ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ranjith H Ashwath Column: ಮೀಸಲು ವಿಧೇಯಕದ ಸೋಲು ಯಾರ ಗೆಲುವು ?

ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಶತಾಯಗತಾಯ ಅಧಿಕಾರದ ಗದ್ದುಗೆ ಏರಬೇಕು ಎನ್ನುವುದು ಬಿಜೆಪಿ ಯ ಗುರಿಯಾಗಿದೆ. ತಮಿಳುನಾಡಿನಲ್ಲಿ ಹೇಗಿದ್ದರೂ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಅರಿವು ಬಿಜೆಪಿಗ ರಿಗೂ ಇದೆ. ಆದ್ದರಿಂದ ಪಶ್ಚಿಮ ಬಂಗಾಳದಲ್ಲಿರುವ ಶೇ.50ರಷ್ಟು ಮಹಿಳಾ ಮತದಾರರನ್ನು ಗಮನ ದಲ್ಲಿರಿಸಿಕೊಂಡೇ ಈ ವಿಧೇಯಕ ‘ತಂತ್ರ’ ಹೆಣೆದರೇ ಎನ್ನುವ ಅನುಮಾನಗಳು ಶುರುವಾಗಿದೆ.

ಮೀಸಲು ವಿಧೇಯಕದ ಸೋಲು ಯಾರ ಗೆಲುವು ?

-

ಅಶ್ವತ್ಥಕಟ್ಟೆ

ಮಹಿಳಾ ಮೀಸಲು ವಿಧೇಯಕವನ್ನು ತರಲು ಹೊರಟಿದ್ದ ಬಿಜೆಪಿಗೆ ಒಂದು ವೇಳೆ ಗೆಲುವಾ ಗಿದ್ದರೆ ‘ಮಹಿಳಾ ಸಮಾನತೆಗೆ ಬಿಜೆಪಿಯೇ ಬರಬೇಕಾಯಿತು’ ಎನ್ನುವ ಘೋಷಣೆ ಯೊಂದಿಗೆ ಚುನಾವಣಾ ಕಣಕ್ಕೆ ಹೋಗುತ್ತಿದ್ದರು. ಆದರೀಗ ವಿಧೇಯಕಕ್ಕೆ ಸೋಲಾಗಿರುವುದರಿಂದ, ನಾವು ಮೀಸಲು ಕೊಡಲು ಬಯಸಿದರೂ, ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಬಿಡಲಿಲ್ಲ.

ದೇಶದ ಎಲ್ಲ ಕ್ಷೇತ್ರದಲ್ಲಿ ಪುರುಷರಿಗೆ ಸರಿಸಮಾನವಾಗಿರುವ ಮಹಿಳೆಯರು ಈಗಲೂ ಹಿಂದಿರುವ ಕ್ಷೇತ್ರಯಾವುದಾದರೂ ಇದ್ದರೆ ಅದು ರಾಜಕಾರಣ. ಅದರಲ್ಲಿಯೂ ಚುನಾವಣೆ ವಿಷಯ ಬಂದಾಗ ಮಹಿಳಾ ಸಬಲೀಕರಣವೇ ಎಲ್ಲ ಪಕ್ಷಗಳ ಘೋಷಣೆಯಾಗಿದ್ದರೂ, ಟಿಕೆಟ್ ಹಂಚಿಕೆಯ ವಿಷಯ ದಲ್ಲಿ ಮಾತ್ರ ಈಗಲೂ ತಾರತಮ್ಯದ ಆರೋಪವಿದೆ.

ಈ ಅಸಮಾನತೆ ಸರಿದೂಗಿಸಲು ದಶಕಗಳ ಹಿಂದೆಯೇ ಸಜ್ಜಾಗಿರುವ ಮಹಿಳಾ ಮೀಸಲು ವಿಧೇಯಕ ಪಾಸ್ ಮಾಡಲು ಕೇಂದ್ರ ಸರಕಾರ ಮೂರು ದಿನಗಳ ವಿಶೇಷ ಅಧಿವೇಶನ ಕರೆದಿತ್ತು. ಆದರೆ ಅಂತಿಮವಾಗಿ ಬಹುಮತ ಸಿಗದೇ ವಿಧೇಯಕ ಮತ್ತೊಮ್ಮೆ ‘ಫೇಲಾ’ಗಿದೆ.

ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತರಲು ಹೊರಟಿದ್ದ ವಿಧೇಯಕ ಬಹುಮತ ಸಿಗದೇ ಬಿದ್ದು ಹೋಗಿರು ವುದು. ಮೇಲ್ನೋಟಕ್ಕೆ ವಿಧೇಯಕ ಪಾಸಾಗದಂತೆ ನೋಡಿಕೊಂಡಿದ್ದಕ್ಕೆ ಕಾಂಗ್ರೆಸ್ ಸೇರಿದಂತೆ ಇಡೀ ಇಂಡಿಯಾ ಒಕ್ಕೂಟ ಗೆಲುವಿನ ನಗೆ ಬೀರುತ್ತಿದೆ. ಆದರೆ ಈ ವಿಧೇಯಕ ತರುವ ಮೊದಲೇ ಸಂಖ್ಯಾ ಬಲದ ಸ್ಪಷ್ಟ ಅರಿವಿದ್ದರೂ ಸದನದಲ್ಲಿ ಮಂಡಿಸಿದ್ದು, ಬಳಿಕ ವಿಧೇಯಕವನ್ನು ಪಾಸ್ ಮಾಡಿಕೊಳ್ಳಲು ಮಾಡಬೇಕಿದ್ದ ಕನಿಷ್ಠ ಪ್ರಯತ್ನವನ್ನೂ ಮಾಡದೇ ವಿಧೇಯಕಕ್ಕೆ ಸೋಲಾಗಲು ಸುಲಭಕ್ಕೆ ಬಿಟ್ಟುಕೊಟ್ಟಿದ್ದು ಇಡೀ ನಡಾವಳಿಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅಂದರೆ, ಮಹಿಳಾ ವಿಧೇಯಕದ ಭವಿಷ್ಯ ಗೊತ್ತಿದ್ದರೂ ಈ ನಡೆಯನ್ನು ಬಿಜೆಪಿ ಅನುಸರಿಸಿದ್ದು, ಬಹುಚರ್ಚಿತ ವಿಷಯ.

ಮೇಲ್ನೋಟಕ್ಕೆ ಈ ಸೋಲಿನಿಂದ ಕೇಂದ್ರಕ್ಕೆ ಹಿನ್ನಡೆಯಾಗಿದೆ ಎನ್ನುವ ವ್ಯಾಖ್ಯಾನಗಳನ್ನು ಪ್ರತಿಪಕ್ಷ ಗಳು ಮಾಡುತ್ತಿವೆ. ಆದರೆ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಗಳಿರುವ ಹೊಸ್ತಿಲಿನಲ್ಲಿ ಈ ನಡೆಯನ್ನು ಅನುಸರಿಸಿದ್ದರ ಹಿಂದೆ ಚುನಾವಣಾ ಲೆಕ್ಕಾಚಾರಗಳಿವೆ ಎನ್ನುವುದು ಸ್ಪಷ್ಟ.

ಇದನ್ನೂ ಓದಿ: Ranjith H Ashwath Column: ಸಮುದಾಯದ ನಾಯಕತ್ವಕ್ಕೆ ʼಕೈʼನಲ್ಲಿ ಪೈಪೋಟಿ !

ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಶತಾಯಗತಾಯ ಅಧಿಕಾರದ ಗದ್ದುಗೆ ಏರಬೇಕು ಎನ್ನುವುದು ಬಿಜೆಪಿಯ ಗುರಿಯಾಗಿದೆ. ತಮಿಳುನಾಡಿನಲ್ಲಿ ಹೇಗಿದ್ದರೂ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಅರಿವು ಬಿಜೆಪಿಗರಿಗೂ ಇದೆ. ಆದ್ದರಿಂದ ಪಶ್ಚಿಮ ಬಂಗಾಳದಲ್ಲಿರುವ ಶೇ.50ರಷ್ಟು ಮಹಿಳಾ ಮತದಾರರನ್ನು ಗಮನದಲ್ಲಿರಿಸಿಕೊಂಡೇ ಈ ವಿಧೇಯಕ ‘ತಂತ್ರ’ ಹೆಣೆದರೇ ಎನ್ನುವ ಅನುಮಾನ ಗಳು ಶುರುವಾಗಿದೆ.

