸಂಖ್ಯೆ ಬಹಳವಿದೆ.
ಹಿಂದಿ ಭಾಷೆಯಲ್ಲಿ ಸಹ ಬಹಳ ಜನರಿದ್ದಾರೆ. ಇನ್ನು ಇಂಗ್ಲಿಷಿನಲ್ಲಿ ಬರೆಯುವ ಭಾರತೀಯ ಬರಹಗಾರರ ಬದುಕು ಸಹ ಚೆನ್ನಾಗಿದೆ. ಕನ್ನಡ ಭಾಷೆಯಲ್ಲಿ ಇದು ಸಾಧ್ಯವಿಲ್ಲವೇ? ನನ್ನ ಪ್ರಕಾರ ಸಾಧ್ಯವಿದೆ. ಬರಹದಿಂದ ಬದುಕನ್ನು ಕಟ್ಟಿಕೊಂಡವರ ಸಂಖ್ಯೆ ನಮ್ಮಲ್ಲೂ ಬಹಳ ವಿದೆ. ಈ ರೀತಿ ಬದುಕನ್ನು ಕಟ್ಟಿಕೊಂಡವರನ್ನು ನಾವು ಸಂಭ್ರಮಿಸುತ್ತಿಲ್ಲ.
ಹಣದ ಬಗ್ಗೆ ಮಾತಾಡುವುದು ಪಾಪ ಎನ್ನುವ ಪಾಪಪ್ರಜ್ಞೆಯಿಂದ ನಮ್ಮ ಸಮಾಜ ಹೊರಬರಬೇಕಿದೆ. ಬರಹಗಾರರು ಮತ್ತು ಕಲಾವಿದರು ಕೂಡ ಎಲ್ಲರಂತೆ ಮನುಷ್ಯರೇ, ಅವರಿಗೂ ಬದುಕಿದೆ. ಜೀವಿಸಲು ಅವರಿಗೂ ಹಣದ ಅವಶ್ಯಕತೆಯಿದೆ. ಹೆಚ್ಚು ಬೇಕಿಲ್ಲ, ಕಡಿಮೆಯೂ ಬೇಕಿಲ್ಲ, ತಮ್ಮ ಕೆಲಸಕ್ಕೆ ತಕ್ಕ ಪ್ರತಿಫಲವನ್ನು ಬಯಸುವುದು ಮತ್ತು ಅದನ್ನು ಪಡೆದುಕೊಳ್ಳುವುದು ಅದೇಕೆ ತಪ್ಪಾಗುತ್ತದೆ ಎನ್ನುವುದು ನನಗೆ ಇನ್ನೂ ಅರ್ಥ ವಾಗಾದ ವಿಷಯ. ಸೃಜನಾತ್ಮಕ ವ್ಯಕ್ತಿಗಳು ಈ ಬಗ್ಗೆ ಒಂದಷ್ಟು ಬದಲಾಗುವ ಅವಶ್ಯಕತೆ ಖಂಡಿತ ಇದೆ.
ನಮ್ಮ ವಸುಧೇಂದ್ರ, ಮಣಿಕಾಂತ್ ಪುಸ್ತಕ ಮಾರಾಟದಿಂದ ಗಳಿಸಿದ್ದಾರೆ. ಹಾಗೆಯೇ, ಇತ್ತೀಚಿಗೆ ನಿಧನರಾದ ಎಸ್.ಎಲ್. ಭೈರಪ್ಪನವರು ಈ ಸಾಲಿನಲ್ಲಿ ಮೊದಲು ನಿಲ್ಲುತ್ತಾರೆ. ರವಿ ಬೆಳಗೆರೆ ಇರಬಹುದು ಅಥವಾ ನನ್ನ ನೆಚ್ಚಿನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಇರಬಹುದು, ಹಾಗೆಯೇ ನಮ್ಮ ಅರಿವಿಗೆ ಬಾರದ ಬಹಳಷ್ಟು ಜನ ಬರಹದಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದನ್ನು ನಾವು ಸಂಭ್ರಮಿಸಬೇಕು. ಯುವ ಬರಹ ಗಾರರು, ಕಲಾವಿದರು ಇಂಥವರನ್ನು ಮಾದರಿಯಾಗಿ ಇಟ್ಟುಕೊಂಡು ಕೆಲಸ ಮಾಡಲು ಶುರು ಮಾಡಬೇಕು.
