ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಯಕ್ಷಗಾನ ಐಟಂ ಸಾಂಗ್ಸ್: ಒಂದು ತೀಕ್ಷ್ಣ ಬರಹ

ಹಿಂದಿನ ಅರ್ಥಧಾರಿಗಳು ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸುವಲ್ಲಿ ಪಾತ್ರದ ಔಚಿತ್ಯವನ್ನು ಮೀರುತ್ತಿರಲಿಲ್ಲ. ಅದೆಷ್ಟೇ ಕಠಿಣವಾದ ಸವಾಲನ್ನು ಎತ್ತಿದರೂ, ಶೇಣಿಯವರು ಪಾತ್ರದ ಹೃದಯವನ್ನರಿತು ಉತ್ತರಿಸುತ್ತಿದ್ದರು. ಅವರ ರಾವಣನ ಅರ್ಥಗಾರಿಕೆಯಲ್ಲಿ ಹಾಗೇ ಪೂರ್ತಿ ಸಂಭಾವಿತನಲ್ಲದ ಒಂದು ಎಳೆ ಕಂಡುಬಂದರೆ, ಅದೇ ರಾಮನಿರ್ಯಾಣದಲ್ಲಿ ಅದೆಷ್ಟು ಉದಾತ್ತ ವಿಚಾರ ಇರುತ್ತಿತ್ತು!

ಯಕ್ಷಗಾನ ಐಟಂ ಸಾಂಗ್ಸ್: ಒಂದು ತೀಕ್ಷ್ಣ ಬರಹ

-

Ashok Nayak
Ashok Nayak Dec 26, 2025 11:39 AM

ಪ್ರತಿಸ್ಪಂದನ

ನಿತ್ಯಾನಂದ ಹೆಗಡೆ, ಮುರೂರು

ವಿಶ್ವೇಶ್ವರ ಭಟ್ಟರ ‘ನೂರೆಂಟು ವಿಶ್ವ’ ಅಂಕಣಬರಹ (ಡಿ.25) ಸೂಕ್ಷ್ಮಗ್ರಾಹಿಯಾದುದು. ಹಾಗೆ ನೋಡಿದರೆ ಈ ಬರಹವನ್ನು ಅವರು ಸುಖಾಸುಮ್ಮನೆ ಬರೆದಂತಿಲ್ಲ. ‘ಭಟ್ಟರ್ ಸ್ಕಾಚ್’ ಅಂಕಣದಲ್ಲಿ ಪ್ರಕಟವಾದ ನಾಲ್ಕು ಪದಗಳ ಒಂದು ಉತ್ತರಕ್ಕೆ ಒದಗಿದ ಆಕ್ಷೇಪಕ್ಕೆ ಈ ಬರಹವು ಇನ್ನಿಲ್ಲದ ರೀತಿಯಲ್ಲಿ ಉತ್ತರ ನೀಡಿದಂತಿದೆ.

‘ಮೊದಲಾಗಿ, ಅವರಿಗೆ ಯಕ್ಷಗಾನ ಗೊತ್ತಿದೆಯೇ? ಯಕ್ಷಗಾನ ಪ್ರಭೃತಿಗಳ ಬಗ್ಗೆ ಬರೆಯಲು ಅವರಿಗೆ ಏನು ಅರ್ಹತೆಯಿದೆ?’ ಇಂಥ ಹಲವು ಆಕ್ಷೇಪಗಳನ್ನು ಎತ್ತಿದವರು ಮುಟ್ಟಿ ನೋಡಿಕೊಳ್ಳಬೇಕು, ಅಂಥ ಬರಹವಿದು.

