ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ತುಳಸೀದಾಸರ ರಾಮಚರಿತ ಮಾನಸ

ತುಳಸೀದಾಸರು ಕಾಶಿಯ ಪಂಡಿತರ ತೀವ್ರ ವಿರೋಧದ ನಡುವೆಯೂ, ಸಂಸ್ಕೃತದ ಬದಲು ಅಂದಿನ ಆಡುಭಾಷೆಯಾದ ‘ಅವಧಿ’ಯಲ್ಲಿ ರಾಮಾಯಣವನ್ನು ಬರೆದರು. ನೀರಡಿಕೆ ಯಾದವ ನಿಗೆ ಬಾಯಾರಿಕೆ ನೀಗಲು ನೀರು ಮುಖ್ಯವೇ ಹೊರತು ಅದು ಚಿನ್ನದ ಪಾತ್ರೆಯಲ್ಲಿದೆಯೇ ಅಥವಾ ಮಣ್ಣಿನ ಪಾತ್ರೆಯಲ್ಲಿದೆಯೇ ಎಂಬುದು ಮುಖ್ಯವಲ್ಲ ಎನ್ನುವುದು ತುಳಸೀದಾಸರ ತರ್ಕವಾಗಿತ್ತು.

Roopa Gururaj Column: ತುಳಸೀದಾಸರ ರಾಮಚರಿತ ಮಾನಸ

-

ಒಂದೊಳ್ಳೆ ಮಾತು

ಯಾವುದೇ ಒಂದು ಮಹಾನ್ ಕೃತಿಯು ಹುಟ್ಟಬೇಕಾದರೆ ಅದರ ಹಿಂದೆ ಒಂದು ಪ್ರಬಲ ವಾದ ಕಾರಣವಿರುತ್ತದೆ. ಗೋಸ್ವಾಮಿ ತುಳಸೀದಾಸರು ‘ರಾಮಚರಿತ ಮಾನಸ’ವನ್ನು ರಚಿಸಿದ್ದು 16ನೇ ಶತಮಾನದಲ್ಲಿ (ಕ್ರಿ.ಶ. 1574). ಇದು ಭಾರತದ ಇತಿಹಾಸದಲ್ಲಿ ಅತ್ಯಂತ ಸಂಕೀರ್ಣವಾದ ಕಾಲಘಟ್ಟವಾಗಿತ್ತು.

ಇದು ಮೊಘಲ್ ಸಾಮ್ರಾಟ ಅಕ್ಬರನ ಆಳ್ವಿಕೆಯ ಕಾಲ. ಆ ಕಾಲದ ಸಾಮಾಜಿಕ ಹಿನ್ನೆಲೆ ಯನ್ನು ಗಮನಿಸಿದರೆ ಈ ಕೃತಿಯ ರಚನೆಯ ಅನಿವಾರ್ಯತೆ ನಮಗೆ ಅರ್ಥವಾಗುತ್ತದೆ.

*ಮೂಲ ಶ್ಲೋಕ (ಸೊರಠಾ):

