Khaleel Ahmed: ಚೆನ್ನೈ ಸೂಪರ್ ಕಿಂಗ್ಸ್‌ಗೆ ಆಘಾತ, ಸ್ಟಾರ್ ವೇಗಿ ಐಪಿಎಲ್ ಟೂರ್ನಿಯಿಂದ ಔಟ್!
Khaleel Ahmed Injury: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ಖಲೀಲ್ ಅಹ್ಮದ್ ಅವರು 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ನಡೆದಿದ್ದಾರೆ. ಈಗಾಗಲೇ ಬೌಲಿಂಗ್ ವಿಭಾಗದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಸಿಎಸ್‌ಕೆಗೆ ಭಾರಿ ಹಿನ್ನಡೆಯಾಗಿದೆ.
ಸಿಎಸ್‌ಕೆ ವೇಗಿ ಖಲೀಲ್ ಅಹ್ಮದ್‌ಗೆ ಗಾಯ. -
ನವದೆಹಲಿ: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ (CSK vs KKR) ವೇಳೆ ಗಾಯಕ್ಕೆ ತುತ್ತಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಖಲೀಲ್ ಅಹ್ಮದ್ (Khaleel Ahmed) ಅವರು 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಿಂದ ಹೊರ ನಡೆದಿದ್ದಾರೆಂದು ವರದಿಯಾಗಿದೆ. ಇದರ ಪರಿಣಾಮ ಈಗ ತಾನೆ ಸತತ ಎರಡು ಪಂದ್ಯಗಳನ್ನು ಗೆದ್ದಿದ್ದ ಸಿಎಸ್‌ಕೆಗೆ ಕೀ ವೇಗಿಯನ್ನು ಕಳೆದುಕೊಳ್ಳುವ ಮೂಲಕ ಭಾರಿ ಹಿನ್ನಡೆಯನ್ನು ಅನುಭವಿಸಿದೆ. ಏಪ್ರಿಲ್ 14 ರಂದು ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಅವರು ಗಾಯಕ್ಕೆ ತುತ್ತಾಗಿದ್ದರು.
ಚೆಪಾಕ್‌ನಲ್ಲಿ ಕೆಕೆಆರ್ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಈ ಗಾಯ ಸಂಭವಿಸಿದ್ದು, ತಕ್ಷಣವೇ ಸಿಎಸ್‌ಕೆ ಶಿಬಿರದಲ್ಲಿ ಆತಂಕವನ್ನು ಉಂಟುಮಾಡಿತ್ತು. ಖಲೀಲ್ ಅಹ್ಮದ್ ಅವರ ತೊಡೆ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದು ಇದರಿಂದ ಗುಣಮುಖರಾಗಲು ಅವರು ದೀರ್ಘಕಾಲ ಮೈದಾನದಿಂದ ದೂರ ಉಳಿಯಬೇಕಾಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ಮಾಹಿತಿ ಕಲೆ ಹಾಕಿ ಇಂಡಿಯಾ ಟುಡೇ ವರದಿ ಮಾಡಿದೆ.
ವೈದ್ಯಕೀಯ ಪರೀಕ್ಷೆಗಳು ಗಾಯದ ಗಂಭೀರತೆಯನ್ನು ದೃಢಪಡಿಸಿದ್ದು, ಖಲೀಲ್ ಅಹ್ಮದ್ ಅವರಿಗೆ ಗ್ರೇಡ್- 2 ಟಿಯರ್ ಎಂದು ನಿರ್ಣಯಿಸಲಾಗಿದೆ. ಈ ಗಾಯವನ್ನು high-grade partial tear ಎಂದು ವಿವರಿಸಲಾಗಿದ್ದು, ಬಲ ಗಾಲಿನ rectus femoris tendon ನಲ್ಲಿ ಸ್ಟ್ರೆಚ್ ಇಂಜುರಿ ಉಂಟಾಗಿದೆ. ಜೊತೆಗೆ, ಆ ಸ್ನಾಯುವಿನ ಮೇಲ್ಭಾಗ ಸಂಪೂರ್ಣವಾಗಿ ಹರಿದು ಹೋಗಿರುವುದಾಗಿ ತಿಳಿಸಲಾಗಿದೆ.
