Vishweshwar Bhat Column: ಅದು ವೃದ್ಧರೇ ತುಂಬಿರುವ ಪ್ರಬುದ್ಧ ದೇಶ !
ಜಪಾನಿನಲ್ಲಿ ಯಾರೂ ಅರವತ್ತು ವಯಸ್ಸಿಗೆ ನಿವೃತ್ತರಾಗುವುದಿಲ್ಲ. ಎಪ್ಪತ್ತೈದು ದಾಟಿದವರೂ ಇನ್ನೂ ಹುರುಪಿ ನಿಂದ, ಲಕಿಲಕಿಯಾಗಿ ಕೆಲಸಕ್ಕೆ ಹೋಗುತ್ತಾರೆ. ಜಪಾನಿನಲ್ಲಿ ಒಂದು ಮಾತಿದೆ
Ashok Nayak
January 9, 2025
ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
vbhat@me.com
ಜಪಾನಿನ ಬಗ್ಗೆ ನನಗೆ ಇಷ್ಟವಾದ ಸಂಗತಿಗಳಲ್ಲಿ ಅದು ‘ವಿಶ್ವದ ವೃದ್ಧರ ರಾಜಧಾನಿ’ ಎಂದು ಕರೆಯಿಸಿ ಕೊಂಡಿರುವುದು ಒಂದು ಪ್ರಮುಖ ಕಾರಣ. ಆ ದೇಶದ ಉದ್ದಗಲಕ್ಕೆ ಸಂಚರಿಸುತ್ತಾ ಯಾವುದೇ ಊರಿಗೆ ಹೋಗಿ, ಅಲ್ಲಿ ವೃದ್ಧರನ್ನು ನೋಡದೇ ಇರಲು ಸಾಧ್ಯವಿಲ್ಲ. ಪ್ರತಿ ಮೂವರಲ್ಲಿ ಒಬ್ಬರು ಅರವತ್ತೈದು ವರ್ಷ ದಾಟಿದವರು. ಎಪ್ಪತ್ತು, ಎಂಬತ್ತು ವರ್ಷ ದಾಟಿದವರನ್ನೂ ಧಾರಾಳವಾಗಿ ಕಾಣಬಹುದು. ಆ ವಯಸ್ಸಿನವರು ಇನ್ನೂ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿರುವುದನ್ನೂ ನೋಡಬಹುದು.
ಜಪಾನಿನಲ್ಲಿ ಯಾರೂ ಅರವತ್ತು ವಯಸ್ಸಿಗೆ ನಿವೃತ್ತರಾಗುವುದಿಲ್ಲ. ಎಪ್ಪತ್ತೈದು ದಾಟಿದವರೂ ಇನ್ನೂ ಹುರುಪಿನಿಂದ, ಲಕಿಲಕಿಯಾಗಿ ಕೆಲಸಕ್ಕೆ ಹೋಗುತ್ತಾರೆ. ಜಪಾನಿನಲ್ಲಿ ಒಂದು ಮಾತಿದೆ- Eighty is new sixty. ಅಂದರೆ ಭಾರತದಲ್ಲಿ ಅರವತ್ತಕ್ಕೆ ನಿವೃತ್ತರಾದರೆ, ಜಪಾನಿನಲ್ಲಿ ಎಂಬತ್ತು ನಿವೃತ್ತರಾಗುವ ವಯಸ್ಸು. ನಮ್ಮಲ್ಲಿ ಅರವತ್ತಾದವರು ಇನ್ನೂ ಕೆಲಸಕ್ಕೆ ಹೋಗುವಂತೆ, ಅಲ್ಲಿ ಎಂಬತ್ತು ವರ್ಷ ದಾಟಿದವರು ಇನ್ನೂ ಆಫೀಸಿಗೆ ಹೋಗು ತ್ತಾರೆ. ಸೋಜಿಗವೆಂದರೆ, ಎಂಬತ್ತಾದವರನ್ನು ನೋಡಿದರೆ ಅಷ್ಟು ವಯಸ್ಸಾಗಿದೆ ಎಂದು ಅನಿಸದಿರುವುದು. ಕೆಲವರು ಕಟ್ಟುಮಸ್ತಾಗಿ, ಗಟ್ಟುಮುಟ್ಟಾಗಿ ಇರುವುದನ್ನು ನೋಡಿದರೆ, ಅರವತ್ತರ ಆಸುಪಾಸಿನಲ್ಲಿರಬಹುದು ಎಂದು ಅನಿಸುತ್ತದೆ. ತೊಂಬತ್ತು-ನೂರು ವರ್ಷ ಮುಗಿಸಿದವರೂ ರಸ್ತೆಗಳಲ್ಲಿ ಅವರ ಪಾಡಿಗೆ ಸರಾಗವಾಗಿಓಡಾಡುವ ದೃಶ್ಯ ಸಹ ಸಾಮಾನ್ಯ. ಈ ಕಾರಣದಿಂದ ಅದನ್ನು ‘ಮಾಗಿದ ದೇಶ’, ‘ಪ್ರಬುದ್ಧರ ದೇಶ’ ಎಂದೂಕರೆಯುವುದುಂಟು.
