Ravi Hunj Column: ಡಾಲ್ಡಾವನ್ನೇ ನಂದಿನಿ ತುಪ್ಪ ಎನ್ನುವ ತಪ್ಪು ಕಲ್ಪನೆ ಸೃಷ್ಸಿಸಿದವರು !
ಅಖಂಡ ವೀರಶೈವ ಲಿಂಗಾಯತ ಸಮಾಜದ ಶ್ರೀಸಾಮಾನ್ಯರು ಕೇವಲ ಮತ್ತು ಕೇವಲ ಮೂಗಿನ ಮೇಲಿನ ತುಪ್ಪ (ಡಾಲ್ಡಾ)ವನ್ನು ನೆನೆಯುತ್ತ ಸಿಂಬಳ ನೆಕ್ಕಬಹುದಷ್ಟೇ. ಒಟ್ಟಿನಲ್ಲಿ ಶ್ರೀಸಾಮಾನ್ಯ ನು, “ಆತನ ಸುಖದುಃಖವೀತಗೇನು? ಈತನ ಸುಖದುಃಖವಾತಗೇನು? ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಅರಿವ ಸಂತೈಸಿಕೊಳ್ಳಿ
-
ಬಸವ ಮಂಟಪ (ಭಾಗ-2)
ರವಿ ಹಂಜ್
ಕ್ರಿಸ್ತ ಶಕ 2000ನೇ ಇಸವಿಯಲ್ಲಿ ವೀರಶೈವ ಮಹಾಸಭೆಯು ಸಹ ಕ್ಯಾಪಿಟೇಶನ್ ನಿರ್ವಾಹಕರಿಂದ ದಾರಿ ತಪ್ಪಿಸಲ್ಪಟ್ಟು, ತಮ್ಮ ಸಂಸ್ಥೆಗಳಿಗೆ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಯ ದರ್ಜೆ ಪಡೆಯುವ ಏಕಮಾತ್ರ ದುರುದ್ದೇಶದಿಂದಲೇ ಪ್ರತ್ಯೇಕ ಧರ್ಮದ ಮಾನ್ಯತೆಗೆ ಹೋರಾಡುವಂತೆ ಪ್ರಚೋದಿಸ ಲ್ಪಟ್ಟಿತ್ತು ಎಂಬುದನ್ನು ಇಂದು ವೀರಶೈವ ಲಿಂಗವಂತ ಸಮಾಜ ಸಮಂಜಸವಾಗಿ ಅರಿತು ಕೊಂಡಿದೆ.
‘ಭಾಷಾ ಅಲ್ಪಸಂಖ್ಯಾತ’ ಸಂಸ್ಥೆಯಾದ ಮಣಿಪಾಲ್ ಸಂಸ್ಥೆಯಂತೆ ಹೆಚ್ಚಿನ ಲಾಭಾಂಶವನ್ನು ತಮ್ಮ ಸಂಸ್ಥೆಗಳೂ ಅನುಭವಿಸಬೇಕು ಎಂಬುದು ಈ ಕ್ಯಾಪಿಟೇಷನ್ ಶುಲ್ಕ ನಿರ್ವಾಹಕರ ದೀರ್ಘ ಕಾಲದ ಆಕಾಂಕ್ಷೆಯಾಗಿದೆ. ವಿಪರ್ಯಾಸವೆಂದರೆ ಸಾಮಾಜಿಕ ನ್ಯಾಯ, ಸಮಾನತೆ ಒದಗಿಸುತ್ತೇವೆ ಎಂದು ಒಂದೆಡೆ ಪ್ರಜಾಪ್ರಭುತ್ವದ ಚುನಾಯಿತ ಘನ ಹುದ್ದೆಗಳಲ್ಲಿದ್ದೂ ಹೆಚ್ಚಿನ ಲಾಭಾಂಶದ ವ್ಯಾಪಾರಕ್ಕಾಗಿ ಜಾತಿಗಂಟಿಕೊಂಡಿರುವ ಇಬ್ಬಗೆ ನೀತಿಯ ಈ ನಾಯಕ ಶಿಖಾಮಣಿಗಳು ಯಾವ ಸಮಾಜಕ್ಕೆ, ಯಾವ ರೀತಿಯ ಸಾಮಾಜಿಕ ನ್ಯಾಯವನ್ನೊದಗಿಸುತ್ತಾರೆ ಎಂಬುದು ಶ್ರೀಸಾಮಾನ್ಯನ ಜಿeಸೆಯಾಗಬೇಕಿತ್ತು, ಆದರೆ ಆಗಿಲ್ಲ!
ಹಾಗಾಗಿಯೇ ಈ ವಿದ್ಯಾ ವ್ಯಾಪಾರಿಗಳು ತಮ್ಮ ವಿದ್ಯಾಸಂಸ್ಥೆಗಳು ಮಣಿಪಾಲ್ ಸಂಸ್ಥೆಯಂತೆ ಹೆಚ್ಚಿನ ಲಾಭಾಂಶ ಗಳಿಸಬೇಕೆಂಬ ಏಕೈಕ ಕಾರಣಕ್ಕಾಗಿ ವೀರಶೈವ ಲಿಂಗವಂತ ಸಮಾಜದ ಜನರ ಮೂಗಿಗೆ ತುಪ್ಪ ಸವರಿ ಸಿಂಬಳ ಸುರಿಸುವಂತೆ ಮಾಡಿದ್ದಾರೆ. ನಂತರ 2018ರಲ್ಲಿ ಮತ್ತೆ ಇಂಥ ಪ್ರಮುಖ ಕ್ಯಾಪಿಟೇಶನ್ ನಿರ್ವಾಹಕ-ಕಂ-ಸಚಿವ-ಕಂ-ಧರ್ಮಸಂರಕ್ಷಕರ ಬೆಂಬಲದಿಂದ ಮತ್ತೊಮ್ಮೆ ಮೂಗಿಗೆ ತುಪ್ಪ ಸವರಿ ಸಮಾಜದ ಮೇಲೆ ಸವಾರಿ ನಡೆಸಲಾರಂಭಿಸಲಾಯಿತು.
ವಿಧಾನಸೌಧದ ಮೂರನೇ ಮಹಡಿಯಲ್ಲಿ ಅಧಿಕಾರ ನಡೆಸಿ ಮದದಿಂದ ಮೆರೆದು ನಿವೃತ್ತರಾದ ಸಕಲಕಲಾವಲ್ಲಭ ವ್ಯಕ್ತಿಯೊಬ್ಬರು, ‘ಉಂಡೂ ಹೋದ ಕೊಂಡೂ ಹೋದ’ ಚಲನಚಿತ್ರದ Cow Inspector ರೀತಿ ತೇಲುತ್ತಾ ಇದಕ್ಕಾಗಿಯೇ ಪ್ರತ್ಯೇಕ ಧರ್ಮದ ಚೌಕಟ್ಟನ್ನು ರೂಪಿಸಿದರು.
ಸರಕಾರಿ ವಲಯದಲ್ಲಿ ಪಳಗಿದ ಇವರು ಈ ಬಾರಿ ವೀರಶೈವ ಲಿಂಗಾಯತ ಒಂದೇ ಎಂದರೆ ಜನಸಂಖ್ಯೆಯ ಕಾರಣ ಕರ್ನಾಟಕದಲ್ಲಿ ಮಾನ್ಯತೆ ಪಡೆದೂ ಅಲ್ಪಸಂಖ್ಯಾತರಾಗದ ಕಾರಣ ದಿಂದಾಗಿ ಧರ್ಮಭಂಜನೆಗೆ ತಂತ್ರ ರೂಪಿಸಿದರು. ಅದಕ್ಕಾಗಲೇ ಸಂಶೋಧನಾ ಪ್ರಭೃತಿ, ಪುಟದಿಂದ ಪುಟಕ್ಕೆ ರzಗುವ ಸಂಶೋಧನೆಗಳ ಪಿತಾಮಹ ‘ಕಲಬುರ್ಗಿ’ಯವರು ಅಡಿಪಾಯ ಹಾಕಿಕೊಟ್ಟಿದ್ದರು.
ಇದನ್ನೂ ಓದಿ: Ravi Hunj Column: ಧಾರ್ಮಿಕ ಅಲ್ಪಸಂಖ್ಯಾತದಾಸೆಯ ಪ್ರತ್ಯೇಕ ಧರ್ಮವೆಂಬ ಮೂಗಿನ ಮೇಲಿನ ತುಪ್ಪ!
ಪ್ರಭೃತಿಗಳ ಜಂಗಮದ್ವೇಷದ ‘ವೀರಶೈವ ಎಂದರೆ ಜಂಗಮ, ಲಿಂಗಾಯತ ಎಂದರೆ ಜಂಗಮೇತರರು’ ಎಂಬ ಜನಾಂಗೀಯ ದ್ವೇಷದ ಸೂತ್ರವನ್ನು ಹಿಡಿದು ಮುಂದಿನ ಯೋಜನೆಯನ್ನು ರೂಪಿಸ ಲಾಯಿತು. ಇವರಿಗೆ ತಕ್ಕ ಇಂಧನ ಒದಗಿಸಿದ್ದು ಬೇಡ ಜಂಗಮ ಹೋರಾಟ!
ವೀರಶೈವದ ಉಪಪಂಗಡವಾದ ಜಂಗಮರು, “ಪರಿಶಿಷ್ಟ ಜಾತಿ ಮೀಸಲಾತಿಯಡಿಯಲ್ಲಿ ಬರುವ ‘ಬೇಡ ಜಂಗಮ’ ಎಂದಿರುವ ಜಾತಿ ನಮ್ಮದೇ ಆಗಿದೆ. ನಮ್ಮದು ಬೇಡುವ ಸಮಾಜ. ಈ ಬೇಡ ಜಂಗಮ ಜಾತಿ ನಮ್ಮದೇ" ಎಂದು ಹಕ್ಕೊತ್ತಾಯ ಮಂಡಿಸಿ, “ನಮಗೆ ಬೇಡ ಜಂಗಮ ಎಂದು ಜಾತಿ ಪ್ರಮಾಣಪತ್ರ ನೀಡಿ" ಎಂದು ಹೋರಾಟ ನಡೆಸುತ್ತಿದ್ದರು.
