ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಬೇರುಗಳನ್ನು ಗಟ್ಟಿಗೊಳಿಸುವುದು ಯಾವಾಗ ?

ಕರ್ನಾಟಕದ ಇಂದಿನ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಬೂತ್‌ಮಟ್ಟದಲ್ಲಿ ಸಂಘಟನೆ ಬಲಿಷ್ಠ ವಾಗಿರಲು ರಾಜ್ಯ ಮಟ್ಟದ ನಾಯಕತ್ವಕ್ಕಿಂತ ಹೆಚ್ಚಾಗಿ ಸ್ಥಳೀಯ ಮಟ್ಟದ ನಾಯಕತ್ವ ಗಟ್ಟಿಯಾಗಿರ ಬೇಕು. ಬೂತ್ ಮಟ್ಟದ ಸಂಘಟನೆಯನ್ನು ಗಟ್ಟಿಗೊಳಿಸಲು ಶಾಸಕರು, ಪದಾಧಿಕಾರಿಗಳು, ಸಚಿವರು, ರಾಜ್ಯಾಧ್ಯಕ್ಷರಿಂದ ಸಾಧ್ಯವಿಲ್ಲ.

ಬೇರುಗಳನ್ನು ಗಟ್ಟಿಗೊಳಿಸುವುದು ಯಾವಾಗ ?

ಮುಖ್ಯ ವರದಿಗಾರ ಹಾಗೂ ಅಂಕಣಕಾರ ರಂಜಿತ್‌ ಎಚ್.ಅಶ್ವತ್ಥ

Ranjith H Ashwath Ranjith H Ashwath Mar 18, 2025 5:56 AM

ಅಶ್ವತ್ಥಕಟ್ಟೆ

ranjith.hoskere@gmail.com

ವ್ಯಕ್ತಿಗಿಂತ ಪಕ್ಷ ಮುಖ್ಯ’ ಎನ್ನುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾತಾಗಿದ್ದರೂ, ಯಾವುದೇ ಒಂದು ಪಕ್ಷ ನಿರಂತರವಾಗಿ ಬಲಿಷ್ಠವಾಗಿರಬೇಕು ಎಂದರೆ ಈ ಮಾತನ್ನು ಪಾಲಿಸಬೇಕು. ಯಾವುದೇ ಪಕ್ಷ ಅಧಿಕಾರದಲ್ಲಿದ್ದಾಗ ಇತರೆ ಪಕ್ಷಗಳಿಂದ ‘ನಾಯಕರು’ ವಲಸೆ ಬರಬಹುದು ವಿನಾ ಕಾರ್ಯಕರ್ತರಲ್ಲ. ಪಕ್ಷ ಬಲಿಷ್ಠ ಸಂಘಟನೆಯನ್ನು ಹೊಂದಿರಬೇಕು ಎಂದರೆ ಕಾರ್ಯಕರ್ತರ ಪಡೆ ಗಟ್ಟಿಯಾಗಿರ ಬೇಕು. ಈ ಪಡೆ ಗಟ್ಟಿಯಾಗಿರಬೇಕು ಎಂದರೆ, ಅಧಿಕಾರ ವಿಕೇಂದ್ರೀಕರಣವಾಗಿರಬೇಕು. ಅದಾಗದೇ, ಕೆಲವರು ಕೈಯಲ್ಲಿ ಅಧಿಕಾರ ಕೀಲಿ ಸಿಕ್ಕರೆ ಎಷ್ಟೇ ಬಲಿಷ್ಠ ಸಂಘಟನೆಯಿದ್ದರೂ, ಹಂತ-ಹಂತವಾಗಿ ಈ ಸಂಘಟನೆ ಕುಸಿಯುವುದರಲ್ಲಿ ಅನುಮಾನವಿಲ್ಲ.

