Rohini Chandrashekher Column: ಮತದಾನ: ಬರೀ ಹಕ್ಕೇ ಅಥವಾ ಪ್ರಜಾಪ್ರಭುತ್ವದ ಆತ್ಮವೇ?
ನೀನು ಶ್ರೀಮಂತನಾ? ಬಡವನಾ? ವಿದ್ಯಾವಂತನಾ? ಅನಕ್ಷರಸ್ಥನಾ? ಮೇಲ್ವರ್ಗದವನೋ? ತಳವರ್ಗದವನೋ? ಇವುಗಳಲ್ಲಿ ಯಾವುದೂ ಮತದ ಮೌಲ್ಯವನ್ನು ನಿರ್ಧರಿಸಬಾರದು ಎಂಬ ತತ್ವವನ್ನು ಭಾರತ ತನ್ನ ಸಂವಿಧಾನದ ಮೂಲಕ ಸ್ವೀಕರಿಸಿತು. ಒಬ್ಬ ಕೋಟ್ಯಧಿಪತಿಯ ಮತಕ್ಕೂ, ದಿನಗೂಲಿ ಕಾರ್ಮಿಕನ ಮತಕ್ಕೂ ಒಂದೇ ಮೌಲ್ಯ. ಇದೇ ಭಾರತೀಯ ಪ್ರಜಾಪ್ರಭುತ್ವದ ಮಹತ್ವ!
-
ಅಭಿಮತ
ರೋಶಿನೀ ಚಂದ್ರಶೇಖರ್
ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ನಾಗರಿಕನ ಹೆಸರನ್ನು ಅಳಿಸುವುದು ಕೇವಲ ಆಡಳಿತಾತ್ಮಕ ಕ್ರಮವಲ್ಲ; ಅದು ಆ ನಾಗರಿಕನ ಪ್ರಜಾಪ್ರಭುತ್ವದ ಅಸ್ತಿತ್ವವನ್ನೇ ಪ್ರಶ್ನಿಸುವ ಕ್ರಮವಾಗಬಹುದು. ಮತದಾರರ ಪಟ್ಟಿ ಕೇವಲ ಆಡಳಿತಾತ್ಮಕ ದಾಖಲೆಯಲ್ಲ. ಅದು ಪ್ರಜಾಪ್ರಭುತ್ವದಲ್ಲಿ ಒಬ್ಬ ನಾಗರಿಕನ ರಾಜಕೀಯ ಅಸ್ತಿತ್ವದ ದಾಖಲೆ.
ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆ ಅಲ್ಲ. ಪ್ರಜಾಪ್ರಭುತ್ವ ಎಂದರೆ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ತನ್ನ ಆಡಳಿತಗಾರರನ್ನು ಆಯ್ಕೆ ಮಾಡುವ ಅವಕಾಶ ದೊರೆಯುವುದು. ಆ ಅವಕಾಶವು ಅತ್ಯಂತ ಸರಳ, ಆದರೆ ಅತ್ಯಂತ ಶಕ್ತಿಶಾಲಿ. ಅದೇ ಒಂದು ಮತ. ಆದರೆ ಒಂದು ಪ್ರಶ್ನೆ ಇಂದು ಮತ್ತೊಮ್ಮೆ ನಮ್ಮ ಮುಂದೆ ನಿಂತಿದೆ; ಮತದಾನದ ಹಕ್ಕು ನಿಜಕ್ಕೂ ಎಷ್ಟು ಬಲವಾದ ಹಕ್ಕು? ಈ ಪ್ರಶ್ನೆ ಕೇವಲ ಸಂವಿಧಾನ ತಜ್ಞರ ಚರ್ಚೆಯ ವಿಷಯವಲ್ಲ.
