ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಇದು ಭೂತಾನ್‌ ಜಗತ್ತಿಗೆ ನೀಡಿದ ಅನನ್ಯ ಮಾದರಿ !

ಇಡೀ ವ್ಯವಸ್ಥೆ ತನಗರಿವಿಲ್ಲದೇ ಒಂದು ಶಿಸ್ತಿಗೆ, ಅಚ್ಚುಕಟ್ಟುತನಕ್ಕೆ ಒಳಗಾಗಿರುವುದು ಎದ್ದು ಕಾಣುತ್ತದೆ. ಇಡೀ ಜಗತ್ತು ಯಾವುದನ್ನು ಅಭಿವೃದ್ಧಿ ಎಂದು ಪರಿಗಣಿಸಿದೆಯೋ, ಯಾವುದಕ್ಕೆ ಇನ್ನಿಲ್ಲದ ಪ್ರಾಶಸ್ತ್ಯ, ಪ್ರಾಮುಖ್ಯ ನೀಡುತ್ತಿದೆಯೋ, ಭೂತಾನ್ ಅವನ್ನು ಅಪಸವ್ಯವೆಂದು ಭಾವಿಸಿ, ತನ್ನ ಜನರ ಜೀವನ ನೆಮ್ಮದಿಗೆ ಬೇಕಾದವುಗಳನ್ನೇ ಅಭಿವೃದ್ಧಿ ಎಂದು ಭಾವಿಸಿದೆ.

ಇದು ಭೂತಾನ್‌ ಜಗತ್ತಿಗೆ ನೀಡಿದ ಅನನ್ಯ ಮಾದರಿ !

ನೂರೆಂಟು ವಿಶ್ವ

vbhat@me.com

ಭೂತಾನ್ ತನ್ನ ಶ್ರೀಮಂತ ಸಂಸ್ಕೃತಿ ಮತ್ತು ಬೌದ್ಧ ಧರ್ಮದ ಮೌಲ್ಯಗಳನ್ನು ಕಾಯ್ದು ಕೊಳ್ಳಲು ಬಹಳ ಮಹತ್ವ ನೀಡುತ್ತದೆ. ಸಾಂಪ್ರದಾಯಿಕ ಉಡುಗೆ-ತೊಡುಗೆ, ವಾಸ್ತುಶಿಲ್ಪ, ಸಂಗೀತ, ನೃತ್ಯ ಮತ್ತು ಆಚರಣೆಗಳು ರಾಷ್ಟ್ರೀಯ ಗುರುತನ್ನು ಬಲಪಡಿಸುತ್ತವೆ. ಇದು ಜನರಲ್ಲಿ ಒಗ್ಗಟ್ಟು ಮತ್ತು ಸೇರಿದ ಭಾವನೆಯನ್ನು ಬೆಳೆಸುತ್ತದೆ. ಇದು ಸಂತೋಷಕ್ಕೆ ಅತಿ ಮುಖ್ಯ. ಮಾನಸಿಕ ಯೋಗಕ್ಷೇಮ, ಆರೋಗ್ಯ, ಸಮಯದ ಬಳಕೆ, ಶಿಕ್ಷಣ ಈ ಎಲ್ಲ ಅಂಶಗಳು ಭೂತಾನಿನ ಜನರ ಸಂತೋಷದ ಜೀವನಕ್ಕೆ ಕಾರಣವಾಗಿವೆ.