ಈ ಬಾರಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಆಡಳಿತ ವಿರೋಧಿ ಅಲೆ ದೊಡ್ಡ ಪ್ರಮಾಣದಲ್ಲಿದೆ. ಬಿಜೆಪಿ ಹಾಗೂ ಟಿಎಂಸಿ ‘ನೆಕ್ ಟು ನೆಕ್’ ಫೈಟ್ ಇದೆ. ಮಹಿಳಾ ಮೀಸಲನ್ನು ಬಳಸಿಕೊಂಡು ಶೇಕಡ ಐದಾರು ಮತಗಳು ಟಿಎಂಸಿಯಿಂದ ಬಿಜೆಪಿಗೆ ವಾಲಿದರೂ ಅದರಿಂದ ಬಹುದೊಡ್ಡ ಲಾಭವಾಗುವುದು ನಿಶ್ಚಿತ. ಅದರಲ್ಲಿಯೂ ಮಹಿಳಾ ಮೀಸಲು ವಿಧೇಯಕಕ್ಕೆ ಸೋಲಾದ ಬಳಿಕ,

ಇದೀಗ ರಾಷ್ಟ್ರಾದ್ಯಂತ ಬಿಜೆಪಿ ತರಲು ಹೊರಟಿದ್ದ ಮಹಿಳಾ ಮೀಸಲು ವಿಫಲವಾಗಲು ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳೇ ಕಾರಣ ಎನ್ನುವ ಗುಸು-ಗುಸು ಶುರುವಾಗಿದೆ. ಈ ಅಂಡರ್ ಕರೆಂಟ್ ಅನ್ನು ಬಳಸಿಕೊಂಡೇ ಪಂಚರಾಜ್ಯ ಚುನಾವಣೆಯಲ್ಲಿ ಮೇಲುಗೈ ಸಾಧಿಸುವುದು ಬಿಜೆಪಿಯ ಲೆಕ್ಕಾಚಾರ ವಾಗಿದೆ.

ಈ ಲೆಕ್ಕಾಚಾರದಲ್ಲಿಯೇ ಮಹಿಳಾ ಮೀಸಲು ವಿಧೇಯಕವನ್ನು ತರಲು ಹೊರಟಿದ್ದ ಬಿಜೆಪಿಗೆ ಒಂದು ವೇಳೆ ಗೆಲುವಾಗಿದ್ದರೆ ‘ಮಹಿಳಾ ಸಮಾನತೆಗೆ ಬಿಜೆಪಿಯೇ ಬರಬೇಕಾಯಿತು’ ಎನ್ನುವ ಘೋಷಣೆಯೊಂದಿಗೆ ಚುನಾವಣಾ ಕಣಕ್ಕೆ ಹೋಗುತ್ತಿದ್ದರು. ಆದರೀಗ ವಿಧೇಯಕಕ್ಕೆ ಸೋಲಾಗಿ ರುವುದರಿಂದ, ನಾವು ಮೀಸಲು ಕೊಡಲು ಬಯಸಿದರೂ, ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಬಿಡಲಿಲ್ಲ. ನಾವು ಅಧಿಕಾರಕ್ಕೆ ಬಂದರೆ ಮಾತ್ರ ಮಹಿಳೆಯರಿಗೆ ಸಮಾನ ಹಕ್ಕು ನೀಡಲು ಸಾಧ್ಯ ಎನ್ನುವ ಘೋಷಣೆಯೊಂದಿಗೆ ಹೋಗುತ್ತಿದ್ದಾರೆ. ಆದರೆ ಬಿಜೆಪಿಯ ಈ ‘ತಂತ್ರ’ಕ್ಕೆ ಪ್ರತಿತಂತ್ರ ಹೂಡುವ ಭರದಲ್ಲಿ ಇಡೀ ಇಂಡಿ ಕೂಟ ಮಹಿಳೆಯರ ವಿರೋಧ ಕಟ್ಟಿಕೊಂಡಿತೇ ಎನ್ನುವ ಅನುಮಾನಗಳು ಶುರುವಾಗಿದೆ.

Screenshot_9

ಹಾಗೇ ನೋಡಿದರೆ, ಈಗ ಬಿಜೆಪಿ ತರಲು ಹೊರಟಿದ್ದ ಮಹಿಳಾ ಮೀಸಲು ವಿಧೇಯಕ ಕಾಂಗ್ರೆಸ್‌ನ ಕೂಸು. ಮಹಿಳೆಯರಿಗೆ ಶೇ.33ರಷ್ಟು ಮೀಸಲು ನೀಡಬೇಕು ಎಂದು ಕಾಂಗ್ರೆಸ್ ಸರಕಾರ ವಿಧೇಯಕ ತರಲು ಹೊರಟಾಗ ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್ ವಿರೋಧಿಸಿದರು ಎನ್ನುವ ಕಾರಣಕ್ಕೆ ವಿಧೇಯಕ ಒಪ್ಪಿಗೆಯಾಗಲಿಲ್ಲ.

