ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ನಿಜವಾದ ಭಕ್ತಿ ಇರುವಲ್ಲಿದೆ ಭಗವಂತನ ಸಾನಿಧ್ಯ

ಒಬ್ಬ ಭಕ್ತನು ಬಂದು ಲೌಕಿಕವಾದ ಯಾವುದನ್ನೂ ಕೇಳದೆ ಕೇವಲ ಭಕ್ತಿಯನ್ನು ಯಾಚಿಸಿ ದನು. ಆಶ್ಚರ್ಯವೆನಿಸುವಂತೆ ಕೃಷ್ಣನ ಪ್ರತಿಕ್ರಿಯೆ ಬೇರೆಯಿತ್ತು. ಕೃಷ್ಣ ಪರಮಾತ್ಮ ಆ ಆಸೆಯನ್ನು ತಕ್ಷಣ ಮನ್ನಿಸದೆ, ಅವನನ್ನು ಅ ಪಕ್ಕದಲ್ಲಿ ಕಾಯಲು ಹೇಳಿದ. ಇದನ್ನು ಕಂಡ ನಾರದಮುನಿಗೆ ಗೊಂದಲ ವಾಯಿತು. ಅವರು ಸ್ವಲ್ಪ ತಡೆದು ಸಂಕೋಚದಿಂದಲೇ ಕೇಳಿದರು: “ಭಗವಂತಾ, ಇತರರ ಎಲ್ಲಾ ಬೇಡಿಕೆ ಗಳನ್ನು ತಕ್ಷಣ ಈಡೇರಿಸುತ್ತೀರಿ, ಆದರೆ ಕೇವಲ ಭಕ್ತಿಯನ್ನು ಕೇಳುವವರನ್ನು ಏಕೆ ಕಾಯಿಸುತ್ತೀರಿ?".

Roopa Gururaj Column: ನಿಜವಾದ ಭಕ್ತಿ ಇರುವಲ್ಲಿದೆ ಭಗವಂತನ ಸಾನಿಧ್ಯ

-

ಒಂದೊಳ್ಳೆ ಮಾತು

ಒಮ್ಮೆ ಶ್ರೀಕೃಷ್ಣ ಪರಮಾತ್ಮ ಮತ್ತು ಅವನ ವಿಶೇಷ ಭಕ್ತನಾದ ನಾರದ ಮುನಿ ಆಪ್ತ ಸಮಾಲೋ ಚನೆಯಲ್ಲಿ ಕುಳಿತಿದ್ದರು. ಆ ದಿನ ನಾರದಮುನಿ ಶ್ರೀಕೃಷ್ಣನ ಪಕ್ಕದ ಕೂತು, ಜನರು ತಮ್ಮ ತಮ್ಮ ಬೇಡಿಕೆಗಳನ್ನು ಹೇಳಿಕೊಳ್ಳಲು ಹೇಗೆ ಬರುತ್ತಾರೆ ಎಂಬುದನ್ನು ಗಮನಿಸುತ್ತಿದ್ದರು. ನಾರದರಿಗೆ ಇದೊಂದು ವಿಶೇಷ ಅನುಭವವಾಗಿತ್ತು. ಒಬ್ಬೊಬ್ಬರಂತೆ ಜನರು ಬಂದು, ಕೃಷ್ಣ ಪರಮಾತ್ಮನ ಮುಂದೆ ತಮ್ಮ ಐಹಿಕ ಶ್ರೇಯೋಭಿಲಾಷೆಗಳನ್ನು ಅರುಹುತ್ತಿದ್ದರು.

ದೂರದ ದೇಶಕ್ಕೆ ಹೋಗಲು ಅವಕಾಶ ಬೇಕೆಂದು ಒಬ್ಬ ಕೇಳಿದನು; ಕೃಷ್ಣನು ಕೂಡಲೇ ಅವನಿಗೆ ಆ ವರವನ್ನು ಕರುಣಿಸಿದನು. ಇನ್ನೊಬ್ಬನು ತನಗಾಗಿ ಹೊಸ ಮನೆಯನ್ನು ಬೇಡಿಕೊಂಡನು; ಕೃಷ್ಣನು ಅದನ್ನೂ ನೀಡಿದನು. ಮತ್ತೊಬ್ಬನು ಕುಸಿಯುತ್ತಿರುವ ತನ್ನ ವ್ಯಾಪಾರದ ಚಿಂತೆಯಲ್ಲಿದ್ದನು.