ಹಿಂದಿನ ಅರ್ಥಧಾರಿಗಳು ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸುವಲ್ಲಿ ಪಾತ್ರದ ಔಚಿತ್ಯವನ್ನು ಮೀರುತ್ತಿರಲಿಲ್ಲ. ಅದೆಷ್ಟೇ ಕಠಿಣವಾದ ಸವಾಲನ್ನು ಎತ್ತಿದರೂ, ಶೇಣಿಯವರು ಪಾತ್ರದ ಹೃದಯವನ್ನರಿತು ಉತ್ತರಿಸುತ್ತಿದ್ದರು. ಅವರ ರಾವಣನ ಅರ್ಥಗಾರಿಕೆಯಲ್ಲಿ ಹಾಗೇ ಪೂರ್ತಿ ಸಂಭಾವಿತನಲ್ಲದ ಒಂದು ಎಳೆ ಕಂಡುಬಂದರೆ, ಅದೇ ರಾಮನಿರ್ಯಾಣದಲ್ಲಿ ಅದೆಷ್ಟು ಉದಾತ್ತ ವಿಚಾರ ಇರುತ್ತಿತ್ತು!

ಇದನ್ನೂ ಓದಿ: Vishweshwar Bhat Column: ಇದು ತಾಳಮದ್ದಳೆಯ ʼಐಟಮ್‌ ಸಾಂಗ್‌ ಡಾನ್ಸರ್‌ʼಗಳಂತೆ ಇರುವ ಅರ್ಥಧಾರಿಗಳನ್ನು ತಿರಸ್ಕರಿಸುವ ಕಾಲ !

ಅದೇ ರೀತಿಯಲ್ಲಿ, ವಾಲಿಯಾಗಿ ದೌಷ್ಟ್ಯ ಹಾಗೂ ಮನಃಪರಿವರ್ತನದ ಚಿತ್ರಣ, ಮಾಗಧ ನಾದಾಗ ಅದರ ಪರಿ ಎಲ್ಲಿಯೂ ಮೀರದ ವಾಕ್ಯಬಂಧ. ಇವರ ಜತೆಗೆ ಪೆರ್ಲ ಕೃಷ್ಣಭಟ್ಟರು, ತೆಕ್ಕಟ್ಟೆಯವರು, ದೊಡ್ಡ ಹಾಗೂ ಸಣ್ಣ ಸಾಮಗರು, ಮೂಡಂಬೈಲ್ ಕೃಷ್ಣಭಟ್ಟರು, ಸಿದ್ಧ ಕಟ್ಟೆ ವಿಶ್ವನಾಥ ಶೆಟ್ಟರು, ಪೆರಾಜೆಯವರು, ಕೆ.ಗೋವಿಂದ ಭಟ್ಟರು, ಕುಂಬಳೆ ಸುಂದರ ರಾವ್- ಇವರೆಲ್ಲ ಎಲ್ಲಿಯೂ ಪಾತ್ರದ ಹದವನ್ನು ತಪ್ಪಿ ಹೋದವರಲ್ಲ.

ಅದೊಂದು ಒಳ್ಳೆಯ ಕಾಲ ಎಂಬುದನ್ನು ಭಟ್ಟರು ಉಲ್ಲೇಖಿಸಿದ್ದಾರೆ. ಯಾವಾಗ ಪ್ರೇಕ್ಷಕರ ಅಗ್ಗದ ಚಪ್ಪಾಳೆಗಾಗಿ, ಇಂದಿನ ರಾಜಕೀಯಕ್ಕೂ ಪೌರಾಣಿಕಕ್ಕೂ ತಳಕು ಹಾಕಿ, ಗೃಹಲಕ್ಷ್ಮಿ, ಶಾದಿಭಾಗ್ಯ, ಭೂಕುಸಿತ ಪರಿಹಾರ, ಬೆಳೆ ಪರಿಹಾರ, ವಿಧವಾ ಭತ್ಯೆ ಹೀಗೆ ಏನೆಲ್ಲಾ ‘ಐಟಂ ಸಾಂಗ್’ಗಳಿಗೆ ಇಳಿದರೋ, ಅಲ್ಲಿಂದ ದಾರಿ ತಪ್ಪಿದ್ದು ನಿಜ.