ಅದಾದ ಬಳಿಕ ದೇವೇಗೌಡರು ಮಂಡಿಸಲು ಮುಂದಾದ ಸಮಯದಲ್ಲಿಯೂ ಬಹುಮತದ ಕಾರಣ ಕ್ಕೆ ಸರಕಾರವೇ ಬೀಳುವ ಸ್ಥಿತಿ ನಿರ್ಮಾಣವಾಯಿತು. ಇದಾದ ಬಳಿಕ ಮೋದಿ ಸರಕಾರ 2023ರಲ್ಲಿ ಲೋಕಸಭೆಯಲ್ಲಿ ಪಾಸ್ ಮಾಡಿಕೊಂಡರು. ಆದರೀಗ ಮಹಿಳಾ ಮೀಸಲಿನೊಂದಿಗೆ ಪುನರ್ ವಿಂಗಡನೆಯನ್ನು ತಂದಿರುವುದಕ್ಕೆ ಕಾಂಗ್ರೆಸ್ ವಿರೋಧಿಸುತ್ತಿದೆ.

ಮಹಿಳೆಯರ ಪಾಲಿಗೆ ‘ವಿಲನ್’ ಸ್ಥಾನದಲ್ಲಿ ನಿಂತಿರುವ ಕಾಂಗ್ರೆಸ್ ಹಾಗೂ ಇತರೆ ಪ್ರಗತಿಪಕ್ಷಗಳು ಈಗಲೂ ಮಹಿಳಾ ಮೀಸಲು ವಿಧೇಯಕಕ್ಕೆ ವಿರೋಧಿಸಿಲ್ಲ. ಆದರೆ ಈ ವಿಧೇಯಕದೊಂದಿಗೆ ಬಿಜೆಪಿ ತರಲು ಹೊರಟಿರುವ ಕ್ಷೇತ್ರಗಳ ಪುನರ್ ವಿಗಂಡನೆ ವಿಧೇಯಕದ ವಿಷಯದಲ್ಲಿ ವಿರೋಧವಿದೆ.

ರಾಜಕೀಯದ ಒಳಸುಳಿಯಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ, ಮಹಿಳಾ ಮೀಸಲು ವಿಧೇಯಕ ಮೀರಿ ಕ್ಷೇತ್ರಗಳ ಪುನರ್ ವಿಂಗಡನೆ ವಿಧೇಯಕ ದಕ್ಷಿಣ ಭಾರತದ ರಾಜ್ಯಗಳಿಗೆ ಭವಿಷ್ಯದಲ್ಲಿ ರಾಜಕೀಯ ವಾಗಿ ಬಹುದೊಡ್ಡ ಸವಾಲಾಗುವುದು ನಿಶ್ಚಿತ ಎನ್ನಲಾಗುತ್ತಿದೆ. ಆದರೆ ಈ ವಿಷಯವನ್ನು ಸರಿಯಾದ ರೀತಿಯಲ್ಲಿ ಪಿಚ್ ಮಾಡುವಲ್ಲಿ ಕಾಂಗ್ರೆಸ್ ಎಡವಿತೇ ಎನ್ನುವ ಪ್ರಶ್ನೆಗಳು ಮೂಡುತ್ತಿವೆ.

ಸದ್ಯ 543 ಸಂಖ್ಯಾಬಲವಿರುವ ಲೋಕಸಭೆ ಪುನರ್ ವಿಂಗಡನೆಯಾದ ಬಳಿಕ 816 ಅಥವಾ ಐದತ್ತು ಸ್ಥಾನ ಆಚೀಚೆಗೆ ಬಂದು ನಿಲ್ಲಲಿದೆ. ಅಂದರೆ ಈಗಿರುವ ಸಂಸತ್ ಸ್ಥಾನಕ್ಕಿಂತ ಸರಿಸುಮಾರು 300 ಕ್ಷೇತ್ರಗಳು ಹೆಚ್ಚುವರಿಯಾಗಿ ಸಿಗಲಿದೆ. ಬಿಜೆಪಿ ಹಾಗೂ ಎನ್‌ಡಿಎ ನಾಯಕರ ಪ್ರಕಾರ, ಮಹಿಳಾ ಮೀಸಲು ನೀಡುವುದರಿಂದ ಸೀಟುಗಳನ್ನು ಹೆಚ್ಚುವರಿ ಮಾಡುವುದರಿಂದ ಈಗಿರುವ ಪುರುಷ ಸಂಸದರಿಗೂ ಹೆಚ್ಚು ಡಿಸ್ಟರ್ಬ್ ಆಗುವುದಿಲ್ಲ.