ನಮ್ಮ ಜತೆಗಿದ್ದ, ಗುಜರಾತ್ ಮೂಲದ, ಕಳೆದ ಎರಡು ದಶಕಗಳಿಂದ ಜಪಾನಿನಲ್ಲಿ ನೆಲೆಸಿರುವ ಮೀನಾ ನನಗೊಂದು ಪ್ರಸಂಗವನ್ನು ಹೇಳಿದಳು. ಒಮ್ಮೆ ಅವಳನ್ನು ನೋಡಲು ಗುಜರಾತಿನಿಂದ ಅವಳ ಎಪ್ಪತ್ತು ವರ್ಷದ ತಂದೆ ಜಪಾನಿಗೆ ಆಗಮಿಸಿದ್ದರಂತೆ. ಅವರ ಮನೆಯ ಮುಂದೆ ಸುಮಾರು 75 ವರ್ಷದ ಹಿರಿಯರೊಬ್ಬರು ಮೈ ಬಗ್ಗಿಸಿ, ತಮ್ಮ ಮನೆಯ ಮುಂದಿನ ರಸ್ತೆಯನ್ನು ಗುಡಿಸಿ, ಉದ್ಯಾನವನ್ನು ಅಂದಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದ ರಂತೆ. ಅದನ್ನು ನೋಡಿದ ಮೀನಾ ತಂದೆ, “ಇದೇನು ಈ ದೇಶದಲ್ಲಿ ವಯಸ್ಸಾದವರನ್ನು ಇಷ್ಟು ನಿಕೃಷ್ಟವಾಗಿ ನೋಡುತ್ತಾರಲ್ಲ, ಅವರನ್ನು ಇಂಥ ಕೆಲಸಕ್ಕೆ ಬಳಸಿಕೊಳ್ಳುತ್ತಾರಲ್ಲ?" ಎಂದು ಉದ್ಗಾರ ತೆಗೆದರಂತೆ.
ಅದಾಗಿ ಕೆಲಕ್ಷಣದಲ್ಲಿ ಅವರಿಗಿಂತ ತುಸು ವಯಸ್ಸಾದವರು ರಸ್ತೆಯ ಪಕ್ಕದಲ್ಲಿ ಪೇರಿಸಿದ್ದ ಕಸಗಳನ್ನು ದೊಡ್ಡಚೀಲದಲ್ಲಿ ತುಂಬಿಕೊಂಡು ಹೋದರಂತೆ. “ಅಪ್ಪಾ, ಈ ದೇಶದಲ್ಲಿ ಎಂಬತ್ತು-ತೊಂಬತ್ತು ವರ್ಷ ವಯಸ್ಸಿನವರೂಅವರ ಪಾಡಿಗೆ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಅವರಿಗೆ ವಯಸ್ಸಾಗಿರಬಹುದು, ಆದರೆ ಅವರು ಅಶಕ್ತರಲ್ಲ. ಈ ದೇಶದಲ್ಲಿ ವಯಸ್ಸಾದವರಿಗೆ ವಿಶೇಷ ಆದರ. ಅವರನ್ನು ಯಾರೂ ಅಗೌರವವಾಗಿ, ನಿಕೃಷ್ಟರಾಗಿ ಕಾಣುವುದಿಲ್ಲ. ಭಾರತದಲ್ಲಿ ಅರವತ್ತಾದರೆ ವಯಸ್ಸಾಯ್ತು ಅಂತಾರೆ. ಆದರೆ ಜಪಾನಿನಲ್ಲಿ ವಯಸ್ಸಾದವರನ್ನೂ ಮುದುಕ ಎನ್ನುವುದಿಲ್ಲ. ಅವರು ನಿವೃತ್ತರಾಗುವುದು ಸತ್ತಾಗಲೇ" ಅಂದಾಗ ಅವಳ ತಂದೆ ನನಗೇನೂ ಅರ್ಥವಾಗೊಲ್ಲ ಎಂಬಂತೆ ಕೈ ತಿರುಗಿಸಿದರಂತೆ.
ಒಮ್ಮೆ ಮೀನಾ ತನ್ನ ತಂದೆಯನ್ನು ಪ್ರಸಿದ್ಧ ಜಲಪಾತವೊಂದನ್ನು ನೋಡಲು ಕರೆದುಕೊಂಡು ಹೋಗಿದ್ದಳಂತೆ.ಸುಮಾರು ಇನ್ನೂರು ಮೀಟರ್ ಕ್ರಮಿಸುತ್ತಿದ್ದಂತೆ ತಂದೆ ಸುಸ್ತಾದರಂತೆ. “ನನಗೆ ನಡೆಯಲಾಗುವುದಿಲ್ಲ. ಇನ್ನೂಅರ್ಧ ಕಿ.ಮೀ. ನಡೆಯಬೇಕು ಅಂತೀಯಾ. ನನಗೆ ಸುಸ್ತಾಗುತ್ತಿದೆ, ಕಾಲು ನೋಯುತ್ತಿದೆ" ಎಂದು ಅವಳ ತಂದೆ ರಾಗಎಳೆದರಂತೆ. ಅದೇ ಹೊತ್ತಿಗೆ ಅವರ ಹಿಂದೆ ಇದ್ದ ಸುಮಾರು ಎಪ್ಪತ್ತು ವರ್ಷದವರೊಬ್ಬರು, “ನಿಮಗೆ ಸಹಾಯಮಾಡಲೇ?" ಎಂದು ಕೇಳಿದರಂತೆ. ಮೀನಾ ತಂದೆ,
“ನಿಮಗೆ ಎಷ್ಟು ವರ್ಷ?" ಎಂದು ಕೇಳಿದರಂತೆ. ಅದಕ್ಕೆ ಆ ಜಪಾನಿ, “ನನಗೆ ಎಪ್ಪತ್ತೈದು" ಎಂದು ಹೇಳಿದನಂತೆ. ಆಗಮೀನಾ ತಂದೆ, “ನನಗೂ ನಿಮ್ಮಷ್ಟೇ ವಯಸ್ಸಾಯ್ತು. ಆದರೆ ನನಗೆ ಇನ್ನು ಒಂದು ಹೆಜ್ಜೆಯನ್ನಿಡಲೂ ಆಗುವುದಿಲ್ಲ. ಆದರೆ ನೀವು ಇನ್ನೂ ಗಟ್ಟಿಯಾಗಿದ್ದೀರಿ. ನಿಮ್ಮ ಆರೋಗ್ಯದ ಗುಟ್ಟೇನು?" ಎಂದು ಕೇಳಿದರಂತೆ. ಅದಕ್ಕೆ ಆ ಜಪಾನಿ,“ಅದೋ ಅಲ್ಲಿ ನೋಡಿ, ಬೆಟ್ಟವನ್ನೇರಿ ಬರುತ್ತಿದ್ದಾರಲ್ಲ, ಅವರು ನನ್ನ ತಂದೆ. ಅವರಿಗೆ ತೊಂಬತ್ತೈದು ವರ್ಷವಾ ಯಿತು.
