ಅಫ್ಘಾನಿಸ್ತಾನ ಒಡಿಐ ನಾಯಕತ್ವದಿಂದ ಕೆಳಗಿಳಿದು ಭಾವುಕ ಸಂದೇಶ ಹಂಚಿಕೊಂಡ ಹಷ್ಮತ್‌ವುಲ್ಲಾ ಶಾಹಿದಿ!!
ಹಷ್ಮತ್‌ವುಲ್ಲಾ ಶಾಹಿದಿ ಅವರು ನಾಲ್ಕು ವರ್ಷಗಳ ಬಳಿಕ ಅಫ್ಘಾನಿಸ್ತಾನ ಒಡಿಐ ತಂಡದ ನಾಯಕತ್ವದಿಂದ ಕೆಳಗೆ ಇಳಿದಿದ್ದಾರೆ. ಇವರ ನಾಯಕತ್ವದಲ್ಲಿ ಆಫ್ಘನ್ ತಂಡ, 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ಸ್ ಸನಿಹ ಬಂದು ಹೊರ ನಡೆದಿತ್ತು. ಐರ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಆಫ್ಘನ್ ಕ್ರಿಕೆಟ್‌ನಲ್ಲಿ ಈ ಬೆಳವಣಿಗೆಗಳು ನಡೆದಿವೆ.
ಆಫ್ಘನ್ ನಾಯಕತ್ವದಿಂದ ಕೆಳಗೆ ಇಳಿಯಲು ಕಾರಣವೇನು? -
ನವದೆಹಲಿ: ಅಫ್ಘಾನಿಸ್ತಾನದ (Afghanistan Cricket) ಅನುಭವಿ ಬ್ಯಾಟರ್ ಹಷ್ಮತ್‌ವುಲ್ಲಾ ಶಾಹಿದಿ (Hashmtullah Shahidi) ಅವರು ಏಕದಿನ ಕ್ರಿಕೆಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ. ಆದರೆ, 50 ಓವರ್‌ಗಳ ಕ್ರಿಕೆಟ್‌ನಲ್ಲಿ ಆಟಗಾರನಾಗಿ ತಂಡವನ್ನು ಪ್ರತಿನಿಧಿಸುವುದನ್ನು ಮುಂದುವರಿಸಲಿದ್ದಾರೆ. 31ರ ವಯಸ್ಸಿನ ಶಾಹಿದಿ ಅವರು 2022ರ ಆರಂಭದಲ್ಲಿ ಅಫ್ಘಾನಿಸ್ತಾನ ಏಕದಿನ ತಂಡದ ನಾಯಕರಾಗಿ ನೇಮಕಗೊಂಡಿದ್ದರು. ಅವರ ನಾಯಕತ್ವದಲ್ಲಿ ಅಫ್ಘಾನಿಸ್ತಾನ ತಂಡ, 2023ರ ಏಕದಿನ ವಿಶ್ವಕಪ್ ಹಾಗೂ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ಸ್ಪರ್ಧಿಸಿತ್ತು. ಅವರು ಇನ್ನೂ ಅಫ್ಘಾನಿಸ್ತಾನದ ಟೆಸ್ಟ್ ತಂಡದ ನಾಯಕರಾಗಿಯೇ ಮುಂದುವರಿಯಲಿದ್ದಾರೆ.
ನಾಯಕನಾಗಿ ಶಾಹಿದಿ ಅವರ ಅತ್ಯಂತ ಸ್ಮರಣೀಯ ಪ್ರದರ್ಶನಗಳಲ್ಲಿ ಒಂದಾದ 2023ರ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಮೂಡಿ ಬಂದಿತ್ತು. ಆ ಪಂದ್ಯದಲ್ಲಿ ಅವರು 88 ಎಸೆತಗಳಲ್ಲಿ ಆಕರ್ಷಕ 80 ರನ್ ಗಳಿಸಿ ಅಫ್ಘಾನಿಸ್ತಾನ ತಂಡವನ್ನು 272 ರನ್‌ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದಿದ್ದರು. ಆದರೆ, ಬಳಿಕ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತ್ತು. ಶಾಹಿದಿ ಅವರ ನಾಯಕತ್ವದಲ್ಲಿ ಅಫ್ಘಾನಿಸ್ತಾನ ತಂಡ ಒಟ್ಟು 55 ಏಕದಿನ ಪಂದ್ಯಗಳಲ್ಲಿ 27ರಲ್ಲಿ ಗೆದ್ದಿದೆ.
"ಇಂದು ನಾನು ಸಂಪೂರ್ಣ ಗೌರವ ಮತ್ತು ಎಲ್ಲರ ಒಪ್ಪಿಗೆಯೊಂದಿಗೆ, ನನ್ನ ವೈಯಕ್ತಿಕ ನಿರ್ಧಾರದ ಮೇರೆಗೆ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸುತ್ತಿದ್ದೇನೆ," ಎಂದು ಹಷ್ಮತ್‌ವುಲ್ಲಾ ಶಾಹಿದಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
IND vs ZIM: ಭಾರತ ಟಿ20ಐ ತಂಡದ ಇತ್ತೀಚಿನ ವೈಫಲ್ಯಕ್ಕೆ ನೈಜ ಕಾರಣ ತಿಳಿಸಿದ ತಿಲಕ್ ವರ್ಮಾ!
