ಹೆಚ್.ಎನ್.ವ್ಯಾಲಿಯ ನೀರಿನ ಸಂಗ್ರಹಾಗಾರವಾದ ಕಂದವಾರ ಕೆರೆಯಲ್ಲಿ ಮೀನುಗಳ ಮಾರಣಹೋಮ
ಎರಡನೇ ಹಂತದ ಶುದ್ಧೀಕರಣದಲ್ಲಿ ಕೂಡ ಲೋಪದೋಷಗಳಾಗುತ್ತಿರುವ ಬಗ್ಗೆ ಸ್ವತಃ ಈ ಯೋಜನೆಯ ಕಾರಣಕರ್ತರು, ಹಾಲಿ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಇತ್ತೀಚೆಗೆ ಸುದ್ದಿ ಗೋಷ್ಠಿ ನಡೆಸಿ ಶುದ್ಧೀಕರಣ ಸಂಬಂಧದ ಮಾಹಿತಿಗಳನ್ನು ಬಟಾಬಯಲು ಮಾಡಿರುವು ದನ್ನು ಜನತೆ ಕಂಡಿದ್ದಾರೆ.
-
ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ: ಹೆಚ್.ಎನ್ ವ್ಯಾಲಿ ಯೋಜನೆಯಡಿ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಜಿಲ್ಲೆಯ ಕೆರೆಗಳಿಗೆ ಹರಿಸುವ ಕೇಂದ್ರ ಸಂಗ್ರಹಾಗಾರ ಮತ್ತು ವಿತರಣಾ ಘಟಕ ಹೊಂದಿರುವ ಕಂದವಾರ ಕೆರೆಯಲ್ಲಿ ಮೀನುಗಳ ಮಾರಣ ಹೋಮವಾಗಿರುವುದು 3ನೇ ಹಂತದ ಶುದ್ಧೀಕರಣಕ್ಕೆ ಒತ್ತಾಯಿಸಿರುವ ಹೋರಾಟಗಾರರನ್ನು ಕೆರಳಿಸುವಂತೆ ಮಾಡಿದೆ.
ಇದೇ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಮೀನುಗಳ ಮಾರಣ ಹೋಮಕ್ಕೆ ಕಲುಷಿತ ನೀರೇ ಕಾರಣ ಎಂದು ಪರಿಸರ ಪ್ರೇಮಿಗಳು, ಶಾಶ್ವತ ನೀರಾವರಿ ಹೋರಾಟ ಗಾರರು, ಸಮಾಜ ಸೇವಕರು ದೂರುವಂತಾಗಿರುವುದು ವಿಚಿತ್ರವಾದರೂ ಸತ್ಯ.
ಹೌದು ನಗರಕ್ಕೆ ಹೊಂದಿಕೊAಡAತ್ತಿರುವ ಕಂದವಾರ ಕೆರೆಯಲ್ಲಿ ಎರಡು ಮೂರು ದಿನ ಗಳಿಂದ ಮೀನುಗಳು ಸತ್ತು ತೇಲುತ್ತಾ ದಡಕ್ಕೆ ಬಂದಿರುವುದನ್ನು ನೋಡಿರುವ ಸಾರ್ವಜನಿಕರು, ನಾಗರೀಕರು ಆತಂಕಕ್ಕೆ ಒಳಗಾಗಿದ್ದಾರೆ.
ಈ ಯೋಜನೆಯಿಂದ ಅಂತರ್ಜಲ ಹೆಚ್ಚಳವಾದರೂ ನೀರಿನ ಗುಣಮಟ್ಟ ಮತ್ತು ನಿರ್ವಹಣೆ ಸಂಬಂಧ ಅನೇಕ ಅನುಮಾನಗಳು ನಾಗರೀಕವಲಯದಲ್ಲಿ ಇರುವುದು ಸುಳ್ಳಲ್ಲ. ಕಾರಣ ಕೆರೆಗಳಿಗೆ ಹರಿಸುವ ನೀರು ಸಂಪೂರ್ಣವಾಗಿ ಶುದ್ಧವಾಗಿಲ್ಲದ್ದರಿಂದ ದುರ್ವಾಸನೆಯಿಂದ ಕೂಡಿದ್ದು ಕೆಲವು ಕಡೆ ಹಸಿರು, ಕಪ್ಪು ಬಣ್ಣಕ್ಕೆ ತಿರುವುಗಿರುವುದನ್ನು ಕಾಣಬಹುದಾಗಿದೆ.