ವರ್ಷದಲ್ಲಿ ನಾಲ್ಕು ಸಲ ಇಲ್ಲಿಗೆ ಬರುತ್ತಾರೆ. ಯಾರ ಸಹಾಯವಿಲ್ಲದೇ ಒಬ್ಬರೇ ಬೆಟ್ಟವೇರಿ ಜಲಪಾತ ನೋಡಿ, ಸರಾಗವಾಗಿ ಇಳಿದು ಬರುತ್ತಾರೆ.." ಎಂದನಂತೆ. ಮೀನಾ ತಂದೆ ಮಾತು ಮರೆತವರಂತೆ ಸುಮ್ಮನೆ ನಿಂತಿದ್ದರಂತೆ.ಇಂಥ ನಿದರ್ಶನಗಳು ಒಂದೆರಡಲ್ಲ. ಇಂಥ ‘ಪವಾಡ’ ವನ್ನು ನಿತ್ಯವೂ ಜಪಾನಿನಲ್ಲಿ ಎಡೆಯೂ ನೋಡಬಹುದು.ಇನ್ನೊಂದು ಸಂದರ್ಭದಲ್ಲಿ ಮೀನಾ, ತಮ್ಮ ತಂದೆಯಲ್ಲಿ ಹುರುಪು ಮೂಡಿಸಲೆಂದು, ಸುಮಾರು ತೊಂಬತ್ತೈದುವರ್ಷದ ಜಪಾನಿ ವೃದ್ಧರೊಂದಿಗೆ ಮಾತಾಡುತ್ತಾ, ತಂದೆಗೆ ಕೇಳಿಸಲಿ ಎಂದು ಬೇಕೆಂದೇ, “ನಿಮ್ಮ ವಯಸ್ಸೆಷ್ಟು ಎಂದು ಕೇಳಬಹುದೇ?" ಎಂದು ಕೇಳಿದರಂತೆ. ಅದಕ್ಕೆ ಆ ಜಪಾನಿ, "I am Young and I am 98. I will be oldafter two years'' ಎಂದು ಬೊಚ್ಚುಬಾಯಿಯಲ್ಲಿ ನಗುತ್ತಾ ಹೇಳಿದನಂತೆ.
ಜಪಾನಿನ ಗ್ರಾಮೀಣ ಪ್ರದೇಶಗಳಿಗೆ ಹೋದರಂತೂ ಊರಿಗೆ ಊರೇ ವೃದ್ಧಾಶ್ರಮದಂತೆ ಗೋಚರವಾಗುತ್ತದೆ.ಮೂವತ್ತರಿಂದ-ಐವತ್ತು ವರ್ಷದವರನ್ನು ನೋಡಲು ಸಾಧ್ಯವೇ ಇಲ್ಲ. ಹಳ್ಳಿಗಳಲ್ಲಿ ಯುವಕ-ಯುವತಿಯರನ್ನುನೋಡುವುದಂತೂ ಅಪರೂಪದ ದೃಶ್ಯ. ಹತ್ತು ಮಂದಿ ವೃದ್ಧರಿಗೆ ಒಬ್ಬೊಬ್ಬ ಯುವಕರನ್ನು ಕಾಣಬಹುದು. ಹೆಚ್ಚಿನ ಹಳ್ಳಿಗಳಲ್ಲಿ ಸಾಯಂಕಾಲ ಆರು ಗಂಟೆಯಾಗುತ್ತಿದ್ದಂತೆ, ಊರಿಗೆ ಊರೇ ಸ್ತಬ್ಧವಾಗಿಬಿಡುತ್ತದೆ. ಮಾತಿಲ್ಲ, ಕತೆಯಿಲ್ಲ. ಒಂದು ಕಾಲಕ್ಕೆ ಸಾವಿರ ಜನರಿರುವ ಊರಿನಲ್ಲಿ ಇಂದು ಹತ್ತು ಮಂದಿಯೂ ಇಲ್ಲ. ಕೇವಲಎರಡು-ಮೂರು ಜನರಿರುವ ಹಳ್ಳಿಗಳೂ ಇವೆ.