ಹೆಚ್ಚುವರಿ ಸೀಟುಗಳಲ್ಲಿ ಮಹಿಳೆಯರ ಮೀಸಲು ನೀಡುವ ಜತೆಗೆ ಒಂದಿಷ್ಟು ಸೀಟುಗಳು ಪುರುಷ ರಿಗೂ ಲಭ್ಯವಾಗುತ್ತದೆ. ಇದರಿಂದ ಮಹಿಳೆಯರಿಗೆ ಮೀಸಲು ನೀಡುವುದರೊಂದಿಗೆ, ಪುರುಷ ಸಂಸದರಿಗೂ ಸಮಸ್ಯೆಯಾಗದಂತೆ ಮೀಸಲು ವಿಧೇಯಕ ಜಾರಿಗೊಳಿಸಬಹುದು. ಆದರೆ, ಪುನರ್‌ ವಿಂಗಡನೆಯ ವಿಧೇಯಕದಲ್ಲಿ 2011 ಜನಗಣತಿಯ ಆಧಾರದಲ್ಲಿ ಕ್ಷೇತ್ರಗಳ ಮರು ವಿಂಗಡನೆಯಾಗ ಲಿದೆ.

2011 ಜನಗಣತಿಯ ಜನಸಂಖ್ಯೆಯನ್ನು ಆಧರಿಸಿ, ರಾಜ್ಯಗಳ ಲೋಕಸಭಾ ಸೀಟುಗಳನ್ನು ನಿರ್ಧರಿಸ ಲಾಗುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ. ಅಂದರೆ, ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯನ್ನು ದೇಶದ ಒಟ್ಟು ಜನಸಂಖ್ಯೆಯಿಂದ ವಿಭಜಿಸಿ, ಅದನ್ನು ದೇಶದ ಒಟ್ಟು ಲೋಕಸಭಾ ಸೀಟುಗಳಿಂದ ಗುಣಿಸಿದಾಗ ಸಿಗುವ ಸಂಖ್ಯೆಯೇ ಆಯಾ ರಾಜ್ಯದ ಪರಿಷ್ಕೃತ ಲೋಕಸಭಾ ಸೀಟುಗಳ ಸಂಖ್ಯೆ ಎನ್ನುವುದು ಕೇಂದ್ರದ ವಾದವಾಗಿದೆ.

ಉದಾಹರಣೆಗೆ, 2011ರಲ್ಲಿ ದೇಶದಲ್ಲಿ 121 ಕೋಟಿ ಜನಸಂಖ್ಯೆಯಿದ್ದರೆ, ಕರ್ನಾಟಕದಲ್ಲಿ 6.11 ಕೋಟಿ ಜನರಿದ್ದರು. ಅದನ್ನು ವಿಭಜನೆ ಮಾಡಿದರೆ ದೇಶದ ಜನಸಂಖ್ಯೆಯ ಶೇ.5.05ರಷ್ಟು ಕರ್ನಾ ಟಕದಿದ್ದೆ. ಅದನ್ನು 816ರಿಂದ ಗುಣಿಸಿದಾಗ 41.2 ಚಿಲ್ಲರೆ ಬರುತ್ತದೆ. ಅಂದರೆ 42 ಸೀಟು ಗಳನ್ನು ಮಾಡಬಹುದು ಎನ್ನುವ ಲೆಕ್ಕಾಚಾರವಿದೆ.

ಅದೇ ಉತ್ತರ ಪ್ರದೇಶದ ಜನಸಂಖ್ಯೆ 24 ಕೋಟಿ ಚಿಲ್ಲರೆ ಇರುವುದರಿಂದ ಆ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 80 ರಿಂದ 120 ಸೀಟುಗಳು ಹೆಚ್ಚಾಗುತ್ತದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ದಕ್ಷಿಣ ಭಾರತದ ಎಲ್ಲ ರಾಜ್ಯಗಳು ಇಂದಿರಾ ಗಾಂಧಿ ಸರಕಾರ ಅವಧಿಯಲ್ಲಿ ಜಾರಿಗೆ ತಂದ ಜನಸಂಖ್ಯೆ ನಿಯಂತ್ರಣ ಕಾಯಿದೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಉತ್ತರ ಭಾರತದ ಬಹುಪಾಲು ರಾಜ್ಯಗಳು ಜಾರಿಗೊಳಿಸಿಲ್ಲ. ಆದ್ದರಿಂದ 2011 ಜನಗಣತಿಯ ವೇಳೆಗೆ ಕರ್ನಾಟಕ ಸೇರಿದಂತೆ ಎಲ್ಲ ದಕ್ಷಿಣ ಭಾರತದ ರಾಜ್ಯಗಳ ಜನಸಂಖ್ಯೆ ಕುಸಿತವಾದರೆ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಎಲ್ಲ ರಾಜ್ಯಗಳ ಜನಸಂಖ್ಯೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ.

