Vinayak V Bhat Column: ನರೆದಲೆಗ ಮತ್ತು ವ್ರಿಹಿಗಗಳಲ್ಲಿ ಶ್ರೇಷ್ಠರು ಯಾರು ?
ಕೃಶಕಾಯನಿಗೆ ಅವನದ್ದೇ ಆದ ಆನುಕೂಲ್ಯಗಳಿದ್ದರೆ, ಪೀನ ದೇಹವಂತನಿಗೆ ಅವನದ್ದೇ ಆದ ಸೌಲಭ್ಯ ಗಳಿವೆ. ಹಾಗಾಗಿಯೇ, ಎಲ್ಲವನ್ನೂ ಪಕ್ಷಿನೋಟದಿಂದ, ಅಂದರೆ ಎತ್ತರದಿಂದ ನೋಡು ವವರಿಗೆ ಸಮಾಜದಲ್ಲಿ ಯಾವ ಅಸಮಾನತೆಗಳೂ ಕಾಣದೇ, ಎಲ್ಲವೂ ಭವ್ಯವವಾಗಿಯೂ ಸುಂದರವಾಗಿಯೂ ಗೋಚರಿಸುತ್ತವೆ.


ವಿದ್ಯಮಾನ
ಆ ಜಾತಿ-ಧರ್ಮ ಹೆಚ್ಚು, ಈ ಜಾತಿ-ಧರ್ಮ ಕಡಿಮೆ’, ‘ಸ್ತ್ರೀ ಅಬಲೆ, ಪುರುಷ ಸಬಲ’, ‘ಕಪ್ಪು ತಿರಸ್ಕಾ ರಾರ್ಹ, ಬಿಳಿ ಸ್ವೀಕಾರಾರ್ಹ’, ‘ದಪ್ಪ ಎನ್ನುವುದು ನಿರಾಕರಣೀಯ, ಸಪೂರ ಎನ್ನುವುದು ಆಕರ್ಷಣೀಯ’, ‘ಶ್ರೀಮಂತ-ಬಡವ’, ‘ವಿದ್ಯಾವಂತ-ಅವಿದ್ಯಾವಂತ’, ‘ರಸಿಕ-ಅರಸಿಕ’ ಹೀಗೆ ಹತ್ತು ಹಲವು ವಿರೋಧಾಭಾಸಗಳು ಮತ್ತು ಅಸಮತೋಲನಗಳು ಎಲ್ಲ ಸಮಾಜಗಳಲ್ಲೂ ಇದ್ದೇ ಇವೆ.
ಸಮಾಜ ಸಮವಾಗಿಲ್ಲ ಮತ್ತು ಇರುವುದಕ್ಕೆ ಸಾಧ್ಯವೂ ಇಲ್ಲ. ಇದ್ದದ್ದನ್ನು ಇದ್ದ ಹಾಗೆ ಸ್ವೀಕರಿಸುವ ಮನಸ್ಸಿರುವವ ಮಾತ್ರ ಇಂಥ ವೈರುಧ್ಯಗಳಿಂದ ಕೂಡಿದ ಸಮಾಜದಲ್ಲೂ ಸುಖಿಯಾಗಿ ಬದುಕಬಲ್ಲ ಎಂಬುದು ನಮಗೆ ಪ್ರಾಚೀನರು ಹೇಳಿಕೊಟ್ಟ ಪಾಠ ತಾನೇ? ಬಿಳಿಬಣ್ಣಕ್ಕೆ ಅದರದ್ದೇ ಆದ ಹೆಚ್ಚುಗಾರಿಕೆಯಾದರೆ, ಕಪ್ಪು ಬಣ್ಣಕ್ಕೆ ಅದರದ್ದೇ ಸತ್ವ-ಪ್ರಾಮುಖ್ಯವಿದೆ.
ಕೃಶಕಾಯನಿಗೆ ಅವನದ್ದೇ ಆದ ಆನುಕೂಲ್ಯಗಳಿದ್ದರೆ, ಪೀನ ದೇಹವಂತನಿಗೆ ಅವನದ್ದೇ ಆದ ಸೌಲಭ್ಯಗಳಿವೆ. ಹಾಗಾಗಿಯೇ, ಎಲ್ಲವನ್ನೂ ಪಕ್ಷಿನೋಟದಿಂದ, ಅಂದರೆ ಎತ್ತರದಿಂದ ನೋಡು ವವರಿಗೆ ಸಮಾಜದಲ್ಲಿ ಯಾವ ಅಸಮಾನತೆಗಳೂ ಕಾಣದೇ, ಎಲ್ಲವೂ ಭವ್ಯವವಾಗಿಯೂ ಸುಂದರ ವಾಗಿಯೂ ಗೋಚರಿಸುತ್ತವೆ.