ಕಹಉಂ ಕಹಾ ಲಗಿ ನಾಮ ಬಡಾಈ |

ರಾಮು ನ ಸಕಹಿಂ ನಾಮ ಗುಣ ಗಾಈ ||

ನಾಮು ರಾಮ ಕೋ ಕಲ್ಪತರು

ಕಲಿ ಕಲ್ಯಾಣ ನಿವಾಸ |

ಜೋ ಸುಮಿರತ ಭಯೋ ಭಾಂಗ ತೇಂ

ತುಲಸೀ ತುಲಸೀದಾಸ ||

ಅಂದರೆ, ರಾಮನಾಮದ ಮಹಿಮೆಯನ್ನು ನಾನು ಎಷ್ಟು ಎಂದು ವರ್ಣಿಸಲಿ? ಸ್ವತಃ ಶ್ರೀರಾಮನಿಗೂ ತನ್ನ ನಾಮದ ಮಹಿಮೆಯನ್ನು ಪೂರ್ಣವಾಗಿ ಹಾಡಲು ಸಾಧ್ಯವಿಲ್ಲ. ಈ ಕಲಿಯುಗದಲ್ಲಿ ರಾಮನಾಮವು ಕಲ್ಪವೃಕ್ಷದಂತೆ ಸಕಲ ಕಲ್ಯಾಣಗಳ ನಿವಾಸವಾಗಿದೆ. ಈ ನಾಮವನ್ನು ಸ್ಮರಿಸಿದ್ದಕ್ಕೇ ‘ಭಂಗ’ದಂತಿದ್ದ (ಕೀಳಾಗಿದ್ದ) ನಾನು ‘ತುಳಸಿ’ಯಂತೆ ಪವಿತ್ರನಾದೆ ಎಂದು ಬರೆಯುತ್ತಾರೆ ತುಳಸಿದಾಸರು.

ಇದನ್ನೂ ಓದಿ: Roopa Gururaj Column: ಸಂಬಂಧಗಳ ಒರೆಗಲ್ಲು: ಎಲ್ಲರ ಕಣ್ಣು ತೆರೆಸಿದ ಅಷ್ಟಾವಕ್ರರ ದಿವ್ಯ ದೃಷ್ಟಿ

ಅದಕ್ಕೂ ಮೊದಲು ರಾಮಾಯಣವು ಮುಖ್ಯವಾಗಿ ಸಂಸ್ಕೃತದಲ್ಲಿ (ವಾಲ್ಮೀಕಿ ರಾಮಾಯಣ) ಇತ್ತು. ಆಗಿನ ಕಾಲದಲ್ಲಿ ಜ್ಞಾನವು ಕೇವಲ ಸಂಸ್ಕೃತ ಭಾಷೆ ಬಲ್ಲ ಪಂಡಿತರ ಸೊತ್ತಾಗಿತ್ತು. ಸಾಮಾನ್ಯ ಜನರಿಗೆ ವೇದ-ಪುರಾಣಗಳ ಅರಿವಿರಲಿಲ್ಲ.

ತುಳಸೀದಾಸರು ಕಾಶಿಯ ಪಂಡಿತರ ತೀವ್ರ ವಿರೋಧದ ನಡುವೆಯೂ, ಸಂಸ್ಕೃತದ ಬದಲು ಅಂದಿನ ಆಡುಭಾಷೆಯಾದ ‘ಅವಧಿ’ಯಲ್ಲಿ ರಾಮಾಯಣವನ್ನು ಬರೆದರು. ನೀರಡಿಕೆ ಯಾದವನಿಗೆ ಬಾಯಾರಿಕೆ ನೀಗಲು ನೀರು ಮುಖ್ಯವೇ ಹೊರತು ಅದು ಚಿನ್ನದ ಪಾತ್ರೆ ಯಲ್ಲಿದೆಯೇ ಅಥವಾ ಮಣ್ಣಿನ ಪಾತ್ರೆಯಲ್ಲಿದೆಯೇ ಎಂಬುದು ಮುಖ್ಯವಲ್ಲ ಎನ್ನುವುದು ತುಳಸೀದಾಸರ ತರ್ಕವಾಗಿತ್ತು.

ಸಾಮಾನ್ಯ ಜನರಿಗೆ, ರೈತರಿಗೆ ಮತ್ತು ಅನಕ್ಷರಸ್ಥರಿಗೆ ರಾಮನ ಆದರ್ಶಗಳು ಅರ್ಥ ವಾಗುತ್ತಿರಲಿಲ್ಲ. ತುಳಸೀದಾಸರು ಅಂದಿನ ಆಡುಭಾಷೆಯಾದ ‘ಅವಧಿ’ ಯಲ್ಲಿ ಇದನ್ನು ರಚಿಸುವ ಮೂಲಕ, ರಾಮನನ್ನು ಪ್ರತಿಯೊಬ್ಬರ ಮನೆ-ಮನಕ್ಕೆ ತಲುಪಿಸಿದರು.

