ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಅಲೆ ಮೇಲೊಂದು ಅಲೆ; ಇದಕ್ಕಿಲ್ಲ ಕೊನೆ

ಪ್ರತಿ ಬಾರಿಯೂ ಹೊಸ ತಳಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ಕರೋನಾವನ್ನು ಸಹಜ ಜ್ವರದ ರೀತಿಯಲ್ಲಿ ಸ್ವೀಕರಿಸಬೇಕೇ ಅಥವಾ ಗಂಭೀರ ಕಾಯಿಲೆ ಎಂದೂ ಪರಿಗಣಿಸಬೇಕೆ ಎನ್ನುವ ಜಿಜ್ಞಾಸೆ ಬಹುತೇಕರಲ್ಲಿದೆ. ಮೊದಲ ಎರಡು ಅಲೆಯಲ್ಲಿ ಇಡೀ ವಿಶ್ವವನ್ನು ತೀವ್ರವಾಗಿ ಕಾಡಿದ್ದ ಕರೋನಾ, ಮೂರನೇ ಹಾಗೂ ನಾಲ್ಕನೇ ಅವಧಿಯಲ್ಲಿ ಆಘಾತ ತರುವಂಥ ಅನಾಹುತವನ್ನು ಸೃಷ್ಟಿಸಿಲ್ಲ.

ಅಲೆ ಮೇಲೊಂದು ಅಲೆ; ಇದಕ್ಕಿಲ್ಲ ಕೊನೆ

ಅಶ್ವತ್ಥಕಟ್ಟೆ

ranjith.hoskere@gmail.com

ನಿತ್ಯ ಸತ್ತವರಿಗೆ ಅತ್ತವರು ಯಾರು?’ ಎನ್ನುವ ಮಾತೊಂದಿದೆ. ಇದೇ ರೀತಿ ನಾಲ್ಕೈದು ವರ್ಷದ ಹಿಂದೆ ಇಡೀ ವಿಶ್ವವನ್ನೇ ತಲ್ಲಣಕ್ಕೆ ದೂಡಿದ್ದ, ಮುಂದೇನು ಎನ್ನುವ ಆತಂಕವನ್ನು ಸೃಷ್ಟಿಸಿದ್ದ ಕರೋನಾವೂ ಪ್ರತಿ ವರ್ಷ ಟೈಮ್‌ಟೇಬಲ್ ಹಾಕಿಕೊಂಡಂತೆ ಕಾಣಿಸಿಕೊಳ್ಳುತ್ತಿದೆ. ಕೆಲ ವರ್ಷ ಗಳಿಂದ ‘ಕರೋನಾ’ ಸಾಂಕ್ರಾಮಿಕವೂ ‘ಒಲ್ಲದ’ ಅತಿಥಿಯಾಗಿ ವರ್ಷಕ್ಕೊಮ್ಮೆ ಬಂದು ಹೋಗು ವುದು ಸಹಜ ಎನ್ನುವಂತಾಗಿದೆ. ಆರಂಭದ ದಿನದಲ್ಲಿ ಇಡೀ ವಿಶ್ವವನ್ನು ಕಾಡಿದ್ದ ಕರೋನಾ ಹೆಸರು ಕೇಳಿದರೆ, ಆತಂಕಕ್ಕೆ ಒಳಗಾಗುವ ಸ್ಥಿತಿಯಿತ್ತು. ಆದರೀಗ ಈಗಿರುವ ಹತ್ತಾರು ಜ್ವರಗಳಲ್ಲಿ ಅದೊಂದು ‘ಹೆಚ್ಚುವರಿ’ಯಾಗಿ ಸೇರಿಕೊಂಡಿದೆ ಎನ್ನುವ ಮನಸ್ಥಿತಿಗೆ ಜನರು ಬಂದಿದ್ದಾರೆ. 2019-20ರಲ್ಲಿ ಇಡೀ ವಿಶ್ವವನ್ನೇ ‘ಲಾಕ್‌ಡೌನ್’ ಮಾಡಿದ್ದ ಕರೋನಾವನ್ನು ಮರೆಯುವ ಮೊದಲೇ ಮತ್ತೆ ಕಾಣಿಸಿಕೊಂಡಿದೆ. ಈ ಬಾರಿ ಅದರಲ್ಲಿಯೂ ಭಾರತದಲ್ಲಿ ಕಾಣಿಸಿಕೊಂಡು ಒಂದೆರಡು ಸಾವಾಗಿ ರುವ ವರದಿ ಮತ್ತೆ ಆತಂಕಕ್ಕೆ ಎಡೆ ಮಾಡಿದೆ.

