SSLC Result in Yadgir : ಎಸ್ʼಎಸ್ʼಎಲ್ʼಸಿ ಫಲಿತಾಂಶ: ತಪ್ಪಿದ ಕೊನೆಯ ಸ್ಥಾನ
ಪರೀಕ್ಷಾ ಫಲಿತಾಂಶಗಳಲ್ಲಿ ಸದಾ ಕೊನೆಯ ಸ್ಥಾನ ಪಡೆಯುತ್ತಾ ಟೀಕೆಗಳಿಗೆ ಆಹಾರವಾಗುತ್ತಿದ್ದ ಯಾದಗಿರಿ ಜಿಲ್ಲೆ, ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಯಾದಗಿರಿ ಜಿಲ್ಲೆಯು ಕಳೆದ ಎರಡು ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬದಲಾವಣೆ ಕಾಣುತ್ತಲಿದ್ದು, ಈ ವರ್ಷ 91.89 ಪ್ರತಿಶತ ಪಡೆದು 31 ಸ್ಥಾನದಲ್ಲಿ ಯಾದಗಿರಿ ಸ್ಥಾನ ಪಡೆದಿದೆ.
-
ವೀರೇಶ ಎಸ್ ಕೆಂಭಾವಿ, ಯಾದಗಿರಿ
ಶೇಕಡಾವಾರು ಫಲಿತಾಂಶದಲ್ಲಿ ಗಣನೀಯ ಏರಿಕೆ
ಕಳೆದ ಬಾರಿ ಶೇ.62 ನೊಂದಿಗೆ 34ನೇ ಸ್ಥಾನ, ಈ ಸಲ ಶೇ. 91ರೊಂದಿಗೆ 31ನೇ ಸ್ಥಾನ
ಪರೀಕ್ಷಾ ಫಲಿತಾಂಶಗಳಲ್ಲಿ ಸದಾ ಕೊನೆಯ ಸ್ಥಾನ ಪಡೆಯುತ್ತಾ ಟೀಕೆಗಳಿಗೆ ಆಹಾರವಾಗುತ್ತಿದ್ದ ಯಾದಗಿರಿ ಜಿಲ್ಲೆ, ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಯಾದಗಿರಿ ಜಿಲ್ಲೆಯು ಕಳೆದ ಎರಡು ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬದಲಾವಣೆ ಕಾಣುತ್ತಲಿದ್ದು, ಈ ವರ್ಷ 91.89 ಪ್ರತಿಶತ ಪಡೆದು 31 ಸ್ಥಾನದಲ್ಲಿ ಯಾದಗಿರಿ ಸ್ಥಾನ ಪಡೆದಿದೆ.
ಕಳೆದ ಬಾರಿಗಿಂತ ಶೇಕಡಾವಾರು ಫಲಿತಾಂಶದಲ್ಲಿ ಈ ಸಲ ಶೇ.29ರಷ್ಟು ಏರಿಕೆ ಕಂಡಿದೆ. ಒಟ್ಟು ಜಿಲ್ಲೆಯ 14411 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ 13242 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪಕ್ಕದ ಜಿಲ್ಲೆ ಕಲಬುರಗಿ, ಬೆಂಗಳೂರು ದಕ್ಷಿಣ ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ ಮಧುಗಿರಿ ಯನ್ನು ಹಿಂದಿಕ್ಕಿದ ಯಾದಗಿರಿ 31 ಸ್ಥಾನ ಪಡೆದು ಬದಲಾವಣೆ ಹಂತ ಏರುತ್ತಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರ ಶ್ರಮ ಉನ್ನತ ಮಟ್ಟದಾಗಿದೆ. ಹಲವು ಸೂತ್ರಗಳನ್ನು ಫಲಿತಾಂಶ ಸುಧಾರಣೆಗೆ ಅಳವಡಿಕೊಂಡ ಫಲವೇ ಇಂದಿನ ಫಲಿತಾಂಶವಾಗಿದೆ.
ಇದನ್ನೂ ಓದಿ: Karnataka SSLC Result: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ: ತಿಪಟೂರು ತಾಲೂಕು ತುಮಕೂರಿಗೆ ಪ್ರಥಮ ಸ್ಥಾನ
ಮಿಷನ್ 40 ಪ್ಲಸ್ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಲಾಗಿತ್ತು. ರಾಷ್ಟ್ರಗೀತೆ, ನಾಡಗೀತೆ ಹಾಗೂ ಸಂವಿಧಾನ ಪೀಠಿಕೆ ಸಂದರ್ಭದಲ್ಲಿ ಫ್ಲ್ಯಾಶ್ ಕಾರ್ಡ್ ಮೂಲಕ ಪಠ್ಯಕ್ಕೆ ಅನುಕೂಲ ವಾಗುವಂತೆ ತಿಳಿಸುವ ಕಾರ್ಯಗಳು ಯಶ ಕಂಡಿವೆ.
ಪರೀಕ್ಷಾ ಫಲಿತಾಂಶ ಸುಧಾರಣೆಗೆ ಕೈಗೊಂಡ ಕ್ರಮವೇನು..?