ವಾಸ್ತವವಾಗಿ ಯಾವುದೂ ಹೆಚ್ಚಲ್ಲ, ಕಡಿಮೆಯೂ ಅಲ್ಲ. ಅವುಗಳ ಸರಿಯಾದ ಬಳಕೆ ಅಥವಾ ಉಪಯೋಗ ಗೊತ್ತಿರಬೇಕಷ್ಟೇ. ಹಾಗಾದಾಗ ಎಲ್ಲವೂ ಉಪಯುಕ್ತವೇ ಆಗಿರುತ್ತದೆ. “ಅಮಂತ್ರ ಮಕ್ಷರಂ ನಾಸ್ತಿ ನಾಸ್ತಿ ಮೂಲಮನೌಷಧಂ ಅಯೋಗ್ಯಃ ಪುರುಷೋ ನಾಸ್ತಿ ಯೋಜಕಸ್ತತ್ರ ದುರ್ಲಭಃ" ಎಂಬ ಸುಭಾಷಿತದಂತೆ, ಮಂತ್ರಸಮಾನವಲ್ಲದ ಯಾವ ಅಕ್ಷರವೂ ಇಲ್ಲ. ಅಂದರೆ, ಅವುಗಳನ್ನು ಸರಿಯಾಗಿ ಸಂಯೋಜಿಸಿದರೆ, ಪ್ರತಿ ಅಕ್ಷರಕ್ಕೂ ಮಂತ್ರದ ಸ್ಥಾನವಿದೆ.
ಇದನ್ನೂ ಓದಿ: Vinayaka V Bhat Column: ನೀತಿಯುತ ರಾಮಪಥ, ಇಂದಿಗೂ ಪ್ರಸ್ತುತ
‘ಇದು ಔಷಧಕ್ಕಾಗದು’ ಎನ್ನುವಂಥ ಯಾವ ಬೇರು-ಬಗಟೆಯೂ ಭೂಮಿಯಲ್ಲಿಲ್ಲ; ನಮಗೆ ಅವುಗಳ ಬಳಕೆ ಗೊತ್ತಿಲ್ಲವಷ್ಟೇ. ಹಾಗೆಯೇ, ಸೃಷ್ಟಿಯಲ್ಲಿ ಯಾವ ವ್ಯಕ್ತಿಗಳೂ ಅಯೋಗ್ಯರಲ್ಲ, ಎಲ್ಲರಲ್ಲೂ ಒಂದಲ್ಲಾ ಒಂದು ವಿಶೇಷ ಕ್ಷಮತೆ ಇದ್ದೇ ಇರುತ್ತದೆ. ಆದರೆ ಇದನ್ನೆಲ್ಲ ಅರಿತು ಸಮರ್ಥವಾಗಿ ಬಳಸುವ ಯೋಜಕರು ದುರ್ಲಭ ಎನ್ನುತ್ತದೆ ಈ ಸಂಸ್ಕೃತ ಶ್ಲೋಕ. ಹೀಗೆ, ಒಂದು ವಸ್ತುವಿನ ಸಾರ-ಸತ್ವವನ್ನು ಅರಿತು, ಅವನ್ನು ಎಲ್ಲಿ ಎಷ್ಟು ಬೇಕೋ ಅಷ್ಟನ್ನು ಸಮಾಜದ ಒಳಿತಿಗೆ ನಿಯೋಜಿಸುವ ಯೋಜಕನೊಬ್ಬ ಸಮಾಜದಲ್ಲಿ ಆಗಾಗ ಹುಟ್ಟಿಬರುತ್ತಿದ್ದರೆ, ಸಮಾಜ ಎಲ್ಲದ ರಿಂದಲೂ ಪ್ರಯೋಜನ ಪಡೆದು ಸರ್ವಸುಂದರವಾಗಿ ಕಂಗೊಳಿಸಬಹುದು ಎನ್ನುವುದು ಈ ಶ್ಲೋಕದ ನೀತಿ.