ಇದರಿಂದಾಗಿ, ಇದೀಗ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡನೆ ವಿಷಯದಲ್ಲಿಯೂ ಉತ್ತರ ಭಾರತದ ರಾಜ್ಯಗಳು ಹೆಚ್ಚು ಸೀಟುಗಳನ್ನು ಪಡೆಯುತ್ತಿದೆ. ಆದರೆ ಅಂದಿನ ಕೇಂದ್ರ ಸರಕಾರ ಜನಸಂಖ್ಯೆ ನಿಯಂತ್ರಣ ಕಾಯಿದೆ ಯಶಸ್ವಿಯಾಗಿ ಜಾರಿಗೊಳಿಸಿದ್ದರಿಂದ ಜನಸಂಖ್ಯೆಯಲ್ಲಿ ಇಳಿಕೆಯಾದ ರಾಜ್ಯಗಳಿಗೆ ಸೀಟುಗಳು ಕಡಿಮೆಯಾಗಲಿದೆ. ಈ ಕಾರಣಕ್ಕಾಗಿಯೇ ದಕ್ಷಿಣ ಭಾರತದ ರಾಜ್ಯಗಳು 2011ರ ಜನಗಣತಿಯ ಬದಲು 1971ರ ಜನಗಣತಿಯ ಆಧಾರದಲ್ಲಿ ಕ್ಷೇತ್ರಗಳ ಮರು ವಿಂಗಡನೆಗೆ ಪಟ್ಟು ಹಿಡಿಯುತ್ತಿವೆ. ಆದರೆ ಈ ವಿಷಯದಲ್ಲಿ ಬಿಜೆಪಿ ನಾಯಕರು, ದಕ್ಷಿಣ, ಉತ್ತರ ಭಾರತ ಎನ್ನುತ್ತಿದ್ದಕ್ಕಿಂತ ಸರಾಸರಿ ಶೇ.50ರಷ್ಟು ಸೀಟುಗಳು ಹೆಚ್ಚಾಗುತ್ತಿದೆ ಎನ್ನುವ ಭರವಸೆ ಯನ್ನು ನೀಡುತ್ತಿದ್ದಾರೆ.

ಬಿಜೆಪಿ ನಾಯಕರ ಈ ವರಸೆಯನ್ನು ಕಾಂಗ್ರೆಸ್ ಹಾಗೂ ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳು (ಇಂಡಿ ಕೂಟದಲ್ಲಿರುವ ಪಕ್ಷಗಳು) ಒಪ್ಪದೇ ಇರಲು ಮತ್ತೊಂದು ಕಾರಣವಿದೆ. ಅದೇನೆಂದರೆ, ಕೇಂದ್ರ ಸರಕಾರ ತರಲು ಹೊರಟಿರುವ ಪುನರ್ ವಿಂಗಡನೆ ವಿಧೇಯಕದ ಪ್ರಕಾರ, ಗುಜರಾತ್ ಸೇರಿದಂತೆ ಹಿಂದಿ ಭಾಷಿಗರ ರಾಜ್ಯಗಳಾಗಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಗುಜರಾತ್, ರಾಜಸ್ಥಾನ, ಹರಿಯಾಣ, ಉತ್ತರಾಕಾಂಡ, ಹಿಮಾಚಲ ಪ್ರದೇಶ ಹಾಗೂ ದೆಹಲಿಯಿಂದಲೇ ಲೋಕ ಸಭಾ ಕ್ಷೇತ್ರಗಳ ಸಂಖ್ಯೆ 210ರ ಆಸುಪಾಸಿನಲ್ಲಿದೆ.