ಆದರೆ ಮೊದಲೆರಡು ಅಲೆಗಳಲ್ಲಿ ಮಾಡಲಾಗಿದ್ದ ಲಾಕ್‌ಡೌನ್ ಮಾಡುವ ಆಲೋಚನೆಯಲ್ಲಿ ಸರಕಾರಗಳೂ ಇಲ್ಲ, ಮಾಡಿದರೆ ಅದನ್ನು ಪಾಲಿಸುವ ಮನಸ್ಥಿತಿಯಲ್ಲಿ ಜನರೂ ಇಲ್ಲ ಎನ್ನುವುದು ಮಾತ್ರ ಸ್ಪಷ್ಟ. ಎರಡು ವರ್ಷದ ಹಿಂದೆ ಕರೋನಾದ ಮೂರನೇ ಅಲೆಯ ಬಳಿಕ ಬಹುತೇಕರು ಇದೊಂದು ಬಿಡದ ರೋಗ ಎನ್ನುವುದನ್ನು ಮನವರಿಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಕಳೆದ ಎರಡು ವರ್ಷಗಳಿಂದ ಪೂರ್ವ ಮುಂಗಾರು ಆಂತ್ಯ ಹಾಗೂ ಮುಂಗಾರಿನ ಆರಂಭದ ನಡುವೆ ಹಾಗೂ ಶಾಲಾ-ಕಾಲೇಜುಗಳ ಪುನರಾರಂಭದ ಸಮಯದಲ್ಲಿ ಅಂದರೆ, ಮೇ ಅಂತ್ಯ ಹಾಗೂ ಜೂನ್ ಮೊದಲ ವಾರದಲ್ಲಿ ಕರೋನಾದ ಸೋಂಕು ಕಾಣಿಸಿಕೊಂಡು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.

ಇದನ್ನೂ ಓದಿ: Ranjith H Ashwath Column: ಮೋದಿ ಸುತ್ತಲೇ ಕಾಂಗ್ರೆಸಿನ ಗಿರಕಿ !

ಪ್ರತಿ ಬಾರಿಯೂ ಹೊಸ ತಳಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ಕರೋನಾವನ್ನು ಸಹಜ ಜ್ವರದ ರೀತಿಯಲ್ಲಿ ಸ್ವೀಕರಿಸಬೇಕೇ ಅಥವಾ ಗಂಭೀರ ಕಾಯಿಲೆ ಎಂದೂ ಪರಿಗಣಿಸಬೇಕೆ ಎನ್ನುವ ಜಿಜ್ಞಾಸೆ ಬಹುತೇಕರಲ್ಲಿದೆ. ಮೊದಲ ಎರಡು ಅಲೆಯಲ್ಲಿ ಇಡೀ ವಿಶ್ವವನ್ನು ತೀವ್ರವಾಗಿ ಕಾಡಿದ್ದ ಕರೋನಾ, ಮೂರನೇ ಹಾಗೂ ನಾಲ್ಕನೇ ಅವಧಿಯಲ್ಲಿ ಆಘಾತ ತರುವಂಥ ಅನಾಹುತವನ್ನು ಸೃಷ್ಟಿಸಿಲ್ಲ.