ಇನ್ನು, ಈ ಡೊಂಕುಗಳನ್ನು ಕೊಂಚವಾದರೂ ತಿದ್ದಿ ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದವರನ್ನು ಎತ್ತಿ ಹಿಡಿಯಲೆಂದು ನಮ್ಮ ದೇಶದ ಅನೇಕ ಜಾನಪದರು, ಸಾಹಿತಿಗಳು, ಹರಿದಾಸರು, ವಚನ ಕಾರರು ಶ್ರಮಿಸಿದ್ದಾರೆ; ಕುಲ, ವರ್ಗ, ವರ್ಣ, ಜಾತಿ ಮುಂತಾದವುಗಳಿಂದ ಉಂಟಾಗುವ ತಾರತಮ್ಯ ವನ್ನು ನಿವಾರಿಸಿ, ಸಮಾಜವನ್ನು ಸುಧಾರಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ ಮತ್ತು ಇಲ್ಲಿ ಯಾವುದೂ ‘ಹೆಚ್ಚು-ಕಡಿಮೆ’ ಎನ್ನುವಂಥದ್ದಿಲ್ಲ.
ಅವಕ್ಕೆ ಅವುಗಳದ್ದೇ ಆದ ಪ್ರಯೋಜನವಿದೆ. ಮಿತವಾಗಿ ಬಳಸಿದರೆ ಪಾಷಾಣವೂ (ವಿಷವೂ) ಅನೇಕ ರೋಗಗಳಿಗೆ ಭೇಷಜ (ಔಷಧ) ಆಗಬಲ್ಲದು, ಅತಿಯಾದರೆ ಅಮೃತವೂ ವಿಷವಾಗುವುದು ಎಂದು ತೋರಿಸಿಕೊಟ್ಟಿದ್ದಾರೆ. ‘ಕಾವ್ಯಾನಂದ’ ಎಂಬ ನಾಮದಿಂದ ಬರೆಯುತ್ತಿದ್ದ ಸಿದ್ಧಯ್ಯ ಪುರಾಣಿಕರು ‘ಪೂರ್ವಾಂಗನೆ ಪಶ್ಚಿಮಾಂಗನೆಗೆ’ ಎಂಬ ತಮ್ಮ ಕಾವ್ಯದಲ್ಲಿ, ಕಪ್ಪು ಮತ್ತು ಬಿಳಿ ಬಣ್ಣದ ಗೆಳತಿಯರ ನಡುವೆ ನಡೆಯುವ ಸಂಭಾಷಣೆಯ ಮುಖಾಂತರ, ಕಪ್ಪು-ಬಿಳುಪಿನ ನಡುವೆ ದೂಷಿತವಾದ ಕಪ್ಪಿನ ಹೆಚ್ಚುಗಾರಿಕೆಯನ್ನು ಎತ್ತಿ ತೋರಿಸಿದ್ದಾರೆ.

ಬಿಳಿ ಹುಡುಗಿಯು ಯಾವ ರೀತಿಯಲ್ಲಿ ಹೆಚ್ಚಿನವಳು? ಕಪ್ಪು ಹುಡುಗಿಯ ಬಣ್ಣ ಕಪ್ಪಾದರೂ ಅವಳ ಸತ್ವವೇನು? ಎನ್ನುವುದನ್ನು ಪುರಾಣಿಕರು ಕಪ್ಪು ಹುಡುಗಿಯ ಮೂಲಕ ಮಾರ್ಮಿಕವಾಗಿ ಹೀಗೆ ಹೇಳಿಸುತ್ತಾರೆ- “ನಾ ಕರಿಯಳೆಂದು ನೀ ಜರಿಯಬೇಡ ಬಿಳಿ ಗೆಳತಿ ಗರ್ವದಿಂದ, ಕಪ್ಪಿಗಿಂತ ಬಿಳಿ ಬಣ್ಣ ಹೆಚ್ಚು ಹೇಳು ಯಾವ ಹಿರಿಮೆಯಿಂದ? ಬಿಳಿಯ ಮೋಡ ನೀಡುವುದು ಇಳೆಗೆ ಬರಿ ಬೆಡಗು ಅಂದ ಚೆಂದ, ಇಳೆಯ ಜೀವ ಮಳೆ ಬರುವುದಕ್ಕ ಕರಿ ಮೋಡ ಮಾತ್ರದಿಂದ.