ಕರ್ನಾಟಕದ ಇಂದಿನ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಬೂತ್‌ಮಟ್ಟದಲ್ಲಿ ಸಂಘಟನೆ ಬಲಿಷ್ಠ ವಾಗಿರಲು ರಾಜ್ಯ ಮಟ್ಟದ ನಾಯಕತ್ವಕ್ಕಿಂತ ಹೆಚ್ಚಾಗಿ ಸ್ಥಳೀಯ ಮಟ್ಟದ ನಾಯಕತ್ವ ಗಟ್ಟಿ ಯಾಗಿರಬೇಕು. ಬೂತ್ ಮಟ್ಟದ ಸಂಘಟನೆಯನ್ನು ಗಟ್ಟಿಗೊಳಿಸಲು ಶಾಸಕರು, ಪದಾಧಿಕಾರಿಗಳು, ಸಚಿವರು, ರಾಜ್ಯಾಧ್ಯಕ್ಷರಿಂದ ಸಾಧ್ಯವಿಲ್ಲ.

ಇದನ್ನೂ ಓದಿ: Ranjith H Ashwath Column: ಬಹುಜನ ಹಿತಾಯ, ಬಹುಜನ ಸುಖಾಯ...

ಬದಲಿಗೆ ಎರಡನೇ, ಮೂರನೇ ಹಂತದ ನಾಯಕತ್ವದಿಂದ ಮಾತ್ರ ಸಾಧ್ಯವಾಗುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಎರಡನೇ ಹಾಗೂ ಮೂರನೇ ಹಂತದ ನಾಯಕತ್ವವನ್ನೇ ಮೊಟಕುಗೊಳಿಸುವ ಪ್ರಯತ್ನವು ಮೂರೂ ರಾಜಕೀಯ ಪಕ್ಷಗಳಲ್ಲಿ ಸದ್ದಿಲ್ಲದೇ ನಡೆಯುತ್ತಿದೆ.

ಅದರಲ್ಲಿಯೂ ಚುನಾವಣಾ ರಾಜಕೀಯದಲ್ಲಿ ಎರಡು, ಮೂರನೇ ಹಂತದ ನಾಯಕತ್ವ ಬೆಳೆಯು ವುದು ಸ್ಥಳೀಯ ಸಂಸ್ಥೆಯ ಚುನಾವಣೆಯ ಮೂಲಕ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆದೇ ವರ್ಷಗಳು ಕಳೆದಿವೆ. ಹಲವು ವಿಷಯದಲ್ಲಿ ಭಿನ್ನಾ ಭಿಪ್ರಾಯವಿರುವ ಮೂರೂ ಪಕ್ಷದ ಶಾಸಕರಿಗೆ, ಚುನಾವಣೆ ನಡೆಸದೇ ಇರುವ ವಿಷಯದಲ್ಲಿ ಮಾತ್ರ ‘ಸರ್ವಾನುಮತ’ದ ಒಪ್ಪಿಗೆಯಿದೆ ಎಂದರೆ ತಪ್ಪಾಗುವುದಿಲ್ಲ. ಇದನ್ನು ಬಹಿರಂಗವಾಗಿ ಹೇಳದಿ ದ್ದರೂ, ಬಹುತೇಕ ಶಾಸಕರು ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುವುದಕ್ಕಿಂತ ಸುಮ್ಮ ನಿರುವುದು ಸೂಕ್ತ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.

cong_bjp ok

ಅಧಿಕಾರ ವಿಕೇಂದ್ರಿಕರಣದಿಂದ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರತಿಪಾದಿಸಿ, ಮಾಜಿ ಪ್ರಧಾನ ಮಂತ್ರಿ ದಿ.ರಾಜೀವ್ ಗಾಂಧಿ ಅವರು ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಿದರು. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಪುರಸಭೆ, ನಗರಸಭೆ, ಮಹಾನಗರಪಾಲಿಕೆ ಎಂದು ವಿವಿಧ ಹಂತಗಳಲ್ಲಿ ಸ್ಥಳೀಯ ಸಂಸ್ಥೆಗಳನ್ನು ರಚಿಸಲಾಯಿತು. ಈ ರೀತಿ ವಿವಿಧ ಹಂತದಲ್ಲಿ ಸ್ಥಳೀಯ ಸಂಸ್ಥೆಗಳನ್ನು ರಚಿಸುವ ಮೂಲಕ, ಅಧಿ ಕಾರ ವಿಕೇಂದ್ರೀಕರಣ ಮಾಡುವುದು ಒಂದು ಭಾಗವಾದರೆ, ಇನ್ನೊಂದೆಡೆ ಈ ಸ್ಥಳೀಯ ಸಂಸ್ಥೆಗಳ ಮೂಲಕ ರಾಜಕೀಯಕ್ಕೆ ಬರುತ್ತಿದ್ದವರ ಸಂಖ್ಯೆಯೂ ಕಡಿಮೆ ಏನಿಲ್ಲ.

ಇದನ್ನೂ ಓದಿ: Ranjith H Ashwath Column: ದಶಕದ ಬಳಿಕವೂ ಪಾಠ ಕಲಿಯದ ಕೈ ಪಡೆ

ಈಗ ರಾಜಕೀಯದ ಆಯಕಟ್ಟಿನ ಹುದ್ದೆಯಲ್ಲಿರುವ ಬಹುತೇಕ ನಾಯಕರು, ದಶಕಗಳ ಹಿಂದೆ ಗ್ರಾಮ ಪಂಚಾಯಿತಿಗೋ, ನಗರಸಭೆಗೋ ಅಥವಾ ಬೆಂಗಳೂರಿನ ಶಾಸಕರು ಬಿಬಿಎಂಪಿ ಕಾರ್ಪೋ ರೇಟರ್‌ಗಳಾಗುವ ಮೂಲಕವೋ ರಾಜಕೀಯ ಜೀವನಕ್ಕೆ ಕಾಲಿಟ್ಟವರು. ಅದರಲ್ಲಿಯೂ ಬೆಂಗ ಳೂರಿನ 28 ಕ್ಷೇತ್ರಗಳ ಶಾಸಕರ ಪೈಕಿ ಶೇ.60ಕ್ಕೂ ಹೆಚ್ಚು ಮಂದಿ ಈ ಹಿಂದೆ ಬಿಬಿಎಂಪಿ ಕಾರ್ಪೋ ಟರ್‌ಗಳಾಗಿಯೇ ಬೆಳಕಿಗೆ ಬಂದವರು.

ಈ ಅಧಿಕಾರ ವಿಕೇಂದ್ರೀಕರಣದ ಭಾಗವಾಗಿಯೇ ಕರ್ನಾಟಕದಲ್ಲಿ 31 ಜಿಲ್ಲಾ ಪಂಚಾಯಿತಿ, 226 ತಾಲೂಕು ಪಂಚಾಯಿತಿ ಮತ್ತು 6022 ಗ್ರಾಮ ಪಂಚಾಯಿತಿಗಳೊಂದಿಗೆ, 10 ಮಹಾನಗರ ಪಾಲಿಕೆ, 61 ನಗರಸಭೆ, 123 ಪುರಸಭೆ, 117 ಪಟ್ಟಣ ಪಂಚಾಯಿತಿಗಳಿವೆ. ಈ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಾಗ ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಆಯ್ಕೆಯಾಗುತ್ತಾರೆ.