10 ರಿಂದ 12 ವಾರಗಳ ಕಾಲ ಖಲೀಲ್ ಅಹ್ಮದ್ ಔಟ್
ಗಾಯದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಖಲೀಲ್ ಅಹ್ಮದ್ ಅವರಿಗೆ ದೀರ್ಘಕಾಲ ಪುನಶ್ಚೇತನದ ಅವಧಿಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದು, ಚೇತರಿಕೆಗಾಗಿ ಸುಮಾರು 10ರಿಂದ 12 ವಾರಗಳ ಕಾಲ ಬೇಕಾಗುತ್ತದೆ. ಇದರಿಂದ ಅವರು 2026ರ ಐಪಿಎಲ್ ಟೂರ್ನಿಯ ಇನ್ನುಳಿದ ಭಾಗಕ್ಕೆ ಲಭ್ಯರಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಗಾಯದಿಂದ ಸಿಎಸ್‌ಕೆ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಈ ಸೀಸನ್‌ನಲ್ಲಿ ಚೆನ್ನೈ ತಂಡದ ಎಲ್ಲಾ 5 ಪಂದ್ಯಗಳಲ್ಲೂ ಆಡಿದ್ದ ಖಲೀಲ್, ತಂಡದ ವೇಗದ ಬೌಲಿಂಗ್ ಘಟಕದಲ್ಲಿ ಪ್ರಮುಖ ಪಾತ್ರವಹಿಸಿದ್ದರು.
IPL 2026 Points table: ಲಖನೌ ಎದುರು ದೊಡ್ಡ ಗೆಲುವಿನ ಬಳಿಕ ಅಗ್ರ ಸ್ಥಾನಕ್ಕೆ ಮರಳಿದ ಆರ್‌ಸಿಬಿ!
ಖಲೀಲ್ ಅಹ್ಮದ್ ಹೇಗೆ ಗಾಯಕ್ಕೆ ತುತ್ತಾದರು?
ಸಿಎಸ್‌ಕೆ ಹಾಗೂ ಕೆಕೆಆರ್ ನಡುವಣ ಪಂದ್ಯದ ಎರಡನೇ ಇನಿಂಗ್ಸ್‌ನ 17ನೇ ಓವರ್ ಖಲೀಲ್ ಅಹ್ಮದ್ ಅವರಿಗೆ ಗಾಯ ಸಂಭವಿಸಿತ್ತು. ಆ ಓವರ್‌ನ ಕೊನೆಯ ಬಾಲ್ ಎಸೆಯಲು ಓಡಿಬರುತ್ತಿದ್ದಾಗ, ಅವರಿಗೆ ಬಲ ತೊಡೆ ಭಾಗದಲ್ಲಿ ನೋವು ಕಾಣಿಸಿಕೊಂಡಿತು. ಅವರು ಆಟ ಮುಂದುವರಿಸಲು ಪ್ರಯತ್ನಿಸಿದರೂ, ನೋವು ಹೆಚ್ಚಾಗಿ ಮಧ್ಯದಲ್ಲೇ ನಿಲ್ಲಬೇಕಾಯಿತು ಮತ್ತು ವೈದ್ಯಕೀಯ ಸಹಾಯವನ್ನು ಕೋರಿದರು.
ಅವರು ತಮ್ಮ ಓವರ್ ಾನ್ನು ಪೂರ್ಣಗೊಳಿಸಲು ಸಾಧ್ಯವಾಗದೇ ಮೈದಾನವನ್ನು ತೊರೆದಾಗ ಪರಿಸ್ಥಿತಿ ಸ್ಪಷ್ಟವಾಯಿತು. ಬಳಿಕ ಆ ಓವರ್ ಅನ್ನು ಪೂರ್ಣಗೊಳಿಸಲು ಗರ್ಜಪ್‌ನೀತ್ ಸಿಂಗ್ ಅವರನ್ನು ಕರೆತರಲಾಯಿತು. ಅವರು ಒಂದು ಬೌಂಡರಿ ನೀಡಿದ ಪರಿಣಾಮ ಸಿಎಸ್‌ಕೆ ತಂಡದ ಯೋಜನೆಗಳಿಗೆ ವ್ಯತ್ಯಯ ಉಂಟಾಯಿತು. ಗಾಯಕ್ಕೂ ಮುನ್ನ ಖಲೀಲ್ ಆ ಪಂದ್ಯದಲ್ಲಿ ಸಿಎಸ್‌ಕೆಯ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು.