ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narada Sanchara: ಸಾಫ್ಟ್‌ ಕಂಪನಿ ಹಾರ್ಡ್ ಆದಾಗ...!!

‘ಆರ್ಥಿಕ ಅಸ್ಥಿರತೆ’ ಎಂಬ ಪೆಡಂಭೂತವು ಕಂಪನಿಯೊಂದನ್ನು ಅಮರಿಕೊಂಡಾಗ, ಅದು ಕೈ ಗೊಳ್ಳುವ ಒಂದಿಷ್ಟು ‘ರಕ್ಷಣಾತ್ಮಕ ಆಟ’ಗಳ ಪೈಕಿ ಉದ್ಯೋಗ ಕಡಿತವೂ ಒಂದು. ಒಂದು ಕಡೆ ‘ಕೃತಕ ಬುದ್ಧಿಮತ್ತೆ’ (ಎಐ) ಎಂಬ ಮಾಯಾಂಗನೆ ಒಂದೊಂದೇ ಉದ್ಯೋಗ ವಲಯವನ್ನು ತನ್ನ ಮೋಹಜಾಲಕ್ಕೆ ಸೆಳೆಯು ತ್ತಿದ್ದರೆ, ಮತ್ತೊಂದೆಡೆ ಹೀಗೆ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತವಾಗುತ್ತಿದೆ.

ಸಾಫ್ಟ್‌ ಕಂಪನಿ ಹಾರ್ಡ್ ಆದಾಗ...!!

ನಾರದ ಸಂಚಾರ

ಕಲಹಪ್ರಿಯ

naadigru@gmail.com

ಸಾಫ್ಟ್‌ ವೇರ್ ವಲಯದ ಘಟಾನುಘಟಿ ಎನಿಸಿಕೊಂಡಿರುವ ಮೈಕ್ರೋಸಾಫ್ಟ್‌ ಕಂಪನಿಯು ಬರೋಬ್ಬರಿ 9000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ನಿರ್ಧರಿಸಿದೆ ಎಂಬ ಸುದ್ದಿ ಅಮೆರಿಕದಿಂದ ಅಪ್ಪಳಿಸಿದೆ. ಇದು 2023ರ ನಂತರದಲ್ಲಿ ಮೈಕ್ರೋಸಾಫ್ಟ್‌ ವತಿಯಿಂದ ಆಗುತ್ತಿರುವ ಅತಿದೊಡ್ಡ ‘ಉದ್ಯೋಗ ಕಡಿತ’ ಉಪಕ್ರಮವಾಗಿದ್ದು, ಇದರಿಂದಾಗಿ ಒಟ್ಟು ಉದ್ಯೋಗಿಗಳ ಸಂಖ್ಯೆ ಯಲ್ಲಿ ಶೇ.43ರಷ್ಟು ಭಾಗಕ್ಕೆ ಕತ್ತರಿ ಬೀಳಲಿದೆ ಎನ್ನಲಾಗಿದೆ.

‘ಆರ್ಥಿಕ ಅಸ್ಥಿರತೆ’ ಎಂಬ ಪೆಡಂಭೂತವು ಕಂಪನಿಯೊಂದನ್ನು ಅಮರಿಕೊಂಡಾಗ, ಅದು ಕೈ ಗೊಳ್ಳುವ ಒಂದಿಷ್ಟು ‘ರಕ್ಷಣಾತ್ಮಕ ಆಟ’ಗಳ ಪೈಕಿ ಉದ್ಯೋಗ ಕಡಿತವೂ ಒಂದು. ಒಂದು ಕಡೆ ‘ಕೃತಕ ಬುದ್ಧಿಮತ್ತೆ’ (ಎಐ) ಎಂಬ ಮಾಯಾಂಗನೆ ಒಂದೊಂದೇ ಉದ್ಯೋಗ ವಲಯವನ್ನು ತನ್ನ ಮೋಹಜಾಲಕ್ಕೆ ಸೆಳೆಯುತ್ತಿದ್ದರೆ, ಮತ್ತೊಂದೆಡೆ ಹೀಗೆ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತವಾಗು ತ್ತಿದೆ.

ಎಂಥ ಘಟಾನುಘಟಿ ಕಂಪನಿಯೂ ಇಂಥ ಬೆಳವಣಿಗೆಗೆ ಹೊರತಲ್ಲ ಎಂಬುದಕ್ಕೆ ಮೈಕ್ರೋಸಾಫ್ಟ್‌ ಕಂಪನಿಯೇ ಸಾಕ್ಷಿ. ಇದರಿಂದ ಕೆಲವರಿಗೆ, ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂಬ ಜಾಣನುಡಿಯು ನೆನಪಿಗೆ ಬಂದಿರಲಿಕ್ಕೂ ಸಾಕು. ಅದೇನೇ ಇರಲಿ, ಮೈಕ್ರೋ‘ಸಾಫ್ಟ್‌’ ಕಂಪನಿಯು ಇಷ್ಟೊಂದು ಹಾರ್ಡ್’ ಆಗಿ ವರ್ತಿಸೋದು ತರವೇ? ಆರ್ಥಿಕ ಅಸ್ಥಿರತೆಯ ನಿವಾರಣೆಗೆ ಬೇರೇನೂ ಮಾರ್ಗ ಗಳಿಲ್ಲವೇ? ಎಂಬುದು ತ್ರಿಲೋಕ ಸಂಚಾರಿ ನಾರದರ ಪ್ರಶ್ನೆ.