ಗ್ರಾಮ ಪಂಚಾಯಿತಿಗಳಿಗೆ ಪಕ್ಷದ ಚಿಹ್ನೆ ಸಿಗದಿದ್ದರೂ, ಪಕ್ಷದ ಬೆಂಬಲದೊಂದಿಗೆ ಚುನಾವಣೆ ನಡೆಯುವುದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ದರಿಂದ ಈ ಎಲ್ಲ ಚುನಾವಣೆಗಳು ಪಕ್ಷಗಳ ಬಲಾಬಲವನ್ನು ತೋರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕೇವಲ ತೋರಿಸುವುದಷ್ಟೇ ಅಲ್ಲದೇ, ಬಲವನ್ನು ಹೆಚ್ಚಿಸಿಕೊಳ್ಳುವಲ್ಲಿ, ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಆದರೆ 2016ರಿಂದ ಈಚೆಗೆ, ಅಂದರೆ ಕಳೆದ ಒಂಬತ್ತು ವರ್ಷಗಳಿಂದ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆದಿಲ್ಲ. ಇನ್ನು ರಾಜ್ಯದ ಶೇ.65ರಷ್ಟು ತೆರಿಗೆಯನ್ನು ಸಂಗ್ರಹಿಸುವ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯದೇ ಐದು ವರ್ಷ ಕಳೆದಿದೆ. ಈ ಚುನಾವಣೆ ಗಳ ಮೂಲಕ ರಾಜಕೀಯವಾಗಿ ಗುರುತಿಸಿಕೊಳ್ಳುವ ಉತ್ಸಾಹದಲ್ಲಿದ್ದ ಮೂರನೇ ಹಂತದ ನಾಯಕರನ್ನು ಹಾಗೂ ಈ ಚುನಾವಣೆಗಳಲ್ಲಿ ಗೆದ್ದು ‘ಲೀಡರ್’ ಎನಿಸಿಕೊಳ್ಳುವ ಉತ್ಸಾಹದಲ್ಲಿದ್ದ ಎರಡನೇ ಹಂತದ ನಾಯಕತ್ವದ ಧ್ವನಿಯನ್ನು ಸದ್ದಿಲ್ಲದೇ ಅಡಗಿಸಲಾಗಿದೆ.

ಇದನ್ನೂ ಓದಿ: Ranjith H Ashwath Column: ವಿಶ್ವವಿದ್ಯಾಲಯಗಳ ಆರಂಭಕ್ಕಿಂತ ಅಭಿವೃದ್ಧಿ ಮುಖ್ಯ

ಹಾಗೆ ನೋಡಿದರೆ, ಈ ರೀತಿ ರಾಜಕೀಯ ಪಕ್ಷಗಳ ಎರಡನೇ ಹಾಗೂ ಮೂರನೇ ಹಂತದ ನಾಯ ಕತ್ವದ ಸದ್ದು ಅಡಗಿಸುವಲ್ಲಿ ಯಾವುದೋ ಒಂದು ಪಕ್ಷದ ಕೈವಾಡದವಿದೆ ಎನ್ನಲು ಬರುವುದಿಲ್ಲ. ಚುನಾವಣೆ ನಡೆಸುವ ವಿಷಯದಲ್ಲಿ ಆಡಳಿತ ಪಕ್ಷಕ್ಕೆ ‘ಆಸಕ್ತಿ’ ಇಲ್ಲವೆಂದು ವಿರೋಧ ಪಕ್ಷದಲ್ಲಿ ಕೂತ ಶಾಸಕರು ಕೂಗಾಡುತ್ತಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರು ಮಾಡಿ ದ್ದನ್ನೇ, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಮಾಡಿಕೊಂಡು ಬಂದಿದ್ದಾರೆ.

ಆದರೆ ನೈಜವಾಗಿ ಹೇಳಬೇಕೆಂದರೆ ಈ ಬಿಬಿಎಂಪಿ ಅಥವಾ ಇತರೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುವುದು ಮೂರೂ ಪಕ್ಷಗಳ ಯಾವ ಶಾಸಕರಿಗೂ ‘ಇಷ್ಟ’ವಿಲ್ಲ. ಅದರಲ್ಲಿಯೂ ಬಿಬಿಎಂಪಿ ಚುನಾವಣೆ ನಡೆಸುವ ವಿಷಯದಲ್ಲಿ ಮೂರೂ ಪಕ್ಷದ ಶಾಸಕರದ್ದು ‘ಒಂದೇ ಧ್ವನಿ’ ಎಂದರೆ ತಪ್ಪಾಗುವುದಿಲ್ಲ.