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಒಬ್ಬ ಸಾಮಾನ್ಯ ನಾಗರಿಕನಿಗೆ ಇದು ತನ್ನ ಪ್ರಜಾ ಪ್ರಭುತ್ವದ ಧ್ವನಿ ಉಳಿದಿದೆಯೇ ಎಂಬ ಪ್ರಶ್ನೆ. ‘ಮತ’ ಎಂಬುದು ಕೇವಲ ಒಂದು ಗುಂಡಿ ಒತ್ತುವ ಕ್ರಿಯೆಯಲ್ಲ. ಭಾರತದ ಸಂವಿಧಾನ ಜಾರಿಗೆ ಬಂದಾಗಲೇ ನಮ್ಮ ಸಂವಿಧಾನ ನಿರ್ಮಾತೃಗಳು ಸಾರ್ವತ್ರಿಕ ವಯಸ್ಕ ಮತಾಧಿಕಾರವನ್ನು ಸ್ವೀಕರಿಸಿದರು. ಆ ಕಾಲದಲ್ಲಿ ವಿಶ್ವದ ಅನೇಕ ದೇಶಗಳಲ್ಲಿ ಆಸ್ತಿ, ಲಿಂಗ, ಶಿಕ್ಷಣ, ತೆರಿಗೆ ಮುಂತಾದ ಅರ್ಹತೆಗಳ ಆಧಾರದ ಮೇಲೆ ಮತದಾನದ ಹಕ್ಕಿಗೆ ನಿರ್ಬಂಧಗಳಿದ್ದವು. ಆದರೆ ಭಾರತ ಬೇರೆಯ ದಾರಿಯನ್ನು ಆರಿಸಿಕೊಂಡಿತು.
ನೀನು ಶ್ರೀಮಂತನಾ? ಬಡವನಾ? ವಿದ್ಯಾವಂತನಾ? ಅನಕ್ಷರಸ್ಥನಾ? ಮೇಲ್ವರ್ಗದವನೋ? ತಳವರ್ಗದವನೋ? ಇವುಗಳಲ್ಲಿ ಯಾವುದೂ ಮತದ ಮೌಲ್ಯವನ್ನು ನಿರ್ಧರಿಸಬಾರದು ಎಂಬ ತತ್ವವನ್ನು ಭಾರತ ತನ್ನ ಸಂವಿಧಾನದ ಮೂಲಕ ಸ್ವೀಕರಿಸಿತು. ಒಬ್ಬ ಕೋಟ್ಯಧಿಪತಿಯ ಮತಕ್ಕೂ, ದಿನಗೂಲಿ ಕಾರ್ಮಿಕನ ಮತಕ್ಕೂ ಒಂದೇ ಮೌಲ್ಯ. ಇದೇ ಭಾರತೀಯ ಪ್ರಜಾಪ್ರಭುತ್ವದ ಮಹತ್ವ
ಇದನ್ನೂ ಓದಿ: Kiran Upadhyay Column: ಇಸ್ರೇಲ್ ಇಲೆಕ್ಷನ್ʼನ ಯೋಗಿ, ಅಮಿತ್ ಶಾ
325 ಮತ್ತು 326ನೇ ವಿಧಿ ಏನು ಹೇಳುತ್ತವೆ?: ಸಂವಿಧಾನದ 325ನೇ ವಿಧಿ ಪ್ರತಿಯೊಂದು ಕ್ಷೇತ್ರಕ್ಕೂ ಒಂದು ಸಾಮಾನ್ಯ ಮತದಾರರ ಪಟ್ಟಿಯ ತತ್ವವನ್ನು ಪ್ರತಿಪಾದಿಸುತ್ತದೆ ಮತ್ತು ಧರ್ಮ, ಜಾತಿ, ಲಿಂಗ ಮುಂತಾದ ಆಧಾರಗಳಲ್ಲಿ ಮತದಾರರ ಪಟ್ಟಿಯಿಂದ ಹೊರಗಿಡುವುದನ್ನು ನಿರ್ಬಂಧಿಸುತ್ತದೆ. 326ನೇ ವಿಧಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆಗಳು ವಯಸ್ಕ ಮತಾಧಿಕಾರದ ಆಧಾರದ ಮೇಲೆ ನಡೆಯಬೇಕು ಎಂದು ಹೇಳುತ್ತದೆ. 