ಭೂತಾನಿನಲ್ಲಿ ಒಂದು ವಾರ ಸುತ್ತಾಡಿದಾಗ ನನಗೆ ಎದ್ದು ಕಂಡ, ತುಸು ಅಚ್ಚರಿ ಹುಟ್ಟಿಸಿದ ಸಂಗತಿ ಅಂದ್ರೆ ಅಲ್ಲಿನ ನಿಧಾನ ಗತಿಯ ಜೀವನ ವಿಧಾನ. ಇಡೀ ದೇಶ ಅಲ್ಲಿನ ಗಿರಿ ಶಿಖರ, ಪಹಾಡಿಗಳಂತೆ ನಿರುಮ್ಮಳ. ಜೀವನವೇ ಒಂದು ಮೌನ ಕಣಿವೆಯಂತೆ ಭಾಸ. ಎಲ್ಲೂ ಹರಿಬರಿ ಇಲ್ಲ. ಧಾವಂತ ಇಲ್ಲವೇ ಇಲ್ಲ. ದೇಶದಲ್ಲಿ ಎಲ್ಲೂ, ಒಂದೂ ಟ್ರಾಫಿಕ್ ಲೈಟ್ ಸಹ ಇಲ್ಲ. ಹಾರನ್ ಸಪ್ಪಳ ಅಪ್ಪಳಿ ಸುವುದಿಲ್ಲ. ಅಲ್ಲಿನ ಪತ್ರಿಕೆಗಳನ್ನು ತಿರುವಿ ಹಾಕಿದರೆ, ಕ್ರೈಂ ಪೇಜ್ ಕಣ್ಣಿಗೆ ಕಾಣುವುದಿಲ್ಲ.

ರಾಜಕೀಯ, ಕರ್ಮಕಾಂಡ, ಹಗರಣ, ಟೀಕೆ-ಟಿಪ್ಪಣಿ, ಆರೋಪ-ಪ್ರತ್ಯಾರೋಪಗಳ ಭರಾಟೆಯೂ ಇಲ್ಲ. ಜನ ಮತ್ತು ಅವರ ಜೀವನ ಅಲ್ಲಿನ ಮಾನಸ, ಜಲಧಕ ಮತ್ತು ಗದಾಧರ ನದಿಗಳಂತೆ ವಿಶಾಲ ಮತ್ತು ಪ್ರಶಾಂತ. ಯಾರೂ ಪೈಪೋಟಿಗೆ ಬಿದ್ದವರಂತೆ, ಇನ್ನೊಬ್ಬರನ್ನು ಹಿಂದಿಕ್ಕಿ ಮುನ್ನುಗ್ಗುವ ಪ್ರವೃತ್ತಿಯವರೂ ಅಲ್ಲ.

ಇಡೀ ವ್ಯವಸ್ಥೆ ತನಗರಿವಿಲ್ಲದೇ ಒಂದು ಶಿಸ್ತಿಗೆ, ಅಚ್ಚುಕಟ್ಟುತನಕ್ಕೆ ಒಳಗಾಗಿರುವುದು ಎದ್ದು ಕಾಣುತ್ತದೆ. ಇಡೀ ಜಗತ್ತು ಯಾವುದನ್ನು ಅಭಿವೃದ್ಧಿ ಎಂದು ಪರಿಗಣಿಸಿದೆಯೋ, ಯಾವುದಕ್ಕೆ ಇನ್ನಿಲ್ಲದ ಪ್ರಾಶಸ್ತ್ಯ, ಪ್ರಾಮುಖ್ಯ ನೀಡುತ್ತಿದೆಯೋ, ಭೂತಾನ್ ಅವನ್ನು ಅಪಸವ್ಯವೆಂದು ಭಾವಿಸಿ, ತನ್ನ ಜನರ ಜೀವನ ನೆಮ್ಮದಿಗೆ ಬೇಕಾದವುಗಳನ್ನೇ ಅಭಿವೃದ್ಧಿ ಎಂದು ಭಾವಿಸಿದೆ.

ಸಂತೋಷ (ಹ್ಯಾಪಿನೆಸ್) ಕ್ಕಿಂತ ಮಿಗಿಲಾದ ಅಭಿವೃದ್ಧಿ ಯಾವುದೂ ಇಲ್ಲ ಎಂಬುದು ಭೂತಾನಿಗಳ ಗಟ್ಟಿ ನಿಲುವು. ಜಗತ್ತಿನ ಬಹುತೇಕ ದೇಶಗಳು ತಮ್ಮ ಪ್ರಗತಿಯನ್ನು ಅಳೆಯಲು ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ (ಎಈP) ಅನ್ನು ಪ್ರಮುಖ ಮಾನದಂಡವಾಗಿ ಬಳಸುತ್ತವೆ. ಜಿಡಿಪಿ ಎಂಬುದು ಒಂದು ದೇಶದಲ್ಲಿ ಉತ್ಪಾದನೆಯಾದ ಸರಕು ಮತ್ತು ಸೇವೆಗಳ ಒಟ್ಟು ಆರ್ಥಿಕ ಮೌಲ್ಯ. ‌