ಶಾಹಿದಿ ಅವರ ನಾಯಕತ್ವದಲ್ಲಿ ಅಫ್ಘಾನಿಸ್ತಾನ ತಂಡ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಐತಿಹಾಸಿಕ ಪ್ರದರ್ಶನ ನೀಡಿತ್ತು. ತಂಡವು ಇಂಗ್ಲೆಂಡ್, ಪಾಕಿಸ್ತಾನ, ಶ್ರೀಲಂಕಾ ಹಾಗೂ ನೆದರ್ಲೆಂಡ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿ ಗಮನ ಸೆಳೆದಿತ್ತು. ಅಫ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ಅಲ್ಪ ಅಂತರದಲ್ಲಿ ಕಳೆದುಕೊಂಡಿದ್ದರೂ, ಶಾಹಿದಿ ಬಳಿಕ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.
ನಾಯಕತ್ವ ವಹಿಸುವುದು ನನಗೆ ಹೆಮ್ಮೆಯ ಸಂಗತಿ : ಶಾಹಿದಿ
"ತಂಡದ ನಾಯಕನಾಗಿ ಈ ಜವಾಬ್ದಾರಿಯನ್ನು ನಿರ್ವಹಿಸುವುದು ನನಗೆ ಅತ್ಯಂತ ದೊಡ್ಡ ಗೌರವವಾಗಿತ್ತು. ಪ್ರಾಮಾಣಿಕತೆ, ಏಕತೆ ಮತ್ತು ಬದ್ಧತೆಯೊಂದಿಗೆ ನನ್ನ ತಂಡದ ಸಹ ಆಟಗಾರರೊಂದಿಗೆ ಸೇವೆ ಸಲ್ಲಿಸಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ," ಎಂದು ಹಷ್ಮತ್‌ವುಲ್ಲಾ ಶಾಹಿದಿ ಹೇಳಿದ್ದಾರೆ.
IND vs ZIM: ಜಿಂಬಾಬ್ವೆಗೆ ಆಗಮಿಸಿದ ವೈಭವ್ ಸೂರ್ಯವಂಶಿ ಬಗ್ಗೆ ಸಿಕಂದರ್ ರಾಝಾ ದೊಡ್ಡ ಹೇಳಿಕೆ!
"ಅಲ್ಲಾಹನ ಕೃಪೆಯಿಂದ ಹಾಗೂ ಅಧಿಕಾರಿಗಳು, ತರಬೇತುದಾರರು ಮತ್ತು ಆಟಗಾರರ ಒಗ್ಗಟ್ಟಿನ ಪ್ರಯತ್ನದಿಂದ ನಾವು ಹಲವು ಮಹತ್ವದ ಗೆಲುವುಗಳನ್ನು ದಾಖಲಿಸಿದ್ದೇವೆ. ಪ್ರಮುಖ ಪಂದ್ಯಗಳನ್ನು ಗೆದ್ದಿದ್ದೇವೆ, ಬಲಿಷ್ಠ ತಂಡಗಳನ್ನು ಮಣಿಸಿದ್ದೇವೆ ಮತ್ತು ಅಫ್ಘಾನಿಸ್ತಾನ ತಂಡದ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದೇವೆ," ಎಂದು ಅವರು ತಿಳಿಸಿದ್ದಾರೆ.
ಏಕದಿನ ತಂಡದ ನಾಯಕತ್ವದಿಂದ ಹಿಂದೆ ಸರಿಯುವ ತಮ್ಮ ನಿರ್ಧಾರವನ್ನು ದೃಢಪಡಿಸಿದ ಶಾಹಿದಿ, ಏಕದಿನ ಕ್ರಿಕೆಟ್‌ನಲ್ಲಿ ಆಟಗಾರನಾಗಿ ಆಯ್ಕೆಗೆ ತಾವು ಲಭ್ಯವಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಮುಂದಿನ ತಿಂಗಳು ಐರ್ಲೆಂಡ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಏಕದಿನ ಸರಣಿಗೆ ಮುನ್ನ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಹೊಸ ಏಕದಿನ ನಾಯಕನನ್ನು ನೇಮಕ ಮಾಡುವ ನಿರೀಕ್ಷೆಯಿದೆ.
"ಈ ಎಲ್ಲ ಸಾಧನೆಗಳು ನನ್ನೊಬ್ಬನದ್ದಲ್ಲ. ಇಡೀ ತಂಡದ ಒಗ್ಗಟ್ಟು, ತ್ಯಾಗ ಮತ್ತು ಪರಸ್ಪರ ಸಮನ್ವಯದ ಫಲವೇ ಈ ಯಶಸ್ಸು," ಎಂದು ಹಷ್ಮತ್‌ವುಲ್ಲಾ ಶಾಹಿದಿ ಹೇಳಿದ್ದಾರೆ.
"ಪ್ರತಿ ಗೆಲುವಿನಲ್ಲೂ ಹಾಗೂ ಪ್ರತಿಯೊಂದು ಸವಾಲಿನ ಸಂದರ್ಭದಲ್ಲೂ ನನ್ನೊಂದಿಗೆ ಹೆಗಲಿಗೆ ಹೆಗಲು ನೀಡಿ ನಿಂತು ಬೆಂಬಲಿಸಿದ ನನ್ನ ತಂಡದ ಎಲ್ಲಾ ಆಟಗಾರರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ," ಎಂದು ಅವರು ತಿಳಿಸಿದ್ದಾರೆ.
"ನನ್ನ ಮೇಲೆ ನಂಬಿಕೆ ಇಟ್ಟು ಸದಾ ಬೆಂಬಲ ನೀಡಿದ ತಂಡದ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಗೂ ನಾನು ಕೃತಜ್ಞನಾಗಿದ್ದೇನೆ. ನಿಮ್ಮ ವಿಶ್ವಾಸ ಮತ್ತು ಸಹಕಾರ ನನ್ನ ಪಾಲಿಗೆ ಸದಾ ಗೌರವದ ವಿಷಯವಾಗಿರುತ್ತದೆ," ಎಂದು ಶಾಹಿದಿ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.