ಆದರೂ ಮೊದಲ ಹಾಗೂ ಎರಡನೇ ಅಲೆಯ ವೇಳೆ ಸೃಷ್ಟಿಸಿರುವ ಅನಾಹುತದ ಆತಂಕದಲ್ಲಿಯೇ ‘ಕರೋನಾ’ ಎಂದ ಕೂಡಲೇ ಅನೇಕರು ಬೆಚ್ಚಿಬೀಳುತ್ತಾರೆ. ಈಗಾಗಲೇ ನಾಲ್ಕನೇ ಅಲೆಯಲ್ಲಿ ಕಾಣಿಸಿಕೊಂಡಿದ್ದ ಕರೋನಾ ಇದೀಗ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವ ವರದಿಗಳು ಬರತೊಡಗಿವೆ. ಕರ್ನಾಟಕದಲ್ಲಿ ಕರೋನಾಕ್ಕೆ ಒಬ್ಬರು ಮೃತಪಟ್ಟಿದ್ದಾರೆ ಎನ್ನುವುದು ಕೊಂಚ ಆತಂಕಕಾರಿ ವಿಷಯ.

ಅದರಲ್ಲಿಯೂ ಶಾಲಾ-ಕಾಲೇಜು ಆರಂಭಗೊಳ್ಳಲು ಕೆಲವೇ ದಿನವಿರುವಾಗ, ಈ ರೀತಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಪೋಷಕರಲ್ಲಿ ಸಹಜವಾಗಿಯೇ ಆತಂಕವನ್ನು ಸೃಷ್ಟಿ ಸಿದೆ. ಕೆಲ ಖಾಸಗಿ ಶಾಲೆಗಳು ಈಗಾಗಲೇ, ಮಾಸ್ಕ್ ಕಡ್ಡಾಯ ಮಾಡುವ ತೀರ್ಮಾನವನ್ನು ತೆಗೆದು ಕೊಂಡಿದ್ದರೆ, ಇನ್ನು ಕೆಲ ಶಾಲೆಗಳು ಏನು ಮಾಡಬೇಕು ಎನ್ನುವ ಗೊಂದಲದಲ್ಲಿವೆ.

ಇನ್ನು ಸರಕಾರಿ ಶಾಲಾ-ಕಾಲೇಜುಗಳಲ್ಲಿ ಯಾವ ರೀತಿಯ ಸುರಕ್ಷತಾ ಕ್ರಮವಹಿಸಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಮುಂದಿನ 2-3 ದಿನಗಳ ಕರೋನಾ ಏರಿಳಿತ ನೋಡಿಕೊಂಡು ಮುಂದೇನು ಎನ್ನುವ ತೀರ್ಮಾನ ಕೈಗೊಳ್ಳಲು ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಆಲೋಚಿಸಿವೆ ಎನ್ನುವುದು ಬೇರೆ ಮಾತು.