ಇದಕ್ಕೆ ವೀರಶೈವ ಲಿಂಗಾಯತ ಸಮಾಜದ ಪಂಚಪೀಠದ ಜಗದ್ಗುರುಗಳು ಅಂದಿನ ಪ್ರಧಾನಿಗಳಿಗೆ, ವೀರಶೈವ ಜಂಗಮರಿಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡುವಂತೆ ಆದೇಶಿಸಲು ಮನವಿಪತ್ರ ಸಲ್ಲಿಸಿದರು. ಇಲ್ಲಿ ಬೇಡ ಜಂಗಮದಂತೆಯೇ ಇನ್ಯಾವುದೇ ವೀರಶೈವ ಉಪಜಾತಿಯ ಹೆಸರಿನಂತೆ ಯೇ ಒಂದು ಜಾತಿ ಮೀಸಲಾತಿ ಪಟ್ಟಿಯಲ್ಲಿದ್ದು, ಆ ಜಾತಿಯವರು ಸಹ ಇಂಥದೇ ಹೋರಾಟ ಮಾಡುತ್ತಿದ್ದರೆ ಅಖಂಡ ವೀರಶೈವ ಸಮಾಜದ ಜಗದ್ಗುರುಗಳಾದ ಪಂಚಪೀಠಗಳು ಅದಕ್ಕೂ ಬೆಂಬಲ ಸೂಚಿಸಿರುತ್ತಿದ್ದವು.
ಉದಾಹರಣೆಗೆ ಮೀಸಲಾತಿ ಪಟ್ಟಿಯಲ್ಲಿ ‘ಬುಡ್ಗ ಬಣಂಜು’, ‘ಮಾಲ ಪಾಂಚಾಲ’ ಎಂದಿದ್ದು ವೀರಶೈವ ಬಣಜಿಗರು, ವೀರಶೈವ ಪಂಚಮಸಾಲಿಗಳು ಇದು ನಾವೇ ಎಂದು ಹಕ್ಕೊತ್ತಾಯ ಮಂಡಿಸಿ ಹೋರಾಟ ಮಾಡಿದ್ದರೆ, ಅದಕ್ಕೂ ಪಂಚಪೀಠಗಳ ಬೆಂಬಲ ಇರುತ್ತಿತ್ತು. ಆದರೆ ಬೇಡ ಜಂಗಮ ಹೋರಾಟದ ಪಂಚಪೀಠಗಳ ಬೆಂಬಲವನ್ನು ಪಟ್ಟಭದ್ರ ಹಿತಾಸಕ್ತಿಗಳು, ಇದು ‘ಪಂಚ ಪೀಠಗಳ ಸ್ವಜಾತಿ ಪ್ರೀತಿ’ಯೆಂದು ಬಿಂಬಿಸಿ, “ಜಂಗಮರು ಪರಿಶಿಷ್ಟರಾಗಿ ಸರಕಾರಿ ಹುದ್ದೆಗಳಲ್ಲಿ ಠಳಾಯಿಸುತ್ತಾರೆ" ಎಂದು ಜಂಗಮೇತರರಲ್ಲಿ ದ್ವೇಷ ಪಸರಿಸಿ ‘ಜಂಗಮರೆ ವೀರಶೈವರು,
ಉಳಿದವರೆ ಲಿಂಗಾಯತರು’ ಎಂಬ ಕಲಬುರ್ಗಿ ಪ್ರಣೀತ ಭೇದವನ್ನು ಯಶಸ್ವಿಯಾಗಿ ಹೆಮ್ಮರ ವಾಗಿಸಿದರು. ಇದಕ್ಕೆ ಒಳಗೊಳಗೆ ಕೆಲವು ಕಮ್ಯುನಿ ಪ್ರೇರಿತ, ಸಮಾಸನಪ್ರೀತ, ಪಂಚಪೀಠದ್ವೇಷಿ, ಚುರುಕರಿವಿನ ಮುಜುಗರಿ ಅನುರಕ್ತ ವಿರಕ್ತರ ಬೆಂಬಲ ವ್ಯಾಪಕವಾಗಿ ಹರಿದು ಬಂದಿತು.