18 ವರ್ಷ ಪೂರ್ಣಗೊಂಡಿರುವ ಮತ್ತು ಕಾನೂನಿನಲ್ಲಿ ನಿಗದಿಪಡಿಸಿರುವ ಅನರ್ಹತೆ ಗಳಿಗೆ ಒಳಪಡದ ಭಾರತೀಯ ನಾಗರಿಕನು ಮತದಾರನಾಗಿ ನೋಂದಾಯಿಸಿ ಕೊಳ್ಳುವ ಹಕ್ಕು ಹೊಂದಿದ್ದಾನೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮತದಾನದ ಹಕ್ಕು ಕೇವಲ ಚುನಾವಣಾ ಕಾಯ್ದೆಗಳ ಮೂಲಕ ಸೃಷ್ಟಿಯಾದ ಹಕ್ಕು ಎಂಬ ಸರಳ ವಿವರಣೆಯನ್ನು ಇತ್ತೀಚಿನ ನ್ಯಾಯಾಂಗ ಬೆಳವಣಿಗೆಗಳು ಇನ್ನಷ್ಟು ಸಂಕೀರ್ಣಗೊಳಿಸಿವೆ. 2026 Associa tion for Democratic Reforms vs Election Commission of India ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಮತದಾನದ ಹಕ್ಕನ್ನು ಸಂವಿಧಾನಾತ್ಮಕ ಹಕ್ಕು ಎಂದು ಗುರುತಿಸುವ ನ್ಯಾಯಾಂಗ ಬೆಳವಣಿಗೆಯನ್ನು ಸ್ಪಷ್ಟವಾಗಿ ದಾಖಲಿಸಿದೆ. ಅದೇ ಸಂದರ್ಭದಲ್ಲಿ ಈ ಹಕ್ಕು ಸಂಪೂರ್ಣ ನಿರ್ಬಂಧ ರಹಿತವಲ್ಲ; ಮತದಾರರ ಅರ್ಹತೆ, ಗುರುತು, ಸಾಮಾನ್ಯ ವಾಸಸ್ಥಳ ಮತ್ತು ಮತದಾರರ ಪಟ್ಟಿಯ ಪರಿಶುದ್ಧತೆಗೆ ಸಂಬಂಧಿಸಿದ ಕಾನೂನುಬದ್ಧ ನಿಯಮಗಳು ಅನ್ವಯಿಸುತ್ತವೆ ಎಂದೂ ನ್ಯಾಯಾಲಯ ತಿಳಿಸಿದೆ.
ಹೀಗಾಗಿ ಇಂದು ಚರ್ಚೆಯು ಕೇವಲ ಮತದಾನದ ಹಕ್ಕು ಮೂಲಭೂತ ಹಕ್ಕೇ? ಎಂಬ ಪ್ರಶ್ನೆಯಲ್ಲಿ ನಿಲ್ಲುವುದಿಲ್ಲ. ಅದಕ್ಕಿಂತ ದೊಡ್ಡ ಪ್ರಶ್ನೆ: ಒಬ್ಬ ಅರ್ಹ ನಾಗರಿ ಕನ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಸಂದರ್ಭದಲ್ಲಿ ಸಂವಿಧಾನಾತ್ಮಕ ರಕ್ಷಣೆ ಎಷ್ಟು ಬಲವಾಗಿರಬೇಕು? ಮತದಾರರ ಪಟ್ಟಿಯೇ ಪ್ರಜಾಪ್ರಭುತ್ವದ ಪ್ರವೇಶದ್ವಾರ. ಚುನಾ ವಣೆಯ ದಿನ ಮತಗಟ್ಟೆಗೆ ತೆರಳಿ ಮತ ಚಲಾಯಿಸುವುದಕ್ಕಿಂತ ಮೊದಲೇ ಒಂದು ಮುಖ್ಯ ಹಂತವಿದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರಬೇಕು. ಹೆಸರು ಇಲ್ಲದಿದ್ದರೆ ಮತವಿಲ್ಲ. ಮತವಿಲ್ಲದಿದ್ದರೆ ಪ್ರತಿನಿಧಿಯನ್ನು ಆಯ್ಕೆ ಮಾಡುವ ಅವಕಾಶವಿಲ್ಲ.