ಕಣ್ಗೆ ನೋಟ ಕರಿಯಾಲಿಯಿಂದಲೆ, ಕುರುಡು ಬರಿಯ ಬಿಳುಪು, ಬಿಳಿಯ ಕೇಶಗಳೆ ಮುಪ್ಪು, ಯೌವನದ ವಿಜಯ ಧ್ವಜವು ಕಪ್ಪು. ಕಪ್ಪು ಭೂಮಿಯಲೆ ಬೆಳೆಯ ಬೇಕು ನೀ ತೊಟ್ಟ ನೂಲ ಬಿಳುಪು, ಬಿಳಿಯ ಮಂಜಿನಲಿ ಬೆಳೆಯಬಹುದೆ? ಬೆಳೆಯುವುದು ಎಲ್ಲ ಕಪ್ಪು. ನೀ ಬಿಳಿಯ ಹಾಳೆ, ನಾ ಕರಿಯ ಮಸಿಯು, ಆಗೋಣ ಪ್ರೇಮಕವನ. ದೇಹಕ್ಕೆ ಬಣ್ಣ, ದೇಶಕ್ಕೆ ಬಣ್ಣ, ಆತ್ಮಕ್ಕೆ ಯಾವ ಬಣ್ಣ? ಈ ವರ್ಣ ಮೈತ್ರಿ ಅನಿವಾರ್ಯ ಗೆಳತಿ ಸರ್ವತ್ರ ವಿಶ್ವ ಪ್ರಕೃತಿ ತೋರುವುದು ಇದನೆ, ಸಾರುವುದು ಇದನೆ, ಇದೆ ನೋಡು ಅದರ ನೀತಿ... ಹೊತ್ತಾರೆ ಕೆಂಪು, ಮತ್ತಷ್ಟು ಹಳದಿ, ಹೊತ್ತೇರೆ ಬಿಳುಪು ಗೆಳತಿ. ನಿನ್ನಂದ ಬಿಳುಪು, ಇದೋ ನೆರಳು ಕಪ್ಪು, ಎಲ್ಲಿಹುದು ವೈರ ಗೆಳತಿ?".
ಈ ವರ್ಣವೈವಿಧ್ಯವನ್ನು ವೇದಾಂತದ ಸ್ತರಕ್ಕೆ ಏರಿಸಿ, “ದೇಹಕ್ಕೆ ಬಣ್ಣ, ದೇಶಕ್ಕೆ ಬಣ್ಣ, ಆತ್ಮಕ್ಕೆ ಯಾವ ಬಣ್ಣ?" ಎನ್ನುವ ಮೂಲಕ ಮೂಲದಲ್ಲಿ ಅಸಮಾನತೆ ಎನ್ನುವುದಿಲ್ಲ ಎಂದಿರುವುದು ಮತ್ತು “ನೀ ಬಿಳಿಯ ಹಾಳೆ, ನಾ ಕರಿಯ ಮಸಿಯು, ಆಗೋಣ ಪ್ರೇಮಕವನ" ಎನ್ನುವ ಸಾಮರಸ್ಯದ ಮಾತು ಮತ್ತು “ಈ ವರ್ಣಮೈತ್ರಿ ಅನಿವಾರ್ಯ ಗೆಳತಿ, ಸರ್ವತ್ರ ವಿಶ್ವಪ್ರಕೃತಿ ತೋರುವುದು ಇದನೆ, ಸಾರುವುದು ಇದನೆ, ಇದೆ ನೋಡು ಅದರ ನೀತಿ" ಎಂದು ಸಾಮರಸ್ಯದ ಅನಿವಾರ್ಯತೆಯನ್ನು ಹೇಳಿರುವುದು ಬಹಳ ಅರ್ಥಪೂರ್ಣವಾಗಿದೆ.