ಇದು ಆರ್ಥಿಕ ಬೆಳವಣಿಗೆಯನ್ನು ಸೂಚಿಸುತ್ತದೆ. ಆದರೆ, ಭೂತಾನ್ ಎಂಬ ಪುಟ್ಟ ಹಿಮಾಲಯ ರಾಷ್ಟ್ರವು ಆರ್ಥಿಕ ಲಾಭಕ್ಕಿಂತಲೂ ಮಿಗಿಲಾದ ಮಾನವ ಕಲ್ಯಾಣ ಮತ್ತು ಸಂತೋಷಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಈ ಆದರ್ಶವನ್ನೇ ಆ ದೇಶ ‘ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್’ (ಜಿಎನ್‌ಎಚ್) ಎಂದು ಕರೆದಿದೆ.

ಜಿಎನ್‌ಎಚ್ ಎಂಬುದು ಕೇವಲ ಒಂದು ಘೋಷವಾಕ್ಯವಲ್ಲ, ಬದಲಾಗಿ ದೇಶದ ಆಡಳಿತ, ನೀತಿಗಳು ಮತ್ತು ಅಭಿವೃದ್ಧಿ ಯೋಜನೆಗಳ ಆಧಾರಸ್ತಂಭವಾಗಿದೆ. ಇದು ಆಧುನಿಕ ಜಗತ್ತಿನ ಆರ್ಥಿಕ ಯಶಸ್ಸಿನ ವ್ಯಾಖ್ಯಾನವನ್ನು ಪ್ರಶ್ನಿಸಿ, ಮಾನವನ ಒಟ್ಟಾರೆ ಸಂತೋಷ, ಯೋಗಕ್ಷೇಮ ಮತ್ತು ಪರಿಸರ ಸಮತೋಲನಕ್ಕೆ ಪ್ರಾಮುಖ್ಯ ನೀಡಿರುವುದು ವಿಶ್ವದಲ್ಲಿಯೇ ಅನನ್ಯವಾದ ಅಭಿವೃದ್ಧಿ ಮಾದರಿಯಾಗಿದೆ. ಇದು ಜನರ ಸಂತೋಷ, ಯೋಗಕ್ಷೇಮ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಆಧರಿಸಿದ ಬಹುಮುಖಿ ಮಾಪಕವಾಗಿದೆ.

ಇದು ಭೂತಾನ್‌ನ ಅಭಿವೃದ್ಧಿ ನೀತಿಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಯ ಜತೆಗೆ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಪರಿಸರ ಸಮತೋಲನವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಭೂತಾನ್‌ನ ನಾಲ್ಕನೇ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಅವರು 1970ರ ದಶಕದಲ್ಲಿ ‘ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್, ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್‌ಗಿಂತ ಹೆಚ್ಚು ಮುಖ್ಯ’ ಎಂದು ಘೋಷಿಸಿದಾಗ ಈ ಪರಿಕಲ್ಪನೆಯು ಜಗತ್ತಿನ ಗಮನ ಸೆಳೆಯಿತು.

ಅವರು ಯುವಕರಾಗಿದ್ದಾಗಲೇ ಜಿಡಿಪಿಯನ್ನು ಸಮಾಜದ ಸಂತೋಷ ಮತ್ತು ಯೋಗಕ್ಷೇಮದ ಏಕೈಕ ಮಾಪಕವನ್ನಾಗಿ ಪರಿಗಣಿಸುವುದನ್ನು ಪ್ರಶ್ನಿಸಿದರು ಮತ್ತು ಸಂತೋಷವನ್ನು ಪ್ರಗತಿಪರ ಅಭಿವೃದ್ಧಿಯ ಸೂಚಕವನ್ನಾಗಿ ಬಳಸಬೇಕೆಂದು ಪ್ರತಿಪಾದಿಸಿದರು. ಇದು ಭೂತಾನ್‌ನ 1629ರ ಪ್ರಾಚೀನ ಕಾನೂನು ಸಂಹಿತೆಯಿಂದ ಪ್ರೇರಿತವಾಗಿದ್ದು, ಅದರಲ್ಲಿ ಸರಕಾರದ ಉದ್ದೇಶ ಜನರ ಸಂತೋಷವನ್ನು ಸೃಷ್ಟಿಸುವುದು ಎಂದು ಹೇಳಲಾಗಿದೆ.