ಆದ್ದರಿಂದ ಮತದಾರರ ಪಟ್ಟಿ ಕೇವಲ ಆಡಳಿತಾತ್ಮಕ ದಾಖಲೆಯಲ್ಲ. ಅದು ಪ್ರಜಾಪ್ರಭುತ್ವದಲ್ಲಿ ಒಬ್ಬ ನಾಗರಿಕನ ರಾಜಕೀಯ ಅಸ್ತಿತ್ವದ ದಾಖಲೆ. ಇತ್ತೀಚಿನ ಚುನಾವಣಾ ಪಟ್ಟಿ ಪರಿಷ್ಕರಣೆಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆ ಇನ್ನಷ್ಟು ಮಹತ್ವ ಪಡೆದುಕೊಂಡಿದೆ.
ಅರ್ಹ ನಾಗರಿಕರ ಹೆಸರುಗಳು ತಪ್ಪಾಗಿ ಕೈಬಿಟ್ಟರೆ, ಆ ತಪ್ಪು ಕೇವಲ ಒಂದು ದಾಖಲೆಯಲ್ಲಿನ ತಪ್ಪಾಗಿ ಉಳಿಯುವುದಿಲ್ಲ; ಅದು ಚುನಾವಣೆಯಲ್ಲಿ ಆ ನಾಗರಿಕನ ಧ್ವನಿಯನ್ನೇ ಮೌನಗೊಳಿಸಬಹುದು. 97 ಮತದಾರರ ಪ್ರಶ್ನೆ: ಗೋವಾದಲ್ಲಿ 97 ಅರ್ಹ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದಾಗಿ ವರದಿಯಾದ ಘಟನೆ ಈ ಚರ್ಚೆಗೆ ಮತ್ತೊಂದು ಆಯಾಮ ನೀಡಿದೆ. ಒಬ್ಬ ವ್ಯಕ್ತಿಯ ಹೆಸರು ತಪ್ಪಾಗಿ ಮತದಾರರ ಪಟ್ಟಿಯಿಂದ ಹೊರಬಿದ್ದರೆ, ಅವನು ಮುಂದಿನ ದಿನವೇ ಸರಿಪಡಿಸಿಕೊಳ್ಳಬಹುದು ಎಂದು ಹೇಳುವುದು ಸುಲಭ. ಆದರೆ ಪ್ರಶ್ನೆ ಅಷ್ಟೇ ಅಲ್ಲ. ತಪ್ಪು ಹೇಗೆ ಸಂಭವಿಸಿತು? ಎಂಬುದಕ್ಕಿಂತ ಆ ತಪ್ಪಿನಿಂದ ನಾಗರಿಕನ ಹಕ್ಕಿಗೆ ಉಂಟಾದ ಹಾನಿಯನ್ನು ಹೇಗೆ ಪರಿಹರಿಸಲಾಗುತ್ತದೆ? ಎಂಬುದು ಮುಖ್ಯ. ಮತದಾರರ ಪಟ್ಟಿಯಲ್ಲಿನ ದೋಷವನ್ನು ಸರಿಪಡಿಸುವ ವ್ಯವಸ್ಥೆ ಇರಬೇಕು. ಆದರೆ ಅದಕ್ಕಿಂತ ಮುಖ್ಯವಾಗಿ, ಅರ್ಹ ಮತದಾರನನ್ನು ತಪ್ಪಾಗಿ ಹೊರಗಿಡದಂತೆ ಮಾಡುವ ವ್ಯವಸ್ಥೆ ಇರಬೇಕು.
ಹೆಸರು ಅಳಿಸುವ ಮೊದಲು ಕೇಳಿಸಿಕೊಳ್ಳುವ ಅವಕಾಶ ಇರಬೇಕು. ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕುವುದು ಸಾಮಾನ್ಯ ಆಡಳಿತಾತ್ಮಕ ಕ್ರಮವಾಗಿ ನೋಡಲಾಗುವುದಿಲ್ಲ. ಸುಪ್ರೀಂ ಕೋರ್ಟ್ Lal Babu Hussain v. Electoral Registration Officerತೀರ್ಪಿನಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಸಂದರ್ಭದಲ್ಲಿ ಸಂಬಂಧಪಟ್ಟ ವ್ಯಕ್ತಿಗೆ ಸಮಂಜಸವಾದ ಅವಕಾಶ ನೀಡುವ ಅಗತ್ಯವನ್ನು ಒತ್ತಿ ಹೇಳಲಾಗಿದೆ.
ಇದು ಸಹಜ ನ್ಯಾಯದ ಮೂಲತತ್ವ. ಯಾರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆಯೋ, ಅವರಿಗೆ ತಮ್ಮ ಮಾತನ್ನು ಹೇಳಿಕೊಳ್ಳುವ ಅವಕಾಶ ಇರಬೇಕು. ಒಬ್ಬ ಜೀವಂತ, ಅರ್ಹ ನಾಗರಿಕನ ಹೆಸರನ್ನು ಯಾವುದೇ ಪರಿಣಾಮಕಾರಿ ನೋಟಿಸ್ ಅಥವಾ ವಿಚಾರಣೆಯ ಅವಕಾಶವಿಲ್ಲದೆ ಅಳಿಸುವ ಪ್ರಕ್ರಿಯೆ ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳೊಂದಿಗೆ ಹೊಂದಿಕೊಳ್ಳಬಹುದೇ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಮತದಾನ ಹಕ್ಕು ಮತ್ತು ಮತ ಚಲಾಯಿಸುವ ಸ್ವಾತಂತ್ರ್ಯ ಒಂದೇ ಅಲ್ಲ.
ಕಾನೂನಿನ ದೃಷ್ಟಿಯಿಂದ ಮತ್ತೊಂದು ಸೂಕ್ಷ್ಮ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಮತದಾರನಾಗಿ ನೋಂದಾಯಿಸಿಕೊಳ್ಳುವ ಹಕ್ಕು ಒಂದು ವಿಷಯ. ಮತಗಟ್ಟೆಯಲ್ಲಿ ತನ್ನ ಆಯ್ಕೆಯ ಅಭ್ಯರ್ಥಿಗೆ ಮತ ಚಲಾಯಿಸುವ ಸ್ವಾತಂತ್ರ್ಯ ಮತ್ತೊಂದು ವಿಷಯ. ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ ಈ ವ್ಯತ್ಯಾಸ ಚರ್ಚೆಯಾಗಿದೆ. Kuldip Nayar ಪ್ರಕರಣದಲ್ಲಿ ಮತದಾನದ ಹಕ್ಕಿನ ಸ್ವರೂಪದ ಕುರಿತು ಹಿಂದಿನ ನ್ಯಾಯಾಂಗ ನಿಲುವುಗಳನ್ನು ವಿವರಿಸಲಾಗಿದೆ. ನಂತರ Rajbala ಪ್ರಕರಣದಲ್ಲಿ ಮತದಾನದ ಹಕ್ಕನ್ನು ಸಂವಿಧಾನಾತ್ಮಕ ಹಕ್ಕು ಎಂದು ಗುರುತಿಸುವ ಅಭಿಪ್ರಾಯ ವ್ಯಕ್ತವಾಯಿತು. 