ಆದರೆ, ಕೇಂದ್ರ ಸರಕಾರ ತರಲು ಹೊರಟಿರುವ ಪುನರ್ ವಿಂಗಡನೆಯಿಂದ ಈ ಸಂಖ್ಯೆ 350ಕ್ಕೆ ಏರಿಕೆ ಯಾಗಲಿದೆ. ಅಂದರೆ, 816 ಸಂಖ್ಯಾಬಲದ ಲೋಕಸಭೆಯಲ್ಲಿ ಶೇ.42ರಿಂದ 44ರಷ್ಟು ಸೀಟುಗಳು ಈ ಒಂಬತ್ತು ರಾಜ್ಯಗಳಲ್ಲಿಯೇ ಇರುವುದು ಪ್ರತಿಪಕ್ಷಗಳಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಏಕೆಂದರೆ, ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಈ ಒಂಬತ್ತು ರಾಜ್ಯಗಳಲ್ಲಿ ಕಾಂಗ್ರೆಸ್ ಸಾಧನೆ ತೀರಾ ಕೆಟ್ಟದಾಗಿದ್ದು, ಶೂನ್ಯ ಅಥವಾ ಒಂದಕ್ಕಿಯನ್ನು ದಾಟಿಲ್ಲ. ಆದರೆ ಬಿಜೆಪಿ ಹಿಂದಿ ಹಾಗೂ ಹಿಂದುತ್ವದ ಆಧಾರದಲ್ಲಿ ಈ ರಾಜ್ಯಗಳಲ್ಲಿ ಉತ್ತಮ ಸಾಧನೆಯನ್ನು ನಿರಂತರವಾಗಿ ಸಾಧಿಸಿ ಕೊಂಡೇ ಬಂದಿದೆ.

ಒಂದು ವೇಳೆ ಕೇಂದ್ರ ಸರಕಾರ ಈಗ ಪ್ರಸ್ತಾಪಿಸಿರುವ ಕ್ಷೇತ್ರ ಪುನರ್ ವಿಂಗಡನೆ ವಿಧೇಯಕ ಜಾರಿ ಯಾದರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಈ 10 ರಾಜ್ಯಗಳೊಂದಿಗೆ ಇತರೆ ಒಂದೆರೆಡು ರಾಜ್ಯ ಗಳಲ್ಲಿ ಮೇಲುಗೈ ಸಾಧಿಸಿದರೂ, 408-410ರ ಮ್ಯಾಜಿಕ್ ನಂಬರ್ ಸುಲಭಕ್ಕೆ ದಾಟುತ್ತದೆ ಎನ್ನುವ ಆತಂಕ ಕಾಂಗ್ರೆಸ್ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿದೆ.

ಹಾಗೇ ನೋಡಿದರೆ, ಬಿಜೆಪಿಗೆ ಕರ್ನಾಟಕ ಹೊರತುಪಡಿಸಿ, ದಕ್ಷಿಣ ಭಾರತದ ರಾಜ್ಯಗಳು ಈಗಲೂ ಕಬ್ಬಿಣದ ಕಡಲೆಯಾಗಿವೆ. ಆದ್ದರಿಂದ ಬಿಜೆಪಿಯನ್ನು ಕಟ್ಟಿಹಾಕಬೇಕು ಎಂದರೆ, ದಕ್ಷಿಣ ಭಾರತದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಉತ್ತರರ ಭಾರತದ ರಾಜ್ಯಗಳಿಗೆ ಸರಿಹೊಂದುವಂತೆ ಇರಬೇಕು ಎನ್ನುವುದು ಕಾಂಗ್ರೆಸ್ ಸೇರಿದಂತೆ ಡಿಎಂಕೆ, ಸಿಪಿಎಂ ಪಕ್ಷಗಳ ಲೆಕ್ಕಾಚಾರವಾಗಿದೆ. ಆದ್ದರಿಂದಲೇ ದಕ್ಷಿಣ ಭಾರತದ ಸೀಟುಗಳ ಸಂಖ್ಯೆಯನ್ನು ಸಾರಾಸಗಟು ಶೇ.50 ರಷ್ಟು ಹೆಚ್ಚಿಸುವ ಬಗ್ಗೆ ಕಾನೂನಾತ್ಮಕ ಭರವಸೆ ನೀಡಬೇಕು ಎನ್ನುವ ಪಟ್ಟನ್ನು ಪ್ರತಿಪಕ್ಷಗಳು ಮುಂದಿಟ್ಟಿವೆ.