ಆ ಕಾಲದಲ್ಲಿ ಹಿಂದೂ ಧರ್ಮದೊಳಗೆ ಅನೇಕ ಪಂಥಗಳ ನಡುವೆ ಭೇದಭಾವವಿತ್ತು. ಮುಖ್ಯವಾಗಿ ಶಿವನ ಭಕ್ತರು (ಶೈವರು) ಮತ್ತು ವಿಷ್ಣುವಿನ ಭಕ್ತರು (ವೈಷ್ಣವರು) ತಮ್ಮೊಳಗೆ ವಾದ-ವಿವಾದಗಳಲ್ಲಿ ತೊಡಗಿದ್ದರು. ತುಳಸೀದಾಸರು ‘ರಾಮಚರಿತ ಮಾನಸ’ದಲ್ಲಿ ಶಿವನು ರಾಮನನ್ನು ಪೂಜಿಸುವಂತೆ ಮತ್ತು ರಾಮನು ಶಿವನನ್ನು ಆರಾಧಿಸುವಂತೆ ಚಿತ್ರಿಸುವ ಮೂಲಕ ಈ ಎರಡು ಪಂಥಗಳನ್ನು ಒಂದುಗೂಡಿಸಿದರು. ಶಿವದ್ರೋಹಿಯು ನನ್ನ ಭಕ್ತನಾಗಲು ಸಾಧ್ಯವಿಲ್ಲ ಎಂಬ ರಾಮನ ಮಾತಿನ ಮೂಲಕ ಸಮಾಜದಲ್ಲಿ ಸೌಹಾರ್ದತೆ ಮೂಡಿಸಿದರು.

ತುಳಸೀದಾಸರ ಕಾಲದಲ್ಲಿ ಭಾರತವು ವಿದೇಶಿ ಆಕ್ರಮಣಕಾರರ ಆಳ್ವಿಕೆಯಲ್ಲಿತ್ತು. ಜನರ ಆತ್ಮವಿಶ್ವಾಸ ಕುಂದಿತ್ತು ಮತ್ತು ಸ್ವಧರ್ಮದ ಬಗ್ಗೆ ಕೀಳರಿಮೆ ಮೂಡುತ್ತಿತ್ತು. ದೇವಾಲಯ ಗಳ ಧ್ವಂಸ ಮತ್ತು ಬಲವಂತದ ಮತಾಂತರಗಳಿಂದಾಗಿ ಜನಸಾಮಾನ್ಯರಲ್ಲಿ ತಮ್ಮ ಧರ್ಮದ ಬಗ್ಗೆ ಭಯ ಮತ್ತು ಕೀಳರಿಮೆ ಮೂಡಿತ್ತು. ಇಂಥ ಸಮಯದಲ್ಲಿ ಜನರಿಗೆ ನೈತಿಕ ಸ್ಥೈರ್ಯ ನೀಡಲು, ಅನ್ಯಾಯದ ವಿರುದ್ಧ ಹೋರಾಡಿದ ‘ಮರ್ಯಾದಾ ಪುರುಷೋತ್ತಮ’ ಶ್ರೀರಾಮನ ಚರಿತ್ರೆಯ ಅಗತ್ಯವಿತ್ತು.

‘ರಾಮಚರಿತ ಮಾನಸ’ವು ಜನರಲ್ಲಿ ಕಳೆದುಹೋಗಿದ್ದ ಆತ್ಮ ವಿವೇಕವನ್ನು ಮತ್ತೆ ಜಾಗೃತಗೊಳಿಸಿತು. ಇಂಥ ಸಮಯದಲ್ಲಿ ಒಬ್ಬ ಆದರ್ಶ ರಾಜ ಹೇಗಿರಬೇಕು (ರಾಮರಾಜ್ಯ), ಒಬ್ಬ ಮಗ, ಪತಿ, ಸಹೋದರನ ಕರ್ತವ್ಯಗಳೇನು ಎಂಬುದನ್ನು ನೆನಪಿಸಿ, ಜನರಲ್ಲಿ ನೈತಿಕ ಸ್ಥೈರ್ಯ ತುಂಬಲು ಈ ಕಾವ್ಯವನ್ನು ರಚಿಸಲಾಯಿತು.