ಇದು ಬೌದ್ಧತತ್ವಗಳಾದ ಕರುಣೆ, ಪ್ರಕೃತಿಯೊಂದಿಗೆ ಸಾಮರಸ್ಯ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಸಮತೋಲನವನ್ನು ಆಧರಿಸಿದೆ. ಜಿಎನ್‌ಎಚ್ ಅನ್ನು ಆಚರಣೆಗೆ ತರಲು ಮತ್ತು ಅಳೆಯಲು ಭೂತಾನ್ ಸರಕಾರವು ನಾಲ್ಕು ಪ್ರಮುಖ ಆಧಾರಸ್ತಂಭಗಳನ್ನು ಸ್ಥಾಪಿಸಿದೆ. ಇವುಗಳು ಪರಸ್ಪರ ಸಂಬಂಧ ಹೊಂದಿದ್ದು, ಸಮತೋಲಿತ ಅಭಿವೃದ್ಧಿಯನ್ನು ಖಚಿತಪಡಿಸುತ್ತವೆ. ಈ ಪೈಕಿ ಮೊದಲನೆಯದು, ಉತ್ತಮ ಆಡಳಿತ ( Good Governance).

ಇದು ಜಿಎನ್‌ಎಚ್‌ನ ಪ್ರಮುಖ ಸ್ತಂಭವಾಗಿದೆ. ಪಾರದರ್ಶಕತೆ, ಕಾನೂನು ಸುವ್ಯವಸ್ಥೆ, ಪ್ರಜಾ ಪ್ರಭುತ್ವದ ಮೌಲ್ಯಗಳು ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತವು ನಾಗರಿಕರಲ್ಲಿ ನಂಬಿಕೆಯನ್ನು ಮೂಡಿಸಿ, ಸಂತೋಷಕ್ಕೆ ಅಗತ್ಯವಾದ ಪರಿಸರವನ್ನು ಸೃಷ್ಟಿಸುತ್ತದೆ. ಭೂತಾನ್ 2008ರಲ್ಲಿ ಅರಸೊತ್ತಿಗೆಯಿಂದ ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಪರಿವರ್ತನೆಗೊಂಡಿತು. ಇದು ಉತ್ತಮ ಆಡಳಿತದ ಬಗೆಗಿನ ಅದರ ಬದ್ಧತೆಯನ್ನು ತೋರಿಸುತ್ತದೆ.

ಭೂತಾನ್ ಪ್ರಜಾಪ್ರಭುತ್ವಕ್ಕೆ ತಿರುಗಿದ ನಂತರ, ದೇಶದ ಸಂವಿಧಾನದಲ್ಲಿ ಜಿಎನ್‌ಎಚ್ ಅನ್ನು ಪ್ರೋತ್ಸಾಹಿಸುವ ಸ್ಥಿತಿಗಳನ್ನು ಸೃಷ್ಟಿಸುವುದು ಸರಕಾರದ ಜವಾಬ್ದಾರಿ ಎಂದು ಸೇರಿಸಲಾಯಿತು. ಆರಂಭದಲ್ಲಿ ಇದು ಉದಾತ್ತ ಆಕಾಂಕ್ಷೆಯಾಗಿದ್ದರೂ, ವಿಶ್ವದ ಗಮನ ಸೆಳೆದ ನಂತರ ಅದನ್ನು ಪರಿಮಾಣಾತ್ಮಕ ಸಾಧನವನ್ನಾಗಿ ಅಭಿವೃದ್ಧಿಪಡಿಸಲಾಯಿತು.