ಇದನ್ನು ಮೌಖಿಕವಾಗಿ ಬಿಜೆಪಿ ನಾಯಕರು ಒಪ್ಪಿಕೊಂಡಿದ್ದರೂ ಕಾನೂನಾತ್ಮಕ ನೀಡಲು ಹಿಂದೇಟು ಹಾಕುತ್ತಿರುವುದು ಏಕೆ ಎನ್ನುವ ಪ್ರಶ್ನೆಗೆ ನಾಯಕರ ಬಳಿ ಉತ್ತರವಿಲ್ಲವಾಗಿದೆ. ಇದೇ ಕಾರಣಕ್ಕೆ, ಕಾಂಗ್ರೆಸ್ಸಿಗರು ಮಹಿಳಾ ಮೀಸಲು ಜಾರಿಗೊಳಿಸಬೇಕು ಎನ್ನುವುದಷ್ಟೇ ಬಿಜೆಪಿಯ ಉದ್ದೇಶವಾಗಿದ್ದರೆ ಈಗಾಗಲೇ ಲೋಕಸಭೆಯಲ್ಲಿ ಜಾರಿಯಾಗಿರುವ ಮಹಿಳಾ ಮೀಸಲನ್ನು 543 ಲೋಕಸಭಾ ಕ್ಷೇತ್ರಗಳಿಗೆ ಸೀಮಿತಗೊಳಿಸಿ ಜಾರಿಗೊಳಿಸಲಿ.

2026ರ ಜನಗಣತಿ ಈಗಾಗಲೇ ಜಾರಿಯಾಗಿದ್ದು, ಅದರ ಸಂಪೂರ್ಣ ವರದಿ ಪಡೆದ ಬಳಿಕ ಪುನರ್‌ ವಿಂಗಡನೆಗೆ ಮುಂದಾಗಲಿ ಎನ್ನುವ ವಾದವನ್ನು ಮಂಡಿಸಿದ್ದಾರೆ. ಆದರೆ ಮಹಿಳಾ ಮೀಸಲಿನ ಜತೆ-ಜತೆಗೆ ಪುನರ್ ವಿಂಗಡನೆಯನ್ನು ಜಾರಿಗೊಳಿಸಬೇಕು ಎನ್ನುವ ಹಠಕ್ಕೆ ಬಿಜೆಪಿಗರು ಬಿದ್ದಿದ್ದಾರೆ. ಈ ಎಲ್ಲ ಗೊಂದಲ-ಗೋಜಲುಗಳ ನಡುವೆ ಮಹಿಳಾ ಮೀಸಲು ವಿಧೇಯಕಕ್ಕೆ ಮತ್ತೊಮ್ಮೆ ಸೋಲಾ ಗಿದೆ. ಈ ಸೋಲಿನಿಂದ ಬಿಜೆಪಿಗೆ ಈ ಕ್ಷಣದಲ್ಲಿ ನೋಡುವುದಾದರೆ ವಿಧೇಯಕಕ್ಕೆ ಸೋಲಾಗಿದ್ದರೂ, ಪಶ್ಚಿಮ ಬಂಗಾಳದ ಚುನಾವಣಾ ದೃಷ್ಟಿಯಿಂದ ನೋಡಿದರೆ ಲಾಭವಾಗಿದೆ ಎನ್ನುವುದು ಸ್ಪಷ್ಟ. ನೆಕ್ ಟು ನೆಕ್ ಇದ್ದ ಬಂಗಾಳ ವಿಧಾನಸಭೆಯಲ್ಲಿ ಮಹಿಳಾ ಮತಗಳು ಶೇ.5ರಿಂದ 8ರಷ್ಟು ಆಚೀಚೆ ಆದರೂ ಅದರ ಬಹುದೊಡ್ಡ ಲಾಭ ಕಮಲ ಪಡೆಗೆ ಆಗುತ್ತದೆ ಎನ್ನುವ ಮಾತುಗಳು ಸ್ಥಳೀಯ ಮಟ್ಟದಲ್ಲಿ ಕೇಳಿ ಬರುತ್ತದೆ.

ಒಂದು ವೇಳೆ ಈ ಪ್ರಮಾಣದ ಮತಗಳು ಆಚೀಚೆ ಆದರೂ, ಪಶ್ಚಿಮ ಬಂಗಾಳದಲ್ಲಿ ಕಮಲ ಪಡೆ ಅಧಿಕಾರದ ಗದ್ದುಗೆ ಏರುವುದಂತೂ ಸತ್ಯ. ಈ ಪ್ರಮಾಣದಲ್ಲಿ ಲಾಭವಾಗಿದೆಯೇ ಇಲ್ಲವೇ ಎನ್ನುವ ಪ್ರಶ್ನೆಗೆ ಉತ್ತರ ಫಲಿತಾಂಶದ ದಿನವೇ ಸಿಗಲಿದೆ.