ವೀರಲೋಕದ ಶನಿವಾರದ ಸಂವಾದ ಕಾರ್ಯಕರ್ಮದಲ್ಲಿ ನಾನು ಪ್ರತಿಪಾದಿಸಿದ್ದು ಇದೇ ಅಂಶಗಳನ್ನು. ರಸ್ತೆಯಲ್ಲಿ ಬಜ್ಜಿ ಬೋಂಡಾ ಹಾಕುವವರು ಕೂಡ ಉತ್ತಮ ಬದುಕನ್ನು ಕಟ್ಟಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಬರಹಗಾರ ಮಾತ್ರ ಬರಿಗೈಯಲ್ಲಿ ಕೂರುವುದು ನಾವು ಅವರಿಗೆ ಮಾತ್ರ ಮಾಡುತ್ತಿರುವ ಅವಮಾನವಲ್ಲ, ಅದು ನಮಗೆ ನಾವು ಮಾಡಿ ಕೊಂಡ ಅವಮಾನ ಕೂಡ.
ಸಮಾಜಕ್ಕೆ ಮಾಡಿದ ಅವಮಾನ. ಹಣ ಎನ್ನುವುದು ಪ್ರತಿಯೊಬ್ಬನಿಗೂ ಬದುಕಿಗೆ ಬೇಕಾದ ಮೂಲದ್ರವ್ಯ. ಅದನ್ನು ಗಳಿಸುವುದು ಎಲ್ಲರ ಹಕ್ಕು ಹಾಗೂ ಭಾದ್ಯತೆ ಕೂಡ. ಭಾನುವಾರ ಸಾವಣ್ಣ ಪ್ರಕಾಶನದ ವತಿಯಿಂದ ಆರು ಪುಸ್ತಕಗಳು ಲೋಕಾರ್ಪಣೆಯಾದವು. ಅದರಲ್ಲಿ ನನ್ನ ಪುಸ್ತಕವೂ ಇತ್ತು. ಅಲ್ಲಿ ಗುರುರಾಜ ಕರ್ಜಗಿ ಅವರು ಮುಖ್ಯ ಅತಿಥಿಯಾಗಿ ಬಂದಿ ದ್ದರು. ಅವರು ತಮ್ಮದೇ ಆದ ಪ್ರಕಾಶನ ಸಂಸ್ಥೆಯನ್ನು ಹೊಂದಿದ್ದಾರೆ.
ಒಂದು ಸಂಸ್ಥೆ ನಡೆಯಬೇಕಾದರೆ ಹಣ ಬಹಳ ಮುಖ್ಯವಾಗುತ್ತದೆ. ಇವತ್ತಿಗೆ ಅವರ ಪ್ರಕಾಶನ ಸಂಸ್ಥೆ, ಟ್ರಸ್ಟ್ ತನ್ನೆಲ್ಲಾ ಖರ್ಚುಗಳನ್ನು ಸರಿದೂಗಿಸಿಕೊಂಡು ಎರಡು ಕೋಟಿ ಯಷ್ಟು ಹಣವನ್ನು ಹೊಂದಿದೆ ಎನ್ನುವ ಮಾತನ್ನು ಅವರು ಆಡಿದರು. ಒಳ್ಳೆಯ ಕೆಲಸ ಮಾಡಲು ಕೂಡ ಹಣ ಬೇಕು. ಹಣ ಗಳಿಸುವುದು, ಅದು ಕೂಡ ಸನ್ಮಾರ್ಗದಲ್ಲಿ ಹಣ ಗಳಿಸುವುದು ತಪ್ಪಲ್ಲ. ಅದು ಹಕ್ಕು. ಈ ಮಾತುಗಳನ್ನು ನಮ್ಮ ಎಲ್ಲಾ ಕಲಾವಿದರು, ಬರಹಗಾರರು ಅರಿತುಕೊಳ್ಳಬೇಕು.