80ರ ದಶಕದ ‘ಲಾವಾರಿಸ್’ ಸಿನಿಮಾದ “ಮೇರೆ ಅಂಗನೇಮೆ ತುಮ್ಹಾರಾ ಕ್ಯಾ ಕಾಮ್ ಹೈ“ ಎಂಬ ಪ್ರಸಿದ್ಧ ಹಾಡನ್ನು ನೀವು ಕೇಳಿರುತ್ತೀರಿ. ಅಮಿತಾಭ್ ಬಚ್ಚನ್ ಅವರು ತಮ್ಮ ತಂದೆ ಹರಿವಂಶ ರಾಯ್ ಬಚ್ಚನ್ ಅವರು ರಚಿಸಿದ ಈ ಹಾಡನ್ನು ತಮ್ಮದೇ ಆದ ನಾಟ್ಯಶೈಲಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಈ ಹಾಡಿನಲ್ಲೂ, ಎಲ್ಲದರಲ್ಲಿ ಅಡಗಿರುವ ಪ್ರಯೋಜಕತೆ ಮತ್ತು ಬಳಕೆಯ ಕುರಿತಾಗಿಯೇ ಸ್ವಲ್ಪ ವಿಡಂಬನಾತ್ಮಕವಾಗಿ ಹೀಗೆ ಹೇಳಲಾಗಿದೆ: “ಹೆಂಡತಿ ಕಪ್ಪಗಿರುವಳೆಂದು ಬೇಸರಿಸುವ ಅಗತ್ಯವಿಲ್ಲ, ಅವಳನ್ನು ನಿಮ್ಮ ನಯನದೊಳಗಿಟ್ಟರೆ ನಿಮಗೆ ಕಾಡಿಗೆಯ ಅಗತ್ಯ ವಿರುವುದಿಲ್ಲ; ಹೆಂಡತಿ ಕುಳ್ಳಗಿದ್ದರೆ ಮಡಿಲಲ್ಲಿ ಕುಳ್ಳಿರಿಸಿಕೊಳ್ಳಿ, ನಿಮಗೆ ಮಕ್ಕಳ ಅಗತ್ಯ ಬರದು. ಹೆಂಡತಿ ದಪ್ಪಗಿದ್ದರೆ ಚಿಂತಿಸುವುದು ಬೇಡ, ಹಾಸಿಗೆಯಲ್ಲಿ ತಲೆದಿಂಬನ್ನು ಹುಡುಕುವ ಅಗತ್ಯ ವಿರುವುದಿಲ್ಲ. ಒಂದೊಮ್ಮೆ ಹೆಂಡತಿ ಬೆಳ್ಳಗಿದ್ದರೆ, ಅವಳನ್ನು ಕೋಣೆಯಲ್ಲಿರಿಸಿದರೆ ಅಲ್ಲಿ ವಿದ್ಯುದ್ದೀಪದ ಅಗತ್ಯ ಬರುವುದಿಲ್ಲ..".
ನಾನು ಮೊದಲೇ ಹೇಳಿದಂತೆ, ಈ ತಾರತಮ್ಯಗಳು ಮತ್ತು ಉಚ್ಚ-ನೀಚಗಳು, ಜಾತಿ-ಧರ್ಮ, ಕಪ್ಪು-ಬಿಳಿ, ದಪ್ಪ-ಸಪೂರ, ಶ್ರೀಮಂತ-ಬಡವ, ವಿದ್ಯಾವಂತ-ಅವಿದ್ಯಾವಂತ, ರಸಿಕ-ಅರಸಿಕ ಎನ್ನುವಲ್ಲಿಗೆ ನಿಲ್ಲುವುದಿಲ್ಲ. ಅವು ನಾವು ನಿತ್ಯ ಉಣ್ಣುವ ಆಹಾರ ಧಾನ್ಯಗಳಿಗೂ, ಉಡುವ ಬಟ್ಟೆಯವರೆಗೂ ವಿಸ್ತಾರವಾಗುತ್ತವೆ. ಧಾನ್ಯಗಳ ವಿಷಯದಲ್ಲೂ ಸಮಾಜದಲ್ಲಿ ಈಗಲೂ ಇಂಥ ಮೇಲು-ಕೀಳೆಂಬ ಭಾವನೆಯಿದೆ.