2023ರ Anoop Baranwal ತೀರ್ಪಿನಲ್ಲಿ ಈ ಹಿಂದಿನ ಭಿನ್ನಾಭಿಪ್ರಾಯ ಗಳನ್ನು ಸುಪ್ರೀಂ ಕೋರ್ಟ್ ವಿವರವಾಗಿ ಪರಿಶೀಲಿಸಿತು. ಇದರಿಂದ ಒಂದು ಸಂಗತಿ ಸ್ಪಷ್ಟವಾಗುತ್ತದೆ. ಮತದಾನದ ಹಕ್ಕಿನ ಕಾನೂನು ಸ್ವರೂಪದ ಕುರಿತು ನ್ಯಾಯಾಂಗ ಚರ್ಚೆ ಮುಂದುವರಿದಿದ್ದರೂ, ಪ್ರಜಾಪ್ರಭುತ್ವದಲ್ಲಿ ಅದರ ಮಹತ್ವದ ಕುರಿತು ಯಾವುದೇ ಗಂಭೀರ ಭಿನ್ನಾಭಿಪ್ರಾಯವಿಲ್ಲ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯ ಎಚ್ಚರಿಕೆ: ಇತ್ತೀಚೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು ಹೈದರಾಬಾದ್ನ ನಲ್ಸರ್ನಲ್ಲಿ ಮಾತನಾಡುವ ಸಂದರ್ಭದಲ್ಲಿ, ಲಕ್ಷಾಂತರ ನಾಗರಿಕರನ್ನು ಮತದಾನದ ಹಕ್ಕಿನಿಂದ ವಂಚಿಸುವ ಯಾವುದೇ ಪ್ರಕ್ರಿಯೆ ಸಂವಿಧಾನದ ಮೂಲತತ್ವ ಗಳಿಗೆ ವಿರುದ್ಧವಾಗಬಹುದು ಎಂದು ಎಚ್ಚರಿಸಿದ್ದಾರೆ.
ಒಬ್ಬ ನಾಗರಿಕನಿಂದ ಮತದಾನದ ಹಕ್ಕನ್ನು ಬೇರ್ಪಡಿಸುವುದು ದೇಹದಿಂದ ಆತ್ಮವನ್ನು ಬೇರ್ಪಡಿಸು ವಂತದ್ದು ಎಂಬ ಅರ್ಥಪೂರ್ಣ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಸಂವಿಧಾನವು ಮತದಾನದ ಹಕ್ಕು ಹೊಂದಿರುವ ನಾಗರಿಕರು ಮತ್ತು ಅದಿಲ್ಲದ ನಾಗರಿಕರು ಎಂಬ ಎರಡು ವರ್ಗಗಳನ್ನು ಸೃಷ್ಟಿಸುವುದಿಲ್ಲ ಎಂಬುದನ್ನೂ ಅವರು ಒತ್ತಿ ಹೇಳಿದ್ದಾರೆ. ಇದು ಕೇವಲ ಒಂದು ಹೇಳಿಕೆಯಲ್ಲ.
ಇದು ನಮಗೆ ಒಂದು ದೊಡ್ಡ ಸಂವಿಧಾನಾತ್ಮಕ ಪ್ರಶ್ನೆಯನ್ನು ಕೇಳುವಂತೆ ಮಾಡುತ್ತದೆ; ನಾಗರಿಕತ್ವ ಎಂದರೆ ಕೇವಲ ಸರಕಾರ ನೀಡುವ ದಾಖಲೆಗಳ ಸಮೂಹವೇ? ಅಥವಾ ಆಡಳಿತದಲ್ಲಿ ಪಾಲ್ಗೊಳ್ಳುವ ಹಕ್ಕಿನೊಂದಿಗಿನ ಜೀವಂತ ಸಂಬಂಧವೇ? ಮತದಾರರ ಪಟ್ಟಿಯ ಪರಿಶುದ್ಧತೆಗೂ ಸಮಾನ ಮಹತ್ವ. ಇಲ್ಲಿ ಮತ್ತೊಂದು ವಿಚಾರವನ್ನು ಮರೆಯಬಾರದು.