ಇಲಾಖೆಯಲ್ಲಿ ಶಿಕ್ಷಕರ ಕೊರತೆ ನೀಗಿಸಲು ಅಕ್ಷರ ಆವಿಷ್ಕಾರ ಯೋಜನೆಯಡಿ ಅತಿಥಿ ಶಿಕ್ಷಕರ ನೇಮಕ
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಕ್ಕಳ ಅಭ್ಯಾಸಕ್ಕೆ ಅನುಕೂಲವಾಗುವಲ್ಲಿ ಶಾಲಾವಧಿ ಪೂರ್ವ ಹಾಗೂ ನಂತರದಲ್ಲಿ ವಿವಿಧ ತರಬೇತಿಗಳನ್ನು ನೀಡಲಾಗಿದೆ.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ವಿಶೇಷ ತರಗತಿಗಳ ಆಯೋಜನೆ.
ಶಾಲೆ ಬಿಟ್ಟ ಎಸ್‌ಎಸ್‌ಎಲ್‌ಸಿ ಮಕ್ಕಳ ಮನೆ ಅಧಿಕಾರಿಗಳು, ಶಿಕ್ಷಕರು ಭೇಟಿ
ಶಾಲೆಯಲ್ಲಿ ಮತ್ತು ವಸತಿ ನಿಲಯದಲ್ಲಿ ರಾತ್ರಿ ವೇಳೆ ತರಗತಿಗಳು
ಡಿಸೆಂಬರ್ ಅವಧಿಗೆ ಪಠ್ಯಕ್ರಮ ಪೂರ್ಣ
ಶಿಕ್ಷಕರು, ಅತಿಥಿ ಶಿಕ್ಷಕರಿಗೆ ವಿಶೇಷ ಕಾರ್ಯಗಾರ
ಯಾವ ರೀತಿ ವಾರ್ಷಿಕ ಪ್ರಮುಖ ಪರೀಕ್ಷೆ ಇರುತ್ತದೆಯೋ, ಅದೇ ರೀತಿ ಪೂರ್ವ ಪರೀಕ್ಷೆಗಳನ್ನು ತೆಗೆದುಕೊಳ್ಳಲಾಗಿದೆ. ಈಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಬಗೆಗಿದ್ದ ಭೀತಿ ತೊಡೆದು ಹಾಕುವ ಹಾಗೂ ಸಮರ್ಪಕ ಉತ್ತರಗಳನ್ನು ಬರೆಯುವ ರೀತಿಯಲ್ಲಿ ನೋಡಿಕೊಳ್ಳಲಾಗಿತ್ತು.
ಜಿಲ್ಲೆಯ ಸಾಧಕರು
ಜಿಲ್ಲೆಯ ಗುರುಮಠಕಲ್ ತಾಲೂಕಿನ ಜಿ.ಶ್ರೀನಿವಾಸ ರೆಡ್ಡಿ ಮೆಮೊರಿಯಲ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರೇರಣಾ ಶರಣಪ್ಪ 625ಕ್ಕೆ 622 ಅಂಕಗಳನ್ನು ಪಡೆದು (99.52%) ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದ್ದಾಳೆ. ಯಾದಗಿರಿ ನಗರದ ಮಹಾತ್ಮ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಅಂಕಿತ್ ರಾಜ್ 621 ಅಂಕ ಪಡೆದು (99.36%) ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡು ಪೋಷಕರ ಸಂತಸಕ್ಕೆ ಕಾರಣನಾಗಿದ್ದಾನೆ. ಸೈದಾಪುರದ ಶ್ರೀ ಭಗವಾನ್ ಮಹಾವೀರ ಆಂಗ್ಲ ಮಾಧ್ಯಮ ಶಾಲೆಯ ಆರೀಫ್ 620 ಅಂಕ ಗಳಿಸಿ (99.20%) ಜಿಲ್ಲೆಗೆ ತೃತೀಯ ಸ್ಥಾನ ಬಂದಿದ್ದಾನೆ.
![]()
ಶಿಕ್ಷಕರು ಮನಸು ಮಾಡಿದರೆ ಏನೆಲ್ಲಾ ಸಾಧಿಸಬಹುದು ಎನ್ನುವುದಕ್ಕೆ ಇದೊಂದು ಜಲ್ವಂತ ಉದಾಹರಣೆ. ಅವಿರತ ಶ್ರಮ ಫಲವಾಗಿ ನಮ್ಮ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಸಹಾಯಕ ವಾಗಿದೆ. ನಮ್ಮ ಮನಸ್ಥಿತಿ ಅಷ್ಟೇ ಹಿಂದುಳಿದಿದೆ. ಹೊರತು ನಾವು ಹಿಂದುಳಿದಿಲ್ಲ.
- ಚನ್ನಬಸಪ್ಪ ಮುಧೋಳ, ಡಿಡಿಪಿಐ, ಯಾದಗಿರಿ
![]()
ಈ ಬಾರಿ ಫಲಿತಾಂಶದಲ್ಲಿ ನಮ್ಮ ಯಾದಗಿರಿ ಜಿಲ್ಲೆ ಗಣನೀಯ ಸಾಧನೆ ಮಾಡಿದ್ದು, ಇದಕ್ಕೆ ಕಾರಣೀಭೂತರಾದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪಾಲಕರಿಗೆ ಹಾಗೂ ಅಧಿಕಾರಿ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
-ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವರು