Mirley Chandrashekher Column: ನೀರೇ ಎಲ್ಲಾ, ನೀರಿಲ್ಲದೆ ಏನೂ ಇಲ್ಲ
ಕೃಷ್ಣಾ, ಕಾವೇರಿ, ಕಳಸಾ ಬಂಡೂರಿ, ಮಹದಾಯಿ ನದಿನೀರಿನ ಹಂಚಿಕೆಗೆ ಸಂಬಂಧಿಸಿದ ತಂಟೆ-ತಕ ರಾರುಗಳ ಬಗ್ಗೆ ಮಾಧ್ಯಮಗಳಲ್ಲಿ ಓದುತ್ತಲೇ ಇರುತ್ತೇವೆ. ಈ ಸಾಲಿನಲ್ಲಿ ಮುಂಗಾರು ಪ್ರಾರಂಭದಿಂದ ಋತು ಮುಗಿಯುವವರೆಗೂ ಸಮೃದ್ಧವಾಗಿ ಮಳೆಯಾಗಿರುವುದರಿಂದ ನೀರಿನ ಹೋರಾಟಗಳ ಬಿಸಿ ಕಾಣುತ್ತಿಲ್ಲ


ಜಲತತ್ವ
ಮಿರ್ಲೆ ಚಂದ್ರಶೇಖರ
ಅನ್ನದಾತರ ಬದುಕನ್ನು ಬಂಗಾರವಾಗಿಸಿದೆ ಈ ಬಾರಿಯ ಮಾನ್ಸೂನ್. ರಾಜ್ಯದ ಜಲಾಶಯಗಳ ಒಡಲು ನೀರಿನಿಂದ ತುಂಬಿ, ಹೆಚ್ಚುವರಿಯಾಗಿ ಹರಿದು ಸಮುದ್ರವನ್ನು ಸೇರಿದೆ. ಕಾವೇರಿ ಕಣಿವೆಯ 4 ಅಣೆಕಟ್ಟುಗಳಲ್ಲಿ (ಕೆಆರ್‌ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿ) ಇನ್ನೂ ಶೇ.70ಕ್ಕಿಂತಲೂ ಹೆಚ್ಚು ನೀರಿನ ಸಂಗ್ರಹವಿದೆ (ಸಾಮರ್ಥ್ಯ: 114.598 ಟಿಎಂಸಿ, ಈಗಿನ ಸಂಗ್ರಹ: 82.364 ಟಿಎಂಸಿ). ಸಂಗ್ರಹಿಸಲಾಗದೆ ಸಮುದ್ರ ಸೇರಿದ ನೀರನ್ನು ಮುಂದೆ ಬಳಕೆ ಮಾಡಲು ಆಗದಿರುವುದರಿಂದ ಅದು ವ್ಯರ್ಥವೆಂದೇ ಪರಿಗಣಿಸಲ್ಪಡುತ್ತದೆ.
ಕೃಷ್ಣಾ, ಕಾವೇರಿ, ಕಳಸಾ ಬಂಡೂರಿ, ಮಹದಾಯಿ ನದಿನೀರಿನ ಹಂಚಿಕೆಗೆ ಸಂಬಂಧಿಸಿದ ತಂಟೆ-ತಕರಾರುಗಳ ಬಗ್ಗೆ ಮಾಧ್ಯಮಗಳಲ್ಲಿ ಓದುತ್ತಲೇ ಇರುತ್ತೇವೆ. ಈ ಸಾಲಿನಲ್ಲಿ ಮುಂಗಾರು ಪ್ರಾರಂಭ ದಿಂದ ಋತು ಮುಗಿಯುವವರೆಗೂ ಸಮೃದ್ಧವಾಗಿ ಮಳೆಯಾಗಿರುವುದರಿಂದ ನೀರಿನ ಹೋರಾಟ ಗಳ ಬಿಸಿ ಕಾಣುತ್ತಿಲ್ಲ.