ಆದರೆ ಇದೀಗ ಕಾಣಿಸಿಕೊಂಡಿರುವ ಕರೋನಾ ಹೊಸ ತಳಿ ನಿಜಕ್ಕೂ ಆತಂಕವೇ ಎನ್ನುವ ಪ್ರಶ್ನೆ ಅನೇಕರಲ್ಲಿದೆ. ಸದ್ಯ ಭಾರತದಲ್ಲಿ ಕಾಣಿಸಿಕೊಂಡಿರುವ ಎನ್‌ಬಿ 1.8.1 ಹಾಗೂ ಎಲ್‌ಎ- 7 ಈ ಹಿಂದೆ ಭಾರತದಲ್ಲಿ ಕಾಣಿಸಿಕೊಂಡಿದ್ದ ಜೆಎನ್-1ರ ಉಪತಳಿಗಳಾಗಿವೆ. ಜೆಎನ್-1 ರೀತಿಯಲ್ಲಿಯೇ ಈ ಎರಡೂ ಉಪತಳಿಗಳೂ ತೀವ್ರ ಪ್ರಮಾಣದಲ್ಲಿ ಸೋಂಕನ್ನು ಹರಡಿಸುತ್ತವೆ ಎನ್ನುವುದು ಆತಂಕಕ್ಕೆ ಕಾರಣವಾಗಿದ್ದರೆ, ಸೋಂಕು ವೇಗವಾಗಿ ಹರಡಿದರೂ ದೇಹದ ಮೇಲೆ ತೀವ್ರ ಹೊಡೆತ ಅಥವಾ ಮಾರಣಾಂತಿಕವಾಗಿರುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಕಳೆದ ವರ್ಷ ಕಾಣಿಸಿಕೊಂಡಿದ್ದ ಜೆಎನ್-೧ನ ತಳಿಯ ಸೋಂಕು ಹರಡುವಿಕೆ ಪ್ರಮಾಣ ತೀವ್ರ ವಾಗಿದ್ದರೂ, ಮಾರಣಾಂತಿಕ ಸಮಸ್ಯೆಯನ್ನು ಉಂಟುಮಾಡಿರಲಿಲ್ಲ. ಅದೇ ರೀತಿ ಈಗ ಕಾಣಿಸಿ ಕೊಳ್ಳುತ್ತಿರುವ ಸೋಂಕು ಇರಲಿದೆ. ಈಗ ಹರಡುತ್ತಿರುವ ಈ ಉಪತಳಿಯ ನಿಯಂತ್ರಣ ಕ್ಕೆಂದು ಲಸಿಕೆ ಸದ್ಯ ಲಭ್ಯವಿಲ್ಲ. ಆದರೆ ಈಗಾಗಲೇ ಕರೋನಾ ಲಸಿಕೆ ಪಡೆದಿದ್ದರೆ, ಸೋಂಕು ಕಾಣಿಸಿ ಕೊಳ್ಳುವ ಪ್ರಮಾಣ ಶೇ.50ರಷ್ಟು ಕಡಿಮೆಯಾಗಲಿದೆ ಹಾಗೂ ತೀವ್ರತೆಯೂ ಶೇ.50 ಕಡಿಮೆಯಿರಲಿದೆ ಎನ್ನುವ ಮಾತುಗಳನ್ನು ತಜ್ಞರು ಹೇಳುತ್ತಿದ್ದಾರೆ.

ಕಳೆದ ಮೂರು ವರ್ಷಗಳಿಂದ ಕರೋನಾ ಸೋಂಕು ಕಾಣಿಸಿಕೊಳ್ಳುತ್ತಿರುವುದನ್ನು ನೋಡಿದರೆ ಹವಾಮಾನದಲ್ಲಿನ ಬದಲಾವಣೆಯ ವೇಳೆ ಕರೋನಾ ಅಲೆ ಏರಲಿದೆ. ಪೂರ್ಣ ಪ್ರಮಾಣದಲ್ಲಿ ಮುಂಗಾರು ಆರಂಭಗೊಂಡ ಬಳಿಕ ಇಳಿಮುಖವಾಗಲಿದೆ. ವಿಶ್ವಾದ್ಯಂತ ಕರೋನಾ ಕಾಣಿಸಿ ಕೊಂಡಾಗಲೂ ಬಹುತೇಕರು, ‘ಕರೋನಾ ಕಣ್ಮರೆಯಾಗುವುದಿಲ್ಲ; ಆದರೆ ಅದರ ಪರಿಣಾಮ ಹಂತ-ಹಂತವಾಗಿ ಕ್ಷೀಣಿಸಲಿದೆ’ ಎಂದೇ ಅಂದಾಜಿಸಿದ್ದರು.

ಪ್ರತಿವರ್ಷ ಸೋಂಕು ಕಾಣಿಸಿಕೊಳ್ಳುತ್ತಿರುವುದು ನೋಡಿದರೆ ಭವಿಷ್ಯದಲ್ಲಿ ಡೆಂಘೀ, ಮಲೇರಿಯಾ, ಚಿಕೂನ್ ಗುನ್ಯ ರೀತಿಯಲ್ಲಿ ಇದು ಸಹ ಒಂದು ಎಚ್ಚರದಿಂದ ಇರಬೇಕಾದ ಜ್ವರವಾಗುವುದರಲ್ಲಿ ಅನುಮಾನವಿಲ್ಲ. ಆದರೆ ನಿಜವಾದ ಆತಂಕವಿರುವುದು, ಶಾಲಾ-ಕಾಲೇಜುಗಳು ಆರಂಭವಾಗುವ ಹೊತ್ತಿನಲ್ಲಿ ಕರೋನಾ ಏರುಗತಿಯಲ್ಲಿರುವುದು. ಈಗಾಗಲೇ ಕರೋನಾದ ಸರಣಿ ಅಲೆಯನ್ನು ನೋಡಿರುವ ಜನರಿಗೆ, ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎನ್ನುವುದನ್ನು ಕೇಳಿದರೆ ಭಾರತದ ಮನಸ್ಥಿತಿಯಲ್ಲಿ ‘ಪಾಲನೆ’ ಸಾಧ್ಯವಿಲ್ಲ.

ಇನ್ನು ಲಾಕ್‌ಡೌನ್ ಎನ್ನುವುದಂತೂ ಸಾಧ್ಯವೇ ಇಲ್ಲ ಎನ್ನುವುದು ಸ್ಪಷ್ಟ. ಹೀಗಿರುವಾಗ ಹೊಸದಾಗಿ ಕಾಣಿಸಿಕೊಂಡಿರುವ ಉಪತಳಿಗಳು, ವೇಗವಾಗಿ ಹರಡುತ್ತಿರುವುದು ಆತಂಕದ ವಿಷಯ. ಅದರಲ್ಲಿಯೂ ಶಾಲಾ-ಕಾಲೇಜು ಆರಂಭಗೊಳ್ಳುವ ಸಮಯದಲ್ಲಿ ಸೋಂಕು ಹರಡುವಿಕೆಯ ವೇಗ ಹೆಚ್ಚಾದರೆ, ಮಕ್ಕಳ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ.

ಅದರಲ್ಲಿಯೂ ಐದನೇ ತರಗತಿಯೊಳಗಿನ ಮಕ್ಕಳಿಗೆ ಸೋಂಕು ತಗುಲಿದರೆ, ಪರಿಣಾಮ ದೊಡ್ಡ ಪ್ರಮಾಣದಲ್ಲಿ ಬೀರುವ ಸಾಧ್ಯತೆಯಿದೆ ಎನ್ನುವುದು ವೈದ್ಯರ ಆತಂಕವಾಗಿದೆ. ಹಾಗೆಂದ ಮಾತ್ರಕ್ಕೆ, ಈ ಹಿಂದೆ ಮಾಡಿದ್ದ ಲಾಕ್‌ಡೌನ್, ವರ್ಕ್ ಫ್ರಂ ಹೋಂ, ಆನ್‌ಲೈನ್ ತರಗತಿಯಂಥ ಕಠಿಣ ಕ್ರಮಗಳನ್ನು ಮತ್ತೆ ಹೇರುವುದು ಇಂದಿನ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ.

ಅದರಲ್ಲಿಯೂ ಕರೋನಾ ಕಾಲದಲ್ಲಿ ಬಿದ್ದ ಆರ್ಥಿಕ ಹೊಡೆತವನ್ನು ಇತ್ತೀಚಿನ ದಿನಗಳವರೆಗೆ ಸರಿಪಡಿಸಿಕೊಂಡಿರುವ ಖಾಸಗಿ ಸಂಸ್ಥೆ ಹಾಗೂ ಸರಕಾರಗಳು ಈಗ ಪುನಃ ಅದೇ ಸ್ಥಿತಿಗೆ ತೆಗೆದು ಕೊಂಡು ಹೋಗಲು ‘ಪ್ರಾಕ್ಟಿಕಲಿ’ ಸಿದ್ಧವಿಲ್ಲ. ಈಗ ಕಾಣಿಸಿಕೊಳ್ಳುತ್ತಿರುವ ಕರೋನಾದ ವಿಷಯ ದಲ್ಲಿ, ಸರಕಾರಗಳು ಮಾರ್ಗಸೂಚಿಗಳನ್ನು ‘ಹೇರುವುದಕ್ಕಿಂತ’ ಸ್ವಯಂಪ್ರೇರಿತವಾಗಿ ಜನರು ತಮ್ಮನ್ನು ತಾವು ಸುರಕ್ಷಿತವಾಗಿಟ್ಟುಕೊಂಡರೇ ಅರ್ಧ ಸೋಂಕು ಮಾಯವಾಗುತ್ತದೆ ಎಂದರೆ ತಪ್ಪಾಗುವುದಿಲ್ಲ.