ನನ್ನ ಪುಸ್ತಕ ಪ್ರಕಟವಾದರೆ ಸಾಕು ಎನ್ನುವ ಮನೋಭಾವದಿಂದ ಅವರು ಹೊರಬರಬೇಕು. ಹೆಚ್ಚು ಅಧ್ಯಯನ ಮಾಡಿ ಉತ್ತಮ ವಿಷಯವನ್ನು ಇಟ್ಟುಕೊಂಡು ಬರೆಯಬೇಕು. ಕೇವಲ ‘ನಾನೂ ಒಬ್ಬ ಬರಹಗಾರ, ಸಾಹಿತಿ’ ಎನ್ನುವ ಹಣೆಪಟ್ಟಿಯು ಹೊಟ್ಟೆಯನ್ನೂ ಎಂದಿಗೂ ತುಂಬಿಸುವುದಿಲ್ಲ.
ಪ್ರಕಾಶಕರು ಪುಸ್ತಕದ ಬೆಲೆಯಲ್ಲಿ ಲೇಖಕರ ಸಂಭಾವನೆಯನ್ನು ಖಂಡಿತ ಸೇರಿಸಿರುತ್ತಾರೆ. ಅವರ ಹಣವನ್ನು ಅವರಿಗೆ ಕೊಡಲು ಅದೇಕೆ ಅಷ್ಟು ಕೈ ಹಿಡಿತ? ಒಬ್ಬ ಲೇಖಕ ಸಂಪಾದಿಸಿ ದರೆ ಆತ ಇನ್ನಷ್ಟು ಉತ್ಸಾಹದಿಂದ ಅಧ್ಯಯನ ಮಾಡಿ ಪುಸ್ತಕವನ್ನು ಖಂಡಿತ ಬರೆಯು ತ್ತಾನೆ.
ಜಗತ್ತಿನಲ್ಲಿ ಎಲ್ಲಾ ರೀತಿಯ ಕೆಲಸ ಮಾಡುವವರು ಕೂಡ ಅದಕ್ಕೆ ಪ್ರತಿಯಾಗಿ ಒಂದಷ್ಟು ಸಂಭಾವನೆ ಪಡೆದುಕೊಳ್ಳುತ್ತಾರೆ. ಆದರೆ ಕಲಾವಿದ ಮತ್ತು ಬರಹಗಾರರಿಗೆ ಮಾತ್ರ ಬೇರೆ ರೀತಿಯ ಟ್ರೀಟ್‌ಮೆಂಟ್ ದೊರೆಯುತ್ತಿದೆ. ಇದರ ಬಗ್ಗೆ ನಮ್ಮಲ್ಲಿ ಮನಸ್ಥಿತಿ ಬದಲಾಗಬೇಕಿದೆ.
ಸಂವಾದ, ಮಾತುಕತೆ ಮುಗಿದ ನಂತರ ಅಲ್ಲಿದ್ದ ಕೇಳುಗರಲ್ಲಿ ಒಂದಷ್ಟು ಜನ ನನ್ನ ಬಳಿ ಬಂದು ತಮ್ಮ ಅಸಮಾಧಾನವನ್ನು ತೋಡಿಕೊಂಡರು. ಸಾಹಿತಿಯಾದವನು ಹಣದ ಹಿಂದೆ ಓಡಬಾರದು ಎನ್ನುವುದು ಅವರ ಮಾತಿನ ಸಾರಾಂಶ. ನಾನು ಹಣದ ಹಿಂದೆ ಓಡುವುದರ ಬಗ್ಗೆ ಮಾತನ್ನು ಆಡಲೇ ಇಲ್ಲ. ಪ್ರತಿಯೊಬ್ಬರಿಗೂ ತಮ್ಮ ಬೆವರಿನ ಫಲವನ್ನು ಪಡೆಯುವ ಹಕ್ಕಿದೆ ಎಂದಷ್ಟೇ ಹೇಳಿದ್ದೆ.