ಇದನ್ನೂ ಓದಿ: Mirle Chandrashekher Column: ಈ ಸಲ ನಿಮ್ಮ ಸಂಕಲ್ಪವೇನು ?
ಒಡಲಿನ ಕಿಚ್ಚು ಬೂದಿ ಮುಚ್ಚಿದ ಕೆಂಡದಂತೆ ಸದ್ಯಕ್ಕೆ ಮರೆಯಾಗಿದೆ. ಬೇಸಗೆ ಬಂದು ಜಲಾಶಯ ಗಳಲ್ಲಿ ನೀರು ಕಡಿಮೆಯಾಗಿ ಕೊರತೆ ಉಂಟಾದಾಗ ಮತ್ತದೇ ಚಳವಳಿಗಳು ತಪ್ಪಿದ್ದಲ್ಲ. ನೀರು ರೈತರ ಜೀವಾಳವಾಗಿರುವುದರಿಂದ ಈ ಸಂದರ್ಭದಲ್ಲಿ ಹೋರಾಡಲೇಬೇಕಾಗುತ್ತದೆ. ನೀರಿಲ್ಲದೆ ಏನೂ ನಡೆಯದು, ಅಭಿವೃದ್ಧಿಯೂ ಕನಸಿನ ಮಾತೇ. ಕರ್ನಾಟಕದಲ್ಲಿ ಜಲಸಂಪತ್ತು ಹೇರಳ ವಾಗಿದ್ದರೂ ಅವನ್ನು ಸಂರಕ್ಷಿಸಿಕೊಳ್ಳುವಲ್ಲಿ ಮತ್ತು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ನಾವು ಬಹಳ ಕಾಲದವರೆಗೆ ಸಫಲವಾಗಿರಲಿಲ್ಲ.
ಹೀಗಾಗಿ ಭಾರಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಾರ್ಯ ನಡೆಯುತ್ತಲೇ ಇದ್ದು, ನೀರನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸದ್ಯ ಹೆಚ್ಚು ಪ್ರಗತಿ ಕಂಡುಬರುತ್ತಿದೆ. ಆದರೆ, ಈ ನಾಗಾಲೋಟದ ಪ್ರಗತಿಯಲ್ಲಿ ಪ್ರಕೃತಿಯ ಕಗ್ಗೊಲೆ ಆಗದಂತೆ ನೋಡಿಕೊಳ್ಳಬೇಕಿದೆ. ಪ್ರಸ್ತುತ, ನೀರಿನ ಸದ್ಬಳಕೆಯ ಉದ್ದೇಶದಿಂದ ಸರಕಾರ ಕೈಗೊಂಡಿರುವ ಎರಡು ಭಾರಿ ನೀರಾವರಿ ಯೋಜನೆಗಳಲ್ಲಿ ಎತ್ತಿನ ಹೊಳೆ ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಪ್ರಮುಖವಾಗಿವೆ.
ವ್ಯರ್ಥವಾಗಿ ಸಮುದ್ರಕ್ಕೆ ಹರಿದುಹೋಗುತ್ತಿದ್ದ ಮಳೆನೀರನ್ನು, ಕುಡಿಯುವ ನೀರಿಗೂ ಕಷ್ಟವಿರುವ ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳಿಗೆ ಉಣಿಸಲು ಹಮ್ಮಿಕೊಳ್ಳಲಾಗಿರುವ 12912 ಕೋಟಿ ರು. ಮೊತ್ತದ ಯೋಜನೆ ಎತ್ತಿನಹೊಳೆ. ಇನ್ನು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ಒಟ್ಟು 2,25,515 ಹೆಕ್ಟೇರ್ ಪ್ರದೇಶಕ್ಕೆ ಕಿರು ನೀರಾವರಿಗೆಂದು ಹಾಗೂ 367 ಕೆರೆಗಳನ್ನು ತುಂಬಿಸಲೆಂದು ಹಮ್ಮಿಕೊಳ್ಳಲಾಗಿರುವ 12,340 ಕೋಟಿ ರು. ಮೊತ್ತದ ಭದ್ರಾ ಮೇಲ್ದಂಡೆ ಯೋಜನೆಯೂ ಮಹತ್ವದ್ದಾಗಿದೆ. ಈ ಎರಡರ ಕಾಮಗಾರಿಗಳು ಪ್ರಗತಿಯಲ್ಲಿವೆ.
ಕರ್ನಾಟಕದ ನದಿಗಳು ಮತ್ತು ಅವುಗಳಿಂದ ನಮಗೆ ದೊರೆಯುವ ನೀರಿನ ಪ್ರಮಾಣ ಇವುಗಳ ಬಗೆಗಿನ ತಿಳಿವಳಿಕೆ ನಮಗಿರಬೇಕು. ನಮ್ಮ ರಾಜ್ಯದಲ್ಲಿ ಮಳೆ ನೀರು ಹರಿಯುವ ಭೂ ಪ್ರದೇಶದ ಮೇಲ್ಮೈನ ಇಳಿಜಾರಿಗೆ ಅನುಗುಣವಾಗಿ 7 ವಲಯ ಅಥವಾ ಕಣಿವೆಗಳಾಗಿ ಅವನ್ನು ವಿಂಗಡಿಸ ಲಾಗಿದೆ.
ಅವುಗಳೆಂದರೆ, ಗೋದಾವರಿ, ಕೃಷ್ಣಾ, ಕಾವೇರಿ, ಉತ್ತರ ಪೆನ್ನಾರ್, ದಕ್ಷಿಣ ಪೆನ್ನಾರ್, ಪೊಲಾರ್ ತ್ತು ಪಶ್ಚಿಮಕ್ಕೆ ಹರಿಯುವ ನದಿಗಳು. ಈ 7 ಕಣಿವೆಗಳಲ್ಲಿ ಬರುವ ಜಲಾನಯನ ಪ್ರದೇಶವು ಕರ್ನಾಟಕದ ಜತೆಗೆ ಅಂತಾರಾಜ್ಯಗಳಲ್ಲೂ ವ್ಯಾಪಿಸಿದೆ. ಪಶ್ಚಿಮಕ್ಕೆ ಹರಿಯುವ ನದಿಗಳಲ್ಲಿ ಮಹದಾಯಿ ಮತ್ತು ಬರಪೊಳೆ ನದಿಗಳನ್ನು ಬಿಟ್ಟರೆ, ಮಿಕ್ಕೆಲ್ಲಾ ನದಿಗಳು ಕರ್ನಾಟಕದಲ್ಲೇ ಹುಟ್ಟಿ ವ್ಯರ್ಥವಾಗಿ ಸಮುದ್ರ ಸೇರುತ್ತವೆ.
ಈ ಕಣಿವೆಯಿಂದಲೇ ನೀರು ಹೆಚ್ಚು ವ್ಯರ್ಥವಾಗಿ ಸಾಗರಕ್ಕೆ ಸೇರುತ್ತಿರುವುದು. ರಾಜ್ಯದ ಒಟ್ಟು 7 ಕಣಿವೆಗಳ 1,90,500 ಚ.ಕಿ.ಮೀ. ಜಲಾನಯನ ಪ್ರದೇಶದಲ್ಲಿ ಬಿದ್ದ ಮಳೆಯಿಂದ ದೊರಕುವ ಸರಾ ಸರಿ ನೀರಿನ ಪ್ರಮಾಣ 3475 ಟಿಎಂಸಿ ಎಂದು ಅಂದಾಜಿಸಲಾಗಿದೆ.