ಇದನ್ನೂ ಓದಿ: Chikkaballapur News: ಶಾಸಕರ ವಿರುದ್ಧ ಮಾತನಾಡುವವರಿಗೆ ಕಠಿಣ ಕ್ರಮವಾಗಲಿ: ನಾಗಭೂಷಣ್ ಒತ್ತಾಯ
ಎರಡನೇ ಹಂತದ ಶುದ್ಧೀಕರಣದಲ್ಲಿ ಕೂಡ ಲೋಪದೋಷಗಳಾಗುತ್ತಿರುವ ಬಗ್ಗೆ ಸ್ವತಃ ಈ ಯೋಜನೆಯ ಕಾರಣಕರ್ತರು, ಹಾಲಿ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಇತ್ತೀಚೆಗೆ ಸುದ್ದಿ ಗೋಷ್ಠಿ ನಡೆಸಿ ಶುದ್ಧೀಕರಣ ಸಂಬಂಧದ ಮಾಹಿತಿಗಳನ್ನು ಬಟಾಬಯಲು ಮಾಡಿರುವು ದನ್ನು ಜನತೆ ಕಂಡಿದ್ದಾರೆ. ರಾತ್ರಿ ಹೊತ್ತು ಶುದ್ಧಿಕರಿಸದಲೇ ಹರಿಸುವ ಬಗ್ಗೆ ತೀವ್ರ ಬೇಸರ ವನ್ನೂ ಹೊರ ಹಾಕಿದ್ದ ಅವರು ಈ ಸರಕಾರಕ್ಕೆ ಮನುಷ್ಯತ್ವ ಇದ್ದರೆ ಕೂಡಲೇ 3ನೇ ಹಂತದ ಶುದ್ಧೀಕರಣ ಮಾಡಿಯೇ ಹರಿಸಲು ಕ್ರಮ ವಹಿಸಲಿ ಎಂದು ಟೀಕಿಸಿದ್ದರು.
3ನೇ ಹಂತದ ಶುದ್ಧೀಕರಣ ಇಲ್ಲದೆ ನೇರವಾಗಿ ನೀರು ಹರಿಸುತ್ತಿರುವುದರಿಂದ ನೀರಿನಲ್ಲಿ ರುವ ರಾಸಾಯನಿಕಗಳು, ಭಾರ ಲೋಹಗಳು ಭೂಮಿಯ ಫಲವ್ತತೆ ಹಾಳು ಮಾಡುವು ದಲ್ಲದೆ ಜನ ಜಾನುವಾರುಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿರುವ ಬಗ್ಗೆ ಶಾಶ್ವತ ನೀರಾವರಿ ಹೋರಾಟಗಾರರು, ಸಮಾಜ ಸೇವಕರು ಸರಕಾರದ ವಿರುದ್ಧ ಕಿಡಿಕಾರಿದ್ದಷ್ಟೇ ಅಲ್ಲ, ಚಿಕ್ಕಬಳ್ಳಾಪುರ ಬಂದ್, ಪಾದಯಾತ್ರೆ ಮಾಡಿ ಸರಕಾರದ ಗಮನ ಸೆಳೆದಿದ್ದರು.
ಈ ನೀರು ಹರಿಯುತ್ತಿರುವ ಕಂದವಾರ ಕರೆ, ಅಮಾನಿ ಗೋಪಾಲಕೃಷ್ಣಕೆರೆ, ಮುಷ್ಟೂರು ಕೆರೆಗಳಲ್ಲಿ ಅಪಾರವಾದ ಕಳೆ ಮತ್ತು ಪಾಚಿ ಬೆಳೆದಿರುವ ಕಾರಣ ಸೊಳ್ಳೆಗಳ ಸಂತಾನೋ ತ್ಪತ್ತಿಗೆ ಸಹಕಾರವಾಗಿ ಈ ಕರೆಗಳ ಸುತ್ತಮುತ್ತಲ ಪ್ರದೇಶಗಳ ಜನತೆಯ ಜೀವ ಹಿಂಡು ತ್ತಿರುವ ಬಗ್ಗೆಯೂ ನಾಗರೀಕರಿಂದ ತೀವ್ರ ಅಸಹನೆ ವ್ಯಕ್ತವಾಗಿದೆ.