ನಮ್ಮಲ್ಲಿ ಹಣದ ಬಗೆಗಿನ ನಂಬಿಕೆಗಳು ಅದೆಷ್ಟು ಆಳವಾಗಿ ಬೇರೂರಿವೆ ಎಂದರೆ, ಒಬ್ಬ ಒಳ್ಳೆ ಸಾಹಿತಿ ಕೇವಲ ಉತ್ತಮ ಸಾಹಿತ್ಯವನ್ನು ಮಾತ್ರ ಕೊಡುತ್ತಿರಬೇಕು. ಆತ ಒಪ್ಪೊತ್ತಿನ ಊಟಕ್ಕೆ ಇಲ್ಲದಿದ್ದರೂ ಹಣದ ಬಗ್ಗೆ ಮಾತ್ರ ಮಾತಾಡಬಾರದು! ಇದ್ಯಾವ ಸೀಮೆ ನ್ಯಾಯ? ಪ್ರಮಾಣ ಮಾಡಿ ಹೇಳುತ್ತೇನೆ, ಹಿಂದೆಯೂ ಮತ್ತು ಇಂದಿಗೂ ಒಳ್ಳೆಯ ಸಾಹಿತಿಯ ಹೆಸರಿನಲ್ಲಿ ಬಹಳಷ್ಟು ಜನ ಹಣ ಮಾಡಿಕೊಂಡಿದ್ದಾರೆ.
ಅವರೆಲ್ಲರಿಗೂ ಇಲ್ಲದ ನೈತಿಕತೆಯ ಪಾಠ ಕೇವಲ ಮತ್ತು ಕೇವಲ ಸಾಹಿತಿಗೆ ಮಾತ್ರ ಏಕೆ ಸೀಮಿತ? ಬದಲಾದ ಕಾಲಘಟ್ಟದಲ್ಲಿ ಸಾಹಿತಿಗಳು, ಕಲಾವಿದರು ತಮ್ಮ ಹಕ್ಕಿನ ಬಗ್ಗೆ ಇನ್ನಷ್ಟು ಜಾಗೃತರಾಗಬೇಕಿದೆ.
ಕೇಳುಗರಲ್ಲಿ ಒಬ್ಬರಂತೂ ‘ಬರೆಯುವುದು ಆತ್ಮತೃಪ್ತಿಗೆ, ಅದರ ಜತೆಗೆ ಹಣವನ್ನು ಜೋಡಿಸಿ ನೀವು ಅದಕ್ಕೆ ಅಪಮಾನ ಮಾಡಿದಿರಿ’ ಎನ್ನುವಂತೆ ಮಾತಾಡಿದರು. ಹಣ ಮತ್ತು ಸಾಹಿತ್ಯ ಎರಡೂ ಎಣ್ಣೆ ಮತ್ತು ಸೀಗೆಕಾಯಿ ಎನ್ನುವ ಭಾವನೆಯನ್ನು ಅದೆಷ್ಟು ಚೆನ್ನಾಗಿ ಬಿತ್ತಿದ್ದಾರೆ ನೋಡಿ!
ಬರಹಗಾರರನ್ನು ಬದಿಗಿಡಿ, ಓದುಗ ಕೂಡ ತನ್ನ ನೆಚ್ಚಿನ ಲೇಖಕ ಹಣದ ಬಗ್ಗೆ ಮಾತಾಡಿ ದರೆ ಸಹಿಸುವುದಿಲ್ಲ. ‘ಈತ ಸರಿಯಿಲ್ಲ, ವ್ಯಾವಹಾರಿಕ ವ್ಯಕ್ತಿ’ ಎನ್ನುವ ಹಣೆಪಟ್ಟಿ ಹಚ್ಚಿ ಬಿಡುತ್ತಾರೆ. ಹಣದ ಬಗೆಗಿನ ಕೆಲವೊಂದು ನಂಬಿಕೆಗಳನ್ನು ಬದಲಿಸಲು ಇನ್ನೆಷ್ಟು ತಲೆಮಾರು ಬೇಕಾಗುತ್ತದೋ ಭಗವಂತನೇ ಬಲ್ಲ.