‘ನಾವೆಲ್ಲ ಪ್ರವರ್ಗ-೨ಬಿ ಇತ್ಯಾದಿ ತುಪ್ಪ ಬಯಸುತ್ತಿದ್ದರೆ, ಈ ಜಂಗಮರು ಒಂದೇ ಏಟಿಗೆ ಪರಿಶಿಷ್ಟ ವರ್ಗದ ಬೆಣ್ಣೆಯನ್ನೇ ಲಪಟಾಯಿಸುವ ಯೋಜನೆ ಹಾಕಿಕೊಂಡಿದ್ದಾರೆ’ ಎಂದು ಜನಾಂಗೀಯ ದ್ವೇಷವು ಕೆಲವು ಜನರಲ್ಲೂ ಹಬ್ಬಲಾರಂಭಿಸಿತು. ಪಂಚಪೀಠಗಳ ರೂಪಕನೀತಿಯ ಲಿಂಗೋಧ್ಭವ ವನ್ನು ಸತ್ಯಕತೆಯೆಂಬಂತೆ ಅವಹೇಳಿಸುತ್ತ, ‘ಜಂಗಮರು ನಮ್ಮ ಹಿಟ್ಟು ತಿಂದು ನಮ್ಮನ್ನು ಪುರೋಹಿತಶಾಹಿ ಗುಲಾಮಿಕೆಗೆ ತಳ್ಳಿದ್ದರು’ ಎನ್ನುತ್ತ ವೀರಶೈವ ಮತದಲ್ಲಿ ಎಂದೂ ಇರದ ಪುರೋಹಿತಶಾಹಿ ಶೋಷಣೆಯನ್ನು ಶೂನ್ಯದಿಂದ ಸೃಷ್ಟಿಸಿದರು.
‘ಎಲ್ಲಿಂದಲೋ ಬಂದ ಆರ್ಯರು, ದ್ರಾವಿಡರ ಮೇಲೆ ಸವಾರಿ ಮಾಡಿದರು’ ಎಂಬ ಸಂಕಥನದಿಂದ ಪ್ರೇರಿತರಾಗಿ ‘ಆಂಧ್ರದಿಂದ ಆರಾಧ್ಯ ಜಂಗಮರು ಬಂದು ಲಿಂಗಾಯತರ ಮೇಲೆ ಸವಾರಿ ಮಾಡಿದರು’ ಎಂಬ ಸಂಕಥನವನ್ನು ಸೃಷ್ಟಿಸಿದರು. ಅದಕ್ಕೆ ತಕ್ಕಂತೆ ಸ್ವಘೋಷಿತ ಜೂನಿಯರ್ ಬಸವಣ್ಣಂದಿರು ಮತ್ತು ಜೂನಿಯರ್ ಶರಣ-ಶರಣೆಯರು ಉದ್ಭವಿಸಿದರು.
ಅಖಂಡ ವೀರಶೈವ ಲಿಂಗಾಯತ ಧರ್ಮದ ಇತಿಹಾಸದುದ್ದಕ್ಕೂ ಎಲ್ಲಿಯೂ ಇರದ ಜಂಗಮ ಪುರೋಹಿತಶಾಹಿ ದಬ್ಬಾಳಿಕೆಯನ್ನು ಇತ್ತೆಂದು ದೇಸಾಯಿ, ಗೌಡ, ಪಾಟೀಲ ಎಂಬ ಊಳಿಗಮಾನ್ಯದ ದಬ್ಬಾಳಿಕೆಯ ವಾರಸುದಾರರಾದ ಕೆಲವರು ವೀರಾವೇಶದಿಂದ ಸುಳ್ಳಿನ ಸಂಕಥನವನ್ನು ಹಬ್ಬಿಸಿದರು,
ಹಬ್ಬಿಸುತ್ತಲೇ ಇರುವರು. ಅಸಲಿಗೆ ಕರ್ನಾಟಕದ ಇತಿಹಾಸದಲ್ಲಿ ಲಿಂಗಾಯತ ದೇಸಾಯಿ, ಗೌಡ, ಪಾಟೀಲರು ನಡೆಸಿದ ದೌರ್ಜನ್ಯ, ಹತ್ಯೆ, ಲೈಂಗಿಕ ಕಿರುಕುಳದ ನೂರಾರು ಕತೆ, ಕಾದಂಬರಿ, ನಾಟಕ ಗಳಿವೆ. ಸವದತ್ತಿ ಎಲ್ಲಮ್ಮನ ಗುಡ್ಡದಲ್ಲಿ ಅದೆಷ್ಟೋ ಯುವತಿಯರಿಗೆ ಇವರ ಸಲುವಾಗಿ ಮುತ್ತು ಕಟ್ಟಿಸಿ ವೇಶ್ಯೆಯರನ್ನಾಗಿಸಿದ ಇತಿಹಾಸ ಇವರದಾಗಿದೆ. ಇದೆಲ್ಲವನ್ನೂ ಮರೆಮಾಚಿ, ಇಲ್ಲದ ವೀರಶೈವ ಪುರೋಹಿತಶಾಹಿ ದಬ್ಬಾಳಿಕೆಯನ್ನು ಕಮ್ಯುನಿಸ್ಟ್ ಸಂಕಥನ ಸೂತ್ರದಂತೆ ಬೆತ್ತಲೆ ರಾಜನ ಸುಂದರ ಉಡುಪಿನಂತೆ ಲಿಂಗಾಹತ ವಕ್ತಾರರು ನೇಯ್ದರು.