ರಾಗಿ ತಿನ್ನುವಾತ ಬಡವ, ಅಕ್ಕಿ ತಿನ್ನುವಾತ ಶ್ರೀಮಂತ. ಅದರಲ್ಲೂ, ಘಟ್ಟದ ಕೆಳಗಿನ ಕರಾವಳಿ ಪ್ರದೇಶದ ಕುಚಲಕ್ಕಿ (ಕೆಂಪಕ್ಕಿ) ಉಣ್ಣುವವರ ಮುಂದೆ, ಬಿಳಿ ಅಕ್ಕಿ ಉಣ್ಣುವ ಘಟ್ಟದ ಮೇಲಿನವರ ಹಮ್ಮು-ಬಿಮ್ಮುಗಳೇ ಬೇರೆ. ಹೀಗೆ ಹಿಂದಿನಿಂದಲೂ ಬಡವರ ಧಾನ್ಯವೆಂತಲೇ ಬಿರುದು ಹೊತ್ತಿರುವ ರಾಗಿಯ ಗುಣಗಳನ್ನು ಆದರಿಸಿ, ಅದು ಶ್ರೀಮಂತಿಕೆಯನ್ನು ಪ್ರತಿನಿಧಿಸುವ ಭತ್ತಕ್ಕಿಂತ ಹೇಗೆ ಶ್ರೇಷ್ಠ ಎಂದು ಸಾರುವ, ಕನ್ನಡಿಗರಿಗೆ ಅಷ್ಟೊಂದು ಪರಿಚಿತವಲ್ಲದ, ‘ರಾಮಧಾನ್ಯ ಚರಿತ್ರೆ’ ಎಂಬ ಕನಕ ದಾಸರ ಕಾವ್ಯವು ಅಪೂರ್ವವಾದುದಾಗಿದೆ.
ನಮ್ಮ ನೀತಿಕಥಾ ಪರಂಪರೆಯಲ್ಲಿ ಪ್ರಾಣಿ-ಪಿಶಾಚಿಗಳಿಂದ ಮಾತಾಡಿಸಿರುವುದನ್ನೂ ‘ಪಂಚತಂತ್ರ’, ‘ವಿಕ್ರಮ್ ಮತ್ತು ಬೇತಾಳ’ ಮುಂತಾದವುಗಳಲ್ಲಿ ನೋಡುತ್ತೇವೆ. ಆದರೆ, ಸಮಾಜದ ೨ ಸ್ತರಗಳನ್ನು ಪ್ರತಿನಿಽಸುವ ಭತ್ತ ಮತ್ತು ರಾಗಿಯಂಥ ಧಾನ್ಯಗಳನ್ನು ಮಾತನಾಡಿಸಿ, ಸಮಾಜಕ್ಕೆ ಉತ್ತಮ ಸಂದೇಶ ಸಾರುವ ‘ರಾಮಧಾನ್ಯ ಚರಿತ್ರೆ’ಯಂಥ ವಿಶಿಷ್ಟ ಕಾವ್ಯವು ಮತ್ತೊಂದು ಭಾಷೆಯಲ್ಲಿ ಸಿಗಲಿಕ್ಕಿಲ್ಲ.
‘ರಾಮಧಾನ್ಯ ಚರಿತ್ರೆ’ಯು ಕನಕದಾಸರಿಂದ ರಚಿತವಾದ ಒಂದು ಕಲ್ಪಿತ ಕಥೆ, ಪುಟ್ಟ ವಿಡಂಬನಾ ಕಾವ್ಯ. ಹಾಡಲು ಅನುಕೂಲವಾದ ಮತ್ತು ಷಟ್ಪದಿಯ ಶೈಲಿಯಲ್ಲಿ ನಿರೂಪಿಸಲಾದ ಈ ಕಾವ್ಯವು 155 ಪದ್ಯಗಳನ್ನು ಒಳಗೊಂಡಿದೆ. ರಾಗಿ ಮತ್ತು ಭತ್ತದ ಪೈಕಿ ಯಾರು ಹೆಚ್ಚು ಎನ್ನುವಲ್ಲಿನ ಸಕಾರಣ ವಾದ-ಪ್ರತಿವಾದ-ಸಮರ್ಥನೆಗಳು, ದೇವತೆಗಳ ಸಮ್ಮುಖದಲ್ಲಿ ಶ್ರೀರಾಮನ ಆಸ್ಥಾನದಲ್ಲಾಗುವ ತೀರ್ಮಾನ ಮತ್ತು ಕೊನೆಯಲ್ಲಿನ ಸಾಮರಸ್ಯದ ಉಪಸಂಹಾರಗಳು ಉಭಯ ದೃಷ್ಟಿಯಿಂದಲೂ (ಕಾವ್ಯ ಮತ್ತು ಸತ್ವ) ಅತ್ಯಂತ ಸುಂದರವಾಗಿ ಮೂಡಿಬಂದಿವೆ. ನಿರ್ಲಕ್ಷ್ಯಕ್ಕೊಳಗಾಗಿದ್ದ ನರೆದಲೆಗ (ರಾಗಿ) ಧಾನ್ಯದ ಸಂಪರ್ಕವನ್ನು ಶ್ರೀರಾಮನೊಂದಿಗೆ ಸಾಧಿಸಿ, ಅವನು ನರೆದಲೆಗಕ್ಕೆ ತನ್ನ ನಾಮ ವನ್ನು ಪ್ರದಾನಿಸಿದ ಕಲ್ಪನೆಯ ಈ ಕಥೆಗೆ ಕನಕದಾಸರು ಮಹಾಭಾರತದ ಯುಧಿಷ್ಠಿರನ ಪ್ರವೇಶ ವನ್ನೂ, ರಾಮಾಯಣದ/ಶ್ರೀರಾಮನ ಸ್ಪರ್ಶವನ್ನೂ ನೀಡಿರುವುದು ವಿಶೇಷವಾಗಿದೆ.
