ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ವಿಕ್ರಮ ಬೇತಾಳ: ಮದನಸುಂದರಿಗೆ ಎದುರಾದ ಧರ್ಮಸಂಕಟ

ಇಬ್ಬರೂ ಬಾರದೆ ಕಂಗಾಲಾದ ಮದನಸುಂದರಿ ಒಳಗೆ ಬಂದು ಇಬ್ಬರ ಶವಗಳನ್ನು ಕಂಡು ಚೀರುತ್ತಾ, ತಾನೂ ನೇಣು ಬಿಗಿದುಕೊಳ್ಳಲು ಸಿದ್ಧಳಾಗುತ್ತಾಳೆ. ಆಕೆಯ ಆಕ್ರಂದನ ಮತ್ತು ಪಾತಿ ವ್ರತ್ಯಕ್ಕೆ ಕರಗಿದ ಕಾಳಿಕಾದೇವಿಯು ಪ್ರತ್ಯಕ್ಷಳಾಗಿ, ಅಮ್ಮಾ, ದುಡುಕಬೇಡ. ಇವರಿಬ್ಬರ ತಲೆಗಳನ್ನು ಅವರವರ ಮುಂಡ ಗಳಿಗೆ ಸರಿಯಾಗಿ ಜೋಡಿಸು, ನನ್ನ ವರದಿಂದ ಇಬ್ಬರೂ ಬದುಕಿ ಏಳುತ್ತಾರೆ ಎಂದು ಕರುಣಿಸುತ್ತಾಳೆ.

ವಿಕ್ರಮ ಬೇತಾಳ: ಮದನಸುಂದರಿಗೆ ಎದುರಾದ ಧರ್ಮಸಂಕಟ

-

ಒಂದೊಳ್ಳೆ ಮಾತು

ನಮ್ಮ ಅಸ್ತಿತ್ವಕ್ಕೆ ನಿಜವಾದ ಗುರುತು ಯಾವುದು? ಹೊರಗಿನ ದೇಹದ ಆಕಾರವೋ ಅಥವಾ ಆಲೋಚನೆ, ಸಂಸ್ಕಾರ ಮತ್ತು ಭಾವನೆಗಳನ್ನು ಹೊತ್ತಿರುವ ಮನಸ್ಸೋ? ‘ಕಥಾಸರಿತ್ಸಾಗರ’ದ ಬೇತಾಳ ಪಂಚವಿಂಶತಿಯ ಐದನೆಯ ಕಥೆಯು ಈ ಆಳವಾದ ತಾತ್ವಿಕ ಜಿಜ್ಞಾಸೆಗೆ ಅದ್ಭುತವಾಗಿ ಉತ್ತರ ನೀಡುತ್ತದೆ. ಶೋಭಾವತಿ ನಗರದಲ್ಲಿ ಧವಳನೆಂಬ ಯುವಕನು ಮದನಸುಂದರಿ ಎಂಬ ಸುಗುಣ ವಂತ ಯುವತಿ ಯನ್ನು ಪ್ರೀತಿಸಿ ಮದುವೆಯಾಗುತ್ತಾನೆ.

ವಿವಾಹದ ನಂತರ ಧವಳನು ತನ್ನ ಪತ್ನಿ ಮತ್ತು ಆಪ್ತ ಮಿತ್ರ ರುದ್ರದೇವನೊಂದಿಗೆ ಮಾವನ ಮನೆಗೆ ಪ್ರಯಾಣ ಬೆಳೆಸುತ್ತಾನೆ. ಹಾದಿಯಲ್ಲಿ ಮಹಾಕಾಳಿಯ ಭವ್ಯ ಮಂದಿರವೊಂದು ಎದುರಾಗುತ್ತದೆ. ಪರಮ ಭಕ್ತನಾದ ಧವಳನು ದೇವಿಯ ದರ್ಶನಕ್ಕೆಂದು ಒಳಗೆ ಹೋಗುತ್ತಾನೆ. ಆ ತಾಯಿಯ ಸನ್ನಿಧಿ ಯಲ್ಲಿ ನಿಂತಾಗ ಆತನಲ್ಲಿ ಅತಿಯಾದ ಭಕ್ತಿ ಭಾವಾವೇಶ ಉಕ್ಕಿ, ಹೇ ಜನನೀ, ನಿನ್ನ ಪಾದಗಳಿಗೆ ನನ್ನನ್ನು ನಾನೇ ಸಮರ್ಪಿಸಿ ಕೊಳ್ಳುತ್ತೇನೆ ಎಂದು ಅ ಇದ್ದ ಖಡ್ಗದಿಂದ ತನ್ನ ತಲೆಯನ್ನೇ ಕತ್ತರಿಸಿ ದೇವಿಯ ಪಾದಕ್ಕೆ ಅರ್ಪಿಸಿ ಪ್ರಾಣ ಬಿಡುತ್ತಾನೆ.