ಯಾವುದೇ ಹಳ್ಳಿಗೆ ಹೋದರೂ, ನೂರು ವರ್ಷ ದಾಟಿದವರು ಕಾಣಸಿಗುತ್ತಾರೆ. ಇಂದಿಗೂ ಕೆಲವು ಬೆಟ್ಟ-ಗುಡ್ಡ-ಶಿಖರ ಪ್ರದೇಶಗಳಲ್ಲಿ ತುತ್ತತುದಿಯಲ್ಲಿರುವ ಒಂಟಿಮನೆಯಲ್ಲಿ ನೂರು-ನೂರಾ ಹದಿನೈದು ವರ್ಷ ದಾಟಿದವರು ಏಕಾಂಗಿ ಯಾಗಿ ವಾಸಿಸುತ್ತಿರುವುದನ್ನು ನೋಡಬಹುದು. ಪ್ರತಿದಿನ ಪೊಲೀಸರು ಅವರಿಗೆ ಫೋನ್ ಮಾಡಿ, ಆರೋಗ್ಯ ವಿಚಾರಿಸುತ್ತಾರೆ. ವೈದ್ಯಕೀಯ ಸೌಲಭ್ಯ ಬೇಕಾ ಎಂದು ಕೇಳುತ್ತಾರೆ. ಇಂಥ ಮನೆಗಳಿಗೆ ಸರಕಾರ ಹಾಟ್‌ಲೈನ್ ಸಂಪರ್ಕ ನೀಡಿದೆ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಒಂದು ಬಟನ್ ಒತ್ತಿದರೆ ಸಾಕು, ತಕ್ಷಣ ಪೊಲೀಸರು ಹೆಲಿಕಾಪ್ಟರಿನಲ್ಲಿ ಆಗಮಿಸಿ, ಆಸ್ಪತ್ರೆಗೆ ಸಾಗಿಸಿ, ವೈದ್ಯಕೀಯ ನೆರವು ನೀಡಲು ನೆರವಾಗುತ್ತಾರೆ.
ನಿಜ, ಜಪಾನ್ ವೃದ್ಧರೇ ತುಂಬಿರುವ ಪ್ರಬುದ್ಧ ದೇಶ. ಅಲ್ಲಿನ ವೃದ್ಧರು ಆ ದೇಶದ ಆಸ್ತಿಯೂ ಹೌದು,ಸಮಸ್ಯೆಯೂ ಹೌದು. ನಿರುಪಯುಕ್ತ ಎಂದು ವೃದ್ಧರನ್ನು ಮನೆಯಿಂದ ಹೊರಹಾಕಲು ಸಾಧ್ಯವೇ? ಆದರೆ ಜಪಾನಿನ ವೃದ್ಧರು ನಿರುಪಯುಕ್ತರೂ ಅಲ್ಲ. ತೊಂಬತ್ತಾದರೂ ಅವರು ಒಂದಿಂದು ಕಾರ್ಯಗಳಲ್ಲಿ ಮಗ್ನರಾಗಿ ರುತ್ತಾರೆ. ಜಪಾನಿನಲ್ಲಿ ಒಂದು ಮಾತಿದೆ- If you cross sixty in Japan, you will probably complete 100. ಅಲ್ಲಿ ಸರಾಸರಿ ಜೀವಿತ ಅವಧಿ ಎಂಬತ್ತೈದು ವರ್ಷ. ನೈಸರ್ಗಿಕ ಪ್ರಕೋಪಗಳನ್ನು ಹೊರತುಪಡಿಸಿದರೆ, ಅಲ್ಲಿ ‘ನೂರು ತುಂಬಿದ ಕಾಯಿಲೆ’ (ವಯೋಸಹಜ ಕಾಯಿಲೆ) ಯಿಂದಲೇ ಸಾಯುವುದು. ಚರಂಡಿಗೆ ಬಿದ್ದು, ಮೈಮೇಲೆ ಮರ, ವಿದ್ಯುತ್ ಕಂಬ ಬಿದ್ದು, ವಿದ್ಯುತ್ ತಂತಿ ತುಳಿದು.. ಹೀಗೆ ಯಾರೂ ಸಾಯುವುದಿಲ್ಲ. ಸಾಮಾನ್ಯವಾಗಿ ಹುಟ್ಟಿದವರೆಲ್ಲ ತೊಂಬತ್ತು-ನೂರು ವರ್ಷ ಆರೋಗ್ಯವಂತರಾಗಿ ಬದುಕುತ್ತಾರೆ.
ಅಲ್ಲಿ ಮುಪ್ಪು ಎಂಬುದು ವೃದ್ಧಾಪ್ಯವಲ್ಲ, ಅಬಲಾವಸ್ಥೆಯಲ್ಲ, ಯೌವನದ ಕೊನೆ ಅಂಚು. ಹೀಗಾಗಿ ಅಲ್ಲಿನರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ವಯಸ್ಸಾದವರು ಧಾರಾಳವಾಗಿ ಕಾಣುತ್ತಾರೆ. ಜಪಾನಿನ ಜನಸಂಖ್ಯೆಯ ಶೇ.ಹತ್ತಕ್ಕಿಂತ ಹೆಚ್ಚು ಜನರು ಈಗ 80 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ.