ಕ್ರಮೇಣ ಈ ಗೋಬೆಲ್ಸ ತಂತ್ರದಿಂದಾಗಿ ‘ವೀರಶೈವ ಬೇರೆ, ಲಿಂಗಾಯತ ಬೇರೆ’ ಎಂಬ ಧರ್ಮ ಭಂಜನೆಯ ಉರಿದುಪ್ಪವು ಸಮಾಜದ ನೆತ್ತಿಗೇರಿತು. ಒಂದೇ ಮನೆಯಲ್ಲಿ ಎರಡು ಧರ್ಮಗಳಾದವು.
ಶಿವ ಕಲ್ಲಿನಿಂದ ಹುಟ್ಟಿದವರ ವೀರಶೈವನೆನಿಸಿ ಮೂಲೆಗೆ ತಳ್ಳಲ್ಪಟ್ಟು, ಇಷ್ಟಲಿಂಗ ಲಿಂಗಾಯತರ ವೈಜ್ಞಾನಿಕ ಕಾರ್ಬನ್ ಲಿಂಗವಾಗಿ ಸೀಮೋಲ್ಲಂಸಿ ಪ್ರವಹಿಸತೊಡಗಿತು! ಮೀಸಲಾತಿಯ ಉರಿ ದುಪ್ಪವು ಧರ್ಮದ ನೆತ್ತಿಯನ್ನು ದಹದಹಿಸಿತು. ಲಿಂಗವಂತ ವೀರಶೈವ ಅವಹೇಳನವೇ ಕಾಯಕ ವಾಯಿತು, ಸುಳ್ಳೇ ದಾಸೋಹವೆನಿಸಿತು, ಧರ್ಮ ಭಸ್ಮವಾಯಿತು!
ಈಗ ಇಂದಿನ ವರ್ತಮಾನದಲ್ಲಿ, ‘ಹಿಂದೂ ಎಂಬುದು ಮತಧರ್ಮವಲ್ಲ ಸಂಸ್ಕೃತಿ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದನ್ನು ಪ್ರಧಾನಿಗಳೂ ಅನುಮೋದಿಸಿದ್ದಾರೆ. ಎಡಬಲವೆಲ್ಲವೂ ಒಪ್ಪಿದೆ. ಹಾಗಾಗಿ ಮುಂದೆಂದಾದರೂ ಹಿಂದೂ ಪ್ರಭೇದದ ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶಕ್ತಿವಿಶಿಷ್ಟಾದ್ವೈತಗಳ ಆಧಾರದ ಮೇಲೆ ಮತಧರ್ಮಗಳ ಮಾನ್ಯತೆ ಸಿಕ್ಕು ವೀರಶೈವ ಲಿಂಗಾಯತವು ಪ್ರತ್ಯೇಕ ಧರ್ಮವಾದರೂ, ಅಥವಾ ಭಂಜಕರ ಪಕ್ಷವೇ ಅಧಿಕಾರಕ್ಕೆ ಬಂದು ಲಿಂಗಾಯತವಷ್ಟೇ ಪ್ರತ್ಯೇಕ ಧರ್ಮವಾದರೂ, ವೀರಶೈವ ಲಿಂಗಾಯತರೆಲ್ಲರೂ ಬೇರೆ ಬೇರೆ ಎನ್ನುವುದನ್ನು ಕೊಡವಿ ಕೊಂಡು ಶಿವ, ಲಿಂಗೋದ್ಭವ, ಸ್ಥಾವರಲಿಂಗ, ಇಷ್ಟಲಿಂಗ, ಕಾರ್ಬನ್ ಲಿಂಗ ಎಲ್ಲವೂ ಒಗ್ಗೂಡಿ ಆ ನವಧರ್ಮವೇ ತಮ್ಮದೆಂದು ದಾಖಲಿಸಿ ಅಖಂಡತೆಯನ್ನೇ ಮೆರೆಯುವುದು ಖಚಿತ.
ಹಾಗಾದರೂ, ಹೀಗಾದರೂ, ಹೇಗಾದರೂ ಒಟ್ಟಿನಲ್ಲಿ ವೀರಶೈವ ಲಿಂಗಾಯತರು ರಾಷ್ಟ್ರೀಯವಾಗಿ ಧಾರ್ಮಿಕ ಅಲ್ಪಸಂಖ್ಯಾತರೆನಿಸಿ ಕರ್ನಾಟಕದಲ್ಲಿ ಬಹುಸಂಖ್ಯಾತರೇ ಆಗುವುದು ಸ್ಪಟಿಕಸದೃಶ ಸತ್ಯ.ಆದರೆ ರಾಷ್ಟ್ರೀಯವಾಗಿ ಧಾರ್ಮಿಕ ಅಲ್ಪಸಂಖ್ಯಾತರೆನಿಸಿ ರಾಜ್ಯದಲ್ಲಿ ಬಹುಸಂಖ್ಯಾತರಾಗಿ ವೀರಶೈವ ಲಿಂಗಾಯತರು ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು!
