ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ. ಬೆಳೆದದ್ದು, ಓದಿದ್ದು ಶಿರಸಿಯಲ್ಲಿ. ಐದು ವರ್ಷ ಗ್ಯಾನನ್ ಡಂಕರ್ಲಿ ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ರಿಲಾಯನ್ಸ್ ಇಂಡಸ್ಟ್ರೀಸ್, ಫ್ಲೋಟ್ ಗ್ಲಾಸ್, ಮ್ಯಾರಿಕೋ ಇಂಡಸ್ಟ್ರೀಸ್, ಹೆಸ್ಟ್ ಫಾರ್ಮಾದಲ್ಲಿ ಕೆಲಸ. ಕಳೆದ ಮೂರು ದಶಕಗಳಿಂದ ಕೊಲ್ಲಿ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಬಹ್ರೈನ್ನಲ್ಲಿ ಕೆಲಸ ಮತ್ತು ವಾಸ.
ಒಟ್ಟೂ ಆರು ಪುಸ್ತಕಗಳ ಕೃತಿಕಾರರು. ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಿದ ‘ಆಸ್ತಿಕತೆ’ ಮೊದಲ ಕೃತಿ. ‘ವಿಶ್ವತೋಮುಖ’, ‘ವಿದೇಶವಾಸಿ’, ‘ಪರದೇಶವಾಸಿ’, ‘ಹೊರದೇಶವಾಸಿ’ಮತ್ತು ‘ದೂರದೇಶವಾಸಿ’ ನಂತರದ ಕೃತಿಗಳು. ವಿಶ್ವವಾಣಿ ದಿನಪತ್ರಿಕೆಯ ಅಂತಾರಾಷ್ಟ್ರೀಯ ವರದಿಗಾರರು. ರಾಜ್ಯಪ್ರಶಸ್ತಿ ವಿಜೇತ ’ಹಾಡು ಹಕ್ಕಿ ಹಾಡು’ ಮತ್ತು ’ವೆರಿಗುಡ್’ ಮಕ್ಕಳ ಚಲನಚಿತ್ರದ ಸಹನಿರ್ಮಾಪಕರು.
ಬಹ್ರೈನ್ನ ‘ಸಾರ್ಥ ಫೌಂಡೇಷನ್’, ಶಿರಸಿಯ ’ಅಧ್ಯಾಯ ಟ್ರಸ್ಟ್’ ಮತ್ತು ‘ವಿಕಿ ಬುಕ್ಸ್’ ಪ್ರಕಾಶನದ ನಿರ್ದೇಶಕರು. ಕುಮಟಾದ ‘ಸಾರ್ಥ ಪ್ರತಿಷ್ಠಾನ’ದ ಉಪಾಧ್ಯಕ್ಷರು.
ಒಮ್ಮೆ ಬೆಂಗಳೂರಿನಲ್ಲಿ, ಇನ್ನೊಮ್ಮೆ ಮಂಗಳೂರಿನಲ್ಲಿ ‘ಬಹ್ರೈನ್ ಕನ್ನಡೋತ್ಸವ’ವನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ಕರ್ನಾಟಕ ರಾಜ್ಯಪ್ರಶಸ್ತಿ ವಿಜೇತ ‘ಕನ್ನಡ ಸಂಘ ಬಹ್ರೈನ್’ನಲ್ಲಿ ಎರಡು ವರ್ಷ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಒಂಬತ್ತು ವರ್ಷ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ, ಭಾರತದಿಂದ ಆಚೆ ನಿರ್ಮಾಣಗೊಂಡ ಪ್ರಥಮ ‘ಕನ್ನಡ ಭವನ’ ಕಟ್ಟಡ ನಿರ್ಮಾಣ, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಮತ್ತು ಕನ್ನಡ ಸಂಘ ಬಹ್ರೈನ್ ಜಂಟಿಯಾಗಿ ಆಯೋಜಿಸಿದ ‘ಪ್ರಥಮ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ’, ‘ಗಲ್ಫ್ ಯಕ್ಷ ವೈಭವ’ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ನೇತೃತ್ವವಹಿಸಿಕೊಂಡವರಲ್ಲಿ ಒಬ್ಬರು.
ಕನ್ನಡ ಸಂಘ ಬಹ್ರೈನ್ ನಡೆಸುತ್ತಿರುವ ಕನ್ನಡ ತರಗತಿಯಲ್ಲಿ ಮಕ್ಕಳಿಗೆ ಉಚಿತವಾಗಿ ಕನ್ನಡ ಬೋಧನೆ ಮಾಡುತ್ತಿದ್ದಾರೆ. ನಾಟಕ, ಯಕ್ಷಗಾನ ಕಲೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಆಗಾಗ ಅಭಿನಯಿಸುತ್ತಿರುತ್ತಾರೆ.