ತುಳಸೀದಾಸರು ಚಿತ್ರಿಸಿದ ‘ರಾಮರಾಜ್ಯ’ವು ಕೇವಲ ಕಲ್ಪನೆಯಲ್ಲ, ಅದು ಶೋಷಣೆ ಯಿಲ್ಲದ, ಧರ್ಮದ ಆಧಾರದ ಮೇಲೆ ನಡೆಯುವ ಜನಪರ ಆಡಳಿತದ ಪ್ರತಿಬಿಂಬ ವಾಗಿತ್ತು. ಇದು ಅಂದಿನ ಜನರಿಗೆ ಕಗ್ಗತ್ತಲೆಯಲ್ಲಿ ಕಂಡ ದಾರಿದೀಪದಂತಿತ್ತು.

ಎಲ್ಲಕ್ಕಿಂತ ಹೆಚ್ಚಾಗಿ ಜ್ಞಾನಮಾರ್ಗವು ಎಲ್ಲರಿಗೂ ಸುಲಭವಲ್ಲ ಎಂದು ಅರಿತ ತುಳಸೀ ದಾಸರು, ಕೇವಲ ನಾಮಸ್ಮರಣೆ ಮತ್ತು ಶರಣಾಗತಿಯಿಂದ ಭಗವಂತನನ್ನು ತಲುಪಬಹುದು ಎಂಬ ಸರಳ ‘ಭಕ್ತಿ ಮಾರ್ಗ’ವನ್ನು ತೋರಿಸಿಕೊಟ್ಟರು.

‘ಕಲಿಯುಗ ಕೇವಲ ನಾಮ ಆಧಾರಾ’ (ಕಲಿಯುಗದಲ್ಲಿ ನಾಮಸ್ಮರಣೆಯೇ ಆಧಾರ) ಎಂಬುದು ಅವರ ಮೂಲ ಮಂತ್ರವಾಗಿತ್ತು.

ಸ್ವಾಂತಃಸುಖಾಯ ತುಲಸೀ

ರಘುನಾಥಗಾಥಾ |

ಭಾಷಾನಿ ಬಂಧಮತಿಮಂಜುಲ

ಮಾತನೋತಿ ||

ತುಳಸೀದಾಸರು ಹೇಳುತ್ತಾರೆ: ನಾನು ಈ ರಘುನಾಥನ (ರಾಮನ) ಕಥೆಯನ್ನು ರಚಿಸು ತ್ತಿರುವುದು ಕೇವಲ ಲೋಕಕ್ಕೆ ತೋರಿಸಿಕೊಳ್ಳಲಿಕ್ಕಲ್ಲ, ಬದಲಾಗಿ ನನ್ನ ಅಂತರಾತ್ಮದ ಸುಖಕ್ಕಾಗಿ (ಸ್ವಾಂತಃ ಸುಖಾಯ). ನನ್ನೊಳಗಿನ ರಾಮನನ್ನು ಕಾಣಲು ಮತ್ತು ಆ ಆನಂದ ವನ್ನು ಆಡುಭಾಷೆಯಲ್ಲಿ ಹಂಚಿಕೊಳ್ಳಲು ಇದನ್ನು ರಚಿಸುತ್ತಿದ್ದೇನೆ. ತುಳಸಿದಾಸರ ರಾಮಚರಿತ ಮಾನಸ ಇಂದಿಗೂ ಪ್ರಸ್ತುತವೇ. ಶ್ರೀರಾಮನ ಚರಿತ್ರೆ ನಮ್ಮೆಲ್ಲರಿಗೂ ಆದರ್ಶವಾಗಲಿ.