ಇದರಿಂದ ಸಾಂಕ ವೀರಶೈವ ಲಿಂಗಾಯತ ಸಮಾಜವು ಬೌದ್ಧ, ಜೈನ ಮತ್ತು ಸಿಖ್ಖರಂತೆ ಹಿಂದೂ ಅಲ್ಲದ ಪಂಥವೆಂದು ಗುರುತಿಸಿಕೊಂಡು ರಾಜಕೀಯವಾಗಿ ಶಕ್ತಿಹೀನರಾಗುವ ನಿರ್ದಿಷ್ಟ ಪ್ರತಿಕೂಲ ಪರಿಣಾಮ ಸೃಷ್ಟಿಯಾಗುವುದು. ಪ್ರಸ್ತುತ ಹಿಂದೂ ಧರ್ಮೀಯರೆನಿಸಿ ವೀರಶೈವ ಲಿಂಗಾಯತ ಸಮಾಜವು ಪಡೆಯುತ್ತಿರುವ ಜಾತಿಯಾಧಾರಿತ ಮೀಸಲಾತಿಯನ್ನು ಹೋಲಿಸಿಕೊಂಡರೆ ಹಿಂದೂ ಯೇತರ ಧರ್ಮೀಯರಾಗಿ ಒಬಿಸಿ ಮೀಸಲಾತಿಯ ಒಟ್ಟು ಮೊತ್ತದಲ್ಲಿ ಒಂದೆರಡು ಪ್ರತಿಶತ ಮೀಸಲಾತಿ ಸಿಕ್ಕರೆ ಪಡೆದುಕೊಳ್ಳುವರಷ್ಟೇ!
ಸದ್ಯಕ್ಕೆ ಹಿಂದೂ ವೀರಶೈವ/ಲಿಂಗಾಯತದಲ್ಲಿ ಬರುವ ಎಲ್ಲಾ ಉಪಜಾತಿಗಳೂ ಪ್ರವರ್ಗ-೩ ಬಿ ಯಲ್ಲಿ ಇವೆ. ಆದರೆ ವೀರಶೈವ/ಲಿಂಗಾಯತ ಜಾತಿಯ ಸಾಕಷ್ಟು ಜನರು ‘ಹಿಂದೂ ಧರ್ಮ’ ಎಂದು ಬರೆಸಿ ಉಪಜಾತಿಯಲ್ಲಿ ಭಂಡಾರಿ, ಹಡಪದ, ಸವಿತಾ ಸಮಾಜ, ಭಜಂತ್ರಿ ಎಂದು ಬರೆಸಿ ಪ್ರವರ್ಗ-೧ ಬಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.
ಕೆಲವರು ಹಿಂದೂ ಮಡಿವಾಳ, ಅಗಸ, ಧೋಬಿ, ಗಾಣಿಗ, ಕುರುಹಿನಶೆಟ್ಟಿ, ಸಾದರು ಎಂದು ಬರೆಸಿ ಪ್ರವರ್ಗ-೨ ಎ ಅಡಿಯಲ್ಲಿ ಸೌಲಭ್ಯ ಪಡೆಯುತ್ತಿದ್ದಾರೆ. ಅದೇ ರೀತಿ ಕೆಲವರು ಹಿಂದೂ ಕುಂಚಿಟಿಗ, ಬಣಜಿಗರು ಎಂದು ದಾಖಲಿಸಿ ಪ್ರವರ್ಗ-೩ ಎ ಸೌಲಭ್ಯ ಪಡೆಯುತ್ತಿದ್ದಾರೆ.
ಮುಂದೆ ಪ್ರತ್ಯೇಕ ಧರ್ಮವಾದಾಗ ಇವೆಲ್ಲವೂ ಶೂನ್ಯವಾಗುತ್ತದೆ. ಏಕೆಂದರೆ ಪ್ರತ್ಯೇಕ ಧರ್ಮದಲ್ಲಿ ನಮ್ಮದು ಜಾತಿರಹಿತ ಸಮಸಮಾಜವಾದ ಕಾರಣ ಮೊದಲಿನಂತೆ ಜಾತಿ/ಉಪಜಾತಿಗಳು ನವಧರ್ಮ ದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ. ವ್ಯಕ್ತಿಗತ ನಾಗರಿಕರಿಗೆ ಅಬ್ಬಬ್ಬಾ, ಎಂದರೆ ಮುಸ್ಲಿಮ ರಂತೆ ಒಬಿಸಿ ಕೋಟಾದಡಿಯಲ್ಲಿ ನಾಲ್ಕು ಪ್ರತಿಶತ, ಜೈನರಂತೆ ಆರ್ಥಿಕ ಹಿನ್ನೆಲೆಯಲ್ಲಿ ಒಂದೆರಡು ಪ್ರತಿಶತ ಮೀಸಲಾತಿ ಸಿಗಬಹುದಷ್ಟೇ!
ಒಂದು ವೇಳೆ ಈ ಲಿಂಗಾಹತರು ಹೇಳುವಂತೆ ಪ್ರತ್ಯೇಕ ಧರ್ಮ ಮಾನ್ಯತೆಯಿಂದ ಅಲ್ಪಸಂಖ್ಯಾತ ಧರ್ಮವೆನಿಸಿ ಸ್ವರ್ಗವೇ ಧರೆಗಿಳಿದು ಬರುವುದಾದರೆ ಭಾರತವು ಗಣರಾಜ್ಯವಾದಾಗಿನಿಂದ ಅಲ್ಪ ಸಂಖ್ಯಾತ ಧರ್ಮದ ಮುಸ್ಲಿಮರು ಈಗಾಗಲೇ ಪ್ರಗತಿಯ ಎವರೆ ಶಿಖರದ ಔನ್ನತ್ಯದಲ್ಲಿರಬೇಕಿತ್ತು. ಆದರೆ ಅವರಿನ್ನೂ ಎವರೆ ಬೇಸ್ ಕ್ಯಾಂಪಿನಲ್ಲಿಯೂ ಇಲ್ಲ. ಸಮಾಜದಲ್ಲಿ ಅವರ ಪ್ರಗತಿ ಇನ್ನೂ ಮರೀಚಿಕೆಯೇ ಆಗಿದೆ.
ಅದೇ ರೀತಿ ಜೈನರು, ಬೌದ್ಧರು, ಕ್ರಿಶ್ಚಿಯನ್ನರು ಸರಕಾರಿ ನೌಕರಿಗಳಲ್ಲಿ ವಿಜೃಂಭಿಸಬೇಕಿತ್ತು. ಹಾಗೇನಾದರೂ ಆಗಿದೆಯೇ? ಯಾವ ಪ್ರತ್ಯೇಕ ಧರ್ಮದ ಮಾನ್ಯತೆ ಇರದೇನೇ ಜಾಗತಿಕ ಲಿಂಗಾಹತ ಮಹಾಸಭಾದ ಜಾಮದಾರರು ಅಂದು ವಿದ್ಯಾರ್ಥಿ ವೇತನ ಪಡೆದು ಶೈಕ್ಷಣಿಕ ಪ್ರಗತಿ ಹೊಂದಿ, ಪದೋನ್ನತಿಗಳನ್ನು ಗಳಿಸಿ ನಿವೃತ್ತರಾಗಿದ್ದಾರಲ್ಲವೇ! ಮೊನ್ನೆಯಷ್ಟೇ ನಿಧನರಾದ ಮಹಾಂತೇಶ್ ಬೀಳಗಿ ಅವರು ಸಹ ಅತ್ಯಂತ ಬಡತನದಲ್ಲೂ ಶೈಕ್ಷಣಿಕ ಪ್ರಗತಿ ಹೊಂದಿ ಉನ್ನತ ಸ್ಥಾನಮಾನ ಪಡೆದಿದ್ದರಲ್ಲವೇ!
ವೀರಶೈವ ಮಹಾಸಭಾದ ರಾಜ್ಯ ಕಾರ್ಯದರ್ಶಿ ಶಂಕರ್ ಬಿದರಿಯವರೂ ಇಂಥದೇ ಸಾಧನೆ ಮಾಡಿzರಲ್ಲವೇ! ಇವರೆಲ್ಲರಿಗಿಂತ ಬಹು ಹಿಂದೆಯೇ ನನ್ನ ಬಂಧು ಎಚ್.ಎಂ. ಮಹಾರುದ್ರಯ್ಯ ನವರೂ ಇಂಥದೇ ಸಾಧನೆ ಮಾಡಿ ಐಎಎಸ್ ಅಧಿಕಾರಿಯಾಗಿ ನಿವೃತ್ತರಾಗಿದ್ದರು.
ಯಾವ ಅಲ್ಪಸಂಖ್ಯಾತ ಮಾನ್ಯತೆ ಇರದೆ ಶಿಕ್ಷಣ, ತರಬೇತಿ, ಸಾಮಾಜಿಕ ಸೌಲಭ್ಯಗಳು ವ್ಯಕ್ತಿಗತವಾಗಿ ಬಹುಸಂಖ್ಯಾತರಿಗೂ ಸಾಕಷ್ಟು ಸರಕಾರಿ ಯೋಜನೆಗಳ ಮೂಲಕ ಲಭ್ಯವಿರುವವು. ಧಾರ್ಮಿಕ ಅಲ್ಪಸಂಖ್ಯಾತನೋ ಬಹುಸಂಖ್ಯಾತನೋ, ಓರ್ವ ನಾಗರಿಕನಿಗೆ ಸರಕಾರಿ ಯೋಜನೆಗಳಲ್ಲಿ ಅಂಥ ವ್ಯತ್ಯಾಸವಿಲ್ಲ. ಆದರೆ ಸಾಂಕವಾಗಿ ಧಾರ್ಮಿಕ ವಿದ್ಯಾಸಂಸ್ಥೆಗಳಿಗೆ ಸ್ವಲ್ಪ ವ್ಯತ್ಯಾಸವುಂಟಾಗಿ ಹೆಚ್ಚಿನ ಲಾಭಾಂಶ ಸಿಗುವುದು ಮಾತ್ರ ಸ್ಪಷ್ಟವಾಗಿದೆ.