ಅರವತ್ತೈದು ವರ್ಷ ದಾಟಿದವರು ಆ ದೇಶದ ಜನಸಂಖ್ಯೆ (12.85 ಕೋಟಿ) ಯ ಶೇ.ಮೂವತ್ತರಷ್ಟಿದ್ದಾರೆ. ಅಂದರೆಅರವತ್ತೈದು ಮತ್ತು ಅದಕ್ಕಿಂತ ಮೇಲ್ಪಟ್ಟವರು ಹತ್ತಿರ ಹತ್ತಿರ ನಾಲ್ಕು ಕೋಟಿಯಷ್ಟಿದ್ದಾರೆ. ಅಂದರೆ ಮೂವರಲ್ಲಿ ಒಬ್ಬರು ಅರವತ್ತೈದು ದಾಟಿದ ವೃದ್ಧರು! ಕಳೆದ ಹದಿಮೂರು ವರ್ಷಗಳಿಂದ ಆ ದೇಶದ ಜನಸಂಖ್ಯೆ ಸತತವಾಗಿ ಕುಸಿಯುತ್ತಿದೆ. ಕಳೆದ ಒಂದು ವರ್ಷದಲ್ಲಿ, ಜನ್ಮ ಪ್ರಮಾಣ ಆರು ಲಕ್ಷದಷ್ಟು ಕಮ್ಮಿಯಾಗಿದೆ. ಇನ್ನೂ ಸೋಜಿಗ ವೆಂದರೆ, ಹಿಂದಿನ ವರ್ಷ ಅರವತ್ತೈದು ವರ್ಷ ದಾಟಿದ ತೊಂಬತ್ತು ಲಕ್ಷ ಮಂದಿ ಉದ್ಯೋಗಕ್ಕೆ ಸೇರಿದ್ದಾರೆ. 2040ರ ಹೊತ್ತಿಗೆ ಜಪಾನಿನಲ್ಲಿ ಅರವತ್ತೈದು ವರ್ಷ ದಾಟಿದವರ ಸಂಖ್ಯೆ 36.25 ದಶಲಕ್ಷ ತಲುಪಲಿದೆಯಂತೆ. ಜಗತ್ತಿನ ಯಾವ ದೇಶದಲ್ಲೂ ವೃದ್ಧರ ಪ್ರಮಾಣ ಇಷ್ಟಿಲ್ಲ. ಅಲ್ಲಿನ ವೃದ್ಧರು ಹೊರೆಯಾಗದಂತೆ ಜೀವನ ಸಾಗಿಸಿದರೂ, ಅವರು ಯುವಕರ ಉದ್ಯೋಗ ಅವಕಾಶಗಳನ್ನು ಕಬಳಿಸುತ್ತಿರುವುದು ಸುಳ್ಳಲ್ಲ.
ಜಪಾನ್ ವೃದ್ಧರೇ ತುಂಬಿರುವ ಪ್ರಬುದ್ಧ ದೇಶ ನಿಜ. ಆದರೆ…? ಹೌದು, ಆದರೆ ಎನ್ನುವ ಪ್ರಶ್ನೆಯೇ ಈಗ ಆದೇಶವನ್ನು ಬಲವಾಗಿ ಕಾಡುತ್ತಿದೆ. ಅಲ್ಲಿನ ವೃದ್ಧರು ತಮ್ಮ ಜೀವನದ ಕೊನೆಯ ಹಂತಗಳಲ್ಲಿ ತೀವ್ರ ಒಂಟಿತನ ವನ್ನು ಅನುಭವಿಸುತ್ತಿದ್ದಾರೆ. ಆಧುನಿಕ ಜೀವನಶೈಲಿ, ಉದ್ಯೋಗಕ್ಕಾಗಿ ಬೇರೆಯ ಊರುಗಳಿಗೆ ವಲಸೆ ಹೋಗುವ ಪ್ರಮಾಣ ಹೆಚ್ಚಾಗಿರುವುದರಿಂದ, ಹಿರಿಯರು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಂದ ದೂರವಿರುವ ವಿಚಿತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಸ್ನೇಹ ಮತ್ತು ಸಹಾಯದ ಕೊರತೆಯಿಂದ ಅವರಲ್ಲಿ ಒಂಟಿತನ ತೀವ್ರಗೊಳ್ಳುತ್ತಿದೆ. ಇದರಿಂದ ಒಂಟಿತನಮನೋ ವೈಕಲ್ಯ (Dementia) ಮತ್ತು ಒತ್ತಡದ ಸಮಸ್ಯೆ ಹೆಚ್ಚುತ್ತಿದೆ. ಇಷ್ಟೇ ಅಲ್ಲ, ಜಪಾನಿನ ಹಿರಿಯರು ಆರ್ಥಿಕ ಅನಿಶ್ಚಿತತೆಗೆ ಬಲಿಯಾಗುತ್ತಿದ್ದಾರೆ. ಪಿಂಚಣಿಯಿಂದ ಬಂದ ಆದಾಯವು ದೈನಂದಿನ ಜೀವನ ತೂಗಿಸಲು, ಪೂರೈಸಲು ಸಾಕಾಗುತ್ತಿಲ್ಲ. ವೃದ್ಧರ ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಿರುವುದರಿಂದ, ತಮ್ಮ ಖರ್ಚು ಗಳನ್ನು ನಿರ್ವಹಿಸಲು ಒದ್ದಾಡುವಂತಾಗಿದೆ.