ಮತದಾರರ ಪಟ್ಟಿಯಲ್ಲಿ ಅರ್ಹ ವ್ಯಕ್ತಿಯ ಹೆಸರು ಇರಬೇಕು ಎಂಬುದು ಎಷ್ಟು ಮುಖ್ಯವೋ, ಅನರ್ಹ ಅಥವಾ ನಕಲಿ ಹೆಸರುಗಳು ಇರಬಾರದು ಎಂಬುದೂ ಅಷ್ಟೇ ಮುಖ್ಯ. ಚುನಾವಣೆಯ ವಿಶ್ವಾಸಾರ್ಹತೆಗಾಗಿ ಶುದ್ಧವಾದ ಮತದಾರರ ಪಟ್ಟಿ ಅಗತ್ಯ.ಆದ್ದರಿಂದ ಮತದಾರರ ಪಟ್ಟಿಯ ಪರಿಷ್ಕರಣೆ ಅಗತ್ಯವಿಲ್ಲ ಎಂದು ಹೇಳಲಾಗದು. ಆದರೆ ಪರಿಷ್ಕರಣೆಯ ಹೆಸರಿನಲ್ಲಿ ಅರ್ಹ ನಾಗರಿಕರು ಹೊರಗುಳಿಯುವಂತೆಯೂ ಆಗಬಾರದು.
ಮತದಾನದ ಹಕ್ಕನ್ನು ಪ್ರತ್ಯೇಕ ಮೂಲಭೂತ ಹಕ್ಕಾಗಿ ಸಂವಿಧಾನದ ಭಾಗ ಐಐಐರಲ್ಲಿ ಸೇರಿಸ ಬೇಕೇ? ಇದಕ್ಕೆ ಪರ ಮತ್ತು ವಿರೋಧ ಎರಡೂ ವಾದಗಳಿವೆ. ಮೂಲಭೂತ ಹಕ್ಕಿನ ಸ್ಥಾನಮಾನ ನೀಡುವುದರಿಂದ ಮತದಾನದ ಹಕ್ಕಿಗೆ ಅತ್ಯಂತ ಬಲವಾದ ನ್ಯಾಯಾಂಗ ರಕ್ಷಣೆ ದೊರೆಯಬಹುದು. ಅರ್ಹ ನಾಗರಿಕನನ್ನು ಅನ್ಯಾಯವಾಗಿ ಮತದಾರರ ಪಟ್ಟಿಯಿಂದ ಹೊರಗಿಡುವ ಕ್ರಮಗಳ ಮೇಲೆ ನ್ಯಾಯಾಂಗ ಪರಿಶೀಲನೆಯ ಮಟ್ಟವೂ ಮತ್ತಷ್ಟು ಗಟ್ಟಿಯಾಗಬಹುದು. ಆದರೆ ಚುನಾವಣಾ ವ್ಯವಸ್ಥೆಗೆ ಅರ್ಹತೆ, ನಾಗರಿಕತ್ವ, ವಾಸಸ್ಥಳ, ಮತದಾರರ ನೋಂದಣಿ ಮತ್ತು ಅನರ್ಹತೆಗಳಂತಹ ಕಾನೂನುಬದ್ಧ ನಿಯಂತ್ರಣಗಳು ಸಹ ಅಗತ್ಯ. ಹೀಗಾಗಿ ಪ್ರಶ್ನೆ ಯಾವುದೇ ನಿಯಂತ್ರಣ ಇರಬಾರದೇ? ಎಂಬುದಲ್ಲ.