ಆರಂಭದಲ್ಲಿ ವಿಶ್ವದ ಅನೇಕ ದೇಶಗಳು ಜಿಎನ್‌ಎಚ್ ಪರಿಕಲ್ಪನೆಯನ್ನು ಲೇವಡಿ ಮಾಡಿದ್ದವು. ಆದರೆ ಮುಂದಿನ ಐದು ವರ್ಷಗಳಲ್ಲಿ ವಿಶ್ವಸಂಸ್ಥೆ, ವಿಶ್ವ ಬ್ಯಾಂಕ್, ಒಇಸಿಡಿ (Organisation for Economic Co-operation and Development) ಮುಂತಾದ ಜಾಗತಿಕ ಸಂಸ್ಥೆಗಳು ಇದೊಂದು ಅನನ್ಯವಾದ ಕಲ್ಪನೆ ಎಂದು ಮಾನ್ಯತೆ ನೀಡಿದ ಬಳಿಕ ತಮ್ಮ ರಾಗವನ್ನು ಬದಲಿಸಿದವು.

ಎರಡನೆಯದು, ಸುಸ್ಥಿರ ಮತ್ತು ಸಮಾನ ಆರ್ಥಿಕ ಅಭಿವೃದ್ಧಿ (Sustainable and Equitable Socio Economic Development ). ಜಿಎನ್‌ಎಚ್ ಆಧ್ಯಾತ್ಮಿಕ ಸಂತೋಷದ ಬಗ್ಗೆ ಮಾತ್ರ ಮಾತನಾಡುವು ದಿಲ್ಲ. ಇದು ಆರ್ಥಿಕ ಅಭಿವೃದ್ಧಿಯನ್ನು ಒಳಗೊಳ್ಳುತ್ತದೆ. ಆದರೆ ಅದನ್ನು ಪರಿಸರಕ್ಕೆ ಹಾನಿಯಾಗ ದಂತೆ ಮತ್ತು ಸಮಾಜದಲ್ಲಿ ಎಲ್ಲರಿಗೂ ಸಮಾನವಾಗಿ ಲಾಭವಾಗುವಂತೆ ವಿನ್ಯಾಸಗೊಳಿಸಿದೆ.

ಆದಾಯದ ಅಂತರವನ್ನು ಕಡಿಮೆ ಮಾಡುವುದು, ಬಡತನ ನಿರ್ಮೂಲನೆ ಮತ್ತು ಬದುಕಿನ ಗುಣಮಟ್ಟವನ್ನು ಸುಧಾರಿಸುವುದು ಇದರ ಮುಖ್ಯ ಗುರಿ. ಮೂರನೆಯದು, ಸಂಸ್ಕೃತಿಯ ಸಂರಕ್ಷಣೆ ಮತ್ತು ಉತ್ತೇಜನ (Preservation and Promotion of Culture). ಭೂತಾನ್ ತನ್ನ ಶ್ರೀಮಂತ ಸಂಸ್ಕೃತಿ ಮತ್ತು ಬೌದ್ಧ ಧರ್ಮದ ಮೌಲ್ಯಗಳನ್ನು ಕಾಯ್ದುಕೊಳ್ಳಲು ಬಹಳ ಮಹತ್ವ ನೀಡುತ್ತದೆ.

ಸಾಂಪ್ರದಾಯಿಕ ಉಡುಗೆ-ತೊಡುಗೆ, ವಾಸ್ತುಶಿಲ್ಪ, ಸಂಗೀತ, ನೃತ್ಯ ಮತ್ತು ಆಚರಣೆಗಳು ರಾಷ್ಟ್ರೀಯ ಗುರುತನ್ನು ಬಲಪಡಿಸುತ್ತವೆ. ಇದು ಜನರಲ್ಲಿ ಒಗ್ಗಟ್ಟು ಮತ್ತು ಸೇರಿದ ಭಾವನೆಯನ್ನು ಬೆಳೆಸುತ್ತದೆ. ಇದು ಸಂತೋಷಕ್ಕೆ ಅತಿ ಮುಖ್ಯ.

ನಾಲ್ಕನೆಯದು, ಪರಿಸರ ಸಂರಕ್ಷಣೆ (Environmental Conservation). ಭೂತಾನ್ ತನ್ನ ಪರಿಸರ ವನ್ನು ಅತಿ ಪ್ರಮುಖ ಆಸ್ತಿ ಎಂದು ಪರಿಗಣಿಸುತ್ತದೆ. ಜಿಎನಎಚ್ ಪ್ರಕಾರ, ಮಾನವ ಮತ್ತು ಪ್ರಕೃತಿಯ ನಡುವೆ ಸಾಮರಸ್ಯ ಇರಬೇಕು. ಈ ತತ್ವದ ಆಧಾರದ ಮೇಲೆ, ಭೂತಾನ್ ತನ್ನ ಸಂವಿಧಾನದಲ್ಲಿ ಕನಿಷ್ಠ ಶೇ.60 ಭೂ ಪ್ರದೇಶವನ್ನು ಅರಣ್ಯದಿಂದ ಆವರಿಸಿರಬೇಕು ಎಂದು ಕಾನೂನು ಮಾಡಿದೆ.

ಪ್ರಸ್ತುತ, ದೇಶದ ಶೇ.70 ಕ್ಕಿಂತ ಹೆಚ್ಚು ಭಾಗವು ಅರಣ್ಯದಿಂದ ಕೂಡಿದೆ. ಇದು ಜಾಗತಿಕ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಭೂತಾನ್‌ನ ಬದ್ಧತೆಯನ್ನು ತೋರಿಸುತ್ತದೆ. ಜಿಎನ್‌ಎಚ್ ತತ್ವವನ್ನು ಇನ್ನಷ್ಟು ವೈಜ್ಞಾನಿಕವಾಗಿ ಮತ್ತು ಪ್ರಾಯೋಗಿಕವಾಗಿ ಅಳೆಯಲು, ಸಂಶೋಧಕರು ಮತ್ತು ಆಡಳಿತಗಾರರು ಒಂಬತ್ತು ಕಾರ್ಯಕ್ಷೇತ್ರ (ಡೊಮೇನ್) ಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಕಾರ್ಯಕ್ಷೇತ್ರಗಳು ವ್ಯಕ್ತಿ ಮತ್ತು ಸಮುದಾಯದ ಒಟ್ಟಾರೆ ಯೋಗಕ್ಷೇಮವನ್ನು ವ್ಯಾಪಕವಾಗಿ ಅಳೆಯುತ್ತವೆ. ಇವುಗಳೆಂದರೆ, ಮಾನಸಿಕ ಯೋಗಕ್ಷೇಮ ( Psychological Wellbeing), ಆರೋಗ್ಯ ( Health ), ಸಮಯದ ಬಳಕೆ ಮತ್ತು ಸಮತೋಲನ ( Time Use and Balance ), ಶಿಕ್ಷಣ ( Education ), ಸಾಂಸ್ಕೃತಿಕ ವೈವಿಧ್ಯ ಮತ್ತು ಸ್ಥಿರತೆ ( Cultural Diversity and Resilience), ಉತ್ತಮ ಆಡಳಿತ ( Good Governance), ಸಮುದಾಯ ಚೈತನ್ಯ ( Community Vitality ), ಪರಿಸರ ವೈವಿಧ್ಯ ಮತ್ತು ಸ್ಥಿರತೆ ( Ecological Diversity and Resilience ) ಮತ್ತು ಜೀವನ ಮಟ್ಟ ( Living Standards ).

ಈ ಒಂಬತ್ತು ಕಾರ್ಯಕ್ಷೇತ್ರಗಳನ್ನು ಬಳಸಿಕೊಂಡು ಪ್ರತಿ ಐದು ವರ್ಷಗಳಿಗೊಮ್ಮೆ ‘ಜಿಎನ್‌ಎಚ್ ಸಮೀಕ್ಷೆ’ಯನ್ನು ನಡೆಸಲಾಗುತ್ತದೆ. ಈ ಸಮೀಕ್ಷೆಯ ಆಧಾರದ ಮೇಲೆ ಸರಕಾರವು ನೀತಿಗಳನ್ನು ರೂಪಿಸುತ್ತದೆ ಮತ್ತು ಮುಂದಿನ ಪಂಚವಾರ್ಷಿಕ ಯೋಜನೆಗಳಿಗೆ ಮಾರ್ಗದರ್ಶನ ಪಡೆಯುತ್ತದೆ.