ಹಣದ ಬಗ್ಗೆ ಅಪಾರ ಪ್ರೀತಿ, ವಿಶ್ವಾಸ, ಅದನ್ನ ಪಡೆಯಲು ಬೇಕಾಗುವ ಸಂಯಮದ ಜತೆಗೆ, ಅದನ್ನ ಪಡೆದಂತೆ, ಉತ್ತಮವಾಗಿ ವಿನಿಯೋಗಿಸಿದಂತೆ ಕನಸು ಕಾಣುವುದು ಕೂಡ ಬಹಳ ಅಗತ್ಯ. ಮನಶ್ಶಾಸ್ತ್ರಜ್ಞರು ಇದಕ್ಕೆ ಪ್ರೊ-ಆಕ್ಟಿವ್ ಎನ್ನುತ್ತಾರೆ. ಹಣವನ್ನ ಗಳಿಸಿದಂತೆ, ಗಳಿಸಿದ ಮೇಲೆ ಅದನ್ನ ಗಳಿಸಿದ ಸಂತೋಷವನ್ನ ಬಂಧು ಮಿತ್ರರೊಂದಿಗೆ ಹಂಚಿ ಕೊಂಡಂತೆ ಕನಸು ಕಾಣುವುದು ಮುಖ್ಯ.
ಕಂಡ ಕನಸುಗಳನ್ನು ನಿಜವಾಗಿಸಲು ಕಾರ್ಯತತ್ಪರಾಗುವುದು ಕೂಡ ಬಹಳ ಮುಖ್ಯ. ಸಂಸ್ಕೃತ ಸುಭಾಷಿತವೊಂದು ‘ಯದ್ಭಾವಂ ತದ್ಭವತಿ’ ಎನ್ನುತ್ತದೆ. ಸರಳ ಕನ್ನಡದಲ್ಲಿ ‘ಮನಸ್ಸಿನಂತೆ ಮಹಾದೇವ’ ಎನ್ನಲಾಗುತ್ತದೆ. ಇವೆಲ್ಲವುಗಳ ಅರ್ಥ ಒಂದೇ, ನಾವೇನು ಬಯಸುತ್ತೇವೋ, ನಾವೇನು ಧ್ಯಾನಿಸುತ್ತೇವೋ ಅದು ಸಿಗುತ್ತದೆ.
ಅಲ್ಲಿಯವರೆಗೆ ಪ್ರಯತ್ನ ನಿಲ್ಲಬಾರದು. ಅದು ಮೊದಲ ಪ್ರಯತ್ನಗಳಲ್ಲಿ ಸಿಗಲಿಲ್ಲ ಎಂದ ಮಾತ್ರಕ್ಕೆ ಅದರ ವಿರುದ್ಧ, ಅಥವಾ ಅದರ ಬಗ್ಗೆ ಹಗುರವಾಗಿ ಮಾತನಾಡುವುದನ್ನ ಮಾಡಬಾರದು. ನೀವೇ ಗಮನಿಸಿ ನೋಡಿ, ನಮ್ಮಲ್ಲಿ ಬಹುತೇಕರು ‘ಹಣ ಅಷ್ಟೊಂದು ಮುಖ್ಯವಲ್ಲ’, ‘ಹಣಕ್ಕೆ ನಾನು ಬೆಲೆ ಕೊಡುವುದಿಲ್ಲ’, ‘ಹಣದ ಬಗ್ಗೆ ನನಗ್ಯಾವ ಆಸಕ್ತಿಯಿಲ್ಲ’ ಎನ್ನುವ ಮಾತುಗಳನ್ನ ಆಡುವುದನ್ನ ನಾವು ಕೇಳಿರುತ್ತೇವೆ, ಕೇಳುತ್ತಲೇ ಇರುತ್ತೇವೆ.
ನಮ್ಮ ಕಲಾವಿದರು, ಬರಹಗಾರರು ಮತ್ತು ಮಾಡುವ ಕೆಲಸದಲ್ಲಿ ಹತ್ತಾರು ಬಾರಿ ಸೋತವರಲ್ಲಿ ಇದು ಹೆಚ್ಚು. ಅವರ ಅಂತರಾತ್ಮದಲ್ಲಿ ಅವರಿಗೆ ಹಣದ ಅವಶ್ಯಕತೆ ಹೆಚ್ಚಾಗಿರುತ್ತದೆ. ಅವರಿಗೆ ಹಣ ಬೇಕಾಗಿರುತ್ತದೆ. ಹಣವನ್ನ ಒಲಿಸಿಕೊಳ್ಳುವ ಮನಸ್ಥಿತಿ, ಅದಕ್ಕೆ ಬೇಕಾಗುವ ಸಿದ್ಧತೆ ಇರದ ಕಾರಣ ಹಣದ ಬಗ್ಗೆ ಉಡಾಫೆಯ ಮಾತುಗಳನ್ನ ಆಡಲು ಶುರುಮಾಡುತ್ತಾರೆ.