ಈ ಪೈಕಿ 1695 ಟಿಎಂಸಿಯಷ್ಟು ಬಳಕೆಯಾಗುತ್ತಿದ್ದರೆ, ಉಳಿದ 1780 ಟಿಎಂಸಿ ನೀರು ವ್ಯರ್ಥ ವಾಗಿ ಸಮುದ್ರ ಸೇರುತ್ತಿದೆ. ಇಷ್ಟೊಂದು ಭಾರಿ ಪ್ರಮಾಣದ ನೀರನ್ನು ಪೂರ್ಣವಾಗಿ ಬಳಸಿಕೊಳ್ಳಲು ಸಮಗ್ರ ಯೋಜನೆ ರೂಪುಗೊಳ್ಳಬೇಕಿದೆ. ಪಶ್ಚಿಮಕ್ಕೆ ಹರಿಯುವ (ಮಹದಾಯಿ, ಕಾಳಿ, ಬೇಡ್ತಿ, ಅಘನಾಶಿನಿ, ಶರಾವತಿ, ಚಕ್ರಾ, ವರಾಹಿ, ನೇತ್ರಾವತಿ ಮತ್ತು ಬರಪೊಳೆ) ನದಿಗಳಿಂದ ಸಿಗಬಹುದಾದ ನೀರಿನ ಪ್ರಮಾಣ ಸುಮಾರು 1998 ಟಿಎಂಸಿ. ಇನ್ನು, ಗೋದಾವರಿ ಕಣಿವೆಯಲ್ಲಿ, ಗೋದಾವರಿ ನದಿಯು ಸುಮಾರು 1465 ಕಿ.ಮೀ. ಉದ್ದಕ್ಕೆ ಪಶ್ಚಿಮದಿಂದ ಪೂರ್ವದ ಕಡೆಗೆ ಹರಿಯುತ್ತಿದ್ದು, ಪ್ರವಾರ, ಪೂರ್ಣಾ, ಪ್ರಣಹಿತ, ಇಂದ್ರಾವತಿ ಮತ್ತು ಸಬರಿ ಉಪನದಿಗಳು ಇದಕ್ಕೆ ಸೇರುತ್ತವೆ. ಈ ಭಾಗದಿಂದ 49.97 ಟಿಎಂಸಿ ನೀರು ಲಭ್ಯವಿದೆ. ಕೃಷ್ಣಾ ಕಣಿವೆಯಲ್ಲಿ ಮುಖ್ಯನದಿಯಾಗಿರುವ ಕೃಷ್ಣಾ, 1400 ಕಿ.ಮೀ. ಉದ್ದಕ್ಕೆ ಪಶ್ಚಿಮದಿಂದ ಪೂರ್ವದ ಕಡೆಗೆ ಹರಿಯುತ್ತಿದ್ದು, ಘಟಪ್ರಭಾ, ಮಲಪ್ರಭಾ, ಭೀಮಾ ಮತ್ತು ತುಂಗಭದ್ರಾ ಉಪನದಿಗಳು ಸೇರುತ್ತವೆ. ಈ ಭಾಗದಿಂದ 969.44 ಟಿಎಂಸಿ ನೀರು ಲಭ್ಯವಿದೆ.
ಇನ್ನು ಕಾವೇರಿ ಕಣಿವೆಯಲ್ಲಿನ ಮುಖ್ಯನದಿಯಾಗಿರುವ ಕಾವೇರಿಯು ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ 808 ಕಿ.ಮೀ. ಉದ್ದಕ್ಕೆ ಪಶ್ಚಿಮದಿಂದ ಪೂರ್ವಕ್ಕೆ ಹರಿಯುತ್ತದೆ. ಹಾರಂಗಿ, ಹೇಮಾವತಿ, ಕಬಿನಿ, ಸುವರ್ಣಾವತಿ, ಲಕ್ಷ್ಮಣತೀರ್ಥ, ಶಿಂಷಾ ಮತ್ತು ಅರ್ಕಾವತಿ ಉಪನದಿಗಳು ಇದಕ್ಕೆ ಸೇರುತ್ತವೆ. ಈ ಭಾಗದಿಂದ 425 ಟಿಎಂಸಿ ನೀರು ಲಭ್ಯವಿದೆ.