ಆದರೆ ನಾಲ್ಕು ಅಲೆಗಳನ್ನು ಎದುರಿಸಿರುವ ದೇಶದ ಹಾಗೂ ರಾಜ್ಯದ ಜನರು ಐದನೇ ಅಲೆಯನ್ನು ದಾಟಲೂ ಸರಕಾರದ ‘ನೆರವು’ ಯಾಚಿಸುವ ಬದಲು ಸ್ವಯಂಪ್ರೇರಿತವಾಗಿ ಬೇಕಿರುವ ಸಿದ್ಧತೆ ಮಾಡಿಕೊಳ್ಳುವುದು ಇಂದಿನ ಅಗತ್ಯ. ಇನ್ನು ಈ ಹಿಂದಿನ ಕರೋನಾ ಅಲೆಯ ನೆಪದಲ್ಲಿ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕಾಣದ ಕೈಗಳು ನಡೆಸಿರುವ ಅಕ್ರಮಗಳ ಚರ್ಚೆ ಈಗಲೂ ರಾಜಕೀಯ ವಿಷಯವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಈ ಹಿಂದೆ ಪಿ.ಸಾಯಿನಾಥ್ ಅವರು ಬರೆದ ‘ಎವರಿಬಡಿ ಲವ್ಸ್ ಎ ಗುಡ್ ಡ್ರಾಟ್’ ರೀತಿಯಲ್ಲಿ ಇತ್ತೀಚಿನ ದಿನದಲ್ಲಿ ‘ಎವರಿಬಡಿ ಲವ್ಸ್ ಎ ಕರೋನಾ ವೇವ್’ ಎನ್ನುವ ರೀತಿಯಾಗಿದೆ. ಈ ಕರೋನಾದ ಸೋಂಕು ಏರಿಕೆಯಾಗುತ್ತಿದೆ ಎನ್ನುತ್ತಿದ್ದಂತೆ ಅಧಿಕಾರಿಗಳು ಶುರುಮಾಡುವ ತಯಾರಿ’ ಗಳ ಮೇಲೆ ಸರಕಾರ ಕಣ್ಣಿಡಬೇಕು. 2019ರಲ್ಲಿ ಕರೋನಾ ಕಾಣಿಸಿಕೊಂಡು ಭಾರಿ ವೇಗವಾಗಿ ಹರಡಿತ್ತು. ಆದರೆ ಸಾವಿನ ಸಂಖ್ಯೆ ಕಡಿಮೆಯಿದ್ದ ಕಾರಣ ಎರಡನೇ ಅಲೆಯಲ್ಲಿ ಬಹುತೇಕರು ಮೈಮರೆತಿದ್ದರು.

ಆದರೆ ಎರಡನೇ ಅಲೆಯಲ್ಲಿ ಸೋಂಕು ಹರಡುವ ಜತೆಜತೆಗೆ ಸಾವಿನ ಸಂಖ್ಯೆಯಲ್ಲಿಯೂ ತೀವ್ರ ಏರಿಕೆಯಾಗಿತ್ತು. ಆದರೆ ಅದಾದ ಬಳಿಕ ಕಾಣಿಸಿಕೊಂಡ ಮೂರು ಹಾಗೂ ನಾಲ್ಕನೇ ಅಲೆಯಲ್ಲಿ ಸೋಂಕಿನ ತೀವ್ರತೆ ಹಾಗೂ ಸಾವಿನ ಪ್ರಮಾಣದಲ್ಲಿ ಭಾರಿ ಕುಸಿತವಾಗಿರುವುದು ಸಮಾಧಾನಕರ ಸಂಗತಿ.