ಇದನ್ನೂ ಓದಿ: Narada Sanchara: ಟೆರರಿಸ್ಟ್ ‘ಟೀಮ್-ಸಾಂಗ್’!

ಬುಡಕ್ಕೇ ಬಂತು ಸಂಚಕಾರ!

ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿರದ, ಲೋಕಸಭೆ, ವಿಧಾನಸಭೆ ಹೀಗೆ ಯಾವುದೇ ಪ್ರಜಾಪ್ರತಿನಿಧಿ ಸಭೆಯ ಚುನಾವಣೆಗಳಲ್ಲೂ ಕಳೆದ 6 ವರ್ಷಗಳಿಂದ ಸ್ಪರ್ಧಿಸದ ಒಂದಿಷ್ಟು ರಾಜಕೀಯ ಪಕ್ಷಗಳಿಗೆ ‘ಡಿಲೀಟ್’ ಬಟನ್ ಒತ್ತಲು ಚುನಾವಣಾ ಆಯೋಗ ನಿರ್ಧರಿಸಿದೆಯಂತೆ. ಇವು ಬೆಂಗಳೂರು ನಗರ ಜಿಲ್ಲೆಯಲ್ಲಿ ನೋಂದಣಿಗೊಂಡು ‘ರಾಜಕೀಯ ಚಟುವಟಿಕೆಗಳಿಂದ ವಿಮುಖ ವಾಗಿರುವ’ ಪಕ್ಷಗಳು ಎಂಬುದು ನಿಮ್ಮ ಗಮನಕ್ಕೆ. ಪ್ರಜಾಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 29 (ಎ) ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದರೂ, ರಾಜಕೀಯವಾಗಿ ಸಕ್ರಿಯವಾಗಿರದ ಹಾಗೂ ವಿಳಾಸವನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲದ (ಇದನ್ನು ನೀವು ‘ಅಡ್ರೆಸ್ಸಿಗಿಲ್ಲದ’ ಅಂತ ಹೇಳ್ಕೋ ಬಹುದು!) ಇಂಥ ಪಕ್ಷಗಳಿಗೆ ಈಗ ‘ಕಾರಣ ಕೇಳುವ’ ನೋಟಿಸ್ ಜಾರಿಮಾಡಲಾಗಿದೆಯಂತೆ. ಈ ಕ್ರಮ ಅಧಿಕೃತವಾಗಿ ಜಾರಿಗೆ ಬರುವುದಕ್ಕೂ ಮುಂಚೆ ತಮ್ಮ ಹೇಳಿಕೆ ದಾಖಲಿಸುವುದಕ್ಕೆ ಇಂಥ ಪಕ್ಷಗಳಿಗೆ ಅವಕಾಶವನ್ನು ನೀಡಲಾಗಿದೆಯಂತೆ. ಒಟ್ಟಿನಲ್ಲಿ, ರಾಜಕೀಯ ಪಕ್ಷವೊಂದು ಜನರ ಮನದಲ್ಲಿ ‘ನಿಲ್ಲದಿದ್ದರೆ’, ಅಷ್ಟೇಕೆ ಚುನಾವಣೆಯಲ್ಲೂ ‘ನಿಲ್ಲದಿದ್ದರೆ’ ಏನೆಲ್ಲಾ ತಾಪತ್ರಯಗಳಿವೆ ಅಲ್ವಾ?!

ನಾರಾಯಣ ನಾರಾಯಣ!

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ, ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಮೊನ್ನೆ ಬುಧವಾರ 6 ತಿಂಗಳ ಜೈಲುಶಿಕ್ಷೆ ವಿಧಿಸಿದೆಯಂತೆ. “ಇದನ್ನು ಅವರು ಒಪ್ಪಿಕೊಳ್ಳುವರಾ?" ಅಂತ ಅದ್ಯಾರೋ ಪ್ರಶ್ನಿಸಿದ್ದಕ್ಕೆ, “ಹಸೀನಾ ಮಾನ್ ಜಾಯೇಗಿ" (ಹಸೀನಾ ಒಪ್ಪುತ್ತಾರೆ) ಎಂದು ಅದ್ಯಾರೋ ಬಾಲಿವುಡ್ ಮಂದಿ ಉತ್ತರಿಸಿದ ರಂತೆ!