ಉತ್ತರ ಪೆನ್ನಾರ್, ದಕ್ಷಿಣ ಪೆನ್ನಾರ್ ಮತ್ತು ಪೊಲಾರ್ ಕಣಿವೆಗಳಲ್ಲಿ ಹೆಸರಿಸುವಂಥ ದೊಡ್ಡನದಿ ಗಳಿಲ್ಲ. ಆದರೆ ಈ ಭಾಗದಿಂದ ಒಟ್ಟು 32 ಟಿಎಂಸಿ ನೀರು ಲಭ್ಯವಿದೆ. ಪಶ್ಚಿಮ ಘಟ್ಟಗಳ ಪರಿಸರಕ್ಕೆ ಹಾನಿಯಾಗದಂತೆ ವೈಜ್ಞಾನಿಕವಾಗಿ ನೀರಾವರಿ ಯೋಜನೆ ತಯಾರಿಸಿ, ಆ ಭಾಗದ ನಾಗರಿಕರ ಮನವೊಲಿಸಿ ಅದನ್ನು ಕಾರ್ಯಗತಗೊಳಿಸಿದಲ್ಲಿ ಪಶ್ಚಿಮಾಭಿಮುಖವಾಗಿ ವ್ಯರ್ಥವಾಗಿ ಹರಿದು ಹೋಗುತ್ತಿರುವ ಸುಮಾರು 1998 ಟಿಎಂಸಿ ನೀರಿನಲ್ಲಿ ಬಹಳಷ್ಟು ಭಾಗವನ್ನು ಉಪಯೋಗಿಸಿ ಕೊಳ್ಳಬಹುದು ಮತ್ತು ರಾಜ್ಯದ ಜಲಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿಕೊಳ್ಳಬಹುದು.
ಆದರೆ, ಈ ಯೋಜನೆಯಿಂದಾಗಿ ಪರಿಸರದ ಮೇಲಾಗುವ ಪರಿಣಾಮವನ್ನೂ ಪರಿಶೀಲಿಸ ಬೇಕಾ ಗುತ್ತದೆ. ಇಲ್ಲಿ, ನೀರಿನ ಹರಿಯುವಿಕೆ ವಿಷಯವಾಗಿ ಮತ್ತೊಂದು ಮಾಹಿತಿಯನ್ನೂ ನೀಡಬೇಕು. ಅಣೆಕಟ್ಟುಗಳು ತುಂಬಿದಾಗ ಅಥವಾ ನ್ಯಾಯಾಲಯದ ಆದೇಶದಂತೆ ತಮಿಳುನಾಡಿಗೆ ನದಿಗಳ ಮೂಲಕ ನೀರನ್ನು ಹರಿಯಬಿಡಲಾಗುತ್ತದೆ. ಹೀಗೆ ಎಷ್ಟು ಟಿಎಂಸಿ ನೀರು ಹರಿದುಹೋಗುತ್ತದೆ ಎಂಬುದನ್ನು ಲೆಕ್ಕ ಮಾಡುವುದು ಸುಲಭ. ದಿನದ 24 ಗಂಟೆ ನಿರಂತರವಾಗಿ 1574 ಕ್ಯುಸೆಕ್ಸ್ ನೀರು ಹರಿದರೆ, ಜಲಾಶಯದಲ್ಲಿ 1 ಟಿಎಂಸಿ ನೀರು ಕಡಿಮೆಯಾಗುತ್ತದೆ.