ಪ್ರಶ್ನೆ: ನಿಯಂತ್ರಣವು ಹಕ್ಕನ್ನು ರಕ್ಷಿಸುವ ಮಟ್ಟದಲ್ಲಿರಬೇಕೇ ಅಥವಾ ಹಕ್ಕನ್ನೇ ನಿರರ್ಥಕ ಗೊಳಿಸುವ ಮಟ್ಟಕ್ಕೆ ಹೋಗಬಹುದೇ?? ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಉತ್ತರ ಸ್ಪಷ್ಟವಾಗಿರಬೇಕು. ಅಂತಿಮ ವಾಗಿ ಉಳಿಯುವುದು ಒಬ್ಬ ನಾಗರಿಕನ ಧ್ವನಿ. ಚುನಾವಣೆ ಐದು ವರ್ಷಕ್ಕೊಮ್ಮೆ ನಡೆಯಬಹುದು. ಆದರೆ ಪ್ರಜಾಪ್ರಭುತ್ವ ಪ್ರತಿದಿನವೂ ಬದುಕಬೇಕಾದ ವ್ಯವಸ್ಥೆ. ಮತದಾರರ ಪಟ್ಟಿಯಲ್ಲಿ ಹೆಸರು ಇರುವುದರಿಂದ ಮಾತ್ರ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಆ ಹೆಸರಿನ ಹಿಂದೆ ಇರುವ ನಾಗರಿಕನ ವಿಶ್ವಾಸ, ಸ್ವಾತಂತ್ರ್ಯ ಮತ್ತು ಸಮಾನತೆಯ ಭಾವನೆ ಉಳಿಯಬೇಕು. ಒಬ್ಬ ಅರ್ಹ ನಾಗರಿಕನ ಮತವನ್ನು ತಪ್ಪಾಗಿ ನಿರಾಕರಿಸಿದಾಗ ಕಳೆದುಹೋಗು ವುದು ಕೇವಲ ಒಂದು ಮತವಲ್ಲ.
ಕಳೆದುಹೋಗುವುದು ಒಂದು ಧ್ವನಿ. ಲಕ್ಷಾಂತರ ಧ್ವನಿಗಳು ವ್ಯವಸ್ಥಿತವಾಗಿ ಮೌನವಾದರೆ, ಪ್ರಶ್ನೆ ಚುನಾವಣೆಯ ಫಲಿತಾಂಶದ ಬಗ್ಗೆ ಮಾತ್ರ ಇರುವುದಿಲ್ಲ. ಅದು ಪ್ರಜಾಪ್ರಭುತ್ವದ ಗುಣಮಟ್ಟದ ಬಗ್ಗೆ ಆಗುತ್ತದೆ. ಆದ್ದರಿಂದ ಮತದಾನದ ಹಕ್ಕನ್ನು ನಾವು ಕೇವಲ ಚುನಾವಣೆಯ ದಿನದ ಹಕ್ಕಾಗಿ ನೋಡಬಾರದು. ಅದು ನಾಗರಿಕ ಮತ್ತು ಸಂವಿಧಾನದ ನಡುವಿನ ಜೀವಂತ ಸಂಬಂಧ. ಮತದಾರರ ಪಟ್ಟಿಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನ ಹೆಸರೂ ಇರಬೇಕು. ಪ್ರತಿಯೊಬ್ಬ ನಾಗರಿಕನ ಮತಕ್ಕೂ ಸಮಾನ ಮೌಲ್ಯ ಇರಬೇಕು ಮತ್ತು ಆ ಮತವನ್ನು ಕಳೆದುಕೊಳ್ಳುವ ಮೊದಲು ಕಾನೂನು ಅವನ ಮಾತನ್ನು ಕೇಳಬೇಕು. ಅಂತಿಮವಾಗಿ, ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆ ಎಷ್ಟು ಮಂದಿ ಮತ ಚಲಾಯಿಸಿದರು ಎಂಬುದಲ್ಲ.ಮತ ಚಲಾಯಿಸಲು ಅರ್ಹರಾದ ಪ್ರತಿಯೊಬ್ಬರ ಧ್ವನಿಗೂ ಅವಕಾಶ ದೊರೆಯಿತೇ ಎಂಬುದೇ ಅದರ ನಿಜವಾದ ಪರೀಕ್ಷೆ.
(ಲೇಖಕರು: ವಕೀಲೆ, ಬೆಂಗಳೂರು)