ಹಾಗೆ ನೋಡಿದರೆ, ಬೇಸಿಗೆಯಿಂದ ಮಳೆಗಾಲಕ್ಕೆ ಕಾಲಿಡುವ ಸಮಯದಲ್ಲಿ ಜ್ವರ, ಶೀತ ಸಾಮಾನ್ಯ ವಾಗಿ ಕಾಣಿಸಿಕೊಳ್ಳುತ್ತವೆ. ಕರೋನಾದ ಲಕ್ಷಣಗಳೂ ಇವೇ ಆಗಿವೆ. ಜ್ವರದಿಂದ ಬಳಲುವವರಿಗೆ ಕರೋನಾ ಪರೀಕ್ಷೆಗೆ ಒಳಪಡಿಸಿದರೆ ಪಾಸಿಟಿವ್ ಬರುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದ್ದರಿಂದ ಕರೋನಾ ಟೆಸ್ಟಿಂಗ್ ಹೆಚ್ಚಿಸಿದಷ್ಟು, ಪ್ರಕರಣದ ಸಂಖ್ಯೆಯಲ್ಲಿ ಏರಿಕೆಯಾಗುವುದು ಸಾಮಾನ್ಯ. ಆದ್ದರಿಂದ ಪ್ರಕರಣಗಳ ಸಂಖ್ಯೆಯನ್ನು ನೋಡಿ ಆತಂಕಪಡುವ ಅಗತ್ಯವಿಲ್ಲ.

ಆದರೆ ಸೋಂಕಿತರ ಆರೋಗ್ಯದಲ್ಲಾಗುವ ಏರುಪೇರು, ಸಾವಿನ ಪ್ರಮಾಣದ ಆಧಾರದಲ್ಲಿ ತೀವ್ರತೆ ಯನ್ನು ಅರಿಯಬೇಕಾಗುತ್ತದೆ. ‘ಕರೋನಾದ ಜತೆಜತೆಗೆ ನಮ್ಮ ಜೀವನ ಸಾಗಬೇಕಿದೆ’ ಎನ್ನುವ ಮಾತನ್ನು ಕೆಲ ವರ್ಷಗಳ ಹಿಂದೆಯೇ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಆದ್ದರಿಂದ ಇದೀಗ ಕರೋನಾ ಅಲೆ ಬಂತೆಂದು ಆತಂಕಪಡುವುದಕ್ಕಿಂತ, ಎಚ್ಚರವಹಿಸುವುದು ಸೂಕ್ತ. ಈಗಾಗಲೇ ಡೆಂ, ಮಲೇರಿಯಾ ಸೇರಿದಂತೆ ಹಲವು ಜ್ವರಗಳು ಮಾರಣಾಂತಿಕ ಎನ್ನುವುದು ಗೊತ್ತಿದ್ದರೂ, ಅವು ಗಳೊಂದಿಗೆ ಜೀವನ ಸಾಗಿಸುವುದನ್ನು ರೂಢಿಸಿಕೊಳ್ಳಲಾಗಿದೆ.

ಅದೇ ರೀತಿ ಕರೋನಾ ಬಾರದಂತೆ ನೋಡಿಕೊಂಡು, ಬಂದರೂ ಸಾಮಾಜಿಕ ಅಂತರ ಕಾಯ್ದು ಕೊಂಡು ‘ಹರಡದಂತೆ’ ಸಾರ್ವಜನಿಕರು ಎಚ್ಚರ ವಹಿಸುವುದೇ, ಕರೋನಾ ಹಿಮ್ಮೆಟ್ಟಿಸಲು ಇರುವ ಏಕೈಕ ಮಾರ್ಗ. ರಾಜ್ಯ ಸರಕಾರ ಈಗಾಗಲೇ ‘ಕ್ರಮ’ದ ಭರವಸೆ ನೀಡಿದ್ದರೂ, ಸಾರ್ವಜನಿಕರು ತಮ್ಮನ್ನು ತಾವು ಐಸೋಲೇಟ್ ಮಾಡಿಕೊಂಡರೆ ಮಾತ್ರ ಸಮಸ್ಯೆ-ಸವಾಲನ್ನು ನಿಭಾಯಿಸಲು ಸಾಧ್ಯ.