2,77,777 ಕ್ಯುಸೆಕ್ಸ್ ನೀರನ್ನು ಹರಿಯಬಿಟ್ಟರೆ ಕೇವಲ ಒಂದು ಗಂಟೆಯಲ್ಲೇ 1 ಟಿಎಂಸಿ ನೀರು ಹರಿದುಹೋಗುವುದು. ಕನ್ನಂಬಾಡಿ ಅಣೆಕಟ್ಟಿನಲ್ಲಿನ 49.50 ಟಿಎಂಸಿ ನೀರನ್ನು ಈ ಪ್ರಮಾಣ ದಲ್ಲಿ ಹರಿಯಬಿಟ್ಟರೆ ಕೇವಲ 2 ದಿನಗಳಲ್ಲಿ ಅದು ಖಾಲಿಯಾಗುವುದು (ಜಲಾಶಯಗಳಲ್ಲಿ ಶೇಖರಿ ಸುವ ಭಾರಿ ಪ್ರಮಾಣದ ನೀರಿನ ಅಳತೆಗೆ ಟಿಎಂಸಿ ಅಕ್ಷರಗಳನ್ನು ಅಂಕಿಯೊಂದಿಗೆ ಬಳಸುವರು. ಟಿಎಂಸಿ (Seಟ್ಠoZb Iಜ್ಝ್ಝಿಜಿಟ್ಞ ಇಚಿಜ್ಚಿ ಊಛಿಛಿಠಿ) ಅಂದರೆ ಸಾವಿರ ದಶಲಕ್ಷ ಘನ ಅಡಿಗಳಷ್ಟು ನೀರು.
100010001000 ಅಡಿ ಅಳತೆಯ ಒಂದು ಗುಂಡಿಯಲ್ಲಿ ತುಂಬುವ ನೀರು 1 ಟಿಎಂಸಿ ಆಗು ವುದು. ಅಂದರೆ, 1 ಟಿಎಂಸಿ ಪ್ರಮಾಣದ ನೀರಿನ್ನು, ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಳ್ಳಿಗಳಲ್ಲಿ ಕಟ್ಟುವ 1 ಲಕ್ಷ ಲೀ.ಸಾಮರ್ಥ್ಯದ 2,94,012 ಸಂಖ್ಯೆಯ ಓವರ್‌ಹೆಡ್ ಟ್ಯಾಂಕುಗಳನ್ನು ತುಂಬಿಸ ಬಹುದು. ಹಾಗೆಯೇ, ಪ್ರತಿ ಸೆಕೆಂಡಿಗೆ ಒಂದು ಘನ ಅಡಿಯಷ್ಟು ನೀರು ಹರಿದುಹೋದಲ್ಲಿ ಅದನ್ನು 1 ಕ್ಯುಸೆಕ್ಸ್ ಪ್ರಮಾಣ ಎನ್ನಲಾಗುವುದು).
ನೀರು ಬಹು ಅಮೂಲ್ಯವಾದ ವಸ್ತು. ಇದನ್ನು ಜೋಪಾನ ಮಾಡುವುದು ನಮ್ಮೆಲ್ಲರ ಕರ್ತವ್ಯ ವಾಗಬೇಕು. ಶಕ್ತಿಯಂತೆ ನೀರನ್ನು ಕೂಡ ಉತ್ಪಾದಿಸಲಾಗದು. ಭೂಮಂಡಲದಲ್ಲಿ ಇರುವ ನೀರು ಎಂದೂ ಖಾಲಿಯಾಗದು. ಭೂಮಿಯಿಂದ ಆವಿಯಾಗಿ ಆಕಾಶಕ್ಕೆ, ಆಕಾಶದಿಂದ ಮಳೆಯ ರೂಪ ದಲ್ಲಿ ಭೂಮಿಗೆ ಬಂದು ಹೋಗುವುದೇ ಈ ‘ಜಲಚಕ್ರ’ದ ವೈಶಿಷ್ಟ್ಯ. ಬರೀ ಹೋಗುವುದಷ್ಟೇ ಆಗಿಬಿಟ್ಟರೆ ಭೂಮಿಗೆ ಬರಗಾಲ ತಪ್ಪಿದ್ದಲ್ಲ. ಆದ್ದರಿಂದ, ಸಮತೋಲನವನ್ನು ಕಾಯ್ದುಕೊಳ್ಳಲು ಕಾಲಾನುಕಾಲಕ್ಕೆ ಗಿಡಮರಗಳನ್ನು ನೆಡುವುದು, ಕಾಡುಗಳನ್ನು ಬೆಳೆಸುವುದು ಅತ್ಯವಶ್ಯಕ.
(ಲೇಖಕರು ಹವ್ಯಾಸಿ ಬರಹಗಾರರು)