ಈ ನೀರಿನ ನೇರ ಬಳಕೆಗೆ ಯೋಗ್ಯವಲ್ಲದಿದ್ದರೂ, ಜನಬಳಕೆಗೆ ಅವಕಾಶವಿಲ್ಲದಿದ್ದರೂ ನದಿನಾಲೆಗಳ ಆಶ್ರಯವಿಲ್ಲದ ಕಾರಣ, ಅಂತರ್ಜಲ ದಿನೇ ದಿನೇ ಪಾತಾಳ ಮುಟ್ಟುತ್ತಿರುವ ಪರಿಣಾಮ ರೈತರು ತಮ್ಮ ಬೆಳೆಗಳಿಗೆ ಬಳಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.ಮುಖ್ಯವಾಗಿ ಈ ನೀರು ಬರುವ ಮುಂಚೆಯೇ ಕೆರೆಗಳ ಅಚ್ಚುಕಟ್ಟಿನಲ್ಲಿ ಹಾಕಿದ್ದ ಕೊಳವೆ ಬಾವಿಗಳು ನೀರಿಲ್ಲದೆ ಪಾಳುಬಿದ್ದಿದವು. ಹೆಚ್.ಎನ್ ವ್ಯಾಲಿ ನೀರು ಬಂದ ಕೂಡಲೇ ಇವುಗಳಲ್ಲಿ ನೀರು ಬರುತ್ತಿದ್ದು ಇದನ್ನೇ ಕುಡಿಯಲು ನಗರಸಭೆ ವಾರ್ಡುಗಳಿಗೆ ಪಂಪ್ ಮಾಡುತ್ತಿದೆ.
ಈ ಬಗ್ಗೆಯೂ ಜನತೆಯಲ್ಲಿ ಅವ್ಯಕ್ತ ಆತಂಕ ಮನೆ ಮಾಡಿದೆ.
ಇಷ್ಟೆಲ್ಲಾ ಗೊಂದಲ ಗೌಜ ಗದ್ದಲದ ನಡುವೆ ಕಂದವಾರ ಕರೆಯಲ್ಲಿ ಸಾವಿರಾರು ಮೀನು ಗಳು ಸತ್ತು ಗಬ್ಬು ನಾರುತ್ತಿರುವುದು ನಾಗರೀಕರನ್ನು ಹೈರಾಣಾಗಿಸಿವೆ. ಮೀನುಗಳ ಮಾರಣ ಹೋಮ ಇದೇ ಮೊದಲೇನಲ್ಲ ಕೆಲ ವರ್ಷಗಳ ಹಿಂದೆ ಈ ನೀರು ಹರಿಯುವ ಕಂದವಾರ ಕೆರೆ, ಅಮಾನಿ ಗೋಪಾಲಕೃಷ್ಣ ಕರೆ, ಮುಷ್ಟೂರು ಕರೆಗಳಲ್ಲಿ ಅಪಾರ ಪ್ರಮಾಣದ ಮೀನುಗಳು ಸತ್ತ ಸುದ್ದಿ ಬಾರೀ ಸದ್ದು ಮಾಡಿತ್ತು.
ಆಗೆಲ್ಲಾ ಯಾರೋ ಕಿಡಿಗೇಡಿಗಳು ಬೇಕೆಂತಲೇ ವಿಷಪ್ರಾಷನ ಮಾಡಿ ಮೀನುಗಳ ಸಾವಿಗೆ ಕಾರಣವಾಗಿದ್ದಾರೆ ಎಂಬ ಕೂಗೆದ್ದು ಮೀನುಗಾರಿಕೆ ಇಲಾಖೆ ಸತ್ತ ಮೀನುಗಳನ್ನು ಪ್ರಯೋ ಗಾಲಯಕ್ಕೆ ಕಳಿಸುವ ಮೂಲಕ ಈ ಕೂಗಿನ ಸದ್ದಡಗುವಂತೆ ಮಾಡಿತ್ತು. ಏನೇ ಆಗಲಿ ಪದೇ ಪದೇ ಮೀನುಗಳ ಮಾರಣಹೋಮ ಆಗುತ್ತಿರುವ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರ ವಾಗಿ ಪರಿಗಣಿಸಿ ಸತ್ಯಾಸತ್ಯತೆ ಜನತೆಗೆ ತಿಳಿಸುವ ಕೆಲಸ ಮಾಡಬೇಕಿದೆ.