ಸ್ವಲ್ಪ ಸಮಯದ ನಂತರ ಮಿತ್ರ ಹಿಂದಿರುಗಿ ಬಾರದ್ದನ್ನು ಕಂಡು ರುದ್ರದೇವನು ಒಳಗೆ ಬರು ತ್ತಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸ್ನೇಹಿತನ ರುಂಡ-ಮುಂಡಗಳನ್ನು ಕಂಡು ಆಘಾತಕ್ಕೊಳಗಾಗು ತ್ತಾನೆ. ಸ್ನೇಹಿತ ನಿಲ್ಲದ ಈ ಜಗತ್ತು ನನಗೇಕೆ? ನನ್ನ ಮಿತ್ರನನ್ನು ಕೊಂದು ಇವನ ಪತ್ನಿಯನ್ನು ಅಪಹರಿಸಲು ಬಂದ ಕಪಟಿ ಎಂದು ಊರಿನವರು ನನ್ನನ್ನು ದೂಷಿಸುವ ಮುನ್ನ ನಾನೂ ಇವನ ಹಾದಿಯನ್ನೇ ಹಿಡಿಯುತ್ತೇನೆ ಎಂದು ಆತನೂ ಅದೇ ಖಡ್ಗದಿಂದ ತನ್ನ ತಲೆಯನ್ನು ಕಡಿದು ಕೊಳ್ಳುತ್ತಾನೆ.

ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ: ಸೋಮ ಪ್ರಭೆಗೆ ಸೂಕ್ತ ವರ ಯಾರು ?

ಇಬ್ಬರೂ ಬಾರದೆ ಕಂಗಾಲಾದ ಮದನಸುಂದರಿ ಒಳಗೆ ಬಂದು ಇಬ್ಬರ ಶವಗಳನ್ನು ಕಂಡು ಚೀರುತ್ತಾ, ತಾನೂ ನೇಣು ಬಿಗಿದುಕೊಳ್ಳಲು ಸಿದ್ಧಳಾಗುತ್ತಾಳೆ. ಆಕೆಯ ಆಕ್ರಂದನ ಮತ್ತು ಪಾತಿ ವ್ರತ್ಯಕ್ಕೆ ಕರಗಿದ ಕಾಳಿಕಾದೇವಿಯು ಪ್ರತ್ಯಕ್ಷಳಾಗಿ, ಅಮ್ಮಾ, ದುಡುಕಬೇಡ. ಇವರಿಬ್ಬರ ತಲೆಗಳನ್ನು ಅವರವರ ಮುಂಡ ಗಳಿಗೆ ಸರಿಯಾಗಿ ಜೋಡಿಸು, ನನ್ನ ವರದಿಂದ ಇಬ್ಬರೂ ಬದುಕಿ ಏಳುತ್ತಾರೆ ಎಂದು ಕರುಣಿಸುತ್ತಾಳೆ. ಆದರೆ ಆತುರ ಮತ್ತು ಗಾಬರಿಯಲ್ಲಿದ್ದ ಆಕೆ, ಕತ್ತಲೆಯ ಆ ಗರ್ಭಗುಡಿಯಲ್ಲಿ ಪ್ರಮಾದವಶಾತ್ ಪತಿಯ ತಲೆಯನ್ನು ಸ್ನೇಹಿತನ ಮುಂಡಕ್ಕೂ, ಸ್ನೇಹಿತನ ತಲೆಯನ್ನು ಪತಿಯ ಮುಂಡಕ್ಕೂ ತಂದು ಜೋಡಿಸಿ ಬಿಡುತ್ತಾಳೆ!

ದೇವಿಯ ಮಹಿಮೆಯಿಂದ ಇಬ್ಬರೂ ಮರು ಜೀವ ಪಡೆದು ಎದ್ದು ನಿಲ್ಲುತ್ತಾರೆ. ಆದರೆ ಇಬ್ಬರ ಸ್ವರೂಪವೂ ಬದಲಾಗಿತ್ತು. ಇಬ್ಬರೂ, ಈಕೆ ನನ್ನ ಪತ್ನಿ ಎಂದು ವಾದಕ್ಕಿಳಿಯುತ್ತಾರೆ. ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾ ದಿತ್ಯನಿಗೆ ಪ್ರಶ್ನೆಯೊಡ್ಡುತ್ತಾನೆ: ಹೇ ರಾಜಾ, ಆಕೆಯ ನಿಜವಾದ ಪತಿ ಯಾರು? ಪತಿಯ ತಲೆಯುಳ್ಳ ಸ್ನೇಹಿತನ ದೇಹವೋ ಅಥವಾ ಪತಿಯ ದೇಹವುಳ್ಳ ಸ್ನೇಹಿತನ ತಲೆಯೋ? ವಿಕ್ರಮಾದಿತ್ಯನು ತಾತ್ವಿಕ ವಿವೇಕದಿಂದ ಉತ್ತರಿ ಸುತ್ತಾನೆ: ಮಾನವನ ಸಕಲ ಇಂದ್ರಿಯ ಗಳಲ್ಲಿ, ಅಂಗಾಂಗಗಳಲ್ಲಿ ಶಿರಸ್ಸೇ ಪ್ರಧಾನ ವಾದುದು.