ಆಯುಷ್ಯ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ದೀರ್ಘಕಾಲಿಕ ಅರೋಗ್ಯ ಸಮಸ್ಯೆಗಳಿಗೆ ಹೆಚ್ಚಿನ ವೆಚ್ಚ ಮಾಡ ಬೇಕಾಗಿದೆ. ಮನೋವೈಕಲ್ಯ ಮತ್ತು ಆಲ್ಜೈಮರ್ ಸಮಸ್ಯೆಗಳು ವೃದ್ಧರಲ್ಲಿ ಅಧಿಕವಾಗಿ ಕಾಣಿಸುತ್ತಿವೆ ಮತ್ತು ಇದು ಸ್ವತಂತ್ರ ಜೀವನವನ್ನು ನಿರ್ವಹಿಸುವ ಅವರ ಸಾಮರ್ಥ್ಯಕ್ಕೆ ಮಾರಕವಾಗಿದೆ. ಹಿರಿಯರಿಗೆ ಸೂಕ್ತವಾದ ವಾಸಸ್ಥಳ ಮತ್ತು ಸುರಕ್ಷತೆ ಇನ್ನೊಂದು ದೊಡ್ಡ ಸಮಸ್ಯೆಯಾಗಿದೆ. ಇತ್ತೀಚಿನ ದಿನಗಳಲ್ಲಿ ವೃದ್ಧರ ಜನಸಂಖ್ಯೆಗೆ ತಕ್ಕಂತೆ ವಿನ್ಯಾಸಗೊಳಿಸಲಾದ ಮನೆಗಳು ಕಡಿಮೆಯಾಗಿವೆ.
ವೃದ್ಧರಲ್ಲಿ ಆದಾಯ ಗಳಿಕೆ ಪ್ರಮಾಣ ಕಮ್ಮಿಯಾಗಿರುವುದು ಬಾಡಿಗೆ ಪಾವತಿಸಲು ದೊಡ್ಡ ಸಮಸ್ಯೆಯಾಗಿದೆ.ಜಪಾನಿನ ಪ್ರಗತಿಗೆ ಮತ್ತು ಇಂದಿನ ಸಾಧನೆಗೆ ಆ ದೇಶದಲ್ಲಿ ಅತಿ ಹೆಚ್ಚು ವೃದ್ಧರು ಇರುವುದೇ ಕಾರಣ ಎಂದುವ್ಯಾಖ್ಯಾನ ಮಾಡುವವರೂ ಇದ್ದಾರೆ. ಅಲ್ಲಿನ ಹಿರಿಯರು ಸಮೃದ್ಧ ಜೀವನಾನುಭವ ಮತ್ತು ಜ್ಞಾನವನ್ನು ಹೊಂದಿರುವುದರಿಂದ ಸಾಂಪ್ರದಾಯಿಕ ಜ್ಞಾನ, ಸದ್ವಿಚಾರ, ಸನ್ನಡತೆ, ಸಂಸ್ಕಾರ, ಸಂಪ್ರದಾಯ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಸುಳ್ಳಲ್ಲ.
ಉದ್ಯಮಗಳು, ಕುಟುಂಬಗಳು ಮತ್ತು ಇಡೀ ಸಮಾಜ ಇವರ ಮಾರ್ಗದರ್ಶನದಿಂದ ಪ್ರಯೋಜನ ಪಡೆಯು ತ್ತಿರುವುದು ನಿಜ. ಹಿರಿಯರು ತಾವು ಜೀವನದಲ್ಲಿ ಕಲಿತ ಪಾಠಗಳನ್ನು ಹಂಚಿಕೊಳ್ಳುವ ಮೂಲಕ ಸಮಾಜದಲ್ಲಿ ಶಿಸ್ತು ಮತ್ತು ಮಾನವೀಯತೆಯ ಮೌಲ್ಯಗಳನ್ನು ಬೆಳೆಸುತ್ತಿರುವುದು ಸಹ ನಿಜವೇ. ಸಾಮಾನ್ಯವಾಗಿ ವೃದ್ಧರು ನೌಕರಿಯಿಂದ ನಿವೃತ್ತರಾಗಿದ್ದಾರೆ ಎಂದರೂ, ಅವರು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಒಂದಿಂದು ಕೆಲಸ-ನೌಕರಿಯಲ್ಲಿ ನಿರತರಾಗುತ್ತಾರೆ.