ಕೃಷ್ಣನು ಅವನ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿದನು. ಜನರು ಏನೇ ಕೇಳಿದರೂ, ಕೃಷ್ಣನು ತಕ್ಷಣವೇ ಅವರ ಐಹಿಕ ಆಸೆಗಳನ್ನು ನೆರವೇರಿಸುತ್ತಿದ್ದನು. ನಾರದರು ಹತ್ತಿರದಲ್ಲೇ ಕುಳಿತು, ಇದೆಲ್ಲವನ್ನೂ ನೋಡುತ್ತಾ, ಭಗವಂತನ ಕೃಪೆಗೆ ಸಂತೋಷಪಡುತ್ತಾ ಇದ್ದರು.

ಇದನ್ನೂ ಓದಿ: Roopa Gururaj Column: ರೈತನ ನಿಷ್ಕಲ್ಮಶ ಭಕ್ತಿಗೆ ಒಲಿದ ಠಾಕುರ್‌ ಜೀ

ಆದರೆ, ಒಬ್ಬ ಭಕ್ತನು ಬಂದು ಲೌಕಿಕವಾದ ಯಾವುದನ್ನೂ ಕೇಳದೆ ಕೇವಲ ಭಕ್ತಿಯನ್ನು ಯಾಚಿಸಿ ದನು. ಆಶ್ಚರ್ಯವೆನಿಸುವಂತೆ ಕೃಷ್ಣನ ಪ್ರತಿಕ್ರಿಯೆ ಬೇರೆಯಿತ್ತು. ಕೃಷ್ಣ ಪರಮಾತ್ಮ ಆ ಆಸೆಯನ್ನು ತಕ್ಷಣ ಮನ್ನಿಸದೆ, ಅವನನ್ನು ಅ ಪಕ್ಕದಲ್ಲಿ ಕಾಯಲು ಹೇಳಿದ. ಇದನ್ನು ಕಂಡ ನಾರದಮುನಿಗೆ ಗೊಂದಲವಾಯಿತು. ಅವರು ಸ್ವಲ್ಪ ತಡೆದು ಸಂಕೋಚದಿಂದಲೇ ಕೇಳಿದರು: “ಭಗವಂತಾ, ಇತರರ ಎಲ್ಲಾ ಬೇಡಿಕೆ ಗಳನ್ನು ತಕ್ಷಣ ಈಡೇರಿಸುತ್ತೀರಿ, ಆದರೆ ಕೇವಲ ಭಕ್ತಿಯನ್ನು ಕೇಳುವವರನ್ನು ಏಕೆ ಕಾಯಿಸುತ್ತೀರಿ?". ಕೃಷ್ಣನು ಮಂದಹಾಸ ಚೆಲ್ಲುತ್ತಾ ಹೇಳಿದ: “ನಾರದರೆ, ಲೌಕಿಕ ವರಗಳನ್ನು ನಾನು ಸುಲಭವಾಗಿ ಕೊಡುತ್ತೇನೆ, ಯಾಕೆಂದರೆ ಅವು ನನ್ನನ್ನು ಬಂಧಿಸುವುದಿಲ್ಲ. ಆದರೆ ಭಕ್ತಿ ಬೇರೆಯದು.

ಯಾಚಿಸುವವರಿಗೆ ನಿಜವಾದ ಭಕ್ತಿಯನ್ನು ಕೊಟ್ಟರೆ, ನಂತರ ನಾನು ಅವರ ದಾಸನಾಗಿ ಹೋಗು ತ್ತೇನೆ. ಅಂಥ ಅಪರೂಪದ ವರವನ್ನು ನೀಡುವ ಮೊದಲು, ಅವರು ನಿಜವಾಗಿಯೂ ಅದಕ್ಕೆ ಅರ್ಹರೇ? ಎಂಬುದನ್ನು ಪರೀಕ್ಷಿಸಬೇಕು. ಏಕೆಂದರೆ, ಭಕ್ತಿಯನ್ನು ನೀಡಿದ ಕ್ಷಣದಿಂದ ನಾನು ಆ ಭಕ್ತನಿಗೆ ಸದಾ ಬದ್ಧನಾಗಿಬಿಡುತ್ತೇನೆ".

ಕೃಷ್ಣನ ಈ ಮಾತುಗಳು ಮಹರ್ಷಿ ನಾರದರ ಎದುರು ಪರಮಸತ್ಯವನ್ನು ಅನಾವರಣಗೊಳಿಸಿದ್ದವು. ಭಕ್ತಿಯು ಸುಲಭವಾಗಿ ದೊರೆಯುವ ವರವಲ್ಲ. ಅದು ಅಪರೂಪದ ರತ್ನ, ದಿವ್ಯಕೃಪೆಯ ಫಲ.

ಅನೇಕ ವರ್ಷಗಳ ಸಾಧನೆಯ ನಂತರವೂ ನಿಜವಾದ ಭಕ್ತಿ ಲಭ್ಯವಾಗುವುದು ಅತ್ಯಂತ ವಿರಳ. ಭಕ್ತಿ ಎಂದರೆ ಬೇಡಿಕೆ ಇಟ್ಟಂತೆ ದೊರೆಯುವಂಥದ್ದಲ್ಲ; ಅದು ಭಗವಂತನನ್ನು ಭಕ್ತನಿಗೆ ಶಾಶ್ವತವಾಗಿ ಕಟ್ಟಿ ಹಾಕುವ ಪರಮಕೃಪೆ. ಭಕ್ತಿ ದೊರೆಯಲು ಮನಸ್ಸು ಸಂಪೂರ್ಣವಾಗಿ ಶರಣಾಗಿರಬೇಕು, ಐಹಿಕ ಆಸೆಯ ಗದ್ದಲಗಳಿಂದ ಮುಕ್ತವಾಗಿರಬೇಕು. ಅದು ದೊರೆತಾಗ, ದೇವರ ಮತ್ತು ಭಕ್ತನ ನಡುವಿನ ಪ್ರೀತಿ ಮತ್ತು ಸೇವೆಯ ಬಾಂಧವ್ಯ ಶಾಶ್ವತವಾಗುತ್ತದೆ. ನಾವೆಲ್ಲರೂ ಭಗವಂತನೊಂದಿಗೆ ಅನುಸಂಧಾನ ಮಾಡುವುದನ್ನೇ ಮರೆತು ಕೇವಲ ನಮ್ಮ ಲೌಕಿಕ ಅಗತ್ಯಗಳಿಗಾಗಿ ಅವನನ್ನು ಸದಾ ಬೇಡಿಕೊಳ್ಳುತ್ತಿರುತ್ತೇವೆ.

ನಿಜವಾದ ಭಕ್ತಿ, ಸಮರ್ಪಣಾ ಭಾವ ಇದ್ದಾಗ ನಾವು ನಮ್ಮನ್ನು ಅವನಿಗೆ ಅರ್ಪಿಸಿಕೊಂಡರೆ ಆಯಿತು. ಅಲ್ಲಿ ಅವನನ್ನು ಕೇಳಿಕೊಳ್ಳುವ ಪ್ರಮೇಯವೇ ಇರುವುದಿಲ್ಲ. ಅವನು ಸದಾ ನಮ್ಮೊಡ ನಿದ್ದು ನಮ್ಮೆಲ್ಲ ಕಷ್ಟ ಸುಖಗಳನ್ನು ತನ್ನದಾಗಿಸಿಕೊಂಡು ನಮ್ಮನ್ನು ಸದಾ ಕಾಯು ತ್ತಿರುತ್ತಾನೆ.

ಇದು ಅವನಲ್ಲಿ ದೃಢವಾದ ನಂಬಿಕೆ ಮತ್ತು ಅಪರಿಮಿತವಾದ ಭಕ್ತಿ ಇದ್ದಾಗ ಮಾತ್ರ ಸಾಧ್ಯ. ಭಗವಂತನ ಅನನ್ಯ ಅನುಗ್ರಹವಿzಗ ಜೀವನದ ಪ್ರತಿಯೊಂದು ಕಷ್ಟ-ಕೋಟಲೆಗಳೂ ಮರೆಯಾಗಿ, ಅಂದುಕೊಂಡ ಕೆಲಸವು ಹೂವೆತ್ತಿದಂತೆ ಸರಾಗವಾಗಿ ನಡೆಯುತ್ತಾ ಹೋಗುತ್ತದೆ.

ಆದ್ದರಿಂದಲೇ ಕ್ಷಣಿಕ ಸುಖಗಳಿಗಾಗಿ ಬೇಡಿಕೊಳ್ಳುವ ಬದಲು ಭಗವಂತನ ನಿರಂತರ ಅನುಗ್ರಹಕ್ಕಾಗಿ ನಮ್ಮನ್ನು ನಾವು ಭಕ್ತಿಯಿಂದ ಅವನಿಗೆ ಸಮರ್ಪಿಸಿಕೊಳ್ಳೋಣ. ಶ್ರೀಕೃಷ್ಣಾರ್ಪಣಮಸ್ತು....