ಜಾತಿ, ಮೀಸಲಾತಿ, ಅಲ್ಪಸಂಖ್ಯಾತ ಧರ್ಮ ಮುಂತಾದ ಸರಕಾರಿ ಪರಿಭಾಷೆಯ ಗಂಧಗಾಳಿಯೂ ಸೋಂಕದ ನಾನು ಕೇವಲ ಮತ್ತು ಕೇವಲ ಓರ್ವ ಮಾನವಿಕ, ಸಾಮಾಜಿಕ ಕುತೂಹಲಿಯಾಗಿ ಇಷ್ಟನ್ನು ಕಂಡುಕೊಂಡಿದ್ದೇನೆ. ನನ್ನ ಈ ಅಭಿಪ್ರಾಯವನ್ನು ನನ್ನ ಸ್ನೇಹವಲಯದಲ್ಲಿರುವ ಸಂವಿಧಾನ ನಿಪುಣರು, ಸಮಾಜ ಶಾಸ್ತ್ರಜ್ಞರು, ಕಾನೂನು ತಜ್ಞರು, ನಿವೃತ್ತ ಐಎಎಸ್ ಅಧಿಕಾರಿ ಗಳೊಟ್ಟಿಗೆ ಪರಾಮರ್ಶಿಸಿದ್ದೇನೆ. ಅವರೆಲ್ಲರೂ ಇದೇ ಅಭಿಮತವನ್ನು ಹೊಂದಿದ್ದಾರೆ.
ಹಾಗಾಗಿ ಈ ಪ್ರತ್ಯೇಕ ಧರ್ಮದಿಂದ ಸಿಗುವ ಸವಲತ್ತುಗಳೆಂಬ ತುಪ್ಪವನ್ನು ವೀರಶೈವ ಲಿಂಗಾಯತ ಧರ್ಮದ ನಾಗರಿಕರು ತಿನ್ನುವುದು ಅಷ್ಟಕ್ಕಷ್ಟೇ. ಡಾಲ್ಡಾವನ್ನೇ ತುಪ್ಪವೆನ್ನುವ ತಪ್ಪು ಕಲ್ಪನೆಯ ಸೃಷ್ಟಿ ಲಿಂಗಾಹತರದ್ದು. ಆದರೆ ಬಸವನನ್ನು ನಂದಿನಿಯಾಗಿಸಿ ಅಸಲಿ ತುಪ್ಪದ ಈಜಾಡುವವರು ಕೇವಲ ಮತ್ತು ಕೇವಲ ಕ್ಯಾಪಿಟೇಶನ್ ಶುಲ್ಕ ನಿರ್ವಹಿಸಿ ವಿದ್ಯಾ-ವ್ಯಾಪಾರ ಮಾಡುತ್ತಿರುವ ಕೋಟ್ಯ ಧೀಶ್ವರರು ಮಾತ್ರ.
ಅಖಂಡ ವೀರಶೈವ ಲಿಂಗಾಯತ ಸಮಾಜದ ಶ್ರೀಸಾಮಾನ್ಯರು ಕೇವಲ ಮತ್ತು ಕೇವಲ ಮೂಗಿನ ಮೇಲಿನ ತುಪ್ಪ (ಡಾಲ್ಡಾ)ವನ್ನು ನೆನೆಯುತ್ತ ಸಿಂಬಳ ನೆಕ್ಕಬಹುದಷ್ಟೇ. ಒಟ್ಟಿನಲ್ಲಿ ಶ್ರೀಸಾಮಾನ್ಯ ನು, “ಆತನ ಸುಖದುಃಖವೀತಗೇನು? ಈತನ ಸುಖದುಃಖವಾತಗೇನು? ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಅರಿವ ಸಂತೈಸಿಕೊಳ್ಳಿ. ರಂಭೆ ಎಂದಡೆ ನಿನ್ನಂಗನೆಯಾಗ ಲಿಲ್ಲವು; ಒಂದಿನ ಸ್ವಪ್ನದದಡೂ ರತಿಸಲಿಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ" ಎನ್ನುತ್ತಾ ಶರಣರಂತೆ ತಾನೂ ಶೂನ್ಯ ಸಂಪಾದನೆ ಮಾಡಿದೆ ಎಂದು ಶ್ರಮಿಸಿದ ತನುಮನಧನವ ನೆನೆದು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂದು ಸಂತೈಸಿಕೊಳ್ಳಬೇಕೇನೋ!!
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)