ಜ್ಞಾನ, ಸ್ಮೃತಿ, ಸಂಸ್ಕಾರ ಮತ್ತು ಪ್ರಜ್ಞೆ ನೆಲೆಸಿರುವುದು ತಲೆಯಲ್ಲಿಯೇ ಹೊರತು ಮುಂಡದಲ್ಲಲ್ಲ. ದೇಹವು ಕೇವಲ ಮಾಂಸದ ಕವಚವಷ್ಟೇ. ಆದ್ದರಿಂದ ಪತಿಯ ತಲೆಯನ್ನು ಹೊತ್ತಿರುವ ವ್ಯಕ್ತಿಯೇ ಆಕೆಯ ನಿಜವಾದ ಪತಿ; ಸ್ನೇಹಿತನ ತಲೆಯನ್ನು ಹೊಂದಿದವನು ಕೇವಲ ಪತಿಯ ದೇಹವನ್ನು ಹೊತ್ತಿದ್ದರೂ ಆತ ಸ್ನೇಹಿತ ನಾಗಿಯೇ ಉಳಿಯುತ್ತಾನೆ.

ನಾವು ನಿತ್ಯ ಬದುಕಿನಲ್ಲಿ ಹಲವು ಬಾರಿ ಮನುಷ್ಯರನ್ನು ಕೇವಲ ಅವರ ಹೊರರೂಪ, ಆಕರ್ಷಕ ಮೈಕಟ್ಟು, ಬಣ್ಣ ಅಥವಾ ಬಾಹ್ಯ ಆಡಂಬರದಿಂದಲೇ ಗುರುತಿಸಿ ತೀರ್ಮಾನಕ್ಕೆ ಬಂದುಬಿಡುತ್ತೇವೆ. ಆದರೆ ದೇಹದ ರೂಪ ಕ್ಷಣಿಕ; ವಯಸ್ಸಾದಂತೆ, ಕಾಲ ಕಳೆದಂತೆ ಎಲ್ಲಾ ಕಳೆದುಕೊಳ್ಳುತ್ತದೆ.

ಒಬ್ಬ ವ್ಯಕ್ತಿಯ ನಿಜವಾದ ಸತ್ವ ಇರುವುದು ಆತನ ತಲೆಯಲ್ಲಿರುವ ಸಂಸ್ಕಾರ, ಆಲೋಚನೆ, ದೃಷ್ಟಿಕೋನ ಮತ್ತು ಹೃದಯದ ಭಾವನೆಗಳಲ್ಲಿ. ಬಾಹ್ಯ ಸೌಂದರ್ಯ ಕೇವಲ ಆಕರ್ಷಣೆಯ ಕವಚವಷ್ಟೇ; ಆದರೆ ಆಂತರಿಕ ವಿವೇಕ ಮತ್ತು ಒಳ್ಳೆಯ ಚಿಂತನೆಗಳೇ ಒಬ್ಬರ ವ್ಯಕ್ತಿತ್ವದ ನೈಜ ಗುರುತು. ಆದ್ದರಿಂದ ಯಾರನ್ನು ಅವರ ಬಾಹ್ಯ ರೂಪಕ್ಕೆ ಒಪ್ಪಿಕೊಳ್ಳದೆ, ಸಮಯ ಕೊಟ್ಟು ಅವರ ಆಂತರ್ಯವನ್ನ ಅರಿಯುವ ಪ್ರಯತ್ನ ಮಾಡಬೇಕು. ಅವರಿಗೆ ಒಳ್ಳೆಯ ಸಂಸ್ಕಾರ, ಗುಣಗಳು ಇದ್ದಾಗ ಮಾತ್ರ ಅಂತಹವರ ಸಹವಾಸ ನಮ್ಮನ್ನು ಯೋಗ್ಯರನ್ನಾಗಿಸುತ್ತದೆ.