ಭಾರತೀಯರು ಯಾವುದನ್ನಾದರೂ ಸರಳವಾಗಿ ಸ್ವೀಕರಿಸಬೇಕೆಂದರೆ, ಅದನ್ನು ಒಂದೋ ರಾಮ (ರಾಮಾಯಣ) ಅಥವಾ ಕೃಷ್ಣ (ಭಗವದ್ಗೀತೆ) ಹೇಳಿರಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು ಎನಿಸುತ್ತದೆ. ಹಾಗಾಗಿ ರಾಗಿ (ನರೆದಲೆಗ) ಮತ್ತು ಭತ್ತ (ವ್ರಿಹಿಗ) ಇವೆರಡರ ನಡುವೆ ಯಾರು ಹೆಚ್ಚು ಎಂಬ ವ್ಯಾಜ್ಯ ಉದ್ಭವಿಸಲಾಗಿ, ರಾಮನು ಅದನ್ನು ಪರಿಹರಿಸಿ ನರೆದಲೆಗವೇ ಉತ್ತಮವೆಂದು ಸಾರಿ ತೀರ್ಪುನೀಡುವ ಕಥಾಹಂದರವನ್ನು ಹೆಣೆದಿದ್ದಾರೆ ದಾಸರು.
ಕನಕದಾಸರೆಂದರೆ, ಕಂಬಳಿ ಹೊದ್ದಿದ್ದು ಒಂದು ಜಾತಿಗಷ್ಟೇ ಸೀಮಿತರಾದ, ಕೀರ್ತನೆಗಳನ್ನು ಬರೆದು ಮನೆಮನೆಯ ಮುಂದೆ ಹಾಡಿದ ಹರಿದಾಸರು ಎಂದಷ್ಟೇ ತಿಳಿದಿರುವವರಿಗೆ, ಅವರ ಶಾಸಾಧ್ಯಯನದ ಆಳ, ಸಂಗೀತಪ್ರಜ್ಞೆ, ಕಾವ್ಯಸೃಜನೆಯ ಶಕ್ತಿ ಮತ್ತು ಗಾಢ ಸಾಮಾಜಿಕ ಕಾಳಜಿಯ ಸಂಪೂರ್ಣ ಅರಿವಿರದಿರುವುದು ವಿಷಾದದ ಸಂಗತಿ. ಜನಸಾಮಾನ್ಯರಿಗೆ ಅಷ್ಟೊಂದು ಪರಿಚಿತ ವಲ್ಲದ ‘ರಾಮಧಾನ್ಯ ಚರಿತ್ರೆ’ ಎಂಬ ಅವರ ಈ ವಿಶಿಷ್ಟ ಕೃತಿಯನ್ನು ಅಧ್ಯಯನ ಮಾಡಲು ಓದುಗರಲ್ಲಿ ಆಸಕ್ತಿ ಹುಟ್ಟಿಸುವ ದೃಷ್ಟಿಯಿಂದ ಮುಂದಿನ ವಾರಗಳಲ್ಲಿ ಸ್ವಲ್ಪ ಅನುಸಂಧಾನ ಮಾಡೋಣ.
(ಮುಂದುವರಿಯುವುದು)