ಈ ರೀತಿ ಸ್ಥಳೀಯ ಸಂಸ್ಥೆ ಚುನಾವಣೆಗೆ ವಿರೋಧಿಸುವುದಕ್ಕೆ ಕಾರಣವಿಲ್ಲವೆಂದಲ್ಲ. ಯಾವುದೇ ಸ್ಥಳೀಯ ಸಂಸ್ಥೆಯಾದರೂ ವಾರ್ಷಿಕವಾಗಿ ಕೋಟ್ಯಂತರ ರುಪಾಯಿ ಅನುದಾನ ಬರುತ್ತದೆ. ಬಿಬಿ ಎಂಪಿಯಂಥ ಮಹಾನಗರ ಪಾಲಿಕೆಯಿರುವ ಭಾಗದಲ್ಲಿ ಶಾಸಕರಿಗೆ ಸಿಗುವ ಅನುದಾನಕ್ಕಿಂತ ಕಾರ್ಪೋರೇಟರ್‌ಗಳಿಗೆ ಸಿಗುವ ‘ಅನುದಾನ’ ಹೆಚ್ಚಾಗಿರುತ್ತದೆ. ಉದಾಹರಣೆಗೆ ಬೆಂಗಳೂರಿನ ಯಾವುದೇ ಭಾಗದ ಬಿಬಿಎಂಪಿ ವಾರ್ಡ್‌ಗಳಿಗೆ ವಿವಿಧ ಯೋಜನೆಯಡಿ ವಾರ್ಷಿಕವಾಗಿ ಕನಿಷ್ಠ ನೂರು ಕೋಟಿ ರು. ಅನುದಾನ ಸಿಗುತ್ತದೆ.

ಆದರೆ ಇದೇ ಪ್ರಮಾಣದ ಅನುದಾನ ಶಾಸಕರಿಗೆ ಸಿಗುತ್ತದೆ ಎನ್ನುವ ಗ್ಯಾರಂಟಿ ಇರುವುದಿಲ್ಲ. ಒಂದು ಕ್ಷೇತ್ರಕ್ಕೆ ಕನಿಷ್ಠ ಎಂಟು ವಾರ್ಡ್‌ಗಳಿರುತ್ತವೆ. ಅಂದರೆ, ಬಿಬಿಎಂಪಿ ಜನಪ್ರತಿನಿಽ ಇಲ್ಲದಿದ್ದರೆ ಒಬ್ಬ ಶಾಸಕನಿಗೆ ವಾರ್ಷಿಕ ಕನಿಷ್ಠ 700ರಿಂದ 800 ಕೋಟಿ ರು. ಮೊತ್ತದ ಅನುದಾನ ಸಿಕ್ಕಂತಾಗುತ್ತದೆ. ಒಂದು ವೇಳೆ ಚುನಾವಣೆ ನಡೆದು ಬಿಬಿಎಂಪಿ ಪ್ರತಿನಿಧಿಗಳು ನೇಮಕವಾದರೆ, ಈ 800 ಕೋಟಿ ರು. ಅನುದಾನದ ಹಿಡಿತ ಶಾಸಕನಿಂದ ನೇರವಾಗಿ ಕಾರ್ಪೋರೇಟರ್‌ಗಳ ಕೈ ಸೇರಲಿದೆ.

ಈ ಕಾರಣಕ್ಕಾಗಿಯೇ ಪ್ರತಿಬಾರಿ ಚುನಾವಣೆ ಎಂದಾಗಲೂ, ಯಾವುದೋ ಒಂದು ನೆಪವನ್ನು ಮುಂದಿಟ್ಟುಕೊಂಡು ಚುನಾವಣೆ ಮುಂದಕ್ಕೆ ಹಾಕಿಸುವ ಪ್ರಯತ್ನದಲ್ಲಿಯೇ ಬಹುತೇಕ ಶಾಸಕ ರಿದ್ದಾರೆ. ಈ ಆಲೋಚನೆ ಕೇವಲ ಬಿಬಿಎಂಪಿಗೆ ಸೀಮಿತವಾಗದೇ, ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಷಯದಲ್ಲಿಯೂ ಇದೆ ಎನ್ನುವುದು ವಾಸ್ತವ.

ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆದರೆ ಕನಿಷ್ಠ 15 ಸಾವಿರ ಮಂದಿ ಗೆಲುವಿನ ದಡ ಸೇರಿ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಆದರೆ ಸ್ಥಳೀಯ ಸಂಸ್ಥೆ ಚುನಾವಣೆಯ ಹೆಸರಲ್ಲಿ ಮೂರೂ ಪಕ್ಷದಿಂದ ಕನಿಷ್ಠ 40 ಸಾವಿರ ಕಾರ್ಯಕರ್ತರು ಮುನ್ನೆಲೆಗೆ ಬರುತ್ತಾರೆ. ಸೋಲು ಗೆಲುವಿನ ಲೆಕ್ಕಾಚಾರಗಳು ಚುನಾವಣೆಯ ಬಳಿಕವಾದರೂ, ಕಾರ್ಯಕರ್ತರು, ನಾಯಕರು ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡುತ್ತಾರೆ. ಆದರೆ ಈ ಚುನಾವಣೆ ನಡೆಯುವ ನಂಬಿಕೆಗಳೇ ಇಲ್ಲದಿರುವುದರಿಂದ ಸ್ಥಳೀಯ ಸಂಸ್ಥೆ ಚುನಾವಣೆಯ ನಿರೀಕ್ಷೆಯಲ್ಲಿ ಪಕ್ಷದ ಕಾರ್ಯಗಳಲ್ಲಿ ತೊಡಗಿದ್ದ ಬಹುತೇಕರು ಪಕ್ಷದ ಕೆಲಸದತ್ತ ಮುಖಮಾಡದೇ, ತಮ್ಮ ವೈಯಕ್ತಿಕ ವ್ಯವಹಾರಗಳಲ್ಲಿ ತೊಡಗಿದ್ದಾರೆ.

ಈ ರೀತಿ ರಾಜಕೀಯದಲ್ಲಿ ನಿಷ್ಕ್ರಿಯರಾಗಿರುವ ಕಾಂಗ್ರೆಸ್ ಕಾರ್ಯಕರ್ತರೊಬ್ಬರು, “ನಿತ್ಯ ಮನೆ ಮುಂದೆ ಹತ್ತಾರು ಜನ ಬರುತ್ತಾರೆ. ಅವರಿಗೆ ಕಾಫಿ-ಟೀ ಎಂದರೂ ತಿಂಗಳಿನಿಂದ ಲಕ್ಷಕ್ಕೂ ಹೆಚ್ಚು ಖರ್ಚಾಗುತ್ತದೆ. ಇಷ್ಟು ಖರ್ಚು ಮಾಡಿದರೂ ಯಾವುದೇ ಲಾಭವಿಲ್ಲ ಎಂದಾಗ ನಾವೇಕೆ ಕೆಲಸ ಮಾಡಬೇಕು? ಈಗಿನ ಸ್ಥಿತಿ ನೋಡಿದರೆ ಯಾವ ಶಾಸಕರಿಗೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎನ್ನುವ ಇಚ್ಛೆ ಇಲ್ಲ.

ಹೀಗಿರುವಾಗ, ಸುಮ್ಮನೆ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಓಡಾಡುವ ಬದಲು ಮನೆ ಕೆಲಸ, ವ್ಯವಹಾರವನ್ನಾದರೂ ನೋಡಿಕೊಳ್ಳುತ್ತೇವೆ" ಎಂದಿದ್ದರು. ಇದು ಕೇವಲ ಕಾಂಗ್ರೆಸ್ ಕಾರ್ಯ ಕರ್ತನ ಮಾತಲ್ಲ. ಬದಲಿಗೆ ಮೂರೂ ಪಕ್ಷದ ಕಾರ್ಯಕರ್ತರ ಅಂತರಂಗದ ಮಾತಾಗಿದೆ. ಯಾವು ದೇ ಒಂದು ಪಕ್ಷವು ಸುದೀರ್ಘ ಕಾಲದವರೆಗೆ ಬಲಿಷ್ಠವಾಗಿರಬೇಕು ಎಂದರೆ ಆ ಪಕ್ಷದ ‘ಬೇರು’ಗಳೆ ನಿಸಿರುವ ಕಾರ್ಯಕರ್ತರು ಗಟ್ಟಿಯಾಗಿರಬೇಕು. ಆ ಬೇರುಗಳು ಗಟ್ಟಿಯಾಗಿರಲು ಸಮಯಕ್ಕೆ ಸರಿಯಾಗಿ ‘ಅಧಧಿಕಾರ’ ಅಥವಾ ‘ಜವಾಬ್ದಾರಿ’ ಎನ್ನುವ ನೀರನ್ನು ಹಾಕಿ ಪೋಷಿಸುತ್ತಿರ ಬೇಕು.

ಆದರೆ ಮೇಲಿನ ನಾಯಕರು ಸ್ವಹಿತಾಸಕ್ತಿಗಾಗಿ ಸೂಕ್ತ ಸಮಯದಲ್ಲಿ ಎರಡನೇ, ಮೂರನೇ ಹಂತದ ನಾಯಕರನ್ನು ಬೆಳೆಸುವ ಪ್ರಯತ್ನ ಮಾಡದಿದ್ದರೆ ಭವಿಷ್ಯದಲ್ಲಿ ಪಕ್ಷದ ಬುಡ ಅಲ್ಲಾಡುವ ಸಾಧ್ಯತೆ ಯಿರುತ್ತದೆ. ಕರ್ನಾಟಕದ ಇಂದಿನ ಪರಿಸ್ಥಿತಿಯಲ್ಲಿ, ಮೂರೂ ಪಕ್ಷಗಳು ತಂತಮ್ಮ ಕಾರ್ಯಕರ್ತ ರನ್ನು ಗಣನೆಗೆ ತೆಗೆದುಕೊಳ್ಳದೇ, ತಮ್ಮದೇ ಆದ ‘ರಾಜಕೀಯ’ದಲ್ಲಿ ತೊಡಗಿರುವುದರಿಂದ ಎಲ್ಲ ಪಕ್ಷದ ಕಾರ್ಯಕರ್ತರು ಸಮಾನದುಃಖಿಗಳಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಮೂರೂ ಪಕ್ಷಗಳನ್ನು ಮೀರಿ, ಪರ್ಯಾಯ ಆಲೋಚನೆಗೆ ಸದ್ಯದ ರಾಜಕೀಯ ಸ್ಥಿತಿಯಲ್ಲಿ ಸಾಧ್ಯ ವಿಲ್ಲದೇ ಇರುವುದರಿಂದ ಅನೇಕ ‘ಬಡ್ಡಿಂಗ್ ಪೊಲಿಟಿಷಿಯನ್ಸ್’ ರಾಜಕೀಯ ಬಿಟ್ಟು ಬದುಕು ಕಟ್ಟಿಕೊಳ್ಳೋಣ ಎನ್ನುವ ಮನಸ್ಥಿತಿಗೆ ಜಾರಿರುವುದು ವಾಸ್ತವ. ಇನ್ನಾದರೂ ಸ್ಥಳೀಯ ಸಂಸ್ಥೆಗಳಿಗೆ ದಶಕದಿಂದ ನಡೆಯದ ಚುನಾವಣೆಯನ್ನು ನಡೆಸುವ ಮೂಲಕ ಎರಡನೇ, ಮೂರನೇ ಹಂತದ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ಎಲ್ಲ ನಾಯಕರು ಆಲೋಚಿಸಬೇಕಿದೆ.