V Bhat 251

ಯಾವಾಗ ಸಿದ್ದರಾಮಯ್ಯ, ಡಿಕೆಶಿ, ಮೋದಿ ಇವರೆಲ್ಲಾ ಈ ಐಟಂ ಸಾಂಗ್ ಕಲಾವಿದರ ಬಾಯಲ್ಲಿ ನಲಿದಾಡಿ ಕಸುಬು ಕುಲಗೆಟ್ಟಿತೋ, ಒಳ್ಳೆಯ ಅಭಿರುಚಿಯುಳ್ಳ ಪ್ರೇಕ್ಷಕನಿಗೆ ತಾಳಮದ್ದಳೆಯು ರೇಜಿಗೆ ಹುಟ್ಟಿಸತೊಡಗಿದ್ದು ಸತ್ಯಸಂಗತಿ. ಭಟ್ಟರು ತಮ್ಮ ಬರಹದಲ್ಲಿ, ವಾಲಿ-ರಾಮರ ವಾದವು ಅದೆಷ್ಟು ತರ್ಕಬದ್ಧ ಎಂಬುದನ್ನು ಹೇಳುತ್ತಾ, ಇಂದು ಅದು ಯಾವ ಮಟ್ಟಿಗೆ ನೀರಸವಾಗಿದೆ ಅಂತಲೂ ಉಲ್ಲೇಖಿಸಿದ್ದಾರೆ.

ಯಾರ‍್ಯಾರು ಅಂತ ಹೆಸರು ಹೇಳದೆಯೇ ಹೆಸರು ತಿಳಿಸಿದ್ದಾರೆ. ಯಾರ‍್ಯಾರಿಗೆ ಪೋಸ್ಟ್ ಹೋಗಿ ತಲುಪಬೇಕೋ ಅವರಿಗೆಲ್ಲಾ ತಲುಪಿದೆ. ತಾಳಮದ್ದಳೆಯ ಕನ್ನಡದ ಅರ್ಥವನ್ನು ತರ್ಜುಮೆ ಮಾಡಬೇಕಾಗಿ ಬಂದಿರುವುದನ್ನೂ ‘ಭಟ್ಟರ್ ಸ್ಕಾಚ್’ನಲ್ಲಿ ಒಂದೆಡೆ ಹೇಳಿದ್ದಾರೆ.

ಒಟ್ಟಿನಲ್ಲಿ, ಒಂದು ಪ್ರಬುದ್ಧ ಮತ್ತು ಅಷ್ಟೇ ಖಡಕ್ ಆದ ಉತ್ತರ ಹೊಮ್ಮಿದೆ ಭಟ್ಟರಿಂದ. ಆ ಉತ್ತರಕ್ಕೆ ಸಂಬಂಧಪಟ್ಟವರು ಇನ್ನಿಲ್ಲದಂತೆ ಪತರಗುಟ್ಟಿ ಹೋಗಬೇಕು, ಹಾಗಿದೆ ಬರಹ. ಯಕ್ಷಗಾನ ಅರ್ಥದಾರಿಯಾದವನಲ್ಲಿ ಬರಿಯ ಪಾಂಡಿತ್ಯ ಇದ್ದರೆ ಸಾಲದು, ಒಂದು ವಿನೀತ, ಸಾತ್ವಿಕ, ಸಭ್ಯ, ವಿವೇಕ ಪೂರ್ಣ ನಡೆಯೂ ಇರಬೇಕು ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ. ಮಾತ್ರವಲ್ಲದೆ, ಯಕ್ಷಗಾನದ ಕುರಿತಾದ ಭಟ್ಟರ ತಿಳಿವಳಿಕೆಗೆ ತಾಜಾ ನಿದರ್ಶನ ದಂತಿದೆ ಈ ಲೇಖನ. ಇದು ನಿಸ್ಸಂಶಯವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕಾದ ಬರಹ.

(ಲೇಖಕರು ನಿವೃತ್ತ ಪ್ರಾಂಶುಪಾಲರು)