ಜಿಡಿಪಿ ( Gross Domestic Product) ಸಂಪೂರ್ಣವಾಗಿ ಆರ್ಥಿಕ ಬೆಳವಣಿಗೆಯ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ಹೆಚ್ಚಿದ ಉತ್ಪಾದನೆ, ಮಾರಾಟ ಮತ್ತು ಸೇವೆಯು ಜಿಡಿಪಿಯನ್ನು ಹೆಚ್ಚಿಸುತ್ತದೆ. ಆದರೆ, ಇದು ಸಾಮಾಜಿಕ ಅಸಮಾನತೆ, ಪರಿಸರ ಮಾಲಿನ್ಯ ಅಥವಾ ಜನರ ಸಂತೋಷದ ಮಟ್ಟ ವನ್ನು ಪರಿಗಣಿಸುವುದಿಲ್ಲ.

ಉದಾಹರಣೆಗೆ, ಪರಿಸರ ಮಾಲಿನ್ಯವನ್ನು ತೊಡೆದು ಹಾಕಲು ಖರ್ಚು ಮಾಡುವ ಹಣವು ಜಿಡಿಪಿ ಯನ್ನು ಹೆಚ್ಚಿಸಬಹುದು. ಆದರೆ ಅದು ಜನರ ಆರೋಗ್ಯ ಮತ್ತು ಪರಿಸರವನ್ನು ಸುಧಾರಿಸುವುದೇ ಎಂಬುದನ್ನು ಖಾತ್ರಿಪಡಿಸುವುದಿಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಜಿಎನ್‌ಎಚ್ ( Gross National Happiness ) ಆರ್ಥಿಕ ಮೌಲ್ಯವನ್ನು ಮಾತ್ರವಲ್ಲದೇ, ಜನರ ಸಮಗ್ರ ಯೋಗ ಕ್ಷೇಮ ಮತ್ತು ಜೀವನದ ಗುಣಮಟ್ಟವನ್ನು ಅಳೆಯಲು ಪ್ರಯತ್ನಿಸುತ್ತದೆ.

ಜಿಎನ್‌ಎಚ್‌ನಲ್ಲಿ, ಪ್ರತಿಯೊಂದು ಅಭಿವೃದ್ಧಿ ನೀತಿಯನ್ನು ಈ ನಾಲ್ಕು ಆಧಾರಸ್ತಂಭಗಳು ಮತ್ತು ಒಂಬತ್ತು ಕಾರ್ಯಕ್ಷೇತ್ರಗಳ ಹಿನ್ನೆಲೆಯಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ಉದಾಹರಣೆಗೆ, ಹೊಸ ಕೈಗಾರಿಕಾ ಯೋಜನೆಯು ಆರ್ಥಿಕವಾಗಿ ಲಾಭದಾಯಕವಾಗಿದ್ದರೂ, ಅದು ಪರಿಸರಕ್ಕೆ ಹಾನಿ ಮಾಡಿದರೆ ಅಥವಾ ಸ್ಥಳೀಯ ಸಂಸ್ಕೃತಿಗೆ ಧಕ್ಕೆಯುಂಟು ಮಾಡಿದರೆ, ಜಿಎನ್‌ಎಚ್ ತತ್ವದ ಪ್ರಕಾರ ಅದನ್ನು ಉತ್ತಮ ಯೋಜನೆಯೆಂದು ಪರಿಗಣಿಸಲಾಗುವುದಿಲ್ಲ.

ಮಾನಸಿಕ ಯೋಗಕ್ಷೇಮ, ಆರೋಗ್ಯ, ಸಮಯದ ಬಳಕೆ (ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನ), ಶಿಕ್ಷಣ, ಸಾಂಸ್ಕೃತಿಕ ವೈವಿಧ್ಯ ಮತ್ತು ಸ್ಥಿತಿಸ್ಥಾಪಕತ್ವ, ಉತ್ತಮ ಆಡಳಿತ, ಸಮುದಾ ಯದ ಚೈತನ್ಯ, ಪರಿಸರ ವೈವಿಧ್ಯ ಮತ್ತು ಸ್ಥಿತಿಸ್ಥಾಪಕತ್ವ ಮತ್ತು ಜೀವನ ಮಟ್ಟ... ಈ ಎಲ್ಲ ಅಂಶ ಗಳು ಭೂತಾನಿನ ಜನರ ಸಂತೋಷದ ಜೀವನಕ್ಕೆ ಕಾರಣವಾಗಿವೆ.