ಸರಕಾರ ಕೂಡ ನದಿ ನಾಲೆಗಳ ಆಶ್ರಯವಿಲ್ಲದೆ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಬೇಡಿಕೆಯನ್ನು ಈಡೇರಿಸುವವರೆಗೆ ಹೆಚ್.ಎನ್.ವ್ಯಾಲಿಗೆ 3ನೇ ಹಂತದ ಶುದ್ಧೀಕರಣ ಮಾಡಿಯೇ ನೀರು ಹರಿಸುವ ಕೆಲಸ ಮಾಡುವತ್ತ ತನ್ನ ಬದ್ಧತೆ ಪ್ರದರ್ಶಿಸಬೇಕಿದೆ. ಇದಾಗು ತ್ತೋ ಇಲ್ಲವೋ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಿದೆ,ಜನರ ಬದ್ಧತೆಯೂ ಎದ್ದು ಕಾಣಬೇಕಿದೆ.
![]()
ಹೆಚ್.ಎನ್.ವ್ಯಾಲಿ ನೀರಿನ ಸಂಗ್ರಹಾಗಾರವಾದ ಕಂದವಾರ ಕರೆಯಲ್ಲಿ ಮೀನುಗಳು ಸತ್ತು ಗಬ್ಬು ನಾರುತ್ತಿವೆ. ಮೀನುಗಳೇ ಬದುಕಲಾರದ ನೀರನ್ನು ಸರಕಾರ ಕೊಳವೆ ಬಾವಿಗಳ ಮೂಲಕ ದೊರೆಯುವ ಅಂತರ್ಜಲದ ರೂಪದಲ್ಲಿ ನಮಗೆ ಕುಡಿಸುತ್ತಿದೆ. ಶಾಸಕ ಸಚಿವರು ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಜನತೆಗೆ ಶುದ್ಧನೀರು ಕೊಡುವ ಕೆಲಸ ಮಾಡಿ. 3ನೇ ಹಂತದ ಶುದ್ಧೀಕರಣ ಮಾಡಿ ಹರಿಸಲು ಮುಂದಾಗಿ. ಚಿಕ್ಕಬಳ್ಳಾಪುರ ಸರಕಾರ ಗಳಿಗೆ ಪ್ರಯೋಗ ಶಾಲೆಯಾಗಿದೆ. ಶುದ್ಧ ನೀರಿನ ಹೋರಾಟ ಭಾಗವಾಗಿ ಮೇ 1ರಂದು ಲಕ್ಷ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ರಾಷ್ಟ್ರಪತಿ, ರಾಜ್ಯಪಾಲರಿಗೆ ಅರ್ಜಿ ಕೊಡುವ ಕೆಲಸ ಮಾಡುತ್ತೇವೆ.
-ಸಂದೀಪ್.ಬಿ.ರೆಡ್ಡಿ ಮಾಜಿ ಜಿಲ್ಲಾಧ್ಯಕ್ಷ ಬಿಜೆಪಿ ಚಿಕ್ಕಬಳ್ಳಾಪುರ.
![]()
ಕಂದವಾರ ಕೆರೆಯಲ್ಲಿ ಮೀನುಗಳ ಸತ್ತಿರುವ ಬಗ್ಗೆ ಮಾಹಿತಿಯಿದೆ.ಬೇಸಿಗೆಯ ಬಿಸಿಲು ಮತ್ತು ಆಮ್ಲಜನಕದ ಕೊರತೆಯಾಗಿರುವ ಬಗ್ಗೆ ಅನುಮಾನಗಳಿವೆ. ಮೇಲಾಗಿ ಈ ಕೆರೆಗೆ ನಗರದ ತ್ಯಾಜ್ಯ ನೀರು ಕೂಡ ಸೇರ್ಪಡೆಯಾಗುತ್ತಿದ್ದು ಇದೂ ಕಾರಣವಿರಬಹುದು.ಇದಕ್ಕೆ ಕಡಿವಾಣ ಹಾಕಲು ಸಂಬಂಧಪಟ್ಟ ಅಧಿಕಾರಿಗಳ ಜತೆ ಸಭೆ ಮಾಡಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.ಹೆಚ್.ಎನ್.ವ್ಯಾಲಿ ನೀರನ್ನು ೨ ಹಂತದಲ್ಲಿ ಶುದ್ಧೀಕರಣ ಮಾಡಿಯೇ ಹರಿಸಲಾಗುತ್ತಿದೆ.ಆದರೂ ಮೀನುಗಳ ಸಾವಿಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುವುದು.
-ಪ್ರಭು.ಜಿ. ಜಿಲ್ಲಾಧಿಕಾರಿ ಚಿಕ್ಕಬಳ್ಳಾಪುರ.