ಯಾರೂ ದುಡಿಯದೇ ತಿನ್ನುವುದಿಲ್ಲ. ಇನ್ನು ಕೆಲವರು ಸ್ವಯಂಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಸಮಾಜಕ್ಕೆ ಅಮೂಲ್ಯ ಕೊಡುಗೆಯನ್ನು ನೀಡುತ್ತಿದ್ದಾರೆ. ಪಿಂಚಣಿಯಿಂದ ಪಡೆದ ಹಣ ಅಥವಾ ಬೇರೆ ಆರ್ಥಿಕ ಸಂಪತ್ತಿನ ಮೂಲಕ ತಮ್ಮ ಕುಟುಂಬದ ಅಭಿವೃದ್ಧಿಗೆ ಸಹಕರಿಸುತ್ತಾರೆ. ಹಿರಿಯರು ಸಮಾಜದಲ್ಲಿ ಆಚರಣೆ ಯಲ್ಲಿರುವ ಜೀವನವಿಧಾನ ಮತ್ತು ಸಾಮೂಹಿಕ ಬಾಂಧವ್ಯವನ್ನು ಶ್ರೇಷ್ಠಮಟ್ಟದಲ್ಲಿ ಉಳಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಜಪಾನ್ ತಂತ್ರಜ್ಞಾನದಲ್ಲೂ ಮುಂದುವರಿದು ವಿಶ್ವದಲ್ಲಿಯೇ ಆಧುನಿಕ ದೇಶ ಎಂದು ಕರೆಯಿಸಿಕೊಂಡಿದ್ದರೂ, ಸಂಪ್ರದಾಯವನ್ನು ಬಿಟ್ಟುಕೊಟ್ಟಿಲ್ಲ. ಕಂಪ್ಯೂಟರ್ ಹಿಡಿವ ಕೈಗಳು, ದೇವರಿಗೂ ನಮಿಸುತ್ತವೆ. ಅಲ್ಲಿನ ಜನ ತಮ್ಮ ಪೂರ್ವಿಕರ ಸಂಪ್ರದಾಯಗಳನ್ನು ತ್ಯಜಿಸಿಲ್ಲ. ಧಾರ್ಮಿಕ ಕಟ್ಟುಪಾಡು, ನಂಬಿಕೆಗಳನ್ನು ಬಿಟ್ಟಿಲ್ಲ. ಆಧುನಿಕ ಬದುಕು ಅವರಲ್ಲಿ ನೆಮ್ಮದಿಯನ್ನು ನೀಡುತ್ತಿದ್ದರೆ ಅದಕ್ಕೆ ಅಲ್ಲಿನ ಧರ್ಮ, ದೇವಾಲಯ ಮತ್ತು ಗುರು ಪರಂಪರೆಯೇ ಕಾರಣ. ಸಾಂಸ್ಕೃತಿಕ ಕೃತಿಗಳ ಪ್ರಚಾರ ಮತ್ತು ಪ್ರಾಚೀನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆಯಲ್ಲಿ ಹಿರಿಯರು ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ತಮ್ಮ ಜೀವನದ ಆದರ್ಶಗಳನ್ನು ಹಂಚಿಕೊಂಡು, ನೈತಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಾ, ಮೌಲ್ಯಸ್ಥಾಪನೆಯ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಇದು ಅಲ್ಲಿನ ಸಮೂಹಬದುಕನ್ನು ಹಸನಾಗಿಸಲು, ಸಮಾಜದಲ್ಲಿ ಶಾಂತಿ, ಸಾಮರಸ್ಯ ನೆಲೆಸಲು ಕಾರಣವಾಗಿರುವುದು ಸರ್ವವಿದಿತ.ಜಪಾನಿನ ವೃದ್ಧರ ಸಂಖ್ಯೆ ವರವೂ ಆಗಬಹುದು ಮತ್ತು ಶಾಪವೂ ಆಗಬಹುದು ಎಂಬ ವಾದವೂ ಇದೆ. ಅವರಿಗೆಸೂಕ್ತ ಕೆಲಸ ಮತ್ತು ಸಾಮಾಜಿಕ ಸೌಕರ್ಯಗಳನ್ನು ಒದಗಿಸಿದರೆ, ವರವಾಗಬಹುದು. ಆದರೆ ಸಮಸ್ಯೆಗಳನ್ನುನಿರ್ಲಕ್ಷಿಸಿದರೆ, ಇದು ಶಾಪವಾಗಬಹುದು. ಎಲ್ಲಿ ತನಕ ಶಾಪವನ್ನು ವರವಾಗಿ ಪರಿವರ್ತಿಸಿಕೊಳ್ಳಲು ಜಪಾನ್ ಯಶಸ್ವಿ ಯಾಗುವುದೋ ಅಲ್ಲಿ ತನಕ ವೃದ್ಧರು ತೊಡಕಾಗುವುದಿಲ್ಲ. ಇದು ಉಲ್ಟಾ ಆದರೆ ಮಾತ್ರ ಮುಷ್ಕೀಲು.
ಕುಟುಂಬದ ಜನಸಂಖ್ಯೆ ಕಡಿಮೆಯಾಗುತ್ತಿರುವುದರಿಂದ, ಹಿರಿಯರು ತಮ್ಮದೇ ಜೀವನ ನಿರ್ವಹಣೆ ಮಾಡಬೇಕಾದಪರಿಸ್ಥಿತಿಯನ್ನು ಎದುರಿಸುತ್ತಿzರೆ ಮತ್ತು ಅವರು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿದ್ದಾರೆ. ದೀರ್ಘಕಾಲಿಕಕೌಟುಂಬಿಕ ಬೆಂಬಲ ಕಳೆಯುತ್ತಿರುವುದರಿಂದ, ಹಿರಿಯರು ತಮ್ಮ ಜೀವನವನ್ನು ತಾವೇ ನಡೆಸುವ ಹೊಸ ವ್ಯವಸ್ಥೆಗೆಒಗ್ಗಿಕೊಳ್ಳುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಹಿರಿಯರು ಯುವಕರ ಕೊರತೆಯಿಂದ, ಕೃಷಿ ಮತ್ತು ತೋಟಗಾರಿಕೆಯಲ್ಲಿಹೊಸ ದಾರಿ ಹುಡುಕಿಕೊಂಡಿದ್ದಾರೆ.
ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್ ಬದುಕಿಗೆ ಹೊಂದಿಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂಬುದನ್ನು ವೃದ್ಧರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಹೊಸ ತಂತ್ರಜ್ಞಾನದಲ್ಲಿ ಹಿರಿಯರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಿದೆ. ಇದರಿಂದ ಅವರಿಗೆ ಹೊಸ ಸೇವೆಗಳು ಮತ್ತು ಅವಕಾಶಗಳು ಲಭ್ಯವಾಗುತ್ತಿವೆ. ಕೆಲವು ಯಂತ್ರಗಳು (smart health devices) ವೃದ್ಧರ ಜೀವನಶೈಲಿಯಲ್ಲಿ ಬದಲಾವಣೆಯನ್ನು ತರುತ್ತಿವೆ. ಡಿಜಿಟಲ್ ವಿಕಾಸದಿಂದ ಆರೋಗ್ಯ ಪೋಷಣೆಗೆ ಹಿರಿಯರು ನವೀನ ತಂತ್ರಜ್ಞಾನವನ್ನು ಬಳಸುತ್ತಿದ್ದು, ಇದು ಅವರ ಬದುಕಿನಲ್ಲಿ ಅಸಾಧಾರಣ ಸುಧಾರಣೆಗೆ ಕಾರಣವಾಗಿದೆ. ಜಪಾನಿನ ಕೆಲವು ಪ್ರದೇಶಗಳನ್ನು ’Blue Zones’ (ದೀರ್ಘಕಾಲಿಕ ಜೀವಿತಾವಧಿ ಹೊಂದಿರುವ ವಲಯಗಳು) ಎಂದು ಗುರುತಿಸಲಾಗಿದೆ.
ಒಕಿನಾವಾ ಪ್ರದೇಶದ ಹಿರಿಯರು, ತಮ್ಮ ಆಹಾರ ಪದ್ಧತಿ, ಸಮುದಾಯದ ಬಾಂಧವ್ಯ ಮತ್ತು ಸಕಾರಾತ್ಮಕ ಚಿಂತನೆಯ ಮೂಲಕ ಅತಿ ಹೆಚ್ಚು ದೀರ್ಘಾಯುಷಿಗಳಾಗಿದ್ದಾರೆ. ವೃದ್ಧರು ಪರಸ್ಪರ ಸಹಾಯ ಮಾಡುವ ಸಾಂಪ್ರದಾಯಿಕ ‘ಮೋಯೈ’ (Moai) ಎಂಬ ಗುಂಪುಗಳನ್ನು ಉಸ್ತುವಾರಿ ಮಾಡುತ್ತಿದ್ದಾರೆ. ಈ ವಲಯಗಳಲ್ಲಿ ವಯಸ್ಸು ಹೆಚ್ಚಿದರೂ, ಹಿರಿಯರು ಶಾರೀರಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಹೆಚ್ಚು ಆರೋಗ್ಯವಂತ ರಾಗಿದ್ದಾರೆ.
ಅಲ್ಲಿನ ವೃದ್ಧರು ತಮ್ಮ ಜೀವನದ ಉದ್ದೇಶವನ್ನು ‘ಇಕಿಗಾಯಿ’ ಎಂಬ ತತ್ವದ ಮೂಲಕ ರೂಪಿಸಿಕೊಂಡಿದ್ದಾರೆ. ವಯಸ್ಸಾದರೂ, ‘ನಾನು ಯಾಕೆ ಬದುಕುತ್ತಿದ್ದೇನೆ?’ ಎಂಬ ಪ್ರಶ್ನೆಗೆ ಇಕಿಗಾಯಿ ಉತ್ತರವನ್ನು ಒದಗಿಸುತ್ತಿದೆ. ವೃದ್ಧರು ತಮ್ಮ ನೈಜ ಆಸಕ್ತಿಗಳನ್ನು ಅನುಸರಿಸುವ ಮೂಲಕ ಜೀವನದಲ್ಲಿ ಹೊಸ ಉತ್ಸಾಹವನ್ನು ಹೊಂದಿ ಆತ್ಮನಿರ್ಭ ರತೆಯ ಬಲವನ್ನು ಹೊಂದುತ್ತಿದ್ದಾರೆ. ಇವೆಲ್ಲವುಗಳ ಪರಿಣಾಮ, ವೃದ್ಧರು ನಿವೃತ್ತಿಯ ನಂತರ ಹೊಸ ಕಲೆ, ಕೌಶಲ ಮತ್ತು ಉದ್ಯಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ನಿವೃತ್ತರಾದ ಹಿರಿಯರು ತಮ್ಮ ಜೀವಿತಾವಧಿಯಲ್ಲಿ ಕಲೆ ಮತ್ತು ಸಾಹಿತ್ಯದಲ್ಲಿ ನಿರತರಾಗುತ್ತಿದ್ದಾರೆ.
ಅಸಂಖ್ಯ ನಿವೃತ್ತ ವೃದ್ಧರು ತಮ್ಮದೇ ಉದ್ಯಮ ಪ್ರಾರಂಭಿಸುವ ಮೂಲಕ ಆರ್ಥಿಕತೆಯ ಅಭಿವೃದ್ಧಿಗೆ ಸಹಾಯಕ ರಾಗುತ್ತಿದ್ದಾರೆ. ಜಪಾನ್ ವೃದ್ಧರನ್ನು ಸಮಸ್ಯೆಯೆಂದು ಭಾವಿಸದೇ, ಆರ್ಥಿಕ ಪ್ರಗತಿಗೆ ಕಂಟಕ ಎಂದು ಪರಿಗಣಿಸದೇ, ಅವರನ್ನು ದೇಶದ ಆಸ್ತಿಯೆಂದು ಭಾವಿಸಿರುವುದು ಅವರ ಪ್ರಬುದ್ಧ ಚಿಂತನೆಗೆ ನಿದರ್ಶನ. I might be too old to learn new tricks, but my old tricks work just fine ಎಂಬ ಮಾತು ಅಲ್ಲಿನ ವೃದ್ಧರ ಮಟ್ಟಿಗೆ ಅಪ್ಪಟ ಸತ್ಯ.
ಇದನ್ನೂ ಓದಿ: @vishweshwarbhat