ಅಲ್ಲಿನ ಜನರು ಆಧುನಿಕ ಜಗತ್ತಿನ ಭರಾಟೆಯಿಂದ ದೂರವಿದ್ದು, ಸರಳ, ಸಮುದಾಯ ಆಧಾರಿತ ಮತ್ತು ಪ್ರಕೃತಿಗೆ ಹತ್ತಿರವಾದ ಜೀವನಶೈಲಿಯನ್ನು ಅಳವಡಿಸಿಕೊಂಡಿರುವುದು ಎಂಥವರಿಗಾದರೂ ಅನುಭವಕ್ಕೆ ಬರದೇ ಹೋಗುವುದಿಲ್ಲ. ಬೌದ್ಧ ಧರ್ಮದ ಪ್ರಭಾವದಿಂದಾಗಿ, ಸಹಾನುಭೂತಿ, ಸಹನೆ ಮತ್ತು ಅಹಿಂಸೆಯಂಥ ಮೌಲ್ಯಗಳು ಅವರ ಜೀವನದಲ್ಲಿ ಆಳವಾಗಿ ಬೇರೂರಿವೆ.

ಹೀಗಾಗಿ, ಭೂತಾನಿನ ಸಂತೋಷದ ಮೂಲ ಕೇವಲ ಆರ್ಥಿಕ ಸಮೃದ್ಧಿಯಲ್ಲಿಲ್ಲ, ಬದಲಾಗಿ ಸಮಗ್ರ ಮತ್ತು ಸಮತೋಲಿತ ಜೀವನ ದೃಷ್ಟಿಯಲ್ಲಿದೆ. ಒಟ್ಟಾರೆಯಾಗಿ, ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್ ಕೇವಲ ಆರ್ಥಿಕ ಲಾಭಕ್ಕಿಂತ ಜನರ ಸಂತೋಷ ಮತ್ತು ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುವ ಒಂದು ಅಭಿವೃದ್ಧಿ ಮಾದರಿಯಾಗಿದೆ.

ನಿಜವಾದ ಪ್ರಗತಿ ಅಂದ್ರೆ ಕೇವಲ ಆರ್ಥಿಕ ಬೆಳವಣಿಗೆಯಲ್ಲ, ಬದಲಾಗಿ ಮಾನವ ಜೀವನದ ಸಮಗ್ರ ಗುಣಮಟ್ಟವನ್ನು ಹೆಚ್ಚಿಸುವುದು ಎಂಬ ಅಮೋಘ ಪಾಠವನ್ನು ಭೂತಾನ್ ಜಗತ್ತಿಗೆ ನೀಡಿದೆ. ತನ್ನ ಈ ವಿಶಿಷ್ಟ ಜಿಎನ್‌ಎಚ್ ತತ್ವದ ಮೂಲಕ, ಆಧುನಿಕ ಜಗತ್ತಿನ ಆರ್ಥಿಕ ಪ್ರಗತಿಯನ್ನೇ ಪ್ರಗತಿ ಎಂದು ಪರಿಗಣಿಸುವ ಮನೋಭಾವಕ್ಕೆ ಒಂದು ಪರ್ಯಾಯ ಮಾದರಿಯನ್ನು ಭೂತಾನ್ ಒದಗಿಸಿದೆ.

ಇದು ಪ್ರಗತಿಯ ವ್ಯಾಖ್ಯಾನವನ್ನು ಪುನಃ ಪರಿಶೀಲಿಸಲು ಮತ್ತು ಮಾನವೀಯ ಮೌಲ್ಯಗಳನ್ನು ಆಳವಾಗಿ ಅಳವಡಿಸಲು ಪ್ರಪಂಚಕ್ಕೆ ಸೂರ್ತಿ ನೀಡಿದಂತಾಗಿದೆ. ಭೂತಾನಿನಲ್ಲಿ ಒಂದು ವಾರ ಓಡಾಡಿದವರಿಗೆ ಜಿಎನ್‌ಎಚ್ ಅಂದ್ರೆ ಏನು ಎಂಬುದು ಅರ್ಥವಾಗದೇ ಹೋಗದು.