ದಕ್ಷಿಣಕನ್ನಡ (ಈಗಿನ ಉಡುಪಿ) ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಎಂಬ ಊರಿನವರಾದ ಶ್ರೀವತ್ಸ ಜೋಶಿ ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ತಾಂತ್ರಿಕ ಶಿಕ್ಷಣ ಪಡೆದು ದಿಲ್ಲಿ, ಹೈದರಾಬಾದ್, ಬೆಂಗಳೂರು ಮುಂತಾದ ಕಡೆ ಉದ್ಯೋಗದ ನಂತರ ಈಗ ಇಪ್ಪತ್ತು ವರ್ಷಗಳಿಂದ ಅಮೆರಿಕದಲ್ಲಿ ವೃತ್ತಿಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ರಾಜಧಾನಿ ವಾಷಿಂಗ್ಟನ್‌ನಲ್ಲಿ ಐಬಿಎಂ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ವರ್ಜಿನಿಯಾ ಸಂಸ್ಥಾನದ ರೆಸ್ಟನ್ ನಗರದಲ್ಲಿ ಪತ್ನಿ ಸಹನಾ ಮತ್ತು ಪುತ್ರ ಸೃಜನ್‌ನೊಂದಿಗೆ ವಾಸಿಸುತ್ತಿದ್ದಾರೆ.
ಕನ್ನಡ ನಾಡು-ನುಡಿ-ಭಾಷೆ-ಸಂಸ್ಕೃತಿಯ ಕುರಿತು ಅಭಿಮಾನವಷ್ಟೇ ಅಲ್ಲದೆ ಪತ್ರಿಕಾರಂಗದ ಬಗ್ಗೆಯೂ ಆಸಕ್ತಿ ಹೊಂದಿರುವ ಶ್ರೀವತ್ಸ ಜೋಶಿ, ೨೦೦೨ರಲ್ಲಿ ಆರಂಭಿಸಿ ಈಗಲೂ ಕನ್ನಡ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದಾರೆ. ಅವರ ‘ವಿಚಿತ್ರಾನ್ನ’, ‘ಪರಾಗಸ್ಪರ್ಶ’, ಮತ್ತು ‘ತಿಳಿರುತೋರಣ’ ಅಂಕಣಬರಹಗಳು ಪುಸ್ತಕಗಳ ರೂಪದಲ್ಲಿಯೂ ಪ್ರಕಟವಾಗಿವೆ. 2016ರಿಂದ ವಿಶ್ವವಾಣಿ ಪತ್ರಿಕೆಯಲ್ಲಿ ಬರೆಯುತ್ತಿರುವ ‘ತಿಳಿರುತೋರಣ’ ಅಂಕಣದ ಪ್ರತಿಯೊಂದು ಲೇಖನವನ್ನು ಧ್ವನಿಮುದ್ರಣ ಮಾಡಿ ಫೇಸ್‌ಬುಕ್, ಟ್ವಿಟ್ಟರ್, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲೂ ವಿತರಿಸುವುದರಿಂದ ಈ ಅಂಕಣ ಬಹುರೂಪಗಳಲ್ಲಿ ಜನಪ್ರಿಯವಾಗಿದೆ. ಶ್ರೀವತ್ಸ ಜೋಶಿಯವರ ಇದುವರೆಗಿನ ಒಟ್ಟು 17 ಪುಸ್ತಕಗಳ ಪೈಕಿ ಐದು, ವಾಷಿಂಗ್ಟನ್‌ನಲ್ಲಿರುವ ಜಗತ್ತಿನ ಅತಿದೊಡ್ಡ ಗ್ರಂಥಾಲಯವಾದ ‘ಲೈಬ್ರರಿ ಆಫ್ ಕಾಂಗ್ರೆಸ್’ ಪುಸ್ತಕಭಂಡಾರದಲ್ಲಿವೆ. ವಾಷಿಂಗ್ಟನ್ ಡಿ.ಸಿ. ಪ್ರದೇಶದ ‘ಕಾವೇರಿ’ ಕನ್ನಡ ಸಂಘ, ಮತ್ತು ಅಮೆರಿಕದ ಇತರ ಕನ್ನಡ ಸಂಘಟನೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಶ್ರೀವತ್ಸ ಜೋಶಿ, ಕಡಲಾಚೆ ಕನ್ನಡ ಭಾಷೆ-ಸಂಸ್ಕೃತಿ ಪಸರಿಸುವುದರಲ್ಲಿ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಾಟ್ಸಪ್, ಫೇಸ್‌ಬುಕ್, ಟ್ವಿಟ್ಟರ್‌ನಂಥ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದು ಜಗದಗಲ ಓದುಗಮಿತ್ರರನ್ನು ಹೊಂದಿದ್ದಾರೆ. ಇವರು ಕಳೆದ ೩೦೦ ವಾರಗಳಿಂದ ನಡೆಸಿಕೊಂಡು ಬಂದಿರುವ ಸ್ವಚ್ಛ ಭಾಷೆ ಅಭಿಯಾನ ಸರಣಿ ಕಲಿಕೆಯು ತುಂಬ ಜನಪ್ರಿಯವಾಗಿದೆ.