ನಿಮಗೆ ನೆನಪಿರಲಿ ‘ಬಾಯಲ್ಲಿ ಆಡಿದ್ದು ಬೆನ್ನಿಗೆ ಮೂಲ’ ಎನ್ನುತ್ತದೆ ಒಂದು ನಾಣ್ಣುಡಿ. ನಾವು ಆಡಿದ ಮಾತುಗಳು ಸುಪ್ತ ಮನಸ್ಸಿನಲ್ಲಿ ಆಳವಾಗಿ ಬೇರೂರುತ್ತವೆ. ಆಡಿದ ಮಾತನ್ನು ಮನಸ್ಸು ಮತ್ತು ದೇಹ ಎರಡೂ ಕಾರ್ಯರೂಪಕ್ಕೆ ತರಲು ಪ್ರಾರಂಭಿಸುತ್ತವೆ. ನಾವು ಯಾರಾಗಿರಬೇಕು? ನಮ್ಮ ಗಣತಿ ಸಂಖ್ಯೆಯ ಯಾವ ಕಡೆಗೆ ಇರಬೇಕು? ಎನ್ನುವ ನಿಖರತೆ ನಮಗಿರಬೇಕು. ಅಂಥವರಿಗೆ ಹಣ ಒಲಿಯುವುದು ಕಷ್ಟವಲ್ಲ.
ಕಮಲದ ಹೂವು ಹೇಗೆ ಕೆಸರಿನಲ್ಲಿದ್ದೂ ಅದಕ್ಕೆ ಅಂಟದಂತೆ, ಕೆಸರಿನ ಕೊಳಕು ತನ್ನ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ತನ್ನತನವನ್ನ ಉಳಿಸಿಕೊಳ್ಳುತ್ತದೋ, ಹಾಗೆಯೇ ನಾವು ಕೂಡ ಹಣವನ್ನ ಬಯಸಿಯೂ ಬಯಸದಂತೆ ಇರಬೇಕಾಗುತ್ತದೆ. ಹಣದ ಬಗ್ಗೆಯ ಮೋಹವೂ ಬೇಕು, ಒಂದು ರೀತಿಯ ನಿರ್ಲಿಪ್ತತೆಯೂ ಬೇಕು.
ಇದೊಂದು ವಿಚಿತ್ರ ಮನಸ್ಥಿತಿ. ಹಣದ ಗುಣಕ್ಕೆ ತಕ್ಕಂತೆ ನಾವು ನಮ್ಮ ಗುಣದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ತಂದುಕೊಳ್ಳುವ ಅಗತ್ಯವಿದೆ. ಹಣ ಬೇಕೆನ್ನುವ ವ್ಯಾಪಾರಿ ಮನೋ ಭಾವ, ಏನೂ ಬೇಡವೆನ್ನುವ ಸಂತನ ಮನಸ್ಥಿತಿ ಎರಡರ ಸಂಗಮವದು! ಎಲ್ಲವೂ ಇದ್ದೂ ಏನೂ ಇಲ್ಲದಂತೆ ಬದುಕುವ ವೈರಾಗ್ಯ, ಏನೂ ಇಲ್ಲದೆ ಜಗತ್ತನ್ನ ಗೆಲ್ಲುವ ಆತ್ಮವಿಶ್ವಾಸದ ಮನಸ್ಥಿತಿಯದು!! ಆಧುನಿಕ ಜಗತ್ತಿನಲ್ಲಿ ಇಂಥ ಮನಸ್ಥಿತಿಯನ್ನ ನಾವು ‘ನಿರ್ವಾಣ’ ಎನ್ನಬಹುದೇನೋ? ಇಂಥ ಮನಸ್ಥಿತಿಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಿದೆ.